ಉಪರಾಷ್ಟ್ರಪತಿಗಳ ಕಾರ್ಯಾಲಯ
ಭಾರತೀಯ ಕಲೆ ವಿಭಜಿತ ಜಗತ್ತಿನಲ್ಲಿ ಸಾಮರಸ್ಯದ ಮಾದರಿಯನ್ನು ನೀಡುತ್ತದೆ ಎಂದು ಉಪರಾಷ್ಟ್ರಪತಿಯರು ಹೇಳಿದರು
ಅತಿಕ್ರಮಣಗಳು ಮತ್ತು ಸಂಘರ್ಷಗಳ ಕತ್ತಲ ಹಾದಿಯಲ್ಲಿ, ನೃತ್ಯ ಮತ್ತು ಸಂಗೀತದ ಬೆಳಕು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಿ ಜನರನ್ನು ಒಗ್ಗೂಡಿಸುತ್ತದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು
ನಮ್ಮ ಸಾಂಸ್ಕೃತಿಕ ಪುನರುಜ್ಜೀವನವು ಪ್ರಾಚೀನ ಜ್ಞಾನವನ್ನು ಆಧುನಿಕ ಆಚರಣೆಗಳೊಂದಿಗೆ ಹಿತವಾದ ರೀತಿಯಲ್ಲಿ ಸಮನ್ವಯಗೊಳಿಸುತ್ತಿದ್ದು, ಭಾರತವನ್ನು ಸಾಂಸ್ಕೃತಿಕ ಮಹಾಶಕ್ತಿಯಶಗಿ ಮತ್ತಷ್ಟು ಬಲಪಡಿಸುತ್ತಿದೆ ಎಂದು ಉಪರಾಷ್ಟ್ರಪತಿಯರು ಹೇಳಿದರು
ಕಲೆ ಪ್ರಾಬಲ್ಯವನ್ನು ಸೂಚಿಸುವುದಿಲ್ಲ, ಅದು ಒಗ್ಗೂಡುವಿಕೆಯನ್ನು ಪ್ರತಿಪಾದಿಸುತ್ತದೆ ಎಂದು ಉಪರಾಷ್ಟ್ರಪತಿಯರು ಒತ್ತಿಹೇಳಿದರು
ನೃತ್ಯವು ಸಾಂಸ್ಕೃತಿಕ ರಾಜತಂತ್ರದ ಒಂದು ದೊಡ್ಡ ಅಂಶವಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು
ಭಾರತವು ಲಲಿತ ಕಲೆಗಳ ಚಿನ್ನದ ಗಣಿಯಾಗಿದೆ ಎಂದು ಅಂತಾರಾಷ್ಟ್ರೀಯ ಭಾರತೀಯ ನೃತ್ಯ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಉಪರಾಷ್ಟ್ರಪತಿಯವರು ಹೇಳಿದರು
Posted On:
21 OCT 2024 9:25PM by PIB Bengaluru
ಭಾರತೀಯ ಕಲೆ, ವಿಶೇಷವಾಗಿ ನೃತ್ಯವು, ಹೆಚ್ಚು ಹೆಚ್ಚು ಸಂಘರ್ಷ ಮತ್ತು ವೈಮನಸ್ಸುಗಳಿಂದ ವಿಭಜನೆಯಾಗುತ್ತಿರುವ ಜಗತ್ತಿನಲ್ಲಿ ಸಾಮರಸ್ಯದ ಮಾದರಿಯನ್ನು ನೀಡುತ್ತದೆ ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಹೇಳಿದರು. ಗಡಿಯನ್ನು ದಾಟಿ ಜನರನ್ನು ಒಗ್ಗೂಡಿಸುವ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಶಕ್ತಿಯನ್ನು ಒತ್ತಿ ಹೇಳಿದ ಅವರು, "ಸಂಘರ್ಷಗಳು, ಉಲ್ಲಂಘನೆಗಳು ಮತ್ತು ಭಿನ್ನಾಭಿಪ್ರಾಯಗಳೊಂದಿಗೆ ಹೋರಾಡುತ್ತಿರುವ ಜಗತ್ತಿನಲ್ಲಿ ಭಾರತೀಯ ಕಲೆಯು ಬೆಳಕಿನ ಕಿರಣವನ್ನು ನೀಡುತ್ತದೆ. ಸವಾಲುಗಳಿಂದ ತುಂಬಿದ, ವಿಭಜನೆಯ ಕತ್ತಲೆ ದಾರಿಯಲ್ಲಿ ನಾವು ನಡೆಯುತ್ತಿರುವಾಗ, ಎಲ್ಲಾ ಅಡೆತಡೆಗಳನ್ನು ಮೀರಿ ನಮ್ಮನ್ನು ಒಗ್ಗೂಡಿಸುವುದು ಸಂಸ್ಕೃತಿ, ನೃತ್ಯ ಮತ್ತು ಸಂಗೀತ. ಜಗತ್ತು ಎಷ್ಟೇ ಭಿನ್ನವಾಗಿದ್ದರೂ, ನಮ್ಮ ಸಂಸ್ಕೃತಿಯಿಂದ ತರಲ್ಪಡುವ ಏಕತೆಯು, ಭೇದಿಸಲಾಗದ, ಶಾಂತಿದಾಯಕ ಮತ್ತು ಶಾಶ್ವತವಾದುದು" ಎಂದು ಅವರು ಹೇಳಿದರು.
