ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಭಾರತೀಯ ಆಹಾರ ನಿಗಮವು 2024-25 ಹಿಂಗಾರು (ರಾಬಿ) ಬೆಳೆ  ಮಾರಾಟ ಋತು (ಆರ್.ಎಂ.ಎಸ್.)  ಸಂದರ್ಭದಲ್ಲಿ 266 ಲಕ್ಷ ಮೆಟ್ರಿಕ್ ಟನ್ (ಎಲ್.ಎಂ.ಟಿ.)  ಗೋಧಿಯನ್ನು ಸಂಗ್ರಹಿಸಿದೆ


2024-25 ರ ಹಿಂಗಾರು (ರಾಬಿ) ಬೆಳೆ  ಮಾರಾಟ ಋತು (ಆರ್.ಎಂ.ಎಸ್.)  ಸಂದರ್ಭದಲ್ಲಿ  ಅವಧಿಯಲ್ಲಿ 22 ಲಕ್ಷಕ್ಕೂ ಹೆಚ್ಚು ಭಾರತೀಯ ರೈತರು ಪ್ರಯೋಜನ ಪಡೆದರು, ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ಅಡಿಯಲ್ಲಿ ಅವರ ಖಾತೆಗಳಿಗೆ ರೂಪಾಯಿ 61 ಲಕ್ಷ ಕೋಟಿ ಜಮಾ ಮಾಡಲಾಗಿದೆ.

ಕಳೆದ ಒಂದು ವರ್ಷದಲ್ಲಿ ಭತ್ತ ಮತ್ತು ಗೋಧಿಯನ್ನು ಎಂ.ಎಸ್‌.ಪಿ.ಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ 1.29 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ರೂ 2.3 ಲಕ್ಷ ಕೋಟಿ ಹಣ ವರ್ಗಾವಣೆ ಮಾಡಿದೆ

Posted On: 03 JUL 2024 6:29PM by PIB Bengaluru

ಭಾರತೀಯ ಆಹಾರ ನಿಗಮವು ( ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ  - ಎಫ್‌ಸಿಐ) ಪ್ರಸಕ್ತ 2024-25 ವರ್ಷದ ಹಿಂಗಾರು (ರಾಬಿ) ಬೆಳೆ  ಮಾರಾಟ ಋತು (ಆರ್.ಎಂ.ಎಸ್.)  ಸಂದರ್ಭದಲ್ಲಿ 266 ಲಕ್ಷ ಮೆಟ್ರಿಕ್ ಟನ್ (ಎಲ್‌.ಎಂ.ಟಿ) ಗೋಧಿಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಇದು ಕಳೆದ ವರ್ಷದ ಅಂಕಿಅಂಶ 262 ಎಲ್‌ಎಂಟಿಯನ್ನು ಮೀರಿದೆ ಮತ್ತು ರಾಷ್ಟ್ರದ ಆಹಾರ ಧಾನ್ಯದ ಸಮರ್ಪಕತೆಯನ್ನು ಭದ್ರಪಡಿಸಿದೆ. 2024-25 ರ ಆರ್.ಎಂ.ಎಸ್. ಅವಧಿಯಲ್ಲಿ 22 ಲಕ್ಷಕ್ಕೂ ಹೆಚ್ಚು ಭಾರತೀಯ ರೈತರು ಗೋಧಿಯನ್ನು ಖರೀದಿಸುವ ಪ್ರಕ್ರಿಯೆಯಿಂದ  ಪ್ರಯೋಜನ ಪಡೆದಿದ್ದಾರೆ. ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಇಷ್ಟು ಗಾತ್ರದ ಗೋಧಿ ಖರೀದಿಸಿದ ತಕ್ಷಣ ಈ ರೈತರ ಬ್ಯಾಂಕ್ ಖಾತೆಗಳಿಗೆ ರೂಪಾಯಿ 61 ಲಕ್ಷ ಕೋಟಿ ನೇರವಾಗಿ ಜಮಾ ಮಾಡಲಾಗಿದೆ.

ಆರ್.ಎಂ.ಎಸ್. ಅಡಿಯಲ್ಲಿ ಗೋಧಿಯ ಸಂಗ್ರಹಣೆಯು ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ 1 ರಂದು ಪ್ರಾರಂಭವಾಗುತ್ತದೆ;  ಆದಾಗ್ಯೂ, ರೈತರ ಅನುಕೂಲಕ್ಕಾಗಿ, ಸಂಗ್ರಹಿಸುವ ಹೆಚ್ಚಿನ ರಾಜ್ಯಗಳಲ್ಲಿ ಇದನ್ನು ಈ ವರ್ಷ ಸುಮಾರು ಹದಿನೈದು ದಿನಗಳ ಕಾಲ ಮುಂದೂಡಲಾಗಿದೆ.  ಈ ಉಪಕ್ರಮವು ರೈತರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಎಲ್ಲರಿಗೂ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ನಿರಂತರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ದೇಶದಾದ್ಯಂತ ಗೋಧಿ-ಸಂಗ್ರಹಿಸುವ ವಿವಿಧ ರಾಜ್ಯಗಳಿಂದ ಸಂಗ್ರಹಿಸಲಾದ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, 2024-25 ರ ಆರ್.ಎಂ.ಎಸ್. ಅವಧಿಯಲ್ಲಿ ಒಟ್ಟು ಗೋಧಿ ಸಂಗ್ರಹಣೆಯು 266 ಲಕ್ಷ ಮೆಟ್ರಿಕ್ ಟನ್ (ಎಲ್‌.ಎಂ.ಟಿ)  ಆಗಿದ್ದು , ಆರ್.ಎಂ.ಎಸ್.  2023-24ರ ಅಂಕಿ ಅಂಶಗಳು 262 ಎಲ್‌.ಎಂ.ಟಿ ಮತ್ತು ಆರ್.ಎಂ.ಎಸ್ 2022-2023 ಸಮಯದಲ್ಲಿ 188 ಎಲ್‌.ಎಂ.ಟಿ ಸಂಗ್ರಹಣೆ ದಾಖಲಾಗಿದೆ.  ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ತಮ್ಮ ಗೋಧಿ ಸಂಗ್ರಹಣೆಯ ಪ್ರಮಾಣದಲ್ಲಿ ಗಮನಾರ್ಹ ಸುಧಾರಣೆಗಳನ್ನು ತೋರಿಸಿವೆ.  ಉತ್ತರ ಪ್ರದೇಶವು ಕಳೆದ ವರ್ಷ 2.20 ಎಲ್‌.ಎಂ.ಟಿ ಗೆ ಹೋಲಿಸಿದರೆ ಈ ವರ್ಷ 9.31 ಎಲ್‌.ಎಂ.ಟಿ ಸಂಗ್ರಹವನ್ನು ದಾಖಲಿಸಿದೆ, ಅದೇ ರೀತಿಯಲ್ಲಿ ರಾಜಸ್ಥಾನವು 12.06 ಎಲ್‌.ಎಂ.ಟಿ ಅನ್ನು ಈ ವರ್ಷ ಸಾಧಿಸಿದೆ, ಹಿಂದಿನ ಋತುವಿನಲ್ಲಿ ಸಂಗ್ರಹಿಸಿದ 4.38 ಎಲ್‌.ಎಂ.ಟಿ ಗಿಂತ ಇದು ಹೆಚ್ಚಾಗಿದೆ.

 ಗಣನೀಯ ಪ್ರಮಾಣದ ಗೋಧಿ ಸಂಗ್ರಹಣೆಯು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ (ಪಿ.ಡಿ.ಎಸ್.) ಆಹಾರ ಧಾನ್ಯಗಳ ಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಆಹಾರ ನಿಗಮಕ್ಕೆ ಸಹಾಯ ಮಾಡಿದೆ.  ಈ ಸಂಪೂರ್ಣ ಸಂಗ್ರಹಣೆ ಪ್ರಕ್ರಿಯೆಯು ಪಿ.ಎಂ.ಜಿ.ಕೆ.ಎ.ವೈ.  ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸುಮಾರು 184 ಎಲ್‌.ಎಂ.ಟಿ ಗೋಧಿಯ ವಾರ್ಷಿಕ ಅಗತ್ಯವನ್ನು ಪೂರೈಸುವಲ್ಲಿ ಪ್ರಮುಖವಾಗಿದೆ.

