ಪ್ರಧಾನ ಮಂತ್ರಿಯವರ ಕಛೇರಿ
ರಾಜಸ್ಥಾನದ ಜೈಪುರದಲ್ಲಿ “ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಸಮ್ಮಿಟ್ 2024”ರ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
09 DEC 2024 2:06PM by PIB Bengaluru
ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಬಗಡೆ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಜಿ ಶರ್ಮಾ, ರಾಜಸ್ಥಾನ ಸರ್ಕಾರದ ಸಚಿವರೆ, ಸಂಸದರೆ, ವಿಧಾನಸಭೆ ಸದಸ್ಯರೆ, ಉದ್ಯಮ ಸಹೋದ್ಯೋಗಿಗಳೆ, ವಿವಿಧ ರಾಯಭಾರಿಗಳೆ, ರಾಯಭಾರಿ ಪ್ರತಿನಿಧಿಗಳೆ, ಇತರೆ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ,
ರಾಜಸ್ಥಾನದ ಅಭಿವೃದ್ಧಿ ಪಯಣದಲ್ಲಿ ಇಂದು ಮತ್ತೊಂದು ಮಹತ್ವದ ದಿನವಾಗಿದೆ. ಪಿಂಕ್ ಸಿಟಿಯಲ್ಲಿ ದೇಶ ಮತ್ತು ವಿಶ್ವಾದ್ಯಂತದ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಮತ್ತು ಹೂಡಿಕೆದಾರರು ಇಲ್ಲಿ ನೆರೆದಿದ್ದಾರೆ. ಕೈಗಾರಿಕಾ ವಲಯದ ಅನೇಕ ಸಹೋದ್ಯೋಗಿಗಳೂ ಇದ್ದಾರೆ. ರೈಸಿಂಗ್ ರಾಜಸ್ಥಾನ ಶೃಂಗಸಭೆಗೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಈ ಭವ್ಯವಾದ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ನಾನು ರಾಜಸ್ಥಾನದ ಬಿಜೆಪಿ ಸರ್ಕಾರವನ್ನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಇಂದು, ವಿಶ್ವಾದ್ಯಂತದ ಪ್ರತಿಯೊಬ್ಬ ತಜ್ಞರು ಮತ್ತು ಹೂಡಿಕೆದಾರರು ಭಾರತದ ಬಗ್ಗೆ ಹೆಚ್ಚು ಆಶಾವಾದಿಗಳಾಗಿದ್ದಾರೆ. ಸುಧಾರಣೆ-ಕಾರ್ಯನಿರ್ವಹಣೆ-ಪರಿವರ್ತನೆಯ ಮಂತ್ರವನ್ನು ಅನುಸರಿಸಿ, ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಗೋಚರಿಸುವ ರೀತಿಯಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಸ್ವಾತಂತ್ರ್ಯದ ನಂತರದ 7 ದಶಕಗಳಲ್ಲಿ ಭಾರತವು ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಾಗಬಹುದಿತ್ತು. ಆದರೆ ಕಳೆದ 10 ವರ್ಷಗಳಲ್ಲಿ, ಭಾರತವು 10ನೇ ಅತಿದೊಡ್ಡ ಆರ್ಥಿಕತೆಯಿಂದ 5ನೇ ಅತಿದೊಡ್ಡ ಆರ್ಥಿಕತೆಗೆ ಸ್ಥಳಾಂತರಗೊಂಡಿದೆ. ಈ 10 ವರ್ಷಗಳಲ್ಲಿ, ಭಾರತವು ತನ್ನ ಆರ್ಥಿಕತೆಯ ಗಾತ್ರವನ್ನು ಸುಮಾರು ದ್ವಿಗುಣಗೊಳಿಸಿದೆ. ಕಳೆದ ದಶಕದಲ್ಲಿ ರಫ್ತು ಕೂಡ ದ್ವಿಗುಣಗೊಂಡಿದೆ. 2014ರ ಹಿಂದಿನ ದಶಕಕ್ಕೆ ಹೋಲಿಸಿದರೆ, ಕಳೆದ ದಶಕದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ದ್ವಿಗುಣಗೊಂಡಿದೆ. ಹೆಚ್ಚುವರಿಯಾಗಿ, ಈ ಸಮಯದಲ್ಲಿ ಭಾರತ ತನ್ನ ಮೂಲಸೌಕರ್ಯ ವೆಚ್ಚವನ್ನು ಸರಿಸುಮಾರು 2 ಟ್ರಿಲಿಯನ್ ರೂಪಾಯಿಗಳಿಂದ 11 ಟ್ರಿಲಿಯನ್ ರೂಪಾಯಿಗಳಿಗೆ ಹೆಚ್ಚಿಸಿದೆ.
ಸ್ನೇಹಿತರೆ,
ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ, ಡಿಜಿಟಲ್ ಡೇಟಾ ಮತ್ತು ವಿತರಣೆಯ ಶಕ್ತಿಯು ಭಾರತದ ಯಶಸ್ಸಿನಿಂದ ಸ್ಪಷ್ಟವಾಗಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುವ ಜತೆಗೆ, ಹೆಚ್ಚು ಬಲಶಾಲಿಯಾಗುತ್ತಿದೆ, ಇದು ಸ್ವತಃ ಗಮನಾರ್ಹ ಸಾಧನೆಯಾಗಿದೆ. ಪ್ರಜಾಸತ್ತಾತ್ಮಕವಾಗಿ ಉಳಿದಿರುವಾಗ, ಭಾರತದ ತತ್ವಶಾಸ್ತ್ರವು ಮಾನವತೆಯ ಕಲ್ಯಾಣದ ಮೇಲೆ ಕೇಂದ್ರೀಕೃತವಾಗಿದೆ, ಅದು ಅದರ ಪಾತ್ರಕ್ಕೆ ಅಂತರ್ಗತವಾಗಿದೆ. ಇಂದು ಭಾರತದ ಜನರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ಮೂಲಕ ಸ್ಥಿರ ಸರ್ಕಾರಕ್ಕಾಗಿ ಮತ ಚಲಾಯಿಸುತ್ತಿದ್ದಾರೆ.