ಸಂಗೀತ ನಾಟಕ ಅಕಾಡೆಮಿ, ಸಾಂಸ್ಕೃತಿಕ ಸಚಿವಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ICCR) ಜಂಟಿಯಾಗಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಭಾರತೀಯ ನೃತ್ಯೋತ್ಸವದಲ್ಲಿ ಸೇರಿದ್ದ ಸಭಿಕರನ್ನುದ್ದೇಶಿಸಿ ಉಪರಾಷ್ಟ್ರಪತಿಗಳು ಮಾತನಾಡುತ್ತಿದ್ದರು. "ಪ್ರದರ್ಶನ ಕಲೆಗಳಿಗೆ ಒಗ್ಗೂಡಿಸುವ, ಗುಣಪಡಿಸುವ, ಸ್ಫೂರ್ತಿ ನೀಡುವ ಮತ್ತು ಪ್ರೇರೇಪಿಸುವ ಶಕ್ತಿ ಇದೆ. ನೃತ್ಯ ಕಲಾವಿದರು ಸಾಂಸ್ಕೃತಿಕ ಮತ್ತು ಶಾಂತಿ ರಾಯಭಾರಿಗಳಾಗಿದ್ದು, ಸಂವಾದವನ್ನು ಉತ್ತೇಜಿಸುತ್ತಾ, ಸೌಮ್ಯ ರಾಜತಾಂತ್ರಿಕ ನಡೆಗಳಿಗೆ ಅಡಿಪಾಯ ಹಾಕುತ್ತಾರೆ. ನೃತ್ಯವು ಸಾಂಸ್ಕೃತಿಕ ರಾಜತಂತ್ರದ ಒಂದು ಮಹತ್ವದ ಮುಖವಾಗಿದ್ದು, ಗಡಿಗಳ ಆಚೆಗೂ ತಿಳುವಳಿಕೆ ಮತ್ತು ಸಂಪರ್ಕವನ್ನು ಬೆಳೆಸುತ್ತದೆ " ಎಂದು ಅಅವರು ಹೇಳಿದರು.
ಶ್ರೀ ಧನಕರ್ ಅವರು ಭಾರತದ ಸಾಂಸ್ಕೃತಿಕ ಸಮೃದ್ಧಿಯನ್ನು ಹೊಗಳುತ್ತಾ, "ಭಾರತವು ಲಲಿತ ಕಲೆಗಳ ಚಿನ್ನದ ಗಣಿಯಾಗಿದೆ. ನಮ್ಮ ಸಾಂಸ್ಕೃತಿಕ ಪುನರುಜ್ಜೀವನವು ಪ್ರಾಚೀನ ಜ್ಞಾನವನ್ನು ಸಮಕಾಲೀನ ಅಭ್ಯಾಸಗಳೊಂದಿಗೆ ಸಂಯೋಜಿಸುತ್ತದೆ, ಇದು ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿ ಭಾರತದ ವರ್ಚಸ್ಸನ್ನು ಮತ್ತಷ್ಟು ಭದ್ರಪಡಿಸುತ್ತದೆ. ನಮ್ಮ ಜಿ20 ಅಧ್ಯಕ್ಷತೆಯ ಸಮಯದಲ್ಲಿ ಜಗತ್ತು ಇದಕ್ಕೆ ಸಾಕ್ಷಿಯಾಯಿತು, ಅಲ್ಲಿ ನಮ್ಮ ಸಂಸ್ಕೃತಿಯನ್ನು ಇಂದ್ರಿಯಗಳಿಗೆ ಹಬ್ಬದಂತೆ ಪ್ರದರ್ಶಿಸಲಾಯಿತು.ಸಂಸ್ಕೃತಿ, ನೃತ್ಯ ಮತ್ತು ಸಂಗೀತವು ಮಾನವಕುಲದ ಸಾರ್ವತ್ರಿಕ ಭಾಷೆಗಳಾಗಿವೆ, ಜಾಗತಿಕವಾಗಿ ಅರ್ಥಮಾಡಿಕೊಳ್ಳಲಾಗಿದೆ ಮತ್ತು ಮೆಚ್ಚುಗೆ ಪಡೆದಿದೆ.
