ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಪಿಎಂ-ದಕ್ಷ್ ಯೋಜನೆ ಅಡಿ 1,69,300 ಪ್ರಶಿಕ್ಷಣಾರ್ಥಿಗಳಿಗೆ 2025ರ ವರೆಗೆ ತರಬೇತಿ ನೀಡಲು 286.42 ಕೋಟಿ ರೂ. ಖರ್ಚು ಮಾಡುವ ಸಾಧ್ಯತೆ ಇದೆ


28 ಸರ್ಕಾರಿ ಮತ್ತು 84 ಖಾಸಗಿ ತರಬೇತಿ ಸಂಸ್ಥೆಗಳನ್ನು ಈ ತರಬೇತಿಗೆ ಆಯ್ಕೆ ಮಾಡಲಾಗಿದೆ

ತರಬೇತಿಗೆ ಆಯ್ಕೆಯಾದ  112 ಸಂಸ್ಥೆಗಳ 95,000ಕ್ಕೂ ಹೆಚ್ಚಿನ ಪ್ರಶಿಕ್ಷಣಾರ್ಥಿಗಳಿಗೆ  ತರಬೇತಿ ಗುರಿ ವಿತರಿಸಲಾಗಿದೆ

247 ವಿವಿಧ ಕೋರ್ಸ್‌ಗಳಿಗೆ 821 ಕೇಂದ್ರಗಳಲ್ಲಿ ತರಬೇತಿ ಪಡೆಯಲು ಪಿಎಂ-ದಕ್ಷ್ ಪೋರ್ಟಲ್‌ನಲ್ಲಿ 55,000ಕ್ಕೂ ಹೆಚ್ಚು ಅರ್ಜಿದಾರರು ಅರ್ಜಿ ಸಲ್ಲಿಸಿದ್ದಾರೆ

Posted On: 08 DEC 2023 11:09AM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಪ್ರಧಾನ ಮಂತ್ರಿ ದಕ್ಷತಾ ಔರ್ ಕುಶಲತಾ ಸಂಪನ್ನ ಹಿತಗ್ರಹಿ(ಪಿಎಂ-ದಕ್ಷ್)ಯು ಕೇಂದ್ರ ವಲಯದ ಯೋಜನೆಯಾಗಿದ್ದು, ಇದನ್ನು 2020-21ರಲ್ಲಿ ಪ್ರಾರಂಭಿಸಲಾಯಿತು. ಯೋಜನೆಯ ಮುಖ್ಯ ಉದ್ದೇಶವೆಂದರೆ, ಎಸ್‌ಸಿ, ಒಬಿಸಿ, ಇಬಿಸಿ, ಡಿಎನ್‌ಟಿ, ತ್ಯಾಜ್ಯ ಆಯುವವರು,  ಸಫಾಯಿ ಕರ್ಮಚಾರಿಗಳು ಇತ್ಯಾದಿ ಗುರಿ ಗುಂಪುಗಳ ಸಾಮರ್ಥ್ಯ ಮಟ್ಟ ಹೆಚ್ಚಿಸುವುದು ಮತ್ತು ಅವರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ-ಉದ್ಯೋಗ ಮತ್ತು ಕೂಲಿ-ಉದ್ಯೋಗ ಎರಡರಲ್ಲೂ ಉದ್ಯೋಗಿಯಾಗುವಂತೆ ಮಾಡುವುದಾಗಿದೆ.

2020-21ರಲ್ಲಿ ಸುಮಾರು 32,097 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಅವರಲ್ಲಿ 24,652 ಪ್ರಶಿಕ್ಷಣಾರ್ಥಿಗಳನ್ನು ಉದ್ಯೋಗ ನೀಡಲಾಗಿದೆ. ಈ ತರಬೇತಿಗೆ ತಗುಲಿರುವ ಒಟ್ಟು ವೆಚ್ಚ 44.79 ಕೋಟಿ ರೂ. ಆಗಿದೆ. ಅದೇ ರೀತಿ, 2021-22ರಲ್ಲಿ 42,002 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಅದರಲ್ಲಿ 31,033 ಪ್ರಶಿಕ್ಷಣಾರ್ಥಿಗಳಿಗೆ ಉದ್ಯೋಗ ಒದಗಿಸಲಾಗಿದೆ. ಈ ತರಬೇತಿಗಳಿಗೆ 68.22 ಕೋಟಿ ರೂ. ಖರ್ಚು ಮಾಡಲಾಗಿದೆ. 2022-23ರಲ್ಲಿ 33,021 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಅದರಲ್ಲಿ 21,552 ಪ್ರಶಿಕ್ಷಣಾರ್ಥಿಗಳಿಗೆ ಉದ್ಯೋಗಕ್ಕೆ ನೇಮಕ ಮಾಡಲಾಗಿದೆ. ಈ ತರಬೇತಿಗಳಿಗೆ 14.94 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ರೀತಿ, 2020-21ರಿಂದ 2022-23ರ ವರೆಗೆ, ಒಟ್ಟು 1,07,120 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಅವರಲ್ಲಿ 77,237 ತರಬೇತಿದಾರರನ್ನು ಲಾಭದಾಯಕ ಉದ್ಯೋಗ ನೀಡಲಾಗಿದೆ. ಈ ತರಬೇತಿಗಳ ಒಟ್ಟು ಮೊತ್ತ 127.95 ಕೋಟಿ ರೂ. ಆಗಿದೆ.

ಅಂತೆಯೇ, 2023-24ರಿಂದ 2025-26ರ ವರೆಗೆ 1,69,300 ಪ್ರಶಿಕ್ಷಣಾರ್ಥಿಗಳಿಗೆ (2023, 2024 ಮತ್ತು 2025ರಲ್ಲಿ ಕ್ರಮವಾಗಿ 53,900, 56,450 ಮತ್ತು 58,950 ತರಬೇತಿದಾರರನ್ನು ಒಳಗೊಂಡಂತೆ) ತರಬೇತಿ ನೀಡಲು ಯೋಜಿಸಲಾಗಿದೆ. ಈ ತರಬೇತಿಗಳಿಗೆ ಒಟ್ಟು 286.42 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ.

2023-24ರ ಅವಧಿಯಲ್ಲಿ 28 ಸರ್ಕಾರಿ ಮತ್ತು 84 ಖಾಸಗಿ ತರಬೇತಿ ಸಂಸ್ಥೆಗಳನ್ನು ಯೋಜನೆಯ ಅನುಷ್ಠಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ತರಬೇತಿಗೆ ಆಯ್ಕೆಯಾದ 112 ತರಬೇತಿ ಸಂಸ್ಥೆಗಳ 95,000ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಒದಗಿಸುವ ಗುರಿ ನೀಡಲಾಗಿದೆ.

ವಾರ್ಷಿಕ ಆಧಾರದ ಮೇಲೆ ಸಂಸ್ಥೆಗಳನ್ನು ತರಬೇತಿಗೆ ಆಯ್ಕೆ ಮಾಡುವ ಅಭ್ಯಾಸವನ್ನು ಸ್ಥಗಿತಗೊಳಿಸಲಾಗಿದೆ. ಈಗ ಸಂಸ್ಥೆಗಳು ತೃಪ್ತಿದಾಯಕ ಭೌತಿಕ ಮತ್ತು ಆರ್ಥಿಕ ಪ್ರಗತಿಗೆ ಒಳಪಟ್ಟು ಕನಿಷ್ಠ 3 ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಯಾವುದೇ ಅಕ್ರಮಗಳಲ್ಲಿ ಸಿಲುಕಿದ ಸಂಸ್ಥೆಗಳನ್ನು ಆಯ್ಕೆಯಿಂದ ಹೊರಗಿಡಲಾಗಿದೆ.

ಮೊದಲ ಬಾರಿಗೆ ರಾಜ್ಯಗಳು, ಜಿಲ್ಲೆಗಳು, ಉದ್ಯೋಗದ ಪಾತ್ರಗಳು ಇತ್ಯಾದಿ ಹಂಚಿಕೆ ಮಾಡುವಾಗ, ಪಾರದರ್ಶಕ ಪ್ರಕ್ರಿಯೆ ಅಳವಡಿಸಿಕೊಳ್ಳಲಾಯಿತು, ಇದರಿಂದಾಗಿ 82 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸೇರಿದಂತೆ 411 ಜಿಲ್ಲೆಗಳನ್ನು ಅನುಷ್ಠಾನಕ್ಕೆ ಆಯ್ಕೆ ಮಾಡಲಾಗಿದೆ.

ಇದಲ್ಲದೆ, ಈ ತರಬೇತಿ ಸಂಸ್ಥೆಗಳಿಗೆ ಇತ್ತೀಚಿನ ಉದ್ಯೋಗ ಪಾತ್ರಗಳನ್ನು ಹಂಚಲಾಗಿದೆ.

ಅಸ್ತಿತ್ವದಲ್ಲಿರುವ 38 ತರಬೇತಿ ಕ್ಷೇತ್ರಗಳಲ್ಲಿ 32 ವಲಯಗಳು ಒಳಗೊಂಡಿದ್ದು, ಇದು ಅಪೇಕ್ಷಿತ ತರಬೇತಿ ಅಭ್ಯರ್ಥಿಗಳಿಗೆ ತರಬೇತಿ ಅವಕಾಶಗಳನ್ನು ವೈವಿಧ್ಯಗೊಳಿಸಲು ಮತ್ತು ಅವರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವ ಸಾಧ್ಯತೆಯಿದೆ.

247 ವಿವಿಧ ಕೋರ್ಸ್‌ಗಳಲ್ಲಿ 821 ಕೇಂದ್ರಗಳಲ್ಲಿ ತರಬೇತಿ ಪಡೆಯಲು 55,000 ಕ್ಕೂ ಹೆಚ್ಚು ಅರ್ಜಿದಾರರು ಈಗಾಗಲೇ ಪಿಎಂ-ದಕ್ಷ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

55,000ಕ್ಕೂ ಹೆಚ್ಚಿನ ಅರ್ಜಿದಾರರ ಪೈಕಿ 37,000ಕ್ಕೂ ಹೆಚ್ಚು ಅರ್ಜಿದಾರರು ಮಹಿಳೆಯರಾಗಿದ್ದು, ತರಬೇತಿಗೆ ಆಯ್ಕೆಯಾದ ಪ್ರಮುಖ ಗುರಿ ಗುಂಪುಗಳಲ್ಲಿ ಒಬ್ಬರಾಗಿದ್ದಾರೆ. ತರಬೇತಿಗಾಗಿ 574 ಬ್ಯಾಚ್‌ಗಳನ್ನು ಈಗಾಗಲೇ ರಚಿಸಲಾಗಿದೆ, ಅವರು ತರಬೇತಿ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. 2023ರ ಡಿಸೆಂಬರ್ ತಿಂಗಳಿನಲ್ಲೇ ಎಲ್ಲಾ ಮಂಜೂರಾದ ಕೇಂದ್ರಗಳಲ್ಲಿ ತರಬೇತಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಪಿಎಂ-ದಕ್ಷ್ ಯೋಜನೆ

ಯೋಜನೆ: ಪ್ರಧಾನ ಮಂತ್ರಿ ದಕ್ಷತಾ ಔರ್ ಕುಶಲತಾ ಸಂಪನ್ನ ಹಿತಾಗ್ರಹಿ(ಪಿಎಂ-ದಕ್ಷ್)ಯು ಕೇಂದ್ರ ವಲಯದ ಯೋಜನೆಯಾಗಿದ್ದು, 2020-21ರ ಅವಧಿಯಲ್ಲಿ ಪ್ರಾರಂಭಿಸಲಾಗಿದೆ.

ಯೋಜನೆಯ ಉದ್ದೇಶ: ಉದ್ದೇಶಿತ ಗುಂಪುಗಳ ಸಾಮರ್ಥ್ಯ ಮಟ್ಟ ಹೆಚ್ಚಿಸಿ ಅವರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ-ಉದ್ಯೋಗ ಮತ್ತು ಕೂಲಿ-ಉದ್ಯೋಗ ಎರಡರಲ್ಲೂ ಉದ್ಯೋಗಿಯಾಗುವಂತೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಟಾರ್ಗೆಟ್ ಗ್ರೂಪ್: ಎಸ್‌ಸಿ, ಒಬಿಸಿ, ಇಬಿಸಿ, ಡಿಎನ್‌ಟಿ, ತ್ಯಾಜ್ಯ ಆಯುವವರು ಹಾಗೂ ಸಫಾಯಿ ಕರ್ಮಚಾರಿಗಳು ಇತ್ಯಾದಿ.

ವಯಸ್ಸಿನ ಮಾನದಂಡ: 18-45 ವರ್ಷಗಳು

ಆದಾಯ ಮಾನದಂಡಗಳು: ಎಸ್‌ಸಿ, ಸಫಾಯಿ ಕರ್ಮಚಾರಿಗಳು, ತ್ಯಾಜ್ಯ ಆಯುವವರು ಮತ್ತು ಡಿಎನ್‌ಟಿ ಸೇರಿದಂತೆ, ಆದಾಯ ಮಿತಿ ಇಲ್ಲ.

ಒಬಿಸಿಗಳು: ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಕಡಿಮೆ.

ಇಬಿಸಿಗಳು: ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂ.ಗಿಂತ ಕಡಿಮೆ.

ಯೋಜನೆಯು 18-45 ವರ್ಷ ವಯಸ್ಸಿನ ಭಾರತೀಯ ಪ್ರಜೆಗಳಿಗೆ ಮಾತ್ರ ಸೀಮಿತ.

ಎಸ್‌ಸಿ, ಸಫಾಯಿ ಕರ್ಮಚಾರಿಗಳು, ತ್ಯಾಜ್ಯ ಆಯುವವರು ಮತ್ತು ಡಿಎನ್‌ಟಿ ಸೇರಿದಂತೆ ವರ್ಗಗಳ ಪ್ರಶಿಕ್ಷಣಾರ್ಥಿಗಳಿಗೆ ಯಾವುದೇ ಆದಾಯದ ಮಿತಿ ಇಲ್ಲ, ಒಬಿಸಿಗಳಿಗೆ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷ ರೂ.ಗೂಂತ ಕಡಿಮೆಯಿರಬೇಕು. ಇಬಿಸಿಗಳ ವಾರ್ಷಿಕ ಕುಟುಂಬ ಆದಾಯ ವಾರ್ಷಿಕ 1 ಲಕ್ಷ ರೂ.ಗಿಂತ ಕಡಿಮೆಯಿರಬೇಕು.

 

ಪಿಎಂ-ದಕ್ಷ್ ಯೋಜನೆಯಡಿ ಗುರಿ ಗುಂಪುಗಳಿಗೆ ಕೆಳಗಿನ ಉಪವಿಭಾಗಗಳಲ್ಲಿ ವಿಶಾಲವಾಗಿ ತರಬೇತಿ ನೀಡಲಾಗಿದೆ:

  1.  ಕೌಶಲ್ಯ ಮೇಲ್ದರ್ಜೆಗೆ, ಮರುಕೌಶಲ್ಯ (35ರಿಂದ 60 ಗಂಟೆಗಳು - 5 ದಿನಗಳಿಂದ 35 ದಿನಗಳು): 3000 ರೂ.ನಿಂದ 8000 ರೂ.
  2. ಅಲ್ಪಾವಧಿ ತರಬೇತಿ (300 ಗಂಟೆಗಳು - 3 ತಿಂಗಳು): 22,000 ರೂ.
  3. ವಾಣಿಜ್ಯೋದ್ಯಮ ಅಭಿವೃದ್ಧಿ ಕಾರ್ಯಕ್ರಮ(90 ಗಂಟೆಗಳು - 15 ದಿನಗಳು): 7000 ರೂ.
  4.  ದೀರ್ಘಾವಧಿಯ ತರಬೇತಿ (650 ಗಂಟೆಗಳು - 7 ತಿಂಗಳು): 45,000 ರೂ.

 

ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ಹೊರಡಿಸಿದ ಸಾಮಾನ್ಯ ಮಾನದಂಡಗಳ ಪ್ರಕಾರ, ತರಬೇತಿಯ ವೆಚ್ಚವು ಕೋರ್ಸ್‌ನ ಅವಧಿಗೆ ಅನುಗುಣವಾಗಿ ಬದಲಾಗುತ್ತದೆ. ತ್ಯಾಜ್ಯ ಆಯುವವರು, ಸಫಾಯಿ ಕರ್ಮಚಾರಿಗಳಿಗೆ ಉನ್ನತ ಕೌಶಲ್ಯವನ್ನು 35 ಗಂಟೆಗಳು - 5 ದಿನಗಳ ಕಾಲ ನೀಡಲಾಗುತ್ತದೆ. ಪ್ರತಿ ಅಭ್ಯರ್ಥಿಗೆ ಸರಾಸರಿ ವೆಚ್ಚ 3000 ರೂ.

ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಯ ವೆಚ್ಚ: ಉಚಿತ

ಸ್ಟೈಪೆಂಡ್: ಎಸ್ಸಿ ಮತ್ತು ಸಫಾಯಿ ಕರ್ಮಚಾರಿ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳು ವೇತನ ಪರಿಹಾರ 1,500 ರೂ. ನೀಡಲಾಗುತ್ತದೆ. ಒಬಿಸಿ, ಇಬಿಸಿ, ಡಿಎನ್ ಟಿ ಅಭ್ಯರ್ಥಿಗಳಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ ಕೋರ್ಸ್ ಗಳಿಗೆ ಪ್ರತಿ ತಿಂಗಳು 1,000 ರೂ. ನೀಡಲಾಗುತ್ತದೆ.

ಎಸ್ಸಿ, ಒಬಿಸಿ, ಇಬಿಸಿ, ಡಿಎನ್ ಟಿ ಅಭ್ಯರ್ಥಿಗಳಿಗೆ ಕೌಶಲ್ಯ ಮೇಲ್ದರ್ಜೆಗೆ ಮತ್ತು ಮರುಕೌಶಲ್ಯ  ಕಾರ್ಯಕ್ರಮಕ್ಕಾಗಿ 2,500 ರೂ. ವೇತನ ಪರಿಹಾರ ನೀಡಲಾಗುತ್ತದೆ. ಸಫಾಯಿ ಕರ್ಮಚಾರಿ ಅಭ್ಯರ್ಥಿಗಳಿಗೆ ಉನ್ನತ ಕೌಶಲ್ಯ ಕಾರ್ಯಕ್ರಮಕ್ಕಾಗಿ ಪ್ರತಿ ಅಭ್ಯರ್ಥಿಗೆ 500 ರೂ.  ವೇತನ ಪರಿಹಾರ ನೀಡಲಾಗುತ್ತದೆ.

 

 

****

 



(Release ID: 1984004) Visitor Counter : 77