ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

ಅಸಂಖ್ಯಾತ ಮಹಿಳೆಯರ ಕನಸುಗಳೊಂದಿಗೆ ' ಮಿಸರ್ಸ್ (Mrs)' ಅನುರಣಿಸುತ್ತದೆ: ನಟಿ ಸಾನ್ಯಾ ಮಲ್ಹೋತ್ರಾ


ವಿವಾಹದ ಸೂಕ್ಷ್ಮತೆಗಳು ಮತ್ತು ಸಂಕೀರ್ಣತೆಗಳ ಮೂಲಕ ಪಯಣಿಸುವ ಮಹಿಳೆಯರನ್ನು ಅರ್ಥಮಾಡಿಕೊಳ್ಳುವುದು ಮತ್ತು ಭಾವನೆಗಳನ್ನು ಹಂಚಿಕೊಳ್ಳುವುದು ಪ್ರತಿಯೊಬ್ಬರಿಗೂ ಮುಖ್ಯ: ನಿರ್ದೇಶಕಿ ಆರತಿ ಕಡವ್

ಚಲನಚಿತ್ರ ನಿರ್ಮಾಣವು ಮಹಿಳಾ ಕೇಂದ್ರಿತ ಅಥವಾ ಪುರುಷ ಕೇಂದ್ರಿತಕ್ಕಿಂತ ಮಿಗಿಲಾಗಿದೆ. ಈ ಅಡೆತಡೆಗಳನ್ನು ತೊಡೆದು ಹಾಕುವುದು ನಮ್ಮ ಸಾಮೂಹಿಕ ಜವಾಬ್ದಾರಿ: ನಿರ್ಮಾಪಕ ಹರ್ಮನ್ ಬವೇಜಾ

ಗೋವಾದಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ನಲ್ಲಿ 'ಮಿಸರ್ಸ್ʼ ಚಿತ್ರದ  ಗಾಲಾ ಪ್ರೀಮಿಯರ್ (ಪ್ರಥಮ) ಪ್ರದರ್ಶನದ ಬದಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕಿ ಆರತಿ ಕಡವ್ ಅವರು ʼಮಹಿಳೆಯರು ವಿವಾಹಾನಂತರ ಉದ್ಭವಿಸುವ ಅನೇಕ ಸೂಕ್ಷ್ಮತೆಗಳು ಮತ್ತು ಸಂಕೀರ್ಣತೆಗಳೊಂದಿಗೆ ಪಯಣಿಬೇಕಿದ್ದು, ಮಹಿಳೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಆಕೆಯ ಭಾವನೆಗಳಿಗೆ ಸ್ಪಂದಿಸುವುದು ಬಹಳ ಮುಖ್ಯʼ ಎಂದು ಹೇಳಿದ್ದಾರೆ. 

ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಕಡವ್ ಅವರು, ʼಮಿಸರ್ಸ್‌ʼ ಚಿತ್ರವು "ಸಾಮಾನ್ಯ ಜನರಿಗಾಗಿನ" ಕಥೆಯಾಗಿದ್ದು, ವಿಶಾಲವ್ಯಾಪ್ತಿಯ ಪ್ರೇಕ್ಷಕರೊಂದಿಗೆ ಅನುರಣಿಸಲು ರೂಪಿಸಲಾಗಿದೆ ಎಂದು ವಿವರಿಸುತ್ತಾ ಚಿತ್ರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. “ಪ್ರತಿಯೊಬ್ಬ ಮಹಿಳೆಯೂ ಈ ಚಿತ್ರದ ಕೇಂದ್ರ ಬಿಂದು” ಎಂದು ಅವರು ಹೇಳಿದ್ದಾರೆ.

ಕುಟುಂಬದೊಳಗೆ ಮತ್ತು ಸಮಾಜದಲ್ಲಿ ಮಹಿಳೆಯರ ಪಾತ್ರಗಳ ಸುತ್ತಲಿನ ಮೌನವನ್ನು ಮುರಿಯುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದ ಅವರು, ಮಿಸರ್ಸ್‌ ಚಿತ್ರದಲ್ಲಿ ಈ ಸಮಸ್ಯೆಗಳನ್ನು ಎಲ್ಲರಿಗೂ ತಿಳಿಸಲು ಮತ್ತು ಎಲ್ಲರನ್ನೂ ಸೆಳೆಯಲು ಹೇಗೆ ಮುನ್ನೆಲೆಗೆ ತರಲಾಗಿದೆ ಎಂಬ ಬಗ್ಗೆ ವಿವರಿಸಿದರು. 


