ಸಹಕಾರ ಸಚಿವಾಲಯ
102 ನೇ ಅಂತಾರಾಷ್ಟ್ರೀಯ ಸಹಕಾರಿ ದಿನದ ಸಂದರ್ಭದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಗುಜರಾತಿನ ಗಾಂಧಿನಗರದಲ್ಲಿ 'ಸಹಕಾರ್ ಸೇ ಸಮೃದ್ಧಿ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಸಕ್ತ ದಿನಗಳಲ್ಲಿ ಸಹಕಾರದ ಅಗತ್ಯವನ್ನು ಅರ್ಥಮಾಡಿಕೊಂಡು 2021 ರಲ್ಲಿ ಈ ದಿನದಂದು ಸ್ವತಂತ್ರ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು
ಮುಂದಿನ ಐದು ವರ್ಷಗಳಲ್ಲಿ ಸಹಕಾರದ ಬಲವಾದ ಅಡಿಪಾಯವನ್ನು ಹಾಕಲಾಗುವುದು. ಇದರಿಂದ ಸಹಕಾರವು ಮುಂದಿನ 125 ವರ್ಷಗಳವರೆಗೆ ಪ್ರತಿ ಗ್ರಾಮ ಮತ್ತು ಕುಂಟುಂಬದ ಮೇಲೆ ಪರಿಣಾಮ ಬೀರುತ್ತದೆ
ಸಹಕಾರ ಸಚಿವಾಲಯವು ತನ್ನ ಕಾರ್ಯಸಾಧ್ಯತೆಯನ್ನು ಸುಧಾರಿಸುವ ಸಲುವಾಗಿ ಪಿಎಸಿಎಸ್ ಅನ್ನು ವಿವಿಧೋದ್ದೇಶ ಕೇಂದ್ರವಾಗಿ ಮಾಡಿದೆ, ಇಂದು 65,000 ಪಿಎಸಿಎಸ್ ಗಳಲ್ಲಿ 48,000 ಹೊಸ ಚಟುವಟಿಕೆಗಳನ್ನು ಸೇರಿಸುವ ಮೂಲಕ ಬಲಪಡಿಸಲಾಗಿದೆ
'ಸಹಕಾರಿಗಳ ನಡುವೆ ಸಹಕಾರ', ಅಂದರೆ ಸಹಕಾರಿ ಸಂಘಗಳನ್ನು ಯಶಸ್ವಿಗೊಳಿಸಲು ಎಲ್ಲಾ ಸಹಕಾರಿಗಳ ಸಹಯೋಗದ ಗುರಿಯನ್ನು ಉತ್ತೇಜಿಸಬೇಕು
2029 ರಲ್ಲಿ ಅಂತಾರಾಷ್ಟ್ರೀಯ ಸಹಕಾರಿ ದಿನವನ್ನು ಆಚರಿಸುವಾಗ, ದೇಶದ ಎಲ್ಲಾ ಪಂಚಾಯಿತಿಗಳು ತಮ್ಮದೇ ಆದ ಪಿಎಸಿಎಸ್ ಅನ್ನು ಹೊಂದಿರುತ್ತವೆ
ವಿಶ್ವದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಠಿಣ ಪರೀಕ್ಷೆಯ ನಂತರ 'ಭಾರತ್' ಬ್ರಾಂಡ್ ಮುದ್ರೆಯನ್ನು ಹೊರತರಲಾಗಿದೆ
ಮೋದಿ ಸರಕಾರ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಯನ್ನು ಅಗ್ಗವಾಗಿಸಿದೆ
ಇಂದು ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಜನ್ಮದಿನ, ಇಂದು ಬಂಗಾಳ ಮತ್ತು ಕಾಶ್ಮೀರ ಭಾರತದ ಭಾಗವಾಗಿದ್ದರೆ ಅದಕ್ಕೆ ಏಕೈ
Posted On:
06 JUL 2024 5:01PM by PIB Bengaluru