ಸ್ನೇಹಿತರೆ,
ಭಾರತದ ಈ ಪುರಾತನ ಮೌಲ್ಯಗಳನ್ನು ಅದರ ಜನಸಂಖ್ಯಾ ಬಲದಿಂದ ಮುನ್ನಡೆಸಲಾಗುತ್ತಿದೆ - ಅದರ 'ಯುವ ಶಕ್ತಿ'(ಯುವ ಶಕ್ತಿ). ಮುಂದಿನ ಹಲವು ವರ್ಷಗಳವರೆಗೆ ಭಾರತವು ವಿಶ್ವದ ಅತ್ಯಂತ ಚಿರಯೌವ್ವನ(ಕಿರಿಯ) ರಾಷ್ಟ್ರಗಳಲ್ಲಿ ಒಂದಾಗಿ ಉಳಿಯುತ್ತದೆ. ಅತಿ ಹೆಚ್ಚು ಯುವಕರ ಸಮೂಹವನ್ನು ಹೊಂದುವುದರೊಂದಿಗೆ ಭಾರತವು ಅತ್ಯಂತ ಕೌಶಲ್ಯಪೂರ್ಣ ಯುವಕರನ್ನು ಸಹ ಹೊಂದಿದೆ. ಈ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಸರ್ಕಾರವು ಕಾರ್ಯತಂತ್ರದ ನಿರ್ಧಾರಗಳ ಸರಣಿಯನ್ನು ಮಾಡುತ್ತಿದೆ.
ಸ್ನೇಹಿತರೆ,
ಕಳೆದ ದಶಕದಲ್ಲಿ, ಭಾರತದ ಯುವಕರು ತಮ್ಮ ಸಾಮರ್ಥ್ಯಕ್ಕೆ ಹೊಸ ಆಯಾಮವನ್ನು ಸೇರಿಸಿದ್ದಾರೆ. ಈ ಹೊಸ ಆಯಾಮವು ಭಾರತದ ತಂತ್ರಜ್ಞಾನ ಶಕ್ತಿ ಮತ್ತು ದತ್ತಾಂಶ ಶಕ್ತಿ ಆಗಿದೆ. ಇಂದು ಪ್ರತಿಯೊಂದು ವಲಯದಲ್ಲಿ ತಂತ್ರಜ್ಞಾನ ಮತ್ತು ಡೇಟಾ ಎಷ್ಟು ನಿರ್ಣಾಯಕವಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಇದು ತಂತ್ರಜ್ಞಾನ-ಚಾಲಿತ, ಡೇಟಾ-ಚಾಲಿತ ಶತಮಾನವಾಗಿದೆ. ಕಳೆದ ದಶಕದಲ್ಲಿ, ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಸುಮಾರು 4 ಪಟ್ಟು ಹೆಚ್ಚಾಗಿದೆ. ಡಿಜಿಟಲ್ ವಹಿವಾಟುಗಳು ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿವೆ, ಇದು ಕೇವಲ ಪ್ರಾರಂಭವಾಗಿದೆ. ಭಾರತವು ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ ಮತ್ತು ದತ್ತಾಂಶದ ನಿಜವಾದ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವು ಪ್ರತಿ ವಲಯ ಮತ್ತು ಪ್ರತಿ ಸಮುದಾಯಕ್ಕೆ ಹೇಗೆ ಪ್ರಯೋಜನ ನೀಡುತ್ತದೆ ಎಂಬುದನ್ನು ಭಾರತ ತೋರಿಸಿದೆ. ಯುಪಿಐ, ನೇರ ನಗದು ವರ್ಗಾವಣೆ(ಡಿಬಿಟಿ) ಯೋಜನೆಗಳು, ಜಿಇಎಂ(ಸರ್ಕಾರಿ ಇ-ಮಾರುಕಟ್ಟೆ), ಮತ್ತು ಒಎನ್ ಡಿಸಿ(ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ಜಾಲ)ಯಂತಹ ವೇದಿಕೆಗಳು ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯ ಬಲವನ್ನು ಪ್ರದರ್ಶಿಸುತ್ತವೆ. ಈ ಡಿಜಿಟಲ್ ರೂಪಾಂತರವು ರಾಜಸ್ಥಾನದಲ್ಲಿಯೂ ಗಮನಾರ್ಹ ಪರಿಣಾಮ ಸೃಷ್ಟಿಸಲು ಸಿದ್ಧವಾಗಿದೆ. ರಾಜ್ಯಗಳ ಅಭಿವೃದ್ಧಿಯು ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ರಾಜಸ್ಥಾನವು ಬೆಳವಣಿಗೆಯ ಹೊಸ ಎತ್ತರ ತಲುಪುತ್ತಿದ್ದಂತೆ, ಇದು ಇಡೀ ದೇಶವನ್ನು ಉನ್ನತೀಕರಿಸಲು ಕೊಡುಗೆ ನೀಡುತ್ತದೆ.
ಸ್ನೇಹಿತರೆ,
ವಿಸ್ತೀರ್ಣದಲ್ಲಿ, ರಾಜಸ್ಥಾನವು ಭಾರತದ ಅತಿದೊಡ್ಡ ರಾಜ್ಯವಾಗಿದೆ, ಇಲ್ಲಿನ ಜನರ ಹೃದಯವು ಅಷ್ಟೇ ವಿಶಾಲವಾಗಿದೆ. ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಕಠಿಣ ಗುರಿಗಳನ್ನು ಸಾಧಿಸುವ ಸಂಕಲ್ಪ, ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಕ್ಕೆ ಆದ್ಯತೆ ನೀಡುವ ಮನೋಭಾವ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡುವ ಸ್ಫೂರ್ತಿ - ಈ ಗುಣಗಳು ರಾಜಸ್ಥಾನದ ಮಣ್ಣಿನ ಪ್ರತಿಯೊಂದು ಧಾನ್ಯದಲ್ಲೂ ಬೇರೂರಿದೆ. ಆದರೆ, ಸ್ವಾತಂತ್ರ್ಯಾನಂತರ ಸರ್ಕಾರಗಳ ಆದ್ಯತೆಗಳು ರಾಷ್ಟ್ರದ ಅಭಿವೃದ್ಧಿಯಾಗಲಿ, ಪರಂಪರೆಯ ಸಂರಕ್ಷಣೆಯಾಗಲಿ ಆಗಿರಲಿಲ್ಲ. ರಾಜಸ್ಥಾನವು ಈ ನಿರ್ಲಕ್ಷ್ಯದ ಗಮನಾರ್ಹ ಹೊರೆಯನ್ನು ಹೊತ್ತಿದೆ. ಆದರೆ ಇಂದು ನಮ್ಮ ಸರ್ಕಾರವು 'ವಿಕಾಸ್' (ಅಭಿವೃದ್ಧಿ) ಮತ್ತು 'ವಿರಾಸತ್'(ಪರಂಪರೆ) ಎರಡು ಮಂತ್ರದೊಂದಿಗೆ ಕೆಲಸ ಮಾಡುತ್ತಿದೆ, ರಾಜಸ್ಥಾನವು ಅದರಿಂದ ಗಣನೀಯ ಲಾಭ ಪಡೆಯುತ್ತಿದೆ.