ಉಪರಾಷ್ಟ್ರಪತಿಗಳು ಜಾಗತಿಕ ಸಂಸ್ಕೃತಿಯ ಮೇಲೆ ಭಾರತದ ಐತಿಹಾಸಿಕ ಪ್ರಭಾವವನ್ನು, ವಿಶೇಷವಾಗಿ ನಮ್ಮ ಮಹಾಕಾವ್ಯಗಳ ಮೂಲಕ ಉಂಟಾದ ಪ್ರಭಾವವನ್ನು ಒತ್ತಿ ಹೇಳಿದರು: ʼʼಕಲೆ ಪ್ರಾಬಲ್ಯವನ್ನು ವ್ಯಾಖ್ಯಾನಿಸುವುದಿಲ್ಲ; ಅದು ಏಕೀಕರಣವನ್ನು ವ್ಯಾಖ್ಯಾನಿಸುತ್ತದೆ. ಅಂಕೋರ್ ವಾಟ್ ನಲ್ಲಿ ಗೋಚರಿಸುವ ರಾಮಾಯಣವು ಆಗ್ನೇಯ ಏಷ್ಯಾಕ್ಕೆ ಹರಡಿರುವುದು ನಮ್ಮ ಸಾಂಸ್ಕೃತಿಕ ರಾಜತಾಂತ್ರಿಕತೆಗೆ ಸಾಕ್ಷಿಯಾಗಿದೆ. ನಾನು ಅಂಕೊರ್ ವಾಟ್ ಗೆ ಭೇಟಿ ನೀಡಿದಾಗ, ಸಂಕೀರ್ಣವಾದ ಕೆತ್ತನೆಗಳಿಂದ ನಾನು ದಿಗ್ಭ್ರಮೆಗೊಂಡಿದ್ದೆ-ಅದು ಕಲ್ಲು ಮಾತನಾಡುತ್ತಿರುವಂತಿದೆ. ಇದು ಸಾಂಸ್ಕೃತಿಕ ರಾಜತಾಂತ್ರಿಕತೆಗೆ ಭಾರತೀಯ ಕಲೆಯ ಸಾಮರ್ಥ್ಯವನ್ನು ತೋರಿಸುತ್ತದೆ "ಎಂದು ಹೇಳಿದರು.
ಗತಕಾಲದಲ್ಲಿ ದಬ್ಬಾಳಿಕೆಯ ಅವಧಿಯಲ್ಲಿ ಭಾರತದ ಕಲಾ ಪರಂಪರೆಗಳು ಎದುರಿಸಿದ ಸವಾಲುಗಳ ಬಗ್ಗೆ ಉಪರಾಷ್ಟ್ರಪತಿಗಳು, "ನಮ್ಮ ಇತಿಹಾಸದಲ್ಲಿ, ಸುಮಾರು 400-500 ವರ್ಷಗಳ ಹಿಂದೆ, ಆ ಕಾಲದ ಆಡಳಿತಗಾರರು ಸಂಗೀತವನ್ನು ತ್ಯಜಿಸಿದ ಕಾಲವೊಂದಿತ್ತು. ನಮ್ಮ ಅತ್ಯಂತ ಅಮೂಲ್ಯವಾದ ಸಾಂಸ್ಕೃತಿಕ ಸಂಪತ್ತನ್ನು ಅವುಗಳ ಮೌಲ್ಯಗಳಿಗೆ ವಿರುದ್ಧವೆಂದು ಪರಿಗಣಿಸಲಾಗಿತ್ತು. ಆದರೆ ನೃತ್ಯ ಮತ್ತು ಸಂಗೀತವನ್ನು ಪೋಷಿಸಿ ಮುಂದುವರೆಸಿದವರು ಯಾವಾಗಲೂ ಗೌರವಾನ್ವಿತರಾಗಿ ಪರಿಗಣಿಸಲ್ಪಟ್ಟರು" ಎಂದು ಹೇಳಿದರು.
