ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

'ಘರತ್ ಗಣಪತಿ' ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನವಾಗಿದೆ: ಚಲನಚಿತ್ರ ನಿರ್ಮಾಪಕ ನವಜ್ಯೋತ್ ಬಂಡಿವಾಡೇಕರ್


'ಲೆವೆಲ್ ಕ್ರಾಸ್' ಮಾನವ ಭಾವನೆಗಳ ನಿರೂಪಣೆಯಾಗಿದೆ: ಆಡಮ್ ಅಯೂಬ್

ಮರಾಠಿ ಚಿತ್ರವಾದ 'ಘರತ್ ಗಣಪತಿ' ಸಮಕಾಲೀನ ಭಾರತದಲ್ಲಿ ಕಳೆದುಹೋಗುತ್ತಿರುವ ಭಾರತೀಯ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಚಿತ್ರದ ನಿರ್ದೇಶಕರಾದ ನವಜ್ಯೋತ್ ನರೇಂದ್ರ ಬಂಡಿವಾಡೇಕರ್ ಅಭಿಪ್ರಾಯಪಟ್ಟಿದ್ದಾರೆ. ಇಂದಿನ ಜಗತ್ತಿನಲ್ಲಿ ಅವಿಭಕ್ತ ಕುಟುಂಬದ ಪರಿಕಲ್ಪನೆಯೂ ಕ್ಷೀಣಿಸುತ್ತಿದೆ. 55ನೇ ಐಎಫ್ಎಫ್ಐನಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿರುವ ಚಲನಚಿತ್ರ ನಿರ್ಮಾಪಕರಾದ ನವಜ್ಯೋತ್ ನರೇಂದ್ರ ಬಂಡಿವಾಡೇಕರ್, ತಮ್ಮ ಚಿತ್ರವು ವಿನೋದ ತುಂಬಿದ, ಗೊಂದಲಮಯ ಸಂದರ್ಭಗಳ ಮೂಲಕ ಎಲ್ಲಾ ಕುಟುಂಬ ಸದಸ್ಯರ ನಡುವೆ ವೈಯಕ್ತಿಕ ಸಮಸ್ಯೆಗಳನ್ನು ನಿರೂಪಿಸುತ್ತದೆ ಎಂದು ಹೇಳಿದ್ದಾರೆ. 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಿಐಬಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

'ಘರತ್ ಗಣಪತಿ' ಚಿತ್ರದ ಸಂಗೀತ ನಿರ್ದೇಶಕರಾದ ಸಂಕೇತ್ ಸಾನೆ ಅವರು ಪ್ರೇಕ್ಷಕರನ್ನು ಭಾರತೀಯ ಸಂಸ್ಕೃತಿಯೊಂದಿಗೆ ಬೆಸೆಯುವ ರೀತಿಯಲ್ಲಿ ಚಿತ್ರದ ಸಂಗೀತವನ್ನು ಅಳವಡಿಸಿದ್ದಾರೆ ಎಂದು ಹೇಳಿದರು. ಈ ಚಿತ್ರದ ಸಂಗೀತವು ಪ್ರತಿಯೊಬ್ಬ ಭಾರತೀಯ ಹೃದಯದೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿದೆ.

ಈ ಚಿತ್ರವು ಮಹಾರಾಷ್ಟ್ರದ ಸುಂದರವಾದ ಕೊಂಕಣ ಕರಾವಳಿಯನ್ನು ಆಧರಿಸಿದೆ; ಆದರೆ, ಚಿತ್ರದಲ್ಲಿ ತೋರಿಸಲಾದ ಪೂರ್ವಜರ ಮಹಾರಾಷ್ಟ್ರದ ಮನೆಯು ಕೇರಳದಲ್ಲಿದೆ. ಈ ಸಂದರ್ಭದಲ್ಲಿ, ಬಂಡಿವಾಡೇಕರ್, "ನೈಸರ್ಗಿಕ ಸೌಂದರ್ಯವು ಇಡೀ ಭಾರತದಲ್ಲಿ ಹೇರಳವಾಗಿದೆ, ಅದಕ್ಕಾಗಿ ನಾವು ಭಾರತದ ಹೊರಗೆ ಹೋಗಬೇಕಾಗಿಲ್ಲ" ಎಂದು ಹೇಳಿದ್ದಾರೆ.

