ಪ್ರಧಾನ ಮಂತ್ರಿಯವರ ಕಛೇರಿ

ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗಿನ ಸಂವಾದದ ವೇಳೆ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

Posted On: 30 NOV 2023 4:40PM by PIB Bengaluru

ವಿವಿಧ ರಾಜ್ಯಗಳ ಗೌರವಾನ್ವಿತ ರಾಜ್ಯಪಾಲರೇ, ಎಲ್ಲಾ ಮುಖ್ಯಮಂತ್ರಿಗಳೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರೇ, ಸಂಸತ್ ಸದಸ್ಯರೇ ಮತ್ತು ಶಾಸಕರೇ, ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ತಾಯಂದಿರೇ, ಹಳ್ಳಿಗಳಿಂದ ಬಂದ ನನ್ನ ರೈತ ಸಹೋದರ ಸಹೋದರಿಯರೇ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ಕಾರ್ಯಕ್ರಮಕ್ಕೆ ಸೇರಿದ ನನ್ನ ಯುವ ಸ್ನೇಹಿತರೇ.

ಇಂದು, ನಾನು ಪ್ರತಿ ಹಳ್ಳಿಯಿಂದ ದೊಡ್ಡ ಸಂಖ್ಯೆಯ ಜನರನ್ನು, ಲಕ್ಷಾಂತರ ನಾಗರಿಕರನ್ನು ನೋಡುತ್ತಿದ್ದೇನೆ. ನನ್ನ ಪಾಲಿಗೆ ಇಡೀ ರಾಷ್ಟ್ರವು ನನ್ನ ಕುಟುಂಬವಾಗಿದೆ. ಆದ್ದರಿಂದ ನೀವೆಲ್ಲರೂ ನನ್ನ ಕುಟುಂಬ ಸದಸ್ಯರು. ಇಂದು, ನನ್ನ ಕುಟುಂಬದ ಎಲ್ಲಾ ಸದಸ್ಯರನ್ನು ನೋಡುವ ಅವಕಾಶ ನನಗೆ ಸಿಕ್ಕಿದೆ. ದೂರದಿಂದ ಬಂದರೂ, ನಿಮ್ಮ ಉಪಸ್ಥಿತಿ ನನಗೆ ಶಕ್ತಿಯನ್ನು ನೀಡುತ್ತದೆ. ಈ ಕಾರ್ಯಕ್ರಮಕ್ಕೆ ಹಾಜರಾಗಲು ನಿಮ್ಮ ಸಮಯವನ್ನು ನೀಡಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ.

ಇಂದು, ʻವಿಕಸಿತ ಭಾರತ ಸಂಕಲ್ಪ ಯಾತ್ರೆʼ(ಅಭಿವೃದ್ಧಿ ಹೊಂದಿದ ಭಾರತ ಪ್ರಯಾಣದ ಸಂಕಲ್ಪ) 15 ದಿನಗಳನ್ನು ಪೂರೈಸುತ್ತಿದೆ. ಬಹುಶಃ ಆರಂಭದಲ್ಲಿ ಈ ಯಾತ್ರೆಯನ್ನು ಹೇಗೆ ಪ್ರಾರಂಭಿಸಬೇಕು, ಯಾವ ರೀತಿಯ ಸಿದ್ಧತೆಗಳನ್ನು ಮಾಡಬೇಕು ಎಂಬ ವಿಚಾರವಾಗಿ ಕೆಲವು ತೊಂದರೆಗಳು ಇದ್ದವು. ಆದರೆ ಕಳೆದ ಎರಡು ಅಥವಾ ಮೂರು ದಿನಗಳಲ್ಲಿ, ಸಾವಿರಾರು ಜನರು ಸೇರುತ್ತಿರುವ ಸುದ್ದಿಗಳನ್ನು ನಾನು ನೋಡುತ್ತಿದ್ದೇನೆ ಮತ್ತು ಕೇಳುತ್ತಿದ್ದೇನೆ. ಅಂದರೆ, ಈ 'ವಿಕಾಸ ರಥ'(ಅಭಿವೃದ್ಧಿ ರಥ) ಮುಂದೆ ಸಾಗಿದಂತೆ, ಕೇವಲ 15 ದಿನಗಳಲ್ಲಿ ಜನರು ಅದರ ಹೆಸರನ್ನು ಬದಲಾಯಿಸಿದ್ದಾರೆ ಎಂದು ನಾನು ಕೇಳಲ್ಪಟ್ಟೆ. ಸರ್ಕಾರ ಇದನ್ನು ಪ್ರಾರಂಭಿಸಿದಾಗ, ಇದನ್ನು 'ವಿಕಾಸ್ ರಥ' ಎಂದು ಕರೆಯಲಾಗುತ್ತಿತ್ತು, ಆದರೆ ಈಗ ಜನರು ಇದು 'ರಥ' ಅಲ್ಲ, ಆದರೆ ಮೋದಿಯವರ ʻಗ್ಯಾರಂಟಿʼ ವಾಹನ ಎಂದು ಹೇಳುತ್ತಿದ್ದಾರೆ. ಇದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ನಿಮಗೆ ಮೋದಿ ಮೇಲೆ ಎಷ್ಟು ವಿಶ್ವಾಸವಿಯೆಂದರೆ, ನೀವು ಅದನ್ನು ಮೋದಿಯವರ ಗ್ಯಾರಂಟಿ ವಾಹನವಾಗಿ ಪರಿವರ್ತಿಸಿದ್ದೀರಿ. ನೀವು ಮೋದಿಯವರ ʻಗ್ಯಾರಂಟಿʼ ವಾಹನ ಎಂದು ಕರೆದಿರುವ ಹಿನ್ನೆಲೆಯಲ್ಲಿ, ಮೋದಿ ಆ ಬದ್ಧತೆಯನ್ನು ಪೂರೈಸುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.

