ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

55ನೇ ಐ ಎಫ್ ಎಫ್ ಐ ನಲ್ಲಿ ಪ್ರಸ್ತುತಪಡಿಸಲಾದ 'ಬಸ್ಸಿಮಾಸ್ ವೊಂಬ್ʼ ಮತ್ತು 'ಲೂನಿಸ್': ಮಾನವ ಹೋರಾಟದ ಆಳವಾದ ನೋಟ


'ಬಸ್ಸಿಮಾಸ್ ವೊಂಬ್ʼ ಚಿತ್ರವು ಭರವಸೆ ಮತ್ತು ಆಕಾಂಕ್ಷೆಗಳೊಂದಿಗೆ ಯುವತಿಯ ಭಾವಪೂರ್ಣ ಕಥೆಯನ್ನು ಚಿತ್ರಿಸುತ್ತದೆ: ಮ್ಯಾಕ್ಸಿನ್ ಡೆನ್ನಿಸ್, ನಟಿ

ಕಲಾತ್ಮಕ ಚಲನಚಿತ್ರಗಳನ್ನು ಉತ್ತೇಜಿಸಲು ನಮಗೆ ಹೆಚ್ಚಿನ ಭಾರತೀಯ-ಕೆನಡಿಯನ್ ಸಹಯೋಗದ ಅಗತ್ಯವಿದೆ: ಬಾಬೆಕ್ ಅಲಿಯಾಸ್ಸಾ, ನಿರ್ದೇಶಕ

'ಲೂನಿಸ್' ಪ್ರೇಮದ ಬಗ್ಗೆ, ಜೀವನದಲ್ಲಿ ಪ್ರಬಲ ಶಕ್ತಿಯಾಗಿದೆ: ಲೆಚ್ ಮ್ಯಾಕ್ವಿವಿಕ್ಜ್, ನಟ 

ಭಾರತೀಯ ಚಿತ್ರರಂಗ ರೋಮಾಂಚಕ ಶೈಲಿಯಿಂದ ಪ್ರೇರಿತ: ಲೆಚ್ ಮ್ಯಾಕ್ವಿವಿಕ್ಜ್, ನಟ

55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) 'ಸಿನೆಮಾ ಆಫ್ ದಿ ವರ್ಲ್ಡ್' ವಿಭಾಗದಲ್ಲಿ ಎರಡು ಅದ್ಭುತ ಚಲನಚಿತ್ರಗಳು ಪ್ರದರ್ಶನಗೊಂಡಿವೆ: ಕೆನಡಾದ ಚಿತ್ರ 'ಬಸ್ಸಿಮಾಸ್ ವೊಂಬ್ʼ ಮತ್ತು ಪೋಲಿಷ್ ಚಿತ್ರ 'ಲೂನಿಸ್'. ಪ್ರತಿಭಾನ್ವಿತ ನಿರ್ದೇಶಕರು ಮತ್ತು ನಿರ್ಮಾಪಕರಿಂದ ರೂಪುಗೊಂಡ ಈ ಚಿತ್ರಗಳು ಸಾಮಾಜಿಕ ಒತ್ತಡಗಳು, ಸ್ವಾಭಿಮಾನದ ಅನ್ವೇಷಣೆ, ಪ್ರಾಯಶ್ಚಿತ್ತ, ಭರವಸೆ ಮತ್ತು ಉತ್ತಮ ಜೀವನದ ಹುಡುಕಾಟ ಮುಂತಾದ ಆಳವಾದ ವಿಷಯಗಳನ್ನು ಆಧರಿಸಿವೆ. 