ಮರಾಠಿ ಚಲನಚಿತ್ರ 'ಘರತ್ ಗಣಪತಿ'ಯ ಒಂದು ದೃಶ್ಯ

'ಘರತ್ ಗಣಪತಿ' ಚಿತ್ರದ ಕಾರ್ಯನಿರ್ವಾಹಕ ಸಹ ನಿರ್ಮಾಪಕಿಯಾದ ಅಶ್ವಿನಿ ಪರಾಂಜಪೆಯವರು ಕಥೆಯನ್ನು ಕೇಳಿದ ಮೊದಲ ದಿನವೇ ಚಿತ್ರ ತುಂಬಾ ಇಷ್ಟವಾಯಿತು ಎಂದು ಹೇಳಿದರು. 'ಘರತ್ ಗಣಪತಿ' ಸ್ವೀಕಾರ, ವಿಕಸನಗೊಳ್ಳುತ್ತಿರುವ ಸಂಪ್ರದಾಯಗಳು ಮತ್ತು ಭಾರತೀಯ ಕುಟುಂಬದ ಸಂಕೀರ್ಣ ಬಂಧಗಳನ್ನು ತೋರಿಸುತ್ತದೆ. ನಗು ಮತ್ತು ಕಣ್ಣೀರಿನ ನಡುವೆ, ಘರತ್ ಗಣಪತಿ ರೋಮಾಂಚಕ ಗಣಪತಿ ಹಬ್ಬದ ಸಮಯದಲ್ಲಿ ಪ್ರೀತಿ ಮತ್ತು ಸಾಂಸ್ಕೃತಿಕ ಮನೋಭಾವವನ್ನು ಅರಳಿಸುತ್ತದೆ.

ಚಿತ್ರಕಥೆಯಲ್ಲಿ ಬಲವಾದ ಮಹಿಳಾ ಪಾತ್ರಗಳಿವೆ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ. ಈ ಚಿತ್ರವು ಗಣಪತಿ ಹಬ್ಬದ ಸಮಯದಲ್ಲಿ ಮಹಾರಾಷ್ಟ್ರದ ಕುಟುಂಬದೊಂದಿಗೆ ಉಳಿಯಲು ಕೊಂಕಣಕ್ಕೆ ಬರುವ ಉತ್ತರ ಭಾರತದ ಹುಡುಗಿಯನ್ನು ಚಿತ್ರಿಸುತ್ತದೆ. ಚಿತ್ರದ ತಾರಾಗಣದಲ್ಲಿ ನಿಕಿತಾ ದತ್ತಾ, ಭೂಷಣ್ ಪ್ರಧಾನ್, ಅಜಿಂಕ್ಯ ದೇವ್, ಅಶ್ವಿನಿ ಭಾವೆ, ಸಂಜಯ್ ಮೋನೆ, ಶುಭಾಂಗಿ ಲಾಟ್ಕರ್ ಮತ್ತು ಶುಭಾಂಗಿ ಗೋಖಲೆ ಇದ್ದಾರೆ.

ಐಎಫ್ಎಫ್ಐ ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮರಾಠಿ ಚಿತ್ರ 'ಘರತ್ ಗಣಪತಿ' ಮತ್ತು ಮಲಯಾಳಂ ಚಿತ್ರ 'ಲೆವೆಲ್ ಕ್ರಾಸ್' ತಂಡಗಳು.

