ಪ್ರಧಾನ ಮಂತ್ರಿಯವರ ಕಛೇರಿ
ವಾರಣಾಸಿಯಲ್ಲಿ 13,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಮಂತ್ರಿಗಳು
ಕರ್ಖಿಯಾನ್‌ನಲ್ಲಿರುವ ʻಯುಪಿಎಸ್‌ಐಡಿಎ ಆಗ್ರೋ ಪಾರ್ಕ್ʼನಲ್ಲಿ ʻಬನಾಸ್ ಕಾಶಿ ಸಂಕುಲ್ʼ ಹಾಲು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು
ʻಎಚ್‌ಪಿಸಿಎಲ್ʼನ ಎಲ್‌ಪಿಜಿ ಬಾಟ್ಲಿಂಗ್ ಘಟಕ, ʻಯುಪಿಎಸ್‌ಐಡಿಎ ಆಗ್ರೋ ಪಾರ್ಕ್ʼನಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿಗಳು ಹಾಗೂ ರೇಷ್ಮೆ ಬಟ್ಟೆ ಮುದ್ರಣ ಘಟಕವನ್ನು ಉದ್ಘಾಟಿಸಿದರು
ನಾನಾ ರಸ್ತೆ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ
ವಾರಣಾಸಿಯಲ್ಲಿ ಹಲವು ನಗರಾಭಿವೃದ್ಧಿ, ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು
ವಾರಣಾಸಿಯ ʻರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆʼಗೆ (ಎನ್ಐಎಫ್ಟಿ) ಶಂಕುಸ್ಥಾಪನೆ ನೆರವೇರಿಸಿದರು
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ಹೊಸ ವೈದ್ಯಕೀಯ ಕಾಲೇಜು ಮತ್ತು ʻರಾಷ್ಟ್ರೀಯ ವೃದ್ಧಾಪ್ಯ ಕೇಂದ್ರʼಕ್ಕೆ ಶಂಕುಸ್ಥಾಪನೆ ನೆರವೇರಿಸಿದರು
ʻಸಿಗ್ರಾ ಕ್ರೀಡಾಂಗಣʼ ಹಂತ-1 ಮತ್ತು ಜಿಲ್ಲಾ ರೈಫಲ್ ಶೂಟಿಂಗ್ ರೇಂಜ್ ಉದ್ಘಾಟನೆ ಮಾಡಿದರು
"ಹತ್ತು ವರ್ಷಗಳಲ್ಲಿ ಬನಾರಸ್ ನನ್ನನ್ನು ಬನಾರಸಿಯನ್ನಾಗಿ ಮಾಡಿದೆ"
"ರೈತರು ಮತ್ತು ಪಶುಪಾಲಕರು ಸರ್ಕಾರದ ದೊಡ್ಡ ಆದ್ಯತೆಯಾಗಿದ್ದಾರೆ"
"3 ಲಕ್ಷಕ್ಕೂ ಹೆಚ್ಚು ರೈತರ ಆದಾಯವನ್ನು ʻ ಬನಾಸ್ ಕಾಶಿ ಸಂಕುಲ್ʼ ಹೆಚ್ಚಿಸುತ್ತದೆ"
Posted On:
23 FEB 2024 4:10PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯಲ್ಲಿ 13,000 ಕೋಟಿ ರೂಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿಯವರು ವಾರಣಾಸಿಯ ಕಾರ್ಖಿಯಾನ್‌ನಲ್ಲಿರುವ ʻಯುಪಿಎಸ್ಐಡಿಎ ಆಗ್ರೋ ಪಾರ್ಕ್ʼನಲ್ಲಿ ನಿರ್ಮಿಸಲಾಗಿರುವ ʻಬನಸ್ಕಾಂತ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತʼ ಒಡೆತನದ ಹಾಲು ಸಂಸ್ಕರಣಾ ಘಟಕವಾದ ʻಬನಾಸ್ ಕಾಶಿ ಸಂಕುಲ್ʼಗೆ ಭೇಟಿ ನೀಡಿ ಪಶುಸಂಗೋಪನಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ʻಪಿಎಂ ಮೋದಿ ಉದ್ಯೋಗ ಪತ್ರʼಗಳು ಮತ್ತು ʻಜಿಐ ಅಧಿಕೃತ ಬಳಕೆದಾರ ಪ್ರಮಾಣಪತ್ರʼಗಳನ್ನು ವಿತರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ರಸ್ತೆ, ರೈಲು, ವಾಯುಯಾನ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನಗರಾಭಿವೃದ್ಧಿ ಮತ್ತು ನೈರ್ಮಲ್ಯದಂತಹ ಪ್ರಮುಖ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸುತ್ತವೆ.