ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ರಷ್ಯಾದ ಮಾಸ್ಕೋದಲ್ಲಿ ತುರ್ತು ನಿರ್ವಹಣಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ರಷ್ಯಾ-ಭಾರತೀಯ ಜಂಟಿ ಆಯೋಗದ 2 ನೇ ಸಭೆ


2025-2026ರ  ತುರ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ರಷ್ಯಾ-ಭಾರತೀಯ ಜಂಟಿ ಆಯೋಗದ ಕಾರ್ಯ ಯೋಜನೆಗೆ ಭಾರತ ಮತ್ತು ರಷ್ಯಾ ಸಹಿ

2025-2026ರ ಅವಧಿಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡವು ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಉತ್ತಮ ಅಭ್ಯಾಸ/ಪದ್ಧತಿಗಳ ವಿನಿಮಯವನ್ನು ಮುಂದುವರಿಸಲು ನಿರ್ಧರಿಸಿದವು

ಅಪಾಯಗಳ ಮುನ್ಸೂಚನೆ ಮತ್ತು ತುರ್ತು ಪ್ರತಿಕ್ರಿಯೆಗಾಗಿ ಬಾಹ್ಯಾಕಾಶ ಮೇಲ್ವಿಚಾರಣಾ/ನಿಗಾ ತಂತ್ರಜ್ಞಾನಗಳ ಬಳಕೆ, ದೊಡ್ಡ ಪ್ರಮಾಣದ ವಿಪತ್ತುಗಳಿಗೆ ಪ್ರತಿಕ್ರಿಯಿಸುವ ಅನುಭವದ ವಿನಿಮಯ ಮತ್ತು ಅಗ್ನಿಶಾಮಕ ಹಾಗು ಪಾರುಗಾಣಿಕಾ ತಜ್ಞರ ತರಬೇತಿ ಕ್ಷೇತ್ರದಲ್ಲಿ ಸಹಕಾರದಂತಹ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಾರತವನ್ನು ವಿಪತ್ತು ಸ್ಥಿತಿಸ್ಥಾಪಕವಾಗಿಸಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ

Posted On: 28 AUG 2024 7:07PM by PIB Bengaluru

ತುರ್ತು ನಿರ್ವಹಣಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ರಷ್ಯಾ-ಭಾರತೀಯ ಜಂಟಿ ಆಯೋಗದ ಎರಡನೇ ಸಭೆ ಇಂದು, 2024 ರ ಆಗಸ್ಟ್ 28 ರಂದು ರಷ್ಯಾದ ಮಾಸ್ಕೋದಲ್ಲಿ ನಡೆಯಿತು. ಭಾರತದ ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ನಿತ್ಯಾನಂದ ರೈ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದಾರೆ.

ಭೇಟಿಯ ಮೊದಲ ದಿನದಂದು, 2025-2026 ರ ತುರ್ತು ನಿರ್ವಹಣಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ರಷ್ಯಾ-ಭಾರತೀಯ ಜಂಟಿ ಆಯೋಗದ ಕಾರ್ಯ ಯೋಜನೆಗೆ ಭಾರತದ ಗೃಹ ವ್ಯವಹಾರಗಳ ಸಹಾಯಕ ಸಚಿವ ಶ್ರೀ ನಿತ್ಯಾನಂದ ರೈ ಮತ್ತು ರಷ್ಯಾದ ನಾಗರಿಕ ರಕ್ಷಣಾ, ತುರ್ತುಸ್ಥಿತಿಗಳು ಮತ್ತು ನೈಸರ್ಗಿಕ ವಿಪತ್ತುಗಳ ಪರಿಣಾಮಗಳ ನಿರ್ಮೂಲನೆ ಒಕ್ಕೂಟದ (ರಷ್ಯಾದ ಎಮರ್ಕಾಮ್) ಸಚಿವ ಶ್ರೀ ಕುರೆಂಕೊವ್ ಅಲೆಕ್ಸಾಂಡರ್ ವ್ಯಾಚೆಸ್ಲಾವಿಚ್ ಸಹಿ ಹಾಕಿದರು.

