ವಾರ್ತಾ ಮತ್ತು ಪ್ರಸಾರ ಸಚಿವಾಲಯ

18ನೇ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾನಲ್ ಚರ್ಚೆಯು ಸಾಮಾಜಿಕ ಪರಿವರ್ತನೆಯನ್ನು ತೀವ್ರಗೊಳಿಸಲು ಸಾಕ್ಷ್ಯಚಿತ್ರಗಳ ಸಾಮರ್ಥ್ಯವನ್ನು ಪರಿಶೋಧಿಸಿತು


ಚಲನಚಿತ್ರ ನಿರ್ಮಾಪಕರು ಕೇವಲ ರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ಮಾನವಕುಲದ ಹೊಣೆಗಾರಿಕೆಯನ್ನು ಹೊಂದಿದ್ದಾರೆ: ಹಿರಿಯ ಕನ್ನಡ ಚಲನಚಿತ್ರ ನಿರ್ದೇಶಕ ಡಾ. ಟಿ.ಎಸ್. ನಾಗಾಭರಣ

ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳೆರಡೂ ಸಮಾಜದ ನೈಜತೆಯನ್ನು ಪ್ರತಿಬಿಂಬಿಸುತ್ತವೆ: ಡಾ. ಟಿ. ಎಸ್. ನಾಗಾಭರಣ

Posted On: 17 JUN 2024 4:02PM by PIB Bengaluru

18ನೇ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಎಂಐಎಫ್ ಎಫ್-2024) ಇಂದು "ಅನ್ಲಾಕಿಂಗ್ ದಿ ಫೋರ್ಸ್: ಯೂಸಿಂಗ್ ಡಾಕ್ಯುಮೆಂಟರಿ ಫಿಲ್ಮ್ಸ್ ಟು ಪ್ರಮೋಟ್ ಸೋಶಿಯಲ್ ಟ್ರಾನ್ಸ್ಫರ್ಮೇಷನ್"  (ಸಾಮರ್ಥ್ಯದ ಬಿಡುಗಡೆ: ಸಾಮಾಜಿಕ ಪರಿವರ್ತನೆಯನ್ನು ಉತ್ತೇಜಿಸಲು ಸಾಕ್ಷ್ಯಚಿತ್ರಗಳ ಬಳಕೆ)  ಎಂಬ ವಿಷಯದ ಮೇಲೆ ಗಹನವಾದ ಪ್ಯಾನೆಲ್ ಚರ್ಚೆಯನ್ನು ಒಳಗೊಂಡಿತ್ತು. ಹಿರಿಯ ಕನ್ನಡ ಚಲನಚಿತ್ರ ನಿರ್ದೇಶಕ, ನಟ ಮತ್ತು ನಿರ್ಮಾಪಕರಾದ ಡಾ. ಟಿ.ಎಸ್. ನಾಗಾಭರಣ ಭಾಗವಹಿಸಿದ್ದರು. ಸಾಮಾಜಿಕ ಪರಿವರ್ತನೆಯನ್ನು ತೀವ್ರಗೊಳಿಸಲು ಸಾಕ್ಷ್ಯಚಿತ್ರಗಳ ಅಪಾರ ಸಾಮರ್ಥ್ಯವನ್ನು ಪರಿಶೋಧಿಸಿದ ಅಧಿವೇಶನವು ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು, ಕಾರ್ಯವನ್ನು ಪ್ರೇರೇಪಿಸಲು ಮತ್ತು ಗಮನಾರ್ಹ ಸಾಮಾಜಿಕ ಬದಲಾವಣೆಯನ್ನು ಹೆಚ್ಚಿಸಲು ಸಾಕ್ಷ್ಯಚಿತ್ರಗಳ ಸಾಮರ್ಥ್ಯವನ್ನು ಕೇಂದ್ರೀಕರಿಸಿತ್ತು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್ ಎಫ್ ಡಿಸಿ) ಪ್ರಧಾನ ವ್ಯವಸ್ಥಾಪಕರಾದ ಶ್ರೀ ಡಿ.ರಾಮಕೃಷ್ಣನ್ ಚರ್ಚೆಯನ್ನು ನಿರ್ವಹಿಸಿದರು.

ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕರೂ ಆದ  ಡಾ.ಟಿ.ಎಸ್.ನಾಗಾಭರಣ ಅವರು ಸಿನಿಮಾದ ಜವಾಬ್ದಾರಿಯನ್ನು ಪ್ರಬಲ ಮಾಧ್ಯಮವಾಗಿ ಎತ್ತಿ ತೋರಿಸಿದರು. ಆಧುನಿಕ ಚಲನಚಿತ್ರವು ಸಾಮಾನ್ಯವಾಗಿ "ನೋ-ಮ್ಯಾನ್ಸ್ ಲ್ಯಾಂಡ್" ನಲ್ಲಿ ಕಂಡುಬರುತ್ತದೆ ಎಂದು ಅವರು ಗಮನಸೆಳೆದರು, ಅಲ್ಲಿ ಮೊಬೈಲ್ ಕ್ಯಾಮೆರಾ ಹೊಂದಿರುವ ಯಾರು ಬೇಕಾದರೂ ಚಲನಚಿತ್ರವನ್ನು ಮಾಡಬಹುದು. ಆದಾಗ್ಯೂ, ಅವರು ಚಲನಚಿತ್ರದ ಯಶಸ್ಸಿಗೆ ಅಗತ್ಯವಾದ ಶಿಸ್ತನ್ನು ನೀಡಲು "ಶಿಕ್ಷಣದಲ್ಲಿ ಸಿನಿಮಾ ಮತ್ತು ಸಿನೆಮಾದಲ್ಲಿ ಶಿಕ್ಷಣ" ದ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು.


(ಫೋಟೋದಲ್ಲಿ: 18ನೇ ಎಂಐಎಫ್ಎಫ್ನಲ್ಲಿ ಪ್ಯಾನಲ್ ಚರ್ಚೆಯಲ್ಲಿ  ಕನ್ನಡ ಚಲನಚಿತ್ರ ನಿರ್ದೇಶಕ, ನಟ ಮತ್ತು ನಿರ್ಮಾಪಕ ಡಾ. ಟಿ. ಎಸ್. ನಾಗಾಭರಣ)


ಕ್ರಿಯಾಶಿಲ ಚಲನಚಿತ್ರ ನಿರ್ಮಾಪಕರ ಪ್ರಕಾರ, ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳೆರಡೂ ಸಮಾಜದ ನೈಜತೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಸಮಾಜಕ್ಕೆ ಆಂತರಿಕವಾಗಿ ಸಂಬಂಧ ಪಟ್ಟಿವೆ. ಚಲನಚಿತ್ರ ನಿರ್ಮಾಪಕರು ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಬಗ್ಗೆ  ತಿಳಿದುಕೊಂಡಿರಬೇಕು ಮತ್ತು ಅವರ ಕೆಲಸದಲ್ಲಿ ಸಮಾಜಕ್ಕೆ ಸಂಬಂಧಪಟ್ಟ ವಿಷಯಗಳಿಗಾಗಿ ಶ್ರಮಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. “ಸಾಕ್ಷ್ಯಚಿತ್ರವು ಸಾಮಾಜಿಕ ಪರಿವರ್ತನೆಗೆ ಕಲಾತ್ಮಕ ಸಾಧನವಾಗಿದೆ. ಸಿನಿಮಾ ನಿರ್ಮಾಪಕರು ಸತ್ಯದ ಹಿಂದೆ ಹೋಗುವುದು ಅಷ್ಟು ಸುಲಭವಲ್ಲ. ಸತ್ಯವು ಸದಾ ಗೋಚರಿಸದಿರಬಹುದು, ಅದು ಆಗಾಗ್ಗೆ ಅಸ್ಪಷ್ಟವಾಗಿರುತ್ತದೆ ” ಎಂದು ಅವರು ನುಡಿದರು.

