ಗೃಹ ವ್ಯವಹಾರಗಳ ಸಚಿವಾಲಯ

ಜಮ್ಮು-ಕಾಶ್ಮೀರ ಮೀಸಲಾತಿ (ತಿದ್ದುಪಡಿ) ವಿಧೇಯಕ-2023, ಜಮ್ಮು-ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ವಿಧೇಯಕ-2023ರ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಉತ್ತರ; ನಂತರ ಈ ವಿಧೇಯಕಗಳಿಗೆ ಲೋಕಸಭೆಯಲ್ಲಿ ಅಂಗೀಕಾರ 


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ತಂದ ನೂರಾರು ಪ್ರಗತಿಪರ ಬದಲಾವಣೆಗಳ ಸರಪಳಿಗೆ ಈ ಮಸೂದೆಗಳು ಮತ್ತೊಂದು ಮುತ್ತಾಗಿ ಸೇರಿವೆ
 
70 ವರ್ಷಗಳಿಂದ ಅನ್ಯಾಯ, ಅವಮಾನ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಈ ಮಸೂದೆಗಳು ಹಕ್ಕು ಮತ್ತು ನ್ಯಾಯ ಒದಗಿಸಲಿವೆ.
 
ನಿರಾಶ್ರಿತ ಕಾಶ್ಮೀರಿಗಳಿಗೆ ಹಕ್ಕು ಮತ್ತು ಪ್ರಾತಿನಿಧ್ಯ ನೀಡುವ ವಿಧೇಯಕ ಇದಾಗಿದೆ
 
ನಿರಾಶ್ರಿತ ಕಾಶ್ಮೀರಿಗಳಿಗೆ ಮೀಸಲಾತಿ ನೀಡುವ ಮೂಲಕ, ಅವರು ಕಾಶ್ಮೀರ ವಿಧಾನಸಭೆಯಲ್ಲಿ ಧ್ವನಿ ಎತ್ತಲಿದ್ದಾರೆ, ಸ್ಥಳಾಂತರದ ಪರಿಸ್ಥಿತಿ ಮತ್ತೆ ಉದ್ಭವಿಸಿದರೆ, ಅವರೇ ಅದನ್ನು ತಡೆಯಲಿದ್ದಾರೆ
 
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅನೇಕ ವರ್ಷಗಳ ಕಾಲ ಮಾಡಿದ ತಪ್ಪುಗಳ ಭಾರವನ್ನು ಕಾಶ್ಮೀರ ಮತ್ತು ಇಡೀ ದೇಶ ಅನುಭವಿಸಬೇಕಾಯಿತು
 
ಮೊದಲು ಮಾಡಿದ ತಪ್ಪೇನೆಂದರೆ, ನಮ್ಮ ಸೈನ್ಯವು ಪಂಜಾಬ್ ತಲುಪಿದ ತಕ್ಷಣ ಕದನ ವಿರಾಮ ಘೋಷಿಸಲಾಯಿತು, ಆಗ ಪಾಕ್ ಆಕ್ರಮಿತ ಕಾಶ್ಮೀರ ಹುಟ್ಟಿಕೊಂಡಿತು, ಕದನ ವಿರಾಮ 3 ದಿನ ತಡವಾಗಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರ ಇಂದು ಭಾರತದ ಭಾಗವಾಗುತ್ತಿತ್ತು.
 
2ನೇ ದೊಡ್ಡ ತಪ್ಪು ಅವರು ವಿಶ್ವಸಂಸ್ಥೆಗೆ ಈ ಸಮಸ್ಯೆಯನ್ನು ಕೊಂಡೊಯ್ದದ್ದು
 
ಜಮ್ಮು-ಕಾಶ್ಮೀರದಲ್ಲಿ 45,000 ಜನರ ಸಾವಿಗೆ 370ನೇ ವಿಧಿ ಕಾರಣವಾಗಿದೆ, ಅದನ್ನು ಪ್ರಧಾನಿ ಮೋದಿ ರದ್ದುಗೊಳಿಸಿದರು.

370ನೇ ವಿಧಿಯನ್ನು ತೆಗೆದುಹಾಕುವುದರೊಂದಿಗೆ, ಪ್ರತ್ಯೇಕತಾವಾದವು ಕೊನೆಗೊಂಡಿದೆ, ಭಯೋತ್ಪಾದನೆಯು ಗಮನಾರ್ಹವಾಗಿ ಕಡಿಮೆಯಾಗಿದೆ
 
ಸ್ಥಳಾಂತರಗೊಂಡ ಜನರು ತಮ್ಮ ದೇಶದ ಇತರ ಭಾಗಗಳಲ್ಲಿ ನಿರಾಶ್ರಿತರಾಗಿ ಬದುಕಬೇಕಾಯಿತು, 46,631 ಕುಟುಂಬಗಳ ಸುಮಾರು 1,57,967 ಜನರು ತಮ್ಮ ಸ್ವಂತ ದೇಶದಲ್ಲೇ ಸ್ಥಳಾಂತರಗೊಂಡರು.
 
1947ರಲ್ಲಿ, 31,779 ಕುಟುಂಬಗಳು ಪಾಕ್ ಆಕ್ರಮಿತ ಕಾಶ್ಮೀರದಿಂದ ಜಮ್ಮು-ಕಾಶ್ಮೀರಕ್ಕೆ ಸ್ಥಳಾಂತರವಾದವು, 1965 ಮತ್ತು 1971ರ ಯುದ್ಧಗಳ ನಂತರ, 10,065 ಕುಟುಂಬಗಳು ಸ್ಥಳಾಂತರವಾದವು
 
ನೊಂದ ಕುಟುಂಬಗಳ ಕಣ್ಣೀರನ್ನು ಸಂಪೂರ್ಣ ಸಹಾನುಭೂತಿಯಿಂದ ಒರೆಸಿದ್ದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು
 
ಜಮ್ಮು-ಕಾಶ್ಮೀರ ಇತಿಹಾಸದಲ್ಲೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡಗಳಿಗೆ ಮತ್ತು ಪರಿಶಿಷ್ಟ ಜಾತಿಗಳಿಗೆ  9 ಸ್ಥಾನಗಳನ್ನು ಮೀಸಲಿಡಲಾಗಿದೆ
 
ಈ ಹಿಂದೆ ಜಮ್ಮುವಿನಲ್ಲಿ 37 ಸ್ಥಾನಗಳಿದ್ದು ಈಗ 43 ಆಗಿವೆ. ಮೊದಲು ಕಾಶ್ಮೀರದಲ್ಲಿ 46 ಸ್ಥಾನಗಳು ಇದ್ದವು, ಈಗ 47 ಆಗಿವೆ. 24 ಸ್ಥಾನಗಳನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೀಸಲಿಡಲಾಗಿದೆ ಏಕೆಂದರೆ ಪಿಒಕೆ ನಮ್ಮದು.
 
ಮೊದಲು ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 107 ಸ್ಥಾನಗಳಿದ್ದವು, ಈಗ 114 ಸ್ಥಾನಗಳಿವೆ. ಮೊದಲು ವಿಧಾನಸಭೆಯಲ್ಲಿ 2 ನಾಮನಿರ್ದೇಶಿತ ಸದಸ್ಯರಿದ್ದರು, ಈಗ ಅವರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ

Posted On: 06 DEC 2023 7:53PM by PIB Bengaluru

ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ) ಮಸೂದೆ-2023, ಜಮ್ಮು-ಕಾಶ್ಮೀರ ಮರುಸಂಘಟನೆ(ತಿದ್ದುಪಡಿ) ಮಸೂದೆ-2023ರ ಮೇಲೆ ಲೋಕಸಭೆಯಲ್ಲಿಂದು ನಡೆದ  ಚರ್ಚೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಉತ್ತರ ನೀಡಿದರು. ಚರ್ಚೆಯ ನಂತರ, ಲೋಕಸಭೆಯು ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ) ಮಸೂದೆ-2023 ಮತ್ತು ಜಮ್ಮು-ಕಾಶ್ಮೀರ ಮರುಸಂಘಟನೆ(ತಿದ್ದುಪಡಿ) ಮಸೂದೆ-2023 ಅನ್ನು ಅಂಗೀಕರಿಸಿತು.

