ಪ್ರಧಾನ ಮಂತ್ರಿಯವರ ಕಛೇರಿ

ಒಮಾನ್ ಸುಲ್ತಾನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಹೇಳಿಕೆ (ಡಿಸೆಂಬರ್ 16, 2023)

Posted On: 16 DEC 2023 6:27PM by PIB Bengaluru

ಗೌರವಾನ್ವಿತ ಗಣ್ಯರೆ,

ಎರಡೂ ದೇಶಗಳ ಪ್ರತಿನಿಧಿಗಳೆ,

ನಿಮ್ಮೆಲ್ಲರನ್ನು ಭಾರತಕ್ಕೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಭಾರತ ಮತ್ತು ಒಮಾನ್ ನಡುವಿನ ಸಂಬಂಧದಲ್ಲಿ ಇಂದು ಐತಿಹಾಸಿಕ ದಿನ. 26 ವರ್ಷಗಳ ನಂತರ ಇಂದು ಒಮಾನ್ ಸುಲ್ತಾನ್ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ. 140 ಕೋಟಿ ಭಾರತೀಯರ ಪರವಾಗಿ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವ  ಅವಕಾಶ ಪಡೆದಿದ್ದೇನೆ. ನಮ್ಮೆಲ್ಲಾ ದೇಶವಾಸಿಗಳ ಪರವಾಗಿ, ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೆ,

ಭಾರತ ಮತ್ತು ಒಮಾನ್ ಶತಮಾನಗಳ ಆಳವಾದ ಸ್ನೇಹದ ಅವಿನಾಭಾವ ಸಂಬಂಧ  ಹೊಂದಿವೆ. ಅರಬ್ಬೀ ಸಮುದ್ರದ ಒಂದು ತುದಿಯಲ್ಲಿ ಭಾರತ ಮತ್ತು ಇನ್ನೊಂದು ತುದಿಯಲ್ಲಿ ಓಮನ್ ನೆಲೆ ನಿಂತಿವೆ. ನಮ್ಮ ಪರಸ್ಪರ ಸಾಮೀಪ್ಯವು ಕೇವಲ ಭೌಗೋಳಿಕತೆಗೆ ಸೀಮಿತವಾಗದೆ, ಸಾವಿರಾರು ವರ್ಷಗಳಿಂದ ವ್ಯಾಪಿಸಿರುವ ನಮ್ಮ ವ್ಯಾಪಾರ, ನಮ್ಮ ಸಂಸ್ಕೃತಿ ಮತ್ತು ನಮ್ಮ ಸಾಮಾನ್ಯ ಆದ್ಯತೆಗಳಲ್ಲಿ ಪ್ರತಿಫಲಿಸುತ್ತಿದೆ. ಈ ಭವ್ಯ ಇತಿಹಾಸದ ಬಲದ ಮೇಲೆ, ನಾವು ಮುಂದೆ ಉಜ್ವಲ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ. ಇಂದು ನಾವು ಹೊಸ 'ಭಾರತ-ಒಮಾನ್ ಜಂಟಿ ದೃಷ್ಟಿ - ಭವಿಷ್ಯಕ್ಕಾಗಿ ಪಾಲುದಾರಿಕೆ' ಅಳವಡಿಸಿಕೊಳ್ಳುತ್ತಿದ್ದೇವೆ. ಈ ಜಂಟಿ ದೃಷ್ಟಿಯಲ್ಲಿ, 10 ವಿಭಿನ್ನ ಕ್ಷೇತ್ರಗಳ ಮೇಲೆ ಸಂಕೀರ್ಣವಾದ ಕ್ರಮ-ಬಿಂದುಗಳನ್ನು ಒಪ್ಪಿಕೊಳ್ಳಲಾಗಿದೆ. ಈ ಜಂಟಿ ದೃಷ್ಟಿ ನಮ್ಮ ಪಾಲುದಾರಿಕೆಗೆ ಹೊಸ ಮತ್ತು ಆಧುನಿಕ ರೂಪ ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ಎರಡು ಕಡೆಯ ನಡುವೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ(ಸಿಇಪಿಎ) ಕುರಿತು ಚರ್ಚೆಗಳು ನಡೆಯುತ್ತಿರುವುದು ನನಗೆ ಖುಷಿ ತಂದಿದೆ. ಈ 2 ಸುತ್ತಿನ ಮಾತುಕತೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದರಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ನಮ್ಮ ಆರ್ಥಿಕ ಸಹಕಾರಕ್ಕೆ ಹೊಸ ಅಧ್ಯಾಯ ಸೇರಿಸುವ ಈ ಒಪ್ಪಂದಕ್ಕೆ ನಾವು ಶೀಘ್ರದಲ್ಲೇ ಸಹಿ ಹಾಕಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.

ಜಾಗತಿಕ ಮಟ್ಟದಲ್ಲೂ ಭಾರತ ಮತ್ತು ಒಮಾನ್ ನಿಕಟ ಸಮನ್ವಯದಿಂದ ಮುನ್ನಡೆಯುತ್ತಿವೆ. ಭಾರತದ ಜಿ-20 ಅಧ್ಯಕ್ಷ ಸ್ಥಾನದ ಯಶಸ್ಸಿಗೆ ಅತಿಥಿ ರಾಷ್ಟ್ರವಾಗಿ ಒಮಾನ್ ಅಮೂಲ್ಯ ಕೊಡುಗೆ ನೀಡಿದೆ. ಭಾರತೀಯ ಮೂಲದ ಹೆಚ್ಚಿನ ಸಂಖ್ಯೆಯ ಜನರು ಓಮನ್ ಅನ್ನು ತಮ್ಮ 2ನೇ ಮನೆ ಎಂದು ಪರಿಗಣಿಸಿದ್ದಾರೆ. ಈ ಜನರು ನಮ್ಮ ನಿಕಟ ಸಂಬಂಧಗಳು ಮತ್ತು ನಮ್ಮ ಸ್ನೇಹದ ನೇರ ಉದಾಹರಣೆಗಳಾಗಿದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ನಾನು ವೈಯಕ್ತಿಕವಾಗಿ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.ಇಂದಿನ ಸಭೆಯು ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಬಹು ಆಯಾಮದ ಸಹಕಾರವನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ.

ಗೌರವಾನ್ವಿತ ಗಣ್ಯರೆ,

ಮತ್ತೊಮ್ಮೆ ನಿಮಗೆ ಭಾರತಕ್ಕೆ ಸ್ವಾಗತ.

ಕಳೆದ ತಿಂಗಳು, ಒಮನ್ 2024ರ ಟಿ-20 ವಿಶ್ವಕಪ್‌ ಕ್ರಿಕೆಟ್ ಗೆ ಅರ್ಹತೆ ಪಡೆದಿತ್ತು. ಇದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ನಿಮಗೆ ಶುಭ ಹಾರೈಸುತ್ತೇನೆ.

ಈಗ ನೀವು ಹೇಳಿಕೆ ಬಿಡುಗಡೆ ಮಾಡಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

***

 



(Release ID: 1987587) Visitor Counter : 53