ಗ್ರಾಮೀಣಾಭಿವೃದ್ಧಿ ಸಚಿವಾಲಯ

ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕೃತ ಜವಾಬ್ದಾರಿ ವಹಿಸಿಕೊಂಡ ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್


ರಾಜ್ಯ ಸಚಿವ ಶ್ರೀ ಕಮಲೇಶ್ ಪಾಸ್ವಾನ್ ಸಹ ಅಧಿಕಾರ ಸ್ವೀಕಾರ

Posted On: 11 JUN 2024 5:36PM by PIB Bengaluru

ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ದೆಹಲಿಯಲ್ಲಿಂದು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಗ್ರಾಮೀಣಾಭಿವೃದ್ಧಿ ಕ್ಷೇತ್ರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ(ಪಿಎಂಜಿಎಸ್|ವೈ)ಯಂತಹ ಯೋಜನೆಗಳು ರಾಷ್ಟ್ರದ ಗ್ರಾಮೀಣ ಭೂದೃಶ್ಯವನ್ನು ಬದಲಾಯಿಸಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಜಿಎನ್‌ಆರ್‌ಇಜಿಎಸ್) ಕುರಿತು ಮಾತನಾಡಿದ ಅವರು, ಇದು ಬಹುದೊಡ್ಡ ಉದ್ಯೋಗ ಸೃಷ್ಟಿಯಾಗಿದ್ದು, ಈಗ ಈ ಯೋಜನೆಯಡಿ ಆಸ್ತಿಗಳನ್ನು ಸೃಷ್ಟಿಸಲು ಒತ್ತು ನೀಡಲಾಗುತ್ತಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿಕಾರಿ ಪ್ರಗತಿಯಾಗಿದೆ, 3 ಕೋಟಿ ಲಕ್ಪತಿ ದೀದಿಗಳಿಗೆ ಅಧಿಕಾರ ನೀಡುವುದು ಅವರ ಕನಸಾಗಿದೆ ಎಂದರು. ಈ ಯೋಜನೆಯು ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ, ದೇಶದ ಮಹಿಳಾ ಜನಸಂಖ್ಯೆಗೆ ನ್ಯಾಯ ಖಚಿತಪಡಿಸಲು ಸರ್ಕಾರ ಬದ್ಧವಾಗಿದೆ. ಮಹಿಳಾ ಸಬಲೀಕರಣವೇ ಸರ್ಕಾರದ ಧ್ಯೇಯವಾಗಿದೆ, ಸ್ವಸಹಾಯ ಗುಂಪುಗಳು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಚಿವರು ಹೇಳಿದರು. ಸರ್ಕಾರದ 100 ದಿನಗಳ ಯೋಜನೆಯಲ್ಲಿ ನಿಗದಿಪಡಿಸಿದ ಕಾರ್ಯಗಳನ್ನು ಸಾಧಿಸಲು ತಮ್ಮ ಸಚಿವಾಲಯವು ಕೆಲಸ ಮಾಡಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸಂಪುಟ ಕೈಗೊಂಡ ನಿರ್ಧಾರವನ್ನು ಅವರು ಪ್ರಸ್ತಾಪಿಸಿದರು.

ನಂತರ ಅವರು, ಸಚಿವಾಲಯದ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಸಚಿವಾಲಯದ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆಯ ಅಗತ್ಯವನ್ನು ಒತ್ತಿ ಹೇಳಿದರು. ಗ್ರಾಮೀಣಾಭಿವೃದ್ಧಿಗಾಗಿ ಸರ್ಕಾರದ ಪ್ರಣಾಳಿಕೆಯನ್ನು ಸಹ ವಿತರಿಸಿದ ಅವರು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕೆಂದು ಸೂಚನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವ ಶ್ರೀ ಕಮಲೇಶ್ ಪಾಸ್ವಾನ್ ಅವರು ಸಹ ಇಂದು ತಮ್ಮ ಖಾತೆ ವಹಿಸಿಕೊಂಡರು. ಗೌರವಾನ್ವಿತ ಸಚಿವರನ್ನು ಇಲಾಖೆಯ ಕಾರ್ಯದರ್ಶಿಗಳು ಮತ್ತು ಸಚಿವಾಲಯಗಳ ಇತರ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.

*****

 



(Release ID: 2024715) Visitor Counter : 13