ಶ್ರೀ ಧನಕರ್ ಅವರು ಭಾರತದ ಪ್ರತಿಯೊಂದು ಪ್ರದೇಶದ ವಿಶಿಷ್ಟ ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿ ತೋರಿಸುತ್ತಾ, "ಈ ಮಹಾನ್ ಭೂಮಿಯ ಪ್ರತಿಯೊಂದು ಭಾಗದಲ್ಲೂ, ಜಿಲ್ಲೆಯಿಂದ ಜಿಲ್ಲೆಗೆ, ನೀವು ವಿಶಿಷ್ಟವಾದ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಣುತ್ತೀರಿ. 'ಒಂದು ಜಿಲ್ಲೆ, ಒಂದು ಉತ್ಪನ್ನ' ದಂತೆಯೇ, ನಾವು ನೃತ್ಯ, ಸಂಗೀತ ಮತ್ತು ಕಲೆಯ ಸ್ಥಳೀಯ ಸಂಪ್ರದಾಯಗಳಿಗೆ ಒತ್ತು ನೀಡುವ 'ಒಂದು ಜಿಲ್ಲೆ, ಒಂದು ಸಾಂಸ್ಕೃತಿಕ ಕಾರ್ಯಕ್ರಮ' ವನ್ನು ಗುರುತಿಸಬೇಕುʼʼ ಎಂದು ಹೇಳಿದರು.
ಪ್ರದರ್ಶನ ಕಲೆಗಳು ಭಾರತದ ಜಾಗತಿಕ ಘನತೆಗೆ ಕೊಡುಗೆ ನೀಡುವುದಷ್ಟೇ ಅಲ್ಲದೆ ದೇಶದ ಯುವಜನತೆಯ ಪೋಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಒತ್ತಿ ಹೇಳಿದರು: "ನಮ್ಮ ಯುವಜನರನ್ನು ನೃತ್ಯ, ಸಂಗೀತ ಮತ್ತು ಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರನ್ನು ಮಾದಕ ದ್ರವ್ಯ ಸೇವನೆಯಂತಹ ಹಾನಿಕಾರಕ ಚಟಗಳಿಂದ ದೂರವಿರಿಸಲು ಸಹಾಯವಾಗುತ್ತದೆ ಮತ್ತು ಸಕಾರಾತ್ಮಕ, ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಕಲೆಗಳ ಮೂಲಕ ಪೋಷಿತವಾಗುವ ಸಕಾರಾತ್ಮಕತೆ ಮತ್ತು ಮಾನವೀಯ ಕಲ್ಯಾಣವು ನಮ್ಮ ಸಮಾಜದ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ" ಎಂದು ಹೇಳಿದರು.
ಭಾರತದ ರೋಮಾಂಚಕ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಸಂಪ್ರದಾಯಗಳ ಬಗ್ಗೆ ಮಾತನಾಡುತ್ತಾ ಉಪರಾಷ್ಟ್ರಪತಿಗಳು, ಯುನೆಸ್ಕೋ ಕಲ್ಬೆಲಿಯಾ, ಗರ್ಬಾ ಮತ್ತು ಚೌ ಸೇರಿದಂತೆ ಎಂಟು ಭಾರತೀಯ ನೃತ್ಯ ಪ್ರಕಾರಗಳನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆಯೆಂದು ಗುರುತಿಸಿದ್ದರೂ, "ಇದು ಕೇವಲ ಆರಂಭ ಮಾತ್ರ" , ಭಾರತದ ಕಲಾತ್ಮಕ ಪರಂಪರೆಯು ಈ ಎಂಟು ರೂಪಗಳನ್ನು ಮೀರಿ ವಿಸ್ತರಿಸಿದೆ. ನಮ್ಮ ಕಡಿಮೆ-ಪ್ರಸಿದ್ಧವಾದ ನೃತ್ಯ ಪ್ರಕಾರಗಳನ್ನು ಸಹ ಸಂರಕ್ಷಿಸಿ ಆಚರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡಬೇಕು, ಅವುಗಳ ಅಳಿವನ್ನು ತಡೆಯಬೇಕು" ಎಂದು ಹೇಳಿದರು.