ಲೋಕಸಭೆಯಲ್ಲಿ ಶ್ರೀ ಅಮಿತ್ ಶಾ ಮಾತನಾಡಿ, ಈ ಮಸೂದೆ ಅಥವಾ ವಿಧೇಯಕಗಳ ಬಗ್ಗೆ ಒಟ್ಟು 29 ಸ್ಪೀಕರ್‌ಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಆದರೆ ಎಲ್ಲರೂ ಮಸೂದೆಯ ಉದ್ದೇಶಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತಂದ ನೂರಾರು ಪ್ರಗತಿಪರ ಬದಲಾವಣೆಗಳ ಸರಮಾಲೆಗೆ ಈ ಮಸೂದೆಗಳು ಮತ್ತೊಂದು ಹೊಸ ಮುತ್ತು ಪೋಣಿಸಿದಂತಾಗಿದೆ. 70 ವರ್ಷಗಳಿಂದ ಅನ್ಯಾಯ, ಅವಮಾನ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಈ ಮಸೂದೆಗಳು ಹಕ್ಕು ಮತ್ತು ನ್ಯಾಯ ಒದಗಿಸಲಿವೆ. ರಾಜಕೀಯದಲ್ಲಿ ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು, ಒಳ್ಳೆ ಮಾತುಗಳನ್ನಾಡಿ ವೋಟ್ ಗಿಟ್ಟಿಸಿಕೊಳ್ಳುವ ಸಾಧನ ಎಂದುಕೊಂಡವರಿಗೆ ಇದರ ಹೆಸರು ಅರ್ಥವಾಗುವುದಿಲ್ಲ. ಪ್ರಧಾ ನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂತಹ ನಾಯಕರಾಗಿದ್ದು, ಬಡ ಕುಟುಂಬದಲ್ಲಿ ಹುಟ್ಟಿ ಸ್ವತಃ ತಾವೇ ದೇಶದ ಪ್ರಧಾನಿ ಆಗಿದ್ದು, ಹಿಂದುಳಿದವರ ಹಾಗೂ ಬಡವರ ನೋವು ಅವರಿಗೆ ಗೊತ್ತಿದೆ. ಅಂಥವರನ್ನು ಉತ್ತೇಜಿಸುವ ವಿಷಯ ಬಂದಾಗ ಸಹಾಯಕ್ಕಿಂತ ಗೌರವ ಮುಖ್ಯ ಎಂದರು.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯ ಯುಗ 1980ರ ದಶಕದ ನಂತರ ಪ್ರಾರಂಭವಾಯಿತು. ತಲೆ ತಲೆಮಾರುಗಳಿಂದ ಅಲ್ಲಿ ವಾಸಿಸುತ್ತಿದ್ದ ಜನರು ಸಂಪೂರ್ಣವಾಗಿ ಅಲ್ಲಿಂದ ಸ್ಥಳಾಂತರವಾದರು, ಆದರೆ ಯಾರು ಸಹ ಅವರ ಬಗ್ಗೆ ಕಾಳಜಿ ವಹಿಸಲಿಲ್ಲ. ಇದನ್ನೆಲ್ಲ ತಡೆಯುವ ಹೊಣೆ ಹೊತ್ತವರು ಇಂಗ್ಲೆಂಡಿನಲ್ಲಿ ರಜೆ ಕಳೆಯುತ್ತಿದ್ದರು. ವೋಟ್ ಬ್ಯಾಂಕ್ ರಾಜಕಾರಣ ಮಾಡದೆ, ಕರಾರುವಾಕ್ಕಾದ ಕ್ರಮಗಳನ್ನು ಕೈಗೊಂಡು ಭಯೋತ್ಪಾದನೆಯನ್ನು ಆರಂಭದಲ್ಲಿಯೇ ಕೊನೆಗೊಳಿಸಿದ್ದರೆ ಇಂದು ಈ ಮಸೂದೆ ತರುವ ಅಗತ್ಯವೇ ಇರುತ್ತಿರಲಿಲ್ಲ. ಸ್ಥಳಾಂತರವಾದ ಜನರು ತಮ್ಮ ದೇಶದ ಇತರ ಭಾಗಗಳಲ್ಲಿ ನಿರಾಶ್ರಿತರಾಗಿ ಬದುಕಬೇಕಾಯಿತು. ಪ್ರಸ್ತುತ ಅಂಕಿಅಂಶಗಳ ಪ್ರಕಾರ, ಸುಮಾರು 46,631 ಕುಟುಂಬಗಳ 1,57,967 ಜನರು ತಮ್ಮದೇ  ದೇಶದಲ್ಲಿ ಸ್ಥಳಾಂತರಗೊಂಡಿದ್ದಾರೆ. ಈ ಮಸೂದೆ ಅವರೆಲ್ಲರಿಗೂ ಹಕ್ಕು ಮತ್ತು ಪ್ರಾತಿನಿಧ್ಯ ನೀಡುವ ವಿಧೇಯಕವಾಗಿದೆ ಎಂದು ಶಾ ಹೇಳಿದರು.

 1947ರಲ್ಲಿ 31,779 ಕುಟುಂಬಗಳು ಪಾಕ್ ಆಕ್ರಮಿತ ಕಾಶ್ಮೀರದಿಂದ ಜಮ್ಮು-ಕಾಶ್ಮೀರಕ್ಕೆ ಸ್ಥಳಾಂತರವಾದವು. ಈ ಪೈಕಿ 26,319 ಕುಟುಂಬಗಳು ಜಮ್ಮು-ಕಾಶ್ಮೀರದಲ್ಲಿ ವಾಸಿಸಲು ಪ್ರಾರಂಭಿಸಿದವು, 5,460 ಕುಟುಂಬಗಳು ದೇಶದ ಇತರ ಭಾಗಗಳಲ್ಲಿ ವಾಸಿಸಲು ಪ್ರಾರಂಭಿಸಿದವು. 1965 ಮತ್ತು 1971ರ ಯುದ್ಧಗಳ ನಂತರ 10,065 ಕುಟುಂಬಗಳು ನಿರಾಶ್ರಿತರಾಗಿದ್ದಾರೆ, ಒಟ್ಟಾರೆ 41,844 ಕುಟುಂಬಗಳು ಸ್ಥಳಾಂತರವಾಗಿವೆ. 2019 ಆಗಸ್ಟ್ 5-6ರಂದು ಪ್ರಧಾನಿ ಮೋದಿ ಅವರು ಹಿಂದಿನ ದಶಕಗಳಲ್ಲಿ ಗಮನ ಹರಿಸದ ಈ ಸ್ಥಳಾಂತರಗೊಂಡ ಜನರ ಧ್ವನಿಯನ್ನು ಆಲಿಸಿದರು. ಅವರಿಗೆ ಅವರ ಹಕ್ಕುಗಳನ್ನು ನೀಡಿದರು. 2019 ಆಗಸ್ಟ್ 5 ಮತ್ತು 6ರಂದು ಅಂಗೀಕರಿಸಿದ ಮಸೂದೆಯ ಭಾಗವಾಗಿದೆ ನ್ಯಾಯಿಕ ಕ್ಷೇತ್ರ ಪುನರವಿಂಗಡಣೆ ಅಥವಾ ಜುಡಿಶಿಯಲ್ ಡಿಲಿಮಿಟೇಷನ್.  ಹದ್ದುಬಸ್ತು ಗೊತ್ತುಪಡಿಸುವ ಆಯೋಗ ಅಥವಾ ಕ್ಷೇತ್ರ ಪುನರವಿಂಗಡಣಾ ಆಯೋಗ ಮತ್ತು ಗಡಿ ಗುರುತಿಸಿದ ಶಾಸನಸಭೆಯು ಪ್ರಜಾಪ್ರಭುತ್ವದ ತಿರುಳಾಗಿದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಾಂವಿಧಾನಿಕ ಪ್ರಕ್ರಿಯೆಯಾಗಿದೆ. ಡಿಲಿಮಿಟೇಶನ್ ಪ್ರಕ್ರಿಯೆಯೇ ಪವಿತ್ರವಾಗದಿದ್ದರೆ, ಪ್ರಜಾಪ್ರಭುತ್ವ ಎಂದಿಗೂ ಪವಿತ್ರವಾಗಿ ಉಳಿಯಲು ಸಾಧ್ಯವಿಲ್ಲ, ಅದಕ್ಕಾಗಿಯೇ ಈ ಮಸೂದೆಯಲ್ಲಿ ನ್ಯಾಯಾಂಗ ಅಥವಾ ನ್ಯಾಯಿಕ ಡಿಲಿಮಿಟೇಶನ್ ಅನ್ನು ಮತ್ತೆ ಮಾಡಲಾಗುತ್ತದೆ ಎಂಬ ನಿಬಂಧನೆ ಅಳವಡಿಸಲಾಗಿದೆ. ಸ್ಥಳಾಂತರವಾದ ಜನರ ಎಲ್ಲಾ ಗುಂಪುಗಳು ತಮ್ಮ ಪ್ರಾತಿನಿಧ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಡಿಲಿಮಿಟೇಶನ್ ಆಯೋಗವನ್ನು ಕೇಳಿಕೊಂಡಿವೆ. ಸ್ಥಳಾಂತರವಾದ ಕಾಶ್ಮೀರಿಗಳಿಗೆ 2 ಸ್ಥಾನಗಳನ್ನು ಮತ್ತು 1 ಸ್ಥಾನವನ್ನು ಕಾಶ್ಮೀರಿಗಳಿಗೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರವಾದ ಜನರಿಗೆ ಮೀಸಲಿಡಲು ಆಯೋಗವು ನಿಬಂಧನೆ ಮಾಡಿರುವುದು ಸಂತೋಷದ ಸಂಗತಿ. ಈ ವ್ಯವಸ್ಥೆಗೆ ಮೋದಿ ಸರಕಾರ ಕಾನೂನು ಚೌಕಟ್ಟು ನೀಡಿದೆ ಎಂದರು.
 