ಸ್ವಲ್ಪ ಸಮಯದ ಹಿಂದೆ, ಅನೇಕ ಫಲಾನುಭವಿಗಳೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು. ನನ್ನ ದೇಶದ ತಾಯಂದಿರು ಮತ್ತು ಸಹೋದರಿಯರು ಎಷ್ಟು ಉತ್ಸಾಹ ಮತ್ತು ಶಕ್ತಿಯುತರಾಗಿದ್ದಾರೆ, ಅವರು ಎಷ್ಟು ಆತ್ಮವಿಶ್ವಾಸ ಮತ್ತು ದೃಢನಿಶ್ಚಯದಿಂದ ತುಂಬಿದ್ದಾರೆ ಮತ್ತು ಅವರು ಎಷ್ಟು ಸಂಕಲ್ಪವನ್ನು ಹೊಂದಿದ್ದಾರೆ ಎಂಬುದನ್ನು ನೋಡಿ ನನಗೆ ಸಂತೋಷವಾಯಿತು. ಇಲ್ಲಿಯವರೆಗೆ, ಈ ಮೋದಿಯವರ ʻಗ್ಯಾರಂಟಿʼ ವಾಹನವು 12,000ಕ್ಕೂ ಹೆಚ್ಚು ಪಂಚಾಯಿತಿಗಳನ್ನು ತಲುಪಿದೆ. ಸುಮಾರು 30 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ, ಅದರಲ್ಲಿ ಸೇರ್ಪಡೆಗೊಂಡಿದ್ದಾರೆ, ಚರ್ಚೆಗಳನ್ನು ನಡೆಸಿದ್ದಾರೆ, ಪ್ರಶ್ನೆಗಳನ್ನು ಕೇಳಿದ್ದಾರೆ, ಅವರ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ, ಅವರಿಗೆ ಅಗತ್ಯವಿರುವ ಸೇವೆಗಳಿಗಾಗಿ ಅರ್ಜಿಗಳನ್ನು ಭರ್ತಿ ಮಾಡಿದ್ದಾರೆ. ಮತ್ತು ಮುಖ್ಯವಾಗಿ, ತಾಯಂದಿರು ಮತ್ತು ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮೋದಿಯವರ ಗ್ಯಾರಂಟಿ ವಾಹನವನ್ನು ತಲುಪುತ್ತಿದ್ದಾರೆ. ಬಲ್ವೀರ್ ಜೀ ಅವರು ಹೇಳಿದಂತೆ, ಕೃಷಿಯಲ್ಲಿ ತೊಡಗಿರುವ ಅನೇಕ ಸ್ಥಳಗಳಲ್ಲಿ ಜನರು ತಮ್ಮ ಕೆಲಸವನ್ನು ಬಿಟ್ಟು ಪ್ರತಿಯೊಂದು ಕಾರ್ಯಕ್ರಮಕ್ಕೆ ಹಾಜರಾಗಲು ಬಂದಿದ್ದರು. ಅಭಿವೃದ್ಧಿಯ ಬಗ್ಗೆ ಜನರಿಗೆ ಎಷ್ಟು ವಿಶ್ವಾಸವಿದೆ ಎಂಬುದನ್ನು ಇದು ತೋರಿಸುತ್ತದೆ. ಇಂದು, ಹಳ್ಳಿಗಳ ಜನರು ಸಹ ಅಭಿವೃದ್ಧಿಯ ಮಹತ್ವವನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ.