ಇಂದು ಗುಜರಾತಿನ ಗಾಂಧಿನಗರದಲ್ಲಿ 102ನೇ ಅಂತಾರಾಷ್ಟ್ರೀಯ ಸಹಕಾರಿ ದಿನದ ಅಂಗವಾಗಿ ಆಯೋಜಿಸಲಾಗಿದ್ದ 'ಸಹಕಾರ್ ಸೇ ಸಮೃದ್ಧಿ' (ಸಹಕಾರದ ಮೂಲಕ ಸಮೃದ್ಧಿ) ಕಾರ್ಯಕ್ರಮವನ್ನು ಉದ್ದೇಶಿಸಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಹಕಾರ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ “ಇಂದು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜನ್ಮದಿನವಾಗಿದೆ ಮತ್ತು ಇಂದು ಬಂಗಾಳ ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗಗಳನ್ನಾಗಿ ಮಾಡಿದ್ದಕ್ಕಾಗಿ ನಾವು ಅವರಿಗೆ ಋಣಿಯಾಗಿದ್ದೇವೆ” ಎಂದು ಹೇಳಿದರು. ಒಂದು ದೇಶದಲ್ಲಿ ಎರಡು ಕಾನೂನುಗಳು, ಎರಡು ಮುಖ್ಯಸ್ಥರು ಮತ್ತು ಎರಡು ಧ್ವಜಗಳು ಇರುವುದರ ವಿರುದ್ಧದ ಚಳವಳಿಯ ನೇತೃತ್ವ ವಹಿಸಿದ್ದ ಡಾ.ಮುಖರ್ಜಿಯವರು ಈ ಉದ್ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ಕಾಶ್ಮೀರದಲ್ಲಿ ಎರಡು ಶಾಸನಗಳು (ವಿಧಾನ್), ಎರಡು ಮುಖ್ಯಸ್ಥರು (ಪ್ರಧಾನ್) ಮತ್ತು ಎರಡು ಧ್ವಜಗಳು (ನಿಶಾನ್) ಎಂಬ ದ್ವಂದ್ವತೆಯು ಕೊನೆಗೊಂಡಿದೆ ಮತ್ತು ತ್ರಿವರ್ಣ ಧ್ವಜವು ಅಲ್ಲಿ ಹೆಮ್ಮೆಯಿಂದ ಎತ್ತರದಲ್ಲಿ ಹಾರುತ್ತಿದೆ ಎಂದು ಶ್ರೀ ಶಾ ಹೇಳಿದರು. ನಾಡಿನ ದಲಿತರಿಗಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಾಮಾಜಿಕ ಸೌಹಾರ್ದತೆಯ ಬುನಾದಿ ಹಾಕಿ, ಮತಾಂತರವನ್ನು ವಿರೋಧಿಸಿದ ಬಾಬು ಜಗಜೀವನ್ ರಾಮ್ ಅವರ ಪುಣ್ಯತಿಥಿಯೂ ಇಂದೇ ಆಗಿದೆ ಎಂದು ಅವರು ಹೇಳಿದರು.
ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಮತ್ತು ಕಾರ್ಮಿಕರಿಗೆ ಇಂದು ಅನೇಕ ರೀತಿಯಲ್ಲಿ ಅತ್ಯಂತ ಮಹತ್ವದ ದಿನವಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಈ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವತಂತ್ರ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು. ಪ್ರತ್ಯೇಕ ಸಹಕಾರ ಸಚಿವಾಲಯದ ಬೇಡಿಕೆಗೆ ಹಿಂದಿನ ಸರ್ಕಾರಗಳು ಎಂದಿಗೂ ಕಿವಿಗೊಟ್ಟಿರಲಿಲ್ಲ ಎಂದು ಅವರು ಹೇಳಿದರು. ಗುಜರಾತಿನ ನೆಲದಿಂದ ಬಂದಿರುವ ಶ್ರೀ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಇಂದಿನ ಕಾಲದಲ್ಲಿ ಸಹಕಾರ ಕ್ಷೇತ್ರದ ಅಗತ್ಯವನ್ನು ಅರಿತು ಸ್ವತಂತ್ರ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು ಎಂದು ಅವರು ಹೇಳಿದರು.