ಮಾಧ್ಯಮ ಸಂವಾದದ ವೇಳೆ, 'ಬಸ್ಸಿಮಾಸ್ ವೊಂಬ್ʼ ಚಿತ್ರದ ನಿರ್ದೇಶಕ ಮತ್ತು ನಟ ಬಾಬೆಕ್ ಅಲಿಯಾಸ್ಸಾ, ಈ ಚಿತ್ರವು ಭಾರತೀಯ ಬಾಡಿಗೆ ತಾಯ್ತನದ ಕಥೆಗಳಿಂದ ಸ್ಫೂರ್ತಿ ಪಡೆದಿದೆ ಎಂದು ಬಹಿರಂಗಪಡಿಸಿದರು. ಚಿತ್ರದಲ್ಲಿ ಸಂಗೀತವಿಲ್ಲದಿರುವ ಬಗ್ಗೆ ಕೇಳಿದಾಗ, ಪ್ರೇಕ್ಷಕರ ಭಾವನೆಗಳನ್ನು ನಿಯಂತ್ರಿಸದಿರಲು ಇದು ಉದ್ದೇಶಪೂರ್ವಕ ನಿರ್ಧಾರವಾಗಿತ್ತು ಎಂದು ವಿವರಿಸಿದರು.

ಭಾರತೀಯ ಮತ್ತು ಕೆನಡಾದ ಸಿನಿಮಾಗಳನ್ನು ಹೋಲಿಸಿದ ಅವರು, ಕೆನಡಾವು ಭಾರತಕ್ಕಿಂತ ಕಡಿಮೆ ಚಲನಚಿತ್ರಗಳನ್ನು ನಿರ್ಮಿಸುತ್ತದೆ ಎಂದು ಹೇಳಿದರು. ಕಲಾತ್ಮಕ ಚಲನಚಿತ್ರಗಳನ್ನು ಉತ್ತೇಜಿಸಲು ಹೆಚ್ಚಿನ ಇಂಡೋ-ಕೆನಡಿಯನ್ ಸಹಯೋಗದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ನಟಿ ಮ್ಯಾಕ್ಸಿನ್ ಡೆನಿಸ್ ಅವರು ಈ ಚಿತ್ರದ ಕಥೆಯು ಬಹು ಭಾವತೀವ್ರತೆಯಿಂದ ಕೂಡಿದ್ದು, ತಮ್ಮ 'ಬಸ್ಸಿಮಾ' ಪಾತ್ರವು ಹಸಿರು ಕನಸುಗಳು ಮತ್ತು ಅದಮ್ಯ ಆಕಾಂಕ್ಷೆಗಳ ಸುಂದರ ಮಿಶ್ರಣವಾಗಿ ಮೂಡಿಬಂದಿರುವ ಯುವತಿಯ ಪ್ರತಿರೂಪವಾಗಿದೆ ಎಂದು ವಿವರಿಸಿದರು. ಚಿತ್ರದಲ್ಲಿ ಸಂಗೀತವನ್ನು ಬಳಸದಿರುವುದು ಕೇವಲ ಸರಳ ಮಾರ್ಗವನ್ನು ಆಯ್ದುಕೊಳ್ಳದೆ, ಕಲಾತ್ಮಕ ಮಟ್ಟದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸುವ ಉದ್ದೇಶಪೂರ್ವಕ ನಿರ್ಧಾರವಾಗಿತ್ತು ಎಂದು ಅವರು ಹೇಳಿದರು.

ಈ ಪಾತ್ರಕ್ಕೆ ಪೂರ್ಣ ನ್ಯಾಯ ಒದಗಿಸಲು ಅವರು ಅನೇಕ ಬಾಡಿಗೆ ಗರ್ಭಧಾರಣೆಯ ಸಾಕ್ಷ್ಯಚಿತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಲ್ಲದೆ, ಸಿರಿಯನ್ ಉಚ್ಚಾರಣೆಯಲ್ಲಿ ಫ್ರೆಂಚ್ ಮತ್ತು ಅರೇಬಿಕ್ ಭಾಷೆಗಳನ್ನು ಕಲಿಯಬೇಕಾಯಿತು ಎಂದು ಹೇಳಿದ ಅವರು, ಈ ಪ್ರಯಾಣ ಸವಾಲಿನಿಂದ ಕೂಡಿದ್ದರೂ ಅತ್ಯಂತ ರೋಚಕ ಮತ್ತು ಆನಂದದಾಯಕ ಅನುಭವವಾಗಿತ್ತು ಎಂದು ಹೇಳಿದರು.

