ಕೃಷಿ ಸಚಿವಾಲಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಣಾಸಿಯಿಂದ ಪಿಎಂ-ಕಿಸಾನ್ ಅಡಿಯಲ್ಲಿ ಸುಮಾರು 20,000 ಕೋಟಿ ರೂಪಾಯಿಗಳ 17ನೇ ಕಂತನ್ನು ಬಿಡುಗಡೆ ಮಾಡಿದರು


ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಅರ್ಹ ಫಲಾನುಭವಿಯನ್ನು ತಲುಪಲು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿರುವುದು ನನಗೆ ಸಂತೋಷ ತಂದಿದೆ - ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರಿಂದ  30,000 ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ ಕೃಷಿ ಸಖಿಗಳ ಪ್ರಮಾಣಪತ್ರಗಳ ವಿತರಣೆ 

ನಮಗೆ ರೈತರೇ ದೇವರು, ರೈತರ ಸೇವೆಯೇ ದೇವರನ್ನು ಪೂಜಿಸಿದಂತೆ - ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರು

Posted On: 18 JUN 2024 7:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಿಎಂ-ಕಿಸಾನ್ ಅಡಿಯಲ್ಲಿ ಸುಮಾರು 20,000 ಕೋಟಿ ರೂಪಾಯಿಗಳ 17 ನೇ ಕಂತನ್ನು ಬಿಡುಗಡೆ ಮಾಡಿದರು ಮತ್ತು ವಾರಣಾಸಿಯಲ್ಲಿ ಕೃಷಿ ಸಖಿಗಳು ಎಂದು ಕರೆಯಲ್ಪಡುವ 30,000 ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.  ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹಲವಾರು ರಾಜ್ಯ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಥಳದಲ್ಲಿ ಉಪಸ್ಥಿತರಿದ್ದ ರೈತರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನದ ಮೂಲಕ ಕಾರ್ಯಕ್ರಮಕ್ಕೆ ಸಂಪರ್ಕ ಕಲ್ಪಿಸಿ, ಕೋಟ್ಯಂತರ ರೈತರ ಖಾತೆಗೆ 20,000 ಕೋಟಿ ರೂಪಾಯಿ ಜಮೆ ಮಾಡಲಾಗಿದೆ ಎಂದು ತಿಳಿಸಿದರು. ಕೃಷಿ ಸಖಿ ಉಪಕ್ರಮವು 3 ಕೋಟಿ ‘ಲಖಪತಿ ದೀದಿʼಗಳನ್ನು ರಚಿಸುವ ದಿಕ್ಕಿನೆಡೆ ಒಂದು  ಪ್ರಬಲ ಹೆಜ್ಜೆಯಾಗಿದೆ ಎಂದು  ಹೇಳಿದರು. ಈ ಉಪಕ್ರಮವು ಫಲಾನುಭವಿ ಮಹಿಳೆಯರಿಗೆ ಆದಾಯದ ಮೂಲದ ಘನತೆ ಮತ್ತು ಭರವಸೆಯನ್ನು ಕೂಡ ಖಚಿತಪಡಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. "ಪಿಎಂ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ಯೋಜನೆಯಾಗಿ ಹೊರಹೊಮ್ಮಿದೆ" ಮತ್ತು ವಾರಣಾಸಿಯೊಂದರಲ್ಲೇ ವರ್ಗಾಯಿಸಿದ 700 ಕೋಟಿ ರೂಪಾಯಿಗಳನ್ನು ಸೇರಿಸಿ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ 3.25 ಲಕ್ಷ ಕೋಟಿಗಿಂತಲೂ ಹೆಚ್ಚು ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.  

