ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಗಳು ದೆಹಲಿಯಲ್ಲಿ  ಸ್ವಾನಿಧಿ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದರು 


1 ಲಕ್ಷ ಬೀದಿ ವ್ಯಾಪಾರಿಗಳಿಗೆ ಈ ಯೋಜನೆಯಡಿಯಲ್ಲಿ ಸಾಲವನ್ನು ವಿತರಿಸಿದರು

ದೆಹಲಿ ಮೆಟ್ರೋದ ನಾಲ್ಕನೇ ಹಂತದ ಎರಡು ಹೊಸ ಕಾರಿಡಾರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು

"ಪಿಎಂ ಸ್ವನಿಧಿ ಯೋಜನೆ ಬೀದಿ ವ್ಯಾಪಾರಿಗಳಿಗೆ ಜೀವನಾಡಿ ಎಂದು ಸಾಬೀತಾಗಿದೆ"

"ಬೀದಿ ವ್ಯಾಪಾರಿಗಳ ಮಾರಾಟದ ಬಂಡಿಗಳು ಮತ್ತು ಅಂಗಡಿಗಳು ಚಿಕ್ಕದಾಗಿದ್ದರೂ, ಅವರ ಕನಸುಗಳು ದೊಡ್ಡದಾಗಿದೆ"

"ಪಿಎಂ ಸ್ವನಿಧಿ ಯೋಜನೆಯು ಲಕ್ಷಗಟ್ಟಲೆ ಬೀದಿ ವ್ಯಾಪಾರಿಗಳ ಕುಟುಂಬಗಳಿಗೆ ಬೆಂಬಲ ವ್ಯವಸ್ಥೆಯಾಗಿದೆ"

ಬಡವರು ಮತ್ತು ಮಧ್ಯಮ ವರ್ಗದವರ ಬದುಕನ್ನು ಸುಧಾರಿಸಲು ಮೋದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ‘ಸಾರ್ವಜನಿಕ ಕಲ್ಯಾಣದಿಂದ ದೇಶದ ಕಲ್ಯಾಣ’ ಎಂಬುದು ಮೋದಿಯವರ ಚಿಂತನೆ

"ಸಾಮಾನ್ಯ ನಾಗರಿಕರ ಕನಸುಗಳ ಪಾಲುದಾರಿಕೆ ಮತ್ತು ಮೋದಿಯವರ ಸಂಕಲ್ಪವು ಉಜ್ವಲ ಭವಿಷ್ಯದ  ಗ್ಯಾರಂಟಿಯಾಗಿದೆ"

Posted On: 14 MAR 2024 6:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ JLN ಸ್ಟೇಡಿಯಂನಲ್ಲಿ  ಪಿಎಂ ಸ್ವನಿಧಿ  ಯೋಜನೆಯ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿ ಯೋಜನೆಯ ಭಾಗವಾಗಿ ದೆಹಲಿಯ 5,000 ಬೀದಿ ವ್ಯಾಪಾರಿಗಳು ಸೇರಿದಂತೆ 1 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲವನ್ನು ವಿತರಿಸಿದರು. ಐವರು ಫಲಾನುಭವಿಗಳಿಗೆ ಪ್ರಧಾನಮಂತ್ರಿ ಸ್ವಾನಿಧಿ ಸಾಲದ ಚೆಕ್ ಅನ್ನು ವಿತರಿಸಿದರು. ದೆಹಲಿ ಮೆಟ್ರೋದ 4 ನೇ ಹಂತದ ಎರಡು ಹೆಚ್ಚುವರಿ ಕಾರಿಡಾರ್‌ಗಳ ಶಂಕುಸ್ಥಾಪನೆಯನ್ನೂ ಪ್ರಧಾನ ಮಂತ್ರಿಯವರು ಇದೆ ಸಂದರ್ಭದಲ್ಲಿ ನೆರವೇರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನೂರಕ್ಕೂ ಹೆಚ್ಚು ನಗರಗಳಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಕಾರ್ಯಕ್ರಮಕ್ಕೆ ಲಿಂಕ್ ಮಾಡಲಾದ ಲಕ್ಷಗಟ್ಟಲೆ ಬೀದಿ ವ್ಯಾಪಾರಿಗಳ ಉಪಸ್ಥಿತಿಯನ್ನು ಗಮನಿಸಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿನ ಬೀದಿ ವ್ಯಾಪಾರಿಗಳ ಶಕ್ತಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು ದೈನಂದಿನ ಜೀವನದಲ್ಲಿ ಅವರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ದೇಶದಾದ್ಯಂತ 1 ಲಕ್ಷ ಬೀದಿ ವ್ಯಾಪಾರಿಗಳ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಎಲ್ಲಕ್ಕಿಂತ ಹೆಚ್ಚಾಗಿ, ದೆಹಲಿ ಮೆಟ್ರೋದ ಎರಡು ಹೆಚ್ಚುವರಿ ಕಾರಿಡಾರ್‌ಗಳಿಗೂ (ಲಜಪತ್ ನಗರ ನಿಂದ ಸಾಕೇತ್-ಜಿ ಬ್ಲಾಕ್ ವರೆಗೆ ಮತ್ತು ಇಂದರ್‌ಲೋಕ್ ನಿಂದ ಇಂದ್ರಪ್ರಸ್ಥದ ವರೆಗೆ) ಸಹ ಇಂದು ಶಂಕು ಸ್ಥಾಪನೆ ಮಾಡಲಾಯಿತು. 