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮತ್ತೊಮ್ಮೆ ಕಾಶಿಯಲ್ಲಿ ಉಪಸ್ಥಿತರಿರಲು ಅವಕಾಶ ದೊರೆತದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು ಮತ್ತು 10 ವರ್ಷಗಳ ಹಿಂದೆ ನಗರದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಿದರು. ಈ 10 ವರ್ಷಗಳಲ್ಲಿ ಬನಾರಸ್ ತಮ್ಮನ್ನು ʻಬನಾರಸಿʼಯನ್ನಾಗಿ ಪರಿವರ್ತಿಸಿದೆ ಎಂದರು. ಕಾಶಿ ಜನರ ಬೆಂಬಲ ಮತ್ತು ಕೊಡುಗೆಗಳನ್ನು ಶ್ಲಾಘಿಸಿದ ಶ್ರೀ ಮೋದಿ ಅವರು ಇಂದಿನ 13,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಯೋಜನೆಗಳೊಂದಿಗೆ ನವ ಕಾಶಿಯನ್ನು ಸೃಷ್ಟಿಸುವ ಅಭಿಯಾನ ನಡೆಯುತ್ತಿದೆ ಎಂದು ಹೇಳಿದರು. ರೈಲು, ರಸ್ತೆ, ವಿಮಾನ ನಿಲ್ದಾಣ ಸಂಬಂಧಿತ ಯೋಜನೆಗಳಿಂದ ಹಿಡಿದು ಪಶುಸಂಗೋಪನೆ, ಕೈಗಾರಿಕೆ, ಕ್ರೀಡೆ, ಕೌಶಲ್ಯ ಅಭಿವೃದ್ಧಿ, ಸ್ವಚ್ಛತೆ, ಆರೋಗ್ಯ, ಆಧ್ಯಾತ್ಮಿಕತೆ, ಪ್ರವಾಸೋದ್ಯಮ ಮತ್ತು ಎಲ್‌ಪಿಜಿ ಅನಿಲ ಕ್ಷೇತ್ರಗಳವರೆಗಿನ ಈ ಅಭಿವೃದ್ಧಿ ಯೋಜನೆಗಳು ಕಾಶಿ ಮಾತ್ರವಲ್ಲದೆ ಇಡೀ ಪೂರ್ವಾಂಚಲ ಪ್ರದೇಶದ ಅಭಿವೃದ್ಧಿಗೆ ಉತ್ತೇಜನ ನೀಡುತ್ತವೆ ಎಂದು ಅವರು ಹೇಳಿದರು. ಈ ಯೋಜನೆಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದರು. ಸಂತ ರವಿದಾಸ್ ಜೀ ಅವರಿಗೆ ಸಂಬಂಧಿಸಿದ ಯೋಜನೆಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು ಇದಕ್ಕಾಗಿ ನಾಗರಿಕರನ್ನು ಅಭಿನಂದಿಸಿದರು.
ಕಾಶಿ ಮತ್ತು ಪೂರ್ವ ಉತ್ತರ ಪ್ರದೇಶದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಕಳೆದ ರಾತ್ರಿ ಅತಿಥಿ ಗೃಹಕ್ಕೆ ಹೋಗುವ ದಾರಿಯಲ್ಲಿ ತಾವು ಕೈಗೊಂಡ ರಸ್ತೆ ಪ್ರವಾಸವನ್ನು ಸ್ಮರಿಸಿದರು, ಫುಲ್ವಾರಿಯಾ ಮೇಲ್ಸೇತುವೆ ಯೋಜನೆಯ ಪ್ರಯೋಜನಗಳನ್ನು ಉಲ್ಲೇಖಿಸಿದರು. ʻಬಿಎಲ್‌ಡಬ್ಲ್ಯೂʼನಿಂದ ವಿಮಾನ ನಿಲ್ದಾಣಕ್ಕೆ ಸಾಗುವ ಪ್ರಯಾಣದಲ್ಲಿ ಸುಗಮತೆಯ ಸುಧಾರಣೆಯ ಬಗ್ಗೆ ಅವರು ಉಲ್ಲೇಖಿಸಿದರು. ಗುಜರಾತ್ ಪ್ರವಾಸದಿಂದ ಬಂದಿಳಿದ ಕೂಡಲೇ ಪ್ರಧಾನಮಂತ್ರಿಯವರು ಕಳೆದ ರಾತ್ರಿ ಅಭಿವೃದ್ಧಿ ಯೋಜನೆಯನ್ನು ಪರಿಶೀಲಿಸಿದರು. ಕಳೆದ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು, ʻಸಿಗ್ರಾ ಕ್ರೀಡಾಂಗಣ ಹಂತ-1ʼ ಮತ್ತು ಜಿಲ್ಲಾ ರೈಫಲ್ ಶೂಟಿಂಗ್ ರೇಂಜ್‌ನಿಂದ ಈ ಪ್ರದೇಶದ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.
ಇದಕ್ಕೂ ಮುನ್ನ ʻಬನಾಸ್ ಡೈರಿʼಗೆ ಭೇಟಿ ನೀಡಿ, ಹಲವಾರು ಪಶುಪಾಲಕ ಮಹಿಳೆಯರೊಂದಿಗೆ ಸಂವಾದ ನಡೆಸಿದ್ದನ್ನು ಪ್ರಧಾನಿ ಉಲ್ಲೇಖಿಸಿದರು. ಕೃಷಿ ಹಿನ್ನೆಲೆಯ ಮಹಿಳೆಯರಿಗೆ ಜಾಗೃತಿ ಮೂಡಿಸಲು 2-3 ವರ್ಷಗಳ ಹಿಂದೆ ಗಿರ್ ಹಸುಗಳ ಸ್ಥಳೀಯ ತಳಿಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ಗಿರ್ ಹಸುಗಳ ಸಂಖ್ಯೆ ಈಗ ಸುಮಾರು 350ಕ್ಕೆ ತಲುಪಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸಾಮಾನ್ಯ ಹಸುಗಳು ಉತ್ಪಾದಿಸುವ 5 ಲೀಟರ್‌ಗೆ ಹೋಲಿಸಿದರೆ ಅವು 15 ಲೀಟರ್ ವರೆಗೆ ಹಾಲು ಉತ್ಪಾದಿಸುತ್ತವೆ ಎಂದು ಮಾಹಿತಿ ನೀಡಿದರು. ಗಿರ್ ಹಸುವೊಂದು 20 ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದು, ಮಹಿಳೆಯರಿಗೆ ಹೆಚ್ಚುವರಿ ಆದಾಯವನ್ನು ಸೃಷ್ಟಿಸುತ್ತಿದೆ ಮತ್ತು ಅವರನ್ನು ʻಲಕ್ಷಾಧಿಪತಿ ದೀದಿʼಯರನ್ನಾಗಿ ಮಾಡುತ್ತಿದೆ ಎಂದು ಅವರು ಹೇಳಿದರು. "ಇದು ದೇಶದ ಸ್ವಸಹಾಯ ಗುಂಪುಗಳೊಂದಿಗೆ ಗುರುತಿಸಿಕೊಂಡಿರುವ 10 ಕೋಟಿ ಮಹಿಳೆಯರಿಗೆ ದೊಡ್ಡ ಸ್ಫೂರ್ತಿಯಾಗಿದೆ," ಎಂದು ಅವರು ಹೇಳಿದರು.