ಅರ್ಹ ಫಲಾನುಭವಿಗಳಿಗೆ ಪ್ರಯೋಜನಗಳನ್ನು ತಲುಪಿಸುವಲ್ಲಿ ತಂತ್ರಜ್ಞಾನದ ಬಳಕೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು ಮತ್ತು 1 ಕೋಟಿಗೂ ಹೆಚ್ಚು ರೈತರು ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸಿಕೊಳ್ಳಲು ಸಾಧ್ಯವಾಗಿಸಿದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಶ್ರೇಯ ಸಲ್ಲಿಸಿದರು. ಸುಲಭ ಲಭ್ಯತೆಯನ್ನು ಹೆಚ್ಚಿಸಲು ನಿಯಮಗಳು ಮತ್ತು ನಿಬಂಧನೆಗಳನ್ನು ಸರಳೀಕರಿಸಲಾಗಿದೆ ಎಂದು ಅವರು ಹೇಳಿದರು. "ಉದ್ದೇಶಗಳು ಮತ್ತು ನಂಬಿಕೆಗಳು ಸರಿಯಾದ ಸ್ಥಳದಲ್ಲಿದ್ದಾಗ ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಕೆಲಸಗಳು ವೇಗವಾಗಿ ನಡೆಯುತ್ತವೆ" ಎಂದು ಶ್ರೀ ಮೋದಿ ಹೇಳಿದರು. ʼಡ್ರೋನ್ ದೀದಿʼ ಕಾರ್ಯಕ್ರಮದಂತೆಯೇ ಕೃಷಿ ಸಖಿ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಎತ್ತಿ ತೋರಿಸಿದರು. ಆಶಾ ಕಾರ್ಯಕರ್ತೆಯರು ಮತ್ತು ಬ್ಯಾಂಕ್ ಸಖಿಗಳಾಗಿ ಮಹಿಳೆಯರ ಕೊಡುಗೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕೃಷಿ ಸಖಿಗಳಾಗಿ ಅವರ ಸಾಮರ್ಥ್ಯಗಳನ್ನು ಈಗ ರಾಷ್ಟ್ರವು ಗಮನಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು ಮತ್ತು ರೈತ ಅದರ ಆತ್ಮ ಎಂದು ಹೇಳಿದರು. ನಮಗೆ ರೈತರೇ ದೇವರು, ರೈತರ ಸೇವೆಯೇ ದೇವರನ್ನು ಪೂಜಿಸಿದಂತೆ ಎಂದು ಹೇಳಿದರು. ಶ್ರೀ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಮೊದಲು ಕಿಸಾನ್ ಸಮ್ಮಾನ್ ನಿಧಿಯ ಕಡತಕ್ಕೆ ಸಹಿ ಮಾಡಿ, ಅಂದರೆ ರೈತರ ಖಾತೆಗೆ ಹಣ ಜಮಾ ಮಾಡಿ, ಇಂದು ಇಲ್ಲಿಗೆ ಬಂದು ರೈತರೊಡನೆ ತಮ್ಮ ಮೊದಲ ಕಾರ್ಯಕ್ರಮವನ್ನು ನಡೆಸಿದರು. ಇದು ಕೃಷಿಕರು ಮತ್ತು ಕೃಷಿಯೆಡೆಗಿನ ಪ್ರಧಾನಮಂತ್ರಿಯವರ ಬದ್ಧತೆಯಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.  

ಇಂದು ಪ್ರಧಾನಿಮಂತ್ರಿಯವರ ಒಂದೇ ಕ್ಲಿಕ್ನ ಮುಖಾಂತರ ಸುಮಾರು 9.25 ಕೋಟಿ ರೈತರ ಖಾತೆಗಳಿಗೆ 20 ಸಾವಿರ ಕೋಟಿ ರೂಪಾಯಿಗಳನ್ನು  ಜಮಾ ಮಾಡಲಾಗಿದ್ದು, ಇದುವರೆಗೆ ರೈತರ ಖಾತೆಗೆ ಒಟ್ಟು ಸುಮಾರು 3,25,000 ಕೋಟಿ ರೂಪಾಯಿಗಳನ್ನು  ಜಮಾ ಮಾಡಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾರ್ಗಸೂಚಿಯಲ್ಲಿ ನಿರಂತರ ಕೆಲಸ ಮಾಡಲಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಇದಕ್ಕಾಗಿ ಒಂದೆಡೆ ನೀರಾವರಿ ಯೋಜನೆಗಳ ಮೂಲಕ ಹೊಸ ತಂತ್ರಜ್ಞಾನ ಬಳಸಿ ಉತ್ಪಾದನೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದೆಡೆ ಉತ್ಪಾದನಾ ವೆಚ್ಚ ತಗ್ಗಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದು, ಇದರಿಂದಾಗಿ  ರೈತರಿಗೆ ಅಗ್ಗದ ದರದಲ್ಲಿ ರಸಗೊಬ್ಬರಗಳು ದೊರೆಯುತ್ತವೆ.