ಜನರು ಕೇವಲ ಈ 'ವಿಕಸಿತ ಭಾರತ ಸಂಕಲ್ಪಯಾತ್ರೆ'ಗೆ ಸೇರುತ್ತಿರುವುದು ಮಾತ್ರವಲ್ಲ, ಅವರು ತುಂಬಾ ಉತ್ಸುಕರಾಗಿದ್ದಾರೆ, ಅದನ್ನು ಸ್ವಾಗತಿಸುತ್ತಿದ್ದಾರೆ, ಅತ್ಯುತ್ತಮ ಸಿದ್ಧತೆಗಳನ್ನು ಮಾಡುತ್ತಿದ್ದಾರೆ ಮತ್ತು ಪ್ರತಿ ಹಳ್ಳಿಗೆ ಮಾಹಿತಿಯನ್ನು ಒದಗಿಸುತ್ತಿದ್ದಾರೆ. ನಾಗರಿಕರು ಈ ಇಡೀ ಅಭಿಯಾನವನ್ನು ಜನಾಂದೋಲನವನ್ನಾಗಿ ಪರಿವರ್ತಿಸಿದ್ದಾರೆ. ಜನರು 'ವಿಕಸಿತ ಭಾರತ ರಥʼಗಳನ್ನು ಸ್ವಾಗತಿಸುವ ರೀತಿ, ಈ ರಥಗಳೊಂದಿಗೆ ಅವರು ಚಲಿಸುವ ರೀತಿ ಅಭೂತಪೂರ್ವವಾಗಿದೆ. ಸರ್ಕಾರಕ್ಕಾಗಿ ಕೆಲಸ ಮಾಡುವ ನನ್ನ ಸಹೋದ್ಯೋಗಿಗಳು, ನನ್ನ ದುಡಿಯುವ ಸಹೋದರ-ಸಹೋದರಿಯರನ್ನು ಸಹ ದೇವರಂತೆ ಸ್ವಾಗತಿಸಲಾಗುತ್ತಿದೆ. ಸಮಾಜದ ಪ್ರತಿಯೊಂದು ವರ್ಗದ ಯುವಕರು ಮತ್ತು ಜನರು 'ವಿಕಸಿತ ಭಾರತ ಯಾತ್ರೆ'ಗೆ ಸೇರುತ್ತಿರುವ ರೀತಿ ಅಮೋಘವಾಗಿದೆ.  ನಾನು ವಿವಿಧ ಸ್ಥಳಗಳಿಂದ ವೀಡಿಯೊಗಳನ್ನು ನೋಡಿದ್ದೇನೆ, ಅವು ತುಂಬಾ ಸ್ಪೂರ್ತಿದಾಯಕವಾಗಿವೆ. ಪ್ರತಿಯೊಬ್ಬರೂ ತಮ್ಮ ಹಳ್ಳಿಯ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದನ್ನು ನಾನು ನೋಡುತ್ತೇನೆ. ನೀವು ಅದನ್ನು ʻನಮೋ ಆ್ಯಪ್‌ʼನಲ್ಲಿ ಸಹ ಅಪ್‌ಲೋಡ್ ಮಾಡಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ನಾನು ಈ ಎಲ್ಲಾ ಚಟುವಟಿಕೆಗಳನ್ನು ಪ್ರತಿದಿನ ʻನಮೋ ಆ್ಯಪ್‌ʼನಲ್ಲಿ ನೋಡುತ್ತೇನೆ. ದೇಶದಲ್ಲಿ ಯಾವುದೇ ಭಾಗಕ್ಕೆ ನಾನು ಭೇಟಿ ನೀಡಿದರೂ, ಯಾವ ಹಳ್ಳಿ ಮತ್ತು ಯಾವ ರಾಜ್ಯವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನಾನು ನಿರಂತರವಾಗಿ ನೋಡುತ್ತಿರುತ್ತೇನೆ.  ಯುವಕರು ಒಂದು ರೀತಿಯಲ್ಲಿ 'ವಿಕಸಿತ ಭಾರತʼದ ರಾಯಭಾರಿಗಳಾಗಿದ್ದಾರೆ. ಅವರ ಉತ್ಸಾಹ ಅದ್ಭುತವಾದುದು.

ಯುವಕರು ನಿರಂತರವಾಗಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ, ತಮ್ಮ ಕೆಲಸದ ಬಗ್ಗೆ ಸಂದೇಶವನ್ನು ಹರಡುತ್ತಿದ್ದಾರೆ. ಮೋದಿಯವರ ʻಗ್ಯಾರಂಟಿʼ ವಾಹನ ಬರುವ ಎರಡು ದಿನಗಳ ಮೊದಲು ಕೆಲವು ಹಳ್ಳಿಗಳ ಜನರು ಬೃಹತ್ ಸ್ವಚ್ಚತಾ ಅಭಿಯಾನವನ್ನು ಪ್ರಾರಂಭಿಸಿದ್ದನ್ನು ನಾನು ನೋಡಿದ್ದೇನೆ. ಅವರು ಅದನ್ನು ಏಕೆ ಮಾಡಿದರು? ಏಕೆಂದರೆ ಮೋದಿಯವರ ಗ್ಯಾರಂಟಿ ವಾಹನ ಬರುತ್ತದೆ ಎಂಬ ಕಾರಣಕ್ಕಾಗಿ. ಈ ಉತ್ಸಾಹ ಮತ್ತು ಈ ಬದ್ಧತೆಯು ಅದ್ಭುತ ಪ್ರೇರಣೆಯಾಗಿದೆ.

ಹಳ್ಳಿಯಲ್ಲಿ ದೀಪಾವಳಿಯಂತೆಯೇ ಜನರು ವಾದ್ಯಗಳನ್ನು ನುಡಿಸುವುದನ್ನು, ಹೊಸ ಉಡುಪನ್ನು ಧರಿಸುವುದನ್ನು ನಾನು ನೋಡಿದ್ದೇನೆ. ಜನರು ಅದೇ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. 'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯನ್ನು ವೀಕ್ಷಿಸುತ್ತಿರುವ ಎಲ್ಲರೂ ಈಗ ಭಾರತವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ; ʻಭರತʼ ಮುನ್ನಡೆಯುತ್ತಿದೆ. ಭಾರತವು ತನ್ನ ಗುರಿಗಳನ್ನು ಮೀರಬೇಕು. ಭಾರತವು ಎಂದಿಗೂ ನಿಲ್ಲುವುದಿಲ್ಲ ಅಥವಾ ದಣಿಯುವುದಿಲ್ಲ. ಈಗ, ಭಾರತವನ್ನು 'ವಿಕಸಿತ ಭಾರತ'ವನ್ನಾಗಿ ಮಾಡುವುದು 140 ಕೋಟಿ ನಾಗರಿಕರ ಸಂಕಲ್ಪವಾಗಿದೆ. ನಾಗರಿಕರು ಈ ಸಂಕಲ್ಪವನ್ನು ಮಾಡಿದಾಗ, ದೇಶವು ಖಂಡಿತ ಅಭಿವೃದ್ಧಿ ಹೊಂದಿ ತೀರುತ್ತದೆ. ನಾನು ಇತ್ತೀಚೆಗೆ ದೀಪಾವಳಿಯ ಸಮಯದಲ್ಲಿ ಜನರು ʻವೋಕಲ್ ಫಾರ್ ಲೋಕಲ್ʼ ಅಭಿಯಾನ ನಡೆಸುವುದನ್ನು, ಸ್ಥಳೀಯ ವಸ್ತುಗಳನ್ನು ಖರೀದಿಸುವುದನ್ನು ನೋಡಿದೆ, ಇದರ ಪರಿಣಾಮವಾಗಿ ಕೋಟ್ಯಂತರ ರೂಪಾಯಿಗಳ ಖರೀದಿ ನಡೆದಿದೆ. ಇದೊಂದು ಮಹತ್ವದ ಸಾಧನೆ.

