ಉಪರಾಷ್ಟ್ರಪತಿಗಳ ಕಾರ್ಯಾಲಯ

ವಿಧಿ ವಿಜ್ಞಾನವು ನ್ಯಾಯದ ಮೂಲಾಧಾರವಾಗಿದೆ, ಇದು ಊಹಾಪೋಹಗಳ ಬದಲು  ವಾಸ್ತವವು ಜಯಗಳಿಸುವುದನ್ನು ಖಾತ್ರಿಗೊಳಿಸುತ್ತದೆ, ಎಂದು ಉಪ ರಾಷ್ಟ್ರಪತಿಯವರು ಒತ್ತಿ ಹೇಳಿದರು


ಕಾನೂನಾತ್ಮಕ ಆಡಳಿತದಲ್ಲಿ ನಾಗರಿಕರ ನಂಬಿಕೆಯನ್ನು ಬಲಪಡಿಸುವಲ್ಲಿ ವಿಧಿ ವಿಜ್ಞಾನವು ನಿರ್ಣಾಯಕವಾಗಿದೆ - ಉಪರಾಷ್ಟ್ರಪತಿ

ಅಮಾಯಕರ ಅಳಲನ್ನು ಕೇಳಲಾರದ ಸಮಾಜದ ಅಧಃಪತನ ಖಚಿತ : ಉಪರಾಷ್ಟ್ರಪತಿ

ಭವಿಷ್ಯದ ಪೀಳಿಗೆಗಾಗಿ ನಮ್ಮ ಭೂಮಿಯನ್ನು ರಕ್ಷಿಸುವ ಮಹತ್ವವನ್ನು ಶ್ರೀ ಧನಕರ್ ಒತ್ತಿ ಹೇಳಿದರು

ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯದ ಬೋಧಕರು ಮತ್ತು ವಿದ್ಯಾರ್ಥಿಗಳೊಂದಿಗೆ ಉಪರಾಷ್ಟ್ರಪತಿ ಸಂವಾದ ನಡೆಸಿದರು

Posted On: 23 AUG 2024 5:52PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ನ್ಯಾಯ ವ್ಯವಸ್ಥೆಯಲ್ಲಿ ನ್ಯಾಯ ವಿಜ್ಞಾನದ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದರು. "ವಿಧಿ ವಿಜ್ಞಾನವು ಕೇವಲ ಅಪರಾಧಿಗಳನ್ನು ಶಿಕ್ಷಿಸಲು ಇರುವ ಒಂದು ಸಾಧನಕ್ಕಿಂತ ಮೇಲಾಗಿದೆ; ಇದು ಅಮಾಯಕತೆಯನ್ನು ರುಜವಾತು ಪಡಿಸುವಲ್ಲಿಯೂ ಮುಖ್ಯವಾಗಿದೆ" ಎಂದ ಅವರು  ಅಮಾಯಕರ ಅಳಲನ್ನು ಕೇಳಲಾರದ ಸಮಾಜದ ಅಧಃಪತನ ಖಚಿತ ಎಂದು ಒತ್ತಿ ಹೇಳಿದರು.

 

ವಿಧಿ ವಿಜ್ಞಾನವು ನ್ಯಾಯದ ಮೂಲಾಧಾರವೆಂದು ಹೇಳಿದ ಶ್ರೀ ಧನಕರ್ ಅವರು "ವಿಧಿ ವಿಜ್ಞಾನವು ಕೇವಲ ತಾಂತ್ರಿಕ ಕ್ಷೇತ್ರವಲ್ಲ, ಅದು ನ್ಯಾಯದ ಮೂಲಾಧಾರವಾಗಿದೆ. ಪುರಾವೆಗಳು ಅಭಿಪ್ರಾಯಗಳಿಗಿಂತ ಜೋರಾಗಿ ಮಾತನಾಡುತ್ತವೆ ಮತ್ತು ಊಹಾಪೋಹಗಳನ್ನು ಮೀರಿ ವಾಸ್ತವವು ಜಯಗಳಿಸುವುದನ್ನು ಇದು ಖಚಿತಪಡಿಸುತ್ತದೆ” ಎಂದರು.

 

ಇಂದು ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯದ ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಧನಕರ್ ಅವರು ತಪ್ಪಾದ ತೀರ್ಮಾನವನ್ನು ತಡೆಗಟ್ಟುವಲ್ಲಿ ವಿಧಿ ವಿಜ್ಞಾನದ  ಅನಿವಾರ್ಯತೆಯನ್ನು ಹಾಗು ಇದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ಮತ್ತು ನಿರಪರಾಧಿಗಳನ್ನು ರಕ್ಷಿಸುವುದನ್ನು ಖಚಿತಪಡಿಸುತ್ತದೆ ಎನ್ನುವುದನ್ನುಎತ್ತಿ ತೋರಿಸಿದರು.