ಕಿಸಾನ್ ಕ್ರೆಡಿಟ್ ಕಾರ್ಡ್ ನಂತಹ ಅದ್ಭುತ ಯೋಜನೆ ರೈತನನ್ನು ಲೇವಾದೇವಿಗಾರರ ಕಪಿಮುಷ್ಟಿಯಿಂದ ಮುಕ್ತಗೊಳಿಸಿದೆ ಮತ್ತು ಸಣ್ಣ ರೈತರು ಕಿಸಾನ್ ಸಮ್ಮಾನ್ ನಿಧಿಯಿಂದ ರಸಗೊಬ್ಬರ ಮತ್ತು ಬೀಜಗಳನ್ನು ಪಡೆಯುತ್ತಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರದಂತೆ ಎಲ್ಲಾ ರಾಜ್ಯಗಳ ರೈತರಿಗೆ ಬೆಳೆಗಳಿಗೆ ಉತ್ತಮ ಬೆಲೆ ಪಡೆಯಲು ಬೆಳೆಗೆ ತಗಲುವ ವೆಚ್ಚದಲ್ಲಿ ಕನಿಷ್ಠ ಶೇ.50 ರಷ್ಟು ಲಾಭ ನೀಡಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದರು. ಪ್ರಕೃತಿ ವಿಕೋಪದಲ್ಲಿ ಬೆಳೆ ಹಾನಿಯಾದರೆ ಅದನ್ನು ಸರಿದೂಗಿಸಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು, ಹೂವಿನ ಕೃಷಿ, ಹಣ್ಣಿನ ಕೃಷಿಗೆ ಉತ್ತೇಜನ, ತರಕಾರಿ ಕೃಷಿ, ಔಷಧೀಯ ಕೃಷಿ, ಕೃಷಿ ಅರಣ್ಯ, ಪಶುಸಂಗೋಪನೆ ಜೊತೆಗೆ ಕೃಷಿ, ಜೇನುಸಾಕಣೆ ಇತ್ಯಾದಿಗಳಿಂದ ಕೃಷಿಯ ವೈವಿಧ್ಯೀಕರಣಕ್ಕಾಗಿ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಇದರಿಂದಾಗಿ ರೈತರ ಆದಾಯ ದ್ವಿಗುಣಗೊಳ್ಳುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೃಷಿ ಇಲಾಖೆಯು ಹಗಲಿರುಳು ಶ್ರಮಿಸುತ್ತದೆ ಮತ್ತು ರೈತರ ಕಲ್ಯಾಣಕ್ಕಾಗಿ ಸರ್ವ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಮೂರು ಕೋಟಿ ಜನರನ್ನು ಲಖಪತಿ ದೀದಿಗಳನ್ನಾಗಿ ಮಾಡಲು ಪ್ರಧಾನಮಂತ್ರಿಯವರು  ಸಂಕಲ್ಪ ತೊಟ್ಟಿದ್ದಾರೆ, ಅದರಲ್ಲಿ ಸುಮಾರು ಒಂದು ಕೋಟಿ ಲಖಪತಿ ದೀದಿಗಳನ್ನು ಈಗಾಗಲೇ ಮಾಡಲಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಅದರ ಒಂದು ಆಯಾಮವೇ ಕೃಷಿ ಸಖಿ, ಅವರಿಗೆ ಪ್ರಮಾಣ ಪತ್ರಗಳನ್ನೂ ಇಂದು ವಿತರಿಸಲಾಯಿತು. ರೈತರಿಗೆ ಈ ನಮ್ಮ ಸಹೋದರಿಯರು ಅವರ ಕೆಲಸದಲ್ಲಿ ಸಹಾಯ ಮಾಡಲು ತರಬೇತಿ ಪಡೆದಿದ್ದು, ಈವರೆಗೆ 34,000 ಸಹೋದರಿಯರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು. ಈ ಕೃಷಿ ಸಖಿಗಳು ಒಂದೆಡೆ ರೈತರಿಗೆ ಉತ್ತಮ ಕೃಷಿ ವಿಧಾನದಲ್ಲಿ ಸಹಾಯ ಮಾಡುತ್ತಾರೆ ಹಾಗು ಇನ್ನೊಂದೆಡೆ ಇವರು ಅವರ ಆದಾಯವನ್ನು ಹೆಚ್ಚಿಸಲು ಸಹಾಯಕವಾಗುತ್ತಾರೆ ಎಂದು ಕೇಂದ್ರ ಸಚಿವರು ಹೇಳಿದರು.
 

*****



(Release ID: 2026384) Visitor Counter : 28