ಸ್ನೇಹಿತರೆ,
ರಾಜಸ್ಥಾನವು ಏರಿಕೆ ಆಗುತ್ತಿರುವುದು ಮಾತ್ರವಲ್ಲದೆ, ವಿಶ್ವಾಸಾರ್ಹವೂ ಆಗಿದೆ. ಇದು ಸ್ವೀಕಾರಾರ್ಹವಾಗಿದೆ ಮತ್ತು ಸಮಯದೊಂದಿಗೆ ತನ್ನನ್ನು ಹೇಗೆ ಪರಿಷ್ಕರಿಸಬೇಕೆಂದು ತಿಳಿದಿದೆ. ರಾಜಸ್ಥಾನವು ಸವಾಲುಗಳನ್ನು ಎದುರಿಸುವ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುವ ಸಂಕೇತವಾಗಿದೆ. ರಾಜಸ್ಥಾನದ ಈ ಆರ್-ಫ್ಯಾಕ್ಟರ್‌ನಲ್ಲಿ ಹೊಸ ಆಯಾಮವನ್ನು ಸೇರಿಸಲಾಗಿದೆ. ರಾಜಸ್ಥಾನದ ಜನರು ಇಲ್ಲಿ ಸ್ಪಂದಿಸುವ ಮತ್ತು ಸುಧಾರಣಾವಾದಿ ಬಿಜೆಪಿ ಸರ್ಕಾರಕ್ಕೆ ಉತ್ತಮ ಜನಾದೇಶ ನೀಡಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ, ಭಜನ್ ಲಾಲ್ ಜಿ ಮತ್ತು ಅವರ ಇಡೀ ತಂಡವು ಗಮನಾರ್ಹ ಫಲಿತಾಂಶಗಳನ್ನು ಪ್ರದರ್ಶಿಸಿದೆ. ರಾಜ್ಯ ಸರ್ಕಾರ ಕೂಡ ಶೀಘ್ರದಲ್ಲಿಯೇ ಮೊದಲ ವರ್ಷ ಪೂರೈಸಲಿದೆ. ರಾಜಸ್ಥಾನದ ತ್ವರಿತ ಅಭಿವೃದ್ಧಿಗಾಗಿ ಭಜನ್ ಲಾಲ್ ಜಿ ಅವರು ಕೆಲಸ ಮಾಡುತ್ತಿರುವ ದಕ್ಷತೆ ಮತ್ತು ಬದ್ಧತೆ ನಿಜವಾಗಿಯೂ ಶ್ಲಾಘನೀಯ. ಅದು ಬಡವರ ಕಲ್ಯಾಣವಾಗಲಿ, ರೈತರ ಯೋಗಕ್ಷೇಮವಾಗಲಿ, ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದಾಗಿರಲಿ ಅಥವಾ ರಸ್ತೆಗಳು, ವಿದ್ಯುತ್ ಮತ್ತು ನೀರನ್ನು ಖಾತರಿಪಡಿಸುವುದಾಗಿರಲಿ - ರಾಜಸ್ಥಾನದಲ್ಲಿ ಅಭಿವೃದ್ಧಿಯ ಎಲ್ಲಾ ಅಂಶಗಳು ವೇಗವಾಗಿ ಪ್ರಗತಿಯಲ್ಲಿವೆ. ಸರ್ಕಾರವು ಅಪರಾಧ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸುತ್ತಿರುವ ತ್ವರಿತಗತಿಯು ನಾಗರಿಕರು ಮತ್ತು ಹೂಡಿಕೆದಾರರಲ್ಲಿ ಹೊಸ ಉತ್ಸಾಹವನ್ನು ತಂದಿದೆ.
ಸ್ನೇಹಿತರೆ,
ರಾಜಸ್ಥಾನದ ಉದಯವನ್ನು ನಿಜವಾಗಿಯೂ ಅನುಭವಿಸಲು, ಅದರ ನೈಜ ಸಾಮರ್ಥ್ಯವನ್ನು ಅರಿತುಕೊಳ್ಳುವುದು ಅತ್ಯಗತ್ಯ. ರಾಜಸ್ಥಾನವು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳು, ಆಧುನಿಕ ಸಂಪರ್ಕ ಜಾಲ, ಶ್ರೀಮಂತ ಪರಂಪರೆ, ವಿಶಾಲವಾದ ಭೂಭಾಗ ಮತ್ತು ಕ್ರಿಯಾತ್ಮಕ ಯುವ ಶಕ್ತಿಯಿಂದ ಆಶೀರ್ವದಿಸಲ್ಪಟ್ಟಿದೆ. ರಸ್ತೆಗಳಿಂದ ರೈಲ್ವೆವರೆಗೆ, ಆತಿಥ್ಯದಿಂದ ಕರಕುಶಲ ವಸ್ತುಗಳವರೆಗೆ, ಹೊಲಗಳಿಂದ ಕೋಟೆಗಳವರೆಗೆ, ರಾಜಸ್ಥಾನವು ಅವಕಾಶಗಳ ಸಂಪತ್ತು ಹೊಂದಿದೆ. ಈ ಸಾಮರ್ಥ್ಯವು ರಾಜಸ್ಥಾನವನ್ನು ಹೂಡಿಕೆಗೆ ಹೆಚ್ಚು ಆಕರ್ಷಕ ತಾಣವನ್ನಾಗಿ ಮಾಡುತ್ತಿದೆ. ರಾಜಸ್ಥಾನವು ವಿಶಿಷ್ಟವಾದ ಗುಣ ಹೊಂದಿದೆ - ಕಲಿಯುವ ಮತ್ತು ಅದರ ಸಾಮರ್ಥ್ಯವನ್ನು ಹೆಚ್ಚಿಸುವ ಸಾಮರ್ಥ್ಯ. ಆದ್ದರಿಂದಲೇ ಇಲ್ಲಿನ ಮರಳಿನ ದಿಬ್ಬಗಳೂ ಈಗ ಫಲ ನೀಡುತ್ತಿದ್ದು, ಆಲಿವ್ ಮತ್ತು ಜತ್ರೋಫಾದಂತಹ ಬೆಳೆಗಳ ಕೃಷಿಯನ್ನು ವಿಸ್ತರಿಸಲಾಗುತ್ತಿದೆ. ಜೈಪುರದ ನೀಲಿ ಕುಂಬಾರಿಕೆ, ಪ್ರತಾಪಗಢದ ತೇವಾ ಆಭರಣಗಳು ಮತ್ತು ಭಿಲ್ವಾರದ ಜವಳಿ ಆವಿಷ್ಕಾರಗಳು ವಿಶಿಷ್ಟವಾದ ಪ್ರತಿಷ್ಠೆಯನ್ನು ಹೊಂದಿವೆ. ಮಕ್ರಾನಾ ಅಮೃತಶಿಲೆ ಮತ್ತು ಕೋಟಾ ಡೋರಿಯಾ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿವೆ, ಆದರೆ ನಾಗೌರ್‌ನ ಮೆಂತ್ಯವು ವಿಶಿಷ್ಟ ಪರಿಮಳ ಹೊಂದಿದೆ. ಪ್ರಸ್ತುತ ಬಿಜೆಪಿ ಸರ್ಕಾರವು ಪ್ರತಿ ಜಿಲ್ಲೆಯ ವಿಶಿಷ್ಟ ಶಕ್ತಿಯನ್ನು ಸಕ್ರಿಯವಾಗಿ ಗುರುತಿಸುತ್ತಿದೆ ಮತ್ತು ಬಳಸಿಕೊಳ್ಳುತ್ತಿದೆ.
