ಉಪರಾಷ್ಟ್ರಪತಿಗಳ ಕಾರ್ಯಾಲಯ
ತಪ್ಪಿಸಬಹುದಾದ ಆಮದುಗಳಿಗಿಂತ ಸ್ಥಳೀಯ ಉತ್ಪಾದನೆಗೆ ಆದ್ಯತೆ ನೀಡುವಂತೆ ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯ ವಲಯಗಳಿಗೆ ಒತ್ತಾಯಿಸಿದ ಉಪರಾಷ್ಟ್ರಪತಿಗಳು
ಆರ್ಥಿಕ ರಾಷ್ಟ್ರೀಯತೆಯು ಸ್ವದೇಶಿ ಛಾಯೆ ಮತ್ತು ಸ್ಥಳೀಯತೆಗೆ ಧ್ವನಿಯಾಗಿರುವುದನ್ನು ಪ್ರತಿಬಿಂಬಿಸುತ್ತದೆ
ಆರ್ಥಿಕ ಶಕ್ತಿಯಿಂದಾಗುವ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಭವಿಷ್ಯದ ಪೀಳಿಗೆಯನ್ನು ಅಪಾಯಕ್ಕೆ ತಳ್ಳುತ್ತವೆ
ರಾಜಕೀಯ, ಆರ್ಥಿಕ ಮತ್ತು ಸ್ವಹಿತಾಸಕ್ತಿಗಳಿಗಿಂತ ರಾಷ್ಟ್ರದ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸಾಮೂಹಿಕ ಪ್ರಯತ್ನಕ್ಕೆ ಶ್ರೀ ಧನಕರ್ ಕರೆ ನೀಡಿದರು
ಸಾಮಾನ್ಯ ನಾಗರಿಕರ ಜೀವನದಲ್ಲಿ ನಿಜವಾದ ಬದಲಾವಣೆಯನ್ನು ತರಲು ಸ್ಪಷ್ಟವಾದ ಕ್ರಮಗಳ ಅಗತ್ಯವನ್ನು ಉಪರಾಷ್ಟ್ರಪತಿಗಳು ಪ್ರತಿಪಾದಿಸಿದರು
Posted On:
17 AUG 2024 3:08PM by PIB Bengaluru
ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಆರ್ಥಿಕ ರಾಷ್ಟ್ರೀಯತೆಯನ್ನು ಅಳವಡಿಸಿಕೊಳ್ಳುವಂತೆ ದೇಶದ ಜನರಿಗೆ ಕರೆ ನೀಡಿದರು, ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳು ತಪ್ಪಿಸಬಹುದಾದ ಆಮದುಗಳಿಗಿಂತ ಸ್ಥಳೀಯ ಉತ್ಪಾದನೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು. ಆರ್ಥಿಕ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಸ್ವದೇಶಿಯ ಛಾಯೆ ಮತ್ತು ಸ್ಥಳೀಯತೆಗೆ ಧ್ವನಿಯಾಗುವುದರ ಪ್ರತಿಬಿಂಬ ಎಂದು ವಿವರಿಸಿದ ಶ್ರೀ ಧನಕರ್ ಅವರು ಅನಗತ್ಯ ಆಮದುಗಳು ಹೇಗೆ ವಿದೇಶಿ ವಿನಿಮಯದ ಸೋರಿಕೆ ಮತ್ತು ಉದ್ಯೋಗಾವಕಾಶಗಳ ನಷ್ಟ ಸೇರಿದಂತೆ ದೇಶದ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತವೆ ಎಂದು ವಿವರಿಸಿದರು.
"ಜಮಖಾನೆ, ಬಟ್ಟೆ, ಮತ್ತು ಆಟಿಕೆಗಳು ಮುಂತಾದ ವಸ್ತುಗಳ ಆಮದಿನ ಮೇಲೆ ನಮ್ಮ ಅವಲಂಬನೆಯು ನಮ್ಮ ವಿದೇಶಿ ವಿನಿಮಯವನ್ನು ವಿದೇಶಕ್ಕೆ ಕಳುಹಿಸುವುದರ ಜೊತೆಗೆ ದೇಶೀಯ ಉದ್ಯಮಶೀಲತೆಯ ಬೆಳವಣಿಗೆಗೂ ಅಡ್ಡಿಯಾಗುತ್ತಿದೆ" ಎಂದು ಶ್ರೀ ಧನಕರ್ ಹೇಳಿದರು. ಸ್ಥಳೀಯ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಅವರು ಉದ್ಯಮಗಳಿಗೆ ಮನವಿ ಮಾಡಿದರು, ಇದು ಭಾರತೀಯ ಕಾರ್ಮಿಕರಿಗೆ ಕೆಲಸವನ್ನು ಒದಗಿಸುವುದರ ಜೊತೆಗೆ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ.
