ಪ್ರಧಾನ ಮಂತ್ರಿಯವರ ಕಛೇರಿ
ಮಹಾರಾಷ್ಟ್ರದ ಮುಂಬೈಯಲ್ಲಿ ನಡೆದ ಅಭಿಜಿತ್ ಮರಾಠಿ ಭಾಷಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಮರಾಠಿಯನ್ನು ಶಾಸ್ತ್ರೀಯ(ಅಭಿಜಾತ) ಭಾಷೆಯಾಗಿ ಗುರುತಿಸಿರುವುದು ಎಲ್ಲರಿಗೂ ಹೆಮ್ಮೆಯ ಕ್ಷಣ: ಪ್ರಧಾನಮಂತ್ರಿ
ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಭಾಷೆಗಳಿಗೂ ಶಾಸ್ತ್ರೀಯ ಭಾಷೆಗಳ ಸ್ಥಾನಮಾನ ನೀಡಲಾಗಿದೆ, ಈ ಭಾಷೆಗಳಿಗೆ ಸಂಬಂಧಿಸಿದ ಜನತೆಯ ನಾನು ಅಭಿನಂದಿಸುತ್ತೇನೆ: ಪ್ರಧಾನಮಂತ್ರಿ
ಮರಾಠಿ ಭಾಷೆಯ ಇತಿಹಾಸ ಬಹಳ ಶ್ರೀಮಂತವಾಗಿದೆ: ಪ್ರಧಾನಮಂತ್ರಿ
ಮಹಾರಾಷ್ಟ್ರದ ಅನೇಕ ಕ್ರಾಂತಿಕಾರಿ ನಾಯಕರು ಮತ್ತು ಚಿಂತಕರು ಜನರಿಗೆ ಅರಿವು ಮೂಡಿಸಲು ಮತ್ತು ಒಗ್ಗೂಡಿಸಲು ಮರಾಠಿ ಭಾಷೆಯನ್ನು ಮಾಧ್ಯಮವಾಗಿ ಬಳಸಿದರು: ಪ್ರಧಾನಮಂತ್ರಿ
ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ಸಂಸ್ಕೃತಿ, ಇತಿಹಾಸ, ಸಂಪ್ರದಾಯ ಮತ್ತು ಸಾಹಿತ್ಯದೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ: ಪ್ರಧಾನಮಂತ್ರಿ
Posted On:
05 OCT 2024 8:50PM by PIB Bengaluru
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮರಾಠಿ ಭಾಷೆಗೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಶಾಸ್ತ್ರೀಯ (ಅಭಿಜಾತ) ಭಾಷೆಯ ಸ್ಥಾನಮಾನವನ್ನು ನೀಡಿದೆ ಎಂದರು. ಶ್ರೀ ಮೋದಿ ಅವರು ಈ ಕ್ಷಣದ ಮಹತ್ವವನ್ನು ಒತ್ತಿ ಹೇಳಿದರು, ಇದು ಮರಾಠಿ ಭಾಷೆಯ ಇತಿಹಾಸದಲ್ಲಿ ಸುವರ್ಣ ಮೈಲಿಗಲ್ಲು ಎಂದು ಬಣ್ಣಿಸಿದರು, ಏಕೆಂದರೆ ಮರಾಠಿ ಮಾತನಾಡುವ ಜನರ ದೀರ್ಘಕಾಲದ ಆಕಾಂಕ್ಷೆಗಳನ್ನು ಅವರು ಉಲ್ಲೇಖಿಸಿದರು ಮತ್ತು ಮಹಾರಾಷ್ಟ್ರದ ಕನಸನ್ನು ಈಡೇರಿಸಲು ಕೊಡುಗೆ ನೀಡುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಪ್ರಧಾನಮಂತ್ರಿಯವರು ಮಹಾರಾಷ್ಟ್ರದ ಜನರನ್ನು ಅಭಿನಂದಿಸಿದರು ಮತ್ತು ಈ ಐತಿಹಾಸಿಕ ಸಾಧನೆಯ ಭಾಗವಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಇದಲ್ಲದೆ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಭಾಷೆಗಳಿಗೂ ಶಾಸ್ತ್ರೀಯ ಭಾಷೆಗಳ ಸ್ಥಾನಮಾನವನ್ನು ನೀಡಲಾಗಿದೆ ಎಂದು ಪ್ರಧಾನಿ ಘೋಷಿಸಿದರು ಮತ್ತು ಈ ಭಾಷೆಗಳಿಗೆ ಸಂಬಂಧಿಸಿದ ಜನತೆಗೆ ಅಭಿನಂದನೆ ಸಲ್ಲಿಸಿದರು.