 

ಕಾನೂನಿನ ಮೇಲೆ ನಾಗರಿಕರ ನಂಬಿಕೆಯನ್ನು ಬಲಪಡಿಸುವಲ್ಲಿ ವಿಧಿ ವಿಜ್ಞಾನದ ಕ್ಷೇತ್ರವು ನಿರ್ಣಾಯಕವಾಗಿದೆ ಎಂದು ಅವರು ಒತ್ತಿಹೇಳಿದರು, ನ್ಯಾಯಾಲಯದ ತಪ್ಪಾದ ತೀರ್ಮಾನಗಳು ಸಮಾಜವನ್ನು ಆಳವಾಗಿ ನಿರಾಶೆಗೀಡುಮಾಡುತ್ತವೆ, ವಿಧಿ ವಿಜ್ಞಾನದ ಮೂಲಕ ಮಾತ್ರ ಇದನ್ನು ತಪ್ಪಿಸಬಹುದು ಎಂದು ಹೇಳಿದರು.

ವಿಧಿ ವಿಜ್ಞಾನವನ್ನು ಬಹುಮುಖಿ ವಿಭಾಗವೆಂದು ಗುರುತಿಸಿದ ಶ್ರೀ ಧನಕರ್, ನಮ್ಮ ಪ್ರಪಂಚದ ರಹಸ್ಯಗಳನ್ನು ಬಿಚ್ಚಿಡಲು, ನಮ್ಮ ಸಮುದಾಯಗಳನ್ನು ರಕ್ಷಿಸಲು ಮತ್ತು ನಮ್ಮ ರಾಷ್ಟ್ರದ ಅಭಿವೃದ್ಧಿಯ ಹಾದಿಯನ್ನು ರೂಪಿಸಲು ಇದು ಪ್ರಮುಖವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ಹವಾಮಾನ ಬದಲಾವಣೆ ಮತ್ತು ಪರಿಸರ ಅವನತಿ ಮುಂತಾದ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ವಿಧಿ ವಿಜ್ಞಾನದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತಾ, ಮಾಲಿನ್ಯದ ಮೂಲಗಳನ್ನು ಗುರುತಿಸುವಲ್ಲಿ, ವನ್ಯಜೀವಿಗಳ ಬೇಟೆಯನ್ನು ಪತ್ತೆಹಚ್ಚುವಲ್ಲಿ ಮತ್ತು ಪರಿಸರ ನಿಯಮಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ವಿಧಿ ವಿಜ್ಞಾನವು ವಿವಿಧ ಸಮರ್ಥನೀಯ ಪಾತ್ರಗಳನ್ನು ವಹಿಸುತ್ತದೆ ಎಂದು ಶ್ರೀ ಧನಕರ್ ಹೇಳಿದರು.

 

ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನೆಯಿಲ್ಲದೇ ಬಳಸಿ  ಶೋಷಿಸುವ ಬಗ್ಗೆ ಎಚ್ಚರಿಕೆ ನೀಡಿದ ಶ್ರೀ ಧನಕರ್ ಅವರು ನಮ್ಮ ಭೂಮಿಯನ್ನು  ಭವಿಷ್ಯದ ಪೀಳಿಗೆಗಾಗಿ ರಕ್ಷಿಸಿ ಇಡುವ ಮಹತ್ವವನ್ನು ಒತ್ತಿ ಹೇಳಿದರು, ಅದರ ಸಂರಕ್ಷಣೆ ಮತ್ತು ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಪ್ರಯತ್ನಕ್ಕೆ ಕರೆ ನೀಡಿದರು. ಉಲ್ಲಂಘಿಸುವವರನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ಭವಿಷ್ಯಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಪರಿಸರ ಹಾನಿಯ ಕಾರಣವನ್ನು ವೈಜ್ಞಾನಿಕವಾಗಿ ನಿರ್ಧರಿಸುವ ಸಾಮರ್ಥ್ಯವು ಅತ್ಯಗತ್ಯ ಎಂದು ಅವರು ಹೇಳಿದರು.

