ಹಣಕಾಸು ಸಚಿವಾಲಯ
azadi ka amrit mahotsav

ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಸಂಪರ್ಕ ಸಚಿವಾಲಯಗಳ ಬಂಡವಾಳ ವೆಚ್ಚ(ಕ್ಯಾಪೆಕ್ಸ್) ಪರಾಮರ್ಶೆಗಾಗಿ ದೆಹಲಿಯಲ್ಲಿಂದು ಸಭೆ ನಡೆಸಿದ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್


ಬಂಡವಾಳ ವೆಚ್ಚಗಳ ಗಮನಾರ್ಹ ಹೆಚ್ಚಳ ಪರಾಮರ್ಶೆಗಾಗಿ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಸರಣಿ ಪರಿಶೀಲನಾ ಸಭೆಗಳ ನಿಗದಿ

ಭಾರತ್ ನೆಟ್ ಕಾರ್ಯಕ್ರಮಕ್ಕಾಗಿ 2024-25ರ ಬಂಡವಾಳ ವೆಚ್ಚ ಯೋಜನೆಗಳು, 4ಜಿ ಮೊಬೈಲ್ ಯೋಜನೆಗಳು - ಸ್ಥಳೀಯ ತಂತ್ರಜ್ಞಾನ, ಸ್ಪೆಕ್ಟ್ರಮ್ ಜಾಲ ಮತ್ತು 4ಜಿ ಪರಿಪೂರ್ಣತೆ ಇತರೆ ಮೊಬೈಲ್ ಯೋಜನೆಗಳ ಕುರಿತು ಸಂಪರ್ಕ ಸಚಿವಾಲಯದ ಜತೆ ಪರಾಮರ್ಶೆ

ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಬಂಡವಾಳ ವೆಚ್ಚಗಳ ಪರಾಮರ್ಶೆ ನಡೆಸಿದ ಸಚಿವರು; ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಬಂಡವಾಳ ವೆಚ್ಚ, 2024-25ರ ಸಾಲಿನ ಮುಂಬರುವ ತ್ರೈಮಾಸಿಕದಲ್ಲಿ ಯೋಜನೆಗಳ ಗುತ್ತಿಗೆ ಮತ್ತು ನಿರ್ಮಾಣ ಗುರಿ, ವಿವಿಧ ಕ್ರಮಗಳ ಮೂಲಕ ಖಾಸಗಿ ಬಂಡವಾಳ ಆಕರ್ಷಣೆ ಮತ್ತು ಆಸ್ತಿ ಮರುಬಳಕೆ ಗುರಿ ಸಾಧನೆ ಕುರಿತು ಚರ್ಚೆ

ತ್ರೈಮಾಸಿಕ ಗುರಿಗಳನ್ನು ನಿಗದಿಪಡಿಸುವ ಪ್ರಾಮುಖ್ಯತೆಗೆ ಒತ್ತು ನೀಡಿದ ಹಣಕಾಸು ಸಚಿವೆ ಸೀತಾರಾಮನ್; ನಿಗದಿತ ಕಾಲಮಿತಿಯಲ್ಲಿ ಅವುಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚನೆ

2024-25ರ ಮೊದಲ ತ್ರೈಮಾಸಿಕ ಮತ್ತು 2ನೇ ತ್ರೈಮಾಸಿಕ ಅವಧಿಯ ಗುರಿಗಳನ್ನು 3ನೇ ತ್ರೈಮಾಸಿಕದಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸಲು ಮತ್ತು ಸರಿದೂಗಿಸುವಂತೆ ಸಂಬಂಧಿಸಿದ ಸಚಿವಾಲಯಗಳಿಗೆ ಸಚಿವರ ಆದೇಶ

Posted On: 03 SEP 2024 7:21PM by PIB Bengaluru

 

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಬಂಡವಾಳ ವೆಚ್ಚ ಪರಾಮರ್ಶೆಯ ಸರಣಿ ಪರಿಶೀಲನಾ ಸಭೆಗಳು ನಿಗದಿಯಾಗಿವೆ. ಮುಂಬರುವ ದಿನಗಳಲ್ಲಿ ಆಗಲಿರುವ ಬಂಡವಾಳ ವೆಚ್ಚ(ಕ್ಯಾಪೆಕ್ಸ್)ದ ಪ್ರಗತಿ ಕುರಿತು ಅವರು ಪರಿಶೀಲನೆ ನಡೆಸಲಿದ್ದಾರೆ.

