ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಮೇಶ್ ಸಿಪ್ಪಿಯವರ ಸಿನಿ ಪಯಣ ಅನಾವರಣ


ಕೃತಕ ಬುದ್ಧಿಮತ್ತೆಯು ಸೃಜನಶೀಲತೆಯನ್ನು ಹೆಚ್ಚಿಸಬೇಕು, ಮಾನವ ಬುದ್ಧಿಮತ್ತೆಯನ್ನು ಬದಲಾಯಿಸಬಾರದು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮ್ಮ ಬುದ್ಧಿಶಕ್ತಿಯನ್ನು ಬಳಸುವುದು ಬಹಳ ಮುಖ್ಯ: ರಮೇಶ್ ಸಿಪ್ಪಿ

ಪ್ರತಿಯೊಂದು ಅನುಭವವು ಅಮೂಲ್ಯವಾದ ಪಾಠಗಳನ್ನು ಕಲಿಸುತ್ತದೆ. ನಾವು ನಮ್ಮ ವೈಫಲ್ಯಗಳಿಂದ ಪ್ರಬುದ್ದತೆಯನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯವನ್ನು ಕಾಣುತ್ತೇವೆ: ರಮೇಶ್ ಸಿಪ್ಪಿ

55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) "ಪ್ಯಾಷನ್ ಫಾರ್ ಪರ್ಫೆಕ್ಷನ್: ರಮೇಶ್ ಸಿಪ್ಪಿಸ್ ಫಿಲಾಸಫಿ" ಎಂಬ ಆಕರ್ಷಕ ಅಧಿವೇಶನವು ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಿರ್ದೇಶಕರೊಬ್ಬರ ಜೀವನ ಮತ್ತು ಕಲಾತ್ಮಕತೆಯ ಬಗ್ಗೆ ಸಮೃದ್ಧ ಸೃಜನಶೀಲತೆಯ ಅನಾವರಣಕ್ಕೆ ಕಾರಣವಾಯಿತು. ರಮೇಶ್ ಸಿಪ್ಪಿಯವರ ವೃತ್ತಿಜೀವನವನ್ನು ಎತ್ತಿ ತೋರಿಸುವ ಈ ಅಧಿವೇಶನವನ್ನು ಮಾಧ್ಯಮ ಮತ್ತು ಮನರಂಜನಾ ಕೌಶಲ್ಯ ಮಂಡಳಿಯ ಸಿಇಒ ಮೋಹಿತ್ ಸೋನಿ ನಿರ್ವಹಿಸಿದರು.

ರಮೇಶ್ ಸಿಪ್ಪಿಯವರ ಚಲನಚಿತ್ರ ನಿರ್ಮಾಣ ಪ್ರಯಾಣದ ಆರಂಭಿಕ ವರ್ಷಗಳ ಒಂದು ನೋಟ:

ಮೋಹಿತ್ ಸೋನಿಯವರ ಪರಿಚಯದೊಂದಿಗೆ ಅಧಿವೇಶನ ಪ್ರಾರಂಭವಾಯಿತು. ಅವರು ರಮೇಶ್ ಸಿಪ್ಪಿಯವರ ಅಪಾರ ಅನುಭವದಿಂದ ಕಲಿತು, ಪರಿಪೂರ್ಣತೆಯ ವ್ಯಾಖ್ಯಾನವನ್ನು ಪಡೆಯಲು ದೊರೆತ ಅನನ್ಯ ಅವಕಾಶವನ್ನು ವಿವರಿಸಿದರು. 'ಶಹೆನ್ ಷಾ' ಚಿತ್ರದಲ್ಲಿ ಸಿಪ್ಪಿಯವರ ಸಂಕ್ಷಿಪ್ತ, ಆದರೆ ಸ್ಮರಣೀಯ ಚೊಚ್ಚಲ ಚಿತ್ರದಿಂದ ಪ್ರಾರಂಭಿಸಿ, ಉದ್ಯಮದಲ್ಲಿ ಸಿಪ್ಪಿಯವರ ಆರಂಭಿಕ ದಿನಗಳ ಮೆಲುಕುನೋಟದೊಂದಿಗೆ ಸಂಭಾಷಣೆ ಪ್ರಾರಂಭವಾಯಿತು. ಕೇವಲ ಒಂಬತ್ತು ವರ್ಷದವರಾಗಿದ್ದಾಗ, ಅವರು ಚಲನಚಿತ್ರಗಳ ಸೆಟ್ ಗೆ ಮೊದಲ ಬಾರಿಗೆ ಪರಿಚಯವಾದರು ಎಂದು ಸಿಪ್ಪಿಯವರು ತಮ್ಮ ಅನುಭವವನ್ನು ಹಂಚಿಕೊಂಡರು. ಇದು ಚಲನಚಿತ್ರ ನಿರ್ಮಾಣದಲ್ಲಿ ಅವರ ಜೀವನದ ಪ್ರಯಾಣದ ಆರಂಭಿಕ ದಿನಗಳಾಗಿದ್ದವು, ಔಪಚಾರಿಕ ಚಲನಚಿತ್ರ ಶಾಲೆಗಳ ಆಗಮನಕ್ಕೆ ಬಹಳ ಹಿಂದೆಯೇ ಅವರ ಕಲಿಕೆಯು ನೇರವಾಗಿ ಚಲನಚಿತ್ರ ಸೆಟ್ ಗಳಲ್ಲಿ ಪ್ರಾರಂಭವಾಯಿತು.