ಸ್ನೇಹಿತರೆ,
ನಿಮಗೆಲ್ಲಾ ತಿಳಿದಿರುವಂತೆ, ಭಾರತದ ಖನಿಜ ಸಂಪತ್ತಿನ ಗಮನಾರ್ಹ ಭಾಗವು ರಾಜಸ್ಥಾನದಲ್ಲಿ ಕಂಡುಬರುತ್ತದೆ. ರಾಜ್ಯವು ಸತು, ಸೀಸ, ತಾಮ್ರ, ಅಮೃತಶಿಲೆ, ಸುಣ್ಣದ ಕಲ್ಲು, ಗ್ರಾನೈಟ್ ಮತ್ತು ಪೊಟ್ಯಾಶ್ ನಿಕ್ಷೇಪಗಳನ್ನು ಹೊಂದಿದೆ, ಇದು ಆತ್ಮನಿರ್ಭರ್ ಭಾರತ(ಸ್ವಾವಲಂಬಿ ಭಾರತ)ಕ್ಕೆ ಸದೃಢ ಅಡಿಪಾಯ ರೂಪಿಸುತ್ತದೆ. ರಾಜಸ್ಥಾನವು ಭಾರತದ ಇಂಧನ ಭದ್ರತೆಗೆ ಪ್ರಮುಖ ಕೊಡುಗೆ ನೀಡುತ್ತದೆ. ಈ ದಶಕದ ಅಂತ್ಯದ ವೇಳೆಗೆ 500 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧಿಸುವ ಗುರಿಯನ್ನು ಭಾರತ ಹೊಂದಿದೆ, ರಾಜಸ್ಥಾನವು ಈ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ದೇಶದ ಕೆಲವು ದೊಡ್ಡ ಸೋಲಾರ್ ಪಾರ್ಕ್‌ಗಳನ್ನು ಇಲ್ಲಿಯೇ ಅಭಿವೃದ್ಧಿಪಡಿಸಲಾಗುತ್ತಿದೆ.
ಸ್ನೇಹಿತರೆ,
ರಾಜಸ್ಥಾನವು 2 ಪ್ರಮುಖ ಆರ್ಥಿಕ ಕೇಂದ್ರಗಳಾದ ದೆಹಲಿ ಮತ್ತು ಮುಂಬೈ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಮಹಾರಾಷ್ಟ್ರ ಮತ್ತು ಗುಜರಾತ್ ಬಂದರುಗಳನ್ನು ಉತ್ತರ ಭಾರತದೊಂದಿಗೆ ಸಂಪರ್ಕಿಸುತ್ತದೆ. ಇದನ್ನು ಪರಿಗಣಿಸಿ: ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್(ಡಿಎಂಐಸಿ) 250 ಕಿಲೋಮೀಟರ್‌ಗಳು ರಾಜಸ್ಥಾನದ ಮೂಲಕ ಹಾದು ಹೋಗುತ್ತವೆ, ಇದು ಅಲ್ವಾರ್, ಭರತ್‌ಪುರ, ದೌಸಾ, ಸವಾಯಿ ಮಾಧೋಪುರ್, ಟೋಂಕ್, ಬುಂಡಿ ಮತ್ತು ಕೋಟಾದಂತಹ ಜಿಲ್ಲೆಗಳಿಗೆ ಪ್ರಯೋಜನ ನೀಡುತ್ತದೆ. ಅದೇ ರೀತಿ, ಮೀಸಲಾದ ಸರಕು ಸಾಗಣೆ ಕಾರಿಡಾರ್‌ನ 300 ಕಿಲೋಮೀಟರ್‌ಗಳು ರಾಜಸ್ಥಾನವನ್ನು ಹಾದು ಹೋಗುತ್ತವೆ, ಜೈಪುರ, ಅಜ್ಮೀರ್, ಸಿಕರ್, ನಾಗೌರ್ ಮತ್ತು ಅಲ್ವಾರ್ ಜಿಲ್ಲೆಗಳನ್ನು ಇದು ಒಳಗೊಂಡಿದೆ. ಈ ವ್ಯಾಪಕವಾದ ಸಂಪರ್ಕ ಯೋಜನೆಗಳು ವಿಶೇಷವಾಗಿ ಡ್ರೈ ಪೋರ್ಟ್‌ಗಳು ಮತ್ತು ಸರಕು ಸಾಗಣೆ ವಲಯಗಳಲ್ಲಿ ಹೂಡಿಕೆಗೆ ಅತ್ಯುತ್ತಮ ತಾಣವಾಗಿ ರಾಜಸ್ಥಾನವನ್ನು ರೂಪಿಸಿವೆ. ನಾವು ಇಲ್ಲಿ ಬಹು-ಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಜೊತೆಗೆ ಸುಮಾರು 2 ಡಜನ್ ವಲಯ-ನಿರ್ದಿಷ್ಟ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಹೆಚ್ಚುವರಿಯಾಗಿ, 2 ಏರ್ ಕಾರ್ಗೊ ಸಂಕೀರ್ಣಗಳನ್ನು ಸ್ಥಾಪಿಸಲಾಗಿದೆ, ಇದು ರಾಜಸ್ಥಾನದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಕೈಗಾರಿಕಾ ಸಂಪರ್ಕ ಹೆಚ್ಚಿಸವುದನ್ನು ಸುಲಭಗೊಳಿಸುತ್ತದೆ.
