ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ನವೀಕರಿಸಬಹುದಾದ ಇಂಧನದ ಮೂಲಗಳಿಂದ ಇಂಧನ ಉತ್ಪಾದನೆ
Posted On:
06 AUG 2024 2:57PM by PIB Bengaluru
ಸರ್ಕಾರವು, ಈ ಕೆಳಗಿನ ಅನುಬಂಧದಲ್ಲಿ ತಿಳಿಸಿರುವ ಸೌರ ಮತ್ತು ಪವನ ಶಕ್ತಿ ಸೇರಿದಂತೆ ನವೀಕರಿಸಬಹುದಾದ ಇಂಧನದ (ಆರ್ ಈ) ಅಭಿವೃದ್ಧಿಯನ್ನು ಉತ್ತೇಜಿಸಲು ಹಲವಾರು ಕ್ರಮಗಳು ಮತ್ತು ಉಪಕ್ರಮಗಳನ್ನು ಕೈಗೊಂಡಿದೆ, ಇದು ಸಾಂಪ್ರದಾಯಿಕ ಕಲ್ಲಿದ್ದಲಿನ ಶಾಖೋತ್ಪನ್ನ ಆಧಾರಿತ ಇಂಧನ ಬಳಸುವ ಬದಲಿಯಾಗಿ ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹೆಚ್ಚಿಸಲು ಕೈಗಾರಿಕೆಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ಉತ್ತೇಜಿಸುತ್ತದೆ.
30.6.2024 ರಂತೆ ದೇಶದಲ್ಲಿ ಸೌರ ದ್ಯುತಿವಿದ್ಯುಜ್ಜನಕ (ಪಿವಿ) ಶಕ್ತಿಯ ಒಟ್ಟು ಸ್ಥಾಪಿತ ಸಾಮರ್ಥ್ಯವು 85.47 ಗಿಗಾ ವ್ಯಾಟ್ ((ಗಿ.ವ್ಯಾ.) ಮತ್ತು ಪವನ ಶಕ್ತಿಯು 46.65 ಗಿಗಾ ವ್ಯಾಟ್ ಆಗಿದೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು.
*****
ಅನುಬಂಧ
ಭಾರತ ಸರ್ಕಾರವು 2030ರ ವೇಳೆಗೆ ಪಳೆಯುಳಿಕೆಯೇತರ ಮೂಲಗಳಿಂದ 500 ಗಿ.ವಾ. ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಗುರಿಯೊಂದಿಗೆ ದೇಶದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಉತ್ತೇಜಿಸಲು ಮತ್ತು ಚುರುಕುಗೊಳಿಸಲು ಹಲವಾರು ಕ್ರಮಗಳು ಮತ್ತು ಉಪಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ಈ ಕೆಳಗಿನವು ಸೇರಿವೆ:
• ಹಣಕಾಸು ವರ್ಷ 2023-24 ರಿಂದ ಹಣಕಾಸು ವರ್ಷ 2027-28 ರವರೆಗೆ ನವೀಕರಿಸಬಹುದಾದ ಇಂಧನ ಅನುಷ್ಠಾನ ಸಂಸ್ಥೆಗಳಿಂದ ಪ್ರತಿವರ್ಷ 50 ಗಿವಾ ಶಕ್ತಿಯ ಬಿಡ್ ಗಳಿಗಾಗಿ ಅಧಿಸೂಚನೆಯನ್ನು ನೀಡಲಾಗುತ್ತದೆ. [ಅನುಷ್ಠಾನ ಸಂಸ್ಥೆಗಳು: ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್ಇಎಸ್ಐ), ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್ ಟಿಪಿಸಿ), ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (ಎನ್ ಎಚ್ ಪಿಸಿ), ಸಟ್ಲೆಜ್ ಜಲ ವಿದ್ಯುತ್ ನಿಗಮ (ಎಸ್ ಜೆ ವಿಎನ್].
• 100% ವಿದೇಶಿ ನೇರ ಹೂಡಿಕೆಯನ್ನು (ಎಫ್ ಡಿಐ) ಸ್ವಯಂಚಾಲಿತ ಮಾರ್ಗದಲ್ಲಿ ಅನುಮತಿಸಲಾಗಿದೆ.
