ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತ್ರಿಪುರಾದ ಧಲೈನಲ್ಲಿ ₹668 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು
ಶ್ರೀ ಅಮಿತ್ ಶಾ ಅವರು ಧಲೈನಲ್ಲಿರುವ ಹಡುಕ್ಲೌ ಪ್ಯಾರಾ ಬ್ರೂ ಸೆಟ್ಲ್ ಮೆಂಟ್ ಕಾಲೋನಿಯಲ್ಲಿ (BRUHA PARA) ಬ್ರೂ ರಿಯಾಂಗ್ ಸಮುದಾಯದ ಜನರೊಂದಿಗೆ ಸಂವಾದ ನಡೆಸಿದರು ಮತ್ತು ಅವರನ್ನು ಭೇಟಿಯಾಗಲು ಅವರ ಮನೆಗಳಿಗೆ ತೇರಳಿದರು
ತ್ರಿಪುರಾದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದವರು ಬ್ರೂ ರಿಯಾಂಗ್ ಜನರ ನೋವನ್ನು ಎಂದಿಗೂ ಅರಿಯಲಿಲ್ಲ, ಮೋದಿಯವರು ಅವರ ನೋವನ್ನು ಮನಗಂಡರು, ಅರ್ಥಮಾಡಿಕೊಂಡರು ಮತ್ತು ಪರಿಹರಿಸಿದರು
ಮೋದಿಯವರ ಸರ್ಕಾರವು 25 ವರ್ಷಗಳಿಂದ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿ ವಾಸಿಸುತ್ತಿದ್ದ 38,000 ಬ್ರೂ ರಿಯಾಂಗ್ ಜನರಿಗೆ ಪುನರ್ವಸತಿ ಕಲ್ಪಿಸಿತು ಮತ್ತು ಅವರಿಗೆ ಉತ್ತಮ ಜೀವನವನ್ನು ಒದಗಿಸಿತು
ಮೋದಿಯವರ ಸರ್ಕಾರವು ತ್ರಿಪುರಾದ ಬಂಡಾಯ ಗುಂಪುಗಳೊಂದಿಗೆ ಮೂರು ಮತ್ತು ಬ್ರೂ ರಿಯಾಂಗ್ ಸಮುದಾಯದೊಂದಿಗೆ ಮೂರು ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಿತು
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ಅಧಿಕಾರಕ್ಕೆ ಬಂದರೆ ಅದು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬುದನ್ನು ಮೋದಿಯವರ ಸರ್ಕಾರ ಮತ್ತು ತ್ರಿಪುರಾ ಸರ್ಕಾರ ತೋರಿಸಿಕೊಟ್ಟಿದೆ
ಸಂಕಷ್ಟದ ಜೀವನ ನಡೆಸುತ್ತಿದ್ದ ಬ್ರೂರಿಯಾಂಗ್ ಸೋದರ ಸೋದರಿಯರಿಗಾಗಿ ಮೋದಿಯವರು ₹ 900 ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಿದ್ದು ಮಾತ್ರವಲ್ಲದೆ ಅವುಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ
ಮೋದಿಯವರು ಎಲ್ಲಾ ಬ್ರೂರೀಯಾಂಗ್ ಜನರಿಗೆ ಭಾರತದ ಇತರ ನಾಗರಿಕರಂತೆ ಸಮಾನ ಹಕ್ಕುಗಳನ್ನು ನೀಡುವ ಕ್ರಮವನ್ನು ಕೈಗೊಂಡರು
ಹಿಂದಿನ ಸರ್ಕಾರದಲ್ಲಿ, ತ್ರಿಪುರಾದಲ್ಲಿ ಕೇವಲ 2.5% ಜನರಿಗೆ ಮಾತ್ರ ಕುಡಿಯುವ ನೀರು ಲಭ್ಯವಿತ್ತು, ಆದರೆ ಇಂದು, 85% ಮನೆಗಳಲ್ಲಿ ನಲ್ಲಿ ನೀರು ಲಭ್ಯವಾಗುತ್ತಿದೆ.