ಸರ್ಕಾರಿ ಸೇವೆಯನ್ನು ಮೀರಿ ಇತರ ಅವಕಾಶಗಳನ್ನು ಅನ್ವೇಷಿಸಲು ಯುವ ವೃತ್ತಿಪರರನ್ನು ಒತ್ತಾಯಿಸಿದ ಶ್ರೀ ಧನಕರ್ ಅವರು ವಿಧಿ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ವ್ಯಾಪಕ ಮತ್ತು ಫಲಪ್ರದವಾದ ಸಾಧ್ಯತೆಗಳನ್ನು ಒತ್ತಿ ಹೇಳಿದರು. ಕೋಚಿಂಗ್ ಸೆಂಟರ್ ಗಳಿಗೆ ಹೋಗುವುದರ ವಿರುದ್ಧ ಅಥವಾ ಸರ್ಕಾರಿ ಉದ್ಯೋಗಗಳಿಗೆ ಮಹತ್ವಾಕಾಂಕ್ಷೆಗಳನ್ನು ಸೀಮಿತಗೊಳಿಸುವುದರ ವಿರುದ್ಧ ಅವರು ಸಲಹೆ ನೀಡಿದರು, "ಇತರ ಕ್ಷೇತ್ರಗಳಲ್ಲಿನ ಅವಕಾಶಗಳು ಅಗಾದವಾಗಿವೆ ಮತ್ತು ಹೆಚ್ಚು ಉತ್ಪಾದಕವಾಗಿವೆ. ಅವು ನಿಮ್ಮ ಕೌಶಲ್ಯ, ಜ್ಞಾನವನ್ನು ಪರೀಕ್ಷಿಸುತ್ತವೆ ಮತ್ತು ನಾವೀನ್ಯತೆ ಮತ್ತು ಸಂಶೋಧನೆಯನ್ನು ಉತ್ತೇಜಿಸುತ್ತವೆ." ಎಂದು ಹೇಳಿದರು.

ವಿಧಿ ವಿಜ್ಞಾನವನ್ನು ಉದಾಹರಣೆಯಾಗಿ ಬಳಸುತ್ತಾ, ಶ್ರೀ ಧನಕರ್ ಈ ಪ್ರಮುಖ ಕ್ಷೇತ್ರದಲ್ಲಿನ ತಜ್ಞರು ತಮ್ಮನ್ನು ಸರ್ಕಾರಿ ಕೆಲಸಗಳಿಗೆ ಮಾತ್ರ ಏಕೆ ಸೀಮಿತಗೊಳಿಸುತ್ತಾರೆ ಎಂದು ಪ್ರಶ್ನಿಸಿ ವೃತ್ತಿ ಅವಕಾಶಗಳ ಬಗ್ಗೆ ವಿಶಾಲ ದೃಷ್ಟಿಕೋನವನ್ನು ಹೊಂದಿರಬೇಕೆಂದು ಪ್ರೋತ್ಸಾಹಿಸಿದರು.

ಉಪರಾಷ್ಟ್ರಪತಿಗಳು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ನೈತಿಕತೆ ಮತ್ತು ಸಮಗ್ರತೆಯ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯುವಂತೆ ಮನವಿ ಮಾಡಿದರು, ಯಾವುದೇ ದುರ್ಬಲತೆಯು ಭಯೋತ್ಪಾದಕನನ್ನು ತಪ್ಪಿಸಿಕೊಳ್ಳುವಂತೆ ಮಾಡುವ ಅಥವಾ ಅಮಾಯಕ ವ್ಯಕ್ತಿಯನ್ನು ಜೈಲಿಗೆ ಕಳುಹಿಸುವಂತಹ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಒತ್ತಿ ಹೇಳಿದರು. "ಯಾವಾಗಲೂ ಸತ್ಯವು ನಿಮ್ಮ ಕೆಲಸಕ್ಕೆ ಮಾರ್ಗದರ್ಶನ ನೀಡಲಿ ಮತ್ತು ಪಕ್ಷಪಾತ ಮತ್ತು ರಾಜಿಯಿಲ್ಲದೆ ನ್ಯಾಯವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಿ" ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗುಜರಾತಿನ ಗೌರವಾನ್ವಿತ ಗವರ್ನರ್ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಸರ್ಕಾರದ ಶಿಷ್ಟಾಚಾರದ ರಾಜ್ಯ ಸಚಿವ ಶ್ರೀ ಜಗದೀಶ್ ವಿಶ್ವಕರ್ಮ, ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಜೆ.ಎಂ.ವ್ಯಾಸ್, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

 

*****



(Release ID: 2048581) Visitor Counter : 7