ನಾಯಕಿ ರಿಚಾ ಪಾತ್ರದಲ್ಲಿ ನಟಿಸಿರುವ ಸಾನ್ಯಾ ಮಲ್ಹೋತ್ರಾ, ಈ ಪಾತ್ರದೊಂದಿಗಿನ ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡಿದ್ದಾರೆ, ಇದು ತುಂಬಾ ವೈಯಕ್ತಿಕ ಎಂದು ವಿವರಿಸುತ್ತಾ, ರಿಚಾ ಅವರಂತಹ ಮಹಿಳೆಯರು ನಮ್ಮ ಸುತ್ತಲೂ ಇದ್ದಾರೆ ಎಂದು ಸಾನ್ಯಾ ಹೇಳಿದ್ದಾರೆ. "ಇದೇ ರೀತಿಯ ಅನುಭವಗಳಿರುವ ಅನೇಕ ಮಹಿಳೆಯರನ್ನು ನಾನು ಭೇಟಿ ಮಾಡಿದ್ದೇನೆ. ನಾನು ಅನೇಕ ಮಹಿಳೆಯರೊಂದಿಗೆ ಮಾತನಾಡಿದ ನಂತರ, ಅವರ ಕಥೆಗಳನ್ನು ಆಲಿಸಿ ಅವರ ಹೋರಾಟಗಳನ್ನು ಅರ್ಥಮಾಡಿಕೊಂಡು ಈ ಪಾತ್ರದಲ್ಲಿ ಅಗಾಧವಾಗಿ ಮುಳುಗಿದ್ದೇನೆ" ಎಂದು ಅವರು ಭಾವುಕರಾದರು. ಚಿತ್ರವು ಅಸಂಖ್ಯಾತ ಮಹಿಳೆಯರ ಒಲವು ಮತ್ತು ಕನಸುಗಳೊಂದಿಗೆ ಪ್ರತಿಧ್ವನಿಸುತ್ತದೆ, ಹೀಗಾಗಿ ಹೃದಯಕ್ಕೆ ಹತ್ತಿರವಾಗಿದೆ ಎಂದು ಅವರು ಹೇಳಿದರು. ಸಾನ್ಯಾ ಅವರು ರಿಚಾ ಪಾತ್ರದಲ್ಲಿನ ತಮ್ಮ ಜವಾಬ್ದಾರಿಯನ್ನು ಒತ್ತಿ ಹೇಳಿದರು, "ನಾನು ಎಂದಿಗೂ ಒಂದು ಪಾತ್ರವನ್ನು ಲಘುವಾಗಿ ಪರಿಗಣಿಸುವುದಿಲ್ಲ. ನಾನು ಪ್ರತಿ ಪಾತ್ರವನ್ನು ಗಂಭೀರವಾಗಿ ಮತ್ತು ಜವಾಬ್ದಾರಿಯಿಂದ ಪರಿಗಣಿಸುತ್ತೇನೆ, ನಾನು ಭಾವನೆಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸುವುದನ್ನು ಖಚಿತಪಡಿಸಿಕೊಳ್ಳುತ್ತೇನೆ” ಎಂದು ಅವರು ತಮ್ಮ ರಿಚಾ ಪಾತ್ರಾಭಿನಯದ ಜವಾಬ್ದಾರಿಯ ಬಗ್ಗೆ ಹೇಳಿದ್ದಾರೆ. 

ಮದುವೆಯ ನಂತರ ಮಹಿಳೆಯರು ತಮ್ಮ ರೂಪಾಂತರ ಪಯಣವನ್ನು ಪ್ರಾರಂಭಿಸಿದಾಗ ಎದುರಿಸುವ ಸವಾಲುಗಳ ಬಗ್ಗೆ ಒತ್ತಿ ಹೇಳುತ್ತಾ ಚಿತ್ರದ ಮುಖ್ಯ ಸಂದೇಶದೊಂದಿಗೆ ನಿರ್ಮಾಪಕ ಹರ್ಮನ್ ಬವೇಜಾ ತಮ್ಮ ಮಾತುಗಳನ್ನಾರಂಭಿಸಿದರು. ಮಿಸರ್ಸ್‌ ಚಿತ್ರವು ಸಾಮಾಜಿಕ ನಿರೀಕ್ಷೆಗಳನ್ನು ಮೀರಿ ತನ್ನ ಗುರುತನ್ನು ಮರು ವ್ಯಾಖ್ಯಾನಿಸಲು ಬಯಸುವ ರಿಚಾ ಎಂಬ ಮಹಿಳೆಯ ಕಥೆ ಎಂದು ವಿವರಿಸಿದರು. ವಿವಾಹವಾದ ಬಳಿಕ ಮಹಿಳೆಯರದ್ದು ವಿಭಿನ್ನ ಪಯಣ ಮಾರ್ಗ ಮತ್ತು ಮಿಸರ್ಸ್‌ ಚಿತ್ರವು ರಿಚಾ ಅವರ ಸ್ವಯಂ-ಶೋಧನೆಯ ಹಾದಿಯಾಗಿದೆ ಎಂದು ಬವೇಜಾ ಹೇಳಿದರು. ನಾವು 'ಮಹಿಳಾ-ಕೇಂದ್ರಿತ' ಅಥವಾ 'ಪುರುಷ-ಕೇಂದ್ರಿತ'ದಂತಹ ಹಣೆಪಟ್ಟಿಗಳನ್ನು ಮೀರಿ ಮುನ್ನಡೆಯಬೇಕು. ಕಲೆಗೆ ಯಾವುದೇ ಲಿಂಗಭೇದವಿಲ್ಲ. ಅಂತಿಮವಾಗಿ, ಈ ಅಡೆತಡೆಗಳನ್ನು ತೊಡೆದು ಹಾಕುವುದು ಸಮಾಜವಾಗಿ ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. 

