ಭೂವಿಜ್ಞಾನ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹವಾಮಾನ ಮತ್ತು ವಾತಾವರಣ ಸಂಶೋಧನೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ವ್ಯವಸ್ಥೆಯನ್ನು ಉದ್ಘಾಟಿಸಿದರು
ಹೊಸ HPC ವ್ಯವಸ್ಥೆಗಳಿಗೆ 'ಅರ್ಕಾ' ಮತ್ತು 'ಅರುಣಿಕಾ' ಎಂದು ಹೆಸರಿಸಲಾಗಿದೆ - ಭೂಮಿಯ ವ್ಯವಸ್ಥೆಗೆ ಪ್ರಾಥಮಿಕ ಶಕ್ತಿಯ ಮೂಲವಾದ ಸೂರ್ಯನೊಂದಿಗೆ ತಮ್ಮ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ
Posted On:
27 SEP 2024 1:42PM by PIB Bengaluru
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂವಿಜ್ಞಾನ ಸಚಿವಾಲಯದ ಮೂಲಕ ಹವಾಮಾನ ಮತ್ತು ತಾಪಮಾನ ಸಂಶೋಧನೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ವ್ಯವಸ್ಥೆಯನ್ನು ಉದ್ಘಾಟಿಸಿದರು.
ಈ ಹೆಗ್ಗುರುತು ಯೋಜನೆಯಲ್ಲಿ 850 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಾಗಿದೆ. ಇದು ಭಾರತದ ಕಂಪ್ಯೂಟೇಶನಲ್ ಸಾಮರ್ಥ್ಯಗಳಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಇದು ಹವಾಮಾನ ಮತ್ತು ಋತುಮಾನ ಮುನ್ಸೂಚನೆಯನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ನಿಖರವಾಗಿ ಮಾಡುತ್ತದೆ. ಪುಣೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿ (IITM ) ಮತ್ತು ನೋಯ್ಡಾದಲ್ಲಿರುವ ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ (NCMRWF ) ಈ ಎರಡು ಪ್ರಮುಖ ತಾಣಗಳಲ್ಲಿ ಇದು ನೆಲೆಗೊಂಡಿದೆ.
IITM ವ್ಯವಸ್ಥೆಯು 11.77 ಪೆಟಾಫ್ಲಾಪ್ ಗಳು ಮತ್ತು 33 ಪೆಟಾಬೈಟ್ ಗಳ ಸಂಗ್ರಹಣೆಯ ಪ್ರಭಾವಶಾಲಿ ಸಾಮರ್ಥ್ಯವನ್ನು ಹೊಂದಿದೆ , ಆದರೆ NCMRWF ಸೌಲಭ್ಯವು 8.24 ಪೆಟಾಫ್ಲಾಪ್ ಗಳು ಮತ್ತು 24 ಪೆಟಾಬೈಟ್ ಗಳ ಸಂಗ್ರಹಣೆಯನ್ನು ಹೊಂದಿದೆ . ಹೆಚ್ಚುವರಿಯಾಗಿ , ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್ ಅಪ್ಲಿಕೇಶನ್ಗಳಿಗಾಗಿ 1.9 ಪೆಟಾಫ್ಲಾಪ್ ಗಳ ಸಾಮರ್ಥ್ಯದೊಂದಿಗೆ ಮೀಸಲಾದ ಸ್ವತಂತ್ರ ವ್ಯವಸ್ಥೆ ಇದೆ.
ಇದರೊಂದಿಗೆ ಭೂ ವಿಜ್ಞಾನ ಸಚಿವಾಲಯದ ಒಟ್ಟು ಕಂಪ್ಯೂಟಿಂಗ್ ಶಕ್ತಿಯು 22 ಪೆಟಾಫ್ಲಾಪ್ ಗಳಿಗೆ ಹೆಚ್ಚಾಗುತ್ತದೆ. ಇದು ಹಿಂದಿನ ಸಾಮರ್ಥ್ಯದ 6.8 ಪೆಟಾಫ್ಲಾಪ್ ಗಳಿಂದ ಗಣನೀಯ ಹೆಚ್ಚಳವಾಗಿದೆ.
