ಉಪರಾಷ್ಟ್ರಪತಿಗಳ ಕಾರ್ಯಾಲಯ
ಶಿಕ್ಷಣವೇ ಬದಲಾವಣೆಯ ಅತ್ಯಂತ ಶಕ್ತಿಶಾಲಿ ಪ್ರೇರಕ ಶಕ್ತಿ - ಉಪರಾಷ್ಟ್ರಪತಿ
ಮಾನವ ಅಭಿವೃದ್ಧಿಗೆ ಯುವಜನರಲ್ಲಿ ಅತ್ಯುತ್ತಮ ಅಭ್ಯಾಸಗಳನ್ನು ಬೆಳೆಸುವುದು ಅಗತ್ಯ - ಉಪರಾಷ್ಟ್ರಪತಿ
ಭಾರತದ ಪರಿವರ್ತನಾ ಪಯಣವು ಹಳ್ಳಿಗಳಲ್ಲಿ, ರೈತರಲ್ಲಿ ಮತ್ತು ಗ್ರಾಮೀಣ ಶಕ್ತಿಯಲ್ಲಿ ಅಡಗಿದೆ - ಉಪರಾಷ್ಟ್ರಪತಿ
ರಾಷ್ಟ್ರೀಯ ಶಿಕ್ಷಣ ನೀತಿ 2020 ಮಕ್ಕಳ ಕೌಶಲ್ಯ ಸಬಲೀಕರಣಕ್ಕೆ ನೆರವಾಗಲಿದೆ- ಉಪರಾಷ್ಟ್ರಪತಿ
ವಿಶ್ವ ಮಕ್ಕಳ ದಿನದ ಸಂದರ್ಭದಲ್ಲಿ ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪರಾಷ್ಟ್ರಪತಿಯವರು ಮಾತನಾಡಿದರು.
Posted On:
20 NOV 2024 5:13PM by PIB Bengaluru
ಶಿಕ್ಷಣವೇ ಬದಲಾವಣೆಗೆ ಅತಿ ದೊಡ್ಡ ಪ್ರೇರಕ ಶಕ್ತಿ ಮತ್ತು ಸಮಾಜದಲ್ಲಿ ಸಮಾನತೆ ಸಾಧಿಸುವ ಅಡಿಪಾಯವಾಗಿದೆ ಎಂದು ಉಪರಾಷ್ಟ್ರಪತಿಗಳು ಇಂದು ಹೇಳಿದ್ದಾರೆ. ಶಿಕ್ಷಣವು ಸಮಾನತೆಯನ್ನು ಉತ್ತೇಜಿಸುತ್ತದೆ ಮತ್ತು ಅಸಮಾನತೆಯನ್ನು ನಿವಾರಿಸುತ್ತದೆ. ನಮ್ಮಲ್ಲಿ ಶಿಕ್ಷಣ ತುಂಬುವ ಸಜ್ಜನಿಕೆಯೇ ನಮ್ಮನ್ನು ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ" ಎಂದು ಅವರು ಹೇಳಿದರು.
ವಿಶ್ವ ಮಕ್ಕಳ ದಿನದ ಸಂದರ್ಭದಲ್ಲಿ ರಾಜಸ್ಥಾನದ ಕಜರ, ಝುಂಝುನುವಿನ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, ಶಿಸ್ತು, ಮೌಲ್ಯಗಳು ಮತ್ತು ಮಾನವ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದರು. "ನಿಮ್ಮ ವಯಸ್ಸಿನಲ್ಲಿ, ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಪೋಷಕರನ್ನು ಗೌರವಿಸುವುದು, ಶಿಕ್ಷಕರಿಗೆ ತಲೆಬಾಗುವುದು, ಸಹೋದರತ್ವವನ್ನು ಬೆಳೆಸುವುದು ಮತ್ತು ಶಿಸ್ತನ್ನು ಪ್ರದರ್ಶಿಸುವುದು ನಿಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರಬೇಕು. ಮಾನವ ಅಭಿವೃದ್ಧಿಗಾಗಿ ಆದರ್ಶಪ್ರಾಯ ಅಭ್ಯಾಸಗಳನ್ನು ಬೆಳೆಸುವುದು ನಿಮ್ಮ ಆದ್ಯತೆಯಾಗಿರಬೇಕು " ಎಂದು ಅವರು ಹೇಳಿದರು. ಯುವಜನರಿಗೆ ಲಭ್ಯವಿರುವ ಅವಕಾಶಗಳನ್ನು ಎತ್ತಿ ತೋರಿಸಿದ ಅವರು, "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದಿನ ಸರ್ಕಾರದ ನೀತಿಗಳು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಹೊಳಪು ನೀಡಲು ಹಲವಾರು ವೇದಿಕೆಗಳನ್ನು ಸೃಷ್ಟಿಸಿವೆ" ಎಂದು ಹೇಳಿದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, "ನೀವೆಲ್ಲರೂ ಗ್ರಾಮೀಣ ಭಾರತದ ಬೆನ್ನೆಲುಬು. ನೆನಪಿರಲಿ, ಭಾರತದ ಆತ್ಮವು ಅದರ ಹಳ್ಳಿಗಳಲ್ಲಿ ನೆಲೆಸಿದೆ. ನಮ್ಮ ಬೇರುಗಳು ಗ್ರಾಮೀಣ ಭಾರತದಲ್ಲಿ ಬಲಗೊಂಡಿವೆ, ಮತ್ತು ನಮ್ಮ ಆಹಾರ ಪೂರೈಕೆದಾರರು, ರೈತರು ಸಹ ಈ ಪ್ರದೇಶಗಳಲ್ಲಿ ವಾಸಿಸುತ್ತಾರೆ ". ಪಂಚಾಯತ್ ರಾಜ್ ಮತ್ತು ಪುರಸಭೆಗಳಂತಹ ಸಂಸ್ಥೆಗಳು ಭಾರತದಲ್ಲಿ ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಿವೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಶ್ಲಾಘಿಸಿದ ಉಪರಾಷ್ಟ್ರಪತಿಗಳು, ಇದನ್ನು "ಗೇಮ್ ಚೇಂಜರ್" ಎಂದು ಕರೆದರು. "ಮೂರು ದಶಕಗಳ ನಂತರ, ಭಾರತವು ವಿದ್ಯಾರ್ಥಿಗಳನ್ನು ಪುಸ್ತಕಗಳು ಮತ್ತು ಪದವಿಗಳ ಹೊರೆಯಿಂದ ಮುಕ್ತಗೊಳಿಸುವ ಮತ್ತು ಕೌಶಲ್ಯಗಳೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಹೊಸ ಶಿಕ್ಷಣ ನೀತಿಯನ್ನು ಹೊಂದಿದೆ. ಈ ನೀತಿಯು 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ತನ್ನ ದೃಷ್ಟಿಕೋನವನ್ನು ಸಾಧಿಸಲು ಸಹಾಯ ಮಾಡುತ್ತದೆ" ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಅಜ್ಜ-ಅಜ್ಜಿಯರ ಹೆಸರಿನಲ್ಲಿ ಮರಗಳನ್ನು ನೆಡುವ ಮೂಲಕ ಪರಿಸರ ಜಾಗೃತರಾಗಿರಬೇಕು ಎಂದು ಉಪರಾಷ್ಟ್ರಪತಿಗಳು ಕರೆ ನೀಡಿದರು. ಈ ಉಪಕ್ರಮವನ್ನು 'ಮಿಷನ್ ಮೋಡ್' ನಲ್ಲಿ ಮುಂದಕ್ಕೆ ಕೊಂಡೊಯ್ಯುವಂತೆ ಅವರು ಸಂಸ್ಥೆಗಳಿಗೆ ಮನವಿ ಮಾಡಿದರು. "ನೀವು ಈ ಶಾಲೆಯನ್ನು ತೊರೆದಾಗ, ನೀವು ಈ ಶಾಲೆಗೆ ಕೀರ್ತಿ ತರುವಂತಹ ಅನುಕರಣೀಯ ನಡವಳಿಕೆಯನ್ನು ಪ್ರದರ್ಶಿಸಬೇಕು" ಎಂದು ಅವರು ಹೇಳಿದರು.
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸುವ ಮೂಲಕ ಉಪರಾಷ್ಟ್ರಪತಿಗಳು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ಭಾರತದ ಯುವಕರಿಗೆ ಉತ್ಕೃಷ್ಟತೆ ಮತ್ತು ಮನ್ನಣೆ ಪಡೆಯಲು ಜಾಗತಿಕ ವೇದಿಕೆಗಳನ್ನು ಒದಗಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಮತ್ತು ಆಡಳಿತವನ್ನು ಅವರು ಶ್ಲಾಘಿಸಿದರು.
ರಾಜಸ್ಥಾನ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾದ ಶ್ರೀ ಜಬರ್ ಸಿಂಗ್ ಖರ್ರಾ, ನವೋದಯ ವಿದ್ಯಾಲಯ ಸಮಿತಿಯ ಆಯುಕ್ತರಾದ ಶ್ರೀಮತಿ ಪ್ರಾಚಿ ಪಾಂಡೆ ಮತ್ತು ಜಂಟಿ ಕಾರ್ಯದರ್ಶಿ (ಶಿಕ್ಷಣ ಸಚಿವಾಲಯ) ಶ್ರೀ ಸಂಜಯ್ ಕುಮಾರ್ ಯಾದವ್, ಪ್ರಾಂಶುಪಾಲರಾದ ಜೆ. ಎನ್. ವಿ., ಝುಂಝುನು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 2075479)
Visitor Counter : 22