ಆರ್.ಎಂ.ಎಸ್. 2024-25 ಕ್ಕೆ ಪ್ರತಿ ಕ್ವಿಂಟಲ್ ಗೋಧಿಗೆ  ಭಾರತ ಸರ್ಕಾರವು ನಿಗದಿ ಮಾಡಲಾದ ಕನಿಷ್ಠ ಬೆಂಬಲ ಬೆಲೆ ರೂ. 2275.  ಸುರಕ್ಷತಾ ನಿವ್ವಳವಾಗಿ ಕನಿಷ್ಠ ಬೆಂಬಲ ಬೆಲೆ ಕಾರ್ಯನಿರ್ವಹಿಸುತ್ತದೆ, ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತದೆ ಎಂದು ಖಚಿತಪಡಿಸುತ್ತದೆ.  ಇದಲ್ಲದೆ, ರೈತರು ತಮ್ಮ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಹೊಂದಿರುತ್ತಾರೆ, ಆ ನಿಟ್ಟಿನಲ್ಲಿ ಮುಕ್ತರಾಗಿದ್ದಾರೆ, ಅವರು ಉತ್ತಮ ಬೆಲೆಯನ್ನು ಕಂಡುಕೊಂಡರೆ, ಆ ಮೂಲಕ ಸ್ಪರ್ಧಾತ್ಮಕ ಮಾರುಕಟ್ಟೆ ವಾತಾವರಣವನ್ನು ಬೆಳೆಯುತ್ತದೆ. ಕನಿಷ್ಠ ಬೆಂಬಲ ಬೆಲೆಯ ಭರವಸೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿಗುವ ಅವಕಾಶಗಳು ಒಟ್ಟಾಗಿ ರೈತರಿಗೆ ತಮ್ಮ ಬೆಳೆಗೆ ಉತ್ತಮ ಆದಾಯದ ಭದ್ರತೆಗೂ ಕಾರಣವಾಗಿದೆ.

ಗೋಧಿಯ ಜೊತೆಗೆ, 2023-24 ರ ಮುಂಗಾರು (ಖಾರಿಫ್ ) ಬೆಳೆ ಮಾರಾಟ ಋತುವಿನಲ್ಲಿ, ಕೇಂದ್ರ‌ ಸಂಗ್ರಹಣಾ ವ್ಯವಸ್ಥೆಯಲ್ಲಿ ದೇಶದಾದ್ಯಂತ ಹರಡಿರುವ ರೈತರಿಂದ ಮಾಡಿದ ಭತ್ತದ ಸಂಗ್ರಹಣೆಯು ಈಗಾಗಲೇ 775 ಎಲ್‌.ಎಂ.ಟಿ ಯನ್ನು ಮೀರಿದೆ. ಒಂದು ಕೋಟಿಗೂ ಹೆಚ್ಚು ರೈತರಿಂದ ಇಷ್ಟು ಗಾತ್ರದಲ್ಲಿ ಭತ್ತವನ್ನು ಎಂಎಸ್‌ಪಿಯಲ್ಲಿ ಖರೀದಿಸಲಾಗಿದೆ ಮತ್ತು ಅವರ ಬ್ಯಾಂಕ್ ಖಾತೆಗಳಿಗೆ ರೂಪಾಯಿ 1.74 ಲಕ್ಷ ಕೋಟಿ ವರ್ಗಾವಣೆ ಮಾಡಲಾಗಿದೆ 