ಏಳು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಡಾ. ಟಿ. ಎಸ್. ನಾಗಾಭರಣ ಅವರು ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಸರಿಯಾದ ಬೆಂಬಲ ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳಿದರು ಮತ್ತು ಸಾಕ್ಷ್ಯಚಿತ್ರಗಳಲ್ಲಿ ಸತ್ಯವನ್ನು  ತಿರುಚುವುದರ ವಿರುದ್ಧ ಎಚ್ಚರಿಸಿದರು. “ನೀವು ಸತ್ಯವನ್ನು ಮರುಸೃಷ್ಟಿಸಿದರೆ, ಅದು ನಂತರ ಸತ್ಯವಾಗಿಯೇ ಇರುವುದಿಲ್ಲ. ಅದು ಕೇವಲ ಕೈವಾಡ." ಎಂದು ಹೇಳಿದರು. ತಮ್ಮ ವೈಯಕ್ತಿಕ ದೃಷ್ಟಿಕೋನಗಳನ್ನು ಪರಿಣಾಮಕಾರಿಯಾಗಿ ತಿಳಿಸಲು ವಿಶಿಷ್ಟವಾದ ದೃಶ್ಯ ಸಾಕ್ಷರತೆ ಮತ್ತು ಸೌಂದರ್ಯ ಪ್ರಜ್ಞೆಯನ್ನು ಹೊಂದಿರಬೇಕು ಎಂದು ಸಾಕ್ಷ್ಯಚಿತ್ರ ನಿರ್ಮಾಪಕರಿಗೆ ಅವರು ಕರೆ ನೀಡಿದರು.

ಚಲನಚಿತ್ರ ನಿರ್ಮಾಪಕರು ಪ್ರಸ್ತುತಪಡಿಸುವ ಸತ್ಯಗಳನ್ನು ಒಪ್ಪಿಕೊಳ್ಳುವಲ್ಲಿ ಸಮಾಜವು ಎದುರಿಸುತ್ತಿರುವ ಸವಾಲುಗಳನ್ನು ಒಪ್ಪಿಕೊಂಡ ಡಾ.ಟಿ.ಎಸ್.ನಾಗಾಭರಣ ಅವರು ಪ್ರಾಮಾಣಿಕ ಚಲನಚಿತ್ರ ನಿರ್ಮಾಣದ ಮೂಲಕ ಬದಲಾವಣೆಯನ್ನು ಪ್ರೇರೇಪಿಸಲು ಪ್ರತಿಪಾದಿಸಿದರು. ಉದ್ದೇಶಪೂರ್ವಕ (ಅಜೆಂಡಾ ಹೊಂದಿರುವ)  ಚಲನಚಿತ್ರ ನಿರ್ಮಾಣದ ವಿರುದ್ಧ ಅವರು ಎಚ್ಚರಿಕೆ ನೀಡಿದರು, ಇದು ಸತ್ಯಾಸತ್ಯತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನಕಲಿ ನಿರೂಪಣೆಗಳನ್ನು ಪೋಷಿಸುತ್ತದೆ ಎಂದು ಅವರು ಹೇಳಿದರು. “ದೃಶ್ಯ ಭಾಷೆಯು ವಿಭಿನ್ನ ವಿಧಾನವಾಗಿದೆ, ಬಹುತೇಕ ಕಾವ್ಯಾತ್ಮಕ ಭಾಷೆಯಂತೆ. ಇಂದಿನ ದೃಶ್ಯ ಭಾಷೆಯು ನೈಜ ವಾಸ್ತವವನ್ನು ಸೆರೆ ಹಿಡಿಯಲು ಕಾವ್ಯ ಮತ್ತು ರಾಜಕೀಯವನ್ನು  ಬೆಸೆದುಕೊಳ್ಳಬೇಕು ”ಎಂದು ಅವರು ಹೇಳಿದರು.