ನನ್ನ ಕುಟುಂಬ ಸದಸ್ಯರೇ,

'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯ ಉತ್ಸಾಹ ದೇಶದ ಮೂಲೆ ಮೂಲೆಯಲ್ಲೂ ಅಚಲವಾಗಿದೆ. ಇದರ ಹಿಂದಿನ ಕಾರಣವೆಂದರೆ ಕಳೆದ ದಶಕದಲ್ಲಿ ಜನರು ಮೋದಿಯವರನ್ನು ನೋಡಿದ್ದಾರೆ ಮತ್ತು ಅವರ ಕೆಲಸಕ್ಕೆ ಸಾಕ್ಷಿಯಾಗಿದ್ದಾರೆ. ಇದರ ಪರಿಣಾಮವಾಗಿ, ಅವರು ಭಾರತ ಸರ್ಕಾರದ ಮೇಲೆ ಅಪಾರ ವಿಶ್ವಾಸವನ್ನು ಹೊಂದಿದ್ದಾರೆ. ಹಿಂದಿನ ಸರ್ಕಾರಗಳು ತಮ್ಮನ್ನು ʻಸಾರ್ವಜನಿಕರ ಯಜಮಾನರುʼ ಎಂದು ಭಾವಿಸಿದ ಸಮಯವಿತ್ತು. ಈ ಕಾರಣದಿಂದಾಗಿ, ದೇಶದ ಗಮನಾರ್ಹ ಸಂಖ್ಯೆಯ ಜನರು ಸ್ವಾತಂತ್ರ್ಯದ ದಶಕಗಳ ನಂತರವೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದರು. ಮಧ್ಯವರ್ತಿಯ ಸಹಾಯವಿಲ್ಲದೆ ಅವರು ಯಾವುದೇ ಸರ್ಕಾರಿ ಇಲಾಖೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಮಧ್ಯವರ್ತಿಗೆ ಲಂಚ ನೀಡುವವರೆಗೆ, ಅವರು ದಾಖಲೆಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಮನೆ ಇಲ್ಲ, ಶೌಚಾಲಯ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ, ಗ್ಯಾಸ್ ಸಂಪರ್ಕವಿಲ್ಲ, ವಿಮೆ ಇಲ್ಲ, ಪಿಂಚಣಿ ಇಲ್ಲ, ಬ್ಯಾಂಕ್ ಖಾತೆಯೂ  ಇಲ್ಲ - ಇದು ದೇಶದ ಸ್ಥಿತಿಯಾಗಿತ್ತು. ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಸರ್ಕಾರಗಳ ಬಗ್ಗೆ ಭ್ರಮನಿರಸನಗೊಂಡಿದ್ದರು.  ಅವರಿಗೆ ಬ್ಯಾಂಕ್ ಖಾತೆಯನ್ನು ಸಹ ತೆರೆಯಲು ಸಾಧ್ಯವಾಗಲಿಲ್ಲ ಎಂದು ತಿಳಿದರೆ ನಿಮಗೆ ಆಘಾತವಾಗಬಹುದು. ಜನರ ಭರವಸೆಗಳು ಭಗ್ನಗೊಂಡವು. ಕೆಲವೇ ಜನರು ಮಾತ್ರ ತಮ್ಮ ಧೈರ್ಯವನ್ನು ಒಟ್ಟುಗೂಡಿಸಿ ಕೆಲವು ಶಿಫಾರಸುಗಳ ಆಧಾರದ ಮೇಲೆ ಸ್ಥಳೀಯ ಸರ್ಕಾರಿ ಕಚೇರಿಗಳಿಗೆ ಹೋಗಹುದಾಗಿತ್ತು  ಮತ್ತು ಲಂಚ ನೀಡಿದ ನಂತರ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಬಹುದಿತ್ತು. ಸಣ್ಣ ಕೆಲಸಗಳಿಗೂ ಅವರು ಭಾರಿ ಲಂಚ ನೀಡಬೇಕಾಗಿತ್ತು.

ಸರ್ಕಾರಗಳು ಪ್ರತಿಯೊಂದು ಕೆಲಸದಲ್ಲೂ ರಾಜಕೀಯವನ್ನು ನೋಡುತ್ತಿದ್ದವು. ಚುನಾವಣೆಯ ಸಮಯದಲ್ಲಿ ಅವುಗಳ ಗಮನವು ವೋಟ್ ಬ್ಯಾಂಕ್‌ಗಳ ಮೇಲೆ ಇರುತ್ತಿತ್ತು. ಸರ್ಕಾರಗಳು ವೋಟ್ ಬ್ಯಾಂಕ್ ಆಟ ಆಡುತ್ತಿದ್ದವು. ಸರ್ಕಾರಗಳ ಮುಖಂಡರು ಹಳ್ಳಿಗೆ ಹೋದರೆ, ಕೇವಲ ತಮಗೆ ಮತಗಳು ದೊರೆಯುವ ಹಳ್ಳಿಗಳಿಗೆ ಮಾತ್ರ ಹೋಗುತ್ತಿದ್ದರು. ಅವರು ಮೊಹಲ್ಲಾಗೆ ಹೋದರೆ, ತಮಗೆ ಮತಗಳನ್ನು ನೀಡುವ ಮೊಹಲ್ಲಾಗೆ ಮಾತ್ರ ಭೇಟಿ ನೀಡುತ್ತಿದ್ದರು. ಈ ತಾರತಮ್ಯ, ಈ ಅನ್ಯಾಯ ರೂಢಿಗತವಾಗಿತ್ತು. ಮತಗಳನ್ನು ಪಡೆಯುವ ವಿಶ್ವಾಸ ಹೊಂದಿದ್ದ ಪ್ರದೇಶಗಳತ್ತ ಅವರು ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಆದ್ದರಿಂದ, ಅಂತಹ ಸರ್ಕಾರಗಳ ಪ್ರಕಟಣೆಗಳಲ್ಲಿ ಹೆಚ್ಚಿನ ನಂಬಿಕೆ ಇರಲಿಲ್ಲ.