ದೆಹಲಿಯಲ್ಲಿಂದು ನಡೆದ ಇಂತಹ ಮೊದಲ ಸಭೆಯಲ್ಲಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ದೂರಸಂಪರ್ಕ ಇಲಾಖೆ ಮತ್ತು ಸಂಪರ್ಕ ಸಚಿವಾಲಯದ ಬಜೆಟ್ ಬಂಡವಾಳ ವೆಚ್ಚಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪ್ರಗತಿ ಪರಾಮರ್ಶೆ ಸಭೆಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ, ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ಸಂಪರ್ಕ ಸಚಿವಾಲಯದ ಪರಾಮರ್ಶೆ ಸಂದರ್ಭದಲ್ಲಿ, ಭಾರತ್ ನೆಟ್ ಕಾರ್ಯಕ್ರಮ, 4-ಜಿ ಮೊಬೈಲ್ ಯೋಜನೆಗಳಿಗೆ 2024-25ರಲ್ಲಿ ಒದಗಿಸಿದ ಬಂಡವಾಳ ವೆಚ್ಚ ಯೋಜನೆಗಳ ವಿವರ, ಸ್ಥಳೀಯ ತಂತ್ರಜ್ಞಾನ, ಸ್ಪೆಕ್ಟ್ರಮ್ ಜಾಲ ಮತ್ತು 4-ಜಿ ಪರಿಪೂರ್ಣತೆ ಮತ್ತು ಇತರೆ ಮೊಬೈಲ್ ಯೋಜನೆಗಳ ಕುರಿತು ಚರ್ಚೆ ನಡೆಸಿದರು.  2024-25ರ ಸಾಲಿನಲ್ಲಿ ಸಂಪರ್ಕ ಸಚಿವಾಲಯಕ್ಕೆ ಬಜೆಟ್ ನಲ್ಲಿ ಅಂದಾಜು 28,835 ಕೋಟಿ ರೂ. ಬಂಡವಾಳ ವೆಚ್ಚ ಹಂಚಿಕೆ ಮಾಡಲಾಗಿದೆ.

ದೂರಸಂಪರ್ಕ ಇಲಾಖೆ(ಡಿಒಟಿ)ಯ ಕಾರ್ಯದರ್ಶಿ ಅವರು, ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ದೇಶದ ನಾಗರಿಕರಿಗೆ ಕೈಗೆಟುಕುವ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಗುರಿ ಹೊಂದಿರುವ ಭಾರತ್‌ನೆಟ್ ಯೋಜನೆಯ ಬಂಡವಾಳ ವೆಚ್ಚ  ಯೋಜನೆ ಮತ್ತು ಗುರಿಗಳ ಬಗ್ಗೆ ಕೇಂದ್ರ ಹಣಕಾಸು ಸಚಿವರಿಗೆ ವಿವರ ನೀಡಿದರು. ಅವರು 4-ಜಿ ಪರಿಪೂರ್ಣತೆ ಯೋಜನೆ ಮತ್ತು ಇತರೆ ಮೊಬೈಲ್ ಟವರ್ ಯೋಜನೆಗಳ ಬಂಡವಾಳ ವೆಚ್ಚದ ಬಗ್ಗೆ ವಿವರಿಸಿದರು, ಇದು ದೂರದ ಮತ್ತು ದುರ್ಗಮ ಪ್ರದೇಶಗಳ  ಹಳ್ಳಿಗಳಲ್ಲಿ ಸಂಪರ್ಕ ಸುಧಾರಿಸಲು ಪ್ರಯತ್ನಿಸುತ್ತದೆ ಎಂದರು.

ಸಂಪೂರ್ಣ ಸ್ವದೇಶಿ 4-ಜಿ ತಂತ್ರಜ್ಞಾನ ಸಹಾಯದಿಂದ 21,000 4-ಜಿ ಮೊಬೈಲ್ ಟವರ್‌ಗಳು 30 ಲಕ್ಷ ಗ್ರಾಹಕರಿಗೆ ಪ್ರಸಾರ ಒದಗಿಸುತ್ತಿವೆ ಎಂದು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ, ಕೇಂದ್ರ ಹಣಕಾಸು ಸಚಿವರಿಗೆ ತಿಳಿಸಿದರು. ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಮಹತ್ವಾಕಾಂಕ್ಷೆಯ ಬ್ಲಾಕ್‌ಗಳನ್ನು ಒಳಗೊಳ್ಳುವ ಗುರಿ ಹೊಂದಿರುವ 4-ಜಿ ಪರಿಪೂರ್ಣತೆ ಆಂದೋಲನ ಕುರಿತು ಕಾರ್ಯದರ್ಶಿ ಅವರು ಸೀತಾರಾಮನ್ ಅವರಿಗೆ ವಿವರ ನೀಡಿದರು. ಎಲ್ಲಾ ಗುರಿಗಳು ಸಮರ್ಪಕವಾಗಿವೆ, ಸಕಾಲದಲ್ಲಿ ಅವುಗಳನ್ನು ಪೂರ್ಣಗೊಳಿಸಲಾಗುವುದು ಎಂದು ಡಿಒಟಿ ಕಾರ್ಯದರ್ಶಿ ಕೇಂದ್ರ ಹಣಕಾಸು ಸಚಿವರಿಗೆ ಭರವಸೆ ನೀಡಿದರು.

ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಬಂಡವಾಳ ವೆಚ್ಚದ  ಆರ್ಥಿಕ ಮತ್ತು ಭೌತಿಕ ಪ್ರಗತಿಯ ಪರಿಶೀಲನೆ ಸಂದರ್ಭದಲ್ಲಿ ಸಚಿವಾಲಯದ ಕಾರ್ಯದರ್ಶಿ ಅವರು,  ಕಳೆದ 10 ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲದ ಗಮನಾರ್ಹ ಬೆಳವಣಿಗೆಯ ಬಗ್ಗೆ ಕೇಂದ್ರ ಹಣಕಾಸು ಸಚಿವರಿಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಸರಾಸರಿ ವಾರ್ಷಿಕ ರಸ್ತೆಗಳ ನಿರ್ಮಾಣದಲ್ಲಿ ಸುಮಾರು 2.4 ಪಟ್ಟು ಹೆಚ್ಚಾಗಿದೆ. 2004-2014ಕ್ಕೆ ಹೋಲಿಸಿದರೆ 2014-2024 ಅವಧಿಯಲ್ಲಿ ಹೆದ್ದಾರಿಗಳು 2 ಮಾರ್ಗ, 2 ಮಾರ್ಗದ ಜತೆಗೆ ಸುಸಜ್ಜಿತ ನಿಲುಗಡೆ ಮಾರ್ಗ(ರಸ್ತೆಯ 2 ಬದಿ), 4 ಮಾರ್ಗ ಮತ್ತು ಹೆಚ್ಚಿನದು ಹಾಗೂ ಹೈ-ಸ್ಪೀಡ್ ಕಾರಿಡಾರ್‌ಗಳ ಬೆಳವಣಿಗೆ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದರು.

2024-25ರ ಉಳಿದ ಬಂಡವಾಳ ವೆಚ್ಚ ಯೋಜನೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವರಿಗೆ ಕಾರ್ಯದರ್ಶಿ ಅವರು ಮತ್ತಷ್ಟು ಮಾಹಿತಿ ನೀಡಿದರು. ವಿವಿಧ ಕ್ರಮಗಳ ಮೂಲಕ ಖಾಸಗಿ ಬಂಡವಾಳ ಆಕರ್ಷಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಆಸ್ತಿ ಮರುಬಳಕೆಯ ಗುರಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಸಚಿವರಿಗೆ ತಿಳಿಸಿದರು.

ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಬಜೆಟ್ ನಲ್ಲಿ ಬಂಡವಾಳ ವೆಚ್ಚ ಹಂಚಿಕೆಯು 2019-20ರಲ್ಲಿ ನೀಡಲಾಗಿದ್ದ 1.42 ಲಕ್ಷ ಕೋಟಿ ರೂ.ನಿಂದ 2024-25ರಲ್ಲಿ 2.72 ಲಕ್ಷ ಕೋಟಿ ರೂ. ನೀಡಲಾಗಿದ್ದು, ಅನುದಾನ ಪ್ರಮಾಣ 90% ಹೆಚ್ಚಾಗಿದೆ.

ಸಾರ್ವಜನಿಕ ಬಳಕೆಗಾಗಿ ಸ್ವತ್ತುಗಳ ಅರ್ಥಪೂರ್ಣ ಸೃಷ್ಟಿಗೆ ಒತ್ತು ನೀಡಿದ ಸಚಿವೆ ಸೀತಾರಾಮನ್ ಅವರು, ತ್ರೈಮಾಸಿಕ ಗುರಿಗಳನ್ನು ನಿಗದಿಪಡಿಸುವ ಪ್ರಾಮುಖ್ಯತೆಗೆ ಒತ್ತು ನೀಡಿದರು. ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಬೇಕು. 2024-25ರ ಮೊದಲ ತ್ರೈಮಾಸಿಕ ಮತ್ತು 2ನೇ ತ್ರೈಮಾಸಿಕ ಅವಧಿಯ ಗುರಿಗಳನ್ನು 3ನೇ ತ್ರೈಮಾಸಿಕದಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸಲು ಮತ್ತು ಸರಿದೂಗಿಸುವಂತೆ ಸಂಬಂಧಿಸಿದ ಸಚಿವಾಲಯಗಳಿಗೆ ಸಚಿವರು ಆದೇಶ ನೀಡಿದರು.

 

*****


(Release ID: 2051701) Visitor Counter : 51