ದೇಶದ ಲಕ್ಷಗಟ್ಟಲೆ ಬೀದಿಬದಿ ವ್ಯಾಪಾರಿಗಳು ತಮ್ಮ ಶ್ರಮ ಮತ್ತು ಸ್ವಾಭಿಮಾನದಿಂದ ತಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸುತ್ತಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು. ಅವರ ಮಾರಾಟದ ಬಂಡಿಗಳು ಮತ್ತು ಅಂಗಡಿಗಳು ಚಿಕ್ಕದಾಗಿದ್ದರೂ, ಅವರ ಕನಸುಗಳು ದೊಡ್ಡದಾಗಿದೆ ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ಹಿಂದಿನ ಸರ್ಕಾರಗಳು ಬೀದಿಬದಿ ವ್ಯಾಪಾರಿಗಳ ಕಲ್ಯಾಣದ ಬಗ್ಗೆ ಯಾವುದೇ ಆಸಕ್ತಿ ವಹಿಸದ ಕಾರಣ ಅವರು ಅಗೌರವ ಮತ್ತು ಸಂಕಷ್ಟಗಳನ್ನು ಎದುರಿಸುವಂತಾಗಿತ್ತು. ಅವರ ಹಣಕಾಸಿನ ಅವಶ್ಯಕತೆಗಳನ್ನು ಹೆಚ್ಚಿನ ಬಡ್ಡಿದರದ ಸಾಲಗಳು ಪೂರೈಸುತ್ತಿದ್ದವು. ಆದರೆ ಸಕಾಲಿಕವಾಗಿ ಸಾಲ ತೀರಿಸಲಾಗದೆ  ಅವರು ಮತ್ತಷ್ಟು ಅಗೌರವಕ್ಕೊಳಗಾಗುತ್ತಿದ್ದರು. ಜೊತೆಗೆ ಹೆಚ್ಚಿನ ಬಡ್ಡಿ ಯನ್ನೂ ಕಟ್ಟುತ್ತಿದ್ದರು. ಅವರು ಗ್ಯಾರಂಟಿ ನೀಡಲು ಸಮರ್ಥರಾಗಿಲ್ಲದೆ ಇರುವ ಕಾರಣ ಅವರಿಗೆ ಬ್ಯಾಂಕ್‌ಗಳಿಗೆ ಪ್ರವೇಶವಿರಲಿಲ್ಲ. ಯಾವುದೇ ಬ್ಯಾಂಕ್ ಖಾತೆಗಳಿಲ್ಲದ ಕಾರಣ ಮತ್ತು ವ್ಯವಹಾರ ದಾಖಲೆಗಳ ಅನುಪಸ್ಥಿತಿಯಿಂದಾಗಿ ಬ್ಯಾಂಕ್ ಸಾಲಗಳನ್ನು ಪಡೆಯುವುದು ಅವರಿಗೆ ಅಸಾಧ್ಯವಾಗಿತ್ತು. "ಹಿಂದಿನ ಸರಕಾರಗಳು ಬೀದಿ ಬದಿ ವ್ಯಾಪಾರಿಗಳ ಅಗತ್ಯಗಳಿಗೆ ಗಮನ ಕೊಡಲಿಲ್ಲ. ಅದಷ್ಟೇ ಅಲ್ಲ, ಅವರ ಸಮಸ್ಯೆಗಳನ್ನು ನಿಭಾಯಿಸಲು ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.

