ಪ್ರಧಾನ ಮಂತ್ರಿಯವರ ಕಛೇರಿ

ಹಸಿರು ಹೈಡ್ರೋಜನ್ ಕುರಿತ 2ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


"ಕ್ರಿಯೆಯ ಸಮಯ ಇಲ್ಲೇ ಇದೆ ಮತ್ತು ಈಗ ಆರಂಭವಾಗಿದೆ"

"ಹಸಿರು ಇಂಧನಕ್ಕೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ಪೂರೈಸಿದ ಮೊದಲ ಜಿ-20 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ"

"ಜಾಗತಿ ಇಂಧನ ಭೂದೃಶ್ಯಕ್ಕೆ ಭರವಸೆಯ ಸೇರ್ಪಡೆಯಾಗಿ ಹಸಿರು ಹೈಡ್ರೋಜನ್ ಹೊರಹೊಮ್ಮುತ್ತಿದೆ"

"ನಾವೀನ್ಯತೆ, ಮೂಲಸೌಕರ್ಯ, ಉದ್ಯಮ ಮತ್ತು ಹೂಡಿಕೆಗೆ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಉತ್ತೇಜನ ನೀಡುತ್ತಿದೆ"

"ನವದೆಹಲಿ ಜಿ-20 ನಾಯಕರ ಘೋಷಣೆಯು ಹೈಡ್ರೋಜನ್ ಮೇಲೆ ಉನ್ನತ ಮಟ್ಟದ ಸ್ವಯಂಪ್ರೇರಿತ ಪಂಚತತ್ವಗಳನ್ನು ಅಳವಡಿಸಿಕೊಂಡಿದೆ, ಅದು ಏಕೀಕೃತ ಮಾರ್ಗಸೂಚಿ ರೂಪಿಸಲು ಸಹಾಯ ಮಾಡುತ್ತದೆ"

"ಅಂತಹ ನಿರ್ಣಾಯಕ ವಲಯದಲ್ಲಿ ಕ್ಷೇತ್ರ ಪರಿಣಿತರು ಸ್ಪಷ್ಟ ದಾರಿ ತೋರುವುದು ಮತ್ತು ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ"

"ಹಸಿರು ಹೈಡ್ರೋಜನ್ ಅಭಿವೃದ್ಧಿ ಮತ್ತು ನಿಯೋಜನೆ ವೇಗಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ"

Posted On: 11 SEP 2024 11:02AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವೀಡಿಯೊ ಸಂದೇಶದ ಮೂಲಕ “ಹಸಿರು ಹೈಡ್ರೋಜನ್ ಅಂತಾರಾಷ್ಟ್ರೀಯ ಸಮ್ಮೇಳನ” ಉದ್ದೇಶಿಸಿ ಭಾಷಣ ಮಾಡಿದರು.

ಹಸಿರು ಹೈಡ್ರೋಜನ್ ಕುರಿತ 2ನೇ ಅಂತಾರಾಷ್ಟ್ರೀಯ ಸಮ್ಮೇಳನದ ಎಲ್ಲ ಗಣ್ಯರಿಗೆ ಆತ್ಮೀಯ ಸ್ವಾಗತ ಕೋರಿದ ಪ್ರಧಾನ ಮಂತ್ರಿ, ವಿಶ್ವವು ನಿರ್ಣಾಯಕ ಪರಿವರ್ತನೆಯ ಮೂಲಕ ಸಾಗುತ್ತಿದೆ. ಹವಾಮಾನ ಬದಲಾವಣೆಯು ಭವಿಷ್ಯದ ವಿಷಯವಲ್ಲ, ಆದರೆ ಅದರ ಪರಿಣಾಮವನ್ನು ಈಗಾಗಲೇ ಅನುಭವಿಸುತ್ತಿದ್ದೇವೆ. ಹಾಗಾಗಿ, "ಕ್ರಿಯೆಯ ಸಮಯ ಇಲ್ಲೇ ಇದೆ ಮತ್ತು ಈಗ ನಮ್ಮ ಮುಂದಿದೆ". ಇಂಧನ ಪರಿವರ್ತನೆ ಮತ್ತು ಸುಸ್ಥಿರತೆಯು ಜಾಗತಿಕ ನೀತಿ ರೂಪಿಸುವ ಸಂವಾದಕ್ಕೆ ಕೇಂದ್ರಬಿಂದುವಾಗಿದೆ ಎಂದರು.

