ರಕ್ಷಣಾ ಸಚಿವಾಲಯ
azadi ka amrit mahotsav

ವಯನಾಡಿನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿಸಿದ ಭಾರತೀಯ ನೌಕಾಪಡೆ 

Posted On: 03 AUG 2024 1:47PM by PIB Bengaluru

ಕೇರಳದ ವಯನಾಡು ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನದ ನಡುವೆಯೂ ಮತ್ತು ಕಷ್ಟಕರವಾದ ಭೂಪ್ರದೇಶದಲ್ಲಿ ಭಾರತೀಯ ನೌಕಾಪಡೆಯು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಪರಿಹಾರ ಕಾರ್ಯಾಚರಣೆ ಹೆಚ್ಚಿಸಲು ಮತ್ತು ದುರಂತದಿಂದ ಸಂಕಷ್ಟಕ್ಕೀಡಾಗಿರುವ ಸ್ಥಳೀಯ ಸಮುದಾಯವನ್ನು ಬೆಂಬಲಿಸಲು ಹೆಚ್ಚುವರಿ ಸಿಬ್ಬಂದಿ, ಸಂಪನ್ಮೂಲಗಳು ಮತ್ತು ಅಗತ್ಯ ಸರಬರಾಜುಗಳನ್ನು ಐಎನ್‌ಎಸ್‌ ಝಮೊರಿನ್‌ನಿಂದ ಕಳುಹಿಸಿಕೊಡಲಾಗಿದೆ.

ಪ್ರಸ್ತುತ, 78 ನೌಕಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಚೂರಲ್ಮಲಾ ಮತ್ತು ಮುಂಡಕ್ಕೈ ಹಾಗೂ ಇತರೆ ಪ್ರದೇಶಕ್ಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ವಿಪತ್ತು ಪರಿಹಾರ ಪಡೆಗಳು ಸ್ಥಳೀಯ ಆಡಳಿತದೊಂದಿಗೆ ಕೈಜೋಡಿಸಿದೆ. ಒಂದು ತಂಡವು ಸಂತ್ರಸ್ತ ಜನರಿಗೆ ವಸ್ತು, ಆಹಾರ ಮತ್ತು ನಿರಂತರ ಪೂರೈಕೆಯನ್ನು ನಿರ್ವಹಿಸಲು ನಿಯೋಜಿಸಲಾಗಿದೆ ಮತ್ತು ಇತರ ತಂಡಗಳು ಅವಶೇಷಗಳಡಿ ಕಾರ್ಯಾಚರಣೆ ನಡೆಸುತ್ತಿದೆ. ಬದುಕುಳಿದವರಿಗಾಗಿ ಹುಡುಕಾಟ, ಅವಶೇಷಗಳ ತೆರವು ಮತ್ತು ದೇಹಗಳ ರವಾನೆಗೆ ನಿಯೋಜಿಸಲಾಗಿದೆ. ಗಾಯಗೊಂಡವರಿಗೆ ವೈದ್ಯಕೀಯ ನೆರವು ನೀಡಲು ಚೂರಲ್ಮಲಾದಲ್ಲಿ ವೈದ್ಯಕೀಯ ಪೋಸ್ಟ್ ಸ್ಥಾಪಿಸಲಾಗಿದೆ.

3 ಅಧಿಕಾರಿಗಳು ಮತ್ತು 30 ನಾವಿಕರ ತಂಡವು 01 ಆಗಸ್ಟ್ 24 ರಂದು ಭೂಕುಸಿತದಿಂದ ಪ್ರತ್ಯೇಕವಾದ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳನ್ನು ಸಂಪರ್ಕಿಸುವ ನದಿಯ ಮೇಲೆ ಬೈಲಿ ಸೇತುವೆಯನ್ನು ನಿರ್ಮಿಸುವಲ್ಲಿ ನಿರತವಾಗಿದೆ. ಭಾರೀ ಯಂತ್ರೋಪಕರಣಗಳು ಮತ್ತು ಆಂಬ್ಯುಲೆನ್ಸ್‌ಗಳ ಚಲನೆಯನ್ನು ಸಕ್ರಿಯಗೊಳಿಸಲು ಲಾಜಿಸ್ಟಿಕ್ಸ್ ಬೆಂಬಲ ನೀಡಲಾಗಿದೆ.

02 ಆಗಸ್ಟ್ 24 ರಂದು, ಭಾರತೀಯ ನೌಕಾಪಡೆಯ INS ಗರುಡದ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಕ್ಯಾಲಿಕಟ್‌ನಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಬದುಕುಳಿದವರಿಗಾಗಿ ಮತ್ತು ಮೃತದೇಹಗಳ ಪತ್ತೆಗಾಗಿ ಮಳೆ ಹಾನಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಂಡಿತು. ಮತ್ತೊಂದು ವಿಮಾನವು 12 ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ರಕ್ಷಣಾ ಸಾಧನಗಳೊಂದಿಗೆ ವಿಪತ್ತು ಪ್ರದೇಶಕ್ಕೆ ಸಾಗಿಸಿತು, ಈ ಪ್ರದೇಶಕ್ಕೆ ರಸ್ತೆಯ ಮೂಲಕ ಸಾಗುವುದು ದುರ್ಗಮವಾಗಿದೆ. ಕಡಿಮೆ ಗೋಚರತೆ ಮತ್ತು ಸವಾಲಿನ ಪರಿಸ್ಥಿತಿಗಳಲ್ಲಿ ಗುಡ್ಡಗಾಡು ಪ್ರದೇಶದ ಮೇಲೆ ಹಾರಾಟ ನಡೆಸಲಾಯಿತು.

ಭಾರತೀಯ ನೌಕಾಪಡೆಯು ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಸಿಲುಕಿರುವ ಜನರನ್ನು ತ್ವರಿತವಾಗಿ ಸ್ಥಳಾಂತರಿಸುವುದು, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ವೈದ್ಯಕೀಯ ಸಹಾಯವನ್ನು ಖಚಿತಪಡಿಸಿಕೊಳ್ಳಲು ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

 

 

*****


(Release ID: 2041290) Visitor Counter : 38