ಮಲಯಾಳಂ ಚಿತ್ರ 'ಲೆವೆಲ್ ಕ್ರಾಸ್' ನ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಾಯಕ ನಟ ಕೂಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ನಿರ್ದೇಶಕ ಅರ್ಫಾಜ್ ಅಯೂಬ್ ತಮ್ಮ ಚಿತ್ರವನ್ನು "ಅತಿವಾಸ್ತವಿಕ ಚಿತ್ರ" ಎಂದು ವಿವರಿಸಿದ್ದಾರೆ, ಇದರಲ್ಲಿ ಸ್ಥಳವೂ ಒಂದು ಪಾತ್ರವಾಗಿದೆ. ಜೀವನವು ಎಷ್ಟು ಅನಿಶ್ಚಿತವಾಗಿದೆ ಎಂಬುದನ್ನು ಈ ಚಿತ್ರವು ತೋರಿಸುತ್ತದೆ. ಈ ಚಿತ್ರವು ಸಾಮಾಜಿಕ ವರ್ಣಪಟಲದ ಎರಡು ದಿಕ್ಕುಗಳಿಂದ ಇಬ್ಬರು ವ್ಯಕ್ತಿಗಳನ್ನು ಪರಿಚಯಿಸುತ್ತದೆ. ಈ ಇಬ್ಬರೂ ವ್ಯಕ್ತಿಗಳು ಮೇಲ್ನೋಟಕ್ಕೆ ತುಂಬಾ ವಿಭಿನ್ನವಾಗಿ ಕಾಣುತ್ತಾರೆ ಎಂದು ಅರ್ಫಾಜ್ ಅಯೂಬ್ ಹೇಳಿದ್ದಾರೆ. ಆದರೆ ಮಾನವ ಭಾವನೆಗಳು ಆಳದಲ್ಲಿ ಒಂದೇ ಆಗಿವೆ ಎಂದು ಚಿತ್ರವು ಬಹಿರಂಗಪಡಿಸುತ್ತದೆ. ವರ್ತಮಾನವು ಭೂತಕಾಲದ ಅವಶೇಷವಾಗಿದ್ದು, ನಿರೂಪಣೆಯಲ್ಲಿ ಈ ವಿಷಯ ಅಡಗಿದೆ ಎಂದು ಚಿತ್ರವು ಸೂಕ್ಷ್ಮವಾಗಿ ತಿಳಿಸುತ್ತದೆ. ಈ ಕಥೆಯು ಸಂಘರ್ಷದ ದೃಷ್ಟಿಕೋನಗಳು ಮತ್ತು ಸೂಕ್ಷ್ಮ ರೂಪಕಗಳಿಂದ ಮಾನವ ಭಾವನೆಗಳ ಪದರವಾಗಿದೆ ಎಂದು ಅವರು ಹೇಳಿದರು.

'ಲೆವೆಲ್ ಕ್ರಾಸ್' ಚಿತ್ರವನ್ನು ಟ್ಯುನೀಶಿಯಾದ ಸಹಾರಾ ಮರುಭೂಮಿಯಲ್ಲಿ ಚಿತ್ರೀಕರಿಸಲಾಗಿದೆ. ವೀಕ್ಷಕರು ಹೊಸ ಸ್ಥಳವನ್ನು ನೋಡಬೇಕು ಮತ್ತು ಸ್ಕ್ರಿಪ್ಟ್ ಬೇಡಿಕೆಯಂತೆ ಇದು "ಅತಿವಾಸ್ತವಿಕ, ಕಾಲ್ಪನಿಕ ಜಗತ್ತು" ಎಂದು ನಂಬಬೇಕೆಂದು ನಿರ್ದೇಶಕರು ಬಯಸಿದ್ದರಿಂದ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಇದು ಟ್ಯುನೀಷಿಯಾದಲ್ಲಿ ಚಿತ್ರೀಕರಿಸಿದ ಮೊದಲ ಭಾರತೀಯ ಚಲನಚಿತ್ರವಾಗಿದೆ ಎಂದು ಅವರು ಹೇಳಿದರು. "ಸಮಯ ಮತ್ತು ಸ್ಥಳವನ್ನು ಮೀರಿದ ಕಾಲ್ಪನಿಕ ಭೂಮಿಯಲ್ಲಿ ಚಿತ್ರೀಕರಿಸಲಾದ ಈ ಚಿತ್ರವು ಭಾವನೆಗಳು, ಆಲೋಚನೆಗಳು ಮತ್ತು ನಂಬಿಕೆಗಳನ್ನು ಸುಂದರವಾಗಿ ನಿರೂಪಿಸುತ್ತದೆ" ಎಂದು ನಿರ್ದೇಶಕರು ಹೇಳಿದರು.

ತಮ್ಮ ಚಿತ್ರಕ್ಕಾಗಿ ಪರಿಪೂರ್ಣ ಸ್ಥಳವನ್ನು ಹುಡುಕುವ ತಮ್ಮ ಅನುಭವಗಳನ್ನು ಹಂಚಿಕೊಂಡ ಅರ್ಫಾಜ್ ಅಯೂಬ್, ರಸ್ತೆ ಸಂಪರ್ಕವಿಲ್ಲದ ಶೂಟಿಂಗ್ ಸ್ಥಳಕ್ಕೆ ತಮ್ಮ ಸ್ಥಳೀಯ ಟ್ಯುನೀಷಿಯನ್ ಲೈನ್ ನಿರ್ಮಾಪಕರೊಂದಿಗೆ ಮರುಭೂಮಿಯಲ್ಲಿ ಮೈಲುಗಟ್ಟಲೆ ಹೇಗೆ ನಡೆದರು ಎಂಬುದನ್ನು ಇಲ್ಲಿ ಬಹಿರಂಗಪಡಿಸಿದರು.

