ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ನಿನಲ್ಲಿ ಅಂದಾಜು 1003 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು
ಅಹ್ಮದಾಬಾದನ್ನು ಭವಿಷ್ಯಕ್ಕೆ ಸಿದ್ಧವಾದ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಮತ್ತು ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ನಗರವನ್ನಾಗಿ ಮಾಡುವುದು ನಮ್ಮ ಬದ್ಧತೆಯಾಗಿದೆ
ಗಾಂಧಿನಗರ ಲೋಕಸಭಾ ಕ್ಷೇತ್ರ ಅಭಿವೃದ್ಧಿಯಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಏಕ್ ಪೆಡ್ ಮಾ ಕೆ ನಾಮ್' ಕರೆ ಕೇವಲ ಘೋಷಣೆಯಲ್ಲ; ಅದೊಂದು ಜನಾಂದೋಲನ
ಭವಿಷ್ಯದ ಪೀಳಿಗೆಗಾಗಿ 100 ದಿನಗಳಲ್ಲಿ 3 ಮಿಲಿಯನ್ ಗಿಡಗಳನ್ನು ನೆಡಲು ಎಎಂಸಿ ಪ್ರತಿಜ್ಞೆ
ನಮ್ಮ ಜೀವಿತಾವಧಿಯಲ್ಲಿ, ನಾವು ಹೊರಸೂಸುವ ಇಂಗಾಲದ ಡೈಆಕ್ಸೈಡ್ ನಷ್ಟು ಪ್ರಮಾಣದ ಆಮ್ಲಜನಕವನ್ನು ಉತ್ಪಾದಿಸಲು ಅಗತ್ಯವಿರುವಷ್ಟು ಮರಗಳನ್ನು ನೆಡಬೇಕು
Posted On:
18 AUG 2024 5:33PM by PIB Bengaluru
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನ 1003 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಂಚಿತವಾಗಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಥಾಲ್ಟೆಜ್ (ಅಹಮದಾಬಾದ್) ನಲ್ಲಿ 'ಆಮ್ಲಜನಕ ಪಾರ್ಕ್' ಉದ್ಘಾಟಿಸಿದರು ಮತ್ತು ವೆಜಲ್ಪುರದಲ್ಲಿ 'ಮಿಷನ್ 3 ಮಿಲಿಯನ್ ಟ್ರೀ ಸ್ಕೀಮ್' ಅಡಿಯಲ್ಲಿ ಗಿಡಗಳನ್ನು ನೆಟ್ಟರು. ಶ್ರೀ ಶಾ ಅವರು ಮಕರ್ಬಾದಲ್ಲಿ ಹೊಸದಾಗಿ ನಿರ್ಮಿಸಲಾದ ಈಜುಕೊಳ ಮತ್ತು ಜಿಮ್ ಉದ್ಘಾಟಿಸಿದರು.
ಎ.ಎಂ.ಸಿ.ಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಇಂದು ಅಹ್ಮದಾಬಾದ್ ನಗರಕ್ಕೆ ಸಮರ್ಪಿಸಲಾದ ಅಭಿವೃದ್ಧಿ ಕಾರ್ಯಗಳಲ್ಲಿ 730 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಮತ್ತು ಉಳಿದವುಗಳನ್ನು ಇತರ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಮಾಡಲಾಗಿದೆ ಎಂದು ಹೇಳಿದರು. ಲೋಕಸಭಾ ಸಂಸದರಾಗಿದ್ದ ತಮ್ಮ ಅಧಿಕಾರಾವಧಿಯ ಹಿಂದಿನ ಐದು ವರ್ಷಗಳಲ್ಲಿ, ಗಾಂಧಿನಗರ ಕ್ಷೇತ್ರದಲ್ಲಿ ಮಹಾನಗರ ಪಾಲಿಕೆ ಮತ್ತು ಗುಜರಾತ್ ಸರ್ಕಾರವು ಒಂದು ವರ್ಷದಲ್ಲಿ 5,000 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದ ಒಂದೇ ಒಂದು ವರ್ಷವೂ ಇಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಗಾಂಧಿನಗರ ಲೋಕಸಭಾ ಕ್ಷೇತ್ರವು ಅಭಿವೃದ್ಧಿಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಎಂದು ಅವರು ಹೇಳಿದರು.