ಇಂದು ಗುಜರಾತ್ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಮತ್ತು ನ್ಯಾನೋ-ಯೂರಿಯಾ ಮತ್ತು ನ್ಯಾನೋ-ಡಿಎಪಿ ಮೇಲೆ 50 ಪ್ರತಿಶತದಷ್ಟು ಸಬ್ಸಿಡಿಯನ್ನು ಘೋಷಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ನಿರ್ಧಾರಕ್ಕೆ ಗುಜರಾತ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಅವರು, ರೈತರು ನ್ಯಾನೋ ಯೂರಿಯಾವನ್ನು ಒಮ್ಮೆ ಮಾತ್ರ ಸಿಂಪಡಿಸಬೇಕು ಮತ್ತು ಬೆಳೆಯ ಬೆಳವಣಿಗೆಯ ಸಮಯದಲ್ಲಿ ನಂತರ ಹೊಲಗಳಿಗೆ ಯೂರಿಯಾವನ್ನು ಹಾಕುವ ಅಗತ್ಯವಿಲ್ಲ ಎಂದು ಹೇಳಿದರು. ನ್ಯಾನೋ-ಯೂರಿಯಾ ಮತ್ತು ನ್ಯಾನೋ-ಡಿಎಪಿಯನ್ನು ಹೊಲದಲ್ಲಿ ಸಿಂಪಡಿಸುವುದರಿಂದ ಉತ್ಪಾದನೆಯನ್ನು ಹೆಚ್ಚಿಸಲು ಸಾಕಾಗುತ್ತದೆ ಮತ್ತು ಇದು ಮಣ್ಣನ್ನು ಸಂರಕ್ಷಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಮೋದಿ ಸರಕಾರ ಇವುಗಳನ್ನು ಕಡಿಮೆ ಬೆಲೆಗೆ ತಂದಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಸಾವಯವ ಕೃಷಿಯನ್ನು ಮಾಡುವ ರೈತರಿಗೆ ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ನ್ಯಾಷನಲ್ ಕೋಆಪರೇಟಿವ್ ಆರ್ಗ್ಯಾನಿಕ್ ಲಿಮಿಟೆಡ್ (ಎನ್ ಸಿ ಒ ಎಲ್) ಅನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು. ಇಂದು ಭಾರತ್ ಆರ್ಗ್ಯಾನಿಕ್ ಹಿಟ್ಟನ್ನು ಎನ್ ಸಿ ಒ ಎಲ್ ನಿಂದ ಪ್ರಾರಂಭಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ದೆಹಲಿಯಲ್ಲಿ ಅಮುಲ್ ಸಾವಯವ ಉತ್ಪನ್ನಗಳ ಮಳಿಗೆಯನ್ನು ಸಹ ಪ್ರಾರಂಭಿಸಿದೆ. ಭಾರತ್ ಆರ್ಗ್ಯಾನಿಕ್ ಮತ್ತು ಅಮುಲ್ ಎರಡೂ ವಿಶ್ವಾಸಾರ್ಹ ಮತ್ತು 100 ಪ್ರತಿಶತ ಸಾವಯವ ಬ್ರಾಂಡ್ ಗಳಾಗಿವೆ ಎಂದು ಅವರು ಹೇಳಿದರು. ವಿಶ್ವದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಪರೀಕ್ಷಿಸಿದ ನಂತರವೇ ಸಾವಯವ ಉತ್ಪನ್ನಗಳ ಮೇಲೆ ಭಾರತ್ ಬ್ರ್ಯಾಂಡ್ ಮುದ್ರೆಯನ್ನು ಹಾಕಲಾಗುತ್ತದೆ ಎಂದು ಶ್ರೀ ಶಾ ಹೇಳಿದರು.
