ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ರೈಲು ರೇಕ್ ಮೂಲಕ ದೆಹಲಿ ತಲುಪಿದ 840 ಮೆಟ್ರಿಕ್ ಟನ್ ಈರುಳ್ಳಿಯ ನಾಲ್ಕನೇ ಬೃಹತ್ ದಾಸ್ತಾನು
ಪಂಜಾಬ್, ಹರಿಯಾಣ, ಚಂಡೀಗಢ, ಹಿಮಾಚಲ, ಜಮ್ಮು-ಕಾಶ್ಮೀರ, ದೆಹಲಿ ಮತ್ತು ಇತರೆ ರಾಜ್ಯಗಳ ಅಗತ್ಯಗಳನ್ನು ಪೂರೈಸಲು ಸೋನಿಪತ್‌ನಲ್ಲಿ ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾದ ಈರುಳ್ಳಿಯನ್ನು ಬಳಸಲು ಕೇಂದ್ರ ನಿರ್ಧರಿಸಿದೆ
Posted On:
19 NOV 2024 4:12PM by PIB Bengaluru
ಸರ್ಕಾರದ ಬೆಲೆ ಸ್ಥಿರೀಕರಣ ಬಫರ್ ಸಂಗ್ರಹದಿಂದ ಇನ್ನೂ 840 ಮೆಟ್ರಿಕ್ ಟನ್ ಈರುಳ್ಳಿಯು 2024ರ ನವೆಂಬರ್ 17ರ ಮುಂಜಾನೆ ದೆಹಲಿಯ ಕಿಶನ್‌ಗಂಜ್ ರೈಲ್ವೆ ನಿಲ್ದಾಣಕ್ಕೆ ತಲುಪಿದೆ. ನಾಸಿಕ್‌ನಿಂದ ರೈಲು ರೇಕ್ ಮೂಲಕ ʻನಾಫೆಡ್ʼ ಈ ದಾಸ್ತಾನನ್ನು ಕಳುಹಿಸಿದೆ. ʻದೆಹಲಿ-ಎನ್‌ಸಿಆರ್ʼನಾದ್ಯಂತ ಪ್ರತಿ ಕೆ.ಜಿ.ಗೆ 35 ರೂ.ಗಳಂತೆ ಚಿಲ್ಲರೆ ಮಾರಾಟಕ್ಕಾಗಿ ಈರುಳ್ಳಿಯನ್ನು ʻಮದರ್ ಡೈರಿʼ(500 ಮೆಟ್ರಿಕ್ ಟನ್), ʻಎನ್‌ಸಿಸಿಎಫ್ʼ (190 ಮೆಟ್ರಿಕ್ ಟನ್) ಮತ್ತು ʻನಾಫೆಡ್ʼಗೆ(150 ಮೆಟ್ರಿಕ್ ಟನ್) ಹಂಚಿಕೆ ಮಾಡಲಾಗಿದೆ.
ಇತ್ತೀಚಿನ ಈರುಳ್ಳಿ ಆಗಮನವು, ಬೆಲೆ ಸ್ಥಿರೀಕರಣಕ್ಕಾಗಿ ದೆಹಲಿಗೆ ರವಾನಿಸಲಾದ ನಾಲ್ಕನೇ ಬೃಹತ್ ಈರುಳ್ಳಿ ದಾಸ್ತಾನು ಎನಿಸಿದೆ. ʻಕಾಂಡಾ ಎಕ್ಸ್‌ಪ್ರೆಸ್ʼ ಮೂಲಕ ಸಾಗಿಸಲಾದ 1,600 ಮೆಟ್ರಿಕ್ ಟನ್ ಈರುಳ್ಳಿಯ ಮೊದಲ ದಾಸ್ತಾನು 2024ರ ಅಕ್ಟೋಬರ್ 20 ರಂದು ದೆಹಲಿ ತಲುಪಿತ್ತು. 840 ಮೆಟ್ರಿಕ್ ಟನ್‌ಗಳ ಎರಡನೇ ದಾಸ್ತಾನು 2024ರ ಅಕ್ಟೋಬರ್ 30 ರಂದು ಬಂದಿತು. 730 ಮೆಟ್ರಿಕ್ ಟನ್‌ನ ಮೂರನೇ ದಾಸ್ತಾನು 2024ರ ನವೆಂಬರ್ 12ರಂದು ದೆಹಲಿ ತಲುಪಿತ್ತು. ಈ ಸರಣಿಯ ಐದನೇ ಭಾಗವಾಗಿ 720 ಮೆಟ್ರಿಕ್ ಟನ್ಗಳ ಮತ್ತೊಂದು ದಾಸ್ತಾನು ನಿನ್ನೆ ನಾಸಿಕ್‌ನಿಂದ ಹೊರಟಿದ್ದು, ನವೆಂಬರ್ 21ರ ವೇಳೆಗೆ ದೆಹಲಿಗೆ ತಲುಪುವ ನಿರೀಕ್ಷೆಯಿದೆ.