ಸ್ನೇಹಿತರೆ,
ಭಾರತದ ಸಮೃದ್ಧ ಭವಿಷ್ಯಕ್ಕಾಗಿ ಇಲ್ಲಿನ ಪ್ರವಾಸೋದ್ಯಮವು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಪ್ರಕೃತಿ, ಸಂಸ್ಕೃತಿ, ಸಾಹಸ, ಸಮ್ಮೇಳನ, ಗಮ್ಯಸ್ಥಾನ ವಿವಾಹಗಳು ಮತ್ತು ಪಾರಂಪರಿಕ ಪ್ರವಾಸೋದ್ಯಮದಲ್ಲಿ ಭಾರತವು ಅಪಾರ ಅವಕಾಶಗಳನ್ನು ನೀಡುತ್ತದೆ. ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜಸ್ಥಾನವು ಪ್ರಮುಖ ಕೇಂದ್ರಬಿಂದುವಾಗಿದೆ. ಇದು ಶ್ರೀಮಂತ ಇತಿಹಾಸ, ಭವ್ಯ ಪರಂಪರೆ, ವಿಶಾಲವಾದ ಮರುಭೂಮಿಗಳು ಮತ್ತು ಸುಂದರವಾದ ಸರೋವರಗಳ ನೆಲೆಯಾಗಿದೆ. ಇಲ್ಲಿನ ಸಂಗೀತ, ಪಾಕಪದ್ಧತಿ ಮತ್ತು ಸಂಪ್ರದಾಯಗಳು ಹೋಲಿಕೆಯನ್ನು ಮೀರಿವೆ. ಪ್ರವಾಸೋದ್ಯಮ, ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲವನ್ನೂ ರಾಜಸ್ಥಾನದಲ್ಲಿ ಕಾಣಬಹುದು. ಮದುವೆಯಂತಹ ಜೀವನದ ಘಟನೆಗಳನ್ನು ನಿಜವಾಗಿಯೂ ಸ್ಮರಣೀಯವಾಗಿಸಲು ರಾಜಸ್ಥಾನವು ವಿಶ್ವದ ಅತ್ಯಂತ ಬೇಡಿಕೆಯ ತಾಣಗಳಲ್ಲಿ ಒಂದಾಗಿದೆ. ವನ್ಯಜೀವಿ ಪ್ರವಾಸೋದ್ಯಮಕ್ಕೆ ರಾಜ್ಯವು ಅಪಾರ ವ್ಯಾಪ್ತಿ ಹೊಂದಿದೆ. ರಣಥಂಬೋರ್, ಸರಿಸ್ಕಾ, ಮುಕುಂದ್ರ ಬೆಟ್ಟಗಳು ಮತ್ತು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನವು ವನ್ಯಜೀವಿ ಉತ್ಸಾಹಿಗಳಿಗೆ ಆಶ್ರಯ ತಾಣವಾಗಿದೆ. ರಾಜಸ್ಥಾನ ಸರ್ಕಾರವು ತನ್ನ ಪ್ರವಾಸಿ ತಾಣಗಳು ಮತ್ತು ಪಾರಂಪರಿಕ ಕೇಂದ್ರಗಳಿಗೆ ಸಂಪರ್ಕ ಹೆಚ್ಚಿಸುತ್ತಿರುವುದನ್ನು ನೋಡಲು ನನಗೆ ಸಂತೋಷವಾಗಿದೆ. ಭಾರತ ಸರ್ಕಾರವು ವಿವಿಧ ವಿಷಯದ ಸರ್ಕ್ಯೂಟ್‌ಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಸಹ ಪರಿಚಯಿಸಿದೆ. 2004 ಮತ್ತು 2014ರ ನಡುವೆ ಸುಮಾರು 5 ಕೋಟಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ. 2014ರಿಂದ 2024ರ ವರೆಗೆ, ಕೊರೊನಾ ಸಾಂಕ್ರಾಮಿಕ ರೋಗವು ಸುಮಾರು 3ರಿಂದ 4 ವರ್ಷಗಳವರೆಗೆ ಪರಿಣಾಮ ಬೀರಿದ್ದರೂ, 7 ಕೋಟಿಗೂ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಪ್ರವಾಸೋದ್ಯಮ ಸ್ಥಗಿತಗೊಂಡಿತ್ತು. ಅದರ ಹೊರತಾಗಿಯೂ, ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಭಾರತ ಹಲವಾರು ದೇಶಗಳ ಪ್ರವಾಸಿಗರಿಗೆ ಇ-ವೀಸಾ ಸೌಲಭ್ಯಗಳನ್ನು ಒದಗಿಸಿರುವುದು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಹೆಚ್ಚು ಪ್ರಯೋಜನ ನೀಡಿದೆ, ಇದು ಅವರ ಪ್ರಯಾಣದ ಅನುಭವವನ್ನು ಹೆಚ್ಚು ಅನುಕೂಲಕರ ಮತ್ತು ತೊಂದರೆ-ಮುಕ್ತವನ್ನಾಗಿ ಮಾಡಿದೆ. ಭಾರತದಲ್ಲಿ ದೇಶೀಯ ಪ್ರವಾಸೋದ್ಯಮವು ಹೊಸ ಎತ್ತರಕ್ಕೆ ತಲುಪುತ್ತಿದೆ. ಉಡಾನ್ (ಉದೇ ದೇಶ್ ಕಾ ಆಮ್ ನಾಗರಿಕ್), ವಂದೇ ಭಾರತ್ ರೈಲುಗಳು ಮತ್ತು ಪ್ರಸಾದ್(ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ವರ್ಧನೆ ಆಂದೋಲನ) ಕಾರ್ಯಕ್ರಮಗಳಂತಹ ಯೋಜನೆಗಳು ರಾಜಸ್ಥಾನಕ್ಕೆ ಹೆಚ್ಚು ಪ್ರಯೋಜನ ನೀಡುತ್ತಿವೆ. ರೋಮಾಂಚಕ ಗ್ರಾಮಗಳಂತಹ ಕಾರ್ಯಕ್ರಮಗಳು ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ನೆರವು ನೀಡುತ್ತಿವೆ. "ಭಾರತದಲ್ಲಿ ವಿವಾಹ" ಕಾನ್ಸೆಪ್ಟ್ ಅಳವಡಿಸಿಕೊಳ್ಳುವಂತೆ ನಾನು ನಾಗರಿಕರಿಗೆ ಕರೆ ನೀಡಿದ್ದೇನೆ, ರಾಜಸ್ಥಾನವು ಈ ಉಪಕ್ರಮದಿಂದ ಗಮನಾರ್ಹವಾಗಿ ಲಾಭ ಪಡೆಯಲಿದೆ. ರಾಜಸ್ಥಾನದಲ್ಲಿ ಪಾರಂಪರಿಕ ಪ್ರವಾಸೋದ್ಯಮ, ಚಲನಚಿತ್ರ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ ಮತ್ತು ಗಡಿ ಪ್ರದೇಶದ ಪ್ರವಾಸೋದ್ಯಮ ವಿಸ್ತರಿಸಲು ವಿಶಾಲವಾದ ಅವಕಾಶಗಳಿವೆ. ಈ ವಲಯಗಳಲ್ಲಿ ನಿಮ್ಮ ಹೂಡಿಕೆಯು ರಾಜಸ್ಥಾನದ ಪ್ರವಾಸೋದ್ಯಮವನ್ನು ಬಲಪಡಿಸುವುದಲ್ಲದೆ, ನಿಮ್ಮ ವ್ಯಾಪಾರಕ್ಕೆ ಸದೃಢವಾದ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.
ಸ್ನೇಹಿತರೆ,
ಜಾಗತಿಕ ಪೂರೈಕೆ ಮತ್ತು ಮೌಲ್ಯ ಸರಪಳಿಗಳಿಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಇಂದು ಜಗತ್ತಿಗೆ ದೊಡ್ಡ ಬಿಕ್ಕಟ್ಟುಗಳ ನಡುವೆಯೂ ದೃಢವಾಗಿ ಉಳಿಯುವ ಮತ್ತು ಅಡೆತಡೆಗಳಿಲ್ಲದೆ ಕಾರ್ಯ ನಿರ್ವಹಿಸುವ ಆರ್ಥಿಕತೆಯ ಅಗತ್ಯವಿದೆ. ಇದಕ್ಕಾಗಿ, ಭಾರತದಲ್ಲಿ ವಿಶಾಲವಾದ ಉತ್ಪಾದನಾ ನೆಲೆ ಸ್ಥಾಪಿಸುವುದು ಅತ್ಯಗತ್ಯ. ಇದು ಭಾರತಕ್ಕೆ ಮಾತ್ರವಲ್ಲ, ಜಾಗತಿಕ ಆರ್ಥಿಕತೆಗೂ ಮುಖ್ಯವಾಗಿದೆ. ಈ ಜವಾಬ್ದಾರಿಯನ್ನು ಗುರುತಿಸಿ, ಭಾರತವು ಗಮನಾರ್ಹ ಪ್ರಮಾಣದಲ್ಲಿ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಬದ್ಧವಾಗಿದೆ. ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಅಡಿ, ಭಾರತವು ಕಡಿಮೆ ವೆಚ್ಚದ ಉತ್ಪಾದನೆಗೆ ಒತ್ತು ನೀಡುತ್ತಿದೆ. ದೇಶದ ಪೆಟ್ರೋಲಿಯಂ ಉತ್ಪನ್ನಗಳು, ಔಷಧಗಳು ಮತ್ತು ಲಸಿಕೆಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳು ವಿಶ್ವಕ್ಕೆ ಲಾಭದಾಯಕವಾಗುವ ದಾಖಲೆ-ಮುರಿಯುವ ಉತ್ಪಾದನಾ ಪ್ರಯತ್ನಗಳಿಗೆ ಉದಾಹರಣೆಗಳಾಗಿವೆ. ಕಳೆದ ವರ್ಷ ಸರಿಸುಮಾರು 84,000 ಕೋಟಿ ರೂಪಾಯಿಗಳ ರಫ್ತುಗಳೊಂದಿಗೆ ರಾಜಸ್ಥಾನ ಸ್ವತಃ ಈ ಪ್ರಯತ್ನಕ್ಕೆ ಗಣನೀಯ ಕೊಡುಗೆ ನೀಡಿದೆ. 84,000 ಕೋಟಿ ರೂಪಾಯಿ! ಇದು ಎಂಜಿನಿಯರಿಂಗ್ ಸರಕುಗಳು, ರತ್ನಗಳು ಮತ್ತು ಚಿನ್ನಾಭರಣಗಳು, ಜವಳಿ, ಕರಕುಶಲ ವಸ್ತುಗಳು ಮತ್ತು ಕೃಷಿ-ಆಹಾರ ಉತ್ಪನ್ನಗಳನ್ನು ಒಳಗೊಂಡಿದೆ.