ಭಾರತದಲ್ಲಿ ಸಹಕಾರ ಹೊಸ ಕಲ್ಪನೆಯಲ್ಲ ಮತ್ತು ನಮ್ಮ ಪೂರ್ವಜರು 125 ವರ್ಷಗಳ ಹಿಂದೆಯೇ ಈ ಕಲ್ಪನೆಯನ್ನು ಅಳವಡಿಸಿಕೊಂಡಿದ್ದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ, ಗಾಡ್ಗೀಳ್, ವೈಕುಂಠಭಾಯಿ ಮೆಹ್ತಾ ಮತ್ತು ತ್ರಿಭುವನದಾಸ್ ಪಟೇಲ್ ಅವರಂತಹ ಅನೇಕ ಮಹಾನ್ ವ್ಯಕ್ತಿಗಳು ಇದನ್ನು ಪ್ರಾರಂಭಿಸಿದರು ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರು ಸಹಕಾರ ಕ್ಷೇತ್ರದ ಪ್ರಸ್ತುತತೆಯನ್ನು ಗುರುತಿಸಿ ಹೊಸ ಮತ್ತು ಸ್ವತಂತ್ರ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು ಎಂದು ಶ್ರೀ ಶಾ ಹೇಳಿದರು. ಇಂದು ನಾವು ಮಹತ್ವದ ಘಟ್ಟದಲ್ಲಿದ್ದೇವೆ ಎಂದ ಅವರು, 125 ವರ್ಷಗಳ ಹಿಂದಿನ ಸಹಕಾರಿ ಆಂದೋಲನವು ದೇಶದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಕೊಡುಗೆ ನೀಡುತ್ತಿದೆ. ಕೃಷಿ ಸಾಲ ವಿತರಣೆಯಲ್ಲಿ ಶೇ.20, ರಸಗೊಬ್ಬರ ವಿತರಣೆಯಲ್ಲಿ ಶೇ.35 ಮತ್ತು ಉತ್ಪಾದನೆಯಲ್ಲಿ ಶೇ.21, ಸಕ್ಕರೆ ಉತ್ಪಾದನೆಯಲ್ಲಿ ಶೇ.31, ಗೋಧಿ ಖರೀದಿಯಲ್ಲಿ ಶೇ.13 ಮತ್ತು ಶೇ. 20 ಭತ್ತ ಖರೀದಿಯಲ್ಲಿ ಕೊಡುಗೆ ನೀಡುತ್ತಿದೆ. ಗ್ರಾಮೀಣ ಮತ್ತು ಕೃಷಿ ಆರ್ಥಿಕತೆಯಲ್ಲಿ ಸಹಕಾರಿ ಕ್ಷೇತ್ರ ಅತ್ಯಂತ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು. ಮುಂದಿನ 125 ವರ್ಷಗಳವರೆಗೆ ಸಹಕಾರವು ಪ್ರತಿ ಗ್ರಾಮ ಮತ್ತು ಮನೆಗಳಿಗೆ ತಲುಪಲು ಮುಂದಿನ 5 ವರ್ಷಗಳಲ್ಲಿ ನಾವು ಸಹಕಾರ ಕ್ಷೇತ್ರಕ್ಕೆ ಬಲವಾದ ಅಡಿಪಾಯವನ್ನು ಹಾಕಬೇಕು ಎಂದು ಅವರು ಹೇಳಿದರು.
