ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಸಮಗ್ರ ಆರ್ಥಿಕ ಸಹಕಾರ ಒಪ್ಪಂದ(ಸಿಇಸಿಎ); ಸಿಡ್ನಿಯಲ್ಲಿ 5 ಹಂತಗಳಲ್ಲಿ ನಡೆದ 10ನೇ ಸುತ್ತಿನ ಭಾರತ-ಆಸ್ಟ್ರೇಲಿಯಾ ಸಿಇಸಿಎ ಮಾತುಕತೆ

Posted On: 25 AUG 2024 9:40AM by PIB Bengaluru

ಸರಕುಗಳು, ಸೇವೆಗಳು, ಡಿಜಿಟಲ್ ವ್ಯಾಪಾರ, ಸರ್ಕಾರಿ ಖರೀದಿ ಪ್ರಕ್ರಿಯೆ, ಮೂಲ ನಿಯಮ ಅಥವಾ ಮಾನದಂಡಗಳು ಮತ್ತು ಕೃಷಿ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ 10ನೇ ಸುತ್ತಿನ ಭಾರತ-ಆಸ್ಟ್ರೇಲಿಯಾ ನಡುವಿನ ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ ಸಂಧಾನ ಮಾತುಕತೆಗಳು 2024 ಆಗಸ್ಟ್ 19ರಿಂದ 22ರ ವರೆಗೆ ಜರುಗಿದವು. ಈ ಎಲ್ಲಾ ವಲಯಗಳಿಗೆ ಸಂಬಂಧಿಸಿದ ಉಳಿದ ನಿಬಂಧನೆಗಳಲ್ಲಿ ಒಮ್ಮತಾಭಿಪ್ರಾಯಕ್ಕೆ ಬರಲು ಅಗತ್ಯವಾದ ಸ್ಪಷ್ಟತೆ ಮತ್ತು ತಿಳಿವಳಿಕೆ ಹೊಂದಲು 5 ಹಂತಗಳಲ್ಲಿ ವಿಸ್ತೃತ ಚರ್ಚೆಗಳನ್ನು ನಡೆಸಲಾಯಿತು. 9ನೇ ಸುತ್ತಿನ ಮಾತುಕತೆ ಮುಕ್ತಾಯವಾದ ಸುಮಾರು 5 ತಿಂಗಳ ಅಂತರದ ನಂತರ 10ನೇ ಸುತ್ತಿನ ಸಂಧಾನ ಮಾತುಕತೆ ನಡೆಯಿತು. ಆದಾಗ್ಯೂ, ಈ ಎಲ್ಲಾ ಹಂತಗಳಲ್ಲಿ ಮತ್ತು ಉಳಿದಿರುವ ಇತರ ಹಂತಗಳಲ್ಲಿ ಒಮ್ಮತಾಭಿಪ್ರಾಯ ಮೂಡಿಸಲು ಈ 2 ಸುತ್ತುಗಳಲ್ಲಿ ಆಂತರಿಕ ಸಂವಾದ  ಸಭೆಗಳನ್ನು ನಡೆಸಲಾಯಿತು.

ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಮುಖ್ಯ ಸಂಧಾನಕಾರ ಮತ್ತು ಹೆಚ್ಚುವರಿ ಕಾರ್ಯದರ್ಶಿ ಶ್ರೀ ರಾಜೇಶ್ ಅಗರವಾಲ್ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರೆ, ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ(ಡಿಎಫ್‌ಎಟಿ) ಇಲಾಖೆಯ ಮುಖ್ಯ ಸಂಧಾನಕಾರ ಮತ್ತು ಮೊದಲ ಸಹಾಯಕ ಕಾರ್ಯದರ್ಶಿ ಶ್ರೀ ರವಿ ಕೇವಲ್ ರಾಮ್ ಅವರು ಆಸ್ಟ್ರೇಲಿಯಾ ನಿಯೋಗದ ನೇತೃತ್ವ ವಹಿಸಿದ್ದರು. ಸಭೆಯು ಪರಸ್ಪರರ ಪ್ರಸ್ತಾಪಗಳ ಉತ್ತಮ ತಿಳಿವಳಿಕೆ ಮತ್ತು ಒಮ್ಮತಾಭಿಪ್ರಾಯ ಮೂಡಿಸುವ  ಮಾರ್ಗದ ಮೂಲಕ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಲು ವಿಸ್ತೃತ ಚರ್ಚೆಗಳು ಮತ್ತು ಸಂಧಾನ ಮಾತುಕತೆಗಳು ಜರುಗಿದವು. ದೇಶೀಯ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು ಸಮತೋಲಿತ ಫಲಿತಾಂಶಕ್ಕೆ ಬರಲು ಎರಡೂ ಕಡೆಯವರು ಪ್ರಯತ್ನಗಳನ್ನು ನಡೆಸಿದರು.