ಸ್ನೇಹಿತರೆ,
ಉತ್ಪಾದನೆ ಸಂಪರ್ಕಿತ ಉತ್ತೇಜನಾ) ಯೋಜನೆ(ಪಿಎಲ್ಐ)ಯು ಭಾರತದಲ್ಲಿ ಉತ್ಪಾದನೆ ಉತ್ತೇಜಿಸುವಲ್ಲಿ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿದೆ. ಎಲೆಕ್ಟ್ರಾನಿಕ್ಸ್, ವಿಶೇಷ ಉಕ್ಕು, ಆಟೋಮೊಬೈಲ್‌ಗಳು, ಆಟೋ ಘಟಕಗಳು, ಸೌರ ದ್ಯುತಿವಿದ್ಯುಜ್ಜನಕಗಳು ಮತ್ತು ಔಷಧಗಳಂತಹ ವಲಯಗಳು ಇದರಿಂದ ಗಮನಾರ್ಹ ಉತ್ತೇಜನ ಪಡೆದಿವೆ. ಪಿಎಲ್‌ಐ ಯೋಜನೆಯ ಪರಿಣಾಮವಾಗಿ 1.25 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಗಳು ಬಂದಿವೆ, ಅಂದಾಜು 11 ಲಕ್ಷ ಕೋಟಿ ರೂಪಾಯಿಗಳ ಉತ್ಪನ್ನಗಳ ಉತ್ಪಾದನೆಯಾಗಿದೆ ಮತ್ತು ರಫ್ತು 4 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಇದಲ್ಲದೆ, ಲಕ್ಷಾಂತರ ಯುವಕರು ಉದ್ಯೋಗಾವಕಾಶಗಳನ್ನು ಗಳಿಸಿದ್ದಾರೆ. ರಾಜಸ್ಥಾನದಲ್ಲಿ, ವಾಹನ ಮತ್ತು ಸ್ವಯಂ-ಘಟಕ ಕೈಗಾರಿಕೆಗಳಿಗೆ ಬಲವಾದ ನೆಲೆಯನ್ನು ಈಗಾಗಲೇ ಸ್ಥಾಪಿಸಲಾಗಿದೆ. ರಾಜ್ಯವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಅಪಾರ ಸಾಮರ್ಥ್ಯ ಹೊಂದಿದೆ, ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಅಗತ್ಯವಾದ ಮೂಲಸೌಕರ್ಯಗಳು ಸಹ ಸುಲಭವಾಗಿ ಲಭ್ಯವಿವೆ. ರಾಜಸ್ಥಾನದ ಉತ್ಪಾದನಾ ಸಾಮರ್ಥ್ಯವನ್ನು ಅನ್ವೇಷಿಸಲು ಮತ್ತು ಅವಕಾಶಗಳನ್ನು ಪಡೆದುಕೊಳ್ಳುವಂತೆ ನಾನು ಎಲ್ಲಾ ಹೂಡಿಕೆದಾರರಿಗೆ ಮನವಿ ಮಾಡುತ್ತೇನೆ.
ಸ್ನೇಹಿತರೆ,
ರೈಸಿಂಗ್ ರಾಜಸ್ಥಾನದ ಪ್ರಮುಖ ಶಕ್ತಿಗಳಲ್ಲಿ ಒಂದು ಎಂಎಸ್ಎಂಇ ವಲಯವಾಗಿದೆ. ಎಂಎಸ್ಎಂಇಗಳ ವಿಷಯದಲ್ಲಿ ರಾಜಸ್ಥಾನವು ಭಾರತದ ಅಗ್ರ 5 ರಾಜ್ಯಗಳಲ್ಲಿ ಸ್ಥಾನ ಪಡೆದಿದೆ. ಈ ಶೃಂಗಸಭೆಯು ಎಂಎಸ್ಎಂಇಗಳ ಮೇಲೆ ಮೀಸಲಾದ ಸಮಾವೇಶವನ್ನು ಅನ್ನು ಸಹ ಆಯೋಜಿಸುತ್ತಿದೆ. 27 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಅತಿಸಣ್ಣ ಉದ್ಯಮಗಳು 50 ಲಕ್ಷಕ್ಕೂ ಹೆಚ್ಚು ಜನರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿವೆ, ರಾಜಸ್ಥಾನದ ಎಂಎಸ್‌ಎಂಇಗಳು ರಾಜ್ಯದ ಭವಿಷ್ಯವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ರಾಜಸ್ಥಾನದ ಹೊಸ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ಹೊಸ ಎಂಎಸ್ಎಂಇ ನೀತಿ ಪರಿಚಯಿಸಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಭಾರತ ಸರ್ಕಾರವು ತನ್ನ ನೀತಿಗಳು ಮತ್ತು ಉಪಕ್ರಮಗಳ ಮೂಲಕ ಎಂಎಸ್ಎಂಇಗಳನ್ನು ನಿರಂತರವಾಗಿ ಸಬಲೀಕರಣಗೊಳಿಸುತ್ತಿದೆ. ಭಾರತದ ಎಂಎಸ್ಎಂಇಗಳು ಕೇವಲ ದೇಶೀಯ ಆರ್ಥಿಕತೆಯನ್ನು ಬಲಪಡಿಸದೆ, ಅವು ಜಾಗತಿಕ ಪೂರೈಕೆ ಮತ್ತು ಮೌಲ್ಯ ಸರಪಳಿಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಜಾಗತಿಕ ಔಷಧ ಪೂರೈಕೆ ಸರಪಳಿಯಲ್ಲಿ ಅಡೆತಡೆಗಳು ಹೊರಹೊಮ್ಮಿದಾಗ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ನಾವು ಇದನ್ನು ನೋಡಿದ್ದೇವೆ, ಭಾರತದ ಸದೃಢವಾದ ಔಷಧ ವಲಯವು ಜಗತ್ತಿಗೆ ಸಹಾಯ ಮಾಡಲು ಮುಂದಾಯಿತು. ಭಾರತವು ಔಷಧ ಕ್ಷೇತ್ರದಲ್ಲಿ ಭದ್ರ ಬುನಾದಿ ನಿರ್ಮಿಸಿದ್ದರಿಂದ ಇದು ಸಾಧ್ಯವಾಯಿತು. ಅದೇ ರೀತಿ, ಎಂಎಸ್ಎಂಇಗಳು ಪ್ರಮುಖ ಪಾತ್ರವನ್ನು ವಹಿಸುವ ಹಲವಾರು ಇತರ ಉತ್ಪನ್ನಗಳ ತಯಾರಿಕೆಗೆ ಸದೃಢವಾದ ನೆಲೆಯನ್ನು ಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಸ್ನೇಹಿತರೆ,