• 30 ಜೂನ್ 2025 ರೊಳಗೆ ಕಾರ್ಯಾರಂಭ ಮಾಡಲಿರುವ ಯೋಜನೆಗಳಿಗೆ, ಡಿಸೆಂಬರ್ 2030 ರವರೆಗೆ ಹಸಿರು ಜಲಜನಕ ಯೋಜನೆಗಳಿಗೆ ಮತ್ತು ಡಿಸೆಂಬರ್ 2032 ರವರೆಗೆ ಕಡಲ ತೀರದಾಚೆಯ ಪವನ ಯೋಜನೆಗಳಿಗೆ ಸೌರ ಮತ್ತು ಪವನ ಶಕ್ತಿಯ ಅಂತರ ರಾಜ್ಯ ಮಾರಾಟಕ್ಕಾಗಿ ಅಂತರ ರಾಜ್ಯ ಪ್ರಸರಣ ವ್ಯವಸ್ಥೆ (ಐಎಸ್ ಟಿ ಎಸ್) ಶುಲ್ಕವನ್ನು ಮನ್ನಾ ಮಾಡುವುದು.
• ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹೆಚ್ಚಿಸಲು, ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನಕ್ಕಾಗಿ ಪ್ರತ್ಯೇಕ ನವೀಕರಿಸಬಹುದಾದ ಖರೀದಿ ಬಾಧ್ಯತೆ (ಆರ್ ಪಿಒ) ಸೇರಿದಂತೆ 2029-30 ರವರೆಗೆ ನವೀಕರಿಸಬಹುದಾದ ಖರೀದಿ ಬಾಧ್ಯತೆ (ಆರ್ ಪಿಒ) ಯನ್ನು ಘೋಷಿಸಲಾಗಿದೆ.
• ಹೂಡಿಕೆಯನ್ನು ಆಕರ್ಷಿಸಲು ಮತ್ತು ಸುಗಮಗೊಳಿಸಲು ಯೋಜನಾ ಅಭಿವೃದ್ಧಿ ಕೋಶವನ್ನು ಸ್ಥಾಪಿಸಲಾಗಿದೆ.
• ಗ್ರಿಡ್ ಸಂಪರ್ಕಿತ ಸೌರ, ಪವನ ಮತ್ತು ಪವನ-ಸೌರ ಯೋಜನೆಗಳಿಂದ ವಿದ್ಯುತ್ ಸಂಗ್ರಹಣೆಗಾಗಿ ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಗೆ ಪ್ರಮಾಣಿತ ಬಿಡ್ಡಿಂಗ್ ಮಾರ್ಗಸೂಚಿಗಳನ್ನು ನೀಡಲಾಗಿದೆ.
• ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ [ಪ್ರಧಾನ ಮಂತ್ರಿ ರೈತ ಇಂಧನ ಭದ್ರತೆ ಮತ್ತು ಉನ್ನತಿ ಅಭಿಯಾನ (ಪಿಎಂ-ಕುಸುಮ್) ], ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ಟ್ ಬಿಜ್ಲಿ ಯೋಜನೆ (ಪ್ರಧಾನ ಮಂತ್ರಿ ಗೃಹ ಉಚಿತ ಸೂರ್ಯ ಶಕ್ತಿ ಯೋಜನೆ), ಹೆಚ್ಚಿನ ದಕ್ಷತೆಯ ಸೌರ ಪಿವಿ ಮಾಡ್ಯೂಲ್ಗಳ ರಾಷ್ಟ್ರೀಯ ಕಾರ್ಯಕ್ರಮ, ರಾಷ್ಟ್ರೀಯ ಹಸಿರು ಜಲಜನಕಮಿಷನ್, 1 ಗಿವಾ ಕಡಲ ತೀರದಾಚೆಯ ಪವನ ಶಕ್ತಿ ಯೋಜನೆಗಳ ಅಭಿವೃದ್ಧಿ ಇತ್ಯಾದಿ ಯೋಜನೆಗಳು.