ಸ್ವಚ್ಛ ಮತ್ತು ಹಸಿರು ಗ್ರಹವನ್ನು ರೂಪಿಸುವ ರಾಷ್ಟ್ರದ ಬದ್ಧತೆಗೆ ಒತ್ತು ನೀಡಿದ ಅವರು, ಹಸಿರು ಇಂಧನದ ಪ್ಯಾರಿಸ್ ಒಪ್ಪಂದದ ಬದ್ಧತೆ ಪೂರೈಸಿದ ಮೊದಲ ಜಿ-20 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. 2030ರ ಗುರಿಗಿಂತ 9 ವರ್ಷ ಮುಂಚಿತವಾಗಿ ಈ ಬದ್ಧತೆಗಳನ್ನು ನಾವು ಪೂರೈಸಿದ್ದೇವೆ. ಕಳೆದ 10 ವರ್ಷಗಳ ಪ್ರಗತಿಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಭಾರತದ ಸ್ಥಾಪಿತ ಉರವಲುಯೇತರ ಇಂಧನ ಸಾಮರ್ಥ್ಯವು ಸುಮಾರು 300% ಹೆಚ್ಚಾಗಿದೆ, ಸೌರಶಕ್ತಿ ಸಾಮರ್ಥ್ಯವು 3,000%ಗಿಂತ ಹೆಚ್ಚಾಗಿದೆ. ಆದರೆ ನಾವು ಈ ಸಾಧನೆಗಳ ಮೇಲೆ ವಿರಮಿಸುತ್ತಿಲ್ಲ, ಹೊಸ ಮತ್ತು ನವೀನ ಕ್ಷೇತ್ರಗಳನ್ನು ನೋಡುವಾಗ ಅಸ್ತಿತ್ವದಲ್ಲಿರುವ ಪರಿಹಾರಗಳನ್ನು ಬಲಪಡಿಸುವತ್ತ ರಾಷ್ಟ್ರವು ಆದ್ಯತೆಯ ಗಮನ ಹರಿಸಿದೆ,  ಇಲ್ಲಿ ಹಸಿರು ಹೈಡ್ರೋಜನ್ ಚಿತ್ರಣ ಬರುತ್ತದೆ ಎಂದು ಪ್ರಧಾನಿ ಹೇಳಿದರು.

