ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸಾಮಾಜಿಕ ಮಾಧ್ಯಮ ಉತ್ತರದಾಯಿತ್ವ, ಮತ್ತು ಕೃತಕ ಬುದ್ಧಿಮತ್ತೆ  ಆಡಳಿತದ ಮೇಲೆ ಒಮ್ಮತಕ್ಕೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಆಗ್ರಹ; ಹೊಸ ಕಾನೂನಿಗೆ ಅವಕಾಶ


ವಾಕ್ ಸ್ವಾತಂತ್ರ್ಯವನ್ನು ಕಾಪಾಡುವ ಜೊತೆಗೆ ನಕಲಿ ಸುದ್ದಿಗಳನ್ನು ಎದುರಿಸಲು ಸಮತೋಲಿತ ವಿಧಾನಕ್ಕೆ ಕೇಂದ್ರ ಸಚಿವರ ಕರೆ

ಗೌಪ್ಯತೆ ಮತ್ತು ಕೃತಕ ಬುದ್ಧಿಮತ್ತೆ (AI) ಆಡಳಿತಕ್ಕೆ ಸಂಬಂಧಿಸಿ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ರೂಪಿಸಲು ದೇಶದಲ್ಲಿಎಂಟು ಯೋಜನೆಗಳನ್ನು ಪ್ರಾರಂಭಿಸಲಾಗಿದೆ

Posted On: 11 DEC 2024 3:40PM by PIB Bengaluru

ಸಂಸತ್ತಿನಲ್ಲಿ ಕೃತಕ ಬುದ್ಧಿಮತ್ತೆ  ಆಡಳಿತ ಮತ್ತು ಅಭಿವೃದ್ಧಿ ಕುರಿತು ಪ್ರಶ್ನೆಗಳಿಗೆ  ಉತ್ತರಿಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೇ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಉದಯೋನ್ಮುಖ ಕೃತಕ ಬುದ್ಧಿಮತ್ತೆ ಭೂವೈದೃಶ್ಯ (ಲ್ಯಾಂಡ್‌ಸ್ಕೇಪ್), ಸಾಮಾಜಿಕ ಮಾಧ್ಯಮ ಉತ್ತರದಾಯಿತ್ವಗಳು ಉಂಟು ಮಾಡಿರುವ ನಿರ್ಣಾಯಕ ಸವಾಲುಗಳು  ಮತ್ತು ದೃಢವಾದ ಕಾನೂನಿನ ಚೌಕಟ್ಟಿನ ಅಗತ್ಯಗಳನ್ನು ಎತ್ತಿ ತೋರಿಸಿದರು. ನಕಲಿ ಸುದ್ದಿಗಳನ್ನು ಎದುರಿಸುವ ಮತ್ತು ಡಿಜಿಟಲ್ ಯುಗದಲ್ಲಿ ನಿಖರವಾದ ನಿರೂಪಣೆಗಳನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯೊಂದಿಗೆ ವಾಕ್ ಸ್ವಾತಂತ್ರ್ಯವನ್ನು ಸಮತೋಲನಗೊಳಿಸುವ ಪ್ರಾಮುಖ್ಯತೆಯನ್ನು ಸಚಿವರು ಒತ್ತಿ ಹೇಳಿದರು.

