ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಪಿಎಂ ಗತಿಶಕ್ತಿ ಅಡಿಯಲ್ಲಿ ನೆಟ್ವರ್ಕ್ ಪ್ಲಾನಿಂಗ್ ಗ್ರೂಪ್ನ 78ನೇ ಸಭೆಯು 18 ರಸ್ತೆ ಯೋಜನೆಗಳನ್ನು ಮೌಲ್ಯಮಾಪನ ಮಾಡಿದೆ
Posted On:
06 SEP 2024 5:05PM by PIB Bengaluru
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ನೆಟ್ ವರ್ಕ್ ಪ್ಲಾನಿಂಗ್ ಗ್ರೂಪ್ (NPG) ನ 78ನೇ ಸಭೆಯನ್ನು ನವದೆಹಲಿಯಲ್ಲಿ ನಡೆಸಲಾಯಿತು. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯ (DPIIT) ಹೆಚ್ಚುವರಿ ಕಾರ್ಯದರ್ಶಿ ಶ್ರೀ ರಾಜೀವ್ ಸಿಂಗ್ ಠಾಕೂರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಭೆಯು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಪ್ರಸ್ತಾಪಿಸಿದ ಹದಿನೆಂಟು ಪ್ರಮುಖ ರಸ್ತೆ ಮೂಲಸೌಕರ್ಯ ಯೋಜನೆಗಳ ಮೌಲ್ಯಮಾಪನದ ಮೇಲೆ ಕೇಂದ್ರೀಕರಿಸಿತ್ತು. ತಮಿಳುನಾಡು, ಕೇರಳ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಈ ಪ್ರಸ್ತಾವಿತ ಯೋಜನೆಗಳನ್ನು ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (NMP) ನಲ್ಲಿ ವಿವರಿಸಿರುವ ಸಮಗ್ರ ಯೋಜನಾ ತತ್ವದ ಪ್ರಕಾರ ಕಾರ್ಯಗತಗೊಳಿಸಲಾಗುವುದು.
ತಮಿಳುನಾಡು ಮತ್ತು ಕೇರಳದಲ್ಲಿನ ಯೋಜನೆಗಳು
ಮದುರೈ-ಕೊಲ್ಲಂ ಐಸಿಆರ್ (ಎರಡು ಯೋಜನೆಗಳು): ಈ ಜೋಡಣೆಯನ್ನು ಎರಡು ಪ್ರತ್ಯೇಕ ಯೋಜನೆಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಯಾಕೆಂದರೆ ಈ ರಸ್ತೆ ಕಾರಿಡಾರ್ ಎರಡು ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಮೂಲಕ ಹಾದುಹೋಗುತ್ತದೆ. ನಾಲ್ಕು-ಪಥದ ಕಾರಿಡಾರ್ 129.92 ಕಿ.ಮೀ ಉದ್ದವಿದ್ದು (ತಮಿಳುನಾಡಿನಲ್ಲಿ 68.30 ಕಿ.ಮೀ ಮತ್ತು ಕೇರಳದಲ್ಲಿ 61.62 ಕಿ.ಮೀ) ಈ ಎರಡು ಯೋಜನೆಗಳು ಪ್ರಯಾಣದ ದೂರವನ್ನು ಕಡಿಮೆ ಮಾಡುವುದು ಮತ್ತು ಪ್ರಮುಖ ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವುದನ್ನು ಗುರಿಯಾಗಿಸಿಕೊಂಡಿವೆ. ಇದರಿಂದ ಕೈಗಾರಿಕೆಗಳು ಮತ್ತು ಸ್ಥಳೀಯ ಆರ್ಥಿಕತೆಗಳಿಗೆ ನೇರವಾಗಿ ಲಾಭವಾಗುತ್ತದೆ. ಈ ಕಾರಿಡಾರ್ ಪ್ರಯಾಣದ ದೂರವನ್ನು 10 ಕಿ.ಮೀ ಕಡಿಮೆ ಮಾಡುವ ಮತ್ತು ಸರಾಸರಿ ವೇಗವನ್ನು ದ್ವಿಗುಣಗೊಳಿಸುವ ನಿರೀಕ್ಷೆಯಿದೆ. ಇದು ಸರಕು ಸಾಗಣೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.
ಮಧುರೈ-ಧನುಷ್ಕೋಡಿ ಹೆದ್ದಾರಿ: ಒಟ್ಟು 46.67 ಕಿ.ಮೀ ಉದ್ದದ ಈ ನಾಲ್ಕು ಪಥದ ವಿಸ್ತರಣೆಯು ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಸುಧಾರಿಸಲು ಮತ್ತು ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಕೇಂದ್ರೀಕೃತವಾಗಿದೆ.
ಚೆನ್ನೈ-ಮಹಾಬಲಿಪುರಂ-ಪಾಂಡಿಚೆರಿ ಕಾರಿಡಾರ್: ಈ 46.05 ಕಿಮೀ ಉದ್ದದ ನಾಲ್ಕು ಪಥದ ಯೋಜನೆಯು ಆರ್ಥಿಕ ಕಾರಿಡಾರ್ಗಳೊಂದಿಗೆ ಕರಾವಳಿ ಪ್ರದೇಶಗಳ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ , ಇದು ವಾಸೋದ್ಯಮ ಮತ್ತು ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸಲು ಮುಖ್ಯವಾಗಿದೆ.
ತೊಪ್ಪೂರ್ ಘಾಟ್ ವಿಭಾಗದ ಜೋಡಣೆ ಸುಧಾರಣೆ: ತಮಿಳುನಾಡಿನ ಗುಡ್ಡಗಾಡು ಪ್ರದೇಶದಲ್ಲಿ 6.60 ಕಿಮೀ ಎತ್ತರದ ಎಂಟು ಪಥದ ರಸ್ತೆ ಯೋಜನೆಯು ಸಂಚಾರ ದಟ್ಟಣೆಗೆ ಹೆಸರುವಾಸಿಯಾದ ನಿರ್ಣಾಯಕ ವಿಭಾಗದ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತದೆ.
ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಯೋಜನೆಗಳು
ಬೆಳಗಾವಿ ರಿಂಗ್ ರೋಡ್ (NH848R ): 75.39 ಕಿಮೀ ಉದ್ದದ ನಾಲ್ಕು-ಪಥದ ರಸ್ತೆಯು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು , ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ಕರ್ನಾಟಕದಲ್ಲಿರುವ ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕವನ್ನು ಹೆಚ್ಚಿಸಲು ಗುರಿಯನ್ನು ಹೊಂದಿದೆ.
ತುಮಕೂರು ಬೈಪಾಸ್: ಈ 44.10 ಕಿಮೀ ಉದ್ದದ ನಾಲ್ಕು-ಪಥದ ಆಯಕಟ್ಟಿನ ಬೈಪಾಸ್ ಹೆದ್ದಾರಿಯು ತುಮಕೂರು ನಗರದ ಸುತ್ತಲೂ ಟ್ರಾಫಿಕ್ ಹರಿವನ್ನು ಸುಗಮಗೊಳಿಸಲು , ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಭೋಪಾಲ್-ಸಾಗರ್ ಆರ್ಥಿಕ ಕಾರಿಡಾರ್: ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಜೊತೆಗೆ ಮಧ್ಯಪ್ರದೇಶದ ಮಧ್ಯ ಭಾಗದಲ್ಲಿ ತಡೆರಹಿತ ಸಂಪರ್ಕವನ್ನು ಸುಲಭಗೊಳಿಸಲು ಈ ನಾಲ್ಕು ಪಥದ 138.00 ಕಿಮೀ ಉದ್ದದ ರಸ್ತೆ ಕಾರಿಡಾರ್ ವಿನ್ಯಾಸಗೊಳಿಸಲಾಗಿದೆ.
ಗ್ವಾಲಿಯರ್ ಸಿಟಿ ವೆಸ್ಟರ್ನ್ ಬೈಪಾಸ್: ಈ ನಾಲ್ಕು- ಲೇನ್ 56.90 ಕಿಮೀ ಉದ್ದದ ಬೈಪಾಸ್ ನಗರ ಸಂಚಾರ ಸುಧಾರಣೆ ಮತ್ತು ಗ್ವಾಲಿಯರ್ನಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲಿದ್ದು, ಈ ಪ್ರದೇಶದ ಆರ್ಥಿಕ ಸಾಧನೆಗೆ ಉತ್ತೇಜನ ನೀಡಲಿದೆ.
ಅಯೋಧ್ಯಾ ನಗರ ಬೈಪಾಸ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸಂಪರ್ಕವನ್ನು ಹೆಚ್ಚಿಸಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ಆರು ಲೇನ್ಗಳ 16.44 ಕಿಮೀ ಉದ್ದದ ಬೈಪಾಸ್.
ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಯೋಜನೆಗಳು
ಅಹಮದ್ ನಗರ-ಸೋಲಾಪುರ ಕಾರಿಡಾರ್: ಈ ನಾಲ್ಕು ಪಥದ 59.22 ಕಿಮೀ ಉದ್ದದ ರಸ್ತೆ ಯೋಜನೆಯು ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಯನ್ನು ಬೆಂಬಲಿಸುವ ಜೊತೆಗೆ ಮಹಾರಾಷ್ಟ್ರದಲ್ಲಿ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ತಾಲೇಗಾಂವ್-ಚಾಕನ್-ಶಿಕ್ರಾಪುರ ಕಾರಿಡಾರ್: ಈ ನಾಲ್ಕು-ಪಥದ 59.22 ಕಿಮೀ ಉದ್ದದ ರಸ್ತೆ ಯೋಜನೆಯು ಸರಕು ಸಾಗಣೆಯನ್ನು ಸುಗಮಗೊಳಿಸುತ್ತದೆ ಮತ್ತು ಪುಣೆ ಬಳಿ ಇರುವ ಕೈಗಾರಿಕಾ ಪ್ರದೇಶಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಜಗ್ತಿಯಾಲ್-ಕರೀಂನಗರ ಹೆದ್ದಾರಿ: ತೆಲಂಗಾಣದಲ್ಲಿ ಒಟ್ಟು 58.87 ಕಿಮೀ ಉದ್ದದ ನಾಲ್ಕು ಪಥದ ರಸ್ತೆ ಯೋಜನೆಯು ರಾಜ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸಲು ಮತ್ತು ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸಲು ಮುಖ್ಯವಾಗಿದೆ .
ಆರ್ಮೂರ್-ಜಗ್ಟಿಯಲ್-ಮಂಚೇರಿಯಲ್ ಹೆದ್ದಾರಿ: ತೆಲಂಗಾಣದ ಜಗ್ತಿಯಾಲ್-ಕರೀಂನಗರ ಹೆದ್ದಾರಿಗಳ ಹೈಸ್ಪೀಡ್ ಕಾರಿಡಾರ್ ಅನ್ನು ವಿಸ್ತರಿಸುವ ಈ 4-ಲೇನ್ 131.90 ಕಿಮೀ ರಸ್ತೆ ಯೋಜನೆಯು ರಾಜ್ಯದೊಳಗೆ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಪ್ರಮುಖ ಮಾರುಕಟ್ಟೆಗಳು ಮತ್ತು ಆರ್ಥಿಕ ಕೇಂದ್ರಗಳಿಗೆ ಪ್ರವೇಶವನ್ನು ಸುಧಾರಿಸುತ್ತದೆ.