ಇಂದು ಮಾಡಲಾದ ಸಾರ್ವಜನಿಕ ಕಾರ್ಯಗಳ ಭಾಗವಾಗಿ, ಗಾಂಧಿನಗರ ಲೋಕಸಭೆಯಲ್ಲಿ 21 ಯೋಜನೆಗಳನ್ನು ಸಮರ್ಪಿಸಲಾಗಿದೆ, ನಾಲ್ಕು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ, ಇತರ ಎರಡು ಲೋಕಸಭಾ ಕ್ಷೇತ್ರಗಳಲ್ಲಿ 18 ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಎರಡು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇವುಗಳಲ್ಲಿ ನೈರ್ಮಲ್ಯ, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳು, ಮಕ್ಕಳಿಗೆ ಉತ್ತಮ ವೇದಿಕೆಯನ್ನು ನೀಡುವ ಸಂಸ್ಥೆಯನ್ನು ಪ್ರಾರಂಭಿಸುವುದು ಮತ್ತು ಪರಿಸರವನ್ನು ರಕ್ಷಿಸಲು ಆಮ್ಲಜನಕ ಉದ್ಯಾನವನ್ನು ಸಮರ್ಪಿಸುವುದು ಸೇರಿವೆ ಎಂದರು.
ಭವಿಷ್ಯದ ಪೀಳಿಗೆಗಾಗಿ 100 ದಿನಗಳಲ್ಲಿ 30 ಲಕ್ಷ ಮರಗಳನ್ನು ನೆಡಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ಶ್ಲಾಘನೀಯ ಅಭಿಯಾನದೊಂದಿಗೆ ತಾವು ನಿಕಟ ಸಂಬಂಧ ಹೊಂದಿರುವುದಾಗಿ ಅವರು ಹೇಳಿದರು. ತಾನು ಪ್ರತಿ ಸೊಸೈಟಿಯ ಅಧ್ಯಕ್ಷರಿಗೆ, ಕಾರ್ಯದರ್ಶಿಗೆ, ಪ್ರತಿ ಗ್ರಾಮದ ಸರಪಂಚರಿಗೆ, ಪ್ರತಿ ಪುರಸಭೆಯ ಕೌನ್ಸಿಲರ್ ಮತ್ತು ಇತರ ಪ್ರಬುದ್ಧ ಜನರಿಗೆ ಪತ್ರಗಳನ್ನು ಬರೆದಿರುವುದಾಗಿ ಮತ್ತು ದೂರವಾಣಿ ಕರೆಗಳನ್ನು ಮಾಡಿರುವುದಾಗಿಯೂ ಅವರು ಹೇಳಿದರು. ಅಹ್ಮದಾಬಾದ್ ನಿವಾಸಿಗಳು ತಮ್ಮ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತಮ್ಮ ಸೊಸೈಟಿಗಳಲ್ಲಿ, ಹತ್ತಿರದ ಖಾಲಿ ಭೂಮಿಯಲ್ಲಿ ಅಥವಾ ಮಕ್ಕಳ ಶಾಲೆಯಲ್ಲಿ ಗಿಡಗಳನ್ನು ನೆಡುವಂತೆ ಶ್ರೀ ಶಾ ವಿನಂತಿಸಿದರು. ನಮ್ಮ ಜೀವಿತಾವಧಿಯಲ್ಲಿ, ನಾವು ಹೊರಸೂಸುವ ಇಂಗಾಲದ ಡೈಆಕ್ಸೈಡ್ನಷ್ಟು ಪ್ರಮಾಣದ ಆಮ್ಲಜನಕವನ್ನು ಉತ್ಪಾದಿಸಲು ಅಗತ್ಯವಿರುವಷ್ಟು ಗಿಡಗಳನ್ನು ನೆಡಬೇಕು ಎಂದು ಅವರು ಹೇಳಿದರು.
