ರಾಷ್ಟ್ರಪತಿಗಳ ಕಾರ್ಯಾಲಯ
ಸಿಂಬಯಾಸಿಸ್ ಇಂಟರ್ ನ್ಯಾಶನಲ್ ನ 21 ನೇ ಘಟಿಕೋತ್ಸವದಲ್ಲಿ ಭಾರತದ ರಾಷ್ಟ್ರಪತಿಗಳು ಭಾಗವಹಿಸಿದ್ದರು
ಪ್ರಕಟಣಾ ದಿನಾಂಕ:
03 SEP 2024 2:47PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 3, 2024) ಮಹಾರಾಷ್ಟ್ರದ ಪುಣೆಯಲ್ಲಿ ಸಿಂಬಯೋಸಿಸ್ ಇಂಟರ್ನ್ಯಾಶನಲ್ ನ (ಪರಿಗಣಿತ ವಿಶ್ವವಿದ್ಯಾನಿಲಯ) 21ನೇ ಘಟಿಕೋತ್ಸವದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಇಂದು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ಮತ್ತು ಜ್ಞಾನದಿಂದ ದೇಶ ವಿದೇಶಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಮರ್ಥರಾಗಿದ್ದಾರೆ ಎಂದು ಹೇಳಿದರು. ನಾವೀನ್ಯತೆ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಮೂಲಕ ನಿರ್ವಹಣೆ, ಆರೋಗ್ಯ, ಕಾನೂನು, ಸಾಮಾಜಿಕ ವಿಜ್ಞಾನಗಳು ಮತ್ತು ಇತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಪರಿಣಾಮಕಾರಿ ಕೊಡುಗೆಗಳನ್ನು ನೀಡಬಹುದು. ದೇಶದ ವಿವಿಧ ಸಮುದಾಯಗಳು ಮತ್ತು ಪ್ರದೇಶಗಳ ಸಂಸ್ಕೃತಿ ಮತ್ತು ಅವರ ಪ್ರಸ್ತುತ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಅವರು ಒತ್ತಾಯಿಸಿದರು. ಈ ಜ್ಞಾನದ ಆಧಾರದ ಮೇಲೆ, ಪ್ರತಿಯೊಬ್ಬರ ಅಭಿವೃದ್ಧಿಗೆ ಸಹಾಯ ಮಾಡುವ, ವಿಶೇಷವಾಗಿ ಹಿಂದುಳಿದ ವರ್ಗಗಳು ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ತಂತ್ರಾಂಶ, ಆರೋಗ್ಯ ಉತ್ಪನ್ನಗಳು ಮತ್ತು ಮಾರುಕಟ್ಟೆ ತಂತ್ರಗಳನ್ನು ರಚಿಸಬೇಕು. ಅವು ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳು ತಮ್ಮ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ರಾಷ್ಟ್ರಪತಿಯವರು ಹೇಳಿದರು.
ಸಿಂಬಯಾಸಿಸ್ ಇಂಟರ್ ನ್ಯಾಶನಲ್ನಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 33000 ವಿದ್ಯಾರ್ಥಿಗಳಲ್ಲಿ ಬಾಲಕ ಮತ್ತು ಬಾಲಕಿಯರ ಸಂಖ್ಯೆ ಬಹುತೇಕ ಸಮಾನವಾಗಿದೆ ಎಂದು ತಿಳಿಸಿದ ರಾಷ್ಟ್ರಪತಿಗಳು, ನಾರಿ ಶಕ್ತಿಯ ಪ್ರಗತಿಯು ನಾಗರಿಕರಿಗೆ ಕೇವಲ ಹೆಮ್ಮೆಯ ತರುವ ವಿಷಯ ಮಾತ್ರವಲ್ಲದೆ, ದೇಶದ ಅಭಿವೃದ್ಧಿಯ ಪ್ರಮುಖ ಮಾನದಂಡವಾಗಿದೆ ಎಂದು ಹೇಳಿದರು. ಸಿಂಬಯೋಸಿಸ್ ಪರಿಗಣಿತ ವಿಶ್ವವಿದ್ಯಾನಿಲಯವು ಲಿಂಗ ಸಮಾನತೆಗೆ ಆದ್ಯತೆ ನೀಡುತ್ತಿದೆ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸೂಕ್ತ ವಾತಾವರಣ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಅವರು ಸಂತೋಷಪಟ್ಟರು. ಎಲ್ಲಾ ಶಿಕ್ಷಣ ಸಂಸ್ಥೆಗಳು ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ಸುರಕ್ಷಿತ ಮತ್ತುಅನುಕೂಲಕರ ವಾತಾವರಣವನ್ನು ನಿರ್ಮಿಸಲು ಅವರು ಒತ್ತಾಯಿಸಿದರು.
