ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಾಲೇಜು ಹಾಸ್ಟೆಲ್ ನ ಮಹಿಳೆಯರ ಶೌಚಾಲಯಗಳಲ್ಲಿ ಮತ್ತು ಕರ್ನಾಟಕದ ಬೆಂಗಳೂರಿನ ಜನಪ್ರಿಯ ಉಪಾಹಾರ ಮಂದಿರದಲ್ಲಿ ರಹಸ್ಯ ಕ್ಯಾಮೆರಾ ಪತ್ತೆ  ಘಟನೆಗಳ‌ ವರದಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ – ಎನ್ ಎಚ್ ಆರ್ ಸಿ ಯಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು


ಭದ್ರತೆ ಮತ್ತು ಮಹಿಳೆಯರ ಘನತೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಆಂಧ್ರಪ್ರದೇಶ ಮತ್ತು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಆಯೋಗದಿಂದ ನೋಟಿಸ್ ಜಾರಿ

ಎರಡು ವಾರದೊಳಗೆ ವರದಿ ಸಲ್ಲಿಸಲು ಸೂಚನೆ

Posted On: 02 SEP 2024 5:45PM by PIB Bengaluru

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜೊಂದರ ಹುಡುಗಿಯರ ಹಾಸ್ಟೆಲ್ ನ ಶೌಚಾಲಯಗಳಲ್ಲಿ ರಹಸ್ಯ ಕ್ಯಾಮೆರಾ ಮೂಲಕ ಸುಮಾರು 300 ಫೋಟೋ ಮತ್ತು ವಿಡಿಯೋಗಳನ್ನು  ತೆಗೆಯಲಾಗಿದೆ ಎನ್ನಲಾದ ಮಾಧ್ಯಮ ವರದಿ ಆಧರಿಸಿ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ) ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ವಿದ್ಯಾರ್ಥಿಗಳ ಗುಂಪೊಂದು ಈ ಕ್ಯಾಮೆರಾ‌ ಪತ್ತೆ ಮಾಡಿ ತೀವ್ರ ಪ್ರತಿಭಟನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಹುಡುಗರ ಹಾಸ್ಟೆಲ್ ನಿಂದ ಕೆಲವು ವಿದ್ಯಾರ್ಥಿಗಳು ಈ ವಿಡಿಯೋಗಳನ್ನು ಪಡೆದಿದ್ದು, ಈ ಸಂಬಂಧ ಪೊಲೀಸರು ಓರ್ವ ವಿದ್ಯಾರ್ಥಿಯ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಗೂ ಮುನ್ನ ಬೆಂಗಳೂರಿನ ಖ್ಯಾತ ಉಪಹಾರ ಮಂದಿರದ ಶೌಚಾಲಯದಲ್ಲೂ ರಹಸ್ಯ ಕ್ಯಾಮೆರಾ ಪತ್ತೆಯಾದ ಬಗ್ಗೆ ವರದಿಯಾಗಿತ್ತು.

ಒಂದು ವೇಳೆ ಮಾಧ್ಯಮ ವರದಿ ನಿಜವೇ ಆದರೆ, ಇದು ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಯಾಗಲಿದೆ ಎಂದು ಆಯೋಗ ಹೇಳಿದೆ. ಪ್ರಾಧಿಕಾರಗಳು ಮಹಿಳೆಯರಿಗೆ ಸುರಕ್ಷಿತ ಮತ್ತು ಸುಭದ್ರ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿವೆ ಎಂಬುದನ್ನು ಈ ಘಟನೆಗಳು ತೋರಿಸಲಿದ್ದು, ಇದು ಕಳವಳಕಾರಿ‌ ಸಂಗತಿಯಾಗಿದೆ. 

ಪೊಲೀಸ್ ಎಫ್ ಐ ಆರ್ ನ ಪ್ರಸ್ತುತದ ಸ್ಥಿತಿ ಸೇರಿದಂತೆ ಪ್ರಕರಣ ಸಂಬಂಧ ವಿಸ್ತೃತ ವರದಿ ನೀಡುವಂತೆ ಆಂಧ್ರಪ್ರದೇಶ ಮತ್ತು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗವು ನೋಟಿಸ್ ಜಾರಿ ಮಾಡಿದೆ. ಇಂತಹ ಘಟನೆಗಳು ಮರುಕಳಿಸದಂತೆ‌ ಮುನ್ನೆಚ್ಚರಿಕೆ ವಹಿಸಲು ಪ್ರಾಧಿಕಾರಗಳು ಕೈಗೊಂಡಿರುವ ಕ್ರಮಗಳು/ ಪ್ರಸ್ತಾಪಿಸಿರುವ ಕ್ರಮಗಳ ಬಗ್ಗೆ ಕೂಡ ವರದಿಯಲ್ಲಿ ವಿವರಿಸಬೇಕಿದೆ. ಪ್ರಾಧಿಕಾರಗಳಿಂದ ಎರಡು ವಾರಗಳೊಳಗೆ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.

 

*****



(Release ID: 2051196) Visitor Counter : 23


Read this release in: English , Urdu , Hindi , Tamil , Telugu