“ಈ ನಿಮ್ಮ ಸೇವಕನು ಬಡತನದಿಂದ ಬಂದಿದ್ದಾನೆ. ನಾನು ಬಡತನದಲ್ಲಿ ಬದುಕಿದ್ದೇನೆ. ಆದುದರಿಂದಲೇ ಯಾರನ್ನು ಸಮಾಜ ಕೇರ್ ಮಾಡುವುದಿಲ್ಲವೋ  ಅವರನ್ನು ಕೇರ್ ಮಾಡುವುದು ಅಷ್ಟೇ ಅಲ್ಲ  ಮೋದಿಯವರು ಪೂಜಿಸುತ್ತಾರೆ” ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಮೇಲಾಧಾರವಾಗಿ ಗ್ಯಾರಂಟಿ ನೀಡಲು ಏನೂ ಇಲ್ಲದವರಿಗೆ ಮೋದಿಯವರ ಗ್ಯಾರಂಟಿಯ ಭರವಸೆ ಇದೆ ಎಂದು ಅವರು ಹೇಳಿದರು. ಬೀದಿಬದಿ ವ್ಯಾಪಾರಿಗಳ ಪ್ರಾಮಾಣಿಕತೆಯನ್ನೂ ಶ್ಲಾಘಿಸಿದರು. ಬೀದಿಬದಿ ವ್ಯಾಪಾರಿಗಳಿಗೆ ಅವರ ದಾಖಲೆಗಳು ಮತ್ತು ಡಿಜಿಟಲ್ ವಹಿವಾಟಿಗೆ ಅನುಗುಣವಾಗಿ 10,20 ಮತ್ತು 50 ಸಾವಿರ ಸಾಲ ನೀಡಲಾಗುತ್ತಿದೆ.  ಇದುವರೆಗೆ 62 ಲಕ್ಷ ಫಲಾನುಭವಿಗಳು 11,000 ಕೋಟಿ ರೂ.ಗಳ ನೆರವು ಪಡೆದಿದ್ದಾರೆ. ಫಲಾನುಭವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಇದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪಿಎಂ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಗಳು ಬೀದಿ ವ್ಯಾಪಾರಿಗಳ ಆದಾಯವು ಈ ಯೋಜನೆಯಿಂದ ಬಹುಪಟ್ಟು ಹೆಚ್ಚಾಗಿದ್ದಲ್ಲದೇ, ಅವರ ವಹಿವಾಟಿನ ಡಿಜಿಟಲ್ ದಾಖಲೆಗಳಿಂದಾಗಿ ಅವರು ಸುಲಭವಾಗಿ ಬ್ಯಾಂಕಿನಿಂದ ಪ್ರಯೋಜನಗಳನ್ನು ಪಡೆಯಲು ಸಹಾಯವಾಗಿದೆ ಎಂದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ ಎಂದು ಹೇಳಿದರು. ಪ್ರತಿ ವರ್ಷ ಡಿಜಿಟಲ್ ವಹಿವಾಟುಗಳೊಂದಿಗೆ 1200 ರೂಪಾಯಿಗಳ ಕ್ಯಾಶ್ಬ್ಯಾಕ್ ಅನ್ನು ಪಡೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

ಬೀದಿಬದಿ ವ್ಯಾಪಾರಿಗಳು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅವರಲ್ಲಿ ಅನೇಕರು ಜೀವನ ನಡೆಸಲು ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದಿರುತ್ತಾರೆ ಎಂದರು. "ಪಿಎಂ ಸ್ವನಿಧಿ ಯೋಜನೆಯು  ಫಲಾನುಭವಿಗಳಿಗೆ ಬ್ಯಾಂಕ್‌ ಸೌಲಭ್ಯ ಒದಗಿಸುವುದು ಮಾತ್ರವಲ್ಲದೆ ಇತರ ಸರ್ಕಾರಿ ಪ್ರಯೋಜನಗಳಿಗೂ ಅವರಿಗೆ ಬಾಗಿಲು ತೆರೆಯುತ್ತದೆ" ಎಂದು ಪ್ರಧಾನ ಮಂತ್ರಿಗಳು ಉಚಿತ ಪಡಿತರ, ಉಚಿತ ಚಿಕಿತ್ಸೆ ಮತ್ತು ಉಚಿತ ಗ್ಯಾಸ್ ಸಂಪರ್ಕಗಳ ಉದಾಹರಣೆಗಳನ್ನು ನೀಡಿದರು. ದೇಶಾದ್ಯಂತ ಎಲ್ಲಿಂದಲಾದರೂ ಉಚಿತ ಪಡಿತರವನ್ನು ಪಡೆಯಲು ಅನುಮತಿಸುವ 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆಯ ಕುರಿತೂ ಮೋದಿ ಒತ್ತಿ ಹೇಳಿದರು. 