ಬೃಹತ್ ಪ್ರಮಾಣದಲ್ಲಿ ಈರುಳ್ಳಿಯ ಆಗಮನವು ಮಂಡಿ ಮತ್ತು ಚಿಲ್ಲರೆ ವ್ಯಾಪಾರ ಎರಡರಲ್ಲೂ ದೆಹಲಿಯಲ್ಲಿ ಈರುಳ್ಳಿ ಬೆಲೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ, ಕೆಳಗೆ ನೀಡಲಾದ ಗ್ರಾಫ್ ಚಿತ್ರಣಗಳಲ್ಲಿ ಇದನ್ನು ಕಾಣಬಹುದು:
ದೆಹಲಿ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಚೆನ್ನೈ ಮತ್ತು ಗುವಾಹಟಿಗೆ ಸಹ ಈರುಳ್ಳಿಯ ಬೃಹತ್ ದಾಸ್ತಾನನ್ನು ಕಳುಹಿಸಲಾಗಿದೆ. ಅಕ್ಟೋಬರ್ 23, 2024ರಂದು, ನಾಸಿಕ್‌ನಿಂದ ರೈಲು ರೇಕ್ ಮೂಲಕ ಕಳುಹಿಸಲಾದ 840 ಮೆಟ್ರಿಕ್ ಟನ್ ಈರುಳ್ಳಿಯು 2024ರ ಅಕ್ಟೋಬರ್ 26ರಂದು ಚೆನ್ನೈಗೆ ತಲುಪಿತ್ತು.
ಅಲ್ಲದೆ, ರೈಲು ರೇಕ್ ಮೂಲಕ 840 ಮೆಟ್ರಿಕ್ ಟನ್ ಈರುಳ್ಳಿಯನ್ನು 2024ರ ನವೆಂಬರ್ 5 ರಂದು ಗುವಾಹಟಿಯ ಚಾಂಗ್ಸಾರಿ ನಿಲ್ದಾಣಕ್ಕೆ ರವಾನಿಸಲಾಗಿದ್ದು ಇದನ್ನು ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಇತರ ಈಶಾನ್ಯ ರಾಜ್ಯಗಳ ವಿವಿಧ ಜಿಲ್ಲೆಗಳಿಗೆ ವಿತರಿಸಲಾಯಿತು.
ಈ ವಾರದಲ್ಲಿ ಅಸ್ಸಾಂನ ಗುವಾಹಟಿಗೆ ರೈಲು ರೇಕ್ ಮೂಲಕ 840 ಮೆಟ್ರಿಕ್ ಟನ್ನ ಮತ್ತೊಂದು ದಾಸ್ತಾನನ್ನು ರವಾನಿಸಲು ಯೋಜಿಸಲಾಗಿದೆ. ಗುವಾಹಟಿಗೆ ಬೃಹತ್ ಪ್ರಮಾಣದ ಈರುಳ್ಳಿ ಸಾಗಣೆಯು ಈಶಾನ್ಯ ಭಾಗದಲ್ಲಿ ಈರುಳ್ಳಿಯ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಈರುಳ್ಳಿ ಬೆಲೆಯನ್ನು ಸ್ಥಿರಗೊಳಿಸುತ್ತದೆ.
ಇದಲ್ಲದೆ, ಲಖನೌದ ಅಮೌಸಿಗೆ ಇನ್ನು 2-3 ದಿನಗಳಲ್ಲಿ 840 ಮೆಟ್ರಿಕ್ ಟನ್ ಈರುಳ್ಳಿಯನ್ನು ರೈಲು ರೇಕ್ ಮೂಲಕ ಸಾಗಿಸುವ ನಿರೀಕ್ಷೆಯಿದೆ.