ಎರಡು ವರ್ಷಗಳ ಹಿಂದೆ ʻಬನಾಸ್ ಡೈರಿʼಗೆ ಶಂಕುಸ್ಥಾಪನೆ ನೆರವೇರಿಸಿದ ಘಟನೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಆ ದಿನ ನೀಡಿದ ಭರವಸೆಯು ಇಂದು ಜನರ ಮುಂದಿದೆ ಎಂದರು. ಸರಿಯಾದ ಹೂಡಿಕೆಯ ಮೂಲಕ ಉದ್ಯೋಗ ಸೃಷ್ಟಿಗೆ ʻಬನಾಸ್ ಡೈರಿʼ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ʻಬನಾಸ್ ಡೈರಿʼಯು ವಾರಣಾಸಿ, ಮಿರ್ಜಾಪುರ, ಗಾಜಿಪುರ ಮತ್ತು ರಾಯ್‌ಬರೇಲಿಯಿಂದ ಸುಮಾರು 2 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ. ಹೊಸ ಸ್ಥಾವರದ ಪ್ರಾರಂಭದೊಂದಿಗೆ, ಬಲ್ಲಿಯಾ, ಚಂದೌಲಿ, ಪ್ರಯಾಗ್ರಾಜ್ ಮತ್ತು ಜೌನ್ಪುರದ ಪಶುಪಾಲಕರು ಸಹ ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯಡಿ ವಾರಣಾಸಿ, ಜೌನ್ಪುರ, ಚಂದೌಲಿ, ಗಾಜಿಪುರ ಮತ್ತು ಅಜಂಗಢ ಜಿಲ್ಲೆಗಳ 1000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹೊಸ ಹಾಲಿನ ಮಂಡಿಗಳು ಬರಲಿವೆ ಎಂದರು.
ʻಬನಾಸ್ ಕಾಶಿ ಸಂಕುಲʼವು ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಒಂದು ಅಂದಾಜಿನ ಪ್ರಕಾರ, ʻಬನಾಸ್ ಕಾಶಿ ಸಂಕುಲʼವು 3 ಲಕ್ಷಕ್ಕೂ ಅಧಿಕ ರೈತರ ಆದಾಯಕ್ಕೆ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಹೇಳಿದರು. ಈ ಘಟಕವು ಮಜ್ಜಿಗೆ, ಮೊಸರು, ಲಸ್ಸಿ, ಐಸ್ ಕ್ರೀಮ್, ಪನೀರ್ ಮತ್ತು ಪ್ರಾದೇಶಿಕ ಸಿಹಿತಿಂಡಿಗಳಂತಹ ಇತರ ಡೈರಿ ಉತ್ಪನ್ನಗಳ ತಯಾರಿಕೆಯನ್ನು ಸಹ ಕೈಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು. ಬನಾರಸ್‌ನ ಸಿಹಿತಿಂಡಿಗಳನ್ನು ಭಾರತದ ಮೂಲೆ ಮೂಲೆಗೂ ಕೊಂಡೊಯ್ಯುವಲ್ಲಿ ಈ ಸ್ಥಾವರವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಹಾಲಿನ ಸಾಗಣೆಯು ಉದ್ಯೋಗದ ಮಾರ್ಗವಾಗಲಿದೆ ಜೊತೆಗೆ ಪಶು ಪೋಷಕಾಂಶ ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದೂ ಅವರು ಪ್ರಸ್ತಾಪಿಸಿದರು.
ಪಶುಪಾಲಕ ಸಹೋದರಿಯರ ಖಾತೆಗಳಿಗೆ ಡಿಜಿಟಲ್ ರೂಪದಲ್ಲಿ ನೇರವಾಗಿ ಹಣವನ್ನು ವರ್ಗಾಯಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಂತೆ ಡೈರಿಯ ಮುಖ್ಯಸ್ಥರಿಗೆ ಪ್ರಧಾನಿ ವಿನಂತಿಸಿದರು. ಹೈನುಗಾರಿಕೆ ಕ್ಷೇತ್ರದಲ್ಲಿ ಮಹಿಳೆಯರ ಪ್ರಾಬಲ್ಯವನ್ನು ಉಲ್ಲೇಖಿಸಿದರು. ಸಣ್ಣ ರೈತರು ಮತ್ತು ಭೂರಹಿತ ಕಾರ್ಮಿಕರಿಗೆ ಸಹಾಯ ಮಾಡುವಲ್ಲಿ ಪಶುಸಂಗೋಪನೆಯ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು.
ಅನ್ನದಾತರಾದ ರೈತರನ್ನು ʻಪೋಷಕಾಂಶ ದಾತʼ ಹಂತದಿಂದ ʻರಸಗೊಬ್ಬರ ದಾತʼ ಹಂತಕ್ಕೆ ಕೊಂಡೊಯ್ಯುವ ಸರ್ಕಾರದ ಸಂಕಲ್ಪವನ್ನು ಪ್ರಧಾನಿ ಪುನರುಚ್ಚರಿಸಿದರು. ʻಗೋಬರ್ ಧನ್ʼ ಯೋಜನೆಯಲ್ಲಿರುವ ಅವಕಾಶದ ಬಗ್ಗೆ ಮಾಹಿತಿ ನೀಡಿದ ಅವರು, ʻಜೈವಿಕ ಸಿಎನ್‌ಜಿʼ ಮತ್ತು ಸಾವಯವ ಗೊಬ್ಬರವನ್ನು ತಯಾರಿಸಲು ಡೈರಿಯಲ್ಲಿರುವ ಘಟಕದ ಬಗ್ಗೆ ಮಾತನಾಡಿದರು. ಗಂಗಾ ನದಿಯ ದಡದಲ್ಲಿ ಹೆಚ್ಚುತ್ತಿರುವ ನೈಸರ್ಗಿಕ ಕೃಷಿಯ ಪ್ರವೃತ್ತಿಯ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ʻಗೋಬರ್ ಧನ್ʼ ಯೋಜನೆಯಡಿ ಸಾವಯವ ಗೊಬ್ಬರದ ಉಪಯುಕ್ತತೆಯ ಬಗ್ಗೆ ಸಹಮತ ವ್ಯಕ್ತಪಡಿಸಿದರು. ʻಎನ್‌ಟಿಪಿಸಿʼಯ ಇದ್ದಿಲು ಘಟಕಕ್ಕೆ ನಗರ ತ್ಯಾಜ್ಯದ ಬಳಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 'ಕಸವನ್ನು ಕಾಂಚಾಣʼವಾಗಿ ಪರಿವರ್ತಿಸುವ ಕಾಶಿಯ ಉತ್ಸಾಹವನ್ನು ಶ್ಲಾಘಿಸಿದರು.
ರೈತರು ಮತ್ತು ಪರಶುಪಾಲಕರು ಸರ್ಕಾರದ ಅತ್ಯಂತ ಪ್ರಧಾನ ಆದ್ಯತೆಯಾಗಿದ್ದಾರೆ ಎಂದು ಪ್ರಧಾನಿ ಹೇಳಿದರು. ಕಳೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬಿನ ʻಎಫ್‌ಆರ್‌ಪಿʼ ದರವನ್ನು ಕ್ವಿಂಟಾಲ್‌ಗೆ 340 ರೂ.ಗೆ ಪರಿಷ್ಕರಿಸಿರುವುದನ್ನು ಮತ್ತು ʻರಾಷ್ಟ್ರೀಯ ಜಾನುವಾರು ಯೋಜನೆʼಯಲ್ಲಿ ತಿದ್ದುಪಡಿಯೊಂದಿಗೆ ʻಪಶುಧನ್ ಬಿಮಾʼ ಕಾರ್ಯಕ್ರಮವನ್ನು ಸರಾಗಗೊಳಿಸಿರುವುದನ್ನು ಅವರು ಉಲ್ಲೇಖಿಸಿದರು. ರೈತರ ಬಾಕಿಯನ್ನು ಪಾವತಿಸುವುದು ಮಾತ್ರವಲ್ಲ, ಬೆಳೆಗಳ ಬೆಲೆಗಳನ್ನು ಸಹ ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.
"ಆತ್ಮನಿರ್ಭರ ಭಾರತವು ʻವಿಕಸಿತ ಭಾರತʼಕ್ಕೆ ಅಡಿಪಾಯವಾಗಲಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಹಿಂದಿನ ಮತ್ತು ಈಗಿನ ಸರ್ಕಾರದ ಚಿಂತನೆಯ ಪ್ರಕ್ರಿಯೆಯ ನಡುವಿನ ವ್ಯತ್ಯಾಸವನ್ನು ಒತ್ತಿ ಹೇಳಿದರು. ದೇಶದಲ್ಲಿನ ಸಣ್ಣ ಸಾಧ್ಯತೆಗಳನ್ನು ಪುನರುಜ್ಜೀವನಗೊಳಿಸಿದಾಗ; ಸಣ್ಣ ರೈತರು, ಪಶುಪಾಲಕರು, ಕುಶಲಕರ್ಮಿಗಳು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆರವು ನೀಡಿದಾಗ ಮಾತ್ರ ʻಆತ್ಮನಿರ್ಭರ ಭಾರತʼವು ಸಾಕಾರವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ದೂರದರ್ಶನ ಮತ್ತು ಪತ್ರಿಕೆಗಳ ಜಾಹೀರಾತುಗಳಿಗಾಗಿ ಖರ್ಚು ಮಾಡಲು ಸಾಧ್ಯವಾಗದ ಸಣ್ಣ ವ್ಯಾಪಾರಿಗಳಿಗೆ ʻವೋಕಲ್ ಫಾರ್ ಲೋಕಲ್ʼ ಕರೆಯು ತಾನೇ ಒಂದು ಜಾಹೀರಾತಾಗಿದೆ ಎಂದು ಪ್ರಧಾನಿ ಹೇಳಿದರು. ಅದು ಖಾದಿ ಪ್ರಚಾರವಾಗಿರಲಿ, ಆಟಿಕೆ ತಯಾರಿಕೆ ಪ್ರಚಾರವಾಗಿರಲಿ, ʻಮೇಕ್ ಇನ್ ಇಂಡಿಯಾʼ ಅಥವಾ ʻದೇಖೋ ಅಪ್ನಾ ದೇಶ್ʼ ಪ್ರಚಾರವಾಗಲಿ ಪ್ರತಿ ಸಣ್ಣ ರೈತ ಮತ್ತು ಉದ್ಯಮದ ಪಾಲಿಗೆ ಮೋದಿಯೇ ರಾಯಭಾರಿಯಾಗಿದ್ದಾರೆ. ವಿಶ್ವನಾಥ ಧಾಮದ ಪುನರುಜ್ಜೀವನದ ನಂತರ 12 ಕೋಟಿಗೂ ಹೆಚ್ಚು ಪ್ರವಾಸಿಗರು ನಗರಕ್ಕೆ ಭೇಟಿ ನೀಡಿದ್ದು, ಇದು ಆದಾಯ ಮತ್ತು ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ʻಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರʼವು(ಐಡಬ್ಲ್ಯೂಎಐ) ವಾರಣಾಸಿ ಮತ್ತು ಅಯೋಧ್ಯೆಗೆ ಒದಗಿಸಿದ ಎಲೆಕ್ಟ್ರಿಕ್ ಕ್ಯಾಟಮಾರನ್ ಹಡಗಿಗೆ ಚಾಲನೆ ನೀಡಿದ್ದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇದು ಭೇಟಿ ಈ ಕ್ಷೇತ್ರಗಳಿಗೆ ನೀಡುವವರಿಗೆ ವಿಶಿಷ್ಟ ಅನುಭವವನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ ಮತ್ತು ತುಷ್ಟೀಕರಣದ ದುಷ್ಪರಿಣಾಮಗಳ ಬಗ್ಗೆಯೂ ಪ್ರಧಾನಿ ವಿವರಿಸಿದರು. ಕೆಲವು ವರ್ಗಗಳು ಕಾಶಿಯ ಯುವಕರನ್ನು ಕೆಟ್ಟದಾಗಿ ಬಂಬಿಸುತ್ತಿವೆ ಎಂದು ಅವರು ಟೀಕಿಸಿದರು. ಯುವಕರ ಬೆಳವಣಿಗೆ ಮತ್ತು ವಂಶಪಾರಂಪರ್ಯ ರಾಜಕೀಯದ ನಡುವಿನ ವಿರೋಧಾಭಾಸವನ್ನು ಅವರು ಎತ್ತಿ ತೋರಿದರು. ಕಾಶಿ ಮತ್ತು ಅಯೋಧ್ಯೆಗೆ ದೊರೆತಿರುವ ಹೊಸ ರೂಪದ ಬಗ್ಗೆ ಈ ಶಕ್ತಿಗಳು ಹೊಂದಿರುವ ದ್ವೇಷದ ಬಗ್ಗೆ ಅವರು ಗಮನ ಸೆಳೆದರು.
"ಮೋದಿ ಅವರ ಮೂರನೇ ಅವಧಿಯು ಭಾರತದ ಸಾಮರ್ಥ್ಯಗಳನ್ನು ವಿಶ್ವದ ಮುಂಚೂಣಿಗೆ ತರುತ್ತದೆ ಮತ್ತು ಭಾರತದ ಆರ್ಥಿಕ, ಸಾಮಾಜಿಕ, ವ್ಯೂಕಾತ್ಮಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಹೊಸ ಎತ್ತರದಲ್ಲಿರಲಿವೆ," ಎಂದು ಪ್ರಧಾನಿ ಹೇಳಿದರು. ಭಾರತದ ಪ್ರಗತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕಳೆದ 10 ವರ್ಷಗಳಲ್ಲಿ 11ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯು ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ಮಟ್ಟಕ್ಕೆ ಜಿಗಿದಿದೆ ಎಂದರು. ಮುಂದಿನ 5 ವರ್ಷಗಳಲ್ಲಿ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ 5 ವರ್ಷಗಳಲ್ಲಿ ʻಡಿಜಿಟಲ್ ಇಂಡಿಯಾʼ, ರಸ್ತೆಗಳ ಅಗಲೀಕರಣ, ಆಧುನೀಕರಿಸಿದ ರೈಲ್ವೆ ನಿಲ್ದಾಣಗಳು ಮತ್ತು ʻವಂದೇ ಭಾರತ್ʼ, ʻಅಮೃತ್ ಭಾರತ್ʼ ಹಾಗೂ ʻನಮೋ ಭಾರತ್ʼ ರೈಲುಗಳಂತಹ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲಾಗುವುದು ಎಂಬ ವಿಶ್ವಾಸವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು. " ಅಭಿವೃದ್ಧಿಯಿಂದ ವಂಚಿತವಾಗಿರುವ ಪೂರ್ವ ಭಾರತವನ್ನು ʻವಿಕಸಿತ ಭಾರತʼದ ಬೆಳವಣಿಗೆಯ ಎಂಜಿನ್ ಆಗಿ ಮಾಡುವುದು ಮೋದಿಯವರ ಗ್ಯಾರಂಟಿ" ಎಂದು ಪ್ರಧಾನಿ ಶ್ರೀ ಮೋದಿ ಹೇಳಿದರು. ವಾರಣಾಸಿಯಿಂದ ಔರಂಗಾಬಾದ್ ವರೆಗಿನ ಆರು ಪಥದ ಹೆದ್ದಾರಿಯ ಮೊದಲ ಹಂತದ ಉದ್ಘಾಟನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಮುಂದಿನ 5 ವರ್ಷಗಳಲ್ಲಿ ವಾರಣಾಸಿ-ರಾಂಚಿ-ಕೋಲ್ಕತಾ ಎಕ್ಸ್‌ಪ್ರೆಸ್ ವೇ ಪೂರ್ಣಗೊಳ್ಳುವುದರಿಂದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ನಡುವಿನ ಅಂತರ ಕಡಿಮೆಯಾಗಲಿದೆ ಎಂದರು. "ಭವಿಷ್ಯದಲ್ಲಿ, ಬನಾರಸ್‌ನಿಂದ ಕೋಲ್ಕತ್ತಾಗೆ ಪ್ರಯಾಣದ ಸಮಯವು ಬಹುತೇಕ ಅರ್ಧದಷ್ಟು ಕಡಿಮೆಯಾಗಲಿದೆ," ಎಂದು ಅವರು ಮಾಹಿತಿ ನೀಡಿದರು.