ಸ್ವಾತಂತ್ರ್ಯ ಮತ್ತು ಉತ್ತರದಾಯಿತ್ವ : ಒಮ್ಮತಕ್ಕೆ ಕರೆ

" ವಿಶೇಷವಾಗಿ ನಕಲಿ ಸುದ್ದಿ ಮತ್ತು ನಕಲಿ ನಿರೂಪಣೆಗಳ ಸೃಷ್ಟಿಯ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮದ ಹೊಣೆಗಾರಿಕೆ ಎಂಬುದು ಪ್ರಪಂಚದಾದ್ಯಂತದ ಸಮಾಜಗಳು ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆ " ಎಂದು ಶ್ರೀ ವೈಷ್ಣವ್ ಹೇಳಿದರು. ಸಾಮಾಜಿಕ ಮತ್ತು ಕಾನೂನು ಹೊಣೆಗಾರಿಕೆಯನ್ನು ಸ್ಥಾಪಿಸಲು ಗಮನಾರ್ಹವಾದ ಒಮ್ಮತದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. “ಇವುಗಳು ಒಂದು ಕಡೆ ವಾಕ್ ಸ್ವಾತಂತ್ರ್ಯ ಮತ್ತು ಉತ್ತರದಾಯಿತ್ವ ಹಾಗು ಸರಿಯಾದ ನೈಜ ಸುದ್ದಿ ಜಾಲವನ್ನು ರೂಪಿಸುವಲ್ಲಿರುವ  ಸಮಸ್ಯೆಗಳು. ಇವು ಚರ್ಚೆಯಾಗಬೇಕಾದ ವಿಷಯಗಳಾಗಿದ್ದು, ಸದನ ಒಪ್ಪಿದರೆ ಮತ್ತು ಇಡೀ ಸಮಾಜದಲ್ಲಿ ಒಮ್ಮತವಿದ್ದರೆ ನಾವು ಹೊಸ ಕಾನೂನನ್ನು ತರಬಹುದು ಎಂದವರು ನುಡಿದರು.

ಗೌಪ್ಯತೆ ಕೇಂದ್ರಿತ ಸ್ಥಳೀಯ ಕೃತಕ ಬುದ್ಧಿಮತ್ತೆ  ಪರಿಹಾರಗಳು

ಕೇಂದ್ರ ಸಚಿವರು ಗೌಪ್ಯತೆ ಮತ್ತು ಕೃತಕ ಬುದ್ಧಿಮತ್ತೆ (AI) ಆಡಳಿತದ ಬಗ್ಗೆ ಕಳವಳಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಾತನಾಡಿದರಲ್ಲದೆ ದೇಶೀಯ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ತೆಗೆದುಕೊಂಡ ಪೂರ್ವಭಾವಿ ಕ್ರಮಗಳ ವಿವರಗಳನ್ನು ಹಂಚಿಕೊಂಡರು.

ಕೃತಕ ಬುದ್ಧಿಮತ್ತೆ  ಮಿಷನ್ ಅಡಿಯಲ್ಲಿ, ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾದ ಅಪ್ಲಿಕೇಶನ್ ಡೆವಲಪ್‌ಮೆಂಟ್, ಭಾರತದ ವಿಶಿಷ್ಟ ಅವಶ್ಯಕತೆಗಳಿಗೆ ಹೊಂದಿಕೆಯಾಗುವ ನಾವೀನ್ಯತೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು. ಕೃತಕ ಬುದ್ಧಿಮತ್ತೆಯ ಉದಯೋನ್ಮುಖ ಭೂದೃಶ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ  ನಾವು ದೇಶದೊಳಗೆ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ರಚಿಸುವ ಗುರಿಯನ್ನು ಹೊಂದಿರುವ ಎಂಟು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ" ಎಂದು ಅವರು ಹೇಳಿದರು.

“ಸುರಕ್ಷಿತ ಮತ್ತು ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆ ” ಆಧಾರಸ್ತಂಭದ ಅಡಿಯಲ್ಲಿ ಆಯ್ಕೆಮಾಡಿದ ಯೋಜನೆಗಳ ವಿವರಗಳು ಕೆಳಕಂಡಂತಿವೆ:

 

ಕ್ರಮ ಸಂಖ್ಯೆ

ಶೀರ್ಷಿಕೆಯ ಹೆಸರು

ಅಯ್ಕೆಯಾದ ಅರ್ಜಿದಾರರು

ಯೋಜನೆಯ ಶೀರ್ಷಿಕೆ

1

ಯಂತ್ರ ಕಲಿಕೆ

ಐ.ಐ.ಟಿ. ಜೋಧಪುರ

ಜನರೇಟಿವ್ ಫೌಂಡೇಶನ್ ಮಾದರಿಗಳಲ್ಲಿ (ವಿವಿಧ ರೀತಿಯ ವಿಷಯ ಸಾಮಗ್ರಿಗಳಾದ ಪಠ್ಯ, ಚಾಟ್, ಇಮೇಜ್ ಮತ್ತು ಕೋಡ್, ವೀಡಿಯೋಗಳನ್ನು ರೂಪಿಸುವಂತೆ ವಿನ್ಯಾಸಗೊಳಿಸಲಾದಂತಹವು ) ಯಂತ್ರ ಕಲಿಕೆಯ ನಿರಸನ ಅಂದರೆ ಆಯ್ದ ಕೆಲವಂಶಗಳನ್ನು ತೆಗೆದು ಹಾಕುವುದು.