ಡಾ.ಟಿ.ಎಸ್.ನಾಗಾಭರಣ ಅವರು ಚಲನಚಿತ್ರ ನಿರ್ಮಾಪಕರ ಜವಾಬ್ದಾರಿಯು ಕೇವಲ ರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ಮಾನವ ಕುಲಕ್ಕೆ ಇದೆ ಎಂದು ಒತ್ತಿ ಹೇಳಿದರು. ಚಲನಚಿತ್ರ ನಿರ್ಮಾಣದಲ್ಲಿ ಉದ್ದೇಶದ ಸ್ಪಷ್ಟತೆ, ಉದಾತ್ತ ಉದ್ದೇಶಗಳನ್ನು ತಿಳಿಸುತ್ತದೆ, ಅಸ್ಪಷ್ಟತೆ ಮತ್ತು ತಪ್ಪುದಾರಿಗೆಳೆಯುವ ನಿರೂಪಣೆಗಳನ್ನು ತಪ್ಪಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಸಾಕ್ಷ್ಯಚಿತ್ರಗಳು 10-ನಿಮಿಷಗಳ ಅವಧಿಗೆ ಸೀಮಿತವಾಗಿದ್ದ ಹಿಂದಿನ ಸ್ಕ್ರಿಪ್ಟಿಂಗ್ ನಿರ್ಬಂಧಗಳನ್ನು ಈಗ ಕಥೆ ಹೇಳಲು ವಿಸ್ತೃತ ಸಮಯವನ್ನು ನೀಡುವ ವಿವಿಧ ಆಧುನಿಕ ವೇದಿಕೆಗಳಿಂದ ನಿವಾರಿಸಲಾಗಿದೆ ಎಂದು ಅವರು ಹೇಳಿದರು.

(ಫೋಟೋ: ಶ್ರೀ ಡಿ. ರಾಮಕೃಷ್ಣನ್, ಪ್ರಧಾನ ವ್ಯವಸ್ಥಾಪಕರು, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿಸಿ) ಅಧಿವೇಶನವನ್ನು ನಿರ್ವಹಿಸುತ್ತಿದ್ದಾರೆ)

ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಚರ್ಚಿಸುತ್ತಾ,  ಜನಪ್ರಿಯ ಚಲನಚಿತ್ರ ನಿರ್ಮಾಪಕರು  ಕೃತಕ ಬುದ್ಧಿಮತ್ತೆಯ ಬಳಕೆ ಸೇರಿದಂತೆ ದೃಶ್ಯ ಮಾಧ್ಯಮದ ಹೊಸ ಹಂತದ ಬಗ್ಗೆ  ಹೇಳಿದರು. ಅವರು ಸಾಮಾಜಿಕ ಬದಲಾವಣೆಯನ್ನು ಪರಿಣಾಮ ಬೀರಲು ಚಲನಚಿತ್ರ ನಿರ್ಮಾಣದಲ್ಲಿ ಉದ್ದೇಶಪೂರ್ವಕ ತಂತ್ರಜ್ಞಾನದ ಒಟ್ಟುಗೂಡಿಸುವಿಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ಈ ಪ್ರಗತಿಯು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಮುಂದಿನ ಪೀಳಿಗೆಗೆ ಸಹಾಯ ಮಾಡಲು ಹೊಸ ದೃಶ್ಯ ಭಾಷೆಯನ್ನು ರಚಿಸುವುದೆನ್ನುವ ಭರವಸೆಯನ್ನು ವ್ಯಕ್ತಪಡಿಸಿದರು. "ಬಹು ಆಯಾಮದ ರೀತಿಯಲ್ಲಿ ಬೆಳೆಯಲು, ಒಬ್ಬರು ಬಹು ಕೌಶಲ್ಯ ಹೊಂದಿರಬೇಕು" ಎಂದು ಅವರು ಹೇಳಿದರು.

ಎನ್ ಎಫ್ ಡಿಸಿ ಯ ಜನರಲ್ ಮ್ಯಾನೇಜರ್ ಶ್ರೀ ಡಿ. ರಾಮಕೃಷ್ಣನ್ ಅವರು ಈ ಅನಿಸಿಕೆಗಳನ್ನು ಪ್ರತಿಧ್ವನಿಸಿದರು, ಜಾತಿ ತಾರತಮ್ಯ, ಲಿಂಗ ಅಸಮಾನತೆ ಮತ್ತು ಪರಿಸರದ ಅವನತಿ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಾಕ್ಷ್ಯಚಿತ್ರಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಸಾಕ್ಷ್ಯಚಿತ್ರಗಳು ಸಮಸ್ಯೆಗಳನ್ನು ಎತ್ತಿ ತೋರಿಸುವ, ಸಹಾನುಭೂತಿ ಮೂಡಿಸುವ ಮತ್ತು ಕಾರ್ಯವನ್ನು ಪ್ರೇರೇಪಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಹೇಳಿದರು.

*****



(Release ID: 2025969) Visitor Counter : 18