ಮೋದಿ ಸರ್ಕಾರವು ಸಹಕಾರಿ ಸಂಸ್ಥೆಗಳ ಮೂಲಕ ಎರಡು ಹೊಸ ಯೋಜನೆಗಳನ್ನು ತಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಥೆನಾಲ್ ಅನ್ನು ಉತ್ತೇಜಿಸಲು ಮತ್ತು ಮೆಕ್ಕೆಜೋಳ ಉತ್ಪಾದಿಸುವ ರೈತರ ಸಮೃದ್ಧಿಗಾಗಿ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಸರ್ಕಾರದ ಎರಡು ದೊಡ್ಡ ಸಹಕಾರಿ ಸಂಸ್ಥೆಗಳು ರೈತರು ಉತ್ಪಾದಿಸಿದ ಮೆಕ್ಕೆಜೋಳವನ್ನು ಆನ್‌ಲೈನ್‌ನಲ್ಲಿ ಕನಿಷ್ಠ ಬೆಂಬಲ ಬೆಲೆಗೆ (ಎಂ ಎಸ್ ಪಿ) ಖರೀದಿಸಿ ಅದರಿಂದ ಎಥೆನಾಲ್ ತಯಾರಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ಅವರು ಹೇಳಿದರು. ಇದರಿಂದ ರೈತರ ಏಳಿಗೆಯಾಗುವುದಲ್ಲದೆ ಪೆಟ್ರೋಲ್ ಆಮದು ಕಡಿಮೆ ಮಾಡಿ ದೇಶದ ವಿದೇಶಿ ವಿನಿಮಯ ಸಂಗ್ರಹಕ್ಕೆ ಸಹಕಾರಿಯಾಗಲಿದೆ ಎಂದರು. ಅದೇ ರೀತಿ, ಈಗ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ಗ್ರಾಹಕ ಸಹಕಾರ ಸಂಸ್ಥೆಗಳು ಸಹ 100 ಪ್ರತಿಶತ ಎಂ ಎಸ್ ಪಿ ಯಲ್ಲಿ 4 ಬಗೆಯ ಬೇಳೆಕಾಳುಗಳನ್ನು ಖರೀದಿಸಲಿವೆ ಎಂದು ಶ್ರೀ ಶಾ ಹೇಳಿದರು. ‘ಸಹಕಾರಿ ಸಂಸ್ಥೆಗಳ ನಡುವೆ ಸಹಕಾರʼವನ್ನು ಉತ್ತೇಜಿಸಬೇಕು ಎಂದು ಅವರು ಹೇಳಿದರು. ಸಹಕಾರಿ ಕ್ಷೇತ್ರದ ಎಲ್ಲ ಆರ್ಥಿಕ ವಹಿವಾಟುಗಳನ್ನು ಸಹಕಾರಿ ಕ್ಷೇತ್ರದಲ್ಲೇ ಮಾಡಿದರೆ ಸಹಕಾರಿ ಕ್ಷೇತ್ರದಿಂದ ಹೊರಗಿನಿಂದ ಒಂದು ಪೈಸೆಯನ್ನೂ ತರಬೇಕಾಗಿಲ್ಲ ಎಂದರು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮತ್ತು ದೇಶಾದ್ಯಂತದ ಎಲ್ಲಾ ರಾಜ್ಯ ಸಹಕಾರಿ ಬ್ಯಾಂಕ್ ಗಳು, ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಂಘ (ಪಿಎಸಿಎಸ್) ಮತ್ತು ಇತರ ಸಹಕಾರಿ ಸಂಸ್ಥೆಗಳು ತಮ್ಮ ಖಾತೆಯನ್ನು ಜಿಲ್ಲಾ ಸಹಕಾರಿ ಬ್ಯಾಂಕ್ ಅಥವಾ ರಾಜ್ಯ ಸಹಕಾರಿ ಬ್ಯಾಂಕ್ ನಲ್ಲಿ ತೆರೆಯಬೇಕು ಎಂದು ಕರೆ ನೀಡಿದರು. ಇದು ಸಹಕಾರಿ ಕ್ಷೇತ್ರವನ್ನು ಬಲಪಡಿಸುವುದಲ್ಲದೆ ಬಂಡವಾಳ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಸಹಕಾರಿ ಕ್ಷೇತ್ರಕ್ಕೆ ಸಹಕಾರ ಸೇ ಸಮೃದ್ಧಿ ಎಂಬ ಘೋಷಣೆಯನ್ನು ನೀಡಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು 30 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಿದ್ದಾರೆ ಮತ್ತು ದೈನಂದಿನ ಅಗತ್ಯಗಳ ಚಿಂತೆಗಳಿಂದ ಅವರನ್ನು ಮುಕ್ತಗೊಳಿಸಿದ್ದಾರೆ ಎಂದು ಅವರು ಹೇಳಿದರು. ದೇಶದ ಕೋಟ್ಯಂತರ ಬಡವರಿಗೆ ಮನೆ, ವಿದ್ಯುತ್, ಶೌಚಾಲಯ, ಕುಡಿಯುವ ನೀರು, 5 ಕೆಜಿ ಉಚಿತ ಆಹಾರ ಧಾನ್ಯ ಮತ್ತು ಗ್ಯಾಸ್ ಸಿಲಿಂಡರ್ ನಂತಹ ಸೌಲಭ್ಯಗಳನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಹೇಳಿದರು. ಈಗ ಈ ಕೋಟ್ಯಂತರ ಬಡವರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುತ್ತಿದ್ದಾರೆ, ಆದರೆ ಅವರ ಬಳಿ ಬಂಡವಾಳವಿಲ್ಲ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಹಾಗೂ ಬಂಡವಾಳವಿಲ್ಲದೆ ಅಭಿವೃದ್ಧಿ ಹೊಂದಲು ಸಹಕಾರವೊಂದೇ ದಾರಿ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ 'ಸಹಕಾರ್ ಸೇ ಸಮೃದ್ಧಿ' ಮಂತ್ರದ ಹಿಂದಿರುವ ಏಕೈಕ ಉದ್ದೇಶವು ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಹಿಂದುಳಿದಿರುವ ಈ 30 ಕೋಟಿ ಜನರ ಜೀವನದಲ್ಲಿ ಆತ್ಮವಿಶ್ವಾಸ, ಸಂತೋಷ ಮತ್ತು ಸಮೃದ್ಧಿಯನ್ನು ತರುವುದಾಗಿದೆ ಎಂದು ಶ್ರೀ ಶಾ ಹೇಳಿದರು.
ಕೇಂದ್ರ ಸಹಕಾರ ಸಚಿವಾಲಯವು ಸಹಕಾರಿ ಕ್ಷೇತ್ರಕ್ಕಾಗಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಶಕ್ತ ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ಸಶಕ್ತ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಇಲ್ಲದ ದೇಶದ ಯಾವುದೇ ರಾಜ್ಯ ಅಥವಾ ಜಿಲ್ಲೆ ಇರಬಾರದು ಎಂಬ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು. ಈ ಮೂಲಕ ಮಾತ್ರ ಸಹಕಾರಿ ಕ್ಷೇತ್ರವನ್ನು