4 ಕೋಟಿ ಪಕ್ಕಾ ಮನೆಗಳಲ್ಲಿ 1 ಕೋಟಿ ಮನೆಗಳನ್ನು ನಗರ ಪ್ರದೇಶಗಳ ಬಡವರಿಗೆ ಮಂಜೂರು ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. ಗುಡಿಸಲುಗಳ ಬದಲಿಗೆ ಪಕ್ಕಾ ಮನೆಗಳನ್ನು ಒದಗಿಸುವ ತಮ್ಮ ಸರಕಾರದ ಬೃಹತ್ ಅಭಿಯಾನವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, ದೆಹಲಿಯಲ್ಲಿ ಈಗಾಗಲೇ 3,000 ಮನೆಗಳು ಪೂರ್ಣಗೊಂಡಿದ್ದು, ಇನ್ನೂ 3,500 ಮನೆಗಳು ಮುಕ್ತಾಯದ ಹಂತದಲ್ಲಿವೆ ಎಂದು ಹೇಳಿದರು. ಅನಧಿಕೃತ ಕಾಲೋನಿಗಳ ತ್ವರಿತ ಸಕ್ರಮೀಕರಣ ಮತ್ತು 75,000 ರೂಪಾಯಿಗಳ ಸಹಾಯಧನವನ್ನು ಹೊಂದಿರುವ  ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಗಳ ಬಗ್ಗೆಯೂ ಪ್ರಧಾನಿ ಮಂತ್ರಿಗಳು ಪ್ರಸ್ತಾಪಿಸಿದರು. 

ದೆಹಲಿಯಲ್ಲಿನ ಬಡವರು ಮತ್ತು ಮಧ್ಯಮ ವರ್ಗದವರ ಜೀವನವನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಮಧ್ಯಮ ವರ್ಗದವರಿಗೆ ಹಾಗೂ ನಗರದ ಬಡವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಉದಾಹರಣೆ ನೀಡಿದ ಅವರು, ಮನೆಗಳ ನಿರ್ಮಾಣಕ್ಕೆ 50 ಸಾವಿರ ಕೋಟಿ ರೂ.ಗಳ ಸಹಾಯಧನ ನೀಡಲಾಗಿದೆ ಎಂದು ಮೋದಿ ತಿಳಿಸಿದರು. ಮಾಲಿನ್ಯ ಮತ್ತು ಸಂಚಾರ ದಟ್ಟಣೆಯ ಸಮಸ್ಯೆಗಳನ್ನು ನಿಭಾಯಿಸಲು ಹತ್ತಾರು ನಗರಗಳಲ್ಲಿ ಮೆಟ್ರೋ ರೈಲುಗಳ ಸೌಲಭ್ಯ ಒದಗಿಸಲು ತ್ವರಿತಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮತ್ತು ಹೆಚ್ಚಿಸಲಾಗಿರುವ ಎಲೆಕ್ಟ್ರಿಕ್ ಬಸ್‌ಗಳ ಕುರಿತು ಅವರು ಪ್ರಸ್ತಾಪಿಸಿದರು. "ಕಳೆದ 10 ವರ್ಷಗಳಲ್ಲಿ ದೆಹಲಿ ಮೆಟ್ರೋ ನೆಟ್‌ವರ್ಕ್ ಎರಡು ಪಟ್ಟು ವಿಸ್ತರಿಸಿದೆ", ಎಂದು ಹೇಳಿದ ಪ್ರಧಾನ ಮಂತ್ರಿಗಳು ಇಷ್ಟೊಂದು ವ್ಯಾಪಕ ನೆಟ್‌ವರ್ಕ್ ಹೊಂದಿರುವ ವಿಶ್ವದ ಕೆಲವೇ ಕೆಲವು ನಗರಗಳಲ್ಲಿ ದೆಹಲಿಯೂ ಒಂದು ಎಂದರು. ದೆಹಲಿ ಎನ್‌ಸಿಆರ್ ಪ್ರದೇಶದ ನಮೋ ಭಾರತ್ ಕ್ಷಿಪ್ರ ರೈಲು ಸಂಪರ್ಕ ಯೋಜನೆ ಕುರಿತೂ ಅವರು ಪ್ರಸ್ತಾಪಿಸಿದರು. "ಮಾಲಿನ್ಯವನ್ನು ತಡೆಗತ್ತುವ ಉದ್ದೇಶದಿಂದ  ಕೇಂದ್ರ ಸರ್ಕಾರವು ದೆಹಲಿಯಲ್ಲಿ 1,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುತ್ತಿದೆ" ಎಂದು ಪ್ರಧಾನಿ ಮಂತ್ರಿಗಳು ಹೇಳಿದರು. ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ದೆಹಲಿಯ ಸುತ್ತಲೂ ಹಲವಾರು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗಿದೆ ಎಂದ ಅವರು ಈ ವಾರದ ಆರಂಭದಲ್ಲಿ ನಡೆದ ದ್ವಾರಕಾ ಎಕ್ಸ್‌ಪ್ರೆಸ್‌ವೇಯ ಉಧ್ಘಟನೆಯನ್ನು ನೆನಪಿಸಿಕೊಂಡರು.