ಮುಂಬರುವ 5 ವರ್ಷಗಳಲ್ಲಿ ಕಾಶಿಯ ಅಭಿವೃದ್ಧಿಯ ಹೊಸ ಆಯಾಮಗಳ ಬಗ್ಗೆ ಪ್ರಧಾನಿ ನಿರೀಕ್ಷೆ ವ್ಯಕ್ತಪಡಿಸಿದರು. ʻಕಾಶಿ ರೋಪ್ ವೇʼ ಮತ್ತು ವಿಮಾನ ನಿಲ್ದಾಣದ ಸಾಮರ್ಥ್ಯದಲ್ಲಿನ ಅಗಾಧ ಹೆಚ್ಚಳವನ್ನು ಅವರು ಉಲ್ಲೇಖಿಸಿದರು. ಕಾಶಿಯು ದೇಶದ ಪ್ರಮುಖ ಕ್ರೀಡಾ ನಗರವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು. ʻಮೇಕ್ ಇನ್ ಇಂಡಿಯಾʼ ಮತ್ತು ʻಆತ್ಮನಿರ್ಭರ ಭಾರತʼ ಅಭಿಯಾನಕ್ಕೆ ಕಾಶಿ ಪ್ರಮುಖ ಕೊಡುಗೆ ನೀಡಿದೆ ಎಂದು ಅವರು ಹೇಳಿದರು. ಮುಂದಿನ 5 ವರ್ಷಗಳಲ್ಲಿ ಕಾಶಿ ಉದ್ಯೋಗ ಮತ್ತು ಕೌಶಲ್ಯದ ಕೇಂದ್ರವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಈ ಅವಧಿಯಲ್ಲಿ ʻನ್ಯಾಷನಲ್ ಇನ್ಸ್‌ಟಿಟ್ಯೂಷನ್ ಆಫ್ ಫ್ಯಾಶನ್ ಟೆಕ್ನಾಲಜಿʼಯ ಕ್ಯಾಂಪಸ್ ಸಹ ಪೂರ್ಣಗೊಳ್ಳಲಿದ್ದು, ಇದು ಈ ಪ್ರದೇಶದ ಯುವಕರು ಮತ್ತು ನೇಕಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು. "ಕಳೆದ ದಶಕದಲ್ಲಿ, ನಾವು ಆರೋಗ್ಯ ಮತ್ತು ಶಿಕ್ಷಣದ ಕೇಂದ್ರವಾಗಿ ಕಾಶಿಗೆ ಹೊಸ ಗುರುತನ್ನು ತಂದುಕೊಟ್ಟಿದ್ದೇವೆ. ಈಗ ಅದಕ್ಕೆ ಹೊಸ ವೈದ್ಯಕೀಯ ಕಾಲೇಜನ್ನೂ ಸೇರಿಸಲಾಗುವುದು", ಎಂದು ಪ್ರಧಾನಿ ಹೇಳಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ʻರಾಷ್ಟ್ರೀಯ ವೃದ್ಧಾಪ್ಯ ಕೇಂದ್ರʼದ ಜೊತೆಗೆ, 35 ಕೋಟಿ ರೂ.ಗಳ ವೆಚ್ಚದಲ್ಲಿ ಅನೇಕ ರೋಗನಿರ್ಣಯ ಯಂತ್ರಗಳು ಮತ್ತು ಉಪಕರಣಗಳನ್ನು ಇಂದು ಉದ್ಘಾಟಿಸಲಾಯಿತು. ಆಸ್ಪತ್ರೆಯಿಂದ ಉತ್ಪತ್ತಿಯಾಗುವ ಜೈವಿಕ ಹಾನಿಕಾರಕ ತ್ಯಾಜ್ಯವನ್ನು ವಿಲೇವಾರಿ ಮಾಡುವ ಘಟಕವನ್ನೂ ಸಹ ಅಭಿವೃದ್ಧಿಪಡಿಸಲಾಗುತ್ತಿದೆ.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಕಾಶಿ ಮತ್ತು ಉತ್ತರ ಪ್ರದೇಶದ ಕ್ಷಿಪ್ರ ಅಭಿವೃದ್ಧಿ ಮುಂದುವರಿಯಬೇಕು ಮತ್ತು ಇದಕ್ಕಾಗಿ ಕಾಶಿಯ ಪ್ರತಿಯೊಬ್ಬ ನಿವಾಸಿಯೂ ಒಂದಾಗಬೇಕು ಎಂದು ಕರೆ ನೀಡಿದರು. "ದೇಶ ಮತ್ತು ಜಗತ್ತು ಮೋದಿಯವರ ʻಗ್ಯಾರಂಟಿʼಯ ಮೇಲೆ ಅಷ್ಟೊಂದು