ಮರಾಠಿ ಭಾಷೆಯ ಇತಿಹಾಸವು ಬಹಳ ಶ್ರೀಮಂತವಾಗಿದೆ ಮತ್ತು ಈ ಭಾಷೆಯಿಂದ ಹೊರಹೊಮ್ಮಿದ ಜ್ಞಾನದ ಹೊಳೆಗಳು ಅನೇಕ ತಲೆಮಾರುಗಳಿಗೆ ಮಾರ್ಗದರ್ಶನ ನೀಡಿವೆ ಹಾಗು ಅವು ಇಂದಿಗೂ ನಮಗೆ ಮಾರ್ಗದರ್ಶನ ನೀಡುತ್ತಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಮರಾಠಿಯನ್ನು ಬಳಸಿಕೊಂಡು, ಸಂತ ಜ್ಞಾನೇಶ್ವರರು ವೇದಾಂತದ ಚರ್ಚೆಯೊಂದಿಗೆ ಜನರನ್ನು ಸಂಪರ್ಕಿಸಿದರು ಮತ್ತು ಜ್ಞಾನೇಶ್ವರ ಅವರು ಗೀತೆಯ ಅರಿವಿನೊಂದಿಗೆ ಭಾರತದ ಆಧ್ಯಾತ್ಮಿಕ ಜ್ಞಾನವನ್ನು ಪುನರುಜ್ಜೀವನಗೊಳಿಸಿದರು ಎಂದು ಅವರು ಹೇಳಿದರು. ಸಂತ ನಾಮದೇವ ಮರಾಠಿಯನ್ನು ಬಳಸಿಕೊಂಡು ಭಕ್ತಿ ಮಾರ್ಗದ ಪ್ರಜ್ಞೆಯನ್ನು ಬಲಪಡಿಸಿದರು, ಅದೇ ರೀತಿ, ಸಂತ ತುಕಾರಾಮ್ ಮರಾಠಿ ಭಾಷೆಯಲ್ಲಿ ಧಾರ್ಮಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ಸಂತ ಚೋಖಮೇಲಾ ಸಾಮಾಜಿಕ ಬದಲಾವಣೆಯ ಚಳುವಳಿಗಳನ್ನು ಸಶಕ್ತಗೊಳಿಸಿದರು ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಮಹಾರಾಷ್ಟ್ರ ಮತ್ತು ಮರಾಠಿ ಭಾಷೆಯ ಮಹಾನ್ ಸಂತರಿಗೆ ನಾನು ನಮಿಸುತ್ತೇನೆ" ಎಂದು ಶ್ರೀ ಮೋದಿ ಹೇಳಿದರು. ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದರಿಂದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪಟ್ಟಾಭಿಷೇಕದ 350 ನೇ ವರ್ಷದಲ್ಲಿ ಇಡೀ ದೇಶವು ಅವರನ್ನು ಗೌರವಿಸುತ್ತದೆ ಎಂದರ್ಥ ಎಂದೂ ಅವರು ನುಡಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮರಾಠಿ ಭಾಷೆಯ ಅಮೂಲ್ಯ ಕೊಡುಗೆಯನ್ನು ಎತ್ತಿ ತೋರಿಸಿದ ಪ್ರಧಾನ ಮಂತ್ರಿ, ಮಹಾರಾಷ್ಟ್ರದ ಹಲವಾರು ಕ್ರಾಂತಿಕಾರಿ ನಾಯಕರು ಮತ್ತು ಚಿಂತಕರು ಜಾಗೃತಿ ಮೂಡಿಸಲು ಮತ್ತು ಜನಸಾಮಾನ್ಯರನ್ನು ಒಗ್ಗೂಡಿಸಲು ಮರಾಠಿಯನ್ನು ಮಾಧ್ಯಮವಾಗಿ ಹೇಗೆ ಬಳಸಿದರು ಎಂಬುದನ್ನು ವಿವರಿಸಿದರು. ಲೋಕಮಾನ್ಯ ತಿಲಕರು ತಮ್ಮ ಮರಾಠಿ ದಿನಪತ್ರಿಕೆ 'ಕೇಸರಿ'ಯೊಂದಿಗೆ ವಿದೇಶಿ ಆಡಳಿತದ ಅಡಿಪಾಯವನ್ನೇ ಅಲುಗಾಡಿಸಿದರು ಮತ್ತು ಮರಾಠಿಯಲ್ಲಿ ಅವರ ಭಾಷಣಗಳು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಸ್ವರಾಜ್ಯದ ಬಯಕೆಯನ್ನು ಪ್ರಚೋದಿಸಿದವು ಎಂದು ಅವರು ಹೇಳಿದರು. ನ್ಯಾಯ ಮತ್ತು ಸಮಾನತೆಯ ಹೋರಾಟವನ್ನು ಮುನ್ನಡೆಸುವಲ್ಲಿ ಮರಾಠಿ ಭಾಷೆ ಪ್ರಮುಖ ಪಾತ್ರ ವಹಿಸಿದೆ ಎಂದು ಒತ್ತಿಹೇಳಿದ ಅವರು, ಗೋಪಾಲ್ ಗಣೇಶ್ ಅಗರ್ಕರ್ ಅವರಂತಹ ಇತರ ಗಣ್ಯರ ಕೊಡುಗೆಗಳನ್ನು ಸ್ಮರಿಸಿದರು, ಅವರು ತಮ್ಮ ಮರಾಠಿ ಪತ್ರಿಕೆ ಸುಧಾರಕ್ ಮೂಲಕ ಸಾಮಾಜಿಕ ಸುಧಾರಣೆಗಳಿಗಾಗಿ ಅಭಿಯಾನವನ್ನು ಮುನ್ನಡೆಸಿದರು, ಪ್ರತಿ ಮನೆಯನ್ನು ತಲುಪಿದರು. ಸ್ವಾತಂತ್ರ್ಯ ಹೋರಾಟವನ್ನು ಅದರ ಗುರಿಯತ್ತ ಕೊಂಡೊಯ್ಯಲು ಮರಾಠಿಯನ್ನು ಅವಲಂಬಿಸಿದ ಇನ್ನೊಬ್ಬ ಧೀಮಂತ ವ್ಯಕ್ತಿ ಗೋಪಾಲಕೃಷ್ಣ ಗೋಖಲೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.
ಮರಾಠಿ ಸಾಹಿತ್ಯವು ನಮ್ಮ ನಾಗರಿಕತೆಯ ಬೆಳವಣಿಗೆ ಮತ್ತು ಸಾಂಸ್ಕೃತಿಕ ಪ್ರಗತಿಯ ಕಥೆಗಳನ್ನು ಸಂರಕ್ಷಿಸುವ ಭಾರತದ ಅಮೂಲ್ಯ ಪರಂಪರೆಯಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಸ್ವರಾಜ್ಯ, ಸ್ವದೇಶಿ, ಮಾತೃಭಾಷೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಆದರ್ಶಗಳನ್ನು ಹರಡುವಲ್ಲಿ ಮರಾಠಿ ಸಾಹಿತ್ಯವು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಗಣೇಶ ಉತ್ಸವ ಮತ್ತು ಶಿವ ಜಯಂತಿ ಆಚರಣೆಗಳು, ವೀರ್ ಸಾವರ್ಕರ್ ಅವರ ಕ್ರಾಂತಿಕಾರಿ ಚಿಂತನೆಗಳು, ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದ ಸಾಮಾಜಿಕ ಸಮಾನತೆ ಚಳವಳಿ, ಮಹರ್ಷಿ ಕರ್ವೆ ಅವರ ಮಹಿಳಾ ಸಬಲೀಕರಣ ಅಭಿಯಾನ ಮತ್ತು ಮಹಾರಾಷ್ಟ್ರದಲ್ಲಿ ಕೈಗಾರಿಕೀಕರಣ ಹಾಗು ಕೃಷಿ ಸುಧಾರಣೆಗಳಂತಹ ಪ್ರಯತ್ನಗಳು ಮರಾಠಿ ಭಾಷೆಯಲ್ಲಿ ತಮ್ಮ ಶಕ್ತಿಯನ್ನು ಕಂಡುಕೊಂಡವು ಎಂದು ಅವರು ಒತ್ತಿ ಹೇಳಿದರು. ಮರಾಠಿ ಭಾಷೆಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನಮ್ಮ ದೇಶದ ಸಾಂಸ್ಕೃತಿಕ ವೈವಿಧ್ಯತೆಯು ಮತ್ತಷ್ಟು ಶ್ರೀಮಂತಗೊಳ್ಳುತ್ತದೆ ಎಂದು ಅವರು ಹೇಳಿದರು.
"ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ಸಂಸ್ಕೃತಿ, ಇತಿಹಾಸ, ಸಂಪ್ರದಾಯ ಮತ್ತು ಸಾಹಿತ್ಯದೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ" ಎಂದು ಪ್ರಧಾನಿ ಉದ್ಗರಿಸಿದರು. ಪೊವಾಡಾ ಎಂಬ ಜಾನಪದ ಗೀತೆಯ ಬಗ್ಗೆ ಮಾತನಾಡಿದ ಶ್ರೀ ಮೋದಿ, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಇತರ ವೀರರ ಶೌರ್ಯದ ಕಥೆಗಳು ಹಲವಾರು ಶತಮಾನಗಳ ನಂತರವೂ ನಮ್ಮನ್ನು ತಲುಪಿವೆ ಎಂದರು. ಪೊವಾಡಾ ಇಂದಿನ ಪೀಳಿಗೆಗೆ ಮರಾಠಿ ಭಾಷೆಯ ಅದ್ಭುತ ಕೊಡುಗೆಯಾಗಿದೆ ಎಂದು ಅವರು ಹೇಳಿದರು. ಇಂದು ನಾವು ಗಣಪತಿಯನ್ನು ಪೂಜಿಸುವಾಗ, 'ಗಣಪತಿ ಬಪ್ಪಾ ಮೋರ್ಯ' ಎಂಬ ಪದಗಳು ಸ್ವಾಭಾವಿಕವಾಗಿ ನಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತವೆ ಮತ್ತು ಇದು ಕೇವಲ ಕೆಲವು ಪದಗಳ ಸಂಯೋಜನೆಯಲ್ಲ, ಬದಲು ಅದು ಭಕ್ತಿಯ ನಿರಂತರ ಚಿಲುಮೆ, ಹರಿವು ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಭಕ್ತಿಯು ಇಡೀ ದೇಶವನ್ನು ಮರಾಠಿ ಭಾಷೆಯೊಂದಿಗೆ ಸಂಪರ್ಕಿಸುತ್ತದೆ ಎಂದು ಅವರು ಹೇಳಿದರು. ಅದೇ ರೀತಿ, ಶ್ರೀ ವಿಠ್ಠಲರ ಅಭಾಂಗ್ ಕೇಳುವವರು ಕೂಡಾ ತಮ್ಮಿಂದ ತಾವೇ ಮರಾಠಿಯೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಮರಾಠಿ ಸಾಹಿತಿಗಳು, ಬರಹಗಾರರು, ಕವಿಗಳು ಮತ್ತು ಅಸಂಖ್ಯಾತ ಮರಾಠಿ ಪ್ರೇಮಿಗಳು ಮರಾಠಿ ಭಾಷೆಗೆ ನೀಡಿದ ಕೊಡುಗೆಗಳು ಮತ್ತು ಪ್ರಯತ್ನಗಳನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಭಾಷೆಗೆ ಶಾಸ್ತ್ರೀಯ ಸ್ಥಾನಮಾನದ ಮಾನ್ಯತೆಯು ಅನೇಕ ಪ್ರತಿಭಾವಂತ ಸಾಹಿತಿಗಳ ಸೇವೆಯ ಫಲವಾಗಿದೆ ಎಂದರು. ಬಾಲಶಾಸ್ತ್ರಿ ಜಂಭೇಕರ್, ಮಹಾತ್ಮಾ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಕೃಷ್ಣಜಿ ಪ್ರಭಾಕರ್ ಖಾಡಿಲ್ಕರ್, ಕೇಶವಸುತ್, ಶ್ರೀಪಾದ್ ಮಹಾದೇವ್ ಮಾತೆ, ಆಚಾರ್ಯ ಅತ್ರೆ, ಅಣ್ಣಾ ಭಾವು ಸಾಥೆ, ಶಾಂತಾಬಾಯಿ ಶೆಲ್ಕೆ, ಗಜಾನನ್ ದಿಗಂಬರ ಮಡ್ಗುಲ್ಕರ್, ಕುಸುಮಾಗ್ರಜ್ ಅವರಂತಹ ವ್ಯಕ್ತಿಗಳ ಕೊಡುಗೆಗೆ ಸಾಟಿಯಿಲ್ಲ ಎಂದೂ ಪ್ರಧಾನ ಮಂತ್ರಿ ಹೇಳಿದರು. ಮರಾಠಿ ಸಾಹಿತ್ಯದ ಪರಂಪರೆ ಪ್ರಾಚೀನ ಮಾತ್ರವಲ್ಲ, ಬಹುಮುಖಿಯೂ ಆಗಿದೆ ಎಂದು ಪ್ರಧಾನಿ ನುಡಿದರು. ವಿನೋಬಾ ಭಾವೆ, ಶ್ರೀಪಾದ್ ಅಮೃತ್ ಡಾಂಗೆ, ದುರ್ಗಾಬಾಯಿ ಭಾಗವತ್, ಬಾಬಾ ಆಮ್ಟೆ, ದಲಿತ ಸಾಹಿತಿ ದಯಾ ಪವಾರ್, ಬಾಬಾ ಸಾಹೇಬ್ ಪುರಂದರೆ ಅವರಂತಹ ಅನೇಕ ವ್ಯಕ್ತಿಗಳು ಮರಾಠಿ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು. ಪುರುಷೋತ್ತಮ ಲಕ್ಷ್ಮಣ ದೇಶಪಾಂಡೆ, ಡಾ. ಅರುಣಾ ಧರೆ, ಡಾ. ಸದಾನಂದ ಮೋರೆ, ಮಹೇಶ್ ಎಲ್ಕುಂಚ್ವಾರ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಮದೇವ್ ಕಾಂಬ್ಳೆ ಸೇರಿದಂತೆ ಮರಾಠಿಗೆ ಸೇವೆ ಸಲ್ಲಿಸಿದ ಎಲ್ಲ ಸಾಹಿತಿಗಳ ಕೊಡುಗೆಯನ್ನು ಶ್ರೀ ಮೋದಿ ಸ್ಮರಿಸಿದರು. ಆಶಾ ಬಾಗೆ, ವಿಜಯ ರಾಜಾಧ್ಯಾಕ್ಷ, ಡಾ.ಶರಣಕುಮಾರ ಲಿಂಬಳೆ, ರಂಗ ನಿರ್ದೇಶಕ ಚಂದ್ರಕಾಂತ ಕುಲಕರ್ಣಿ ಅವರಂತಹ ಅನೇಕ ದಿಗ್ಗಜರು ಬಹಳ ವರ್ಷಗಳಿಂದ ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಕನಸು ಕಂಡಿದ್ದರು ಎಂದೂ ಪ್ರಧಾನ ಮಂತ್ರಿ ಹೇಳಿದರು.
ಮರಾಠಿ ಚಿತ್ರರಂಗ, ಸಾಹಿತ್ಯ ಮತ್ತು ಸಂಸ್ಕೃತಿಯ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಿ, ವಿ.ಶಾಂತಾರಾಮ್ ಮತ್ತು ದಾದಾಸಾಹೇಬ್ ಫಾಲ್ಕೆ ಅವರಂತಹ ದಂತಕಥೆಗಳ ರೀತಿಯ ವ್ಯಕ್ತಿಗಳು ಭಾರತೀಯ ಚಿತ್ರರಂಗಕ್ಕೆ ಅಡಿಪಾಯ ಹಾಕಿದರು ಎಂದರು. ತುಳಿತಕ್ಕೊಳಗಾದವರಿಗೆ ಮತ್ತು ಪ್ರಸಿದ್ಧ ಮರಾಠಿ ಸಂಗೀತ ಸಂಪ್ರದಾಯಗಳಿಗೆ ಧ್ವನಿ ನೀಡಿದ್ದಕ್ಕಾಗಿ ಮರಾಠಿ ರಂಗಭೂಮಿಯನ್ನು ಶ್ಲಾಘಿಸಿದ ಅವರು, ಬಾಲ ಗಂಧರ್ವ, ಭೀಮಸೇನ್ ಜೋಶಿ ಮತ್ತು ಲತಾ ಮಂಗೇಶ್ಕರ್ ಅವರಂತಹ ಐಕಾನ್ ಗಳನ್ನು ಅವರ ಕೊಡುಗೆಗಳಿಗಾಗಿ ಗುರುತಿಸಿದರು.