ಜಮ್ಮು-ಕಾಶ್ಮೀರದ ಇತಿಹಾಸದಲ್ಲೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡಗಳಿಗೆ ಮತ್ತು ಪರಿಶಿಷ್ಟ ಜಾತಿಗಳಿಗೆ 9 ಸ್ಥಾನಗಳನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಹಿಂದೆ ಜಮ್ಮುವಿನಲ್ಲಿ 37 ಸ್ಥಾನಗಳಿದ್ದರೆ, ಈಗ 43ಕ್ಕೆ ಏರಿಕೆ ಆಗಿದೆ. ಕಾಶ್ಮೀರದಲ್ಲಿ ಮೊದಲು ಇದ್ದ 46 ಸ್ಥಾನಗಳು ಇದೀಗ 47 ಆಗಿವೆ. 24 ಸ್ಥಾನಗಳನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೀಸಲಿಡಲಾಗಿದೆ. ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೊದಲು 107 ಸ್ಥಾನಗಳಿದ್ದವು, ಈಗ ಅವು 114ಕ್ಕೆ ಏರಿಕೆ ಕಂಡಿವೆ. ಮೊದಲು ವಿಧಾನಸಭೆಯಲ್ಲಿ 2 ನಾಮನಿರ್ದೇಶಿತ ಸದಸ್ಯರಿದ್ದರು, ಈಗ ಆ ಸಂಖ್ಯೆ 5ಕ್ಕೆ ಏರಿದೆ. ಇದೆಲ್ಲವೂ 2019 ಆಗಸ್ಟ್ 5-6ರಂದು ಸಂಭವಿಸಿದೆ. ಐತಿಹಾಸಿಕ ಮಸೂದೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಅನುಮೋದಿಸಿದೆ. ಸಂಸತ್ತಿನ ಅಂಗೀಕಾರದ ನಂತರ 370ನೇ ವಿಧಿ ರದ್ದುಗೊಳಿಸಲಾಯಿತು. ಕಳೆದ 70 ವರ್ಷಗಳಿಂದ ಪ್ರತಿಯೊಬ್ಬ ತುಳಿತಕ್ಕೊಳಗಾದ, ಹಿಂದುಳಿದ ಮತ್ತು ಸ್ಥಳಾಂತರಗೊಂಡ ಕಾಶ್ಮೀರಿಗಳು ತಮ್ಮ ದೇಶದ ಸಹೋದರ ಸಹೋದರಿಯರಿಗೆ ನ್ಯಾಯ ಒದಗಿಸಲು ಈ ಮಸೂದೆಗಳ ಮೂಲಕ, ನರೇಂದ್ರ ಮೋದಿ ಸರ್ಕಾರವು 2 ಸ್ಥಾನಗಳನ್ನು ಮೀಸಲಿಟ್ಟ ಲೋಕಸಭೆಯ ಪ್ರಯತ್ನ ಮತ್ತು ಆಶೀರ್ವಾದವನ್ನು ನೆನಪಿಸಿಕೊಳ್ಳುತ್ತಾರೆ. ಸೌಲಭ್ಯವಂಚಿತರಿಗೆ ಬಲಹೀನ ಎಂಬ ಅವಹೇಳನಕಾರಿ ಪದದ ಬದಲಾಗಿ ಹಿಂದುಳಿದ ವರ್ಗದ ಸಾಂವಿಧಾನಿಕ ಪದವನ್ನೇ ಉಳಿಸಲಾಗಿದೆ ಎಂದರು.

ನಿರಾಶ್ರಿತರಿಗೆ ಮೀಸಲಾತಿ ನೀಡುವ ನ್ಯಾಯಸಮ್ಮತೆ ಬಗ್ಗೆ ಕೆಲವು ವಿರೋಧ ಪಕ್ಷದ ಸದಸ್ಯರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ಇದು ಕಾಶ್ಮೀರದ ನಿರಾಶ್ರಿತ ಜನರಿಗೆ ಹಕ್ಕು ಮತ್ತು ಪ್ರಾತಿನಿಧ್ಯ ನೀಡುವ ಮಸೂದೆಯಾಗಿದೆ. ಕಾಶ್ಮೀರಿ ಪಂಡಿತರಿಗೆ ಮೀಸಲಾತಿ ನೀಡುವ ಮೂಲಕ ಅವರು ಕಾಶ್ಮೀರ ವಿಧಾನಸಭೆಯಲ್ಲಿ ಧ್ವನಿ ಎತ್ತಬಹುದು. ಸ್ಥಳಾಂತರದ ಪರಿಸ್ಥಿತಿ ಮತ್ತೆ ಉದ್ಭವಿಸಿದರೆ ಅವರೇ ಅದನ್ನು ತಡೆಯುತ್ತಾರೆ. 5,675 ಸ್ಥಳಾಂತರವಾದ ಕಾಶ್ಮೀರಿ ಕುಟುಂಬಗಳು ಇಂದು ಉದ್ಯೋಗ ಪ್ಯಾಕೇಜ್‌ನ ಪ್ರಯೋಜನವನ್ನು ಪಡೆಯುತ್ತಿವೆ. ಅಂತಹ ನೌಕರರಿಗೆ 6 ಸಾವಿರ ಫ್ಲ್ಯಾಟ್ ನಿರ್ಮಿಸುವ ಯೋಜನೆ ಇದ್ದು, ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದರು. ರಾಷ್ಟ್ರಪತಿ ಆಳ್ವಿಕೆ ಜಾರಿಯಾದ ನಂತರ ಸುಮಾರು 880 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ನೌಕರರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಕಣಿವೆಯಲ್ಲಿ ಭಯೋತ್ಪಾದನೆ ಪ್ರಾರಂಭವಾದಾಗ ಮತ್ತು ಜನರನ್ನು ಗುರಿಯಾಗಿಸಿ ಅಲ್ಲಿಂದ ಓಡಿಸಿದಾಗ, ಅಂದಿನಿಂದ ಇಲ್ಲಿಯವರೆಗೆ ಮೊಸಳೆ ಕಣ್ಣೀರು ಸುರಿಸುವುದನ್ನು ನಾವು ನೋಡಿದ್ದೇವೆ, ಆದರೆ ಅವರ ಕಣ್ಣೀರನ್ನು ಒರೆಸಿದ್ದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು. ಮೋದಿ ಅವರು ಪೂರ್ಣ ಸಹಾನುಭೂತಿಯಿಂದ ಕಣ್ಣೀರು ಒರೆಸಿದರು. ತಮ್ಮ ಪ್ರಾಣ ಉಳಿಸಿಕೊಳ್ಳಲು ಕಾಶ್ಮೀರದಲ್ಲಿ ಆಸ್ತಿಪಾಸ್ತಿಗಳನ್ನು ತ್ಯಜಿಸಿ ಬೆಂಗಳೂರು, ಅಹಮದಾಬಾದ್, ಜಮ್ಮು ಅಥವಾ ದೆಹಲಿಯಂತಹ ನಗರಗಳಿಗೆ ಹೋಗಿ ಶಿಬಿರಗಳಲ್ಲಿ ವಾಸಿಸುವ ಜನರ ನೋವನ್ನು ನಾವು ಊಹಿಸಲು ಸಾಧ್ಯವಿಲ್ಲ. ಆ ಜನರು ಕಾಶ್ಮೀರದಿಂದ ವಲಸೆ ಬಂದಾಗ, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಅವರ ಭೂಮಿಯನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲು ಒತ್ತಾಯಿಸಲಾಯಿತು, ಒಂದು ರೀತಿಯಲ್ಲಿ ಅವರ ಆಸ್ತಿ ಕಸಿದುಕೊಳ್ಳಲಾಯಿತು. ಆದರೆ ಅಂದಿನ ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿತ್ತು.

ಆದರೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸರ್ಕಾರವು ಈ ವಿಷಯದಲ್ಲಿ ನ್ಯಾಯ ಒದಗಿಸಲು ಹೊಸ ಕಾನೂನು ತಂದಿತು. ಕಾನೂನನ್ನು ಪೂರ್ವಾನ್ವಯವಾಗಿ ಜಾರಿಗೆ ತರುವ ಮೂಲಕ ಜನರ ಆಸ್ತಿಯನ್ನು ಮರಳಿ ನೀಡಲಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸುಮಾರು 1.6 ಲಕ್ಷ ಜನರಿಗೆ ನಿವೇಶನದ ಪ್ರಮಾಣಪತ್ರ ನೀಡುವ ಕೆಲಸ ಮಾಡಿದೆ. ಮೋದಿ ಅವರು ಪ್ರಧಾನ ಮಂತ್ರಿಯಾದ ನಂತರ ಪ್ರತಿ ವ್ಯಕ್ತಿಗೆ 3,250 ರೂ. ನಗದು ನೆರವು ಮತ್ತು ಕುಟುಂಬಕ್ಕೆ ಗರಿಷ್ಠ 13,000 ರೂ. ನೀಡಲಾಗುತ್ತಿದೆ. ಸರಕಾರ ಪ್ರತಿ ತಿಂಗಳು ತಲಾ ಒಬ್ಬರಿಗೆ 9 ಕಿಲೋ ಅಕ್ಕಿ, 2 ಕಿಲೋ ಹಿಟ್ಟು, 1 ಕೆಜಿ ಸಕ್ಕರೆ ನೀಡುತ್ತಿದೆ. ಪ್ರಧಾನ ಮಂತ್ರಿ ಮೋದಿ ನೇತೃತ್ವದ ಸರ್ಕಾರವು ಪಾಕ್ ಆಕ್ರಮಿತ ಕಾಶ್ಮೀರದಿಂದ ಬರುವ ಜನರಿಗೆ ಒಟ್ಟು 5.5 ಲಕ್ಷ ರೂಪಾಯಿ ನೀಡುವ ಕೆಲಸ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ಕೆಲಸ ನಡೆದಿಲ್ಲ ಎಂದು ಹೇಳುತ್ತಿದ್ದವರಿಗೆ, ಈ ಬದಲಾವಣೆಯ ಬೇರು ಕತ್ತರಿಸಿರುವ ಜನರಿಗೆ ಹೇಗೆ ತಿಳಿಯುತ್ತದೆ? ಜಮ್ಮು-ಕಾಶ್ಮೀರದಲ್ಲಿ ತಂದಿರುವ ಬದಲಾವಣೆಗಳನ್ನು ಇಂಗ್ಲೆಂಡ್‌ನಲ್ಲಿ ರಜಾ ದಿನಗಳನ್ನು ಅನುಭವಿಸಿದ ಜನರಿಂದ ತರಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದರು.

ಹಿಂದುಳಿದ ವರ್ಗಗಳ ಆಯೋಗ ರಚಿಸಲಾಗಿದೆ. ಇದು ಭಾಗವಹಿಸುವ ವಿಧಾನದೊಂದಿಗೆ ಪಾಲುದಾರರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದೆ.  ಆಯೋಗವು 750 ದಿನಗಳಲ್ಲಿ 198 ನಿಯೋಗಗಳು ಮತ್ತು 16,000 ಜನರನ್ನು ಭೇಟಿ ಮಾಡಿದೆ. ಎಲ್ಲ 20 ಜಿಲ್ಲೆಗಳಲ್ಲಿ ವಿಚಾರಣೆ ನಡೆದಿದ್ದು, ಅಂಚೆ ಮೂಲಕ ಬಂದಿದ್ದ ಸುಮಾರು 26,000 ಅರ್ಜಿಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಜಮ್ಮು-ಕಾಶ್ಮೀರ ಮೀಸಲಾತಿ ಕಾಯ್ದೆಯನ್ನು ಸುಧಾರಿಸುವ ಸಲಹೆ ಅವರಿಂದ ಬಂದಿದೆ. ಈ ಕಾಯಿದೆ ಈ ಹಿಂದೆಯೂ ಇತ್ತು, ಆದರೆ ಇದು ದುರ್ಬಲ ವರ್ಗದವರಿಗೆ ಮಾತ್ರ. ಆದರೆ ಈ ಬಾರಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತರ ಹಿಂದುಳಿದ ವರ್ಗಗಳಿಗೂ ಸಾಂವಿಧಾನಿಕ ಹೆಸರು ನೀಡುವ ಮೂಲಕ ಅವರಿಗೆ ಗೌರವ ನೀಡಿದ್ದಾರೆ. ವಿರೋಧ ಪಕ್ಷವು ಹಿಂದುಳಿದ ವರ್ಗಗಳನ್ನು ಅತಿ ಹೆಚ್ಚು ವಿರೋಧಿಸಿದೆ ಮತ್ತು ಹಿಂದುಳಿದ ವರ್ಗಗಳನ್ನು ತಡೆಯುವ ಕೆಲಸ ಮಾಡಿದೆ ಎಂಬುದು ಐತಿಹಾಸಿಕ ಸತ್ಯ. 70 ವರ್ಷಗಳಿಂದ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ಏಕೆ ನೀಡಲಿಲ್ಲ ಎಂದು ಅವರು ಪ್ರತಿಪಕ್ಷಗಳನ್ನು ಪ್ರಶ್ನಿಸಿದರು, ಆದರೆ ಇದು ಸಾಂವಿಧಾನಿಕ ಆದೇಶವಾಗಿದೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಂವಿಧಾನಿಕ ಸ್ಥಾನಮಾನ ನೀಡಿದದ್ದಾರೆ ಎಂದರು.

ಸಾರ್ವಜನಿಕ ಸಭೆಗಳಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ವಿರೋಧ ಪಕ್ಷದ ನಾಯಕರು, ಕಾಕಾ ಕಾಲೇಲ್ಕರ್ ಆಯೋಗದ ವರದಿಯನ್ನು ಯಾರು ತಡೆಹಿಡಿದಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಮಂಡಲ್ ಆಯೋಗದ ವರದಿ ಬಂದ ನಂತರ, ತಾವು ಅಧಿಕಾರದಲ್ಲಿ ಇರುವವರೆಗೂ ಜಾರಿಯಾಗಿರಲಿಲ್ಲ, ನಂತರ ಜಾರಿಯಾದಾಗಲೂ ವಿರೋಧ ಪಕ್ಷದ ನಾಯಕರೇ ವಿರೋಧಿಸಿದ್ದರು. ಕೇಂದ್ರ ಪ್ರವೇಶ ಯೋಜನೆಯಡಿ ಹಿಂದುಳಿದ ವರ್ಗಗಳಿಗೆ ಪ್ರತಿಪಕ್ಷಗಳು ಎಂದಿಗೂ ಮೀಸಲಾತಿ ನೀಡಿಲ್ಲ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಮಾತ್ರ ಈ ಕೆಲಸ ನಡೆದಿದ್ದು, ಇದೀಗ ಹಿಂದುಳಿದ ವರ್ಗದ ಮಕ್ಕಳಿಗೆ ಸೈನಿಕ ಶಾಲೆ, ನೀಟ್ ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ಓದುವ ಅವಕಾಶ ಕಲ್ಪಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳ(ಇಡಬ್ಲ್ಯುಎಸ್) ಜನರಿಗೆ ಮೀಸಲಾತಿ ನೀಡುವ ಕಲ್ಪನೆಯನ್ನು ಹಿಂದೆಂದೂ ಯೋಚಿಸಿರಲಿಲ್ಲ. ಪ್ರಪ್ರಥಮ ಬಾರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೀಸಲಾತಿ ರಹಿತ ಜಾತಿಗಳ ಬಡ ಮಕ್ಕಳಿಗೆ ಶೇಕಡ 10ರಷ್ಟು ಮೀಸಲಾತಿ ಒದಗಿಸಿದರು. ಪ್ರತಿಪಕ್ಷಗಳು ಎತ್ತಿದ ಕೆಲವು ಕಾನೂನು ಮತ್ತು ಸಾಂವಿಧಾನಿಕ ವಿಷಯಗಳಿಗೆ ಅಮಿತ್ ಶಾ ಅವರು ವಿವರವಾಗಿ ಉತ್ತರ ನೀಡಿದರು.