"ಹಸಿರು ಹೈಡ್ರೋಜನ್ ಜಾಗತಿಕ ಇಂಧನ ಭೂದೃಶ್ಯಕ್ಕೆ ಭರವಸೆಯ ಸೇರ್ಪಡೆಯಾಗಿ ಹೊರಹೊಮ್ಮುತ್ತಿದೆ". ವಿದ್ಯುದೀಕರಿಸಲು ಕಷ್ಟಕರವಾದ ಕೈಗಾರಿಕೆಗಳನ್ನು ಇಂಗಾಲ-ಮುಕ್ತವಾಗಿ ಮಾಡಲು ಇದು ಸಹಾಯ ಮಾಡುತ್ತದೆ. ಸಂಸ್ಕರಣಾಗಾರಗಳು, ರಸಗೊಬ್ಬರಗಳು, ಉಕ್ಕು, ಬೃಹತ್ ಸಾರಿಗೆ ಮತ್ತು ಅದರಿಂದ ಪ್ರಯೋಜನ ಪಡೆಯುವ ಹಲವಾರು ಕ್ಷೇತ್ರಗಳ ಉದಾಹರಣೆ ನೀಡಿದ ಅವರು, ಹೆಚ್ಚುವರಿ ನವೀಕರಿಸಬಹುದಾದ ಇಂಧನಕ್ಕಾಗಿ ಹಸಿರು ಹೈಡ್ರೋಜನ್ ಅನ್ನು ಶೇಖರಣಾ ಪರಿಹಾರವಾಗಿ ಬಳಸಬಹುದು. 2023ರಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಸ್ಥಾಪನೆಯನ್ನು ಪ್ರಸ್ತಾಪಿಸಿದ ಅವರು, ಹಸಿರು ಹೈಡ್ರೋಜನ್ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವಾಗಿಸುವ ಗುರಿ ಹೊಂದಲಾಗಿದೆ. "ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ನಾವೀನ್ಯತೆ, ಮೂಲಸೌಕರ್ಯ, ಉದ್ಯಮ ಮತ್ತು ಹೂಡಿಕೆಗೆ ಉತ್ತೇಜನ ನೀಡುತ್ತಿದೆ". ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಹೂಡಿಕೆಗಳು, ಉದ್ಯಮ ಮತ್ತು ಶೈಕ್ಷಣಿಕ ನಡುವಿನ ಪಾಲುದಾರಿಕೆ ಮತ್ತು ಈ ವಲಯದ ಸ್ಟಾರ್ಟಪ್‌ಗಳು ಮತ್ತು ಉದ್ಯಮಿಗಳಿಗೆ ಉತ್ತೇ ನೀಡುತ್ತಿವೆ. ಹಸಿರು ಉದ್ಯೋಗಗಳ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಭಾರತ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಈ ವಲಯದಲ್ಲಿ ರಾಷ್ಟ್ರದ ಯುವಜನರಿಗೆ ಕೌಶಲ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.

ಹವಾಮಾನ ಬದಲಾವಣೆ ಮತ್ತು ಇಂಧನ ಪರಿವರ್ತನೆಯ ಜಾಗತಿಕ ಕಾಳಜಿಯನ್ನು ಗಮನಿಸಿದ ಪ್ರಧಾನಿ, ಅಂತಹ ಕಾಳಜಿಗಳಿಗೆ ಉತ್ತರಗಳು ಜಾಗತಿಕವಾಗಿರಬೇಕು. ಇಂಗಾಲ-ಮುಕ್ತಗೊಳಿಸುವ ಮೇಲೆ ಹಸಿರು ಹೈಡ್ರೋಜನ್ ಪ್ರಭಾವ ಉತ್ತೇಜಿಸಲು ಅಂತಾರಾಷ್ಟ್ರೀಯ ಪಾಲುದಾರಿಕೆ ನಿರ್ಣಾಯಕ ಅಗತ್ಯವಾಗಿದೆ. ಉತ್ಪಾದನೆ ಹೆಚ್ಚಿಸಲು,  ವೆಚ್ಚ ಕಡಿಮೆ ಮಾಡಲು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಲು ಸಹಕಾರ ಹೊಂದಿದರೆ, ವೇಗ ಸಾಧಿಸಲು ಸಾಧ್ಯವಿದೆ. ತಂತ್ರಜ್ಞಾನವನ್ನು ಮತ್ತಷ್ಟು ಹೆಚ್ಚಿಸಲು ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಜಂಟಿಯಾಗಿ ಹೂಡಿಕೆ ಮಾಡುವ ಅಗತ್ಯವಿದೆ. 2023 ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ನಡೆದ ಜಿ-20 ಶೃಂಗಸಭೆ ನೆನಪಿಸಿಕೊಂಡ ಪ್ರಧಾನಿ, ಅಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆ ಹೆಚ್ಚಳಕ್ಕೆ ವಿಶೇಷ ಗಮನ ನೀಡಲಾಗಿದೆ. ಜಿ-20 ನಾಯಕರ ಹೊಸ ದೆಹಲಿ ಘೋಷಣೆಯು ಹಸಿರು ಹೈಡ್ರೋಜನ್ ಉತ್ಪಾದನೆಗೆ ಸಹಾಯ ಮಾಡುವ ಉನ್ನತ ಮಟ್ಟದ ಸ್ವಯಂಪ್ರೇರಿತ ಪಂಚತತ್ವಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದು ಏಕೀಕೃತ ಮಾರ್ಗಸೂಚಿಯಾಗಿದೆ. "ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ, ನಾವು ಈಗ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಮುಂದಿನ ಪೀಳಿಗೆಯ ಜೀವನವನ್ನು ನಿರ್ಧರಿಸುತ್ತದೆ" ಎಂದರು.