ಅಹ್ಮದಾಬಾದ್ ನ ಮರಾಠಿ ಕುಟುಂಬವೊಂದು ಭಾಷೆ ಕಲಿಯಲು ಸಹಾಯ ಮಾಡಿದ ವೈಯಕ್ತಿಕ ನೆನಪುಗಳನ್ನು ಶ್ರೀ ಮೋದಿ ಹಂಚಿಕೊಂಡರು. ಮರಾಠಿಯನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸುವುದರಿಂದ ಭಾರತದಾದ್ಯಂತದ ವಿಶ್ವವಿದ್ಯಾಲಯಗಳಲ್ಲಿ ಭಾಷಾ ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಸಾಹಿತ್ಯ ಸಂಗ್ರಹವನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ನಿರ್ಧಾರವು ಮರಾಠಿ ಭಾಷೆಯ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಂಸ್ಥೆಗಳು, ವ್ಯಕ್ತಿಗಳು ಮತ್ತು ವಿದ್ಯಾರ್ಥಿಗಳಿಗೆ ಗಮನಾರ್ಹ ಉತ್ತೇಜನವನ್ನು ನೀಡುತ್ತದೆ ಎಂದು ಶ್ರೀ ಮೋದಿ ನುಡಿದರು. ಈ ಉಪಕ್ರಮವು ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ ಮತ್ತು ಈ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಉತ್ತೇಜಿಸುತ್ತದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವ ಸರ್ಕಾರವನ್ನು ದೇಶ ಹೊಂದಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳನ್ನು ಮರಾಠಿಯಲ್ಲಿ ಅಧ್ಯಯನ ಮಾಡುವ ಸಾಧ್ಯತೆಯನ್ನು ಪ್ರಮುಖವಾಗಿ ಉಲ್ಲೇಖಿಸಿದರು. ವಿಜ್ಞಾನ, ಅರ್ಥಶಾಸ್ತ್ರ ಮತ್ತು ಕಲೆಗಳಂತಹ ವಿವಿಧ ವಿಷಯಗಳಲ್ಲಿ ಮರಾಠಿಯಲ್ಲಿ ಪುಸ್ತಕಗಳ ಲಭ್ಯತೆಯು ಹೆಚ್ಚುತ್ತಿದೆ ಮತ್ತು ಮರಾಠಿಯನ್ನು ಆಲೋಚನೆಗಳ/ಚಿಂತನೆಗಳ ವಾಹನವನ್ನಾಗಿ ಮಾಡುವ ಕೆಲಸ ನಡೆಯಬೇಕು, ಇದರಿಂದ ಅದು ರೋಮಾಂಚಕವಾಗಿ ಉಳಿಯುತ್ತದೆ ಎಂದು ಅವರು ಒತ್ತಿ ಹೇಳಿದರು. ಮರಾಠಿ ಸಾಹಿತ್ಯವನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನಗಳನ್ನು ಅವರು ಪ್ರೋತ್ಸಾಹಿಸಿದರು ಮತ್ತು ಭಾಷಿನಿ ಅಪ್ಲಿಕೇಶನ್ ಬಗ್ಗೆ ಪ್ರಸ್ತಾಪಿಸಿದರು, ಇದು ಅದರ ಅನುವಾದ ವೈಶಿಷ್ಟ್ಯದ ಮೂಲಕ ಭಾಷಾ ಅಡೆತಡೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ ಎಂದರು.
ಈ ಐತಿಹಾಸಿಕ ಸಂದರ್ಭದ ಆಚರಣೆಗಳು ಜವಾಬ್ದಾರಿಯನ್ನೂ ತರುತ್ತವೆ ಎಂದು ಪ್ರಧಾನಿ ಎಲ್ಲರಿಗೂ ನೆನಪಿಸಿದರು. ಪ್ರತಿಯೊಬ್ಬ ಮರಾಠಿ ಭಾಷಿಕನೂ ಈ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು. ಭವಿಷ್ಯದ ಪೀಳಿಗೆಯಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸುವ ಮೂಲಕ ಮರಾಠಿಯ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನಗಳನ್ನು ಮಾಡಬೇಕು ಎಂದೂ ಶ್ರೀ ಮೋದಿ ಆಗ್ರಹಿಸಿದರು. ಮರಾಠಿಯನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸಿರುವುದಕ್ಕೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಅವರು ಮಾತುಗಳನ್ನು ಮುಕ್ತಾಯಗೊಳಿಸಿದರು.
*****
(Release ID: 2062721)
Visitor Counter : 34
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam