ಪ್ರಧಾನ ಮಂತ್ರಿಯವರ ಕಛೇರಿ

“ಪಾಲಿ ಸಂಸದ್ ಖೇಲ್ ಮಹಾಕುಂಭ”ವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಿದರು


“ಕ್ರೀಡೆಯಲ್ಲಿ ಸೋಲು ಎಂಬುದಿಲ್ಲ; ನೀವು ಗೆಲ್ಲುತ್ತೀರಿ ಅಥವಾ ಕಲಿಯುತ್ತೀರಿ"

" ಮೈದಾನದಲ್ಲಿರುವ ಆಟಗಾರರ ಉತ್ಸಾಹದೊಂದಿಗೆ ಕ್ರೀಡೆಗಾಗಿರುವ ಕೇಂದ್ರ ಸರ್ಕಾರದ ಉತ್ಸಾಹವು ಪ್ರತಿಧ್ವನಿಸುತ್ತದೆ"

"ರಾಜಸ್ಥಾನದ ಕೆಚ್ಚೆದೆಯ ಯುವಕರು ನಿರಂತರವಾಗಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ"

"ಉತ್ಕೃಷ್ಟತೆಗೆ ಯಾವುದೇ ಮಿತಿಯಿಲ್ಲ ಎಂದು ಕ್ರೀಡೆಗಳು ನಮಗೆ ಕಲಿಸುತ್ತವೆ ಮತ್ತು ನಾವು ನಮ್ಮ ಎಲ್ಲಾ ಶಕ್ತಿಯಿಂದ ಶ್ರಮಿಸಬೇಕು"

"ರಾಜಸ್ಥಾನದ ಜನರಿಗೆ ಸಬಲೀಕರಣ ಮತ್ತು ಜೀವನವನ್ನು ಸುಲಭಗೊಳಿಸುವುದು ಡಬಲ್ ಇಂಜಿನ್ ಸರ್ಕಾರದ ಗುರಿಯಾಗಿದೆ"

Posted On: 03 FEB 2024 12:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಂದೇಶ ಮೂಲಕ ‘ಪಾಲಿ ಸಂಸದ್ ಖೇಲ್ ಮಹಾಕುಂಭ’ವನ್ನು ಉದ್ದೇಶಿಸಿ ಭಾಷಣ ಮಾಡಿದರು. ತಮ್ಮ ಅತ್ಯುತ್ತಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದ್ದಕ್ಕಾಗಿ ಎಲ್ಲಾ ಭಾಗವಹಿಸುವವರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, “ಕ್ರೀಡೆಯಲ್ಲಿ ಎಂದಿಗೂ ಸೋಲು ಇರುವುದಿಲ್ಲ; ನೀವು ಗೆಲ್ಲುತ್ತೀರಿ ಅಥವಾ ಸದಾಕಲಿಯುತ್ತೀರಿ. ಆದ್ದರಿಂದ, ನಾನು ಎಲ್ಲಾ ಆಟಗಾರರಿಗೆ ಮಾತ್ರವಲ್ಲದೆ ಅವರ ತರಬೇತುದಾರರಿಗೆ ಮತ್ತು ಕುಟುಂಬ ಸದಸ್ಯರಿಗೆ ನನ್ನ ಶುಭಾಶಯಗಳನ್ನು ತಿಳಿಸ ಬಯಸುತ್ತೇನೆ.” ಎಂದು ಹೇಳಿದರು

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರು ಮತ್ತು ಕ್ರೀಡೆಯ ಮಹತ್ವವನ್ನು ಒತ್ತಿ ಹೇಳಿದರು. ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವಲ್ಲಿ ಪ್ರಸ್ತುತ ಸರ್ಕಾರದ ನಿರಂತರ ಪ್ರಯತ್ನಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿಯವರು, “ಸಂಸದ್ ಖೇಲ್ ಮಹಾಕುಂಭದಲ್ಲಿ ಕಂಡುಬರುವ ಉತ್ಸಾಹ ಮತ್ತು ಆತ್ಮವಿಶ್ವಾಸವು ಇಂದು ಪ್ರತಿಯೊಬ್ಬ ಆಟಗಾರ ಮತ್ತು ಪ್ರತಿಯೊಬ್ಬ ಯುವಕನ ಹೆಗ್ಗುರುತಾಗಿದೆ. ಸರ್ಕಾರದ ಕ್ರೀಡಾ ಮನೋಭಾವವು ಮೈದಾನದಲ್ಲಿರುವ ಆಟಗಾರರ ಉತ್ಸಾಹದೊಂದಿಗೆ ಅನುರಣಿಸುತ್ತದೆ. ಸಂಸದ್ ಖೇಲ್ ಮಹಾಕುಂಭವು ಪ್ತಿ ಜಿಲ್ಲೆಗಳು ಮತ್ತು ರಾಜ್ಯಗಳಾದ್ಯಂತ ಲಕ್ಷಾಂತರ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಕ್ರೀಡಾ ವೇದಿಕೆಯನ್ನು ಒದಗಿಸುತ್ತಿದೆ. ಹೊಸ ಮತ್ತು ಮುಂಬರುವ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಿ ಸಿದ್ದತೆ ತಯಾರು ಮಾಡಲು ಮತ್ತು ಬಳಸಿಕೊಳ್ಳಲು ಇದು ಒಂದು ಕ್ರೀಡಾ ವ್ಯವಸ್ಥೆಯಾಗಿದೆ.” ಎಂದು ಹೇಳಿದರು.  ವಿಶೇಷವಾಗಿ ಮಹಿಳೆಯರಿಗೆ ಮೀಸಲಾದ ಸ್ಪರ್ಧೆಯ ಆಯೋಜನೆಯ ಬಗ್ಗೆಯೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದರು.

‘ಸಂಸದ್ ಖೇಲ್ ಮಹಾಕುಂಭ’ದಲ್ಲಿ ಪಾಲಿ ಲೋಕಸಭಾ ಕ್ಷೇತ್ರದ 1100 ಕ್ಕೂ ಹೆಚ್ಚು ಶಾಲಾ ಮಕ್ಕಳು ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ವಿಶೇಷ ಕಾರ್ಯಕ್ರಮ ಮೂಲಕ ಈ ಕ್ರೀಡಾಪಟುಗಳಿಗೆ ಒದಗಿಸಲಾದ ಅಸಾಧಾರಣ ಮಾನ್ಯತೆ ಮತ್ತು ಅವಕಾಶಗಳ ಕುರಿತು ಅರಿತ ಪ್ರಧಾನಮಂತ್ರಿಯವರು, ಈ ಅತ್ಯಾಧುನಿಕ ಸರ್ವ ಸೌಕರ್ಯಗಳ ನಿಟ್ಟಿನಲ್ಲಿ ಪ್ರಯತ್ನಗಳಿಗಾಗಿ, ಪಾಲಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಪಿ.ಪಿ. ಚೌಧರಿಯವರನ್ನು ಶ್ಲಾಘಿಸಿದರು.

ರಾಜಸ್ಥಾನ ಮತ್ತು ರಾಷ್ಟ್ರದ ಯುವಕರನ್ನು ನಾಳೆಯ ಸ್ಪರ್ಧಾತ್ಮಕ ಜಗತ್ತಿಗಾಗಿ ರೂಪಿಸುವಲ್ಲಿ ಕ್ರೀಡೆಯ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ರಾಜಸ್ಥಾನದ ಕೆಚ್ಚೆದೆಯ ಯುವಕರು ಕ್ರೀಡೆಯಲ್ಲಿ ಅವರ ಸಾಧನೆಗಳಿಂದ, ಸಶಸ್ತ್ರ ಪಡೆಗಳಲ್ಲಿನ ತಮ್ಮ ಸೇವೆಯಿಂದ ಹೀಗೆ ನಾನಾವಿಧದಲ್ಲಿ ನಿರಂತರವಾಗಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಅಥ್ಲೀಟ್ ಗಳಾದ ನೀವು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತೀರಿ ಎಂಬ ವಿಶ್ವಾಸ ನನಗಿದೆ”. ಎಂದು ಹೇಳಿದರು.

ಯುವಕರಲ್ಲಿ ತುಂಬಿರುವ ಕ್ರೀಡೆಯ ಪರಿವರ್ತಕ ಶಕ್ತಿಯನ್ನು ಎತ್ತಿ ಹಿಡಿದ ಪ್ರಧಾನಮಂತ್ರಿಯವರು, “ಕ್ರೀಡೆಯ ಸೌಂದರ್ಯವು ಗೆಲ್ಲುವ ಅಭ್ಯಾಸವನ್ನು ಬೆಳೆಸುವಲ್ಲಿ ಮಾತ್ರವಲ್ಲದೆ ಸ್ವಯಂ-ಸುಧಾರಣೆಯ ನಿರಂತರ ಅನ್ವೇಷಣೆಯನ್ನು ಕೂಡಾ ನೀಡುತ್ತದೆ. ಶ್ರೇಷ್ಠತೆಗೆ ಯಾವುದೇ ಮಿತಿಯಿಲ್ಲ ಎಂದು ಕ್ರೀಡೆಗಳು ನಮಗೆ ಕಲಿಸುತ್ತವೆ ಮತ್ತು ನಾವು ನಮ್ಮ ಎಲ್ಲಾ ಶಕ್ತಿಯಿಂದ ಶ್ರಮಿಸಬೇಕು. ಕ್ರೀಡೆಯ ದೊಡ್ಡ ಶಕ್ತಿಯೆಂದರೆ ಯುವಕರನ್ನು ವಿವಿಧ ದುಶ್ಚಟಗಳಿಂದ ದೂರವಿಡುವ ಸಾಮರ್ಥ್ಯ. ಕ್ರೀಡೆಗಳು ಸ್ಥಿತಿಸ್ಥಾಪಕತ್ವವನ್ನು ಹುಟ್ಟುಹಾಕುತ್ತವೆ, ಏಕಾಗ್ರತೆಯನ್ನು ಬೆಳೆಸುತ್ತವೆ ಮತ್ತು ನಮ್ಮನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತವೆ. ಆದ್ದರಿಂದ ವ್ಯಕ್ತಿಯ ವೈಯಕ್ತಿಕ ಬೆಳವಣಿಗೆಯಲ್ಲಿ ಕ್ರೀಡೆಯು ಮಹತ್ವದ ಪಾತ್ರ ವಹಿಸುತ್ತದೆ” ಎಂದು ಹೇಳಿದರು.

ಯುವಜನರ ಕಲ್ಯಾಣಕ್ಕೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ಈಗಿನ ಸರ್ಕಾರವು ರಾಜ್ಯ ಅಥವಾ ಕೇಂದ್ರ ಮಟ್ಟದಲ್ಲಿರಲಿ, ಯುವಜನರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತವೆ. ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಮೂಲಕ, ಆಯ್ಕೆ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಮೂಲಕ ಮತ್ತು ಸಂಪನ್ಮೂಲಗಳನ್ನು ಹಂಚಿಕೆ ಮಾಡುವ ಮೂಲಕ ಸರ್ಕಾರಗಳು ಭಾರತೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಬೆಂಬಲ ನೀಡುತ್ತಿವೆ” ಎಂದು ಹೇಳಿದರು.

ಕಳೆದ ದಶಕದಲ್ಲಿ ಕ್ರೀಡಾ ಬಜೆಟ್ ನಲ್ಲಿ ಆಗಿರುವ ಮೂರು ಪಟ್ಟು ಹೆಚ್ಚಳ, ಟಾಪ್ಸ್ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ನೂರಾರು ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಮತ್ತು ದೇಶಾದ್ಯಂತ ಹಲವಾರು ಕ್ರೀಡಾ ಕೇಂದ್ರಗಳ ಸ್ಥಾಪನೆ, ಮುಂತಾದವುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ವಿವರಿಸಿದರು. ಖೇಲೋ ಇಂಡಿಯಾ ಗೇಮ್ಸ್ ಅಡಿಯಲ್ಲಿ, 3,000 ಕ್ಕೂ ಹೆಚ್ಚು ಅಥ್ಲೀಟ್ಗಳಿಗೆ ತಿಂಗಳಿಗೆ 50,000 ರೂಪಾಯಿಗಳ ಸಹಾಯವನ್ನು ನೀಡಲಾಗುತ್ತಿದೆ. ತಳಮಟ್ಟದಲ್ಲಿ, ಲಕ್ಷಗಟ್ಟಲೆ ಕ್ರೀಡಾಪಟುಗಳು ಸುಮಾರು 1,000 ಖೇಲೋ ಇಂಡಿಯಾ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಇತ್ತೀಚಿನ ಏಷ್ಯನ್ ಗೇಮ್ಸ್ನಲ್ಲಿ 100 ಕ್ಕೂ ಹೆಚ್ಚು ಪದಕಗಳೊಂದಿಗೆ ಹೊಸ ದಾಖಲೆಯನ್ನು ನಿರ್ಮಿಸಿದ ಅಸಾಧಾರಣ ಪ್ರದರ್ಶನಕ್ಕಾಗಿ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್ನಲ್ಲಿ ಯುವಕರ ಕಡೆಗೆ ಹೆಚ್ಚು ಗಮನವನ್ನು ನೀಡಿರುವುದಾಗಿ ಪ್ರಧಾನಮಂತ್ರಿಯವರು ಹೇಳಿದರು. "ರಸ್ತೆಗಳು ಮತ್ತು ರೈಲ್ವೆಗಳಂತಹ ಆಧುನಿಕ ಮೂಲಸೌಕರ್ಯಗಳ ಮೇಲೆ 11 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯು ಯುವಜನರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. 40,000 ಅತಿ ವೇಗದ ವಂದೇ ಭಾರತ್ ಮಾದರಿಯ ಬೋಗಿಗಳ ಘೋಷಣೆ ಮತ್ತು ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಯಂತಹ ಉಪಕ್ರಮಗಳ ದೊಡ್ಡ ಫಲಾನುಭವಿಗಳು ನಮ್ಮ ಯುವಕರಾಗಿದ್ದಾರೆ ”ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳ ಮೂಲಕ ಯುವ ಸಬಲೀಕರಣದ ಮೇಲೆ ಕೇಂದ್ರ ಸರ್ಕಾರ ಹೊಂದಿರುವ ವಿಶೇಷ ಗಮನವನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು. ಮುಂದುವರಿಯುತ್ತಾ, “ಸ್ಟಾರ್ಟಪ್ ಗಳಿಗೆ ತೆರಿಗೆ ವಿನಾಯಿತಿಗಾಗಿ 1 ಲಕ್ಷ ಕೋಟಿ ರೂಪಾಯಿ ನಿಧಿಯನ್ನು ಮೀಸಲಿಡಲಾಗಿದೆ” ಎಂದು ಅವರು ನವೋದ್ಯಮಗಳ ಕುರಿತು ಪ್ರಸ್ತಾಪಿಸಿದರು.

ಇದಲ್ಲದೆ, ಅಂದಾಜು 13,000 ಕೋಟಿ ರೂಪಾಯಿಗಳ ರಸ್ತೆಗಳ ನಿರ್ಮಾಣ, ರೈಲ್ವೆ ನಿಲ್ದಾಣಗಳು, ಸೇತುವೆಗಳ ಅಭಿವೃದ್ಧಿ ಮತ್ತು 2 ಕೇಂದ್ರೀಯ ವಿದ್ಯಾಲಯ, ಪಾಸ್ ಪೋರ್ಟ್ ಕೇಂದ್ರ, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಶೈಕ್ಷಣಿಕ ಮತ್ತು ಐಟಿ ಕೇಂದ್ರಗಳ ಸ್ಥಾಪನೆ, ಈ ರೀತಿ ಕೈಗೊಂಡ ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಲ್ಲೇಖಿಸಿದರು. "ಈ ಉಪಕ್ರಮಗಳು ಪಾಲಿ ಲೋಕಸಭಾ ಕ್ಷೇತ್ರದ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಮತ್ತು ಅವರ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತವೆ" ಎಂದು ಅವರು ಹೇಳಿದರು.

ತಮ್ಮ ಭಾಷಣದ ಸಮಾರೋಪದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಜಸ್ಥಾನ ಮತ್ತು ಭಾರತದ ಪ್ರತಿಯೊಬ್ಬ ನಾಗರಿಕರನ್ನು, ಸಮಗ್ರ ಅಭಿವೃದ್ಧಿ ಉಪಕ್ರಮಗಳ ಮೂಲಕ ವಿಶೇಷವಾಗಿ ಯುವಕರನ್ನು ಸಬಲೀಕರಣಗೊಳಿಸುವ ಸರ್ಕಾರಗಳ ಬದ್ಧತೆಯನ್ನು ಪುನರುಚ್ಚರಿಸಿದರು. ಅಂತಿಮವಾಗಿ ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ, ಯುವಕರಲ್ಲಿ ದೃಢತೆ ಮತ್ತು ದುರದೃಷ್ಟ, ಸೋಲು ಅಥವಾ ಬದಲಾವಣೆಯಿಂದ ಚೇತರಿಸಿಕೊಳ್ಳುವ ಹಾಗೂ ಕಠಿಣ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳುವ ಸಾಮರ್ಥ್ಯದ ಮನೋಭಾವವನ್ನು ಬೆಳೆಸುವಲ್ಲಿ ಕ್ರೀಡೆಗಳ ಪಾತ್ರ ಹಾಗೂ ಮಹತ್ವವನ್ನು ಪ್ರಧಾನಮಂತ್ರಿಯವರು ವಿವರಿಸಿ ಹೇಳಿದರು. 

***



(Release ID: 2002486) Visitor Counter : 50