ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಭಾರತೀಯ ಆಹಾರ ನಿಗಮದ ಪ್ರಧಾನ ಕಚೇರಿಗೆ ದಿಢೀರ್ ಭೇಟಿ ನೀಡಿದರು


ದೇಶಾದ್ಯಂತ ಆಹಾರ ಭದ್ರತೆಯನ್ನು ಖಾತ್ರಿಪಡಿಸಿ ಮತ್ತು ಆಹಾರ ವಿತರಣೆಯ ದಕ್ಷತೆಯನ್ನು ಸುಧಾರಿಸಿ: ಶ್ರೀ ಪ್ರಲ್ಹಾದ್ ಜೋಶಿ

Posted On: 19 JUN 2024 5:30PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಭಾರತೀಯ ಆಹಾರ ನಿಗಮದ (ಎಫ್ ಸಿಐ) ಪ್ರಧಾನ ಕಚೇರಿಗೆ ದಿಢೀರ್ ಭೇಟಿ ನೀಡಿದರು. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜೀವ್ ಚೋಪ್ರಾ ಅವರೂ ಈ ಭೇಟಿಯ ಸಮಯದಲ್ಲಿ ಅವರೊಂದಿಗೆ ಇದ್ದರು. ನಿಗಮವು ಎದುರಿಸುತ್ತಿರುವ ಕಾರ್ಯಾಚರಣೆಯ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ನೇರ ಒಳನೋಟವನ್ನು ಪಡೆಯುವುದು ಈ ಭೇಟಿಯ ಉದ್ದೇಶವಾಗಿತ್ತು.

 

ಶ್ರೀ ಜೋಶಿ ಅವರು ಹಿರಿಯ ಅಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿದರು, ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದರು ಮತ್ತು ದೇಶಾದ್ಯಂತ ಆಹಾರ ವಿತರಣೆಯ ದಕ್ಷತೆಯನ್ನು ಸುಧಾರಿಸುವುದಕ್ಕೆ ಆದ್ಯತೆ ನೀಡಬೇಕು ಎಂದರು. ಕೇಂದ್ರ ಸಚಿವರು ಎಫ್ ಸಿಐ ಕಾರ್ಯಾಚರಣೆಗಳ ವಿವಿಧ ಅಂಶಗಳನ್ನು ಚರ್ಚಿಸುವಾಗ ಹೆಚ್ಚಿನ ದಕ್ಷತೆಯ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಸಬ್ಸಿಡಿಯ ಮೇಲಿನ ವೆಚ್ಚ ಮತ್ತು ಹೊರೆಯನ್ನು ಕಡಿಮೆ ಮಾಡಲು ಒತ್ತು ನೀಡಬೇಕು ಎಂದೂ ಹೇಳಿದರು. ಅಲ್ಲದೆ, ಕಚೇರಿ ಕಟ್ಟಡ ವೀಕ್ಷಿಸುವ ಸಂದರ್ಭದಲ್ಲಿ  ಮೂಲಸೌಕರ್ಯಗಳನ್ನು ಸುಧಾರಿಸಲು ಅವರು ಸಲಹೆ ನೀಡಿದರು. ಸಚಿವಾಲಯದ ಉಸ್ತುವಾರಿ ವಹಿಸಿಕೊಂಡ ನಂತರ ಎಫ್ಸಿಐ ಜೊತೆಗಿನ ಅವರ ಮೊದಲ ಮಾತುಕತೆ ಇದಾಗಿದೆ.

ತಮ್ಮ ಭೇಟಿಯ ಸಮಯದಲ್ಲಿ, ಕೇಂದ್ರ ಸಚಿವರು ಎಫ್ ಸಿಐನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು (ಸಿಎಂಡಿ), ಎಲ್ಲಾ ಕಾರ್ಯನಿರ್ವಾಹಕ ನಿರ್ದೇಶಕರು, ಮುಖ್ಯ ಜನರಲ್ ಮ್ಯಾನೇಜರ್ ಗಳು (ಸಿಜಿಎಂ) ಮತ್ತು ಜನರಲ್ ಮ್ಯಾನೇಜರ್ ಗಳೊಂದಿಗೆ (ಜಿಎಂ) ಸಂವಾದ ನಡೆಸಿದರು.

ಸಿಎಂಡಿ ಎಫ್ ಸಿಐ ಅವರು ಎಫ್ ಸಿಐನ ಕಾರ್ಯಚಟುವಟಿಕೆಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುವ ಸಮಗ್ರ ಪ್ರಸ್ತುತಿಯನ್ನು ಮಂಡಿಸಿದರು. ಪ್ರಸ್ತುತಿಯು ಎಫ್ ಸಿಐನ ಕಾರ್ಯಾಚರಣೆಯ ಕಾರ್ಯತಂತ್ರಗಳು, ಪ್ರಮುಖ ಉಪಕ್ರಮಗಳು ಮತ್ತು ರಾಷ್ಟ್ರದಾದ್ಯಂತ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಅದು ವಹಿಸುವ ಅದರ ಸಮಗ್ರ ಪಾತ್ರವನ್ನು ಪ್ರದರ್ಶಿಸಿತು. ಹೆಚ್ಚುವರಿ ಬೆಂಬಲ ಮತ್ತು ನೀತಿ ಮಧ್ಯಪ್ರವೇಶಗಳು ಹಾಗು  ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸುವ ಕ್ಷೇತ್ರಗಳನ್ನು ಎಫ್ ಸಿಐನ ಸಿಎಂಡಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.


ಕೇಂದ್ರ ಸಚಿವರ ಭೇಟಿಯನ್ನು ಎಫ್ ಸಿಐ ಅಧಿಕಾರಿಗಳು ಉತ್ಸಾಹದಿಂದ ಸ್ವಾಗತಿಸಿದರು, ಅವರು  ಸಂಸ್ಥೆಯ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸಚಿವರ ತೀವ್ರ ಆಸಕ್ತಿ ಮತ್ತು ಧನಾತ್ಮಕ ಸಕ್ರಿಯ ವಿಧಾನದಿಂದ ಪ್ರೇರಣೆ ಪಡೆದರು.

 

*****



(Release ID: 2026727) Visitor Counter : 28