ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಗುಜರಾತ್ ನ ಗಾಂಧಿನಗರದಲ್ಲಿ 50ನೇ ಅಖಿಲ ಭಾರತ ಪೊಲೀಸ್ ವಿಜ್ಞಾನ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ತನ್ನ ಆಂತರಿಕ ಭದ್ರತೆ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ

ಮುಂದಿನ 10 ವರ್ಷಗಳಲ್ಲಿ, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಆಧುನಿಕ, ವೈಜ್ಞಾನಿಕ ಮತ್ತು ತ್ವರಿತಗತಿಯನ್ನು ಹೊಂದಿದ ವ್ಯವಸ್ಥೆಯಾಗಲಿದೆ

ಲಭ್ಯವಿರುವ ವಿವಿಧ ಡೇಟಾವನ್ನು  ಫಲಿತಾಂಶ ಆಧಾರಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಲು ಪೊಲೀಸ್ ವಿಜ್ಞಾನ ಸಮ್ಮೇಳನವು ಎಐ (ಕೃತಕ ಬುದ್ಧಿಮತ್ತೆಯನ್ನು) ಬಳಸಬೇಕಾಗಿದೆ

ಸೈಬರ್ ಅಪರಾಧ, ಒಳನುಸುಳುವಿಕೆ, ಅಕ್ರಮ ಡ್ರೋನ್ ಬಳಕೆಯನ್ನು ತಡೆಗಟ್ಟುವುದು, ಮಾದಕವಸ್ತುಗಳು ಮತ್ತು ಡಾರ್ಕ್ ವೆಬ್ ನ ದುರುಪಯೋಗ ಎಂಬ ಐದು ಕ್ಷೇತ್ರಗಳಲ್ಲಿ ಕಾನೂನು ಜಾರಿ ಸಂಸ್ಥೆಗಳು ಅಪರಾಧಿಗಳಿಗಿಂತ ಬಹಳ ಮುಂದಿರಬೇಕು

ಡಿಜಿಟಲ್ ಕ್ರಾಂತಿಯ ಮೂಲಕ ಮೋದಿ ಸರ್ಕಾರ ನ್ಯಾಯಾಂಗ ಪ್ರಕ್ರಿಯೆಯನ್ನು ವೇಗವಾಗಿಸಿದೆ ಮತ್ತು ಹೆಚ್ಚು ಪಾರದರ್ಶಕಗೊಳಿಸಿದೆ

ಭಾರತದ ಪ್ರತಿಯೊಬ್ಬ ನಾಗರಿಕರಿಗೆ ತ್ವರಿತ ಮತ್ತು ಲಭ್ಯವಾಗಬುದಾದ ಅಥವಾ ಸುಲಭವಾಗಿ ಪ್ರವೇಶಿಸಬಹುದಾದ ನ್ಯಾಯವನ್ನು ಒದಗಿಸುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ

ಪೊಲೀಸ್ ಠಾಣೆಗಳ ರಚನೆಯನ್ನು, ಭಾಗವಹಿಸುವಿಕೆ, ಒಳಹರಿವುಗಳನ್ನು ಸಂಗ್ರಹಿಸುವ ವಿಧಾನಗಳನ್ನು ಮರುರೂಪಿಸಬೇಕು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬೀಟ್ ಕಾನ್ಸ್ಟೇಬಲ್ ಮಟ್ಟಕ್ಕೆ ತಲುಪಿಸುವ ಅವಶ್ಯಕತೆಯಿದೆ

ಕಳೆದ 10 ವರ್ಷಗಳಲ್ಲಿ, ಮೋದಿ ಸರ್ಕಾರವು ಸುಮಾರು 35,000 ಕೋಟಿ ರೂ.ಗಳ ಮೌಲ್ಯದ 5,45,000 ಕಿಲೋಗ್ರಾಂಗಳಷ್ಟು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ, ಇದು ಹಿಂದಿನ ದಶಕದಲ್ಲಿ ವಶಪಡಿಸಿಕೊಂಡ ಮೊತ್ತಕ್ಕಿಂತ ಆರು ಪಟ್ಟು ಹೆಚ್ಚಾಗಿದೆ

ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದಲ್ಲಿ, ದೇಶದ ಸುಮಾರು 100% ಪೊಲೀಸ್ ಠಾಣೆಗಳನ್ನು ಗಣಕೀಕೃತಗೊಳಿಸಲಾಗಿದೆ ಮತ್ತು ಸಿಸಿಟಿಎನ್ಎಸ್ಗೆ ಸಂಪರ್ಕಿಸಲಾಗಿದೆ

22,000 ನ್ಯಾಯಾಲಯಗಳನ್ನು ಇ-ಕೋರ್ಟ್ ವ್ಯವಸ್ಥೆಗೆ ಜೋಡಿಸಲಾಗಿದೆ ಮತ್ತು ಇ-ಜೈಲು ಅಡಿಯಲ್ಲಿ, ಎರಡು ಕೋಟಿಗೂ ಹೆಚ್ಚು ಕೈದಿಗಳ ಡೇಟಾ ಲಭ್ಯವಿದೆ

Posted On: 19 NOV 2024 5:33PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ಗಾಂಧಿನಗರದಲ್ಲಿ ನಡೆದ 50ನೇ ಅಖಿಲ ಭಾರತ ಪೊಲೀಸ್ ವಿಜ್ಞಾನ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮತ್ತು ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ (ಬಿಪಿಆರ್ &ಡಿ) ಮಹಾನಿರ್ದೇಶಕ ಶ್ರೀ ರಾಜೀವ್ ಕುಮಾರ್ ಶರ್ಮಾ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಅಖಿಲ ಭಾರತ ಪೊಲೀಸ್ ವಿಜ್ಞಾನ ಸಮ್ಮೇಳನವಿಲ್ಲದೆ ನಮ್ಮ ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆಗಳನ್ನು ಇಂದು ಪ್ರಸ್ತುತವಾಗಿಡುವುದು ಅಸಾಧ್ಯ ಎಂದು ಗೃಹ ಸಚಿವರು ತಮ್ಮ ಭಾಷಣದಲ್ಲಿ ಹೇಳಿದರು. ಪೊಲೀಸ್ ವಿಜ್ಞಾನ ಸಮ್ಮೇಳನವು ಅಪರಾಧದ ವಿರುದ್ಧದ ಹೋರಾಟದಲ್ಲಿ ನಮ್ಮ ಇಡೀ ವ್ಯವಸ್ಥೆಯನ್ನು ಪ್ರಸ್ತುತವಾಗಿರಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಪೊಲೀಸ್ ಠಾಣೆಗಳಲ್ಲಿ ಬೀಟ್ ಕಾನ್ಸ್ಟೇಬಲ್ ಮಟ್ಟಕ್ಕೆ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ತಲುಪಿಸುವ ವ್ಯವಸ್ಥೆ, ಭಾಗವಹಿಸುವಿಕೆ, ಒಳಹರಿವುಗಳನ್ನು ಸಂಗ್ರಹಿಸುವ ವಿಧಾನಗಳು ಮತ್ತು ವ್ಯವಸ್ಥೆಯನ್ನು ಪುನರ್ ರೂಪಿಸುವ ಅವಶ್ಯಕತೆಯಿದೆ ಎಂದು ಶ್ರೀ ಶಾ ಒತ್ತಿ ಹೇಳಿದರು. ಈ ಅಂಶಗಳನ್ನು ಸಮಗ್ರವಾಗಿ ಮರು ಮೌಲ್ಯಮಾಪನ ಮಾಡುವ ಸಮಯ ಬಂದಿದೆ ಎಂದು ಅವರು ನುಡಿದರು.

