ಪ್ರಕಟಣಾ ದಿನಾಂಕ:
10 OCT 2024 5:29PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಇಂದು ಮುಂಬೈನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರವಾಗಿ ಗೃಹ ಸಚಿವರು ಪುಷ್ಪ ನಮನ ಅರ್ಪಿಸಿದರು.

"ರತನ್ ಟಾಟಾ ಅವರ ನಿಧನ ವಾರ್ತೆ ಕೇಳಿದ ಲಕ್ಷಾಂತರ ಭಾರತೀಯರು ಸಂತಾಪ ಸೂಚಿಸಲು ನೆರೆದಿದ್ದಾರೆ ಎಂದು ತಮ್ಮ 'X' ಪೋಸ್ಟ್ನಲ್ಲಿ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಬರೆದಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರವಾಗಿ ಪುಷ್ಪ ನಮನ ಸಲ್ಲಿಸಿದರು. ರತನ್ ಟಾಟಾ ಅವರು ಎಂದೆದಿಗೂ ದೇಶಭಕ್ತಿ ಮತ್ತು ಸಮಗ್ರತೆಯ ದಾರಿದೀಪವಾಗಿ ಸ್ಮರಿಸಲ್ಪಡುವರು. ಕೈಗಾರಿಕೋದ್ಯಮಿಯಾಗಿ ಪ್ರಪಂಚದಾದ್ಯಂತ ಗೌರವಿಸಲ್ಪಡುತ್ತಿದ್ದ, ಅವರು ಟಾಟಾ ಗ್ರೂಪ್ ಗೆ ಜಾಗತಿಕ ಪ್ರಾಮುಖ್ಯತೆ ತಂದುಕೊಟ್ಟರು. ರತನ್ ಟಾಟಾ ಅವರ ಜೀವನ ಮತ್ತು ರಾಷ್ಟ್ರದತ್ತ ಬದ್ಧತೆ ಭಾರತದ ಕೈಗಾರಿಕಾ ವಲಯದಲ್ಲಿ ಪ್ರೇರಣಾತ್ಮಕ ಮಾದರಿಯಾಗಿದೆ.”

“ಅವರು ಟಾಟಾ ಸಮೂಹ ಸಂಸ್ಥೆಗಳನ್ನು ಸ್ವಚ್ಛ ಕಾರ್ಪೊರೇಟ್ ಆಡಳಿತದೊಂದಿಗೆ ಮುನ್ನಡೆಸಿದರು, ನಿಯಮಗಳಿಗೆ ಬದ್ಧರಾಗಿದ್ದರು ಮತ್ತು ಟಾಟಾ ಟ್ರಸ್ಟ್ಗಳ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ರತನ್ ಟಾಟಾ ಅವರ ಪರಂಪರೆಯು ದೇಶದ ಕೈಗಾರಿಕಾ ವಲಯದ ಮುಂಚೂಣಿ ನಾಯಕರಿಗೆ ಸುದೀರ್ಘಕಾಲದವರೆಗೆ ಮಾರ್ಗದರ್ಶನ ನೀಡಲಿದೆ” ಎಂದು ಶ್ರೀ ಅಮಿತ್ ಶಾ ಹೇಳಿದರು.
“ಖ್ಯಾತ ಕೈಗಾರಿಕೋದ್ಯಮಿ ಮತ್ತು ನಿಜವಾದ ರಾಷ್ಟ್ರವಾದಿ ಶ್ರೀ ರತನ್ ಟಾಟಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತಮ್ಮ ಜೀವನವನ್ನು ನಿಸ್ವಾರ್ಥದಿಂದ ನಮ್ಮ ರಾಷ್ಟ್ರ ಅಭಿವೃದ್ಧಿಗೆ ಮುಡಿಪಾಗಿಟ್ಟವರು. ನಾನು ಅವರನ್ನು ಭೇಟಿಯಾದ ಪ್ರತಿ ಬಾರಿಯೂ, ಭಾರತ ಮತ್ತು ಇಲ್ಲಿಯ ಜನತೆಯ ಏಳಿಗೆಗಾಗಿ ಅವರಲ್ಲಿದ್ದ ಹುರುಪು ಮತ್ತು ಬದ್ಧತೆ ನನ್ನಲ್ಲಿ ಅಚ್ಚರಿ ಮೂಡಿಸುತ್ತಿತ್ತು. ನಮ್ಮ ದೇಶ ಮತ್ತು ಜನರ ಕಲ್ಯಾಣದ ಬಗ್ಗೆ ಅವರಿಗಿದ್ದ ಬದ್ಧತೆಯಿಂದಾಗಿ ಲಕ್ಷಾಂತರ ಕನಸುಗಳು ನನಸಾದವು. ಕಾಲವು ರತನ್ ಟಾಟಾ ಅವರನ್ನು ಅವರ ಪ್ರಿಯ ರಾಷ್ಟ್ರದಿಂದ ದೂರ ಮಾಡಲಾಗದು. ಅವರು ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ. ಟಾಟಾ ಗ್ರೂಪ್ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪ” ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಮತ್ತೊಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
*****