ಸಂಪ್ರದಾಯದಂತೆ , ಈ ಅತ್ಯಾಧುನಿಕ ವ್ಯವಸ್ಥೆಗಳಿಗೆ ಸೂರ್ಯನಿಗೆ ಸಂಬಂಧಿಸಿದ ಖಗೋಳ ಘಟಕಗಳ ಹೆಸರನ್ನು ಇಡಲಾಗಿದೆ. ಹಿಂದಿನ ವ್ಯವಸ್ಥೆಗಳಿಗೆ ಆದಿತ್ಯ , ಭಾಸ್ಕರ್ , ಪ್ರತ್ಯೂಷ್ ಮತ್ತು ಮಿಹಿರ್ ಎಂದು ಹೆಸರಿಸಲಾಗಿತ್ತು. ಹೊಸ HPC ವ್ಯವಸ್ಥೆಗಳಿಗೆ 'ಅರ್ಕ' ಮತ್ತು 'ಅರುಣಿಕ' ಎಂದು ಸೂಕ್ತವಾಗಿ ಹೆಸರಿಸಲಾಗಿದೆ. ಇದು ಭೂಮಿಯ ವ್ಯವಸ್ಥೆಗೆ ಪ್ರಾಥಮಿಕ ಶಕ್ತಿ ಮೂಲವಾಗಿರುವ ಸೂರ್ಯನೊಂದಿಗಿನ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ.
ಹೆಚ್ಚಿಸಿದ ಕಂಪ್ಯೂಟೇಶನಲ್ ಚೌಕಟ್ಟು ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಂಕೀರ್ಣ ಮಾದರಿಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಸುತ್ತದೆ. ಇದರಿಂದಾಗಿ ವಿವಿಧ ಪಾಲುದಾರರಿಗೆ ನೀಡಲಾಗುವ ಕೊನೆಯ ಹಂತದ ಸೇವೆಗಳ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸುತ್ತದೆ.
HPC ವ್ಯವಸ್ಥೆಯಿಂದ ಒದಗಿಸಲಾದ ವರ್ಧಿತ ಕಂಪ್ಯೂಟೇಶನಲ್ ಸಾಮರ್ಥ್ಯಗಳು ಭೂ ವಿಜ್ಞಾನ ಸಚಿವಾಲಯವು ಅಸ್ತಿತ್ವದಲ್ಲಿರುವ ಡೇಟಾ ಸಮೀಕರಣ ಸಾಮರ್ಥ್ಯಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ಹೆಚ್ಚಿನ ಸಮತಲ ರೆಸಲ್ಯೂಶನ್ನಲ್ಲಿ ಅದರ ಜಾಗತಿಕ ಹವಾಮಾನ ಮುನ್ಸೂಚನೆ ಮಾದರಿಗಳ ಭೌತಶಾಸ್ತ್ರ ಮತ್ತು ಡೈನಾಮಿಕ್ಸ್ ಅನ್ನು ಪರಿಷ್ಕರಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಪ್ರಾದೇಶಿಕ ಮಾದರಿಗಳು ಆಯ್ದ ಭಾರತೀಯ ಕ್ಷೇತ್ರಗಳಲ್ಲಿ 1 ಕಿ.ಮೀ. ಅಥವಾ ಅದಕ್ಕಿಂತ ಕಡಿಮೆ ಸೂಕ್ಷ್ಮ ರೆಸಲ್ಯೂಷನ್ ಅನ್ನು ಸಾಧಿಸಲಿವೆ. ಈ ಅಧಿಕ ರೆಸಲ್ಯೂಷನ್ ಮಾದರಿಗಳು ಉಷ್ಣವಲಯದ ಚಂಡಮಾರುತಗಳು, ಭಾರೀ ಮಳೆ, ಗುಡುಗು-ಮಿಂಚು, ಆಲಿಕಲ್ಲು ಮಳೆ, ಉಷ್ಣ ಅಲೆಗಳು, ಬರಗಾಲ ಮತ್ತು ಇತರ ತೀವ್ರ ಹವಾಮಾನ ವಿದ್ಯಮಾನಗಳಿಗೆ ಸಂಬಂಧಿಸಿದ ಮುನ್ಸೂಚನೆಗಳ ನಿಖರತೆ ಮತ್ತು ಮುನ್ಸೂಚನಾ ಅವಧಿಯನ್ನು ಗಣನೀಯವಾಗಿ ಹೆಚ್ಚಿಸುತ್ತವೆ.
ಈ ಅತ್ಯಾಧುನಿಕ HPC ವ್ಯವಸ್ಥೆಗಳನ್ನು ಉಪಯೋಗಿಸಿಕೊಂಡು, ಭೂ ವಿಜ್ಞಾನ ಸಚಿವಾಲಯವು ಹವಾಮಾನ ಮುನ್ಸೂಚನೆಗಳ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಗಣನೀಯವಾಗಿ ಸುಧಾರಿಸುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಹವಾಮಾನ ಬದಲಾವಣೆ ಮತ್ತು ತೀವ್ರ ಹವಾಮಾನ ಘಟನೆಗಳಿಂದ ಉಂಟಾಗುವ ಸವಾಲುಗಳಿಗೆ ಉತ್ತಮ ಸಿದ್ಧತೆ ಮತ್ತು ಪ್ರತಿಕ್ರಿಯೆಯನ್ನು ಖಾತರಿಪಡಿಸುತ್ತದೆ.
*****
(Release ID: 2060124)
Visitor Counter : 25