2025-2026ರ ಅವಧಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಎರಡೂ ದೇಶಗಳು ಒಪ್ಪಿಕೊಂಡವು ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಕಲಿತ ಉತ್ತಮ ಅಭ್ಯಾಸಗಳು ಹಾಗು ಪಾಠಗಳ ವಿನಿಮಯವನ್ನು ಮುಂದುವರಿಸಲು ನಿರ್ಧರಿಸಿದವು. ಭಾರತ ಮತ್ತು ರಷ್ಯಾ ನಡುವಿನ ಹಿಂದಿನ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ಕಾರ್ಯತಂತ್ರವನ್ನು ರೂಪಿಸಲು ಸಭೆ ಮಹತ್ವದ್ದಾಗಿದೆ, ಉದಾಹರಣೆಗೆ, 2010 ರ ಡಿಸೆಂಬರ್  ನಲ್ಲಿ ತುರ್ತು ನಿರ್ವಹಣಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಅಂತರ-ಸರ್ಕಾರಿ ಒಪ್ಪಂದ (ಐಜಿಎ) ಮತ್ತು ತುರ್ತು ಪರಿಸ್ಥಿತಿಗಳ ಪರಿಣಾಮಗಳನ್ನು ತಡೆಗಟ್ಟಲು ಮತ್ತು ನಿವಾರಿಸಲು ಸಹಕಾರಕ್ಕಾಗಿ ಇಂಡೋ-ರಷ್ಯಾ ಜಂಟಿ ಆಯೋಗವನ್ನು (2013) ಸ್ಥಾಪಿಸುವ ನಿಯಂತ್ರಣ ನಿಯಮಾವಳಿಗಳು ಇದರಲ್ಲಿ ಸೇರಿವೆ. ತುರ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರ ಕುರಿತ ಇಂಡೋ-ರಷ್ಯಾ ಜಂಟಿ ಆಯೋಗದ ಮೊದಲ ಸಭೆ 2016 ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿತ್ತು.

ಸಹಕಾರದ ಒಟ್ಟಾರೆ ಚೌಕಟ್ಟಿನೊಳಗೆ, ಮೂರು ನಿರ್ದಿಷ್ಟ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು:

ಎ. ಅಪಾಯಗಳ ಮುನ್ಸೂಚನೆ ಮತ್ತು ತುರ್ತು ಪ್ರತಿಕ್ರಿಯೆಗಾಗಿ ಬಾಹ್ಯಾಕಾಶ ಮೇಲ್ವಿಚಾರಣಾ/ನಿಗಾತಂತ್ರಜ್ಞಾನಗಳ ಬಳಕೆ.

ಬಿ. ದೊಡ್ಡ ಪ್ರಮಾಣದ ವಿಪತ್ತುಗಳಿಗೆ ಸ್ಪಂದಿಸುವ ಅನುಭವಗಳ ವಿನಿಮಯ.

ಸಿ.  ಅಗ್ನಿಶಾಮಕ ಮತ್ತು ಪಾರುಗಾಣಿಕಾ ತಜ್ಞರ ತರಬೇತಿ ಕ್ಷೇತ್ರದಲ್ಲಿ ಸಹಕಾರ.

ಸಭೆಯ ಫಲಿತಾಂಶಗಳ ಆಧಾರದ ಮೇಲೆ, ಭಾರತ ಮತ್ತು ರಷ್ಯಾದ ನಿಯೋಗಗಳು ತಮ್ಮ ಉದ್ದೇಶಗಳನ್ನು/ಆಶಯಗಳನ್ನು ವ್ಯಕ್ತಪಡಿಸಿದವು:

(i) ತುರ್ತು ನಿರ್ವಹಣೆ ಕ್ಷೇತ್ರದಲ್ಲಿ ಮತ್ತಷ್ಟು ಸಹಕಾರವನ್ನು ಅಭಿವೃದ್ಧಿಪಡಿಸಲು ಜಂಟಿ ಪ್ರಯತ್ನಗಳನ್ನು ತೀವ್ರಗೊಳಿಸುವುದು.