2

ಸಂಶ್ಲೇಷಿತ ದತ್ತಾಂಶ ಉತ್ಪಾದನೆ

ಐ.ಐ.ಟಿ.ರೂರ್ಕಿ

ಡೇಟಾಸೆಟ್ ಗಳಲ್ಲಿ ಪಕ್ಷಪಾತವನ್ನು ತಗ್ಗಿಸಲು ಸಂಶ್ಲೇಷಿತ ಡೇಟಾವನ್ನು ಉತ್ಪಾದಿಸುವ ವಿಧಾನದ ವಿನ್ಯಾಸ ಮತ್ತು ಅಭಿವೃದ್ಧಿ; ಮತ್ತು ಜವಾಬ್ದಾರಿಯುತ ಎಐಗಾಗಿ ಯಂತ್ರ ಕಲಿಕೆ ಪೈಪ್ ಲೈನ್ ನಲ್ಲಿ ಪಕ್ಷಪಾತವನ್ನು ತಗ್ಗಿಸುವ ಚೌಕಟ್ಟು

3

ಎಐ ಪಕ್ಷಪಾತ ನಿವಾರಣಾ ಕಾರ್ಯತಂತ್ರ

ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಯಪುರ

ಆರೋಗ್ಯ ರಕ್ಷಣಾ ವ್ಯವಸ್ಥೆಗಳಲ್ಲಿ ಪೂರ್ವನಿರ್ಧರಿತ /ಪಕ್ಷಪಾತದ ತೀರ್ಮಾನ ತಗ್ಗಿಸುವಿಕೆಗಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿ

4

ವಿವರಿಸಬಹುದಾದ ಎಐ ಫ್ರೇಮ್ವರ್ಕ್ (ಚೌಕಟ್ಟು)

ಡಿ.ಐ.ಎ.ಟಿ ಪುಣೆ ಮತ್ತು ಮೈಂಡ್ ಗ್ರಾಫ್ ಟೆಕ್ನಾಲಜಿ  ಪ್ರೈ.ಲಿಮಿಟೆಡ್

ಭದ್ರತೆಗಾಗಿ ವಿವರಿಸಬಹುದಾದ ಮತ್ತು ಗೌಪ್ಯತೆ ಸಂರಕ್ಷಿಸುವ ಎಐ ಅನ್ನು ಸಕ್ರಿಯಗೊಳಿಸುವುದು

5

ಗೌಪ್ಯತೆ ಹೆಚ್ಚಿಸುವ ಕಾರ್ಯತಂತ್ರ

ಐಐಟಿ ದಿಲ್ಲಿ, ಐಐಐಟಿ ದಿಲ್ಲಿ, ಐಐಟಿ ಧಾರವಾಡ ಮತ್ತು

ದೂರಸಂಪರ್ಕ ಎಂಜಿನಿಯರಿಂಗ್ ಕೇಂದ್ರ (ಟಿಇಸಿ)

ಗೌಪ್ಯತೆ-ಸಂರಕ್ಷಿಸುವ ಯಂತ್ರ ಕಲಿಕೆಯ  ದೃಢವಾದ ಮಾದರಿಗಳು

6

ಎಐ ಆಡಳಿತ ಪರೀಕ್ಷಾ ಚೌಕಟ್ಟು

ಅಮೃತ ವಿಶ್ವ ವಿದ್ಯಾಪೀಠಂ

ಮತ್ತು ದೂರಸಂಪರ್ಕ ಎಂಜಿನಿಯರಿಂಗ್ ಕೇಂದ್ರ (ಟಿಇಸಿ)