ತ್ರಿಪುರಾದಲ್ಲಿ ವಿದ್ಯಾಭ್ಯಾಸದಿಂದ ದೂರ ಉಳಿದವರ ಅನುಪಾತವು 3% ಕ್ಕಿಂತ ಕಡಿಮೆಯಾಗಿದೆ ಮತ್ತು ದಾಖಲಾತಿ ದರವು 67% ರಿಂದ 99.5% ಕ್ಕೆ ಹೆಚ್ಚಿದೆ
ದೇವಿ ತ್ರಿಪುರ ಸುಂದರಿ ಮಾತೆಯ ಭವ್ಯ ದೇವಾಲಯ ನಿರ್ಮಾಣವು ಪ್ರಗತಿಯಲ್ಲಿದ, ಇದು ಪ್ರಪಂಚದಾದ್ಯಂತದ ಭಕ್ತರಿಗೆ ದೇವಿಯ ದರ್ಶನವನ್ನು ಸುಲಭಗೊಳಿಸುತ್ತದೆ
Posted On:
22 DEC 2024 5:13PM by PIB Bengaluru
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಷಾ ಅವರು ಇಂದು ತ್ರಿಪುರಾದ ಧಲೈನಲ್ಲಿ ₹668 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಶ್ರೀ ಅಮಿತ್ ಷಾ ಅವರು ಧಲೈನಲ್ಲಿರುವ ಹಾಡುಕ್ಲೌ ಪ್ಯಾರಾ ಬ್ರೂ ಸೆಟ್ಲ್ಮೆಂಟ್ ಕಾಲೋನಿಯಲ್ಲಿ (BRUHA PARA) ಬ್ರೂ ರಿಯಾಂಗ್ ಸಮುದಾಯದೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಮನೆಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ತ್ರಿಪುರಾದ ಮುಖ್ಯಮಂತ್ರಿ ಪ್ರೊ. (ಡಾ.) ಮಾಣಿಕ್ ಸಹಾ, ಕೇಂದ್ರ ಗೃಹ ಕಾರ್ಯದರ್ಶಿ, ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕ ಮತ್ತು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್ & ಡಿ) ಮಹಾನಿರ್ದೇಶಕರು ಉಪಸ್ಥಿತರಿದ್ದರು.
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಬ್ರೂ ರಿಯಾಂಗ್ ಸಮುದಾಯದ 38,000 ಜನರಿಗೆ ನೆಮ್ಮದಿಯ ನೆಲೆ ಒದಗಿಸಿಕೊಟ್ಟಿದೆ ಎಂದು ಕೇಂದ್ರ ಗೃಹ ಸಚಿವರು ತಮ್ಮ ಭಾಷಣದಲ್ಲಿ ಹೇಳಿದರು. ಸುಮಾರು 25 ವರ್ಷಗಳಿಂದ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ ಬ್ರೂ ರಿಯಾಂಗ್ ಸೋದರ ಸೋದರಿಯರಿಗೆ ನೀರು, ಶೌಚಾಲಯ, ವಿದ್ಯುತ್, ಶಿಕ್ಷಣ, ಉದ್ಯೋಗ, ಮತ್ತು ಆರೋಗ್ಯದಂತಹ ಮೂಲಭೂತ ಸೌಕರ್ಯಗಳು ಲಭ್ಯವಿರಲಿಲ್ಲ ಎಂದು ಅವರು ಹೇಳಿದರು. ಇಲ್ಲಿ ಸುದೀರ್ಘಕಾಲ ಆಡಳಿತ ನಡೆಸಿದವರು ಬ್ರೂ ರಿಯಾಂಗ್ ಜನರ ನೋವನ್ನು ಮನಗಾಣಲಿಲ್ಲ, ಆದರೆ ಮೋದಿಯವರು ಅವರ ನೋವನ್ನು ಅರಿತರು, ಅರ್ಥಮಾಡಿಕೊಂಡರು ಮತ್ತು ಪರಿಹರಿಸಿದರು. ತ್ರಿಪುರಾದಲ್ಲಿ ಬದಲಾವಣೆಯ ಅಲೆಯೆದ್ದಾಗ ಮತ್ತು ತಮ್ಮ ಪಕ್ಷ ಸರ್ಕಾರವನ್ನು ರಚಿಸಿದಾಗ, ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ ಆಡಳಿತದಲ್ಲಿತ್ತು ಎಂದು ಶ್ರೀ ಷಾ ಉಲ್ಲೇಖಿಸಿದರು. ಅಂದು ಮಾಡಿಕೊಂಡ ಒಪ್ಪಂದ ಪರಿಣಾಮ 40,000 ಜನರಿಗೆ ಪುನರ್ ವಸತಿ ಕಲ್ಪಿಸಲಾಗಿದ್ದು, ಉದ್ಯೋಗ, ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು, ಶೌಚಾಲಯ, ಮಹಿಳೆಯರಿಗೆ ಸಹಕಾರಿ ಸಂಘಗಳಿಗೆ ಅವಕಾಶ ಹೀಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿತ್ತು, ಆದರೆ ಅವು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಕೂಡಾ ಅವರು ಹೇಳಿದರು.
1998 ರಿಂದ ಸಂಕಷ್ಟದ ಜೀವನ ನಡೆಸುತ್ತಿದ್ದ ಬ್ರೂ ರಿಯಾಂಗ್ ಸೋದರ ಸೋದರಿಯರಿಗಾಗಿ ಪ್ರಧಾನಮಂತ್ರಿ ಶ್ರೀ ಮೋದಿಯವರು ಯೋಜನೆ ರೂಪಿಸಿದ್ದು ಮಾತ್ರವಲ್ಲದೆ ₹900 ಕೋಟಿ ವೆಚ್ಚದಲ್ಲಿ 11 ಗ್ರಾಮಗಳಿಗೆ ಪುನರ್ ವಸತಿ ಕಲ್ಪಿಸಿದ್ದಾರೆ ಎಂದು ಶ್ರೀ ಅಮಿತ್ ಷಾ ಹೇಳಿದರು. ಈ ಗ್ರಾಮಗಳಲ್ಲಿ ಈಗ ವಿದ್ಯುತ್, ರಸ್ತೆ, ಕುಡಿಯುವ ನೀರು, ಸಂಪರ್ಕ, ಸೋಲಾರ್ ಬೀದಿ ದೀಪಗಳು, ಅನುದಾನಿತ ಧಾನ್ಯದ ಮಳಿಗೆಗಳು, ಅಂಗನವಾಡಿ ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳಿವೆ ಎಂದು ಅವರು ತಿಳಿಸಿದರು. ಈ 11 ವಸಾಹತುಗಳಲ್ಲಿ ವಾಸಿಸುವ ಜನರಿಗೆ ದೇಶದ ಇತರ ನಾಗರಿಕರಂತೆ ಎಲ್ಲಾ ಹಕ್ಕುಗಳನ್ನು ಒದಗಿಸಲಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿಯವರು ಖಾತ್ರಿಪಡಿಸಿದ್ದಾರೆ. ಈ ಜನರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಮತ್ತು ಅವರ ಉದ್ಯೋಗವನ್ನು ಖಚಿತಪಡಿಸಿಕೊಳ್ಳಲು ಶ್ರೀ ಮೋದಿಯವರ ಸರ್ಕಾರವು ಅವರಿಗೆ ಪಡಿತರ ಚೀಟಿಗಳು, ಆರೋಗ್ಯ ಕಾರ್ಡ್‌ಗಳು ಮತ್ತು ಸಹಕಾರಿ ಸಂಸ್ಥೆಗಳನ್ನು ಸಹ ಒದಗಿಸಿದೆ ಎಂದು ಶ್ರೀ ಷಾ ಹೇಳಿದರು. ಈ ಜನರು ಈಗ 1200 ಚದರ ಅಡಿ ವಿಸ್ತೀರ್ಣದ ಪ್ಲಾಟ್‌ಗಳನ್ನು ಹೊಂದಿದ್ದಾರೆ ಮತ್ತು ಭಾರತ ಸರ್ಕಾರದ ಸಹಾಯದಿಂದ ಅವರ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಇದರ ಜೊತೆಗೆ, ಶ್ರೀ ಮೋದಿಯವರ ಸರ್ಕಾರವು ಅವರಿಗೆ 24 ತಿಂಗಳಿಗೆ ₹ 5000 ಧನ ಸಹಾಯವನ್ನು ನೀಡುತ್ತಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 2.5% ಜನರಿಗೆ ಮಾತ್ರ ಕುಡಿಯುವ ನೀರಿನ ಸೌಲಭ್ಯವಿತ್ತು, ಆದರೆ ಇಂದು 85% ಮನೆಗಳಲ್ಲಿ ನಲ್ಲಿ ನೀರು ಲಭ್ಯವಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಈ ಹಿಂದೆ ಬಡವರಿಗೆ ಉಚಿತ ಪಡಿತರ ದೊರೆಯುತ್ತಿರಲಿಲ್ಲ, ಆದರೆ ಇಂದು ಶ್ರೀ ಮೋದಿಯವರ ನೇತೃತ್ವದಲ್ಲಿ ತ್ರಿಪುರಾದಲ್ಲಿ 82% ಜನರು 5 ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ ಎಂದು ಕೂಡಾ ಅವರು ಹೇಳಿದರು. ತ್ರಿಪುರಾದಲ್ಲಿ 80% ಜನರಿಗೆ, ₹ 5 ಲಕ್ಷದವರೆಗಿನ ಸಂಪೂರ್ಣ ಆರೋಗ್ಯ ವೆಚ್ಚವನ್ನು ಮೋದಿ ಸರ್ಕಾರ ಭರಿಸುತ್ತಿದೆ ಎಂದು ಶ್ರೀ ಷಾ ಪ್ರಸ್ತಾಪಿಸಿದರು. ತ್ರಿಪುರಾಕ್ಕೆ ಹೂಡಿಕೆಗಳು ಬರುತ್ತಿವೆ, ರಸ್ತೆಗಳನ್ನು ನಿರ್ಮಿಸಲಾಗಿದೆ ಹಾಗೂ ಪ್ರತಿ ಮನೆಗೆ ವಿದ್ಯುತ್ ಮತ್ತು ಶೌಚಾಲಯ ವ್ಯವಸ್ಥೆ ಒದಗಿಸಲಾಗಿದೆ ಎಂದು ಅವರು ಹೇಳಿದರು. ತ್ರಿಪುರಾದಲ್ಲಿ ಡ್ರಾಪ್ಔಟ್ ಅನುಪಾತವು 3% ಕ್ಕಿಂತ ಕಡಿಮೆಯಾಗಿದೆ ಮತ್ತು ದಾಖಲಾತಿ ಪ್ರಮಾಣ 67% ರಿಂದ 99.5% ಕ್ಕೆ ಏರಿಕೆಯಾಗಿದೆ ಎಂದು ಶ್ರೀ ಷಾ ಹೇಳಿದರು. ಶ್ರೀ ಮೋದಿಯವರ ಸರ್ಕಾರ ಮತ್ತು ತ್ರಿಪುರಾ ಸರ್ಕಾರವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಅಧಿಕಾರಕ್ಕೆ ಬಂದಾಗ ಅದು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂಬುದನ್ನು