ಯಾವುದೇ ವ್ಯವಸ್ಥೆಯು 50 ವರ್ಷಗಳವರೆಗೆ ಬದಲಾಗದೆ ಉಳಿದರೆ ಅದು ಹಳತಾಗುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕಳೆದ ಹಲವಾರು ದಶಕಗಳಲ್ಲಿ ದೇಶ, ಜಗತ್ತು, ಅಪರಾಧ ಕ್ಷೇತ್ರ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ ಎಂಬುದರತ್ತ ಅವರು ಗಮನಸೆಳೆದರು. ಆದಾಗ್ಯೂ, ಈ ಬದಲಾವಣೆಗಳಿಗೆ ಅನುಗುಣವಾಗಿ ಪೊಲೀಸ್ ವಿಜ್ಞಾನ ಸಮ್ಮೇಳನ ವಿಕಸನಗೊಂಡಿದೆಯೇ ಎಂದು ಅವರು ಪ್ರಶ್ನಿಸಿದರು. ಪೊಲೀಸ್ ವಿಜ್ಞಾನ ಸಮ್ಮೇಳನದಲ್ಲಿ ನಿರ್ಧಾರಗಳ ಅನುಷ್ಠಾನದಲ್ಲಿ,  ವಿಧಾನ, ಉದ್ದೇಶಗಳು ಮತ್ತು ಸಮಯೋಚಿತ ಬದಲಾವಣೆಗಳನ್ನು ಮಾಡುವಲ್ಲಿ ನಾವು ಸ್ವಲ್ಪ ಹಿಂದೆ ಬಿದ್ದಿದ್ದೇವೆ ಎಂಬುದನ್ನು ಅವರು ಒತ್ತಿ ಹೇಳಿದರು. ಭವಿಷ್ಯದ ಸವಾಲುಗಳನ್ನು ಅರ್ಥಮಾಡಿಕೊಳ್ಳದೆ, ನಮ್ಮ ಯೋಜನೆ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಶ್ರೀ ಶಾ ನುಡಿದರು.

9B7A0782.JPG

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ಜಾಗತಿಕವಾಗಿ ನಾಯಕತ್ವದ ಪಾತ್ರವನ್ನು ವಹಿಸಲು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯುತ್ತಿದೆ ಮತ್ತು ಇದರ ಪರಿಣಾಮವಾಗಿ ನಮ್ಮ ಸವಾಲುಗಳು ಹೆಚ್ಚಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತದ ಆರ್ಥಿಕತೆಯು ವಿಶ್ವದ 11 ನೇ ಅತಿದೊಡ್ಡ ಆರ್ಥಿಕತೆಯಿಂದ 5 ನೇ ಅತಿದೊಡ್ಡ ಆರ್ಥಿಕತೆಗೆ ಸಾಗಿದೆ ಮತ್ತು 2028 ರ ವೇಳೆಗೆ ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಡಿಜಿಟಲ್ ಕ್ರಾಂತಿಯ ಮೂಲಕ ಮೋದಿ ಸರ್ಕಾರ ನ್ಯಾಯಾಂಗ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ ಮತ್ತು ಹೆಚ್ಚು ಪಾರದರ್ಶಕಗೊಳಿಸಿದೆ ಎಂದು ಶ್ರೀ ಶಾ ಹೇಳಿದರು.