ವಿಸ್ತರಿಸಿದಾಗ ಮಾತ್ರ ಪ್ರತಿಯೊಬ್ಬ ಗ್ರಾಮೀಣ ಜನರು ಹಾಗೂ ಬಡವರ ಏಳಿಗೆ ಹೊಂದಲು ಸಾಧ್ಯವಾಗುತ್ತದೆ ಎಂದರು. ಇದಕ್ಕಾಗಿ ನಾವು ಸಹಕಾರಿ ಪಂಚಾಯತ್ ಅನ್ನು ರೂಪಿಸಿದ್ದೇವೆ ಎಂದು ಶ್ರೀ ಶಾ ಹೇಳಿದರು. ಇಂದಿಗೂ ದೇಶದಲ್ಲಿ 2 ಲಕ್ಷ ಪಂಚಾಯಿತಿಗಳಲ್ಲಿ ಒಂದೇ ಒಂದು ಸಹಕಾರಿ ಸಂಸ್ಥೆ ಇಲ್ಲ ಎಂದರು. ಮುಂದಿನ 5 ವರ್ಷಗಳಲ್ಲಿ ಈ ಎರಡು ಲಕ್ಷ ಪಂಚಾಯಯಿತಿಗಳಲ್ಲಿ ವಿವಿಧೋದ್ದೇಶ ಪಿಎಸಿಎಸ್ ಗಳನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು. ಸರ್ಕಾರವು ಪಿಎಸಿಎಸ್ ಗೆ ಮಾದರಿ ಬೈಲಾಗಳನ್ನು ಮಾಡಿದೆ ಮತ್ತು ಪಿಎಸಿಎಸ್ ರಾಜ್ಯದ ವಿಷಯವಾಗಿದ್ದರೂ, ಕಾಶ್ಮೀರದಿಂದ ಕನ್ಯಾಕುಮಾರಿ ಮತ್ತು ಅಸ್ಸಾಂನಿಂದ ದ್ವಾರಕಾದವರೆಗೆ ಪ್ರತಿ ರಾಜ್ಯವು ಈ ಮಾದರಿ ಬೈಲಾಗಳನ್ನು ಒಪ್ಪಿಕೊಂಡಿವೆ ಎಂದು ಶ್ರೀ ಶಾ ಹೇಳಿದರು. ಪಿಎಸಿಎಸ್ ಅನ್ನು ಬಹುಪಯೋಗಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರವೂ ಕೆಲಸ ಮಾಡಿದೆ ಮತ್ತು ಇಂದು ದೇಶದ 65,000 ಕ್ರಿಯಾಶೀಲ ಪಿಎಸಿಎಸ್ ಗಳಲ್ಲಿ 48,000 ಹೊಸ ಚಟುವಟಿಕೆಗಳನ್ನು ಸೇರಿಸುವ ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ಶ್ರೀ ಶಾ ಹೇಳಿದರು.
ಕೇಂದ್ರ ಸರ್ಕಾರವು ಸಾವಯವ ಸಮಿತಿ, ರಫ್ತು ಸಮಿತಿ ಮತ್ತು ಬೀಜ ಸಮಿತಿ ಎಂಬ ಮೂರು ಬಹು-ರಾಜ್ಯ ಸಹಕಾರಿ ಸಂಸ್ಥೆಗಳನ್ನು ಸಹ ರಚಿಸಿದ್ದು, ಈ ಮೂಲಕ ರೈತರ ಬದುಕನ್ನು ಹಸನುಗೊಳಿಸಲು ಹಾದಿ ಸುಗಮವಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಸರ್ಕಾರರ ಶೀಘ್ರದಲ್ಲಿ ರಾಷ್ಟ್ರೀಯ ಸಹಕಾರಿ ನೀತಿಯನ್ನು ತರಲಿದೆ ಎಂದು ಅವರು ಹೇಳಿದರು. ದೇಶದಲ್ಲಿ 1100 ಹೊಸ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್ ಪಿ ಒ) ರಚಿಸಲಾಗಿದೆ ಎಂದು ಶ್ರೀ ಶಾ ಹೇಳಿದರು, 1 ಲಕ್ಷಕ್ಕೂ ಹೆಚ್ಚು ಪಿಎಸಿಎಸ್ ಹೊಸ ಬೈಲಾಗಳನ್ನು ಅಂಗೀಕರಿಸಿವೆ ಮತ್ತು