ವಾಹನ ಅಥವಾ ದೇಹ ಅಥವಾ ಎಸಿ ಅಥವಾ ಬೆಳಕಿನ ಮೂಲಕ ನಾವು ಉತ್ಪಾದಿಸುವ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಪ್ರತಿಯೊಬ್ಬ ನಾಗರಿಕನು ತಿಳಿದುಕೊಂಡು, ತಮ್ಮ ಜೀವನದಿಂದ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ಆಮ್ಲಜನಕವನ್ನು ಹೆಚ್ಚಿಸುವುದು ಜೀವನದ ಗುರಿಯಾಗಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಎರಡೂ ಇಂದು ಭೂಮಿ ಮತ್ತು ಮಾನವ ಅಸ್ತಿತ್ವಕ್ಕೆ ಗಂಭೀರ ಬೆದರಿಕೆಗಳಾಗಿವೆ ಎಂದು ಅವರು ನುಡಿದರು.
ಪ್ರಧಾನಮಂತ್ರಿ ಮತ್ತು ಗುಜರಾತ್ ನ ಪುತ್ರ ಶ್ರೀ ನರೇಂದ್ರ ಮೋದಿ ಜೀ ಅವರು 'ಏಕ್ ಪೆಡ್ ಮಾ ಕೆ ನಾಮ್' ಗಿಡ ನೆಡುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ತಾಯಿ ಜೀವಂತವಾಗಿದ್ದರೆ, ಆಗ ಗಿಡವನ್ನು ನೆಡಬೇಕು ಮತ್ತು ಆಕೆ ಅಸು ನೀಗಿದರೆ ಆಗಲೂ ಆಕೆಯ ಚಿತ್ರದೊಂದಿಗೆ ಗಿಡವನ್ನು ನೆಡಬೇಕು ಎಂದು ಅವರು ಹೇಳಿದರು. ನಮ್ಮ ತಾಯಂದಿರಿಗೆ ನಮ್ಮ ಋಣವನ್ನು ವ್ಯಕ್ತಪಡಿಸಲು ಇದಕ್ಕಿಂತ ಉತ್ತಮ ಮಾರ್ಗ ಇಲ್ಲ ಎಂದವರು ನುಡಿದರು.
'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನಕ್ಕೆ ಸೇರುವಂತೆ ಅಹಮದಾಬಾದ್ ನಿವಾಸಿಗಳಿಗೆ ಮನವಿ ಮಾಡಿದ ಕೇಂದ್ರ ಗೃಹ ಸಚಿವರು, ಮುನ್ಸಿಪಲ್ ಕಾರ್ಪೊರೇಷನ್ ಎಷ್ಟು ಆಮ್ಲಜನಕ ಉದ್ಯಾನಗಳನ್ನು ನಿರ್ಮಿಸಿದರೂ, ಅದು ಎಷ್ಟು ಮಿಯಾವಾಕಿ ಕಾಡುಗಳನ್ನು ನಿರ್ಮಿಸಿದರೂ, ಅದು ಎಷ್ಟು ಗಿಡಗಳನ್ನು ನೆಟ್ಟರೂ, ಅಹಮದಾಬಾದಿನ ಪ್ರತಿಯೊಬ್ಬ ನಾಗರಿಕನು ಒಂದು ಗಿಡವನ್ನು ನೆಟ್ಟರೆ, ಆಗ ಅವುಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಿದರು. ಗಿಡವನ್ನು ನೆಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಾವೆಲ್ಲರೂ ಪರಿಗಣಿಸಬೇಕು ಎಂದು ಅವರು ಹೇಳಿದರು. ಗಿಡವು ನಮ್ಮ ಎತ್ತರವನ್ನು ತಲುಪುವವರೆಗೆ ಮಗುವಿನಂತೆ ನೋಡಿಕೊಳ್ಳುವ ಮೂಲಕ ಅಂತಹ ಕೆಲಸವನ್ನು ಪ್ರೋತ್ಸಾಹಿಸಬೇಕು. ಇದು ಕೇವಲ ಮಾತೃ ವೃಕ್ಷದ ಹೆಸರಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಘೋಷಣೆಯಲ್ಲ, ಇದು ಜನಾಂದೋಲನವಾಗಿದೆ ಎಂದರು.