• ದೊಡ್ಡ ಪ್ರಮಾಣದಲ್ಲಿ ಆರ್ಇ ಯೋಜನೆಗಳನ್ನು ಸ್ಥಾಪಿಸಲು ಆರ್ಇ ಡೆವಲಪರ್ ಗಳಿಗೆ ಭೂಮಿ ಮತ್ತು ಪ್ರಸರಣವನ್ನು ಒದಗಿಸಲು “ಅಲ್ಟ್ರಾ ಮೆಗಾ ರಿನ್ಯೂವಬಲ್ ಎನರ್ಜಿ ಪಾರ್ಕ್”ಗಳನ್ನು ಸ್ಥಾಪಿಸುವುದು.
• ನವೀಕರಿಸಬಹುದಾದ ವಿದ್ಯುತ್ ಪ್ರಸರಣಕ್ಕಾಗಿ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಡಿಯಲ್ಲಿ ಹೊಸ ಪ್ರಸರಣ ಮಾರ್ಗಗಳನ್ನು ಹಾಕುವುದು ಮತ್ತು ಹೊಸ ಉಪ-ನಿಲ್ದಾಣ ಸಾಮರ್ಥ್ಯವನ್ನು ರಚಿಸುವುದು.
• ವಿದ್ಯುಚ್ಛಕ್ತಿ (ಗ್ರಾಹಕರ ಹಕ್ಕುಗಳು) ನಿಯಮಗಳು, 2020ಅನ್ನು ಐದು ನೂರು ಕಿಲೋವ್ಯಾಟ್ವರೆಗೆ ಅಥವಾ ವಿದ್ಯುತ್ ಮಂಜೂರಾದ ಲೋಡ್ವರೆಗೆ, ಯಾವುದು ಕಡಿಮೆಯೋ ಅದನ್ನು ನೆಟ್-ಮೀಟರಿಂಗಿಗೆ ನೀಡಲಾಗಿದೆ.
• 1 ಗಿ.ವಾ. ಕಡಲ ತೀರದಾಚೆಯ ಪವನ ಯೋಜನೆಗಳ (ಗುಜರಾತ್ ಮತ್ತು ತಮಿಳುನಾಡು ಕರಾವಳಿಯಲ್ಲಿ ತಲಾ 500 ಮೆ.ವಾ) ಸ್ಥಾಪನೆ ಮತ್ತು ಕಾರ್ಯಾರಂಭಕ್ಕಾಗಿ ಕಡಲಾಚೆಯ ತೀರದಾಚೆಯ ಪವನ ಶಕ್ತಿ ಯೋಜನೆಗಳಿಗೆ ಕಾರ್ಯಸಾಧ್ಯತೆಯ ಗ್ಯಾಪ್ ಫಂಡಿಂಗ್ (ವಿಜಿಎಫ್) ಯೋಜನೆಯನ್ನು ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ.
• “ಪವನ ವಿದ್ಯುತ್ ಯೋಜನೆಗಳಿಗೆ ರಾಷ್ಟ್ರೀಯ ಪುನಶ್ಚೇತನ ಮತ್ತು ಜೀವ ವಿಸ್ತರಣೆ ನೀತಿ, 2023” ಬಿಡುಗಡೆ ಮಾಡಲಾಗಿದೆ.
• 2030ರ ವೇಳೆಗೆ 37 ಗಿ.ವಾ.ನ ಬಿಡ್ಡಿಂಗ್ ಅನ್ನು ಮತ್ತು ಯೋಜನೆಯ ಅಭಿವೃದ್ಧಿಗಾಗಿ ವಿವಿಧ ವ್ಯವಹಾರ ಮಾದರಿಗಳನ್ನು ಸೂಚಿಸುವ "ಕಡಲ ತೀರದಾಚೆಯ ಪವನ ಶಕ್ತಿ ಯೋಜನೆಗಳ ಸ್ಥಾಪನೆಗಾಗಿ ಕಾರ್ಯತಂತ್ರ ”ಗಳನ್ನು ನೀಡಲಾಗಿದೆ.