ಟ್ರ್ಯಾಕ್-ಎಲ್ಎಲ್ಎಂ, ಪಾರದರ್ಶಕತೆ, ಅಪಾಯದ ಮೌಲ್ಯಮಾಪನ, ಸಂದರ್ಭ ಮತ್ತು ದೊಡ್ಡ ಭಾಷಾ ಮಾದರಿಗಳಿಗೆ ಜ್ಞಾನ

7

ಎಐ ನೈತಿಕತೆ ಪ್ರಮಾಣೀಕರಣ ಚೌಕಟ್ಟು

ಐಐಐಟಿ, ದಿಲ್ಲಿ ಮತ್ತು

ದೂರಸಂಪರ್ಕ ಎಂಜಿನಿಯರಿಂಗ್ ಕೇಂದ್ರ (ಟಿಇಸಿ)

 

ಕೃತಕ ಮಾದರಿಯ ನ್ಯಾಯೋಚಿತತೆಯನ್ನು ನಿರ್ಣಯಿಸುವ ಪರಿಕರಗಳು

8

ಎಐ ಅಲ್ಗಾರಿದಮ್ ಆಡಿಟಿಂಗ್ ಸಲಕರಣೆ

ಸಿವಿಕ್ ಡೇಟಾ ಲ್ಯಾಬ್ ಗಳು

ಪರಖ್ ಎ.ಐ. - ಭಾಗವಹಿಸುವ ಅಲ್ಗಾರಿದಮಿಕ್ ಆಡಿಟಿಂಗ್ಗಾಗಿ ಮುಕ್ತ-ಮೂಲ ಚೌಕಟ್ಟು ಮತ್ತು ಟೂಲ್ಕಿಟ್

 

ಭಾರತ: ಕೃತಕ ಬುದ್ಧಿಮತ್ತೆ ಆಡಳಿತ ಮತ್ತು ನೀತಿಯಲ್ಲಿ ಜಾಗತಿಕ ನಾಯಕ

“ಕೃತಕ ಬುದ್ಧಿಮತ್ತೆಯಲ್ಲಿನ ನೈತಿಕ ಸಮಸ್ಯೆಗಳು ಜಾಗತಿಕ ಕಾಳಜಿಯಾಗಿವೆ ಮತ್ತು ಭಾರತವು ಸವಾಲುಗಳನ್ನು ದೃಢವಾದ ಚರ್ಚೆ ಮತ್ತು ಜವಾಬ್ದಾರಿಯುತ ನಾವೀನ್ಯತೆಯ ಮೂಲಕ ಎದುರಿಸಲು ಬದ್ಧವಾಗಿದೆ. ಈ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಉಪಕರಣಗಳು ಭಾರತವು ನೈತಿಕ ಕೃತಕ ಬುದ್ಧಿಮತ್ತೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವುದನ್ನು ಖಚಿತಪಡಿಸುತ್ತದೆ, ”ಎಂದು ಶ್ರೀ ವೈಷ್ಣವ್ ವಿವರಿಸಿದರು.

ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು ಸಚಿವರು ಎತ್ತಿ ತೋರಿಸಿದರು. “ಕೃತಕ ಬುದ್ಧಿಮತ್ತೆಯ ಆಡಳಿತದ ಕುರಿತು ಜಾಗತಿಕ ಚಿಂತನೆಯನ್ನು ರೂಪಿಸುವಲ್ಲಿ ಪ್ರಮುಖ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಕಳೆದ ವರ್ಷ, ಭಾರತವು ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ (AI -GPAI) ಯ  ಅಧ್ಯಕ್ಷತೆ ವಹಿಸಿತ್ತು.  ಮತ್ತು ವರ್ಷ ಶೃಂಗಸಭೆಯನ್ನು ನಡೆಸಿತು ಮತ್ತು ಒ.ಇ.ಸಿ.ಡಿ (OECD) ಹಾಗು ವಿಶ್ವಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಚರ್ಚೆಗಳಲ್ಲಿ ಭಾರತದ ಧ್ವನಿಯು ಗಮನಾರ್ಹವಾದ ತೂಕವನ್ನು ಹೊಂದಿದೆ, ”ಎಂದು ಅವರು ಹೇಳಿದರು.

 

*****


(Release ID: 2083749) Visitor Counter : 7