ಹಣಕಾಸು ಸಚಿವಾಲಯ
azadi ka amrit mahotsav g20-india-2023

ವಿವಿಧ ನ್ಯಾಯಾಲಯ ವೇದಿಕೆಗಳಲ್ಲಿ ನೇರ ತೆರಿಗೆಗಳು, ಅಬಕಾರಿ ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಸಲ್ಲಿಸಲು ಕೇಂದ್ರ ಬಜೆಟ್ 2024-25 ಹೆಚ್ಚಿನ ವಿತ್ತೀಯ ಮಿತಿ ಒದಗಿಸಿದೆ


ಪರಿಷ್ಕೃತ ವಿತ್ತೀಯ ಮಿತಿ ಆಧರಿಸಿ ಸಲ್ಲಿಸಿದ್ದ ಮೇಲ್ಮನವಿಗಳಿಗೆ ಸಂಬಂಧಿಸಿ,  ಸುಪ್ರೀಂ ಕೋರ್ಟ್ ಇಂದು 573 ನೇರ ತೆರಿಗೆ ಪ್ರಕರಣಗಳ ವಿಲೇವಾರಿ ಮಾಡಿದೆ

ಈ ಕ್ರಮಗಳು ತೆರಿಗೆ ಮೊಕದ್ದಮೆಗಳ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ತೆರಿಗೆ ವಿವಾದಗಳ ತ್ವರಿತ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ. ಸುಲಭವಾಗಿ ಬದುಕುವ ಮತ್ತು ಸುಲಭವಾಗಿ ವ್ಯಾಪಾರ ವ್ಯವಹಾರ ನಡೆಸುವ ಕಾರ್ಯಸೂಚಿ ಉತ್ತೇಜಿಸುವ ಸರ್ಕಾರದ ಪ್ರಯತ್ನಗಳಿಗೆ ಇದು ಅನುಗುಣವಾಗಿದೆ

ತಿದ್ದುಪಡಿ ಅನುಷ್ಠಾನಕ್ಕೆ ಸಿಬಿಡಿಟಿ ಮತ್ತು ಸಿಬಿಐಸಿ ಅಗತ್ಯ ಆದೇಶ ಹೊರಡಿಸಿವೆ

Posted On: 24 SEP 2024 6:09PM by PIB Bengaluru

ಪರಿಷ್ಕೃತ ವಿತ್ತೀಯ ಮಿತಿ ಪರಿಗಣಿಸಿ ಮೇಲ್ಮನವಿ ಸಲ್ಲಿಸಿದ್ದ ಪ್ರಕರಣಗಳನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್,  5 ಕೋಟಿ ರೂ.ಗಿಂತ ಕಡಿಮೆ ತೆರಿಗೆ ಇರುವ 573 ನೇರ ತೆರಿಗೆ ಪ್ರಕರಣಗಳನ್ನು ಇಂದು ವಿಲೇವಾರಿ ಮಾಡಿದೆ.

ತೆರಿಗೆ ವ್ಯಾಜ್ಯ ಅಥವಾ ದಾವೆಗಳನ್ನು ಕಡಿಮೆ ಮಾಡುವ ಮತ್ತು ಸುಲಭವಾಗಿ ವ್ಯಾಪಾರ ವ್ಯವಹಾರ ನಡೆಸುವ ಕಾರ್ಯಸೂಚಿ ಉತ್ತೇಜಿಸುವ ಸರ್ಕಾರದ ಪ್ರಯತ್ನಗಳಿಗೆ ಈ ಬಜೆಟ್ ಘೋಷಣೆಯು ಹೊಂದಿಕೆಯಾಗುತ್ತದೆ.