ನಮ್ಮ ಸರ್ಕಾರವು ಎಂಎಸ್ಎಂಇಗಳಿಗೆ ಹೆಚ್ಚಿನ ಬೆಳವಣಿಗೆಯ ಅವಕಾಶಗಳನ್ನು ಒದಗಿಸಲು ನಿಯತಾಂಕಗಳನ್ನು ಮರುವ್ಯಾಖ್ಯಾನಿಸಿದೆ. ಸರಿಸುಮಾರು 5 ಕೋಟಿ ಎಂಎಸ್‌ಎಂಇಗಳನ್ನು ಔಪಚಾರಿಕ ಆರ್ಥಿಕತೆಯಲ್ಲಿ ಸಂಯೋಜಿಸಲಾಗಿದೆ, ಸಾಲದ ಪ್ರವೇಶವನ್ನು ಸರಳಗೊಳಿಸಲಾಗಿದೆ. ನಾವು ಸಾಲ ಖಾತ್ರಿ ಸಂಪರ್ಕಿತ ಯೋಜನೆಯನ್ನು ಸಹ ಪರಿಚಯಿಸಿದ್ದೇವೆ, ಇದು ಸಣ್ಣ ಕೈಗಾರಿಕೆಗಳಿಗೆ ಸುಮಾರು 7 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಿದೆ. ಕಳೆದ ದಶಕದಲ್ಲಿ, ಎಂಎಸ್ಎಂಇಗಳಿಗೆ ಸಾಲದ ಹರಿವು ದ್ವಿಗುಣಗೊಂಡಿದೆ. 2014ರಲ್ಲಿ ಇದು ಸುಮಾರು 10 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, ಆದರೆ ಇಂದು ಅದು 22 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ. ರಾಜಸ್ಥಾನ ಈ ಬೆಳವಣಿಗೆಯ ಗಮನಾರ್ಹ ಫಲಾನುಭವಿಯಾಗಿದೆ. ಎಂಎಸ್ಎಂಇಗಳ ಹೆಚ್ಚುತ್ತಿರುವ ಶಕ್ತಿಯು ರಾಜಸ್ಥಾನದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಏರಿಸುತ್ತದೆ.
ಸ್ನೇಹಿತರೆ,
ನಾವು ‘ಆತ್ಮನಿರ್ಭರ ಭಾರತ’(ಸ್ವಾವಲಂಬಿ ಭಾರತ) ಕಡೆಗೆ ಹೊಸ ಪ್ರಯಾಣ ಆರಂಭಿಸಿದ್ದೇವೆ. ಈ ‘ಆತ್ಮನಿರ್ಭರ್ ಭಾರತ್’ ಮಿಷನ್ ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ ಮತ್ತು ಜಾಗತಿಕ ಪರಿಣಾಮಗಳನ್ನು ಸಹ ಹೊಂದಿದೆ. ಸರ್ಕಾರದ ಮಟ್ಟದಲ್ಲಿ, ನಾವು ಸಂಪೂರ್ಣ ಸರ್ಕಾರದ ಕಾರ್ಯವಿಧಾನದೊಂದಿಗೆ ಮುಂದುವರಿಯುತ್ತಿದ್ದೇವೆ. ಕೈಗಾರಿಕಾ ಬೆಳವಣಿಗೆಗಾಗಿ, ನಾವು ಪ್ರತಿಯೊಂದು ಕ್ಷೇತ್ರವನ್ನು ಮತ್ತು ಪ್ರತಿಯೊಂದು ಅಂಶವನ್ನು ಒಗ್ಗಟ್ಟಿನಿಂದ ಉತ್ತೇಜಿಸುತ್ತಿದ್ದೇವೆ. ‘ಸಬ್ಕಾ ಪ್ರಯಾಸ್’(ಸಾಮೂಹಿಕ ಪ್ರಯತ್ನ)ನ ಈ ಮನೋಭಾವವು ‘ವಿಕಸಿತ್ ರಾಜಸ್ಥಾನ’(ಅಭಿವೃದ್ಧಿ ಹೊಂದಿದ ರಾಜಸ್ಥಾನ) ಮತ್ತು ‘ವಿಕಸಿತ್ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ.
ಸ್ನೇಹಿತರೆ,
ಈ ಶೃಂಗಸಭೆಯು ದೇಶ ಮತ್ತು ವಿಶ್ವಾದ್ಯಂತದ ಪ್ರತಿನಿಧಿಗಳನ್ನು ಸ್ವಾಗತಿಸಿದೆ. ನಿಮ್ಮಲ್ಲಿ ಅನೇಕರಿಗೆ ಇದು ಭಾರತ ಅಥವಾ ರಾಜಸ್ಥಾನಕ್ಕೆ ನಿಮ್ಮ ಮೊದಲ ಭೇಟಿಯಾಗಿರಬಹುದು. ನೀವು ಮನೆಗೆ ಹಿಂದಿರುಗುವ ಮೊದಲು, ರಾಜಸ್ಥಾನ ಮತ್ತು ಭಾರತವನ್ನು ಅನ್ವೇಷಿಸುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ವರ್ಣರಂಜಿತ ಮಾರುಕಟ್ಟೆಗಳು, ಜನರ ಉತ್ಸಾಹಭರಿತ ಚೈತನ್ಯ ಮತ್ತು ಈ ಭೂಮಿಯ ಸರಿಸಾಟಿಯಿಲ್ಲದ ಮೋಡಿಯನ್ನು ಅನುಭವಿಸಿ - ಇದು ನೀವು ಶಾಶ್ವತವಾಗಿ ಪಾಲಿಸುವ ಅನುಭವವಾಗಿರುತ್ತದೆ. ಮತ್ತೊಮ್ಮೆ, ನಾನು ಎಲ್ಲಾ ಹೂಡಿಕೆದಾರರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ರೈಸಿಂಗ್(ಏರುತ್ತಿರುವ) ರಾಜಸ್ಥಾನದ ದೃಷ್ಟಿಕೋನಕ್ಕೆ ಅನುಗುಣವಾಗಿ ಅವರು ಹೊಂದಿರುವ ಬದ್ಧತೆಗಾಗಿ ಪ್ರತಿಯೊಬ್ಬರನ್ನು ಶ್ಲಾಘಿಸುತ್ತೇನೆ.
ಧನ್ಯವಾದಗಳು!
*****
(Release ID: 2082677)
Visitor Counter : 24
Read this release in:
Odia
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Tamil
,
Telugu