ನಮ್ಮ ಸರ್ಕಾರವು ಈ ನಿರಾಶಾದಾಯಕ ಪರಿಸ್ಥಿತಿಯನ್ನು ಬದಲಾಯಿಸಿದೆ. ಪ್ರಸ್ತುತ ಸರ್ಕಾರವು ಜನರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ, ಅವರನ್ನು ದೇವರ ಸಾಕಾರರೂಪವೆಂದು ಪರಿಗಣಿಸುತ್ತದೆ. ನಾವು ಅಧಿಕಾರದ ಹಿಂದೆ ಬಿದ್ದಿಲ್ಲ, ಆದರೆ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದೇವೆ. ಇಂದಿಗೂ ನಾನು ನಿಮ್ಮೊಂದಿಗೆ ಪ್ರತಿ ಹಳ್ಳಿಗೂ ಅದೇ ಸೇವಾ ಮನೋಭಾವದಿಂದ ಹೋಗುವುದಾಗಿ ಪ್ರತಿಜ್ಞೆ ಮಾಡಿದ್ದೇನೆ. ಇಂದು, ದೇಶವು ಹಿಂದಿನ ದುರಾಡಳಿತದ ಯುಗವನ್ನು ಬಿಟ್ಟು ಉತ್ತಮ ಆಡಳಿತವನ್ನು ಬಯಸುತ್ತದೆ. ಉತ್ತಮ ಆಡಳಿತ ಎಂದರೆ ಪ್ರತಿಯೊಬ್ಬರೂ 100% ಪ್ರಯೋಜನಗಳನ್ನು ಪಡೆಯಬೇಕು, ಪರಿಪೂರ್ಣತೆ ಇರಬೇಕು. ಯಾರೂ ಸಹ ಹಿಂದೆ ಬೀಳಲು ಬಿಡಬಾರದು; ಅರ್ಹರಾದ ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಪಡೆಯುವಂತಾಗಬೇಕು.

ಸರ್ಕಾರವು ನಾಗರಿಕರ ಅಗತ್ಯಗಳನ್ನು ಗುರುತಿಸಬೇಕು ಮತ್ತು ಅವರಿಗೆ ಅವರ ಹಕ್ಕುಗಳನ್ನು ನೀಡಬೇಕು. ಇದು ಸ್ವಾಭಾವಿಕ ನ್ಯಾಯ ಮತ್ತು ನಿಜವಾದ ಸಾಮಾಜಿಕ ನ್ಯಾಯವೂ ಆಗಿದೆ. "ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ, ನಮ್ಮ ಮಾತನ್ನು ಯಾರು ಕೇಳುತ್ತಾರೆ, ನಮ್ಮನ್ನು ಯಾರು ಭೇಟಿಯಾಗುತ್ತಾರೆ?" ಎಂದು ಲಕ್ಷಾಂತರ ಜನರು ಯೋಚಿಸುತ್ತಿದ್ದರು. ನಮ್ಮ ಸರ್ಕಾರದ ಕಾರ್ಯವಿಧಾನದಿಂದಾಗಿ, ಅಂತಹ ಮನಸ್ಥಿತಿ ಕೊನೆಗೊಂಡಿದೆ. ಅಷ್ಟೇ ಅಲ್ಲ, ಈಗ ಈ ಜನರು ಈ ದೇಶದಲ್ಲಿ ತಮಗೂ ಹಕ್ಕುಗಳಿವೆ, ನಾವೂ ಸಹ ಸಹ ಅರ್ಹರು ಎಂದು ಭಾವಿಸುತ್ತಿದ್ದಾರೆ, "ನನ್ನ ಯಾವುದೇ ಹಕ್ಕುಗಳನ್ನು ಕಸಿದುಕೊಳ್ಳಬಾರದು, ನನ್ನ ಹಕ್ಕುಗಳನ್ನು ತಡೆಯಬಾರದು ಮತ್ತು ನಾನು ನನ್ನ ಹಕ್ಕುಗಳನ್ನು ಪಡೆಯಬೇಕು" ಎಂದು ಬಯಸುತ್ತಾರೆ. ಜನರು ಇಂದು ತಾವು ಇರುವೆಡೆಯಿಂಧ ಮುಂದೆ ಸಾಗಲು ಬಯಸುತ್ತಾರೆ. ನಾನು ಪೂರ್ಣಾ ಅವರ ಜೊತೆ ಸಂವಾದ ಮಾಡುತ್ತಿದ್ದಾಗ, "ನಾನು ನನ್ನ ಮಗನನ್ನು ಎಂಜಿನಿಯರ್ ಮಾಡಲು ಬಯಸುತ್ತೇನೆ" ಎಂದು ಅವರು ಹೇಳಿದರು. ಈ ಮಹತ್ವಾಕಾಂಕ್ಷೆಯೇ ನಮ್ಮ ದೇಶವನ್ನು ಅಭಿವೃದ್ಧಿಪಡಿಸುತ್ತದೆ. ಹತ್ತು ವರ್ಷಗಳಲ್ಲಿ ಯಶೋಗಾಥೆಗಳನ್ನು ಕೇಳಿದಾಗ ಆಕಾಂಕ್ಷೆಗಳು ಯಶಸ್ವಿಯಾಗುತ್ತವೆ.