ವೆಂಕಟಾಚಲಂನ ಸ್ವರ್ಣ ಭಾರತ್ ಟ್ರಸ್ಟ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಧನಕರ್ ಅವರು, ನೈಸರ್ಗಿಕ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯ ಅಗತ್ಯವನ್ನು ಪ್ರತಿಪಾದಿಸಿ, ಆರ್ಥಿಕ ಶಕ್ತಿಗಿಂತ ಅವಶ್ಯಕತೆಯ ಆಧಾರದ ಮೇಲೆ ಸಂಪನ್ಮೂಲಗಳನ್ನು ಬಳಸಬೇಕೆಂದು ನಾಗರಿಕರಿಗೆ ತಿಳಿಸಿದರು. ಆರ್ಥಿಕ ಶಕ್ತಿಯಿಂದ ನಡೆಸಲ್ಪಡುವ ನೈಸರ್ಗಿಕ ಸಂಪನ್ಮೂಲಗಳ ಮಿತಿಮೀರಿದ ಬಳಕೆ ಭವಿಷ್ಯದ ಪೀಳಿಗೆಗೆ ಮಾರಕವಾಗಲಿದೆ ಎಂದರು.
ಅಜಾಗರೂಕ ವೆಚ್ಚಗಳ ವಿರುದ್ಧ ಎಚ್ಚರಿಕೆ ನೀಡಿದ ಶ್ರೀ ಧನಕರ್, ಇವು ಭವಿಷ್ಯದ ಪೀಳಿಗೆಯ ಯೋಗಕ್ಷೇಮಕ್ಕೆ ಧಕ್ಕೆ ತರುತ್ತವೆ. ನಾವು ನಮ್ಮ ಹಣದ ಬಲದ ಮೇಲೆ ಅನಗತ್ಯವಾಗಿ ಖರ್ಚು ಮಾಡಿದರೆ, ಮುಂದಿನ ಪೀಳಿಗೆಯನ್ನು ಅಪಾಯಕ್ಕೆ ತಳ್ಳುತ್ತೇವೆ, ಎಂದು ಅವರು ಹೇಳಿದರು.
ಮೌಲ್ಯವರ್ಧನೆಯಿಲ್ಲದೆ ಕಬ್ಬಿಣದ ಅದಿರಿನಂತಹ ಕಚ್ಚಾ ವಸ್ತುಗಳನ್ನು ರಫ್ತು ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಧನಕರ್ ಅವರು, ಈ ಅಭ್ಯಾಸವು ಉದ್ಯೋಗ ಸಾಮರ್ಥ್ಯವನ್ನು ಕುಗ್ಗಿಸುವುದಲ್ಲದೆ ದೇಶದ ಆರ್ಥಿಕ ಚೌಕಟ್ಟನ್ನೂ ದುರ್ಬಲಗೊಳಿಸುತ್ತದೆ ಎಂದರು. “ನಮ್ಮ ಕಬ್ಬಿಣದ ಅದಿರು ಯಾವುದೇ ಮೌಲ್ಯವರ್ಧನೆಗೊಳಗಾಗದೆ ಬಂದರುಗಳಿಂದ ರಫ್ತಾಗುವುದನ್ನು ನೋಡುವುದು ನೋವಿನ ಸಂಗತಿ. ಒಂದು ರಾಷ್ಟ್ರವಾಗಿ, ದೀರ್ಘಾವಧಿಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಡೆಗಣಿಸಿ ಸುಲಭ ಮತ್ತು ತ್ವರಿತ ಹಣಕ್ಕೆ ಆದ್ಯತೆ ನೀಡುವುದು ಸರಿಯಲ್ಲ, ” ಎಂದು ಶ್ರೀ ಉಪರಾಷ್ಟ್ರಪತಿಗಳು ಹೇಳಿದರು.
