ಚುನಾವಣಾ ಆಯೋಗ
azadi ka amrit mahotsav

2ನೇ ಹಂತದ ಲೋಕಸಭಾ ಚುನಾವಣೆ ಹವಾಮಾನ ಇಲಾಖೆಯಿಂದ ಸಾಮಾನ್ಯ ಹವಾಮಾನದ ಮುನ್ಸೂಚನೆ


ಮತದಾನದ ಪ್ರತಿ ಹಂತಕ್ಕೂ ಮುನ್ನ ಬಿಸಿಲಿನ ಪರಿಸ್ಥಿತಿಯನ್ನು ಗಮನಿಸಲು ಭಾರತದ ಚುನಾವಣಾ ಆಯೋಗದಿಂದ ಕಾರ್ಯಪಡೆಯ ರಚನೆ

ಭಾರತೀಯ ಹವಾಮಾನ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಭೆ ನಡೆಸಿದ ಚುನಾವಣಾ ಆಯೋಗ

Posted On: 22 APR 2024 4:27PM by PIB Bengaluru

ಈ ತಿಂಗಳ 26ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ 2ನೇ ಹಂತಕ್ಕೆ ಸಂಬಂಧಿಸಿದಂತೆ ಶಾಖ ತರಂಗಗಳ ಯಾವುದೇ ದೊಡ್ಡ ಆತಂಕವಿಲ್ಲವೆಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು ಇಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹವಾಮಾನ ಮುನ್ಸೂಚನೆ ಸಾಮಾನ್ಯವಾಗಿದೆ. ದೇಶದ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನ ಮತ್ತು ಶಾಖ ತರಂಗಗಳ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಸಾರ್ವತ್ರಿಕ ಚುನಾವಣೆಯ ಅವಧಿಯಲ್ಲಿ ಬಿಸಿ ಹವಾಮಾನ ಪರಿಸ್ಥಿತಿಗಳಿಂದಾಗುವ ಯಾವುದೇ ಅಪಾಯವನ್ನು ತಗ್ಗಿಸುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲು ಆಯೋಗವು ಇಂದು ಸಂಬಂಧಿತ ಸಂಸ್ಥೆಗಳೊಂದಿಗೆ ಸಭೆ ನಡೆಸಿತು.

ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯೋಗದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖ್ಬೀರ್ ಸಿಂಗ್ ಸಂಧು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಭಾಗದ ಮುಖ್ಯಸ್ಥರು ಮತ್ತು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು ಭಾಗವಹಿಸಿದ್ದರು.

 

 

ಸಭೆಯಲ್ಲಿ ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು:

1. ಭಾರತದ ಚುನಾವಣಾ ಆಯೋಗ, ಭಾರತೀಯ ಹವಾಮಾನ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆಯು ಪ್ರತಿ ಮತದಾನದ ಹಂತಕ್ಕೆ ಐದು ದಿನಗಳ ಮೊದಲು ಶಾಖ ತರಂಗ ಮತ್ತು ತೇವಾಂಶದ ಪರಿಣಾಮವನ್ನು ಪರಿಶೀಲಿಸಬೇಕು.
2. ಚುನಾವಣಾ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವ ಬಿಸಿಗಾಳಿ ಪರಿಸ್ಥಿತಿಗಳನ್ನು ನಿರ್ವಹಿಸಲು ಅಗತ್ಯವಾದ ಸಹಾಯಹಸ್ತಕ್ಕಾಗಿ ಸುಸಜ್ಜಿತರಾಗಿರಲು ರಾಜ್ಯಗಳಲ್ಲಿನ ಆರೋಗ್ಯ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಚುನಾವಣಾ ಆಯೋಗವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನಿರ್ದೇಶನ ನೀಡಿತು.
3. ಮಾರ್ಚ್ 16, 2024ರ ಪ್ರಸ್ತುತ ಸಲಹೆಯ ಮೇರೆಗೆ ಮತದಾನ ಕೇಂದ್ರಗಳಲ್ಲಿ ಶಾಮಿಯಾನ, ಕುಡಿಯುವ ನೀರು, ಫ್ಯಾನ್ ಗಳು ಮತ್ತು ಇತರ ಖಚಿತ ಕನಿಷ್ಠ ಸೌಲಭ್ಯಗಳು ಸೇರಿದಂತೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಚುನಾವಣಾ ಆಯೋಗವು ರಾಜ್ಯಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪ್ರತ್ಯೇಕ ಪರಿಶೀಲನೆ ನಡೆಸಬೇಕು.
4. ಮತದಾನ ಕೇಂದ್ರ ಪ್ರದೇಶಗಳಲ್ಲಿ ಬಿಸಿಗಾಳಿ ಪರಿಣಾಮವನ್ನು ತಗ್ಗಿಸಲು ಮುನ್ನೆಚ್ಚರಿಕೆ ಕ್ರಮಗಳಿಗಾಗಿ (ಮಾಡಬೇಕಾದ ಮತ್ತು ಮಾಡಬಾರದ) ಸಾರ್ವಜನಿಕ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಕೈಗೊಳ್ಳಬೇಕು.

ಚುನಾವಣಾ ಆಯೋಗವು ಹವಾಮಾನ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮತದಾನ ಸಿಬ್ಬಂದಿ ಮತ್ತು ಭದ್ರತಾ ಪಡೆಗಳು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷದ ನಾಯಕರೊಂದಿಗೆ ಮತದಾರರ ಅನುಕಂಪ ಮತ್ತು ಯೋಗಕ್ಷೇಮವನ್ನು ಖಾತರಿಪಡಿಸಿಕೊಳ್ಳುತ್ತದೆ.

 

ಹಿನ್ನೆಲೆ:

ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಚುನಾವಣಾ ಆಯೋಗವು ಈಗಾಗಲೇ ಮಾರ್ಚ್ 16, 2024ರಂದು ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ "ಶಾಖ ತರಂಗ ಪರಿಣಾಮವನ್ನು ತಡೆಗಟ್ಟುವ" ಬಗ್ಗೆ ಸಲಹೆಯನ್ನು ನೀಡಿದೆ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಲಹೆಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತದಾನ ಕೇಂದ್ರಗಳಲ್ಲಿ ಖಾತರಿಪಡಿಸಿದ ಕನಿಷ್ಠ ಸೌಲಭ್ಯಗಳ ಬಗ್ಗೆ ಆಯೋಗದ ಸ್ಥಾಯಿ ಸೂಚನೆಗಳನ್ನು ನೀಡಿದೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಹಿಂದೆ ಶಾಖ ತರಂಗ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ತಗ್ಗಿಸುವ ಬಗ್ಗೆ ಸಲಹೆ / ಮಾರ್ಗಸೂಚಿಗಳನ್ನು ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಮ್ಮ ಸಾರ್ವಜನಿಕ ಆರೋಗ್ಯ ಸಲಹೆಯ ಭಾಗವಾಗಿ ರಾಜ್ಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

*****


(Release ID: 2018572) Visitor Counter : 123