ಜಮ್ಮು-ಕಾಶ್ಮೀರದ ಭಯೋತ್ಪಾದನೆ ಬಗ್ಗೆ ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ, ಅದನ್ನು 370ನೇ ವಿಧಿಯ ರದ್ದತಿಗೆ ನೇರವಾಗಿ ಜೋಡಿಸಿದ್ದಾರೆ. ಭಯೋತ್ಪಾದನೆಯ ಮೂಲವು ಪ್ರತ್ಯೇಕತಾವಾದದ ಭಾವನೆ ಎಂದು ತಾನು ಈ ಹಿಂದೆಯೂ ಹೇಳಿದ್ದೇನೆ. ಇದು 370ನೇ ವಿಧಿಯಿಂದಾಗಿ ಉದ್ಭವಿಸಿದೆ. 370ನೇ ವಿಧಿಯನ್ನು ತೆಗೆದುಹಾಕುವುದರೊಂದಿಗೆ, ಪ್ರತ್ಯೇಕತಾವಾದದಲ್ಲಿ ಭಾರಿ ಇಳಿಕೆ ಕಂಡುಬರುತ್ತಿದೆ. ಈ ಕಾರಣದಿಂದಾಗಿ ಭಯೋತ್ಪಾದನೆಯೂ ಕಡಿಮೆಯಾಗುತ್ತಿದೆ. 1994 ಮತ್ತು 2004ರ ನಡುವೆ ಒಟ್ಟು 40,164 ಭಯೋತ್ಪಾದನೆ ಘಟನೆಗಳು ನಡೆದಿವೆ. 2004ರಿಂದ 2014ರ ನಡುವೆ 7,217 ಭಯೋತ್ಪಾದನೆ ಘಟನೆಗಳು ನಡೆದಿವೆ. ನರೇಂದ್ರ ಮೋದಿ ಸರ್ಕಾರದ 9 ವರ್ಷಗಳಲ್ಲಿ ಈ ಘಟನೆಗಳು ಕೇವಲ 2,197 ಕ್ಕೆ ಇಳಿದು 70% ಕಡಿಮೆಯಾಗಿದೆ. 65% ಘಟನೆಗಳು ಪೊಲೀಸ್ ಕ್ರಮದಿಂದಾಗಿ ಸಂಭವಿಸಿವೆ. ನರೇಂದ್ರ ಮೋದಿ ಸರ್ಕಾರದ 9 ವರ್ಷಗಳಲ್ಲಿ ನಾಗರಿಕರ ಸಾವಿನ ಸಂಖ್ಯೆ 72% ಮತ್ತು ಭದ್ರತಾ ಪಡೆಗಳ ಸಾವಿನ ಸಂಖ್ಯೆ 59% ಕಡಿಮೆಯಾಗಿದೆ. 2010ರಲ್ಲಿ ಜಮ್ಮು-ಕಾಶ್ಮೀರದಲ್ಲಿ 2,654 ಕಲ್ಲು ತೂರಾಟದ ಘಟನೆಗಳು ನಡೆದಿದ್ದರೆ, 2023ರಲ್ಲಿ ಒಂದೇ ಒಂದು ಕಲ್ಲು ತೂರಾಟ ನಡೆದಿಲ್ಲ. 2010ರಲ್ಲಿ 132 ಸಂಘಟಿತ ಮುಷ್ಕರಗಳು ನಡೆದಿದ್ದರೆ, 2023ರಲ್ಲಿ ಒಂದೇ ಒಂದು ಮುಷ್ಕರವೂ ನಡೆದಿಲ್ಲ. 2010ರಲ್ಲಿ ಕಲ್ಲು ತೂರಾಟದಲ್ಲಿ 112 ನಾಗರಿಕರು ಸಾವನ್ನಪ್ಪಿದ್ದರೆ, 2023ರಲ್ಲಿ ಒಬ್ಬರೂ ಸಾವನ್ನಪ್ಪಿಲ್ಲ. 2010ರಲ್ಲಿ, 6,235 ಭದ್ರತಾ ಸಿಬ್ಬಂದಿ ಕಲ್ಲು ತೂರಾಟದಲ್ಲಿ ಗಾಯಗೊಂಡರು, 2023ರಲ್ಲಿ ಒಬ್ಬರೂ ಸಹ ಗಾಯಗೊಂಡಿಲ್ಲ. 370ನೇ ವಿಧಿ ರದ್ದುಗೊಳಿಸುವುದು ರಕ್ತಪಾತಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಕ್ಷಗಳು ಈ ಸದನದಲ್ಲಿಯೇ ಹೇಳಿದ್ದರು. ಆದರೆ ಒಂದು ಬೆಣಚುಕಲ್ಲು ಎಸೆಯುವ ಧೈರ್ಯ ಯಾರಿಗೂ ಇಲ್ಲದಂತಹ ವ್ಯವಸ್ಥೆಗಳನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ ಎಂದು ಅಮಿತ್ ಶಾ ಸಮರ್ಥಿಸಿಕೊಂಡರು.
 
ಜಮ್ಮು-ಕಾಶ್ಮೀರದ ಜನರ ಸುರಕ್ಷತೆ ಖಚಿತಪಡಿಸಲು ಮತ್ತು ಅವರ ಜೀವನದ ಗುಣಮಟ್ಟ ಸುಧಾರಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಅವಿರತ ಪ್ರಯತ್ನಗಳನ್ನು ಮಾಡಿದೆ. ಗೃಹ ಸಚಿವಾಲಯವು ಪ್ರತಿ ತಿಂಗಳು ಕಾಶ್ಮೀರದ ಭದ್ರತಾ ಪರಿಸ್ಥಿತಿ ಪರಿಶೀಲಿಸುತ್ತಿದೆ, ಪ್ರತಿ 3 ತಿಂಗಳಿಗೊಮ್ಮೆ ಸ್ವತಃ ಅಲ್ಲಿಗೆ ಹೋಗಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಕಳೆದ 3 ವರ್ಷಗಳಿಂದ ಜಾರಿಯಲ್ಲಿರುವ ಶೂನ್ಯ ಭಯೋತ್ಪಾದನಾ ಯೋಜನೆಯನ್ನು ಮೋದಿ ಸರ್ಕಾರ ಮಾಡಿದ್ದು, 2026ರ ವೇಳೆಗೆ ಶೂನ್ಯ ಭಯೋತ್ಪಾದನಾ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸಲಾಗುವುದು. ಇದರೊಂದಿಗೆ ಸಂಪೂರ್ಣ ಪ್ರದೇಶ ಪ್ರಾಬಲ್ಯ ಯೋಜನೆ ರೂಪಿಸಲಾಗಿದ್ದು, 2026ರ ವೇಳೆಗೆ ಪೂರ್ಣಗೊಳ್ಳಲಿದೆ. ಹಿಂದೆ ಕೇವಲ ಭಯೋತ್ಪಾದಕರನ್ನು ಹತ್ಯೆ ಮಾಡಲಾಗುತ್ತಿತ್ತು, ಆದರೆ ಈಗ ಅದರ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾಶ ಮಾಡಿದ್ದೇವೆ. ಇದರೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ), ಭಯೋತ್ಪಾದನೆ ಹಣಕಾಸು ಅಡಿ 32 ಪ್ರಕರಣಗಳನ್ನು ದಾಖಲಿಸಿದೆ. ಪಾಕಿಸ್ತಾನದಿಂದ ಹಣ ಬರುತ್ತಿದ್ದರಿಂದ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ನರೇಂದ್ರ ಮೋದಿ ಸರ್ಕಾರ ಇವೆಲ್ಲವನ್ನೂ ಮಾಡಲು ಬಿಡುವುದಿಲ್ಲ. ಎನ್‌ಐಎಯಿಂದ 32 ಪ್ರಕರಣಗಳು ಮತ್ತು ಎಸ್‌ಐಎಯಿಂದ 51 ಪ್ರಕರಣಗಳು ಸೇರಿದಂತೆ ಒಟ್ಟು 83 ಭಯೋತ್ಪಾದಕ ನಿಧಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 229 ಮಂದಿಯನ್ನು ಬಂಧಿಸಲಾಗಿದ್ದು, 150 ಕೋಟಿ ರೂ. ಮೌಲ್ಯದ 57 ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಹರಾಜು ಮಾಡಲು ನ್ಯಾಯಾಲಯ ಪ್ರಕ್ರಿಯೆ ನಡೆಯುತ್ತಿದೆ. 134 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದ್ದು, ಅದರಲ್ಲಿ 122 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ, ಇನ್ನೂ 5.5 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಸಂವಿಧಾನ ವಿಧಿ 370 ರದ್ದಾದ ನಂತರ, 30 ವರ್ಷಗಳ ನಂತರ 2021ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ ಚಿತ್ರಮಂದಿರಗಳು ತೆರೆಯಲ್ಪಟ್ಟವು. ಶ್ರೀನಗರದಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಿಸಲಾಗಿದೆ, ಪುಲ್ವಾಮಾ, ಶೋಪಿಯಾನ್, ಬಾರಾಮುಲ್ಲಾ ಮತ್ತು ಹಂದ್ವಾರದಲ್ಲಿ 4 ಹೊಸ ಥಿಯೇಟರ್‌ಗಳನ್ನು ತೆರೆಯಲಾಗಿದೆ, 100ಕ್ಕೂ ಹೆಚ್ಚು ಚಲನಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದೆ. ಸುಮಾರು 100 ಚಿತ್ರಮಂದಿರಗಳಿಗೆ ಬ್ಯಾಂಕ್ ಸಾಲದ ಪ್ರಸ್ತಾವನೆಗಳು ಬ್ಯಾಂಕ್‌ಗಳ ಪರಿಶೀಲನೆಯಲ್ಲಿವೆ. ಜಮ್ಮು-ಕಾಶ್ಮೀರದಲ್ಲಿ 45,000 ಜನರ ಸಾವಿಗೆ 370ನೇ ವಿಧಿ ಕಾರಣವಾಗಿದೆ, ಅದನ್ನು ಪ್ರಧಾನಿ ಮೋದಿ ರದ್ದುಗೊಳಿಸಿದ್ದಾರೆ. ಈ ದೇಶದಲ್ಲಿ ಒಂದೇ ಚಿಹ್ನೆ, ಒಂದೇ ಸಂವಿಧಾನ ಮತ್ತು ಒಂದೇ ಮುಖ್ಯಸ್ಥರಿರಬೇಕು. ಈ ಉದ್ದೇಶಕ್ಕಾಗಿ ಶ್ರೀ ಶ್ಯಾಮ ಪ್ರಸಾದ್ ಮುಖರ್ಜಿ ಜಿ ಅವರು ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿದ್ದು ದೇಶದ ಆಶಯವಾಗಿದೆ ಎಂದು ಅಮಿತ್ ಶಾ ಹೇಳಿದರು.