ಸಬಲೀಕರಣ, ಸ್ವಯಂ-ಗುರುತು ರೂಪಿಸಿಕೊಳ್ಳುವಿಕೆ ಮತ್ತು ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲೊಡ್ಡುವ ಪ್ರಬಲ ಮತ್ತು ಸಮಯೋಚಿತ ಸಂದೇಶವನ್ನು ಮಿಸರ್ಸ್‌ ಚಿತ್ರ ಪ್ರಸ್ತುತಪಡಿಸುತ್ತದೆ. ಆಳವಾದ ಕಥಾಹಂದರ ಮತ್ತು ಅನನ್ಯ ಅಭಿನಯ, ಅರ್ಥಪೂರ್ಣ ಸಂಭಾಷಣೆಗಳೊಂದಿಗೆ ಸಾಂಪ್ರದಾಯಿಕ ಲಿಂಗ ಪ್ರಾಮುಖ್ಯತೆಯ ಬಗೆ ಪುನರ್ವಿಮರ್ಶಿಸಲು ಈ ಚಿತ್ರವು ಪ್ರೇಕ್ಷಕರನ್ನು ಪ್ರೇರೇಪಿಸುತ್ತದೆ.

ಚಿತ್ರದ ಬಗ್ಗೆ: ಮಿಸರ್ಸ್
ಬಣ್ಣ | 111’ | ಹಿಂದಿ | 2024

ನೃತ್ಯದ ಬಗ್ಗೆ ಅಪಾರ ಒಲವಿರುವ ನರ್ತಕಿ ರಿಚಾ, ನಾಚಿಕೆ ಸ್ವಭಾವದ ಕಷ್ಟಪಟ್ಟು ದುಡಿಯುವ ವೈದ್ಯರನ್ನು ಮದುವೆಯಾಗುತ್ತಾಳೆ, ಆದರೆ ಕೊನೆಯಾಗದ ಮನೆಕೆಲಸಗಳು ಮತ್ತು ಮೆಚ್ಚುಗೆ ಸಿಗದ ಪ್ರಯತ್ನಗಳಿಂದ ರೋಸಿಹೋಗಿ ಆಕೆಗೆ ಉಸಿರುಗಟ್ಟಿದಂತಾಗುತ್ತದೆ. ಬದ್ಧತೆಯ ಹೊರತಾಗಿಯೂ, ಆಕೆಯ ಗೆಳೆಯರು ಮುನ್ನಡೆಯುವಾಗ ಕೌಟುಂಬಿಕ ನಿರೀಕ್ಷೆಗಳನ್ನು ಪೂರೈಸಲು ಅವಳು ಹೆಣಗಾಡುತ್ತಾಳೆ. ತನ್ನದೇ ಆದ ಗುರುತನ್ನು ರೂಪಿಸಿಕೊಳ್ಳಲು ನಿರ್ಧರಿಸಿದ ರಿಚಾ ತನ್ನ ಪ್ರೀತಿಯನ್ನು ಅಡುಗೆಯಲ್ಲಿ ತೊಡಗಿಸಿಕೊಳ್ಳುತ್ತಾ ಪುರುಷ ಪ್ರಾಬಲ್ಯವನ್ನು ವಿರೋಧಿಸುತ್ತಾಳೆ. "ಮಿಸರ್ಸ್" ಚಿತ್ರವು ರಿಚಾಳ ಸ್ವಯಂ ಅನ್ವೇಷಣೆಯ ಪಯಣವನ್ನು ತೆರೆದಿಟ್ಟಿದೆ. ಸಾಂಪ್ರದಾಯಿಕ ನಿರೀಕ್ಷೆಗಳನ್ನು ಮೀರಿ ತನ್ನನ್ನು ತಾನು ಪುನರ್ ವ್ಯಾಖ್ಯಾನಿಸಿಕೊಂಡು ಅರಳುವ ರಿಚಾಳ ಜೀವನಗಾಥೆಯಾಗಿದೆ.
 
ನಿರ್ದೇಶಕರು: ಆರತಿ ಕಡವ್

ನಿರ್ಮಾಪಕರು: ಜ್ಯೋತಿ ದೇಶಪಾಂಡೆ, ಪಮ್ಮಿ ಬವೇಜಾ, ಹರ್ಮನ್‌ ಬವೇಜಾ

ಚಿತ್ರಕಥೆ: ಅನು ಸಿಂಗ್‌ ಚೌಧರಿ, ಹರ್ಮನ್‌ ಬವೇಜಾ, ಆರತಿ ಕಡವ್

ಛಾಯಾಗ್ರಹಣ: ಪ್ರಥಮ್‌ ಮೆಹ್ತಾ

ಸಂಕಲನ: ಪ್ರೇರಣಾ ಸೈಗಲ್

ಸಂಪೂರ್ಣ ಸುದ್ದಿಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:

 

 

*****

 

iffi reel

(Release ID: 2076535)