ಅರ್ಫಾಜ್ ಅಯೂಬ್ ಅವರ ತಂದೆಯಾದ, ಮಲಯಾಳಂ ಟಿವಿ ಪ್ರವರ್ತಕ ಆಡಮ್ ಅಯೂಬ್ 'ಲೆವೆಲ್ ಕ್ರಾಸ್' ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ, ಅವರು ಈ ಚಿತ್ರದ ಸ್ಕ್ರಿಪ್ಟ್ ಅನ್ನು ಅನೇಕ ಬಾರಿ ಮತ್ತೆ ಮತೆ ತಿದ್ದಿ ಬರೆದಿದ್ದಾರೆ ಎಂದು ಬಹಿರಂಗಪಡಿಸಿದರು. ಈ ಚಿತ್ರವು ಮಾನವ ಭಾವನೆಗಳ ನಿರೂಪಣೆ ಇದೆ ಎಂದು ಆಡಮ್ ಅಯೂಬ್ ಹೇಳಿದ್ದಾರೆ. ಕೊನೆಯ ದೃಶ್ಯದಲ್ಲಿ ಕಥೆಯ ಟ್ವಿಸ್ಟ್ ಇರುವುದರಿಂದ ಕೊನೆಯವರೆಗೂ ಚಲನಚಿತ್ರವನ್ನು ವೀಕ್ಷಿಸುವಂತೆ ಅವರು ವೀಕ್ಷಕರಿಗೆ ಸಲಹೆ ನೀಡಿದರು! ಇದು ಅದ್ಭುತ ದೃಶ್ಯಗಳು ಮತ್ತು ಆಕರ್ಷಕ ಧ್ವನಿ ವಿನ್ಯಾಸದೊಂದಿಗೆ ಅನನ್ಯ ಸಿನಿಮೀಯ ಅನುಭವವನ್ನು ನೀಡುತ್ತದೆ.
ಪ್ರಮುಖ ನಟಿ ಅಮಲಾ ಪೌಲ್ ಈ ಚಿತ್ರದಲ್ಲಿ ತಮ್ಮ ಪಾತ್ರವು ಸಂಕೀರ್ಣವಾಗಿದೆ ಎಂದು ಬಹಿರಂಗಪಡಿಸಿದರು. ಈ ಪಾತ್ರವು ಅನೇಕ ತಿರುವುಗಳಿಂದ ತುಂಬಿದ ಥ್ರಿಲ್ಲರ್, ಅನೇಕ ಪದರಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಅಮಲಾ ಪೌಲ್ "ಅನಿರೀಕ್ಷಿತ ಮರುಭೂಮಿ ವಾತಾವರಣದಲ್ಲಿ" ಚಿತ್ರೀಕರಣದ ರೋಮಾಂಚಕಾರಿ ಅನುಭವವನ್ನು ಹಂಚಿಕೊಂಡರು. ಚಿತ್ರೀಕರಣದ ಕೊನೆಯ ದಿನದಂದು ಸುಂಟರಗಾಳಿಯನ್ನು ನೋಡಿದ್ದನ್ನು ಅವರು ನೆನಪಿಸಿಕೊಂಡರು.  

ಮಲಯಾಳಂ ಚಲನಚಿತ್ರ 'ಲೆವೆಲ್ ಕ್ರಾಸ್' ನ ಒಂದು ದೃಶ್ಯ


 
ಥ್ರಿಲ್ಲರ್ ಡ್ರಾಮಾ 'ಲೆವೆಲ್ ಕ್ರಾಸ್' ಪಾತ್ರವರ್ಗದಲ್ಲಿ ಆಸಿಫ್ ಅಲಿ ಮತ್ತು ಶರಾಫ್ ಯು ದೀನ್ ಕೂಡ ಇದ್ದಾರೆ.

 

*****

iffi reel

(Release ID: 2076448) Visitor Counter : 44