370ನೇ ವಿಧಿಯು ತಾತ್ಕಾಲಿಕ ನಿಬಂಧನೆಯಾಗಿದ್ದು ಅದನ್ನು ಬಹಳ ಹಿಂದೆಯೇ ರದ್ದುಗೊಳಿಸಬೇಕಾಗಿತ್ತು. ಆದರೆ ಯಾರೂ ಧೈರ್ಯ ಮಾಡಲಿಲ್ಲ. ಆದರೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಧೈರ್ಯ ತೋರಿ, 370ನೇ ವಿಧಿ ರದ್ದುಗೊಳಿಸಿದರು. 370ನೇ ವಿಧಿ ತಾತ್ಕಾಲಿಕವಾಗಿದೆ ಎಂಬ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಪ್ರಧಾನಿ ಮೋದಿ ಅವರು 2019 ಆಗಸ್ಟ್ 5ರಂದು ಅದನ್ನು ರದ್ದುಗೊಳಿಸಿದರು. ಮೊದಲ ಬಾರಿಗೆ ಕಾಶ್ಮೀರಿ, ಡೋಗ್ರಿ, ಹಿಂದಿ, ಇಂಗ್ಲಿಷ್ ಮತ್ತು ಉರ್ದುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಲಾಯಿತು. ಶಿಕ್ಷಣ ಹಕ್ಕು ಕಾಯಿದೆ, ಭೂಸ್ವಾಧೀನ ಮತ್ತು ಪರಿಹಾರ ಕಾಯಿದೆ, ಅರಣ್ಯ ಹಕ್ಕು ಕಾಯಿದೆ, ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ, ಗುಪ್ತ ಮಾಹಿತಿದಾರರ ಸಂರಕ್ಷಣಾ ಆಕ್ಟ್, ಬಾಲ ನ್ಯಾಯ ಕಾಯ್ದೆ, 1992ರ ಅಲ್ಪಸಂಖ್ಯಾತರ ಆಯೋಗ ಕಾಯಿದೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ಈಗ ಅವುಗಳನ್ನು ಜಾರಿಗೊಳಿಸಲಾಗುತ್ತಿದೆ. ಈಗ ವಿಧಾನಸಭೆಯ ಅವಧಿಯೂ 5 ವರ್ಷ ಮಾಡಲಾಗಿದೆ. ಹರ್ ಘರ್ ತಿರಂಗ ಅಭಿಯಾನದಡಿ ಕಣಿವೆಯಲ್ಲಿ ತ್ರಿವರ್ಣ ಧ್ವಜ ಹಾರಿಸದ ಒಂದೇ ಒಂದು ಮನೆಯೂ ಇರಲಿಲ್ಲ, ಅಲ್ಲಿ ಅಂತಹ ಈ ಬದಲಾವಣೆ ನಡೆದಿದೆ. ಇಂದು ಲಾಲ್ ಚೌಕ್‌ನಲ್ಲಿ ಪ್ರತಿ ಹಬ್ಬವನ್ನು ಸಂತೋಷ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿಯೊಂದು ಸಮುದಾಯದ ಜನರು ಅದರಲ್ಲಿ ಭಾಗವಹಿಸುತ್ತಾರೆ. ಸಂವಿಧಾನದ ಸ್ಪೂರ್ತಿಯನ್ನು ಈಗ ಅಲ್ಲಿನ ತಳ ಮಟ್ಟಕ್ಕೆ ಕೊಂಡೊಯ್ಯಲಾಗಿದೆ ಎಂದು ಅಮಿತ್ ಶಾ ಹೇಳಿದರು.
 
ಸಂವಿಧಾನ ವಿಧಿ 370 ರದ್ದತಿಗೆ ಮುನ್ನ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನ(ಜಿಎಸ್‌ಡಿಪಿ) 1 ಲಕ್ಷ ಕೋಟಿ ರೂ.ಗಳಷ್ಟಿತ್ತು, ಇದು ಕೇವಲ 5 ವರ್ಷಗಳಲ್ಲಿ ದ್ವಿಗುಣಗೊಂಡು ಇದೀಗ 2,27,927 ಕೋಟಿ ರೂ.ಗೆ ತಲುಪಿದೆ. ಮೊದಲು 94 ಡಿಗ್ರಿ ಕಾಲೇಜುಗಳಿದ್ದವು, ಇಂದು 147 ಇವೆ. ಜಮ್ಮು-ಕಾಶ್ಮೀರವು ಐಐಟಿ, ಐಐಎಂ ಮತ್ತು 2 ಏಮ್ಸ್ ಹೊಂದಿರುವ ಮೊದಲ ರಾಜ್ಯವಾಗಿದೆ. ಕಳೆದ 70 ವರ್ಷಗಳಲ್ಲಿ ಕೇವಲ 4 ವೈದ್ಯಕೀಯ ಕಾಲೇಜುಗಳಿದ್ದು, ಈಗ 7 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದ, 15 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗಿದೆ, ಮೊದಲು ವೈದ್ಯಕೀಯ ಸೀಟುಗಳು 500 ಇದ್ದರೆ, ಈಗ ಆರ್ಟಿಕಲ್ 370 ರದ್ದತಿ ನಂತರ 800 ಸೀಟುಗಳನ್ನು ಸೇರಿಸಲಾಗಿದೆ. ಪಿಜಿ ಸೀಟುಗಳು 367 ಇದ್ದವು, 397 ಹೊಸ ಸೀಟುಗಳನ್ನು ಸೇರಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಸುಮಾರು 6 ಲಕ್ಷ ಜನರಿಗೆ ಮಧ್ಯಾಹ್ನದ ಊಟ ಸಿಗುತ್ತಿತ್ತು, ಈಗ 9,13,000 ಜನರಿಗೆ ಮಧ್ಯಾಹ್ನದ ಊಟ ಸಿಗುತ್ತಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಸರಾಸರಿ 158 ಕಿಲೋಮೀಟರ್, ಈಗ ಅದು ವರ್ಷಕ್ಕೆ 8,068 ಕಿಲೋಮೀಟರ್ ಆಗಿದೆ. 70 ವರ್ಷಗಳಲ್ಲಿ 24,000 ಮನೆಗಳನ್ನು ನೀಡಲಾಗಿದೆ, ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ 1,45,000 ಜನರಿಗೆ ಮನೆಗಳನ್ನು ನೀಡಿದೆ. 70 ವರ್ಷಗಳಲ್ಲಿ ಹಿಂದಿನ ಸರ್ಕಾರಗಳು 7,82,000 ಜನರಿಗೆ ಕುಡಿಯುವ ನೀರು ನೀಡಿದರೆ, ಈಗ ಮೋದಿ ಸರ್ಕಾರ 13 ಲಕ್ಷ ಕುಟುಂಬಗಳಿಗೆ ಕುಡಿಯುವ ನೀರು ನೀಡಿದೆ. ಶಿಶು ಮರಣ ಪ್ರಮಾಣವನ್ನು 22ರಿಂದ 14.30ಕ್ಕೆ ಇಳಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಮೊದಲು 47 ಜನೌಷಧಿ ಕೇಂದ್ರಗಳಿದ್ದವು, ಈಗ 227 ಜನೌಷಧಿ ಕೇಂದ್ರಗಳಲ್ಲಿ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಗಳು ದೊರೆಯುತ್ತಿವೆ. ಕ್ರೀಡೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ 2 ಲಕ್ಷದಿಂದ 60 ಲಕ್ಷಕ್ಕೆ ಏರಿಕೆಯಾಗಿದೆ. ಪಿಂಚಣಿ ಫಲಾನುಭವಿಗಳ ಸಂಖ್ಯೆ 6 ಲಕ್ಷದಿಂದ 10 ಲಕ್ಷಕ್ಕೆ ಏರಿಕೆಯಾಗಿದೆ. 370ನೇ ವಿಧಿ ತೆಗೆದುಹಾಕಿದ ನಂತರ ನರೇಂದ್ರ ಮೋದಿ ಸರ್ಕಾರದಿಂದ ಮಾತ್ರ ಈ ಎಲ್ಲಾ ಬದಲಾವಣೆಗಳನ್ನು ಮಾಡಲಾಗಿದೆ. 370ನೇ ವಿಧಿ ತೆಗೆದುಹಾಕಿದ ನಂತರ, ಕಾಶ್ಮೀರದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ, ಇದರಿಂದಾಗಿ ಅಲ್ಲಿ ಉತ್ತಮ ವಾತಾವರಣ ಸೃಷ್ಟಿಸಲಾಗಿದೆ ಮತ್ತು ಅಲ್ಲಿ ದೊಡ್ಡದಾಗಿ ಅಭಿವೃದ್ಧಿ ನಡೆದಿದೆ ಎಂದು ಅಮಿತ್ ಶಾ ಹೇಳಿದರು..
 
