ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರಪತಿಗಳು ಮಹಾರಾಷ್ಟ್ರ ಸರ್ಕಾರದ ‘ಶಾಸನ್ ಆಪ್ಲ್ಯಾ ದಾರಿ’ ಮತ್ತು ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನಾ’ ಫಲಾನುಭವಿಗಳನ್ನುದ್ದೇಶಿಸಿ  ಮಾತನಾಡಿದರು 


Posted On: 04 SEP 2024 5:30PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 4, 2024) ಉದ್ಗೀರ್ನಲ್ಲಿ ಮಹಾರಾಷ್ಟ್ರ ಸರ್ಕಾರದ 'ಶಾಸನ್ ಆಪ್ಲ್ಯಾ ದಾರಿ' ಮತ್ತು 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನಾ' ಫಲಾನುಭವಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ‘ಶಾಸನ್ ಆಪ್ಲ್ಯಾ ದಾರಿ’ ಮತ್ತು ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆʼ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮೃದ್ಧ ಸಮಾಜವನ್ನು ಹಾಗೂ ರಾಷ್ಟ್ರವನ್ನು ನಿರ್ಮಿಸುವ ಪ್ರಮುಖ ಹೆಜ್ಜೆಗಳಾಗಿವೆ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ನೆರವಿನಿಂದ ಮಹಾರಾಷ್ಟ್ರದ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ ಎಂದು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು.  ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಮತ್ತು ಕೌಶಲ್ಯಗಳನ್ನು ಒದಗಿಸುವುದರ ಜೊತೆಗೆ ಅವರಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತಿರುವ ರಾಜ್ಯ ಸರ್ಕಾರವನ್ನು ಅವರು ಶ್ಲಾಘಿಸಿದರು. ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ನಾಗರಿಕರು ಆ ಸೇವೆಗಳಿಗಾಗಿ ಸರ್ಕಾರಿ ಕಛೇರಿಗಳಿಗೆ ಅಲೆದಾಡಬೇಕಿಲ್ಲ ಎನ್ನುವ ಉದ್ದೇಶದಿಂದ ಸರ್ಕಾರ ಅವರ ಮನೆ ಬಾಗಿಲಿಗೆ ಮೂಲ ಸೇವೆಗಳನ್ನು ತಲುಪಿಸುತ್ತಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣದ ಉಪಕ್ರಮಗಳು ತಮಗೆ ಅಪಾರ ತೃಪ್ತಿಯನ್ನು ನೀಡಿವೆ ಎಂದು ರಾಷ್ಟ್ರಪತಿಗಳು  ಹೇಳಿದರು. ಇದೇ ರೀತಿಯ ಸಂದರ್ಭಗಳಲ್ಲಿ, ಕುಟುಂಬದ ಆರ್ಥಿಕ ಸಂಪನ್ಮೂಲಗಳನ್ನು ಸಾಮಾನ್ಯ ಒಳಿತಿಗಾಗಿ ಬಳಸುವ ಬಗ್ಗೆ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ತಿಳುವಳಿಕೆ ಮತ್ತು ಅರಿವು ಇರುತ್ತದೆ ಎಂದು ಹೇಳಲಾಗುತ್ತದೆ. ಒಬ್ಬ ಪುರುಷನನ್ನು ಅಕ್ಷರಸ್ಥನನ್ನಾಗಿ ಮಾಡಿದರೆ ಒಬ್ಬರನ್ನು ಮಾತ್ರ ಅಕ್ಷರಸ್ಥರನ್ನಾಗಿಸುತ್ತೇವೆ, ಆದರೆ ಮಹಿಳೆಯನ್ನು ಅಕ್ಷರಸ್ಥರನ್ನಾಗಿಸಿದರೆ ಇಡೀ ಕುಟುಂಬ ಮತ್ತು ಮುಂದಿನ ಪೀಳಿಗೆಯನ್ನು ಅಕ್ಷರಸ್ಥರನ್ನಾಗಿಸುತ್ತೇವೆ ಎನ್ನುವ ನಂಬಿಕೆ ಇದೆ. ಆರ್ಥಿಕ ಸಬಲೀಕರಣದ ವಿಷಯದಲ್ಲೂ ಇದು ನಿಜ. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಇಡೀ ಕುಟುಂಬ ಮತ್ತು ಮುಂದಿನ ಪೀಳಿಗೆಯೂ ಸಬಲವಾಗುತ್ತದೆ. 

ಭಾರತ ಸರ್ಕಾರದ ‘ಲಖಪತಿ ದೀದಿ’ ಯೋಜನೆಯ ಮೂಲಕ ದೇಶಾದ್ಯಂತ ಸುಮಾರು ಒಂದು ಕೋಟಿ ಮಹಿಳೆಯರು ಲಖಪತಿ ದೀದಿಯಾಗಿರುವುದನ್ನು ಅರಿತು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ಈ ಉಪಕ್ರಮವು ಮಹಿಳೆಯರಲ್ಲಿ ಆತ್ಮವಿಶ್ವಾಸ, ಅರಿವು ಮತ್ತು ಹೊಸ ಪ್ರಜ್ಞೆಯನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು.

ಮಹಿಳೆಯರ ಆರೋಗ್ಯ ಮತ್ತು ಪೌಷ್ಠಿಕಾಂಶವನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ತಾಯಂದಿರು ಮತ್ತು ಸಹೋದರಿಯರು ಕುಟುಂಬದ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಆದರೆ ತಮ್ಮ ಸ್ವಂತ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಅವರು ಹೇಳಿದರು. ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸುವಂತೆ ಸಲಹೆ ನೀಡಿದರು. ತಮ್ಮ ಮತ್ತು ತಮ್ಮ ಕುಟುಂಬದ ಉತ್ತಮ ಭವಿಷ್ಯಕ್ಕಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ನೌಕರವರ್ಗದಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದಕ್ಕಾಗಿ ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು. ಆದರೆ, ಮಹಿಳೆಯರ ಭಾಗವಹಿಸುವಿಕೆಯನ್ನು ಇನ್ನಷ್ಟು ಹೆಚ್ಚಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ. ಎಲ್ಲಾ ಪುರುಷರು ಮಹಿಳೆಯರ ಸಾಮರ್ಥ್ಯವನ್ನು ಗುರುತಿಸಲು ಮತ್ತು ಅವರ ಕನಸುಗಳನ್ನು ನನಸಾಗಿಸಲು ಅವರನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು. ಮಹಿಳೆಯರ ಪ್ರಗತಿಗೆ ಯಾವುದೇ ಅಡ್ಡಿಯುಂಟಾದರೂ ಅದು ಸಮಾಜ ಮತ್ತು ದೇಶದ ಅಭಿವೃದ್ಧಿಯ ವೇಗವನ್ನು ಕುಂಠಿತಗೊಳಿಸುತ್ತದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮಕ್ಕೆ ಮೊದಲು, ರಾಷ್ಟ್ರಪತಿಗಳು ಉದಗೀರ್ನಲ್ಲಿ ಧ್ಯಾನ ಕೇಂದ್ರವಿರುವ ಬುದ್ಧ ವಿಹಾರವನ್ನು ಉದ್ಘಾಟಿಸಿದರು ಮತ್ತು ಭಗವಾನ್ ಬುದ್ಧರ ಪ್ರತಿಮೆಗೆ ಗೌರವ ಸಲ್ಲಿಸಿದರು.

ರಾಷ್ಟ್ರಪತಿಗಳ ಭಾಷಣಕ್ಕಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ : 

Please click here to see the President's Speech -

 

*****


(Release ID: 2051977) Visitor Counter : 64