ನಂಬಿಕೆಯನ್ನು ಹೊಂದಿದೆಯೆಂದರೆ, ಅದಕ್ಕೆ ನಿಮ್ಮ ಪ್ರೀತಿ ಮತ್ತು ಬಾಬಾ ಅವರ ಆಶೀರ್ವಾದವೇ ಕಾರಣ," ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಶ್ರೀ ಬ್ರಿಜೇಶ್ ಪಾಠಕ್, ಕೇಂದ್ರ ಸಚಿವ ಶ್ರೀ ಮಹೇಂದ್ರ ನಾಥ್ ಪಾಂಡೆ ಮತ್ತು ಬನಾಸ್ ಡೈರಿಯ ಅಧ್ಯಕ್ಷ ಶ್ರೀ ಶಂಕರ್ ಭಾಯ್ ಚೌಧರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ವಾರಣಾಸಿಯಲ್ಲಿ ರಸ್ತೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ, ರಾಷ್ಟ್ರೀಯ ಹೆದ್ದಾರಿ 233ರ ʻಘರ್‌ಗ್ರಾ-ಸೇತುವೆ-ವಾರಣಾಸಿʼ ವಿಭಾಗವನ್ನು ಚತುಷ್ಪಥಗೊಳಿಸುವುದು ಸೇರಿದಂತೆ ಅನೇಕ ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಹೆದ್ದಾರಿ 56ರ ಸುಲ್ತಾನಪುರ-ವಾರಣಾಸಿ ವಿಭಾಗವನ್ನು ಚತುಷ್ಪಥಗೊಳಿಸುವುದು, ಪ್ಯಾಕೇಜ್-1; ರಾಷ್ಟ್ರೀಯ ಹೆದ್ದಾರಿ-19ರ ವಾರಣಾಸಿ-ಔರಂಗಾಬಾದ್ ವಿಭಾಗದ ಮೊದಲ ಹಂತದ ಆರು ಪಥದ ರಸ್ತೆ; ರಾಷ್ಟ್ರೀಯ ಹೆದ್ದಾರಿ 35ರಲ್ಲಿ ಪ್ಯಾಕೇಜ್-1 ʻವಾರಣಾಸಿ-ಹನುಮಾನ್ʼ ವಿಭಾಗವನ್ನು ಚತುಷ್ಪಥಗೊಳಿಸುವುದು, ಬಾಬತ್‌ಪುರ ಬಳಿಯ ʻವಾರಣಾಸಿ-ಜೌನ್ಪುರʼ ರೈಲು ವಿಭಾಗದಲ್ಲಿ ರೈಲ್ವೇ ಮೇಲ್ಸೇತುವೆ ಇವುಗಳಲ್ಲಿ ಸೇರಿವೆ. ಜೊತೆಗೆ, ʻವಾರಣಾಸಿ-ರಾಂಚಿ-ಕೋಲ್ಕತಾ
ಎಕ್ಸ್‌ಪ್ರೆಸ್ ವೇʼ ಪ್ಯಾಕೇಜ್-1ರ ನಿರ್ಮಾಣಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸೇವಾಪುರಿಯಲ್ಲಿ ʻಎಚ್‌ಪಿಸಿಎಲ್ʼನ ಎಲ್‌ಪಿಜಿ ಬಾಟ್ಲಿಂಗ್ ಘಟಕವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಕಾರ್ಖಿಯಾನ್‌ನಲ್ಲಿರುವ ʻಯುಪಿಎಸ್ಐಡಿಎ ಆಗ್ರೋ ಪಾರ್ಕ್ʼನಲ್ಲಿ ʻಬನಾಸ್ ಕಾಶಿ ಸಂಕುಲ್ʼ ಹಾಲು ಸಂಸ್ಕರಣಾ ಘಟಕ; ಕರ್ಖಿಯಾನ್‌ನ ʻಯುಪಿಎಸ್ಐಡಿಎ ಆಗ್ರೋ ಪಾರ್ಕ್ʼನಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿಗಳು; ಮತ್ತು ನೇಕಾರರಿಗೆ ರೇಷ್ಮೆ ಬಟ್ಟೆ ಮುದ್ರಣ ಸೌಲಭ್ಯ ಕೇಂದ್ರವನ್ನು ಅವರು ಉದ್ಘಾಟಿಸಿದರು.