ರಾಜಕೀಯ, ಆರ್ಥಿಕ ಮತ್ತು ಸ್ವಹಿತಾಸಕ್ತಿಗಳಿಗಿಂತ ರಾಷ್ಟ್ರದ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸಾಮೂಹಿಕ ಪ್ರಯತ್ನದ ಅಗತ್ಯವನ್ನು ಶ್ರೀ ಧನಕರ್ ಪ್ರತಿಪಾದಿಸಿದ ಅವರು, ನಮ್ಮ ಮನಸ್ಥಿತಿಯ ಬದಲಾವಣೆಯಿಂದ ಇದನ್ನು ಸಾಧಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
"ಸಂಗಚ್ಛಧ್ವಂ ಸಂವದಧ್ವಂ ಸಂ ವೋ" ಎಂಬ ಋಗ್ವೇದದ ಶ್ಲೋಕವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಗಳು, "ನಾವೆಲ್ಲ ಒಟ್ಟಿಗೆ ಸಾಗೋಣ. ಒಂದೇ ಧ್ವನಿಯಲ್ಲಿ ಮತ್ತು ಯಾವಾಗಲೂ ರಾಷ್ಟ್ರದ ಹಿತಕ್ಕಾಗಿ ಮಾತನಾಡೋಣ" ಎಂದು ಅವರು ಹೇಳಿದರು. ರಾಷ್ಟ್ರೀಯ ಏಕತೆಯ ಮಹತ್ವವನ್ನು ಒತ್ತಿ ಹೇಳಿದ ಅವರು, "ನಮ್ಮ ಆದ್ಯತೆಗಳ ಪಟ್ಟಿಯಲ್ಲಿ ಯಾವಾಗಲೂ ರಾಷ್ಟ್ರದ ಹಿತಾಸಕ್ತಿಗೆ ಮೊದಲ ಪ್ರಾಶಸ್ತ್ಯ ನೀಡೋಣ, " ಎಂದು ಕರೆ ಕೊಟ್ಟರು. ಭರವಸೆಯನ್ನು ಕಳೆದುಕೊಂಡಿರುವ ದೇಶದ ಸಾಮಾನ್ಯ ನಾಗರಿಕರ ಜೀವನದಲ್ಲಿ ನಿಜವಾದ ಬದಲಾವಣೆಯನ್ನು ತರುವ ಸ್ಪಷ್ಟ ಕ್ರಮಗಳ ತುರ್ತು ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಬಗ್ಗೆ ಅಪಾರವಾದ ಮೆಚ್ಚುಗೆ ಮತ್ತು ಗೌರವವನ್ನು ವ್ಯಕ್ತಪಡಿಸಿದ ಶ್ರೀ ಧನಕರ್ ಅವರು, ಶ್ರೀ ನಾಯ್ಡು ಅವರು ರಾಷ್ಟ್ರದ ಕಲ್ಯಾಣಕ್ಕಾಗಿ ತಮ್ಮ ಜೀವಮಾನವನ್ನು ಸಮರ್ಪಣೆ ಮಾಡಿದ ಬಗ್ಗೆ ಹಾಗೂ ಸಾರ್ವಜನಿಕ ಜೀವನವನ್ನು ರೂಪಿಸಿದ ಆದರ್ಶಗಳೆಡೆಗೆ ಅವರ ಅಚಲ ಬದ್ಧತೆಯನ್ನು ಕುರಿತು ಹೇಳಿದರು.
"ಅವರ ತತ್ವ ಮತ್ತು ಆದರ್ಶಗಳನ್ನು ಅನುಕರಿಸುವುದು ಸುಲಭ. ಆದರೆ ಅವರ ದಾರಿಯಲ್ಲಿ ನಡೆಯುವುದು ಕಷ್ಟ. ಅವರದು ರಾಷ್ಟ್ರ ಕಲ್ಯಾಣಕ್ಕಾಗಿ ಮೀಸಲಾದ ಜೀವನ. ಆದರ್ಶಗಳಿಗೆ ಅಚಲವಾದ ಬದ್ಧತೆ ಪ್ರದರ್ಶಿಸಿದ ಜೀವನ. ಗ್ರಾಮೀಣ ಭಾರತ ಅವರು ಅಪಾರವಾಗಿ ಪ್ರೀತಿಸುತ್ತಾರೆ. ನಾನು ಸ್ವರ್ಣ ಭಾರತ ಟ್ರಸ್ಟ್‌ನ ಆವರಣಕ್ಕೆ ಕಾಲಿಟ್ಟ ಕ್ಷಣದಿಂದ, ಪ್ರತಿಯೊಂದು ಕ್ರಿಯೆಯಲ್ಲೂ ನಾಗರಿಕತೆಯನ್ನು ಕಾಣುತ್ತಿದ್ದೇನೆ,”ಎಂದು ಅವರು ಹೇಳಿದರು.
*****
(Release ID: 2046387)
Visitor Counter : 40