'ಬಸ್ಸಿಮಾಸ್ ವೊಂಬ್ʼ ಚಿತ್ರದಲ್ಲಿ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ನಿಕೋಲ್-ಸಿಲ್ವಿ ಲಗಾರ್ಡ್ ಅವರು, ತಮ್ಮ ಪಾತ್ರವು ಗಾಯಗಳನ್ನು ಹೊತ್ತು ಗುಣಮುಖವಾಗಲು ಹಾತೊರೆಯುವ ಒಂದು ವೈಯಕ್ತಿಕ ಪಯಣವನ್ನು ಒಳಗೊಂಡಿದೆ ಎಂದು ವಿವರಿಸಿದರು. ಜೊತೆಗೆ ಕೆನಡಾದಲ್ಲಿ ಚಿತ್ರೀಕರಣದ ವೇಳೆ ಎದುರಿಸಬೇಕಾದ ಪ್ರತಿಕೂಲ ಹವಾಮಾನದ ಸವಾಲುಗಳನ್ನೂ ಸ್ಮರಿಸಿಕೊಂಡರು.

'ಲೂನೀಸ್' ಚಿತ್ರದ ನಟಿ ಅಲಿಕ್ಜಾ ಸ್ಟಾಸಿವಿಕ್ಜ್ ಅವರು, ತಮ್ಮ ಪಾತ್ರಕ್ಕಾಗಿ ತೂಕದಲ್ಲಿ ಬದಲಾವಣೆ ಸೇರಿದಂತೆ ಗಮನಾರ್ಹ ದೈಹಿಕ ಪರಿವರ್ತನೆಯ ಅಗತ್ಯವಿತ್ತು ಎಂದು ಹೇಳಿದರು, ಇದರಿಂದಾಗಿ ಈ ಪಾತ್ರವು ಅತ್ಯಂತ ಸವಾಲಿನದಾಗಿತ್ತು. ಹನ್ನೊಂದು ವರ್ಷಗಳ ರಂಗಭೂಮಿಯ ಅನುಭವವು ಈ ಪಾತ್ರಕ್ಕೆ ಭಾವನಾತ್ಮಕವಾಗಿ ಸಿದ್ಧತೆ ನಡೆಸಲು ಬಹಳಷ್ಟು ನೆರವಾಯಿತು ಎಂದು ಕೃತಜ್ಞತೆಯಿಂದ ನೆನೆದರು.

ನಟ ಲೆಚ್ ಮ್ಯಾಕಿವಿಕ್ಜ್ ಅವರು ಚಿತ್ರದಲ್ಲಿನ ಪ್ರೇಮದ ಕೇಂದ್ರ ಭಾವವನ್ನು ಕುರಿತು ಮಾತನಾಡುತ್ತಾ, ಅದು ಜೀವನದಲ್ಲಿ ಒಂದು ಅಜೇಯ ಶಕ್ತಿಯಾಗಿ ಮೂಡಿಬರುತ್ತದೆ ಎಂದು ಅಭಿಪ್ರಾಯಪಟ್ಟರು. ಚಿತ್ರದ ಸಂಗೀತವು ಪಾತ್ರಗಳ ಭಾವಸಂಚಲನೆಗಳೊಂದಿಗೆ ಸಾಮರಸ್ಯದಿಂದ ಬೆರೆತುಹೋಗುತ್ತದೆ ಎಂಬುದನ್ನು ಪ್ರಸ್ತಾಪಿಸಿದರು.ಭಾರತೀಯ ಚಲನಚಿತ್ರಗಳ ವೈಭವೋಪೇತ ಮತ್ತು ಮಹಾಕಾವ್ಯದಂತಹ ಶೈಲಿಯನ್ನು ಪೋಲಿಷ್ ಸಿನಿಮಾದ ಸೌಮ್ಯ ಅಭಿವ್ಯಕ್ತಿಯೊಂದಿಗೆ ಹೋಲಿಸಿದ ಅವರು, ಭಾರತದ ಚಲನಚಿತ್ರ ಶೈಲಿಯಲ್ಲಿ ಚಿತ್ರಗಳನ್ನು ನಿರ್ಮಿಸಬೇಕೆಂಬ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು.