ಎಲ್ಲಾ 5 ಹಂತದ ಸಮಾಲೋಚನಾ ಸಭೆಯಲ್ಲಿ ನಡೆದ ಚರ್ಚೆಯ ಫಲಿತಾಂಶಗಳನ್ನು ಮುಖ್ಯ ಸಮಾಲೋಚಕರ ಜಂಟಿ ಸಭೆಗೆ ವರದಿ ಮಾಡಿದ್ದು, ಇದು ಅವರ ಭವಿಷ್ಯದ ಕೆಲಸ ನಡೆಸಲು ಅವರಿಗೆ ಹೆಚ್ಚಿನ ಮಾರ್ಗದರ್ಶನ ನೀಡಿದೆ. 5 ಹಂತದ ಸಂಧಾನ ಮಾತುಕತೆಯಲ್ಲಿ ಪರಸ್ಪರರ ಪ್ರಸ್ತಾಪಗಳ ಸ್ಪಷ್ಟ ತಿಳಿವಳಿಕೆಗೆ ಕಾರಣವಾಗಿದೆ. ಎರಡೂ ಕಡೆಯ ಸಭಾ ನಾಯಕರು ಮುಂದಿನ ಸುತ್ತಿನ ಮೊದಲು ನಡೆಸುವ ವರ್ಚುವಲ್ ರೂಪದ  ಮಾತುಕತೆಗಳಿಗೆ ಅಗತ್ಯವಾದ ಕ್ರಿಯಾಯೋಜನೆ ರೂಪಿಸಲು ನಿರ್ಧರಿಸಲಾಯಿತು, ಈ ಸಭೆಯು ಇದು ಭಾರತದಲ್ಲಿ ನಡೆಯುವ ಸಾಧ್ಯತೆ ಇದೆ.

ಇದರ ಜತೆಗೆ, ಮುಖ್ಯ ಸಮಾಲೋಚಕರು ಅಥವಾ ಸಂಧಾನಕಾರರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಪರಿಶೀಲಿಸಿದರು. 2022 ಡಿಸೆಂಬರ್ 29ರಂದು ಜಾರಿಗೆ ಬಂದ ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದದ ಸಕಾರಾತ್ಮಕ ಪರಿಣಾಮಗಳನ್ನು ಹೊಂದುವ ಮೂಲಕ ಭಾರತ-ಆಸ್ಟ್ರೇಲಿಯಾ ನಡುವಿನ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವ ಮತ್ತು ಹೆಚ್ಚಿಸುವ ಬದ್ಧತೆಯನ್ನು ಒತ್ತಿಹೇಳಿದರು. ಎರಡೂ ಕಡೆಯವರು ಸಮಗ್ರ ಆರ್ಥಿಕ ಸಹಕಾರ ಒಪ್ಪಂದ(ಸಿಇಸಿಎ) ಸಮಾಲೋಚನೆಯು ಅರ್ಥಪೂರ್ಣ ಪ್ರಯೋಜನಗಳನ್ನು ಮತ್ತು ಎರಡೂ ಕಡೆಯವರಿಗೆ ಸಮತೋಲಿತ ಫಲಿತಾಂಶವನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸಂಧಾನಕಾರರು ಎಲ್ಲಾ ಪ್ರಯತ್ನಗಳನ್ನು ನಡೆಸಿದರು.

ಸಮಗ್ರ ಆರ್ಥಿಕ ಸಹಕಾರ ಒಪ್ಪಂದ(ಸಿಇಸಿಎ) ಮಾತುಕತೆಗಳ ಮೂಲಕ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆರ್ಥಿಕ ಸಹಕಾರದ ಕಾರಣವನ್ನು ಆಳವಾಗಿಸಲು ಮತ್ತು ಹೂಡಿಕೆಗಳನ್ನು ಉತ್ತೇಜಿಸುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸಿ, ಆಯೋಜಿಸಲಾದ ದುಂಡು ಮೇಜಿನ ಸಭೆಯಲ್ಲಿ ಆಸ್ಟ್ರೇಲಿಯಾ-ಇಂಡಿಯಾ ಬಿಸಿನೆಸ್ ಕೌನ್ಸಿಲ್(ಎಐಬಿಸಿ)ನ ರಾಷ್ಟ್ರೀಯ ಅಧ್ಯಕ್ಷ ಜೋಡಿ ಮೆಕೆ, ಗ್ರೇನ್ ಟ್ರೇಡ್ ಆಸ್ಟ್ರೇಲಿಯಾದ ಸಿಇಒ ಪ್ಯಾಟ್ ಒ'ಶನ್ನಾಸಿ ಮತ್ತು ಇತರೆ ಪ್ರತಿನಿಧಿಗಳೊಂದಿಗೆ ಫಲಪ್ರದ ಚರ್ಚೆಗಳನ್ನು ನಡೆಸಲಾಯಿತು. ಭಾರತ-ಆಸ್ಟ್ರೇಲಿಯಾ ಸಿಇಸಿಎ ಮಾತುಕತೆಗಳ 10ನೇ ಸುತ್ತಿನ ಬದಿಯಲ್ಲಿ ಈ ಮಾತುಕತೆ ನಡೆಯಿತು. ಸಿಡ್ನಿಯಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಕೂಡ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಆಸ್ಟ್ರೇಲಿಯಾವು ಹೊಸದಾಗಿ ಸ್ಥಾಪಿಸಿದ ಭಾರತ-ಆಸ್ಟ್ರೇಲಿಯಾ ಅಗ್ರಿ ಟೆಕ್ ಫೋರಮ್(ಐಎಎಟಿಎಫ್)ನ ಮೊದಲ ಸಭೆಯನ್ನು 2024 ಸೆಪ್ಟೆಂಬರ್  23ರಂದು ನವದೆಹಲಿಯಲ್ಲಿ ನಡೆಸುವ ಚಿಂತನೆಯನ್ನು  ಪ್ರಸ್ತಾಪಿಸಿದರು ಎಂಬ ವಿಷಯ ಆಸ್ಟ್ರೇಲಿಯಾ ಕಡೆಯಿಂದ ತಿಳಿದುಬಂದಿದೆ. ಭಾರತೀಯ ಕೃಷಿ ವಲಯದ ಪಾಲುದಾರರು ಅಂದರೆ ಉದ್ಯಮ, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರವು ತಂತ್ರಜ್ಞಾನ ವರ್ಗಾವಣೆ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಜ್ಞಾನ ಹಂಚಿಕೆಯ ಸುತ್ತ ಕೇಂದ್ರೀಕೃತವಾದ ಚಟುವಟಿಕೆಗಳ ಅವಕಾಶಗಳನ್ನು ಅನ್ವೇಷಿಸುವ ಮೂಲಕ ಪರಸ್ಪರ ಪ್ರಯೋಜನಕಾರಿ ಸಂಬಂಧ ಏರ್ಪಡಿಸಲು ಇದು ವೇದಿಕೆ ನಿರ್ಮಿಸಲಿದೆ.

ಕೃಷಿ ಮತ್ತು ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸ್ಟ್ರೇಲಿಯಾ ನಡೆಸುತ್ತಿರುವ ಸಂಶೋಧನಾ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳಲು ಭಾರತೀಯ ನಿಯೋಗವು ಸಿಡ್ನಿ ವಿಶ್ವವಿದ್ಯಾಲಯ ಮತ್ತು ಸಿಕಾಡಾ ಇನ್ನೋವೇಶನ್ ಸೆಂಟರ್‌ಗೆ ಭೇಟಿ ನೀಡಿತು.

ಆಸ್ಟ್ರೇಲಿಯಾ ಭಾರತದ ಪ್ರಮುಖ ವ್ಯಾಪಾರ ಮತ್ತು ಕಾರ್ಯತಂತ್ರದ ಪಾಲುದಾರನಾಗಿದೆ. ಎರಡೂ ದೇಶಗಳು 14 ದೇಶಗಳ ಇಂಡೋ-ಪೆಸಿಫಿಕ್ ವಲಯದ ಸಮೃದ್ಧಿಗಾಗಿ ಆರ್ಥಿಕ ವೇದಿಕೆ(ಇಂಡೋ ಪೆಸಿಫಿಕ್ ಎಕನಾಮಿಕ್ ಫೋರಮ್ ಫಾರ್ ಪ್ರಾಸ್ಪೆರಿಟಿ-ಐಪಿಇಎಫ್) ಮತ್ತು ತ್ರಿಪಕ್ಷೀಯ ಪೂರೈಕೆ ಸರಪಳಿ ಹೊಂದಾಣಿಕೆ ವ್ಯವಸ್ಥೆಯ ಉಪಕ್ರಮ(ಎಸ್‌ಸಿಆರ್‌ಐ)ದ ಭಾಗವಾಗಿದ್ದು, ಇದು ಈ ಪ್ರದೇಶದಲ್ಲಿ ಪೂರೈಕೆ ಸರಪಳಿ ವ್ಯವಸ್ಥೆಯನ್ನು ಬಲಪಡಿಸುವ ನಿರೀಕ್ಷೆಯಿದೆ.

ಮುಂದಿನ ಸುತ್ತಿನ ಭಾರತ-ಆಸ್ಟ್ರೇಲಿಯಾ ಸಿಇಸಿಎ ಸಂಧಾನ ಮಾತುಕತೆ 2024 ನವೆಂಬರ್ ನಲ್ಲಿ ನಡೆಯುವ ಸಾಧ್ಯತೆಯಿದೆ.

 

*****

 


(Release ID: 2048799) Visitor Counter : 36