ಪ್ರಸ್ತುತ ಭತ್ತದ ಸಂಗ್ರಹಣೆಯ ಅಡಿಯಲ್ಲಿ, ಕೇಂದ್ರೀಯ ಪೂಲ್ ಅಕ್ಕಿ ದಾಸ್ತಾನು ಈಗಾಗಲೇ 490 ಎಲ್‌.ಎಂ.ಟಿ ಗಿಂತ ಹೆಚ್ಚಿದೆ, ಇದರಲ್ಲಿ 160 ಎಲ್‌.ಎಂ.ಟಿ ಅಕ್ಕಿಯನ್ನು ಮಿಲ್ಲಿಂಗ್ ಮಾಡಿದ ನಂತರ ಪಡೆಯಬೇಕಾಗಿದೆ. ವಾರ್ಷಿಕ ಅಕ್ಕಿಯ ಅವಶ್ಯಕತೆಯು ಸುಮಾರು 400 ಎಲ್‌.ಎಂ.ಟಿ ಆಗಿದೆ, ಆದರೆ ಜುಲೈ 1 ರಂದು ಭಾರತ ಸರ್ಕಾರವು ಸೂಚಿಸಿದ ಬಫರ್ ಮಾನದಂಡಗಳ ಪ್ರಕಾರ , ಈ ಮೊತ್ತವು 135 ಎಲ್‌.ಎಂ.ಟಿ ಆಗಿರುತ್ತದೆ. ಪ್ರಸ್ತುತ ಅಕ್ಕಿಯ ದಾಸ್ತಾನು ಮಟ್ಟದೊಂದಿಗೆ, ದೇಶದ ಈ ವರ್ಷದ ಅಕ್ಕಿಯ ಬಫರ್ ಸ್ಟಾಕ್ ಮಾನದಂಡಗಳನ್ನು ಮಾತ್ರವಲ್ಲದೆ ಅದರ ಸಂಪೂರ್ಣ ವಾರ್ಷಿಕ ಅಗತ್ಯವನ್ನೂ ಮೀರಿಹೋಗಿದೆ.  ಮುಂದಿನ ಮುಂಗಾರು (ಖಾರಿಫ್ ) ಬೆಳೆ ಮಾರಾಟ ಋತು (ಕೆಎಂಎಸ್) 2024-25 ರ ಅಡಿಯಲ್ಲಿ ಸಂಗ್ರಹಣೆಯು ಅಕ್ಟೋಬರ್ 2024 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಈ ಋತುವಿನಲ್ಲಿ ಗೋಧಿ ಮತ್ತು ಭತ್ತದ ಗಣನೀಯ ಸಂಗ್ರಹಣೆಯು ಸರ್ಕಾರ, ಭಾರತೀಯ ಆಹಾರ ನಿಗಮ, ರಾಜ್ಯ ಇಲಾಖೆಗಳು, ರೈತರು ಮತ್ತು ಅರಾಟಿಯಾಸ್ (ಕಮಿಷನ್ ಏಜೆಂಟ್‌ಗಳು), ನಿರ್ವಹಣೆ ಮತ್ತು ಸಾರಿಗೆ ಗುತ್ತಿಗೆದಾರರು ಮತ್ತು ರಸ್ತೆ ಸಾಗಾಟ/ಸಾರಿಗೆ ಗುತ್ತಿಗೆದಾರರು ಸೇರಿದಂತೆ ಇತರ ಪಾಲುದಾರರ ಸಂಯೋಜಿತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.  ಈ ಗುರಿ ಸಾಧನೆಯು ಭಾರತೀಯ ಆಹಾರ ನಿಗಮದ ಸಂಗ್ರಹಣೆ ಮತ್ತು ಶೇಖರಣಾ ಮೂಲಸೌಕರ್ಯದ ದೃಢತೆಯನ್ನು ಒತ್ತಿಹೇಳುತ್ತದೆ, ಇದು ದೇಶದಲ್ಲಿ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಭಾರತದಾದ್ಯಂತ ಆಹಾರ ಧಾನ್ಯಗಳ ಲಭ್ಯತೆಯನ್ನು ಖಾತ್ರಿಪಡಿಸುವ, ರೈತ ಸಮುದಾಯವನ್ನು ಬೆಂಬಲಿಸುವ ಮತ್ತು ರಾಷ್ಟ್ರೀಯ ಆಹಾರ ಭದ್ರತೆಯ ದೊಡ್ಡ ಗುರಿಯನ್ನು ಸಾಧಿಸುವ ತನ್ನ ಧ್ಯೇಯಕ್ಕೆ ಭಾರತೀಯ ಆಹಾರ ನಿಗಮವು ಬದ್ಧವಾಗಿದೆ.

 

 *****



(Release ID: 2030661) Visitor Counter : 12