ಗೃಹ ವ್ಯವಹಾರಗಳ ಸಚಿವಾಲಯ
ಮಾನಸಿಕ ಆರೋಗ್ಯ ಕಾರ್ಯಕ್ರಮಗಳು
Posted On:
30 JUL 2024 4:33PM by PIB Bengaluru
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್.ಸಿ.ಆರ್.ಬಿ) ಸಂಸ್ಥೆಯು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿದ ಆತ್ಮಹತ್ಯೆಗಳ ಅಂಕಿಅಂಶಗಳನ್ನು ಸಂಗ್ರಹಿಸುತ್ತದೆ ಮತ್ತು ಅದನ್ನು ತನ್ನ ಪ್ರಕಟಣೆ 'ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು (ಎಡಿಎಸ್ಐ)' ನಲ್ಲಿ ಪ್ರಕಟಿಸುತ್ತದೆ. ಪ್ರಕಟಿತ ವರದಿಗಳು 2022 ರವರೆಗೆ ಮಾತ್ರ ಲಭ್ಯವಿರುತ್ತವೆ.
ಮಾನಸಿಕ ಅಸ್ವಸ್ಥತೆಗಳ ಹೊರೆಯನ್ನು ಪರಿಹರಿಸಲು, ಭಾರತ ಸರ್ಕಾರವು ದೇಶದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು (ಎನ್.ಎಂ.ಎಚ್.ಪಿ) ಜಾರಿಗೆ ತರುತ್ತಿದೆ. ಎನ್.ಎಂ.ಎಚ್.ಪಿ.ಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (ಡಿ.ಎಂ.ಎಚ್.ಪಿ.) ಘಟಕವನ್ನು 767 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಮಂಜೂರು ಮಾಡಲಾಗಿದೆ, ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಬೆಂಬಲವನ್ನು ಒದಗಿಸಲಾಗುತ್ತದೆ. ಸಮುದಾಯ ಆರೋಗ್ಯ ಕೇಂದ್ರ (ಸಿ.ಎಚ್.ಸಿ) ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ.ಎಚ್.ಸಿ) ಮಟ್ಟದಲ್ಲಿ ಡಿ.ಎಂ.ಎಚ್.ಪಿ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳಲ್ಲಿ ಹೊರರೋಗಿ ಸೇವೆಗಳು, ಮೌಲ್ಯಮಾಪನ, ಸಮಾಲೋಚನೆ / ಮಾನಸಿಕ-ಸಾಮಾಜಿಕ ಮಧ್ಯಸ್ಥಿಕೆಗಳು, ತೀವ್ರ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ನಿರಂತರ ಆರೈಕೆ ಮತ್ತು ಬೆಂಬಲ, ಔಷಧಿಗಳು, ಔಟ್ರೀಚ್ ಸೇವೆಗಳು, ಆಂಬ್ಯುಲೆನ್ಸ್ ಸೇವೆಗಳು ಇತ್ಯಾದಿ ಸೇರಿವೆ. ಮೇಲಿನ ಸೇವೆಗಳ ಜೊತೆಗೆ, ಜಿಲ್ಲಾ ಮಟ್ಟದಲ್ಲಿ 10 ಹಾಸಿಗೆಗಳ ಒಳರೋಗಿ ಸೌಲಭ್ಯವನ್ನು ಒದಗಿಸುವುದಕ್ಕೂ ಅವಕಾಶವಿದೆ.
