ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

 ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಆರ್ಥಿಕ ರಾಷ್ಟ್ರೀಯತೆ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಮುಖ್ಯ ಆಧಾರಸ್ತಂಭವಾಗಿದೆ ಎಂದು ಪ್ರತಿಪಾದಿಸಿದರು 


ಕೈಮಗ್ಗ ಉತ್ಪನ್ನಗಳು ಪ್ರಧಾನಮಂತ್ರಿಯವರ "ವೋಕಲ್ ಫಾರ್ ಲೋಕಲ್" ಕಲ್ಪನೆಯ ಮುಖ್ಯ ಭಾಗವಾಗಿದೆ

ಕೈಮಗ್ಗ ಉತ್ಪನ್ನಗಳನ್ನು ಉತ್ತೇಜಿಸಲು ಭಾರತದ ಕಾರ್ಪೊರೇಟ್ ಸಂಸ್ಥೆಗಳಿಗೆ ಉಪರಾಷ್ಟ್ರಪತಿಗಳು ಮನವಿ

ಕೈಮಗ್ಗವು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ, ಇದನ್ನು ಫ್ಯಾಷನ್ ವಿನ್ಯಾಸದೊಂದಿಗೆ ಸಂಯೋಜಿಸುವ ಅಗತ್ಯವಿದೆ: ಉಪರಾಷ್ಟ್ರಪತಿಗಳು

ಉಪರಾಷ್ಟ್ರಪತಿಗಳು 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

Posted On: 07 AUG 2024 3:10PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಕೈಮಗ್ಗ ಉತ್ಪನ್ನಗಳು ಪ್ರಧಾನಮಂತ್ರಿಯವರ 'ವೋಕಲ್ ಫಾರ್ ಲೋಕಲ್ ' (ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು) ಕಲ್ಪನೆಯ ಪ್ರಮುಖ ಭಾಗವಾಗಿದೆ ಎಂದು ಒತ್ತಿ ಹೇಳಿದರು. ಕೈಮಗ್ಗ ಉತ್ಪನ್ನಗಳನ್ನು 'ಸ್ವದೇಶಿ ಆಂದೋಲನ'ದ ನಿಜವಾದ ಸ್ಪೂರ್ತಿಯಲ್ಲಿ ಹರಡಬೇಕು ಎಂದು ಅವರು ಮನವಿ ಮಾಡಿದರು.

 

ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು,  ನಮ್ಮ ಆರ್ಥಿಕ ಸ್ವಾಯತ್ತತೆ ಮತ್ತು ಆರ್ಥಿಕ ಸ್ವಾಭಿಮಾನಕ್ಕಾಗಿ ಆರ್ಥಿಕ ರಾಷ್ಟ್ರೀಯತೆಯು ಅತ್ಯಂತ ಪ್ರಮುಖವಾಗಿದೆ ಎಂದು  ವಿವರಿಸಿದರು. ಕೈಮಗ್ಗದ ಪರಿಸರ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ಹಿಡಿದ ಅವರು, "ಹವಾಮಾನ ಬದಲಾವಣೆಯ ವಿಷಯದಲ್ಲಿ ಕೈಮಗ್ಗವನ್ನು ಉತ್ತೇಜಿಸುವುದು ಇಂದಿನ ಅಗತ್ಯ, ದೇಶದ  ಮತ್ತು ಭೂಮಿಯ ಅಗತ್ಯವಾಗಿದೆ" ಎಂದು ಹೇಳಿದರು. 

 

ಉದ್ಯೋಗ ಸೃಷ್ಟಿಯಲ್ಲಿ, ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ, ಕೈಮಗ್ಗದ ಮಹತ್ವವನ್ನು ಒತ್ತಿಹೇಳುತ್ತಾ, ಉಪರಾಷ್ಟ್ರಪತಿಯವರು ಅಂತಹ ಉತ್ಪನ್ನಗಳಿಗೆ ಸಾಕಷ್ಟು ಮಾರುಕಟ್ಟೆ ಅವಕಾಶಗಳನ್ನು ಖಾತ್ರಿಪಡಿಸಿಕೊಳ್ಳುವಂತೆ ಕರೆ ನೀಡಿದರು. ಭಾರತದ ಕಾರ್ಪೊರೇಟ್ ಕ್ಷೇತ್ರವು, ವಿಶೇಷವಾಗಿ ಹೋಟೆಲ್ ಉದ್ಯಮದಲ್ಲಿ ಕೈಮಗ್ಗ ಉತ್ಪನ್ನಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದರು. ಇಂತಹ ಬದ್ಧತೆಯು ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವುದಷ್ಟೇ ಅಲ್ಲದೆ ದೇಶದ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