ಗ್ರೀನ್ ಹೈಡ್ರೋಜನ್ ವಲಯವನ್ನು ಮುನ್ನಡೆಸಲು ಹೆಚ್ಚಿನ ಜಾಗತಿಕ ಸಹಕಾರ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು. ಈ ನಿಟ್ಟಿನಲ್ಲಿ ಈ ವಲಯದ ತಜ್ಞರು ಮತ್ತು ವೈಜ್ಞಾನಿಕ ಸಮುದಾಯವು ಇದನ್ನು ಮುನ್ನಡೆಸಬೇಕು ಎಂದು ಒತ್ತಾಯಿಸಿದರು. "ಇಂತಹ ನಿರ್ಣಾಯಕ ವಲಯದಲ್ಲಿ, ಕ್ಷೇತ್ರ ತಜ್ಞರು ಸ್ಪಷ್ಟವಾದ ದಾರಿ ತೋರುವುದು ಮತ್ತು ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ". ಹಸಿರು ಹೈಡ್ರೋಜನ್ ಉದ್ಯಮ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಸಾಮೂಹಿಕ ಪರಿಣತಿಯ ಅಗತ್ಯವಿದೆ. ಈ ವಲಯವನ್ನು ಮತ್ತಷ್ಟು ಬೆಂಬಲಿಸುವ ಸಾರ್ವಜನಿಕ ನೀತಿ ಬದಲಾವಣೆಗಳನ್ನು ಪ್ರಸ್ತಾಪಿಸಲು ವಿಜ್ಞಾನಿಗಳು, ಸಂಶೋಧಕರು ಮತ್ತು ಅನುಶೋಧಕರನ್ನು ಮುಂದೆ ಬರಬೇಕು ಎಂದು ಪ್ರಧಾನಿ ಪ್ರೋತ್ಸಾಹಿಸಿದರು. ಜಾಗತಿಕ ವೈಜ್ಞಾನಿಕ ಸಮುದಾಯಕ್ಕೆ ವಿಮರ್ಶಾತ್ಮಕ ಪ್ರಶ್ನೆಗಳನ್ನು ಹಾಕಿದ ಪ್ರಧಾನಿ, "ನಾವು ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಎಲೆಕ್ಟ್ರೋಲೈಸರ್‌ಗಳು ಮತ್ತು ಇತರ ಘಟಕಗಳ ದಕ್ಷತೆ ಸುಧಾರಿಸಬಹುದೇ? ಉತ್ಪಾದನೆಗೆ ಸಾಗರ ನೀರು ಮತ್ತು ಪುರಸಭೆಯ ತ್ಯಾಜ್ಯ ನೀರಿನ ಬಳಕೆಯನ್ನು ನಾವು ಅನ್ವೇಷಿಸಬಹುದೇ?" ಈ ಎಲ್ಲಾ ಸವಾಲುಗಳನ್ನು ಎದುರಿಸುವ ಅಗತ್ಯವಿದೆ. ವಿಶೇಷವಾಗಿ ಹಸಿರು ಹೈಡ್ರೋಜನ್ ಅನ್ನು ಸಾರ್ವಜನಿಕ ಸಾರಿಗೆ, ಹಡಗು ಮತ್ತು ಒಳನಾಡಿನ ಜಲಮಾರ್ಗಗಳಿಗೆ ಬಳಸುವಲ್ಲಿ ಇದು ಉಪಯುಕ್ತ. "ಇಂತಹ ವಿಷಯಗಳನ್ನು ಒಟ್ಟಿಗೆ ಅನ್ವೇಷಿಸುವುದು ಹಸಿರು ಇಂಧನ ಪರಿವರ್ತನೆಗೆ ಹೆಚ್ಚು ಸಹಾಯ ಮಾಡುತ್ತದೆ. ವಿಶ್ವಾದ್ಯಂತ, "ಹಸಿರು ಹೈಡ್ರೋಜನ್ ಕುರಿತಾದ 2 ನೇ ಅಂತಾರಾಷ್ಟ್ರೀಯ ಸಮ್ಮೇಳನದಂತಹ ವೇದಿಕೆಗಳು ಈ ವಿಷಯಗಳ ಬಗ್ಗೆ ಅರ್ಥಪೂರ್ಣ ವಿಚಾರ ವಿನಿಮಯ ನಡೆಸಲು ಸಹಕಾರಿಯಾಗಿವೆ ಎಂದು ಪ್ರಧಾನ ಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಸವಾಲುಗಳನ್ನು ಜಯಿಸುವ ಮಾನವತೆಯ ಇತಿಹಾಸ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, “ಪ್ರತಿ ಬಾರಿಯೂ ನಾವು ಸಾಮೂಹಿಕ ಮತ್ತು ನವೀನ ಪರಿಹಾರಗಳ ಮೂಲಕ ಪ್ರತಿಕೂಲ ಪರಿಸ್ಥಿತಿಗಳನ್ನು ಜಯಿಸಿದ್ದೇವೆ”. ಸಾಮೂಹಿಕ ಕ್ರಿಯೆ ಮತ್ತು ನಾವೀನ್ಯತೆಯ ಅದೇ ಮನೋಭಾವವು ಸುಸ್ಥಿರ ಭವಿಷ್ಯದ ಕಡೆಗೆ ಹೋಗಲು ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ. ಹಸಿರು ಹೈಡ್ರೋಜನ್‌ನ ಅಭಿವೃದ್ಧಿ ಮತ್ತು ನಿಯೋಜನೆ ವೇಗಗೊಳಿಸಲು ಜಾಗತಿಕ ಪ್ರಯತ್ನಗಳನ್ನು ನಡೆಸಬೇಕು ಎಂದು ಒತ್ತಾಯಿಸಿದ ಅವರು, "ನಾವು ಒಟ್ಟಾಗಿದ್ದಾಗ ಏನನ್ನಾದರೂ ಸಾಧಿಸಬಹುದು"  ಎಂದರು.

ಹಸಿರು ಹೈಡ್ರೋಜನ್ ಕುರಿತಾದ 2ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದ ಪ್ರಧಾನಿ, "ಹಸಿರು ಹೈಡ್ರೋಜನ್‌ನ ಅಭಿವೃದ್ಧಿ ಮತ್ತು ನಿಯೋಜನೆ ವೇಗಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ". ಹಸಿರು ಮತ್ತು ಹೆಚ್ಚು ಸಮರ್ಥನೀಯ ಜಗತ್ತನ್ನು ನಿರ್ಮಿಸುವಲ್ಲಿ ಸಹಭಾಗಿತ್ವ ಹೊಂದುವ ಅಗತ್ಯವಿದೆ ಎಂದು ಅವರು ಭಾಷಣ ಮುಕ್ತಾಯಗೊಳಿಸಿದರು.

 

 

*****



(Release ID: 2053944) Visitor Counter : 15