60 ವರ್ಷಗಳ ನಂತರ, ದೇಶದ ಜನರು ಒಬ್ಬ ವ್ಯಕ್ತಿಯನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಿದ್ದಾರೆ ಮತ್ತು ಈ ಸವಲತ್ತು ಶ್ರೀ ನರೇಂದ್ರ ಮೋದಿ ಅವರಿಗೆ ಲಭಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಹ್ಮದಾಬಾದಿನ ಎಲ್ಲಾ ಮೂರು ಲೋಕಸಭಾ ಸ್ಥಾನಗಳು ನರೇಂದ್ರಭಾಯ್ ಅವರಿಗೆ ಹೋಗಿದ್ದರೆ, ಗುಜರಾತ್ 25 ಸ್ಥಾನಗಳ ಕೊಡುಗೆ ನೀಡಿದೆ ಎಂದರು.
ಅಭಿವೃದ್ಧಿ ಹೊಂದಿದ ಅಹ್ಮದಾಬಾದ್ ನಿರ್ಮಾಣ ನಮ್ಮ ಸಂಕಲ್ಪವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಅಹ್ಮದಾಬಾದ್ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ನಗರವಾಗಲಿದೆ, ಹೊಗೆಯಿಲ್ಲದ ನಗರವಾಗಲಿದೆ, ಪ್ರತಿ ಮನೆಯಲ್ಲೂ ಶೌಚಾಲಯವಿದೆ ಮತ್ತು ಪ್ರತಿಯೊಬ್ಬರೂ ಆರೋಗ್ಯ ಕಾರ್ಡ್ ಹೊಂದಿರುತ್ತಾರೆ - ಮುಂದಿನ ಎರಡು ವರ್ಷಗಳಲ್ಲಿ ಅಂತಹ ನಗರವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ನಾವು ಪೂರೈಸುತ್ತೇವೆ ಮತ್ತು ಅಹಮದಾಬಾದ್ ಅನ್ನು ಇಡೀ ದೇಶದ ನಗರಗಳಲ್ಲಿ ಅಗ್ರಸ್ಥಾನಕ್ಕೆ ತರಲು ಕೆಲಸ ಮಾಡುತ್ತೇವೆ. ಮುನ್ಸಿಪಲ್ ಕಾರ್ಪೊರೇಷನ್ ಸುಂದರವಾದ ಈಜುಕೊಳಗಳು, ಜಿಮ್ ಗಳನ್ನು ನಿರ್ಮಿಸಿದೆ ಮತ್ತು ಯೋಗಾಸನವನ್ನು ಕಲಿಸಲು ಉತ್ತಮ ವ್ಯವಸ್ಥೆಗಳನ್ನು ಮಾಡಿದೆ ಎಂದು ಅವರು ಹೇಳಿದರು. ಜಿಮ್ ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲಾಗುವುದು. ಕಡಿಮೆ ಶುಲ್ಕಕ್ಕೆ ಈಜು ವ್ಯವಸ್ಥೆ ಮಾಡಲಾಗಿದೆ ಮತ್ತು ಯೋಗಾಸನವನ್ನು ಸಹ ಉಚಿತವಾಗಿ ವ್ಯವಸ್ಥೆ ಮಾಡಲಾಗಿದೆ. ಸುಂದರವಾದ ಕೊಳಗಳು ಮತ್ತು ಆಮ್ಲಜನಕ ಉದ್ಯಾನವನಗಳನ್ನು ಸಹ ರಚಿಸಲಾಗಿದೆ ಎಂದೂ ಅವರು ಹೇಳಿದರು.
*****
(Release ID: 2046510)
Visitor Counter : 52