• ಕಡಲ ತೀರದಾಚೆಯ ಪವನ ಶಕ್ತಿ ಯೋಜನೆಗಳ ಅಭಿವೃದ್ಧಿಗಾಗಿ ಕಡಲ ತೀರದಾಚೆಯ ಪ್ರದೇಶಗಳ ಗುತ್ತಿಗೆಯ ಅನುದಾನವನ್ನು ನಿಯಂತ್ರಿಸಲು “ಆಫ್ಶೋರ್ ವಿಂಡ್ ಎನರ್ಜಿ ಲೀಸ್ ರೂಲ್ಸ್ (ನಿಯಮಗಳು), 2023 ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಸೂಚನೆಯ ಮೂಲಕ 19ನೇ ಡಿಸೆಂಬರ್ 2023ರಂದು ಸೂಚಿಸಲಾಗಿದೆ.
• ಏಕರೂಪದ ನವೀಕರಿಸಬಹುದಾದ ಇಂಧನ ದರದ (ಯುಆರ್ಇಟಿ) ಕಾರ್ಯವಿಧಾನವನ್ನು ಹೊರಡಿಸಲಾಗಿದೆ.
• ಸೌರ ದ್ಯುತಿವಿದ್ಯುಜ್ಜನಕ ಮಾಡ್ಯೂಲ್ಗಳು ಮತ್ತು ಗ್ರಿಡ್ ಸಂಪರ್ಕಿತ ಸೋಲಾರ್ ಇನ್ವರ್ಟರ್ಗಳಿಗಾಗಿ ಪ್ರಮಾಣಿತ ಮತ್ತು ಲೇಬಲಿಂಗ್ (ಎಸ್ & ಎಲ್) ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ.
• ವೇಗವರ್ಧಿತ ನವೀಕರಿಸಬಹುದಾದ ಇಂಧನಕ್ಕಾಗಿ ಅಗತ್ಯವಿರುವ ಪ್ರಸರಣ ಮೂಲಸೌಕರ್ಯವನ್ನು ವಿಸ್ತರಿಸಲು, ವರ್ಷ 2030 ರವರೆಗೂ ಪ್ರಸರಣ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
• "ವಿದ್ಯುತ್ (ಲೇಟ್ ಪಾವತಿ ಸರ್ಚಾರ್ಜ್ ಮತ್ತು ಸಂಬಂಧಿತ ವಿಷಯಗಳು) ನಿಯಮಗಳ (ಎಲ್.ಪಿ.ಎಸ್. ನಿಯಮಗಳು) ಅಧಿಸೂಚನೆಯನ್ನು ಹೊರಡಿಸಲಾಗಿದೆ.
• ʼಗ್ರೀನ್ ಎನರ್ಜಿ ಓಪನ್ ಆಕ್ಸೆಸ್ ರೆಗ್ಯುಲೇಷನ್ಸ್ ಮೂಲಕ ನವೀಕರಿಸಬಹುದಾದ ಇಂಧನ ಪ್ರಚಾರ 2022ʼ ಕ್ಕಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
• ವಿನಿಮಯ ಕೇಂದ್ರಗಳ ಮೂಲಕ ನವೀಕರಿಸಬಹುದಾದ ಇಂಧನ ವಿದ್ಯುಚ್ಛಕ್ತಿಯನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಗ್ರೀನ್ ಟರ್ಮ್ ಅಹೆಡ್ ಮಾರ್ಕೆಟ್ (ಜಿಟಿಎಎಂ)ಗೆ ಚಾಲನೆ ನೀಡಲಾಗಿದೆ.
• ನವೀಕರಿಸಬಹುದಾದ ಇಂಧನ ಜನರೇಟರ್ಗಳನ್ನು ವಿತರಿಸುವ ಪರವಾನಗಿದಾರರಿಂದ ಸಕಾಲಿಕ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಸಾಲದ ಪತ್ರ (ಲೆಟರ್ ಆಫ್ ಕ್ರೆಡಿಟ್ - ಎಲ್ಸಿ) ಅಥವಾ ಮುಂಗಡ ಪಾವತಿಯ ಆಧಾರದ ಮೇಲೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.
*****
(Release ID: 2042360)
Visitor Counter : 54