ಈಗ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (ಎನ್ ಸಿ ಡಿ ಸಿ) 2000 ಕೋಟಿ ರೂಪಾಯಿಗಳ ಬಾಂಡ್‌ಗಳನ್ನು ವಿತರಿಸಿದೆ. ಸಂಸ್ಥೆಯು ಹೆಚ್ಚು ಸಹಕಾರಿ ಸಂಸ್ಥೆಗಳ ಕಲ್ಯಾಣಕ್ಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದರೊಂದಿಗೆ ನಗರ ಸಹಕಾರಿ ಬ್ಯಾಂಕ್‌ಗಳು ಹೊಸ ಶಾಖೆಗಳನ್ನು ತೆರೆಯುವ ಗುರಿಯನ್ನು ಪಡೆದಿವೆ, ಸಹಕಾರಿ ಬ್ಯಾಂಕ್ ಗಳು ನೀಡುವ ವೈಯಕ್ತಿಕ ಗೃಹ ಸಾಲದ ಮಿತಿಯನ್ನು ದ್ವಿಗುಣಗೊಳಿಸಲಾಗಿದೆ, ಆದಾಯ ತೆರಿಗೆ ಪ್ರಯೋಜನಗಳು ಮತ್ತು ನಗದು ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸಲಾಗಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಾನೂನನ್ನು ಜಾರಿಗೆ ತರುವ ಮೂಲಕ ಸಹಕಾರಿ ಸಕ್ಕರೆ ಕಾರ್ಖಾನೆಗಳ 15000 ಕೋಟಿ ರೂಪಾಯಿಗಳ ಆದಾಯ ತೆರಿಗೆ ಬಾಧ್ಯತೆಯನ್ನು ರದ್ದುಪಡಿಸಿದ್ದಾರೆ. ಹಲವು ವರ್ಷಗಳಿಂದ ಈ ಆದಾಯ ತೆರಿಗೆ ಬಾಧ್ಯತೆ ಬಾಕಿ ಇತ್ತು ಎಂದು ಸಚಿವರು ಹೇಳಿದರು.
ಸಹಕಾರಿ ಸಂಸ್ಥೆಗಳನ್ನು ದೇಶದ ಆರ್ಥಿಕತೆಯ ಬಲವಾದ ಆಧಾರ ಸ್ತಂಭವನ್ನಾಗಿ ಮಾಡುವಂತೆ ಶ್ರೀ ಅಮಿತ್ ಶಾ ಅವರು ದೇಶಾದ್ಯಂತದ ಸಹಕಾರಿ ಕ್ಷೇತ್ರದ ಕಾರ್ಯಕರ್ತರಿಗೆ ಕರೆ ನೀಡಿದರು ಸಹಕಾರಿ ಸಂಘಗಳನ್ನು ಬಲಿಷ್ಠ ಸ್ತಂಭವನ್ನಾಗಿ ಮಾಡುವುದಲ್ಲದೆ ಈ ಕ್ಷೇತ್ರದ ಮೂಲಕ ದೇಶದ ಕೋಟ್ಯಂತರ ಬಡವರ ಜೀವನದಲ್ಲಿ ಸೌಲಭ್ಯ, ಸಮೃದ್ಧಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು. 2029 ರಲ್ಲಿ ಅಂತಾರಾಷ್ಟ್ರೀಯ ಸಹಕಾರಿ ದಿನವನ್ನು ಆಚರಿಸುವಾಗ, ಪಿಎಸಿಎಸ್ ಇಲ್ಲದ ಒಂದೇ ಒಂದು ಪಂಚಾಯತ್ ದೇಶದಲ್ಲಿ ಇರುವುದಿಲ್ಲ ಎಂದು ಶ್ರೀ ಶಾ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡಲು ನಾವೆಲ್ಲರೂ ಒಗ್ಗೂಡಿ ಬಡವರ ಸೇವೆ ಮಾಡಲು ಸಹಕಾರಿ ಸಂಸ್ಥೆಗಳನ್ನು ಮುನ್ನಡೆಸಬೇಕಿದೆ ಎಂದು ಸಚಿವರು ಹೇಳಿದರು.
*****
(Release ID: 2031296)
Visitor Counter : 68