ನಿಮ್ಮ ಸ್ಥಳಕ್ಕೆ ಬಂದಿರುವ ಈ ಮೋದಿಯವರ ʻಗ್ಯಾರಂಟಿʼ ವಾಹನವು ನಾವು ಇಲ್ಲಿಯವರೆಗೆ ಏನು ಮಾಡಿದ್ದೇವೆ ಎಂಬುದನ್ನು ನಿಮಗೆ ಹೇಳುತ್ತದೆ. ನಮ್ಮದು ಅತ್ಯಂತ ವಿಶಾಲವಾದ ದೇಶ. ಹೀಗಾಗಿ ಇನ್ನೂ ಕೆಲವು ಹಳ್ಳಿಗಳಲ್ಲಿ ಇನ್ನೂ ಕೆಲವು ಜನರು ಉಳಿದಿರಬೇಕು. ಹೀಗಾಗಿ ಯಾರು ಉಳಿದಿದ್ದಾರೆ ಎಂಬುದನ್ನು ಕಂಡುಹಿಡಿಯಲು ಮೋದಿ ಬಂದಿದ್ದಾರೆ. ಇದರಿಂದಾಗಿ ಮುಂದಿನ ಐದು ವರ್ಷಗಳಲ್ಲಿ ನಾನು ಅವರ ಕೆಲಸವನ್ನು ಸಹ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ನೀವು ದೇಶದ ಯಾವುದೇ ಭಾಗಕ್ಕೆ ಹೋದರೂ, ಒಂದು ವಿಷಯ ಕೇಳುತ್ತದೆ ಮತ್ತು ಅದು ಜನರ ಧ್ವನಿಯಾಗಿರುತ್ತದೆ ಎಂದು ನಾನು ನಂಬುತ್ತೇನೆ. ಅನುಭವದ ಆಧಾರದ ಮೇಲೆ, ಅವರು ಹೃದಯದಿಂದ ಈ ಮಾತನ್ನು ಹೇಳುತ್ತಾರೆ, “ಎಲ್ಲಿ ಇತರರ ಭರವಸೆಯು ಕೊನೆಗೊಳ್ಳುತ್ತದೆಯೋ, ಅಲ್ಲಿಂದ ಮೋದಿಯವರ ಗ್ಯಾರಂಟಿ ಪ್ರಾರಂಭವಾಗುತ್ತದೆ!” ಅದಕ್ಕಾಗಿಯೇ ಮೋದಿಯವರ ಗ್ಯಾರಂಟಿಯೊಂದಿಗೆ ವಾಹನವು ಅಂತಹ ಸಂಚಲನವನ್ನು ಸೃಷ್ಟಿಸುತ್ತಿದೆ!