ಸಾಬೀತುಪಡಿಸಿವೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಮತ್ತು ಶ್ರೀ ಬಿಪ್ಲಬ್ ದೇಬ್ ಅವರ ಸರ್ಕಾರ ಹಾಗು ಈಗ ತ್ರಿಪುರಾದಲ್ಲಿ ಪ್ರೊ. (ಡಾ.) ಮಾಣಿಕ್ ಸಹಾ ಅವರ ಸರ್ಕಾರಗಳು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿವೆ ಎಂದು ಅವರು ಒತ್ತಿ ಹೇಳಿದರು. ದೇವಿ ತ್ರಿಪುರ ಸುಂದರಿ ಮಾತೆಯ ಭವ್ಯ ದೇವಾಲಯದ ನಿರ್ಮಾಣವು ನಡೆಯುತ್ತಿದ್ದು, ಪ್ರಪಂಚದಾದ್ಯಂತದ ಭಕ್ತರಿಗೆ ದೇವಿಯ ದರ್ಶನವನ್ನು ಪಡೆಯಲು ಸುಲಭವಾಗುತ್ತದೆ ಎಂದು ಷಾ ತಿಳಿಸಿದರು.
ತ್ರಿಪುರ ಇಂದು ಶಾಂತಿಯುತವಾಗಿದ್ದು ಹಿಂಸಾಚಾರ ಅಂತ್ಯಗೊಂಡಿದೆ ಎಂದು ಶ್ರೀ ಅಮಿತ್ ಷಾ ಹೇಳಿದರು. ಶ್ರೀ ಮೋದಿಯವರ ಸರ್ಕಾರವು ತ್ರಿಪುರಾದ ಬಂಡಾಯ ಗುಂಪುಗಳೊಂದಿಗೆ ಮೂರು ಮತ್ತು ಬ್ರೂ ರಿಯಾಂಗ್ ಸಮುದಾಯದೊಂದಿಗೆ ಮೂರು ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಿದೆ ಎಂದು ಅವರು ಹೇಳಿದರು. ಇಂದು ತ್ರಿಪುರಾ ಶಾಂತಿಯುತವಾಗಿ ಶ್ರೀ ಮೋದಿಯವರು ತೋರಿಸಿದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಅಗರ್ತಲಾದಲ್ಲಿ ಕೇಂದ್ರೀಯ ಪತ್ತೆದಾರಿ ತರಬೇತಿ ಸಂಸ್ಥೆ (ಸಿಡಿಟಿಐ) ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈಶಾನ್ಯ ಪ್ರದೇಶ ಮತ್ತು ನೆರೆಹೊರೆಯ ದೇಶಗಳಲ್ಲಿ ಭದ್ರತೆಯನ್ನು ವೃದ್ಧಿಸುವುದು ಮತ್ತು ನಿಗಾವಣೆಯಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಗೃಹ ವ್ಯವಹಾರಗಳ ಸಚಿವಾಲಯದ ಈ ಪ್ರಮುಖ ಉಪಕ್ರಮದ ಉದ್ದೇಶವಾಗಿದೆ. ಶಿಲ್ಲಾಂಗ್‌ನಲ್ಲಿ ನಡೆದ ಈಶಾನ್ಯ ಪರಿಷತ್ತಿನ (ಎನ್‌ಇಸಿ) 69ನೇ ಸರ್ವಸದಸ್ಯರ ಅಧಿವೇಶನದಲ್ಲಿ ಈಶಾನ್ಯ ಭಾಗದ ವಿಶಿಷ್ಟ ಭದ್ರತಾ ಸವಾಲುಗಳನ್ನು ಅಧ್ಯಯನ ಮಾಡಲು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಶೈಕ್ಷಣಿಕ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಶಿಫಾರಸು ಮಾಡಿರುವುದು ಗಮನಾರ್ಹವಾಗಿದೆ.