ಸಮ್ಮೇಳನದಲ್ಲಿ, ಹೊಸ ಕ್ರಿಮಿನಲ್ ಕಾನೂನುಗಳು, ವಿಧಿವಿಜ್ಞಾನ ಬಳಕೆ, ವಿಪತ್ತು ನಿರ್ವಹಣೆ, ಬ್ಲಾಕ್-ಚೈನ್ ತಂತ್ರಜ್ಞಾನದ ಆನ್ವಯಿಕತೆ, ಸೈಬರ್ ವಂಚನೆ, ಸ್ಮಾರ್ಟ್ ಸಿಟಿಗಳಲ್ಲಿ ಪೊಲೀಸ್ ವ್ಯವಸ್ಥೆ, ಬುಡಕಟ್ಟು ಪ್ರದೇಶಗಳಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆ ಮತ್ತು ಜೈಲುಗಳಲ್ಲಿ ಕ್ರಾಂತಿಕಾರಿ ಮೂಲಭೂತವಾದಿತ್ವವನ್ನು ಪರಿಹರಿಸುವ ಕ್ರಮಗಳಂತಹ ವಿಷಯಗಳ ಬಗ್ಗೆ ಎಂಟು ಅಧಿವೇಶನಗಳಲ್ಲಿ ಚರ್ಚೆಗಳು ನಡೆಯಲಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ಆಂತರಿಕ ಭದ್ರತೆ ಮತ್ತು ಅದರ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಪರಿವರ್ತಕ ಬದಲಾವಣೆಗೆ ಒಳಗಾಗಿದೆ ಎಂದು ಗೃಹ ಸಚಿವರು ಹೇಳಿದರು. ಮುಂದಿನ 10 ವರ್ಷಗಳಲ್ಲಿ, ಭಾರತದ ಅಪರಾಧ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಆಧುನಿಕ, ವೈಜ್ಞಾನಿಕ ಮತ್ತು ವೇಗವನ್ನು ಗಳಿಸಿದ ವ್ಯವಸ್ಥೆಯಾಗಲಿದೆ. ಮೂರು ಹೊಸ ಕ್ರಿಮಿನಲ್ ಕಾನೂನುಗಳ ಸಂಪೂರ್ಣ ಅನುಷ್ಠಾನದೊಂದಿಗೆ, ಯಾವುದೇ ಪ್ರಕರಣದಲ್ಲಿ ಮೂರು ವರ್ಷಗಳಲ್ಲಿ, ಸುಪ್ರೀಂ ಕೋರ್ಟ್ ಮಟ್ಟದಲ್ಲಿಯೂ ನ್ಯಾಯವನ್ನು ನೀಡಲಾಗುವುದು ಎಂದು ಅವರು ನುಡಿದರು.

ದಶಕಗಳಿಂದ ಕಾಶ್ಮೀರ, ಈಶಾನ್ಯ ಮತ್ತು ನಕ್ಸಲ್ ಪೀಡಿತ ಪ್ರದೇಶಗಳನ್ನು ಪ್ರಕ್ಷುಬ್ಧ ಪ್ರದೇಶಗಳೆಂದು ಪರಿಗಣಿಸಲಾಗಿತ್ತು ಎಂದು ಹೇಳಿದ ಶ್ರೀ ಅಮಿತ್ ಶಾ, ಆದಾಗ್ಯೂ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸರ್ಕಾರವು ಭದ್ರತೆಯನ್ನು ಬಲಪಡಿಸಿದೆ ಮತ್ತು ಪ್ರದೇಶಗಳಲ್ಲಿನ ಪರಿಸ್ಥಿತಿಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿದೆ. ಕಳೆದ 10 ವರ್ಷಗಳಲ್ಲಿ, ಹಿಂದಿನ ದಶಕಕ್ಕೆ ಹೋಲಿಸಿದರೆ, ನಾವು ಹಿಂಸಾಚಾರವನ್ನು ಸುಮಾರು 70% ರಷ್ಟು ಯಶಸ್ವಿಯಾಗಿ ಕಡಿಮೆ ಮಾಡಿದ್ದೇವೆ ಎಂದು ಉಲ್ಲೇಖಿಸಿದರು. ಮೋದಿ ಸರ್ಕಾರದ ಕಳೆದ 10 ವರ್ಷಗಳಲ್ಲಿ, ಅಧಿಕಾರಿಗಳು 35,000 ಕೋಟಿ ಮೌಲ್ಯದ 5,45,000 ಕಿಲೋಗ್ರಾಂಗಳಷ್ಟು ಮಾದಕವಸ್ತುಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ, ಇದು ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 10 ವರ್ಷಗಳಲ್ಲಿ ವಶಪಡಿಸಿಕೊಂಡ ಮೊತ್ತಕ್ಕಿಂತ ಆರು ಪಟ್ಟು ಹೆಚ್ಚಾಗಿದೆ ಎಂದೂ ಶ್ರೀ ಶಾ ಹೇಳಿದರು. ಇದರರ್ಥ ಕಳೆದ 10 ವರ್ಷಗಳಲ್ಲಿ, ನಾವು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ವೈಜ್ಞಾನಿಕ ರೀತಿಯಲ್ಲಿ ಪುನರುಜ್ಜೀವನಗೊಳಿಸಿದ್ದೇವೆ ಮತ್ತು ಅದರಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ ಎಂದು ಅವರು ಹೇಳಿದರು.