ಮೇಲಿನವುಗಳ ಜೊತೆಗೆ, ಪ್ರಾಥಮಿಕ ಆರೋಗ್ಯ ಮಟ್ಟದಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರವು 1.73 ಲಕ್ಷಕ್ಕೂ ಹೆಚ್ಚು ಎಸ್.ಎಚ್.ಸಿ.ಗಳು, ಪಿಎಚ್ ಸಿಗಳು, ಯು.ಪಿ.ಎಚ್.ಸಿಗಳು ಮತ್ತು ಯು.ಎಚ್.ಡಬ್ಲ್ಯೂ.ಸಿಗಳನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಾಗಿ ಮೇಲ್ದರ್ಜೆಗೇರಿಸಿದೆ. ಈ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಒದಗಿಸಲಾದ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆ/ಆರೈಕೆಯ ಅಡಿಯಲ್ಲಿ ಬರುವ ಸೇವೆಗಳ ಪ್ಯಾಕೇಜ್ ನಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಸೇರಿಸಲಾಗಿದೆ. ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಮಾನಸಿಕ, ನರರೋಗ ಮತ್ತು ವಸ್ತು ಬಳಕೆಯ ಅಸ್ವಸ್ಥತೆಗಳ (ಎಂಎನ್ಎಸ್) ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಆಯುಷ್ಮಾನ್ ಭಾರತ್ ವ್ಯಾಪ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ &ಎಫ್.ಡಬ್ಲ್ಯೂ) ದೇಶದ ಮೊದಲ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ಕಾರ್ಯತಂತ್ರವನ್ನು ರೂಪಿಸಿದೆ. ಕಾರ್ಯತಂತ್ರವು ಅದರ ಜಾಲತಾಣ (www.mohfw.gov.in)ದಲ್ಲಿ ಲಭ್ಯವಿದೆ.
ಇದಲ್ಲದೆ, ದೇಶದಲ್ಲಿ ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳಿಗೆ ಪ್ರವೇಶವನ್ನು ಮತ್ತಷ್ಟು ಸುಧಾರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2022 ರ ಅಕ್ಟೋಬರ್ 10 ರಂದು "ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು" ಪ್ರಾರಂಭಿಸಿದೆ. 23.07.2024 ರ ಹೊತ್ತಿಗೆ, 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು 53 ಟೆಲಿ ಮಾನಸ್ ಕೋಶಗಳನ್ನು ಸ್ಥಾಪಿಸಿವೆ ಮತ್ತು ಟೆಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಪ್ರಾರಂಭಿಸಿವೆ. ಸಹಾಯವಾಣಿ ಸಂಖ್ಯೆಗೆ ಬಂದಿರುವ 11,76,000 ಕ್ಕೂ ಹೆಚ್ಚು ಕರೆಗಳನ್ನು ನಿರ್ವಹಿಸಲಾಗಿದೆ. ಇದಲ್ಲದೆ, ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಎನ್.ಟಿ.ಎಂ.ಎಚ್.ಪಿ. / ಟೆಲಿ ಮಾನಸ್ ಗಳಿಗೆ ವ್ಯಾಪಕ ಪ್ರಚಾರಕ್ಕಾಗಿ ಮತ್ತು ಒತ್ತಡದ ಮತ್ತು ಸವಾಲಿನ ಸಮಯದಲ್ಲಿ ಸಹಾಯವಾಣಿಯನ್ನು ಪ್ರವೇಶಿಸಲು ಸಹಾಯವಾಣಿ ಸಂಖ್ಯೆಯನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಳ್ಳಲು ಕೋರಲಾಗಿದೆ. ಆಯಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳಲ್ಲಿ ಎನ್ ಟಿಎಂಎಚ್ ಪಿ / ಟೆಲಿ ಮಾನಸ್ ನ ವ್ಯಾಪಕ ಪ್ರಸಾರ ಮತ್ತು ಪ್ರಚಾರಕ್ಕಾಗಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಎಲ್ಲಾ ಸಂಸ್ಥೆಗಳು, ಏಮ್ಸ್ (ಎ.ಐ.ಐ.ಎಂ.ಎಸ್.) ಮತ್ತು ಕೇಂದ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸಹ ಸಹಾಯವಾಣಿಯನ್ನು ಪ್ರವೇಶಿಸಲು ವಿದ್ಯಾರ್ಥಿಗಳಲ್ಲಿ ಟೆಲಿ ಮನಸ್ ಬಗ್ಗೆ ಪ್ರಚಾರ ಮಾಡಲು ಕೋರಲಾಗಿದೆ.
ಇದನ್ನು ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ನಿತ್ಯಾನಂದ ರೈ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
*****
(Release ID: 2039443)
Visitor Counter : 49