ಪಶ್ಚಿಮ ತ್ರಿಪುರಾ ಜಿಲ್ಲೆಯ ಜಿರಾನಿಯಾ ಉಪವಿಭಾಗದಲ್ಲಿ 9.57 ಎಕರೆ ಭೂಮಿಯನ್ನು ಈ ಸಂಸ್ಥೆಗಾಗಿ ತ್ರಿಪುರಾ ಸರ್ಕಾರವು ಮಂಜೂರು ಮಾಡಿದೆ. ಮೂಲಸೌಕರ್ಯ ನಿರ್ಮಾಣಕ್ಕೆ ಗೃಹ ಸಚಿವಾಲಯವು ₹120 ಕೋಟಿ ಮಂಜೂರು ಮಾಡಿದೆ. ಮಂಜೂರು ಮಾಡಿದ ಜಮೀನಿನ ಡಿಜಿಟಲ್ ಸರ್ವೆ ಈಗಾಗಲೇ ಪೂರ್ಣಗೊಂಡಿದೆ. ಅಗರ್ತಲಾದಲ್ಲಿರುವ ಸಿಡಿಟಿಐ ವಾರ್ಷಿಕವಾಗಿ ಈಶಾನ್ಯ ರಾಜ್ಯಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಂದ (CAPFs) 6,000 ಸಿಬ್ಬಂದಿಗೆ ತರಬೇತಿ ನೀಡಲಿದೆ. ಸಂಸ್ಥೆಯು ಸುಧಾರಿತ ತರಗತಿಗಳು, ಸಿಮ್ಯುಲೇಶನ್ ಲ್ಯಾಬ್‌ಗಳು, ಐಟಿ ಡೇಟಾ ಕೇಂದ್ರಗಳು ಮತ್ತು ಪ್ರಾಯೋಗಿಕ ತರಬೇತಿ ಪ್ರದೇಶಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದ್ದು, ಪೊಲೀಸ್ ಸಿಬ್ಬಂದಿಗೆ ಆಧುನಿಕ ಕೌಶಲ್ಯಗಳನ್ನು ಒದಗಿಸಲಿದೆ.
ಈ ಸಂಸ್ಥೆಯು ಈಶಾನ್ಯ ಭಾಗದಲ್ಲಿ ಆಂತರಿಕ ಮತ್ತು ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಉನ್ನತ ಮಟ್ಟದ ತರಬೇತಿ ಮತ್ತು ಸಂಶೋಧನಾ ಸೌಲಭ್ಯಗಳನ್ನು ಒದಗಿಸುವುದು. ಮೀಸಲಾದ ಶೈಕ್ಷಣಿಕ ಸಂಶೋಧನಾ ಕೇಂದ್ರ ಕೂಡಾ ಸಂಸ್ಥೆಯಲ್ಲಿ ಇರಲಿದ್ದು, ಇದು ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಭಯೋತ್ಪಾದನಾ ನಿಗ್ರಹ ಕ್ರಮಗಳು, ಗಡಿ ನಿರ್ವಹಣೆ, ಮಾನವ ಕಳ್ಳಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಅಕ್ರಮ ವಲಸೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಂತಹ ಪ್ರಮುಖ ಭದ್ರತಾ ಸವಾಲುಗಳ ಕುರಿತು ಅಧ್ಯಯನ ನಡೆಸಲಿದೆ.
ಅಗರ್ತಲಾದಲ್ಲಿ ಸ್ಥಾಪಿಸಲಾಗುತ್ತಿರುವ ಸಿಡಿಟಿಐ ಪೊಲೀಸ್ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಗಡಿ ಭದ್ರತಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅಂತಾರಾಷ್ಟ್ರೀಯ ಸಹಕಾರಕ್ಕೆ ಉತ್ತೇಜನ ನೀಡುತ್ತದೆ.
*****
(Release ID: 2087194)
Visitor Counter : 22