ರಮಣದಲ್ಲಿ ʻಎನ್‌ಟಿಪಿಸಿʼ ನಿರ್ಮಿಸಿರುವ ನಗರ ತ್ಯಾಜ್ಯದಿಂದ ಇದ್ದಿಲು ತಯಾರಿಕೆ ಸ್ಥಾವರ ಸೇರಿದಂತೆ ವಾರಣಾಸಿಯಲ್ಲಿ ಹಲವು ನಗರಾಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ʻಸಿಸ್-ವರುಣಾʼ ಪ್ರದೇಶದಲ್ಲಿ ನೀರು ಸರಬರಾಜು ಜಾಲ ಉನ್ನತೀಕರಣ; ʻಎಸ್‌ಟಿಪಿಗʼಳು ಮತ್ತು ಒಳಚರಂಡಿ ಪಂಪಿಂಗ್ ಕೇಂದ್ರಗಳ ಆನ್‌ಲೈನ್ ತ್ಯಾಜ್ಯ ಮೇಲ್ವಿಚಾರಣೆ ಹಾಗೂ ʻಎಸ್‌ಸಿಎಡಿಎʼ ಯಾಂತ್ರೀಕರಣವೂ ಇದರಲ್ಲಿ ಸೇರಿವೆ. ಕೆರೆಗಳ ಪುನರುಜ್ಜೀವನ ಮತ್ತು ಉದ್ಯಾನವನಗಳ ಪುನರಾಭಿವೃದ್ಧಿ ಯೋಜನೆಗಳು; 3D ಅರ್ಬನ್ ಡಿಜಿಟಲ್ ನಕ್ಷೆ ಮತ್ತು ಡೇಟಾಬೇಸ್‌ನ ವಿನ್ಯಾಸ ಮತ್ತು ಅಭಿವೃದ್ಧಿ ಸೇರಿದಂತೆ ವಾರಣಾಸಿಯ ಸೌಂದರ್ಯೀಕರಣಕ್ಕಾಗಿ ಅನೇಕ ಯೋಜನೆಗಳಿಗೆ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನಮಂತ್ರಿಯವರು ವಾರಣಾಸಿಯಲ್ಲಿ ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವು ಯೋಜನೆಗಳನ್ನು ಉದ್ಘಾಟಿಸಿದರು. ʻಪಂಚಕೋಶಿ ಪರಿಕ್ರಮ ಮಾರ್ಗದ ಐದು ʻಪದವ್ʼಗಳಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಪುನರಾಭಿವೃದ್ಧಿ ಹಾಗೂ ʻಪವನ್ ಪಥʼದೊಂದಿಗೆ ಹತ್ತು ಆಧ್ಯಾತ್ಮಿಕ ಯಾತ್ರೆಗಳು ಈ ಯೋಜನೆಗಳಲ್ಲಿ ಸೇರಿವೆ; ವಾರಣಾಸಿ ಮತ್ತು ಅಯೋಧ್ಯೆಗೆ ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ (ಐಡಬ್ಲ್ಯೂಎಐ) ಒದಗಿಸಿದ ಎಲೆಕ್ಟ್ರಿಕ್ ಕ್ಯಾಟಮಾರನ್ ಹಡಗಿಗೆ ಚಾಲನೆ; ಮತ್ತು ತೇಲುವ ಜೆಟ್ಟಿಗಳಲ್ಲಿ ಏಳು ವಸ್ತ್ರ ಬದಲಾವಣೆ ಕೋಣೆಗಳು ಮತ್ತು ನಾಲ್ಕು ಸಮುದಾಯ ಜೆಟ್ಟಿಗಳು ಇದರಲ್ಲಿ ಸೇರಿವೆ. ಎಲೆಕ್ಟ್ರಿಕ್ ಕ್ಯಾಟಮಾರನ್ ಹಡಗು ಹಸಿರು ಶಕ್ತಿಯ ಬಳಕೆಯೊಂದಿಗೆ ಗಂಗಾದಲ್ಲಿ ಪ್ರವಾಸೋದ್ಯಮದ ಅನುಭವವನ್ನು ಹೆಚ್ಚಿಸುತ್ತದೆ.
ಪ್ರಧಾನಮಂತ್ರಿಯವರು ವಿವಿಧ ನಗರಗಳಲ್ಲಿ ʻಐಡಬ್ಲ್ಯೂಎಐʼನ ಹದಿಮೂರು ಸಮುದಾಯ ಜೆಟ್ಟಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಬಲ್ಲಿಯಾದಲ್ಲಿ ತ್ವರಿತ ಪಾಂಟೂನ್ ತೆರೆಯುವ ಕಾರ್ಯವಿಧಾನಕ್ಕೂ ಶಂಕುಸ್ಥಾಪನೆ ನೆರವೇರಿಸಿದರು.
ವಾರಣಾಸಿಯ ಪ್ರಸಿದ್ಧ ಜವಳಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ವಾರಣಾಸಿಯಲ್ಲಿ ʻರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆʼಗೆ (ಎನ್ಐಎಫ್ಟಿ) ಶಂಕುಸ್ಥಾಪನೆ ನೆರವೇರಿಸಿದರು. ಹೊಸ ಸಂಸ್ಥೆಯು ಜವಳಿ ಕ್ಷೇತ್ರದ ಶಿಕ್ಷಣ ಮತ್ತು ತರಬೇತಿ ಮೂಲಸೌಕರ್ಯವನ್ನು ಬಲಪಡಿಸುತ್ತದೆ.
ವಾರಣಾಸಿಯಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಿದ ಪ್ರಧಾನಮಂತ್ರಿಯವರು, ವಾರಣಾಸಿಯಲ್ಲಿ ಹೊಸ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದರು. ʻಬಿಎಚ್‌ಯುʼನಲ್ಲಿ ʻರಾಷ್ಟ್ರೀಯ ವೃದ್ಧಾಪ್ಯ ಕೇಂದ್ರʼಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ನಗರದಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ ʻಸಿಗ್ರಾ ಕ್ರೀಡಾಂಗಣ ಹಂತ -1ʼ ಮತ್ತು ʻಜಿಲ್ಲಾ ರೈಫಲ್ ಶೂಟಿಂಗ್ ರೇಂಜ್ʼ ಅನ್ನು ಪ್ರಧಾನಿ ಉದ್ಘಾಟಿಸಿದರು.
******
(Release ID: 2009052)
Visitor Counter : 50
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Odia
,
Tamil
,
Telugu
,
Malayalam