ಗೃಹ ವ್ಯವಹಾರಗಳ ಸಚಿವಾಲಯ

ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆ ಪಶ್ಚಿಮ ಬಂಗಾಳದಲ್ಲಿ ಪ್ರಾರಂಭ


ಹರಿಯಾಣ ಮತ್ತು ಉತ್ತರಾಖಂಡದ ಉನ್ನತಾಧಿಕಾರದ ಸಮಿತಿಗಳು ಇಂದು ಆಯಾ ರಾಜ್ಯಗಳಲ್ಲಿ ಮೊದಲ ಗುಂಪಿನ ಅರ್ಜಿದಾರರಿಗೆ ಪೌರತ್ವ ನೀಡಿವೆ

Posted On: 29 MAY 2024 7:50PM by PIB Bengaluru

ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆಯು ಈಗ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪ್ರಾರಂಭವಾಗಿದೆ, ಅಲ್ಲಿ ರಾಜ್ಯದಿಂದ ಮೊದಲ ಗುಂಪಿನ ಅರ್ಜಿಗಳಿಗೆ ಪಶ್ಚಿಮ ಬಂಗಾಳದ ಉನ್ನತಾಧಿಕಾರದ ಸಮಿತಿಯು ಇಂದು ಪೌರತ್ವವನ್ನು ನೀಡಿದೆ.

ಅದೇ ರೀತಿ, ಹರಿಯಾಣ ಮತ್ತು ಉತ್ತರಾಖಂಡ ರಾಜ್ಯಗಳ ಉನ್ನತಾಧಿಕಾರದ ಸಮಿತಿಗಳು ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಡಿಯಲ್ಲಿ ಆಯಾ ರಾಜ್ಯಗಳಲ್ಲಿನ ಮೊದಲ ಗುಂಪಿನ ಅರ್ಜಿದಾರರಿಗೆ ಇಂದು ಪೌರತ್ವವನ್ನು ನೀಡಿವೆ.

ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯ ಬಳಿಕ ದಿಲ್ಲಿಯ ಉನ್ನತಾಧಿಕಾರದ ಸಮಿತಿಯು ಮೊದಲ ಗುಂಪಿನ ಅರ್ಜಿದಾರರಿಗೆ ಮಂಜೂರು ಮಾಡಿದ ಪೌರತ್ವ ಪ್ರಮಾಣಪತ್ರಗಳನ್ನು ಕೇಂದ್ರ ಗೃಹ ಕಾರ್ಯದರ್ಶಿ ಅವರು 2024 ರ ಮೇ 15 ರಂದು ಹೊಸದಿಲ್ಲಿಯಲ್ಲಿ ಅರ್ಜಿದಾರರಿಗೆ ಹಸ್ತಾಂತರಿಸಿದ್ದರು.

ಭಾರತ ಸರ್ಕಾರವು 2024 ರ ಮಾರ್ಚ್ 11 ರಂದು ಪೌರತ್ವ (ತಿದ್ದುಪಡಿ) ನಿಯಮಗಳು, 2024 ಅನ್ನು ಅಧಿಸೂಚಿಸಿತ್ತು. ಈ ನಿಯಮಗಳು ಅರ್ಜಿ ನಮೂನೆಯ ವಿಧಾನ, ಜಿಲ್ಲಾ ಮಟ್ಟದ ಸಮಿತಿ (ಡಿ.ಎಲ್.ಸಿ) ಅರ್ಜಿಗಳನ್ನು ಪ್ರಕ್ರಿಯೆಗೊಳಪಡಿಸುವ ವಿಧಾನ ಮತ್ತು ರಾಜ್ಯ ಮಟ್ಟದ ಉನ್ನತಾಧಿಕಾರದ ಸಮಿತಿ (ಇಸಿ) ಪರಿಶೀಲನೆ ನಡೆಸಿ ಪೌರತ್ವವನ್ನು ನೀಡುವುದಕ್ಕೆ ಸಂಬಂಧಿಸಿ ಕ್ರಮ ಕೈಗೊಳುವ ವಿಧಾನವನ್ನು ಸೂಚಿಸುತ್ತವೆ. ಅರ್ಜಿಗಳ ಇತ್ಯರ್ಥ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ ಲೈನ್ ಪೋರ್ಟಲ್ ಮೂಲಕ ಮಾಡಲಾಗುತ್ತದೆ. ಈ ನಿಯಮಗಳ ಅನುಸಾರವಾಗಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 31.12.2014 ರವರೆಗೆ ಧರ್ಮದ ಆಧಾರದ ಮೇಲೆ ಕಿರುಕುಳ ಅಥವಾ ಅಂತಹ ಕಿರುಕುಳದ ಭಯದಿಂದ ಭಾರತಕ್ಕೆ ಪ್ರವೇಶಿಸಿದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ.

*****
 



(Release ID: 2022175) Visitor Counter : 31