ಆಂಧ್ರಪ್ರದೇಶ , ಒಡಿಶಾ ಮತ್ತು ಬಿಹಾರದಲ್ಲಿ ಯೋಜನೆಗಳು
ಬದ್ವೇಲ್-ನೆಲ್ಲೂರು ಕಾರಿಡಾರ್: ಆಂಧ್ರಪ್ರದೇಶದ ಈ 108.13 ಕಿಮೀ ಉದ್ದದ ನಾಲ್ಕು ಪಥದ ಹೆದ್ದಾರಿ ಯೋಜನೆಯು ಕೃಷಿ ಪ್ರದೇಶಗಳು ಮತ್ತು ಮಾರುಕಟ್ಟೆಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಕೃಷಿ-ಆರ್ಥಿಕತೆಯನ್ನು ಹೆಚ್ಚಿಸುತ್ತದೆ.
ಸಂಬಲ್ಪುರ್ ರಿಂಗ್ ರೋಡ್: ಒಡಿಶಾದಲ್ಲಿನ ಈ 35.38 ಕಿಮೀ ಉದ್ದದ ನಾಲ್ಕು ಲೇನ್ ರಸ್ತೆ ಯೋಜನೆಯು, ಪ್ರದೇಶದಲ್ಲಿನ ಆರ್ಥಿಕ ಕೇಂದ್ರಗಳು ಮತ್ತು ಪ್ರಮುಖ ಬಂದರುಗಳ ಬಳಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಉದ್ಯಮದ ಬೆಳವಣಿಗೆಗೆ ಬೆಂಬಲ ನೀಡಲು ಅತ್ಯಗತ್ಯವಾಗಿದೆ.
ಕಟಕ್ ಪ್ಯಾರಾದೀಪ್ ಕಾರಿಡಾರ್: ಒಡಿಶಾದ ಈ 86.79 ಕಿಮೀ ಉದ್ದದ ನಾಲ್ಕು-ಪಥದ ಹೆದ್ದಾರಿಯು ಪಾರಾದೀಪ್ ಬಂದರಿನ ಆರ್ಥಿಕ ಕೇಂದ್ರಗಳಿಗೆ ಪ್ರಮುಖ ಸಂಪರ್ಕವಾಗಿದೆ . ಇದು ಇತರ ಹೆಚ್ಚಿನ ಸಾಮರ್ಥ್ಯದ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬಕರ್ ಪುರ್-ಮಾಣಿಕ್ ಪುರ್-ಸಾಹೇಬ್ ಗಂಜ್-ಅರೆರಾಜ್-ಬೆಟ್ಟಿಯಾ ಹೆದ್ದಾರಿ: ಬಿಹಾರದಲ್ಲಿನ ಈ 4-ಲೇನ್ 162.95 ಕಿಮೀ ಗ್ರೀನ್ಫೀಲ್ಡ್ ರಸ್ತೆ ಯೋಜನೆಯು ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಆರ್ಥಿಕ ಅವಕಾಶಗಳಿಗೆ ಪ್ರವೇಶವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
NPG ಯು ಎಲ್ಲಾ ಹದಿನೆಂಟು ಯೋಜನೆಗಳನ್ನು PM ಗತಿಶಕ್ತಿಯ ತತ್ವಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿದೆ: ಬಹುಮಾದರಿಯ ಮೂಲಸೌಕರ್ಯದ ಸಮಗ್ರ ಅಭಿವೃದ್ಧಿ, ಆರ್ಥಿಕ ಮತ್ತು ಸಾಮಾಜಿಕ ಕೇಂದ್ರಗಳಿಗೆ ಕೊನೆಯ ಹಂತದ ಸಂಪರ್ಕ, ಅಂತರ-ವಿಧಾನ ಸಂಪರ್ಕ, ಮತ್ತು ಸಮನ್ವಯ ಅನುಷ್ಠಾನ. ಈ ಯೋಜನೆಗಳು ವಿವಿಧ ಸಾರಿಗೆಯ ವಿಧಾನಗಳನ್ನು ಸಂಯೋಜಿಸುವ ಮೂಲಕ ಮತ್ತು ಗಣನೀಯ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಒದಗಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಇದರಿಂದಾಗಿ ಪ್ರದೇಶಗಳ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
*****
(Release ID: 2052756)