ಪಂಡಿತ್ ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಾಡಿದ 2 ದೊಡ್ಡ ತಪ್ಪುಗಳಿಂದಾಗಿ ಜಮ್ಮು-ಕಾಶ್ಮೀರ ಅನೇಕ ವರ್ಷಗಳ ಕಾಲ ನರಳಬೇಕಾಯಿತು.  ಪಂಡಿತ್ ನೆಹರೂ ಅವರ ಮೊದಲ ತಪ್ಪು ಎಂದರೆ ನಮ್ಮ ಸೇನೆ ಗೆಲ್ಲುತ್ತಿದ್ದಾಗ ಪಂಜಾಬ್ ತಲುಪಿದ ಕೂಡಲೇ ಕದನ ವಿರಾಮ ಘೋಷಿಸಿದ್ದರಿಂದ ಪಾಕ್ ಆಕ್ರಮಿತ ಕಾಶ್ಮೀರ ಹುಟ್ಟಿಕೊಂಡಿತು. ಕದನ ವಿರಾಮವನ್ನು 3 ದಿನ ತಡೆದಿದ್ದರೆ ಇಂದು ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗುತ್ತಿತ್ತು. ಅವರು ನಮ್ಮ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದದ್ದು 2ನೇ ದೊಡ್ಡ ತಪ್ಪು. ಈ ವಿಷಯವನ್ನು ವಿಶ್ವಸಂಸ್ಥೆಗೆ ಕಳುಹಿಸಿದಾಗಲೂ ಕೂಡ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯಬಾರದಿತ್ತು. ಅದನ್ನು ತೆಗೆದುಕೊಂಡರೂ 35ನೇ ವಿಧಿಯ ಬದಲಾಗಿ ವಿಶ್ವಸಂಸ್ಥೆಯ ಸನ್ನದು 51ನೇ ಪರಿಚ್ಛೇದದ ಅಡಿ ವಿಷಯ ಚರ್ಚಿಸಬೇಕಿತ್ತು. ದಾಖಲೆಯಲ್ಲಿ ಹಲವಾರು ಜನರು ನೀಡಿದ ಸಲಹೆಯ ಹೊರತಾಗಿಯೂ, ವಿಷಯವನ್ನು 35ನೇ ವಿಧಿಯ ಅಡಿ, ವಿಶ್ವಸಂಸ್ಥೆಗೆ ಕೊಂಡೊಯ್ಯಲಾಯಿತು. ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರು ತಮ್ಮ ತಪ್ಪು ಎಂದು ಬರೆದಿದ್ದಾರೆ, ಆದರೆ ಇದು ಕೇವಲ ತಪ್ಪಲ್ಲ, ಆದರೆ ಬಹುದೊಡ್ಡ ಪ್ರಮಾದ. ದೇಶವು ದೊಡ್ಡ ಪ್ರಮಾಣದ ಭೂಮಿಯನ್ನು ಕಳೆದುಕೊಂಡಿತು, ಅದು ಸಹ ಬಹುದೊಡ್ಡ ಪ್ರಮಾದವಾಯಿತು.

2014ರಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ ವಿದ್ಯುತ್, ಮೂಲಸೌಕರ್ಯ, ನೀರಾವರಿ, ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದ ಯೋಜನೆಗಳು ಸೇರಿದಂತೆ 80,000 ಕೋಟಿ ರೂಪಾಯಿ ವೆಚ್ಚದಲ್ಲಿ 63 ಯೋಜನೆಗಳನ್ನು ಪ್ರಾರಂಭಿಸಿದರು. ಈ ಪೈಕಿ ಸುಮಾರು 21,000 ಕೋಟಿ ವೆಚ್ಚದ 9 ಯೋಜನೆಗಳು ಲಡಾಖ್‌ನಲ್ಲಿವೆ. 58,477 ಕೋಟಿ ಮೌಲ್ಯದ ಜಮ್ಮು-ಕಾಶ್ಮೀರದ 32 ಯೋಜನೆಗಳು ಬಹುತೇಕ ಪೂರ್ಣಗೊಂಡಿವೆ. 58,000 ಕೋಟಿ  ರೂ. ವೆಚ್ಚದಲ್ಲಿ ಈಗಾಗಲೇ 45,800 ಕೋಟಿ ರೂ. ಬಳಸಿಕೊಳ್ಳಲಾಗಿದೆ. ಕಳೆದ 10 ವರ್ಷಗಳಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಹೂಡಿಕೆ ಮಾಡಲಾಗಿದೆ. 642 ಮೆಗಾವ್ಯಾಟ್ ಸಾಮರ್ಥ್ಯದ ಕಿರು ಜಲವಿದ್ಯುತ್ ಯೋಜನೆಗೆ 4,987 ಕೋಟಿ ರೂ. ವೆಚ್ಚದಲ್ಲಿ 5000 ಮೆಗಾವ್ಯಾಟ್ ಉತ್ಪಾದನಾ ಗುರಿ, 5000 ಕೋಟಿ ರೂ. ವೆಚ್ಚದ 540 ಮೆಗಾವ್ಯಾಟ್ ಕ್ವಾರ್ ಹೈಡ್ರೋ ಪ್ರಾಜೆಕ್ಟ್, 5,200 ಕೋಟಿ ರೂ. ವೆಚ್ಚದಲ್ಲಿ, 850 ಮೆಗಾವ್ಯಾಟ್ ರಾಟಲ್ ಹೈವೇ ಯೋಜನೆ, 8,112 ಕೋಟಿ ವೆಚ್ಚದಲ್ಲಿ 1000 ಮೆಗಾವ್ಯಾಟ್ ಸಾಮರ್ಥ್ಯದ ಸೋಪಾಕ್ ದಾಲ್ ಹೈಡ್ರೋ ಪ್ರಾಜೆಕ್ಟ್, 2300 ಕೋಟಿ ವೆಚ್ಚದಲ್ಲಿ 1856 ಮೆಗಾ ವ್ಯಾಟ್ ಸಾಮರ್ಥ್ಯದ ಸಾವಲ್ಕೋಟ್ ಹೈಡ್ರೋ ಪ್ರಾಜೆಕ್ಟ್ ಮತ್ತು 2793 ಕೋಟಿ ವೆಚ್ಚದಲ್ಲಿ ಶಾಹಪುರ ಖಂಡಿ ಅಣೆಕಟ್ಟು ನೀರಾವರಿ ಮತ್ತು ವಿದ್ಯುತ್ ಯೋಜನೆ ಸೇರಿದೆ.  ಮೊದಲ ಬಾರಿಗೆ ಅಲ್ಲಿ 1600 ಮೆಗಾವ್ಯಾಟ್ ಸೌರಶಕ್ತಿ ಪಡೆಯುವ ಯೋಜನೆ ಪ್ರಾರಂಭಿಸಲಾಗಿದೆ, 38 ಗುಂಪು ಕೇಂದ್ರಗಳನ್ನು ನಿರ್ಮಿಸಲಾಗಿದೆ, 467 ಕಿಲೋಮೀಟರ್ ಹೊಸ ಪ್ರಸರಣ ಮಾರ್ಗಗಳನ್ನು ಹಾಕಲಾಗಿದೆ, 266 ಅಪ್ ಸ್ಟೇಷನ್‌ಗಳನ್ನು ನಿರ್ಮಿಸಲಾಗಿದೆ ಮತ್ತು 11,000 ಸರ್ಕ್ಯೂಟ್ ಕಿಲೋಮೀಟರ್‌ಗಳನ್ನು ಭದ್ರಪಡಿಸುವ ಕೆಲಸ ಮಾಡಲಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎಸ್ಟಿ ಮತ್ತು ಐಟಿ ಮಾರ್ಗಗಳನ್ನು ಮಾಡಿದೆ ಎಂದರು.
 