ವೈದ್ಯಕೀಯ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾದ 'ಸಹಜೀವನ ಆರೋಗ್ಯಧಾಮ' ಸ್ಥಾಪನೆಯನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು. ಸಿಂಬಯೋಸಿಸ್ ಪರಿಗಣಿತ ವಿಶ್ವವಿದ್ಯಾಲಯವು ಕ್ಯಾಂಪಸ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಚಾರಿ ಕುಟುಂಬ ಆರೋಗ್ಯ ಚಿಕಿತ್ಸಾಲಯಗಳನ್ನು ನಡೆಸುತ್ತಿದೆ ಎಂದು ತಿಳಿದು ಅವರು ಸಂತೋಷಪಟ್ಟರು. ಯುವ ಪೀಳಿಗೆಗೆ ಅತ್ಯಾಧುನಿಕ ತಂತ್ರಜ್ಞಾನದ ಜ್ಞಾನದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವನ್ನು ಒದಗಿಸುವುದು ಎಲ್ಲಾ ಶಿಕ್ಷಣ ಸಂಸ್ಥೆಗಳ ಗುರಿಯಾಗಬೇಕು ಎಂದು ಅವರು ಹೇಳಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಸಿಂಬಯೋಸಿಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಅಧ್ಯಾಪಕರು ಮತ್ತು ಹಳೆಯ ವಿದ್ಯಾರ್ಥಿಗಳನ್ನು ರಾಷ್ಟ್ರಪತಿಗಳು ಒತ್ತಾಯಿಸಿದರು. ಹಲವಾರು ವರ್ಷಗಳ ಸಂಶೋಧನೆಯು ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಸವಾಲುಗಳಿಗೆ ಹೊಸ ಪರಿಹಾರಗಳನ್ನು ನೀಡುತ್ತದೆ ಎಂದು ಅವರು ಹೇಳಿದರು. ಭಾರತದ ಸಂಶೋಧನಾ ವಿದ್ವಾಂಸರು ದೇಶದ ಸಮಸ್ಯೆಗಳಿಗೆ ಮಾತ್ರವಲ್ಲದೆ ಪ್ರಪಂಚದ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳಬಹುದು. ರಾಷ್ಟ್ರೀಯ ಶಿಕ್ಷಣ ನೀತಿಯು ಸಂಶೋಧನೆಯನ್ನು ಉತ್ತೇಜಿಸಲು ಒತ್ತು ನೀಡುತ್ತದೆ ಎಂದು ಅವರು ತಿಳಿಸಿದರು. ವಿಶ್ವವಿದ್ಯಾನಿಲಯದಲ್ಲಿ ಜಲಸಂಪನ್ಮೂಲ ನಿರ್ವಹಣೆ, ಸ್ಟೆಮ್ ಸೆಲ್, ನ್ಯಾನೊಸೈನ್ಸ್ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಮೇಲೆ ಬಹು-ವಿಷಯಗಳ ಸಂಶೋಧನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಸಂತೋಷಪಟ್ಟರು.
ವಿದ್ಯಾರ್ಥಿಗಳು ಪ್ರತಿಯೊಂದು ಕಾರ್ಯದಲ್ಲೂ ಉತ್ಕೃಷ್ಟತೆಯನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ರಾಷ್ಟ್ರಪತಿಗಳು ಸಲಹೆ ನೀಡಿದರು. ಚೇಸ್ ಎಕ್ಸಲೆನ್ಸ್ ಅಂಡ್ ಸಕ್ಸಸ್ ವಿಲ್ ಫೋಲೋ ಎನ್ನುವ ಮಾತನ್ನು ಕೇಳಿರಬೇಕು ಎಂದು ಹೇಳಿದರು. ಆದರೆ ಅನೇಕ ಬಾರಿ ಕೆಲವರು ಅಪಾರ ಹಣ, ದೊಡ್ಡ ಮನೆ, ದೊಡ್ಡ ಕಾರು ಮತ್ತು ಇತರ ವಸ್ತುಗಳನ್ನು ಯಶಸ್ಸಿನ ಸಂಕೇತವೆಂದು ಪರಿಗಣಿಸುತ್ತಾರೆ. ವಿದ್ಯಾರ್ಥಿಗಳು ಯಶಸ್ಸಿನ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಇತರರ ಜೀವನಮಟ್ಟವನ್ನು ಸುಧಾರಿಸುವ ಕೆಲಸವನ್ನು ಮಾಡುತ್ತಾರೆ ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದರು.






https://static.pib.gov.in/WriteReadData/specificdocs/documents/2024/sep/doc202493385401.pdf
*****
(ಪ್ರಕಟಣೆ ಐ.ಡಿ.: 2051354)
ವಿಸಿಟರ್ ಕೌಂಟರ್ : 104