ತೆರಿಗೆ ನ್ಯಾಯಮಂಡಳಿಗಳು, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಇರುವ ನೇರ ತೆರಿಗೆಗಳು, ಅಬಕಾರಿ ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಸಲ್ಲಿಸಲು 2024-25ರ ಕೇಂದ್ರ ಬಜೆಟ್, ವಿತ್ತೀಯ ಮಿತಿಯನ್ನು ಹೆಚ್ಚಿಸಿದೆ. ವಿತ್ತೀಯ  ಮಿತಿಗಳನ್ನು ಕ್ರಮವಾಗಿ 60 ಲಕ್ಷ ರೂ., 2 ಕೋಟಿ ರೂ. ಮತ್ತು 5 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

2024-25ರ ಬಜೆಟ್ ಘೋಷಣೆಗೆ ಅನುಸಾರವಾಗಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಮತ್ತು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸೀಮಾಸುಂಕ ಮಂಡಳಿ(ಸಿಬಿಐಸಿ) ಆಯಾ ವಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ವಿತ್ತೀಯ ಮಿತಿ  ಹೆಚ್ಚಳದ ಅಗತ್ಯ ಆದೇಶಗಳನ್ನು ಹೊರಡಿಸಿವೆ. ಇದರ ಪರಿಣಾಮವಾಗಿ, ವಿವಿಧ ಮೇಲ್ಮನವಿ ವೇದಿಕೆಗಳ ಮುಂದೆ ಬಾಕಿ ಇರುವ ಪ್ರಕರಣಗಳು ಕಡಿಮೆಯಾಗುತ್ತವೆ,  ಮತ್ತು ತೆರಿಗೆ ವ್ಯಾಜ್ಯಗಳನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ನೇರ ತೆರಿಗೆ

2024-25ರ ಕೇಂದ್ರ ಬಜೆಟ್‌ ಘೋಷಣೆಯ ಪ್ರಕಾರ, ತೆರಿಗೆ ವಿವಾದ ಮೇಲ್ಮನವಿಗಳನ್ನು ಸಲ್ಲಿಸಲು ಇಲಾಖೆಗಳಿಗೆ ವಿತ್ತೀಯ ಮಿತಿಗಳನ್ನು ಈ ಕೆಳಗಿನಂತೆ ಹೆಚ್ಚಿಸಲಾಗಿದೆ:

  • ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ(ಐಟಿಎಟಿ)ಗೆ: 50 ಲಕ್ಷ ರೂ.ನಿಂದ 60 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
  • ಹೈಕೋರ್ಟ್ಗಳಿಗೆ: 1 ಕೋಟಿ ರೂ.ನಿಂದ 2 ಕೋಟಿ ರೂ.ಗೆ ಹೆಚ್ಚಳ.
  • ಸುಪ್ರೀಂ ಕೋರ್ಟ್ಗೆ: 2  ಕೋಟಿ ರೂ.ನಿಂದ 5 ಕೋಟಿ ರೂ.ಗೆ ಏರಿಕೆ.

ಈ ಪರಿಷ್ಕೃತ ವಿತ್ತೀಯ ಮಿತಿಗಳ ಪರಿಣಾಮವಾಗಿ, ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿರುವ ಸುಮಾರು 4,300 ಪ್ರಕರಣಗಳನ್ನು ಕಾಲಮಿತಿಯಲ್ಲಿ ಹಿಂಪಡೆಯಲಾಗುತ್ತದೆ ಎಂದು ಅಂದಾಜಿಸಲಾಗಿದೆ:

  • ಐಟಿಎಟಿ: 700 ಪ್ರಕರಣಗಳು
  • ಉಚ್ಚ ನ್ಯಾಯಾಲಯಗಳು: 2,800 ಪ್ರಕರಣಗಳು
  • ಸುಪ್ರೀಂ ಕೋರ್ಟ್: 800 ಪ್ರಕರಣಗಳು

ಪರೋಕ್ಷ ತೆರಿಗೆಗಳು

ಅಂತೆಯೇ, ನಿರ್ದಿಷ್ಟ ಪೂರ್ವಾರ್ಜಿತ ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸುವ ಮಿತಿಯನ್ನು ಸಹ ಹೆಚ್ಚಿಸಲಾಗಿದೆ:

  • ಸಿಇಎಸ್|ಟಿಎಟಿ(ಸೀಮಾಸುಂಕ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ) ಮಿತಿಯನ್ನು 50 ಲಕ್ಷ ರೂ.ನಿಂದ 60 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ
  • ಹೈಕೋರ್ಟ್‌ಗೆ ವಿತ್ತೀಯ ಮಿತಿಯನ್ನು 1 ಕೋಟಿ ರೂ.ನಿಂದ 2 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
  • ಸುಪ್ರೀಂ ಕೋರ್ಟ್‌ಗೆ ವಿತ್ತೀಯ ಮಿತಿಯನ್ನು 2 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಈ ಪರಿಷ್ಕೃತ ವಿತ್ತೀಯ ಮಿತಿಗಳ ಪರಿಣಾಮವಾಗಿ, ನಿರ್ದಿಷ್ಟ ಪಿತ್ರಾರ್ಜಿತಕ್ಕೆ ಸಂಬಂಧಿಸಿದ ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆಯ ಸುಮಾರು 1,050 ಪ್ರಕರಣಗಳನ್ನು ವಿವಿಧ ನ್ಯಾಯಾಲಯಗಳಿಂದ ಕಾಲಾನುಕ್ರಮದಲ್ಲಿ  ಹಿಂತೆಗೆದುಕೊಳ್ಳಲಾಗುವುದು ಎಂದು ಅಂದಾಜಿಸಲಾಗಿದೆ:

  • ಸುಪ್ರೀಂ ಕೋರ್ಟ್: 250 ಮೇಲ್ಮನವಿಗಳು
  • ಉಚ್ಚ ನ್ಯಾಯಾಲಯಗಳು: 550 ಮೇಲ್ಮನವಿಗಳು
  • ಸಿಇಎಸ್|ಟಿಎಟಿ: 250 ಮೇಲ್ಮನವಿಗಳು

ಬಾಕಿ ಇರುವ ವ್ಯಾಜ್ಯಗಳನ್ನು ಕಡಿಮೆ ಮಾಡಲು ಇತ್ತೀಚೆಗೆ ಪರಿಚಯಿಸಲಾದ ನೇರ ತೆರಿಗೆಯ ವಿವಾದ್ ಸೆ ವಿಶ್ವಾಸ್ ಯೋಜನೆ ಜತೆಗೆ, ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಯಲ್ಲಿನ ಈ ಕ್ರಮಗಳು ತೆರಿಗೆ ವ್ಯಾಜ್ಯಗಳ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ತೆರಿಗೆ ವಿವಾದಗಳಿಗೆ ತ್ವರಿತ ಪರಿಹಾರ ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚುವರಿಯಾಗಿ, ಆದಾಯ ತೆರಿಗೆ ಮೇಲ್ಮನವಿಗಳನ್ನು ಆಲಿಸಲು ಮತ್ತು ನಿರ್ಧರಿಸಲು ಅಗತ್ಯವಾದ ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ, ಇದು ವಿಶೇಷವಾಗಿ ಗಮನಾರ್ಹ ತೆರಿಗೆ ಮೊತ್ತವನ್ನು ಒಳಗೊಂಡಿರುತ್ತದೆ. ಈ ಉಪಕ್ರಮಗಳು ಬಾಕಿ ಇರುವ ವ್ಯಾಜ್ಯಗಳನ್ನು ಕಡಿಮೆ ಮಾಡುವ ಮೂಲಕ ದೇಶಾದ್ಯಂತ ಸುಲಭವಾಗಿ ಜೀವನ ನಡೆಸುವ ಮತ್ತು ಸುಲಭವಾಗಿ ವ್ಯಾಪಾರ ವ್ಯವಹಾರ ನಡೆಸುವ('ಈಸ್ ಆಫ್ ಲಿವಿಂಗ್' ಮತ್ತು 'ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್') ಕಾರ್ಯಸೂಚಿ ಸುಧಾರಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.

 

 

*****



(Release ID: 2058644) Visitor Counter : 5