ಹಬ್ಬದ ಋತುವಿನಲ್ಲಿ ಮತ್ತು ಮಂಡಿಗಳನ್ನು ಮುಚ್ಚಿದ್ದರಿಂದ ಕಳೆದ 2-3 ದಿನಗಳಲ್ಲಿ ಕೆಲವು ಮಾರುಕಟ್ಟೆಗಳಲ್ಲಿ ಕಂಡುಬಂದ ಈರುಳ್ಳಿ ಪೂರೈಕೆಯಲ್ಲಿನ ತಾತ್ಕಾಲಿಕ ಅಡಚಣೆಯನ್ನು ಪರಿಹರಿಸುವ ಸಲುವಾಗಿ ಈರುಳ್ಳಿ ವಿಲೇವಾರಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ರಾಷ್ಟ್ರವ್ಯಾಪಿ ಈರುಳ್ಳಿ ವಿಲೇವಾರಿಗೆ ವೇಗ ನೀಡಲು ಗ್ರಾಹಕ ವ್ಯವಹಾರಗಳ ಇಲಾಖೆ, ಎನ್‌ಸಿಸಿಎಫ್ ಮತ್ತು ʻನಾಫೆಡ್ʼ ಅಧಿಕಾರಿಗಳ ತಂಡ ಇತ್ತೀಚೆಗೆ ನಾಸಿಕ್‌ಗೆ ಭೇಟಿ ನೀಡಿತು.
ʻನಾಫೆಡ್ʼ ಈ ವಾರದಲ್ಲಿ ʻದೆಹಲಿ-ಎನ್‌ಸಿಆರ್ʼಗೆ ಇನ್ನೂ ಎರಡು ರೇಕ್ ಈರುಳ್ಳಿ ಮತ್ತು ಗುವಾಹಟಿಗೆ ಒಂದು ರೇಕ್ ಈರುಳ್ಳಿಯನ್ನು ತಲುಪಿಸಿದೆ. ಅಂತೆಯೇ, ಮಾರುಕಟ್ಟೆಗಳಲ್ಲಿ ಈರುಳ್ಳಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಸ್ತೆ ಸಾರಿಗೆಯ ಮೂಲಕ ರವಾನೆಯನ್ನು ಹೆಚ್ಚಿಸಲಾಗುತ್ತಿದೆ. ರೈಲು ಮತ್ತು ರಸ್ತೆ ಸಾರಿಗೆ ಮೂಲಕ ʻಎನ್‌ಸಿಸಿಎಫ್ʼನಿಂದ ಪೂರೈಕೆ ಹೆಚ್ಚಿಸಲಾಗಿದ್ದು, ಇದರಿಂದ ಈರುಳ್ಳಿಯ ಲಭ್ಯತೆ ಮತ್ತಷ್ಟು ಸುಧಾರಿಸಲಿದೆ. ʻಎನ್‌ಸಿಸಿಎಫ್ʼ ಮುಂದಿನ ವಾರದಲ್ಲಿ ಇನ್ನೂ ಒಂದು ರೇಕ್ ಈರುಳ್ಳಿ ಕಳುಹಿಸಲು ಯೋಜಿಸಿದೆ.
ಅಷ್ಟೇ ಅಲ್ಲದೆ ಪಂಜಾಬ್, ಹರಿಯಾಣ, ಚಂಡೀಗಢ, ಹಿಮಾಚಲ, ಜಮ್ಮು-ಕಾಶ್ಮೀರ, ದೆಹಲಿ ಮುತಾದ ರಾಜ್ಯಗಳ ಅಗತ್ಯಗಳನ್ನು ಪೂರೈಸಲು ಸೋನಿಪತ್‌ನಲ್ಲಿನ ಶೀತಲಾಗಾರದಲ್ಲಿ ಇರಿಸಲಾಗಿರುವ ಈರುಳ್ಳಿಯನ್ನು ಬಳಸಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಲು ನಾಸಿಕ್‌ನ ʻಆರ್‌ಜೆವಿಎಂʼ, ʻಸಿಡಬ್ಲ್ಯೂಸಿʼ ಶೀತಲಾಗಾರದಲ್ಲಿನ ಈರುಳ್ಳಿಯನ್ನೂ ಎತ್ತಲು ಸರ್ಕಾರ ನಿರ್ಧರಿಸಿದೆ. ಸರ್ಕಾರವು ಮಾರುಕಟ್ಟೆಯ ಬೆಳವಣಿಗೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತಿದ್ದು, ಈರುಳ್ಳಿ ಬೆಲೆಗಳನ್ನು ಸ್ಥಿರಗೊಳಿಸಲು ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ವರ್ಷ ಬೆಲೆ ಸ್ಥಿರೀಕರಣ ದಾಸ್ತಾನಿಗಾಗಿ ಸರ್ಕಾರವು 4.7 ಲಕ್ಷ ಟನ್ ಮುಂಗಾರು ಈರುಳ್ಳಿಯನ್ನು ಖರೀದಿಸಿದೆ. 2024ರ ಸೆಪ್ಟೆಂಬರ್ 5ರಿಂದ ಪ್ರತಿ ಕೆ.ಜಿ.ಗೆ 35 ರೂ.ಗಳಂತೆ ಚಿಲ್ಲರೆ ಮಾರಾಟಕ್ಕಾಗಿ ಮತ್ತು ದೇಶಾದ್ಯಂತದ ಪ್ರಮುಖ ಮಂಡಿಗಳಲ್ಲಿ ಸಗಟು ಮಾರಾಟಕ್ಕಾಗಿ ಈ ದಾಸ್ತಾನು ಬಿಡುಗಡೆ ಪ್ರಾರಂಭಿಸಿದೆ. ಇಲ್ಲಿಯವರೆಗೆ ನಾಸಿಕ್ ಮತ್ತು ಇತರ ಮೂಲ ಕೇಂದ್ರಗಳಲ್ಲಿದ್ದ 1.50 ಲಕ್ಷ ಟನ್ ಈರುಳ್ಳಿ ದಾಸ್ತಾನನ್ನು ಬಳಕೆ ಕೇಂದ್ರಗಳಿಗೆ ರವಾನಿಸಲಾಗಿದೆ.
ʻಪಿಎಸ್ಎಫ್ʼ ಮೂಲಕ ಸರ್ಕಾರದ ಮಧ್ಯಪ್ರವೇಶವು ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೆಲೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಹೆಚ್ಚಿನ ರಾಜ್ಯಗಳಲ್ಲಿ ಸರಾಸರಿ ಚಿಲ್ಲರೆ ದರಗಳು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿವೆ. ಅಂತಹ ಪ್ರಮುಖ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ತೆಲಂಗಾಣ, ಗುಜರಾತ್, ಚಂಡೀಗಢ, ಹರಿಯಾಣ, ಗೋವಾ ಮುಂತಾದವು ಸೇರಿವೆ.
ಉತ್ಪಾದನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಮೌಲ್ಯಮಾಪನದ ಪ್ರಕಾರ, ಈ ವರ್ಷ ನೈಜ ಹಿಂಗಾರು ಬಿತ್ತನೆ ಪ್ರದೇಶವು 3.82 ಲಕ್ಷ ಹೆಕ್ಟೇರ್ ಆಗಿದ್ದು, ಇದು ಕಳೆದ ವರ್ಷ ಬಿತ್ತನೆ ಮಾಡಿದ 2.85 ಲಕ್ಷ ಹೆಕ್ಟೇರ್‌ಗಿಂತಲೂ 34% ಅಧಿಕವಾಗಿದೆ. ನವೆಂಬರ್ ಮೊದಲ ವಾರದವರೆಗೆ 1.28 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಹಿಂಗಾರು ಈರುಳ್ಳಿಯ ಬಿತ್ತನೆ ಪ್ರಗತಿಯೂ ಸಾಮಾನ್ಯವಾಗಿದೆ ಎಂದು ವರದಿಯಾಗಿದೆ. ಮಾರುಕಟ್ಟೆಗಳಿಗೆ ಹೆಚ್ಚಿನ ಹಿಂಗಾರು ಈರುಳ್ಳಿ ಬರುವುದರ ಜೊತೆಗೆ ಬಫರ್ ದಾಸ್ತಾನುಗಳ ಹೆಚ್ಚಿನ ವಿಲೇವಾರಿ ಮತ್ತು ಹಿಂಗಾರು ಹಂಗಾಮಿನಲ್ಲಿ ಉತ್ತಮ ಬಿತ್ತನೆ ಪ್ರಗತಿಯು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈರುಳ್ಳಿ ಲಭ್ಯತೆಯನ್ನು ಖಾತರಿಪಡಿಸುತ್ತದೆ.
*****
(Release ID: 2075007)
Visitor Counter : 6