ನೀರಾವರಿಗೆ ಸಂಬಂಧಿಸಿದಂತೆ 62 ಕೋಟಿ ರೂ.ವೆಚ್ಚದ ರಾವಿ ನಾಲಾ ಯೋಜನೆ ಪೂರ್ಣಗೊಂಡಿದೆ. 45 ಕೋಟಿ ರೂ. ವೆಚ್ಚದ ತಸ್ಸಾರ್ ಚಲನ್ ತೀನ್ ತಾಳ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ. ಝೀಲಂ ಮತ್ತು ಉಪನದಿಗಳ ಪ್ರವಾಹ ನಿರ್ವಹಣೆಗಾಗಿ 399 ಕೋಟಿ ರೂ. ಮೌಲ್ಯದ 3ನೇ ಹಂತ ಪೂರ್ಣಗೊಂಡಿದೆ. 1,632 ಕೋಟಿ ರೂ. ಮೌಲ್ಯದ 2ನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಮೊದಲ ಹಂತ  ಪೂರ್ಣಗೊಂಡ ನಂತರ, ಪ್ರಸರಣ ಸಾಮರ್ಥ್ಯವು 31,885ರಿಂದ 41,000ಕ್ಕೆ ಏರಿದೆ. ಶಹಪುರ ಕಂಡಿ ಅಣೆಕಟ್ಟು ಯೋಜನೆಯೂ ಪೂರ್ಣಗೊಂಡಿದೆ. ಜಮ್ಮು ಪ್ರಾಂತ್ಯದ ಪ್ರಮುಖ ನಾಲೆಗಳಲ್ಲಿ ಹಲವು ದಶಕಗಳಿಂದ ಹೂಳು ತೆಗೆದಿರಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಹೇರಿದ 59 ದಿನಗಳಲ್ಲಿ 70 ವರ್ಷಗಳ ಬಳಿಕ ಹೂಳು ತೆಗೆಯುವ ಕಾರ್ಯ ಪೂರ್ಣಗೊಂಡಿದೆ. ರೈಲು ಜಾಲ ವಿಸ್ತರಣೆಯಾಗಿದೆ. 8.45 ಕೋಟಿ ರೂ. ವೆಚ್ಚದ ಖಾಜಿಕುಂಡ್ ಬನಿಹಾಲ್ ಸುರಂಗವನ್ನು 3,127 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 8000 ಕಿಲೋ ಮೀಟರ್‌  ಉದ್ದದ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ಜಮ್ಮು-ಕಾಶ್ಮೀರದ 10 ಕರಕುಶಲ ವಸ್ತುಗಳಿಗೆ ಜಿಐ ಟ್ಯಾಗ್, ದೋಡಾದ ಗುಚ್ಚಿ ಮಶ್ರೂಮ್‌ಗೆ ಜಿಐ ಟ್ಯಾಗ್, ಆರ್ ಎಸ್ ಪುರದ ಬಾಸ್ಮತಿ ಅಕ್ಕಿಗೆ ಸಾವಯವ ಪ್ರಮಾಣಪತ್ರ ನೀಡಲಾಗಿದೆ. ಸಮಗ್ರ ಕೃಷಿ ಅಭಿವೃದ್ಧಿಗಾಗಿ 5013 ಕೋಟಿ ರೂ. ಯೋಜನೆ ಪೂರ್ಣಗೊಂಡಿದೆ ಎಂದು ಅಮಿತ್ ಶಾ ಹೇಳಿದರು.

ದೇಶಾದ್ಯಂತ ಬಡವರಿಗೆ ನಿರ್ದಿಷ್ಟವಾಗಿ 5 ಲಕ್ಷ ರೂ.ವರೆಗಿನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತಿದ. ಆದರೆ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಜನರ ಚಿಕಿತ್ಸಾ ವೆಚ್ಚವನ್ನು ಸರ್ಕಾರ 5 ಲಕ್ಷ ರೂ. ನಿಗದಿಪಡಿಸಿದೆ. ಜಮ್ಮು-ಕಾಶ್ಮೀರವನ್ನು ಸರ್ಕಾರ ಸೂಕ್ಷ್ಮವಾಗಿ ನಿಭಾಯಿಸಿದೆ. ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು, ಕೊನೆಯದಾಗಿ ಲಭ್ಯವಿರುವ ಪ್ರವಾಸಿಗರ ಸಂಖ್ಯೆ ಸುಮಾರು 14 ಲಕ್ಷ ಇತ್ತು. ಆದರೆ 2022-23ರಲ್ಲಿ 2 ಕೋಟಿ ಪ್ರವಾಸಿಗರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಈ ವರ್ಷ 2023 ಜೂನ್ ವೇಳೆಗೆ ಈಗಾಗಲೇ 1 ಕೋಟಿ ಮುಟ್ಟಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಡಿ, 2 ಕೋಟಿ ಪ್ರವಾಸಿಗರು ಆಗಮಿಸಿದ ದಾಖಲೆಯನ್ನು ಈ ಡಿಸೆಂಬರ್ ವೇಳೆಗೆ ಮುರಿಯಲಾಗುವುದು ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು. ಜಾಗತಿಕ ಮತ್ತು ಆಧುನಿಕ ದೃಷ್ಟಿಕೋನ ಹೊಂದಿರುವ ಜಮ್ಮು ಮತ್ತು ಕಾಶ್ಮೀರವು ಪರಿಸರ ಮತ್ತು ಪ್ರಕೃತಿಯ ತಾಣವಾಗಿದೆ. ರಾಜ್ಯದಲ್ಲಿ ಹೋಮ್ ಸ್ಟೇ ನೀತಿ ರೂಪಿಸಲಾಗಿದೆ, ಚಲನಚಿತ್ರ ನೀತಿ ರೂಪಿಸಲಾಗಿದೆ, ಹೌಸ್ ಬೋಟ್‌ಗಳಿಗೆ ನೀತಿ ರೂಪಿಸುವ ಕೆಲಸವೂ ನಡೆದಿದೆ, 75 ಕೋಟಿ ರೂ. ವೆಚ್ಚದಲ್ಲಿ ಜಮ್ಮು ರೋಪ್‌ವೇ ಯೋಜನೆ ಪೂರ್ಣಗೊಳಿಸಲಾಗಿದೆ, ಕೈಗಾರಿಕಾ ನೀತಿಯನ್ನು ಸಹ ರೂಪಿಸಲಾಗಿದೆ.

ನಾವು ಮಂಡಿಸಿರುವ ವಿಧೇಯಕವು ಅನೇಕ ವರ್ಷಗಳಿಂದ ವಂಚಿತರಾದವರು, ಹಕ್ಕುಗಳಿಂದ ವಂಚಿತರಾದವರು, ತಮ್ಮ ದೇಶ, ರಾಜ್ಯ, ಮನೆ, ಭೂಮಿ ಮತ್ತು ತಮ್ಮ ಸ್ವಂತ ದೇಶದಲ್ಲಿ ತಮ್ಮ ಆಸ್ತಿ ಕಳೆದುಕೊಂಡವರಿಗೆ ಹಕ್ಕು ನೀಡುವ ಮಸೂದೆಯಾಗಿದೆ. ನಿರ್ಗತಿಕ. ಹಿಂದುಳಿದ ವರ್ಗಗಳ ಜನರಿಗೆ ಸಾಂವಿಧಾನಿಕ ಪದ ನೀಡಿ, ಇತರೆ ಹಿಂದುಳಿದ ವರ್ಗಗಳೊಂದಿಗೆ ಗೌರವಿಸುವ ಮಸೂದೆ ಇದಾಗಿದೆ. ಈ ಮಸೂದೆಯ ಉದ್ದೇಶವು ಅತ್ಯಂತ ಪವಿತ್ರವಾಗಿದೆ. ಹಾಗಾಗಿ, ಮಸೂದೆ ಅಂಗೀಕರಿಸಲು ಸಹಕಾರ ನೀಡಬೇಕು ಎಂದು ಕೇಂದ್ರ ಗೃಹ ಸಚಿವರು ಸದನಕ್ಕೆ ಮನವಿ ಮಾಡಿದರು. 

*****
 



(Release ID: 1983418) Visitor Counter : 112