(ii) ವಿಪತ್ತು ಮೇಲ್ವಿಚಾರಣೆ ಮತ್ತು ಮುನ್ಸೂಚನೆ, ರಕ್ಷಣಾ ತಜ್ಞರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ತರಬೇತಿ ಸೇರಿದಂತೆ ತುರ್ತು ನಿರ್ವಹಣೆಯಲ್ಲಿ ಉತ್ತಮ ಅಭ್ಯಾಸಗಳನ್ನು/ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳುವುದು.

(iii) ಎರಡೂ ದೇಶಗಳಲ್ಲಿನ ಪ್ರಖ್ಯಾತ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಸಹಕಾರವನ್ನು ವಿಸ್ತರಿಸುವುದು, ತುರ್ತು ನಿರ್ವಹಣಾ ಕ್ಷೇತ್ರದಲ್ಲಿ ತಜ್ಞರಿಗೆ ತರಬೇತಿ ನೀಡುವುದು.

(iv) ತುರ್ತು ನಿರ್ವಹಣಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಇಂಡೋ-ರಷ್ಯಾ ಜಂಟಿ ಆಯೋಗದ ಮುಂದಿನ ಸಭೆಯನ್ನು 2026 ರಲ್ಲಿ ಭಾರತದಲ್ಲಿ ನಡೆಸುವುದು.

ಕಾರ್ಯ ಯೋಜನೆಯು ದ್ವಿಪಕ್ಷೀಯ ಪ್ರಯತ್ನಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ ಮತ್ತು ಉನ್ನತೀಕರಣ, ಆರಂಭಿಕ ಎಚ್ಚರಿಕೆ ವ್ಯವಸ್ಥೆಗಳನ್ನು ಹೆಚ್ಚಿಸುವಲ್ಲಿ ಪರಸ್ಪರ ಸಹಾಯ ಮತ್ತು ತುರ್ತು ಸನ್ನದ್ಧತೆ, ಅಪಾಯ ತಡೆಗಟ್ಟುವಿಕೆ, ಪ್ರತಿಕ್ರಿಯೆ ಮತ್ತು ಯೋಜನೆಯಲ್ಲಿ ಎರಡೂ ದೇಶಗಳ ಸಾಮರ್ಥ್ಯ ವರ್ಧನೆಗೆ ದಾರಿ ಮಾಡಿಕೊಡುತ್ತದೆ. ಶ್ರೀ ನಿತ್ಯಾನಂದ ರೈ ಅವರು ದೇಶದಲ್ಲಿ ವಿಪತ್ತು ಅಪಾಯಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಸೆಂಡೈ ಚೌಕಟ್ಟು ಮತ್ತು ವಿಪತ್ತು ಅಪಾಯ ತಗ್ಗಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 10 ಅಂಶಗಳ ಕಾರ್ಯಸೂಚಿಗೆ ಭಾರತದ ಬದ್ಧತೆಯನ್ನು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಾರತವನ್ನು ವಿಪತ್ತು ಸ್ಥಿತಿಸ್ಥಾಪಕವಾಗಿಸಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.

ಭಾರತೀಯ ನಿಯೋಗದಲ್ಲಿ ರಷ್ಯಾದಲ್ಲಿನ ಭಾರತದ ರಾಯಭಾರಿ ಶ್ರೀ ವಿನಯ್ ಕುಮಾರ್, ಎನ್ ಡಿ ಎಂ ಎ ಸದಸ್ಯ ಮತ್ತು ಮುಖ್ಯಸ್ಥ ಶ್ರೀ ರಾಜೇಂದ್ರ ಸಿಂಗ್, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸಂಜೀವ್ ಕುಮಾರ್ ಜಿಂದಾಲ್, ಎನ್ಆರ್ಎಸ್ಸಿ ನಿರ್ದೇಶಕರು ಮತ್ತು ಗೃಹ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

*****


(Release ID: 2049708) Visitor Counter : 34