0I9A3886.JPG

ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಗಣಕೀಕರಣವು ಮೊದಲ ಹೆಜ್ಜೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ದೇಶದ 100% ಪೊಲೀಸ್ ಠಾಣೆಗಳು, ಅಂದರೆ ಎಲ್ಲಾ 17,000 ಪೊಲೀಸ್ ಠಾಣೆಗಳನ್ನು ಗಣಕೀಕೃತಗೊಳಿಸಲಾಗಿದೆ ಹಾಗು ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಮತ್ತು ಸಿಸ್ಟಮ್ಸ್ (ಸಿಸಿಟಿಎನ್ಎಸ್) ಗೆ ಸಂಪರ್ಕಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಹೆಚ್ಚುವರಿಯಾಗಿ, 22,000 ನ್ಯಾಯಾಲಯಗಳನ್ನು ಇ-ಕೋರ್ಟ್ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ ಮತ್ತು ಎರಡು ಕೋಟಿಗೂ ಹೆಚ್ಚು ಕೈದಿಗಳ ಡೇಟಾ ಈಗ ಇ-ಜೈಲು ವ್ಯವಸ್ಥೆಯಡಿ ಲಭ್ಯವಿದೆ. ಇ-ಪ್ರಾಸಿಕ್ಯೂಷನ್ ಮೂಲಕ, 1.5 ಕೋಟಿಗೂ ಹೆಚ್ಚು ಪ್ರಾಸಿಕ್ಯೂಷನ್ಗಳ ಡೇಟಾ ಲಭ್ಯವಿದೆ ಮತ್ತು ಇ-ವಿಧಿವಿಜ್ಞಾನದ ಮೂಲಕ, 23 ಲಕ್ಷಕ್ಕೂ ಹೆಚ್ಚು ವಿಧಿವಿಜ್ಞಾನ ಫಲಿತಾಂಶಗಳ ಡೇಟಾವನ್ನು ಸಹ ಪಡೆಯಬಹುದು. ರಾಷ್ಟ್ರೀಯ ಸ್ವಯಂಚಾಲಿತ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಶನ್ ಸಿಸ್ಟಮ್ (ಎನ್ ಎಎಫ್ ಐಎಸ್) ಅಡಿಯಲ್ಲಿ 1.6 ಕೋಟಿ ಫಿಂಗರ್ ಪ್ರಿಂಟ್ ದಾಖಲೆಗಳು ಲಭ್ಯವಿವೆ. ಇದಲ್ಲದೆ, ಭಯೋತ್ಪಾದನೆಯ ಸಮಗ್ರ ಮೇಲ್ವಿಚಾರಣೆ (ಐಎಂಒಟಿ) ವ್ಯವಸ್ಥೆಯು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಮೇಲ್ವಿಚಾರಣೆಗಾಗಿ 22,000 ಭಯೋತ್ಪಾದನೆ ಸಂಬಂಧಿತ ಪ್ರಕರಣಗಳ ಡೇಟಾವನ್ನು ಒದಗಿಸುತ್ತದೆ. ಬಂಧಿತ ನಾರ್ಕೋ ಅಪರಾಧಿಗಳ ರಾಷ್ಟ್ರೀಯ ಸಮಗ್ರ ಡೇಟಾಬೇಸ್ (ಎನ್ಐಡಿಎಎಎನ್) ಅಡಿಯಲ್ಲಿ, 7.6 ಲಕ್ಷ ಮಾದಕವಸ್ತು ಅಪರಾಧಿಗಳ ಡೇಟಾ ಲಭ್ಯವಿದೆ. ಜೊತೆಗೆ, ಮಾನವ ಕಳ್ಳಸಾಗಣೆ ಅಪರಾಧಿಗಳ ರಾಷ್ಟ್ರೀಯ ಡೇಟಾಬೇಸ್ (ಎನ್ಡಿಎಚ್ಟಿಒ) ಅಡಿಯಲ್ಲಿ, ಸುಮಾರು ಒಂದು ಲಕ್ಷ ಮಾನವ ಕಳ್ಳಸಾಗಣೆದಾರರ ಡೇಟಾವನ್ನು ಪ್ರವೇಶಿಸಬಹುದು. ಇದಲ್ಲದೆ, ಕ್ರೈಮ್ ಮಲ್ಟಿ-ಏಜೆನ್ಸಿ ಸೆಂಟರ್ (ಸಿಆರ್ಐ-ಮ್ಯಾಕ್) 16 ಲಕ್ಷಕ್ಕೂ ಹೆಚ್ಚು ಎಚ್ಚರಿಕೆಗಳನ್ನು/ಜಾಗೃತಿಗಳನ್ನು ಸೃಷ್ಟಿಸಿದೆ.

ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ತರುವ ಮೊದಲೇ, ಮೋದಿ ಸರ್ಕಾರವು ನ್ಯಾಯಾಲಯ, ಪ್ರಾಸಿಕ್ಯೂಷನ್, ಪೊಲೀಸ್, ಜೈಲು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಗಳನ್ನು ಸಂಪರ್ಕಿಸುವ ಸಮಗ್ರ ವ್ಯವಸ್ಥೆಯನ್ನು ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಬ್ರಿಟಿಷರು ತಮ್ಮ ಸರ್ಕಾರವನ್ನು ರಕ್ಷಿಸಲು 150 ವರ್ಷಗಳ ಹಿಂದೆ ಕಾನೂನುಗಳನ್ನು ಮಾಡಿದ್ದರು ಮತ್ತು ಅವು ನಾಗರಿಕ ಕೇಂದ್ರಿತವಾಗಿರಲಿಲ್ಲ ಎಂದು ಅವರು ಹೇಳಿದರು. ಮೋದಿ ಸರ್ಕಾರ ಪರಿಚಯಿಸಿದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ದೇಶದ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂವಿಧಾನವು ನೀಡಿರುವ ಹಕ್ಕುಗಳನ್ನು ರಕ್ಷಿಸುವತ್ತ ಗಮನ ಹರಿಸುತ್ತವೆ ಎಂದು ಗೃಹ ಸಚಿವರು ಹೇಳಿದರು. ಭವಿಷ್ಯದಲ್ಲಿ ತಾಂತ್ರಿಕ ಬದಲಾವಣೆಗಳಿಂದಾಗಿ ಕಾನೂನನ್ನು ಬದಲಾಯಿಸುವ ಅಗತ್ಯವಿಲ್ಲದ ರೀತಿಯಲ್ಲಿ ಹೊಸ ಮೂರು ಕಾನೂನುಗಳಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಈ ಕಾನೂನುಗಳಲ್ಲಿ ತ್ವರಿತ ನ್ಯಾಯವನ್ನು ಪಡೆಯುವ ವ್ಯವಸ್ಥೆ ಇರುತ್ತದೆ ಎಂದೂ ಶ್ರೀ ಶಾ ಹೇಳಿದರು. ಪೊಲೀಸರನ್ನು ಉತ್ತರದಾಯಿ ಮತ್ತು ಬಲಶಾಲಿಯನ್ನಾಗಿ ಮಾಡಲು ಕಾನೂನುಗಳಲ್ಲಿ ಅನೇಕ ನಿಬಂಧನೆಗಳನ್ನು ಸಹ ಮಾಡಲಾಗಿದೆ ಎಂದು ಅವರು ಹೇಳಿದರು. ಭಾರತದ ಪ್ರತಿಯೊಬ್ಬ ನಾಗರಿಕರಿಗೆ ತ್ವರಿತ ಮತ್ತು ಪ್ರವೇಶಿಸಬಹುದಾದ ನ್ಯಾಯವನ್ನು ಒದಗಿಸುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ ಎಂದು ಶ್ರೀ ಶಾ ನುಡಿದರು.

ಕೃತಕ ಬುದ್ಧಿಮತ್ತೆ (ಎಐ) ಬಳಕೆಯ ಮೂಲಕ ಸಂಗ್ರಹಿಸಿದ ವಿವಿಧ ಡೇಟಾವನ್ನು ಸಾಮೂಹಿಕವಾಗಿ ಸಂಯೋಜಿಸಲು ಮತ್ತು ಬಳಸಲು ಸಾಧ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದು ಪೊಲೀಸ್ ವಿಜ್ಞಾನ ಸಮ್ಮೇಳನದ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು  ಮತ್ತು ಸಹಕಾರ ಸಚಿವರೂ ಆಗಿರುವ ಶ್ರೀ ಅಮಿತ್ ಶಾ ಹೇಳಿದರು. ಈ ದತ್ತಾಂಶದ ಬಳಕೆಯಿಂದ ಬರುವ ಫಲಿತಾಂಶಗಳನ್ನು ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ವಿಶ್ಲೇಷಣೆಗೆ ವೇದಿಕೆಯನ್ನು ರಚಿಸಲು ಬಳಸಬಹುದು ಎಂದು ಅವರು ಹೇಳಿದರು. ಈ ವಿಶ್ಲೇಷಣೆಯ ನಂತರ, ಅಪರಾಧ ತನಿಖೆ ಮತ್ತು ಅಪರಾಧಗಳನ್ನು ತಡೆಗಟ್ಟಲು ತ್ವರಿತ ನ್ಯಾಯಕ್ಕಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಬಹುದು. ಪೊಲೀಸ್ ವಿಜ್ಞಾನ ಸಮ್ಮೇಳನವು ಇಂತಹ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಇಡೀ ಪ್ರಕ್ರಿಯೆಯು ಪ್ರಯೋಜನಕಾರಿಯಾಗಲಿದೆ ಎಂದು ಶ್ರೀ ಶಾ ಹೇಳಿದರು. ಇದನ್ನು ಸಾಧಿಸಲು, ಹೆಚ್ಚಿನ ಸಂಖ್ಯೆಯ ಹ್ಯಾಕಥಾನ್ ಗಳನ್ನು ಆಯೋಜಿಸಬೇಕು ಎಂದು ಗೃಹ ಸಚಿವರು ಹೇಳಿದರು. ಇದಲ್ಲದೆ, ಸಮಸ್ಯೆಗಳನ್ನು ಪರಿಹರಿಸಲು, ಎಐ ತಜ್ಞರೊಂದಿಗೆ ಕೆಲಸ ಮಾಡುವ ಮೂಲಕ ಸಂಗ್ರಹಿಸಿದ ವಿವಿಧ ಡೇಟಾದ ಉಪಯುಕ್ತತೆಯನ್ನು ಹೆಚ್ಚಿಸಬೇಕು ಮತ್ತು ಇದರಿಂದ ಪಡೆದ ವಿಶ್ಲೇಷಣೆಯನ್ನು ವ್ಯವಸ್ಥೆಯನ್ನು ಸುಧಾರಿಸಲು ಬಳಸಬೇಕು ಎಂದವರು ಸಲಹೆ ಮಾಡಿದರು.