ಯುವಕರನ್ನು ಕ್ರೀಡೆಗಳತ್ತ ಆಕರ್ಷಿಸಲು ಕೇಂದ್ರ ಸರಕಾರ ಕೆಗೊಂಡಿರುವ ಕ್ರಮಗಳ ಕುರಿತು ಮಾತನಾಡಿದ ಮೋದಿ ಅವರು ಖೇಲೋ ಇಂಡಿಯಾ ಕಾರ್ಯಕ್ರಮವು ಸಾಮಾನ್ಯ ಕುಟುಂಬಗಳಿಂದ ಬಂದ  ಕ್ರೀಡಾಪಟುಗಳಿಗೆ ಹಿಂದೆಂದೂ ಕಾಣದಂತಹ ಅವಕಾಶಗಳನ್ನು ಒದಗಿಸುತ್ತಿದೆ ಎಂದರು. ಅವರಿಗೆ ಕ್ರೀಡಾ ಕ್ಷೇತ್ರಕ್ಕೆ ಸುಲಭವಾಗಿ ಪ್ರವೇಶ ಸಾಧ್ಯವಾಗಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ತರಬೇತಿಯನ್ನೂ ನೀಡಲಾಗುತ್ತಿದೆ.

"ಬಡವರು ಮತ್ತು ಮಧ್ಯಮ ವರ್ಗದವರ ಬದುಕನ್ನು ಸುಧಾರಿಸಲು ಮೋದಿ ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಾರ್ವಜನಿಕ ಕಲ್ಯಾಣದಿಂದ ರಾಷ್ಟ್ರದ ಕಲ್ಯಾಣ ಎಂದು ನಂಬಿರುವ ಮೋದಿ ಅವರದು  ಭ್ರಷ್ಟಾಚಾರ ಮತ್ತು ತುಷ್ಟೀಕರಣಗಳನ್ನು ಬೇರು ಸಹಿತ ತೊಡೆದುಹಾಕುವುದು ಮತ್ತು ಆ ಮೂಲಕ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದು ಅವರ ಚಿಂತನೆಯಾಗಿದೆ " ಎಂದು ಪ್ರಧಾನ ಮಂತ್ರಿ ಮೋದಿ ಒತ್ತಿ ಹೇಳಿದರು. 

"ಸಾಮಾನ್ಯ ನಾಗರಿಕರ ಕನಸುಗಳ ಪಾಲುದಾರಿಕೆ ಮತ್ತು ಮೋದಿಯವರ ಸಂಕಲ್ಪ ಭಾರತದ ಉಜ್ವಲ ಭವಿಷ್ಯದ ಗ್ಯಾರಂಟಿಯಾಗಿದೆ," ಎಂದು ಹೇಳುವ ಮೂಲಕ ಪ್ರಧಾನ ಮಂತ್ರಿಗಳು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. 

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಭಗವತ್ ಕಿಶನ್ ರಾವ್ ಕರಾಡ್ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
ಹಿನ್ನೆಲೆ