ನಿರಂತರ ಕಲಿಕೆಯ ಪ್ರಯಾಣ: 'ಅಂದಾಜ್' ನಿಂದ 'ಶೋಲೆ' ವರೆಗೆ:

'ಅಂದಾಜ್' ನಂತಹ ಅಪ್ರತಿಮ ಚಿತ್ರಗಳಿಂದ 'ಸೀತಾ ಔರ್ ಗೀತಾ' ವರೆಗಿನ ತಮ್ಮ ಪ್ರಯಾಣವನ್ನು ನೆನೆಸಿಕೊಂಡ ಸಿಪ್ಪಿಯವರು, ಚಲನಚಿತ್ರ ನಿರ್ಮಾಣ ಜಗತ್ತಿನಲ್ಲಿ ನಿರಂತರ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದರು. "ಕಲಿಕೆಗೆ ಅಂತ್ಯವಿಲ್ಲ" ಎಂದು ಅವರು ಹೇಳಿದರು. "ನಾವು ಯಾವಾಗಲೂ ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇವೆ, ಪಾತ್ರವರ್ಗದಿಂದ ಸಿಬ್ಬಂದಿಯವರೆಗೆ, ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಭಾಗಿಯಾಗುತ್ತೇವೆ." 'ಶೋಲೆ' ಚಿತ್ರದ ಮೇಕಿಂಗ್ ಅನ್ನು ನೆನಪಿಸಿಕೊಂಡ ಅವರು, ಪ್ರಮುಖ ದೃಶ್ಯವನ್ನು ಚಿತ್ರೀಕರಿಸಿದ ಬಗ್ಗೆ ತಮ್ಮ ಕಥೆಯನ್ನು ಹಂಚಿಕೊಂಡರು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಆರಂಭಿಕ ಹಿನ್ನಡೆಗಳ ಹೊರತಾಗಿಯೂ, ಕತ್ತಲು ಕವಿದ ಆಕಾಶದಲ್ಲಿ ಚಿತ್ರೀಕರಿಸಿದ ಅಂತಿಮ ಫಲಿತಾಂಶವು ದೃಶ್ಯಕ್ಕೆ ಪರಿಪೂರ್ಣತೆಯನ್ನು ಹೇಗೆ ನೀಡಿತು ಎಂಬುದನ್ನು ಸಿಪ್ಪಿಯವರು ಎತ್ತಿ ತೋರಿಸಿದರು. "ಶೋಲೆಗಾಗಿ ಒಂದು ದೃಶ್ಯವನ್ನು ಚಿತ್ರೀಕರಿಸಲು 23 ದಿನಗಳು ಬೇಕಾಯಿತು" ಎಂದು ಅವರು ಹೇಳಿದರು, ಪ್ರತಿ ಫ್ರೇಮ್ ನಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ಬದ್ಧತೆಯನ್ನು ಒತ್ತಿಹೇಳಿದರು.

ಆಧುನಿಕ ಸಿನೆಮಾದಲ್ಲಿ ತಂತ್ರಜ್ಞಾನದ ಪಾತ್ರ

ಸಿಪ್ಪಿಯವರು ತಾಂತ್ರಿಕ ಪ್ರಗತಿಗಳು ಚಲನಚಿತ್ರ ನಿರ್ಮಾಣದ ಭೂದೃಶ್ಯವನ್ನು ಹೇಗೆ ಪರಿವರ್ತಿಸಿವೆ ಎಂಬುದರ ಬಗ್ಗೆಯೂ ಮಾತನಾಡಿದರು. ವಿಶೇಷ ಪರಿಣಾಮಗಳ ವಿಕಸನ ಮತ್ತು ಕೃತಕ ಬುದ್ಧಿಮತ್ತೆಯು ಚಲನಚಿತ್ರ ನಿರ್ಮಾಣದಲ್ಲಿ ಅದರ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದರ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಆದಾಗ್ಯೂ ತಂತ್ರಜ್ಞಾನವನ್ನು ಸೃಜನಶೀಲತೆಗಾಗಿ ಬಳಸಬೇಕು, ಸೃಜನಶೀಲತೆಯ ಬದಲಾವಣೆಗೆ ಅಲ್ಲ ಎಂದು ಅವರು ಎಚ್ಚರಿಸಿದ್ದಾರೆ. "ಎಐ ಎಂದಿಗೂ ಮಾನವ ಬುದ್ದಿಮತ್ತೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಇದು ಸೃಜನಶೀಲತೆಗೆ ಮಾತ್ರ ಪೂರಕವಾಗಿರುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾನವ ಬುದ್ದಿಮತ್ತೆಯನ್ನು ಉಪಯೋಗಿಸುವುದು ಅತ್ಯಗತ್ಯ" ಎಂದು ಸಿಪ್ಪಿಯವರು ವಿವರಿಸಿದರು.

ಕಥೆ ಹೇಳುವ ಮತ್ತು ಸ್ಫೂರ್ತಿಯನ್ನು ಹುಡುಕುವ ಕಲೆ

ದೊಡ್ಡ ಪರದೆಯ ಮೇಲೆ ತಮ್ಮ ಕಥೆಗಳಿಗೆ ಹೇಗೆ ಜೀವ ತುಂಬುತ್ತಾರೆ ಎಂದು ಅವರನ್ನು ಕೇಳಿದಾಗ, ಸಿಪ್ಪಿಯವರು ತಮ್ಮ ಚಿತ್ರಗಳ ಯಶಸ್ಸಿಗೆ ತಂಡದ ಕೆಲಸ ಮತ್ತು ಸಹಯೋಗ ಕಾರಣ ಎಂದು ಹೇಳಿದರು. "ತಂಡದ ಸಾಮೂಹಿಕ ಪ್ರಯತ್ನವು ಪರಿಪೂರ್ಣತೆಯನ್ನು ತಲುಪಲು ನಮಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

ತಪ್ಪುಗಳ ಸ್ವೀಕರಣೆ ಮತ್ತು ನಿರಂತರ ಸುಧಾರಣೆ

ಅಧಿವೇಶನವು ಕೊನೆಗೊಳ್ಳುತ್ತಿದ್ದಂತೆ, ರಮೇಶ್ ಸಿಪ್ಪಿಯವರು ಚಲನಚಿತ್ರ ನಿರ್ಮಾಣದಲ್ಲಿ ಬೆಳವಣಿಗೆಯ ಪ್ರಾಮುಖ್ಯತೆಯ ಬಗ್ಗೆ ತಮ್ಮ ಅಂತಿಮ ಆಲೋಚನೆಗಳನ್ನು ಹಂಚಿಕೊಂಡರು. "ತಪ್ಪುಗಳನ್ನು ಮಾಡುವುದು ಆರೋಗ್ಯಕರ" ಎಂದು ಹೇಳಿದ ಅವರು, "ಪ್ರತಿಯೊಂದು ಅನುಭವವು ನಮಗೆ ಅಮೂಲ್ಯವಾದದ್ದನ್ನು ಕಲಿಸುತ್ತದೆ. ನಾವು ನಮ್ಮ ವೈಫಲ್ಯಗಳಿಂದ ಕಲಿಯುತ್ತೇವೆ ಮತ್ತು ಭವಿಷ್ಯಕ್ಕಾಗಿ ಸುಧಾರಿಸುತ್ತೇವೆ" ಎಂದರು.

ಸಿಪ್ಪಿಯವರ ಕಲಿಕಾ ಮೌಲ್ಯದ ಪುನರುಚ್ಚರಣೆ, ಬದಲಾವಣೆಯ ಸ್ವೀಕರಣೆ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಸಿನೆಮಾ ಜಗತ್ತಿನಲ್ಲಿ ಪರಿಪೂರ್ಣತೆಗಾಗಿ ನಿರಂತರವಾಗಿ ಪ್ರಯತ್ನಿಸುವ ಸ್ಪೂರ್ತಿದಾಯಕ ಟಿಪ್ಪಣಿಯೊಂದಿಗೆ ಅಧಿವೇಶನವು ಕೊನೆಗೊಂಡಿತು.

 

*****

iffi reel

(Release ID: 2078871) Visitor Counter : 25