 

 

ಆರ್ಥಿಕ  ರಾಷ್ಟ್ರೀಯತೆಯನ್ನು ನಮ್ಮ ಪ್ರಮುಖ ಆರ್ಥಿಕ ಬೆಳವಣಿಗೆಗೆ ಆಧಾರವಾಗಿ ವಿವರಿಸಿದ ಶ್ರೀ. ಧನಕರ್ ಅವರು, ಆರ್ಥಿಕ ರಾಷ್ಟ್ರೀಯತೆಯ ಮೂರು ಮುಖ್ಯ ಪ್ರಯೋಜನಗಳನ್ನು ವಿವರಿಸಿದರು: ಮೊದಲನೆಯದಾಗಿ, ಇದು ಮೌಲ್ಯಯುತವಾದ ವಿದೇಶಿ ವಿನಿಮಯವನ್ನು ಉಳಿಸಲು ಸಹಾಯ ಮಾಡುತ್ತದೆ, ಎರಡನೆಯದಾಗಿ, ಆಮದುಗಳನ್ನು ಕಡಿಮೆ ಮಾಡುವ ಮೂಲಕ, ಇದು ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಸ್ಥಳೀಯ ಜೀವನೋಪಾಯವನ್ನು ರಕ್ಷಿಸುತ್ತದೆ  ಮತ್ತು ಮೂರನೆಯದಾಗಿ, ಇದು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಕೈಗಾರಿಕೀಕರಣವನ್ನು ಉತ್ತೇಜಿಸುತ್ತದೆ.

 

ಕೆಲವು ವ್ಯಕ್ತಿಗಳು ರಾಷ್ಟ್ರೀಯ ಹಿತಾಸಕ್ತಿಗಳಿಗಿಂತ ಸೀಮಿತ ಆರ್ಥಿಕ ಲಾಭಗಳಿಗೆ ಆದ್ಯತೆ ನೀಡುತ್ತಿರುವುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಈ ಆರ್ಥಿಕ ಲಾಭವು ತಪ್ಪಿಸಬಹುದಾದ ಆಮದುಗಳಿಗೆ ಬದಲಿಯಾಗಬಹುದೇ? ಎಂದು ಅವರು ಪ್ರಶ್ನಿಸಿದರು. ಯಾವುದೇ ಆರ್ಥಿಕ ಲಾಭ, ಎಷ್ಟೇ ದೊಡ್ಡದಾಗಿದ್ದರೂ, ದೇಶೀಯ ಕೈಗಾರಿಕೆಗಳನ್ನು ಉತ್ತೇಜಿಸುವ ಮತ್ತು ಸ್ಥಳೀಯ ಉದ್ಯೋಗವನ್ನು ರಕ್ಷಿಸುವ ಮೌಲ್ಯವನ್ನು ಮೀರಿಸಲು ಸಾಧ್ಯವಿಲ್ಲ ಎಂದು ಅವರು ದೃಢವಾಗಿ ಹೇಳಿದರು.

ಸ್ವದೇಶಿ ಆಂದೋಲನವನ್ನು ಆಗಸ್ಟ್ 7,  1905 ರಂದು ಸ್ಥಳೀಯ ಉತ್ಪನ್ನಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು . ಈ ಆಂದೋಲನದ 110 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಂದರೆ 2015 ರಲ್ಲಿ 07 ಆಗಸ್ಟ್ ಅನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಘೋಷಿಸಿದ ಪ್ರಧಾನಿ ಮೋದಿಯವರ ದೂರದೃಷ್ಟಿಯ ನಿರ್ಧಾರವನ್ನು ಶ್ಲಾಘಿಸಿದರು.

 

ಈ ಸಂದರ್ಭದಲ್ಲಿ ಭಾರತದ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್, ಜವಳಿ ಖಾತೆ ರಾಜ್ಯ ಸಚಿವೆ ಶ್ರೀ ಪಬಿತ್ರಾ ಮಾರ್ಗರಿಟಾ, ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ರಚನಾ ಶಾ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಪೂರ್ಣ ಭಾಷಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

https://pib.gov.in/PressReleasePage.aspx?PRID=2042470

 

*****


(Release ID: 2043033) Visitor Counter : 41