ನಿರ್ಲಕ್ಷ್ಯಕ್ಕೊಳಪಟ್ಟ ವರ್ಗಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ಪ್ರೇರಿಪಿತವಾಗಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಪಿಎಂ  ಸ್ವನಿಧಿ ಯೋಜನೆಯನ್ನು 1 ನೇ ಜೂನ್ 2020 ರಂದು ಪ್ರಾರಂಭಿಸಲಾಯಿತು. ಈ ಯೋಜನೆ ಬೀದಿಬದಿ ವ್ಯಾಪಾರಿಗಳ  ಜೀವನವನ್ನು ಪರಿವರ್ತಿಸಿದೆ ಎಂಬುದು ಈಗ ಸಾಬೀತಾಗಿದೆ. ಇಲ್ಲಿಯವರೆಗೆ, ದೇಶಾದ್ಯಂತ 62 ಲಕ್ಷಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳಿಗೆ 10,978 ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಲಾಗಿದೆ. ದೆಹಲಿಯೊಂದರಲ್ಲೇ  232 ಕೋಟಿ ರೂಪಾಯಿ ಮೊತ್ತದ ೨ ಲಕ್ಷ ಸಾಲಗಳನ್ನು ವಿತರಿಸಲಾಗಿದೆ.  ಈ ಯೋಜನೆಯು ಐತಿಹಾಸಿಕವಾಗಿ ಹಿಂದುಳಿದವರ ಆರ್ಥಿಕ ಪ್ರಗತಿ ಹಾಗು ಸಮಗ್ರ ಕಲ್ಯಾಣದ ದಾರಿದೀಪವಾಗಿ ಮುಂದುವರಿಯುತ್ತಿದೆ. 

ಇದೇ  ಕಾರ್ಯಕ್ರಮದಲ್ಲಿ ದೆಹಲಿ ಮೆಟ್ರೋದ ಎರಡು ಹೆಚ್ಚುವರಿ ಕಾರಿಡಾರ್‌ಗಳ (ಲಜಪತ್ ನಗರ ನಿಂದ ಸಾಕೇತ್-ಜಿ ಬ್ಲಾಕ್ ವರೆಗೆ ಮತ್ತು ಇಂದರ್‌ಲೋಕ್ ನಿಂದ ಇಂದ್ರಪ್ರಸ್ಥದ ವರೆಗೆ) ನಿರ್ಮಾಣಕ್ಕೂ ಸಹ  ಪ್ರಧಾನ ಮಂತ್ರಿಗಳು ಶಂಕು ಸ್ಥಾಪನೆ ನೆರವೇರಿಸಿದರು. ಈ ಎರಡು ಕಾರಿಡಾರ್‌ಗಳ ಸಂಯೋಜಿತ ಉದ್ದವು 20 ಕಿಲೋಮೀಟರ್‌ಗಿಂತ ಹೆಚ್ಚಾಗಿದ್ದು, ಇವು ದೆಹಲಿ ನಗರದಲ್ಲಿ ಸಂಪರ್ಕವನ್ನು ಸುಧಾರಿಸಲು ಮತ್ತು ಸಂಚಾರ ದಟ್ಟಣೆಯನ್ನು ಮತ್ತಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಲಜಪತ್ ನಗರದಿಂದ ಸಾಕೇತ್ ಜಿ-ಬ್ಲಾಕ್ ವರೆಗಿನ ಕಾರಿಡಾರ್‌ನಲ್ಲಿರುವ ನಿಲ್ದಾಣಗಳು:  ಲಜಪತ್ ನಗರ, ಆಂಡ್ರ್ಯೂಸ್ ಗಂಜ್, ಗ್ರೇಟರ್ ಕೈಲಾಶ್ - 1, ಚಿರಾಗ್ ದೆಹಲಿ, ಪುಷ್ಪಾ ಭವನ, ಸಾಕೇತ್ ಜಿಲ್ಲಾ ಕೇಂದ್ರ, ಪುಷ್ಪ್ ವಿಹಾರ್, ಸಾಕೇತ್ ಜಿ - ಬ್ಲಾಕ್.  
ಇಂದರ್‌ಲೋಕ್ ದಿಂದ ಇಂದ್ರಪ್ರಸ್ಥ ವರೆಗಿನ ಕಾರಿಡಾರ್‌ನಲ್ಲಿರುವ ನಿಲ್ದಾಣಗಳು:  ಇಂದರ್‌ಲೋಕ್, ದಯಾ ಬಸ್ತಿ, ಸರೈ ರೋಹಿಲ್ಲಾ, ಅಜ್ಮಲ್ ಖಾನ್ ಪಾರ್ಕ್, ನಬಿ ಕರೀಮ್, ನವದೆಹಲಿ, ಎಲ್‌ಎನ್‌ಜೆಪಿ ಆಸ್ಪತ್ರೆ, ದೆಹಲಿ ಗೇಟ್, ದೆಹಲಿ ಸಚಿವಾಲಯ, ಇಂದ್ರಪ್ರಸ್ಥ. 

 

****



(Release ID: 2016372) Visitor Counter : 32