ನೀತಿ ಆಯೋಗ
azadi ka amrit mahotsav

ನೀತಿ ಆಯೋಗದಿಂದ ನವದೆಹಲಿಯಲ್ಲಿ “ಟ್ರೇಡ್ ವಾಚ್ ಕ್ವಾರ್ಟಲಿ” ನಿಯತಕಾಲಿಕೆ ಬಿಡುಗಡೆ

Posted On: 04 DEC 2024 2:59PM by PIB Bengaluru

ಭಾರತದ ವ್ಯಾಪಾರ ವಲಯದ ಬೆಳವಣಿಗೆ ಮತ್ತು ಉದಯೋನ್ಮುಖ ಅವಕಾಶಗಳು, ನೀತಿ ಪಾಲುದಾರರಿಗೆ ಪುರಾವೆ ಆಧಾರಿತ ಒಳನೋಟಗಳನ್ನು ಬಳಸಿಕೊಳ್ಳುವ “ಟ್ರೇಡ್ ವಾಚ್ ಕ್ವಾರ್ಟಲಿ” ಪ್ರಮುಖ ನಿಯತಕಾಲಿಕವಾಗಿದೆ : ಬಿ.ವಿ.ಆರ್. ಸುಬ್ರಮಣ್ಯಂ, ಸಿಇಒ, ನೀತಿ ಆಯೋಗ 

ನೀತಿ ಆಯೋಗದ ಉಪಾಧ್ಯಕ್ಷರಾದ ಸುನಮ್ ಬೆರಿ ಅವರು ನೀತಿ ಆಯೋಗ ಸಿಇಒ ಬಿ.ವಿ.ಆರ್. ಸುಬ್ರಮಣ್ಯಂ, ಸದಸ್ಯರಾದ ಡಾ.ವಿ.ಕೆ. ಸರಸ್ವತ್ ಮತ್ತು ಡಾ. ಅರವಿಂದ್ ವೀರ್ ಮಣಿ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ 2024 ರ ವರ್ಷದ [ಏಪ್ರಿಲ್ ನಿಂದ ಜೂನ್] ಭಾರತದ ವ್ಯಾಪಾರ ಅಂಕಿ ಅಂಶಗಳ ವಿಶ್ಲೇಷಣೆಗಳನ್ನು ಒಳಗೊಂಡ ನೀತಿ ಆಯೋಗದ ಇತ್ತೀಚಿನ ತ್ರೈಮಾಸಿಕ ಪ್ರಕಟಣೆಯನ್ನು ಬಿಡುಗಡೆ ಮಾಡಿದರು.   ವ್ಯಾಪಾರ ವಲಯದ ಮೇಲೆ ಕಣ್ಗಾವಲು ಹಾಕುವ ಈ ಪ್ರಕಟಣೆ ಇತ್ತೀಚಿನ ವ್ಯಾಪಾರ ಕ್ಷೇತ್ರದ ಸಮಗ್ರ ಮಾಹಿತಿಯನ್ನು ಒಳಗೊಂಡಿದ್ದು, ಜಾಗತಿಕ ಬೇಡಿಕೆ, ಪೂರೈಕೆ ಆಯಾಮಗಳು, ವಲಯವಾರು ಸಾಮರ್ಥ್ಯ ಮತ್ತು ಬೆಳವಣಿಗೆಯಾಗುತ್ತಿರುವ ವ್ಯಾಪಾರ ಕ್ಷೇತ್ರದ ಒಳನೋಟವನ್ನು ಒಳಗೊಂಡಿದೆ.

ಹಣಕಾಸು ವರ್ಷ 2024 ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ವ್ಯಾಪಾರ ಸಾಮರ್ಥ್ಯ ಸ್ಥಿರವಾಗಿದೆ ಮತ್ತು ಸಾಧಾರಣ ಬೆಳವಣಿಗೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಸಾಧಿಸುತ್ತಿದ್ದು, ಈ ಅವಧಿಯಲ್ಲಿ ಶೇ 5.45 ರಷ್ಟು ಪ್ರಗತಿ ಸಾಧಿಸಿದ್ದು, 576 ಶತಕೋಟಿ ಡಾಲರ್ ವಹಿವಾಟು ನಡೆಸಿದೆ. ಮಾರಾಟದ ರಫ್ತು ಸರಕುಗಳು ಸಂಯಮದ ಬೆಳವಣಿಗೆಯನ್ನು ತೋರಿಸಿವೆ. ಕಬ್ಬಿಣ ಮತ್ತು ಉಕ್ಕಿನಂತಹ ನಿರ್ಣಾಯಕ ವಲಯಗಳಲ್ಲಿನ ಕುಸಿತದಿಂದ ಪ್ರಭಾವಿತವಾಗಿವೆ, ಜೊತೆಗೆ ನೈಸರ್ಗಿಕ ಮತ್ತು ಸಂಸ್ಕರಿಸಿದ ಮುತ್ತುಗಳು. ಮತ್ತೊಂದೆಡೆ, ವಿಮಾನ, ಬಾಹ್ಯಾಕಾಶ ನೌಕೆ, ಖನಿಜ ಇಂಧನ ಮತ್ತು ಸಸ್ಯಜನ್ಯ ತೈಲ ಸೇರಿದಂತೆ ಹೆಚ್ಚಿನ ಮೌಲ್ಯದ ಸರಕುಗಳಿಂದ ಆಮದು ಪ್ರಕ್ರಿಯೆ ನಡೆದಿವೆ. ಸೇವೆಗಳ ರಫ್ತು ಚಟುವಟಿಕೆ ಉತ್ತೇಜಕವಲ್ಲದೇ ಹೆಚ್ಚುವರಿ ಸಾಮರ್ಥ್ಯವನ್ನು ಪ್ರದರ್ಶಿಸಿವೆ.

ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದು, ಈ ಪ್ರಕಟಣೆ ತೀರ್ಮಾನಗಳನ್ನು ಕೈಗೊಳ್ಳಲು ತ್ವರಿತವಾಗಿ ನಮಗೆ ಮಾಹಿತಿ ನೀಡುತ್ತವೆ. ನಮ್ಮ ನೀತಿ – ನಿರ್ಧಾರಗಳನ್ನು ಕೈಗೊಳ್ಳುವ ವಲಯವನ್ನು ಬಲಗೊಳಿಸುತ್ತದೆ ಹಾಗೂ ಜಾಗತಿಕ ಭೂ ಸದೃಶ್ಯಕ್ಕೆ ಅನುಗುಣವಾಗಿ ದೀರ್ಘಕಾಲೀನ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಭಾರತವು ಬಲವಾದ ತುಲನಾತ್ಮಕ ಪ್ರಯೋಜನವನ್ನು ಪಡೆಯುವ ಮಾರುಕಟ್ಟೆಗಳು ಮತ್ತು ಕ್ಷೇತ್ರಗಳನ್ನು ಗುರುತಿಸುವ ಮೂಲಕ ವ್ಯಾಪಾರ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಭವಿಷ್ಯದ ನೀತಿಗಳು ಮತ್ತು ಪಾಲುದಾರಿಕೆಯನ್ನು ರೂಪಿಸುವಲ್ಲಿ ಸಂಶೋಧನೆಗಳು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.

ನೀತಿ ಆಯೋಗದ ಸದಸ್ಯರಾದ ಡಾ. ಅರವಿಂದ್ ವೀರಮಣಿ ಅವರು ಸಮಗ್ರ ವ್ಯಾಪಾರ ಪ್ರಕಟಣೆಯನ್ನು ಹೊರ ತಂದ ಹಿನ್ನೆಲೆಯಲ್ಲಿ ಆಯೋಗದ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿದರು ಮತ್ತು ಈ ದಾಖಲೆಯು ಭಾರತದ ವಿಕಾಸಗೊಳ್ಳುತ್ತಿರುವ ವ್ಯಾಪಾರ ಭೂದೃಶ್ಯದ ಜಾಡು ಪತ್ತೆ ಮಾಡಲು ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ನೀತಿ ಆಯೋಗದ ಸಿಇಒ ಬಿ.ವಿ.ಆರ್ ಸುಬ್ರಹ್ಮಣ್ಯಂ ಅವರು ದತ್ತಾಂಶ-ಚಾಲಿತ ವಿಧಾನಗಳು ಮತ್ತು ಪುರಾವೆ ಆಧಾರಿತ ನೀತಿ ರಚನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ಪ್ರತಿ ತ್ರೈಮಾಸಿಕದಲ್ಲಿ ಭಾರತದ ವ್ಯಾಪಾರದ ಸ್ಥಿತಿಯ ವಿವರವಾದ ವಿಶ್ಲೇಷಣೆಯನ್ನು ನೀಡುವ ಮೂಲಕ, ಪ್ರಕಟಣೆಯು ಸಾಕ್ಷ್ಯ ಆಧಾರಿತ ನೀತಿ ರಚನೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು. ಈ ಉಪಕ್ರಮವು ವಿಕಸಿತ ಭಾರತ (ಭಾರತ@2047) ನಿರ್ಮಾಣಕ್ಕಾಗಿ ಭಾರತದ ವ್ಯಾಪಾರ ಸಾಮರ್ಥ್ಯವನ್ನು ಲಾಭದತ್ತ ಕೊಂಡೊಯ್ಯುವ ಗುರಿಗೆ ಅನುಗುಣವಾಗಿ ಭಾರತದ ವ್ಯಾಪಾರ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಬದ್ಧತೆಯೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ವೇಗವಾಗಿ ಬದಲಾಗುತ್ತಿರುವ ಜಾಗತಿಕ ವ್ಯಾಪಾರ ಪರಿಸರದಲ್ಲಿ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸುತ್ತದೆ ಎಂದರು.

ಈ ಪ್ರಕಟಣೆಯು ಭಾರತದ ವ್ಯಾಪಾರ ವಲಯಕ್ಕೆ ಸಮಯೋಚಿತ ಒಳನೋಟಗಳನ್ನು ನೀಡುವ ಗುರಿಯನ್ನು ಹೊಂದಿರುವ ತ್ರೈಮಾಸಿಕ ಸಂಚಿಕೆಯ ಸರಣಿಯ ಪ್ರಾರಂಭವನ್ನು ಸೂಚಿಸುತ್ತದೆ.

ಸಂಪೂರ್ಣ ಪ್ರಕಟಣೆ ಇಲ್ಲಿ ಲಭ್ಯವಿದೆ : https://www.niti.gov.in/sites/default/files/2024-12/Trade-Watch.pdf
 

*****

 


(Release ID: 2080957) Visitor Counter : 32