9B7A0558.JPG

ಮುಂಬರುವ ದಿನಗಳಲ್ಲಿ, ಭಾರತ ಮತ್ತು ಇಡೀ ಜಗತ್ತಿಗೆ ಅನೇಕ ಸವಾಲುಗಳು ಎದುರಾಗಲಿವೆ,  ಇದಕ್ಕಾಗಿ ನಾವು ಭಾರತದಲ್ಲಿ ಪರಿಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಕಾನೂನು ಜಾರಿ ಸಂಸ್ಥೆಗಳು ಯಾವಾಗಲೂ ಅಪರಾಧಿಗಳಿಗಿಂತ ಮುಂದಿರಬೇಕಾದ 5 ಕ್ಷೇತ್ರಗಳಿವೆ ಎಂದು ಶ್ರೀ ಶಾ ಹೇಳಿದರು. ಸೈಬರ್ ಅಪರಾಧವನ್ನು ನಿಭಾಯಿಸುವುದು, ಒಳನುಸುಳುವಿಕೆಯನ್ನು ತಡೆಗಟ್ಟುವುದು ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಗಡಿಗಳನ್ನು ಭದ್ರಪಡಿಸುವುದು, ಡ್ರೋನ್ಗಳ ಅಕ್ರಮ ಬಳಕೆಯನ್ನು ನಿಲ್ಲಿಸುವುದು, ಮಾದಕವಸ್ತುಗಳ ತನಿಖೆ ಮತ್ತು ಜಾಗೃತಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಗರಿಷ್ಠಗೊಳಿಸುವುದು ಮತ್ತು ಡಾರ್ಕ್ ವೆಬ್ ದುರುಪಯೋಗವನ್ನು ತಡೆಗಟ್ಟುವುದು ಮತ್ತು ನಿಭಾಯಿಸುವುದು ಇವುಗಳಲ್ಲಿ ಸೇರಿವೆ ಎಂದು ಅವರು ಉಲ್ಲೇಖಿಸಿದರು. ಈ ಐದು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಬಿಪಿಆರ್ ಮತ್ತು ಡಿ ಹಾಗು ಪೊಲೀಸ್ ವಿಜ್ಞಾನ ಸಮ್ಮೇಳನವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಮರ್ಥ ವ್ಯಕ್ತಿಗಳೊಂದಿಗೆ ಸಹಯೋಗ ಮಾಡಬೇಕು ಎಂದು ಶ್ರೀ ಶಾ ಹೇಳಿದರು.

9B7A0540 (1).JPG

ನ್ಯಾಯಾಲಯಗಳು, ಪ್ರಾಸಿಕ್ಯೂಷನ್, ಪೊಲೀಸ್, ಸಿಎಪಿಎಫ್ ಗಳು ಮತ್ತು ರಾಜ್ಯ ಮೀಸಲು ಪೊಲೀಸರು ಒಟ್ಟಾಗಿ ಸುಮಾರು 10 ಕೋಟಿ ಜನರ ಅವಿಭಕ್ತ ಕುಟುಂಬವನ್ನು ರೂಪಿಸುತ್ತಾರೆ, ಇದು ನಮ್ಮ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪೊಲೀಸ್ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸುವ ಜನರು ಚರ್ಚೆ ಮತ್ತು ಎಲ್ಲರನ್ನು ಒಳಗೊಳ್ಳುವ ಅಂತರ್ಗತ ವಿಧಾನಗಳ ಮೂಲಕ ಇಡೀ ದೇಶವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಮುಂದಿನ 10 ವರ್ಷಗಳ ಪೊಲೀಸ್ ವಿಜ್ಞಾನ ಸಮ್ಮೇಳನಕ್ಕಾಗಿ ಬಿಪಿಆರ್ &ಡಿ ಮಾರ್ಗಸೂಚಿಯನ್ನು ರಚಿಸಬೇಕು, ಇದರಲ್ಲಿ ವಾರ್ಷಿಕ ವಿಮರ್ಶೆಗಳು, ಐದು ವರ್ಷಗಳ ವಿಮರ್ಶೆ ಮತ್ತು ಐದು ವರ್ಷಗಳ ನಂತರ ಮರು ಮೌಲ್ಯಮಾಪನ ಸೇರಿರಬೇಕು ಎಂದು ಗೃಹ ಸಚಿವರು ಹೇಳಿದರು. ಮುಂದಿನ 10 ವರ್ಷಗಳಲ್ಲಿ ನಾವು ನಮ್ಮ ಗಮ್ಯಸ್ಥಾನವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ರೀತಿಯಲ್ಲಿ ಈ ಮಾರ್ಗಸೂಚಿಯನ್ನು ವಿನ್ಯಾಸಗೊಳಿಸಬೇಕು ಎಂದು ಅವರು ಒತ್ತಿ ಹೇಳಿದರು, ಆಗ ಮಾತ್ರ ಬಿಪಿಆರ್ &ಡಿ ಮತ್ತು ಪೊಲೀಸ್ ವಿಜ್ಞಾನ ಸಮ್ಮೇಳನವನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ್ ಎಂದವರು ನುಡಿದರು.

 

*****


(Release ID: 2074910) Visitor Counter : 27