ಚಿತ್ರಗಳ ಕುರಿತು:

'ಬಸ್ಸಿಮಾಸ್ ವೊಂಬ್ʼ: ಇದು ಸಿರಿಯಾದ ಯುವತಿಯೊಬ್ಬಳ ಸುತ್ತ ಸುತ್ತುತ್ತದೆ. ಆಕೆಯ ಪತಿ ಸರಿಯಾದ ದಾಖಲೆಗಳಿಲ್ಲದ ಕಾರಣ ಕೆನಡಾದಿಂದ ಗಡೀಪಾರುಗೊಳ್ಳುತ್ತಾನೆ.  ಪತಿಯನ್ನು ಮರುಕೂಡಿಸಿಕೊಳ್ಳುವ ತವಕದಲ್ಲಿ, ನಕಲಿ ಪಾಸ್ಪೋರ್ಟ್ ಪಡೆಯಲು ಬಾಡಿಗೆ ಗರ್ಭಿಣಿಯಾಗಲು ಒಪ್ಪಿಕೊಳ್ಳುತ್ತಾಳೆ. ಆದರೆ ತಾನು ಈಗಾಗಲೇ ಗರ್ಭಿಣಿಯಾಗಿರುವುದು ತಿಳಿದಾಗ ಆಘಾತಕ್ಕೊಳಗಾಗುತ್ತಾಳೆ. ಇದರಿಂದಾಗಿ ತನ್ನದೇ ಮಗುವನ್ನು ತ್ಯಜಿಸಬೇಕಾದ ಹೃದಯವಿದ್ರಾವಕ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಲೂನಿಸ್: ಜೈಲಿನಿಂದ ಬಿಡುಗಡೆಯಾದ ಎರಿಕ್ ಮತ್ತು ಕರೋಲ್ಕಾ ಎಂಬ ಆದರ್ಶವಾದಿಗಳು, ತಮ್ಮ ಕಷ್ಟಕರ ಭೂತಕಾಲದಿಂದ ದೂರ, ಪ್ರಕೃತಿಯ ಮಡಿಲಲ್ಲಿ ಶಾಂತಿಯನ್ನು ಹುಡುಕುತ್ತಾರೆ. ಎರಿಕ್ ತನ್ನ ಮಗಳು ಡ್ಜೆಸಿಕಾಳಿಗೆ ಉತ್ತಮ ಜೀವನ ನೀಡಬೇಕೆಂಬ ಹಂಬಲದಿಂದ ಪ್ರೇರಿತನಾಗಿರುತ್ತಾನೆ. ಹೊಸ ಭವಿಷ್ಯ ಕಟ್ಟಿಕೊಳ್ಳಲು ಪೋಲೆಂಡ್ ದೇಶದಾದ್ಯಂತ ಪಯಣಿಸುತ್ತಾರೆ. ಆದರೆ ಕರೋಲ್ಕಾಳಿಗೆ ಗಂಭೀರ ಅನಾರೋಗ್ಯ ಕಾಣಿಸಿಕೊಂಡು, ಅವಳಿಗೆ ಅಗತ್ಯವಿರುವ ಚಿಕಿತ್ಸೆಯ ವೆಚ್ಚ ಅವರ ಸಾಮರ್ಥ್ಯಕ್ಕೆ ಮೀರಿದ್ದಾಗಿರುವುದರಿಂದ ಅವರ ಯೋಜನೆಗಳಿಗೆ ಅಡ್ಡಿಯುಂಟಾಗುತ್ತದೆ.

ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:

 

*****

iffi reel

(Release ID: 2076851)