ಕಳೆದ ದಶಕದಲ್ಲಿ ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಅರ್ಹ ವ್ಯಕ್ತಿಗಳಿಗೆ ನೀಡಲಾದ ಇತ್ತೀಚಿನ ಮನ್ನಣೆಯನ್ನು ಶ್ಲಾಘಿಸಿದ ಶ್ರೀ ಧನಕರ್ ಅವರು, "ಕಳೆದ 10 ವರ್ಷಗಳಲ್ಲಿ, ಭಾರತೀಯ ಕಲೆಯ ಕ್ಷೇತ್ರದಲ್ಲಿ ಪ್ರಖ್ಯಾತ ಮತ್ತು ಅರ್ಹ ವ್ಯಕ್ತಿಗಳಿಗೆ ನೀಡಲಾದ ಮನ್ನಣೆಯು ಶ್ಲಾಘನೀಯ ಮತ್ತು ಸಂತಸದಾಯಕವಾಗಿರುವುದನ್ನು ನೋಡಿ ನಾನು ಹರ್ಷಗೊಂಡಿದ್ದೇನೆ. ಇದು ದೈನಂದಿನ ಜೀವನದ ಸವಾಲುಗಳನ್ನು ಜಯಿಸಲು ಮತ್ತು ನಮ್ಮ ಅದಮ್ಯ ಮನೋಭಾವವನ್ನು ಪೋಷಿಸಲು ನಮಗೆ ಸಹಾಯ ಮಾಡುತ್ತದೆ "ಎಂದು ಹೇಳಿದರು.
ಸಂಗೀತ ನಾಟಕ ಅಕಾಡೆಮಿಯ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, "ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವಲ್ಲಿ ಅಕಾಡೆಮಿಯ ನಿರಂತರ ಕಾರ್ಯವು ಈ ಸಂಪ್ರದಾಯಗಳನ್ನು ಮುನ್ನೆಲೆಗೆ ತರುವಲ್ಲಿ ಅಮೂಲ್ಯವಾಗಿದೆ" ಎಂದು ಹೇಳಿದರು.
ಉಪರಾಷ್ಟ್ರಪತಿಯವರು ಭಾರತದ ಸಾಂಸ್ಕೃತಿಕ ಪರಂಪರೆಯನ್ನು, ವಿಶೇಷವಾಗಿ ಕಡಿಮೆ ಪರಿಚಿತವಾದ ನೃತ್ಯ ರೂಪಗಳನ್ನು ಸಂರಕ್ಷಿಸಲು ಮತ್ತು ಪೋಷಿಸಲು ನಿರಂತರ ಪ್ರಯತ್ನಗಳನ್ನು ಮಾಡಬೇಕೆಂದು ಒತ್ತಾಯಿಸಿದರು, ಇದರಿಂದ ಅವು ಅಭಿವೃದ್ಧಿ ಹೊಂದಿ ರಾಷ್ಟ್ರದ ಗುರುತು ಮತ್ತು ಜಾಗತಿಕ ಪ್ರಭಾವಕ್ಕೆ ಕೊಡುಗೆ ನೀಡುತ್ತವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಭಾರತದ ಸಾಂಸ್ಕೃತಿಕ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಲೋಕಸಭಾ ಸದಸ್ಯೆ ಶ್ರೀಮತಿ ಹೇಮ ಮಾಲಿನಿ, ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಅರುನೀಶ್ ಚಾವ್ಲಾ, ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಡಾ. ಸಂಧ್ಯಾ ಪುರೇಚಾ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ಡಾ. ಪದ್ಮಾ ಸುಬ್ರಹ್ಮಣ್ಯಂ ಮತ್ತು ಇತರ ಗಣ್ಯರು ಹಾಜರಿದ್ದರು.
*****
(Release ID: 2066939)
Visitor Counter : 24