ಸ್ನೇಹಿತರೇ,

'ವಿಕಸಿತ ಭಾರತ'ದ ಸಂಕಲ್ಪ ಕೇವಲ ಮೋದಿ ಅಥವಾ ಯಾವುದೋ ಒಂದು ಸರ್ಕಾರದದ್ದಲ್ಲ. ಇದು 'ಸಬ್ ಕಾ ಸಾಥ್' ಮೂಲಕ ಎಲ್ಲರ ಕನಸುಗಳನ್ನು ಈಡೇರಿಸುವ ಸಂಕಲ್ಪವಾಗಿದೆ. ಇದು ನಿಮ್ಮ ನಿರ್ಣಯಗಳನ್ನು ಪೂರೈಸಲು ಸಹ ಬಯಸುತ್ತದೆ. ನಿಮ್ಮ ಆಸೆಗಳು ಈಡೇರುವ ವಾತಾವರಣವನ್ನು ಸೃಷ್ಟಿಸಲು ಅದು ಬಯಸುತ್ತದೆ. 'ವಿಕಸಿತ ಭಾರತ ಸಂಕಲ್ಪ ಯಾತ್ರೆ' ಇಲ್ಲಿಯವರೆಗೆ ನಿರ್ಲಕ್ಷಿಸಲ್ಪಟ್ಟ, ಅವುಗಳ ಬಗ್ಗೆ ಮಾಹಿತಿಯಿಲ್ಲದ ಜನರಿಗೆ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಕೊಂಡೊಯ್ಯುತ್ತಿದೆ. ಅವರ ಬಳಿ ಮಾಹಿತಿ ಇದ್ದರೂ ಸಹ, ಆ ಯೋಜನೆಗಳ ಪ್ರಯೋಜನಗಳನ್ನು ಹೇಗೆ ಪಡೆಯುವುದು ಎಂದು ಅವರಿಗೆ ತಿಳಿದಿಲ್ಲ. ಇಂದು, ಜನರು ವಿವಿಧ ಸ್ಥಳಗಳಿಂದ ಚಿತ್ರಗಳನ್ನು ʻನಮೋ ಆ್ಯಪ್‌ʼಗೆ ಕಳುಹಿಸುತ್ತಿದ್ದಾರೆ. ನಾನು ಅವುಗಳನ್ನು ನಿಯಮಿತವಾಗಿ ಪರಿಶೀಲಿಸುತ್ತೇನೆ. ಡ್ರೋನ್ ಪ್ರದರ್ಶನಗಳು ಎಲ್ಲೆಡೆ ನಡೆಯುತ್ತಿವೆ, ಕೆಲವೆಡೆ ಆರೋಗ್ಯ ತಪಾಸಣೆಯೂ  ನಡೆಯುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿ ಕುಡಗೋಲು ಕೋಶ ರಕ್ತಹೀನತೆಯನ್ನು ಪತ್ತೆ ಮಾಡಲು ಶಿಬಿರಗಳನ್ನು ನಡೆಸಲಾಗುತ್ತಿದೆ. ಸಂಕಲ್ಪ ಯಾತ್ರ ತಲುಪಿದ ಪಂಚಾಯಿತಿಗಳು ದೀಪಾವಳಿಯನ್ನು ಆಚರಿಸಿವೆ. ಪರಿಪೂರ್ಣತೆಯನ್ನು ಸಾಧಿಸಿದ ಅಂತಹ ಅನೇಕ ಪಂಚಾಯಿತಿಗಳಿವೆ; ಪ್ರತಿಯೊಬ್ಬರೂ ಯಾವುದೇ ತಾರತಮ್ಯವಿಲ್ಲದೆ ಅವರಿಗೆ ಸಲ್ಲಬೇಕಾದದ್ದನ್ನು ಪಡೆದಿದ್ದಾರೆ. ಫಲಾನುಭವಿಗಳನ್ನು ಕೈಬಿಟ್ಟ ಸ್ಥಳಗಳಲ್ಲಿ, ಅವರಿಗೂ ಈಗ ಮಾಹಿತಿ ನೀಡಲಾಗುತ್ತಿದ್ದು ಮುಂದೆ ಅವರು ಸಹ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ.

ಅಂಥವರು ತಕ್ಷಣವೇ ʻಉಜ್ವಲʼ ಮತ್ತು ʻಆಯುಷ್ಮಾನ್ ಕಾರ್ಡ್ʼಗಳಂತಹ ಯೋಜನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಮೊದಲ ಹಂತದಲ್ಲಿ 40,000ಕ್ಕೂ ಹೆಚ್ಚು ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಉಜ್ವಲ ಅನಿಲ ಸಂಪರ್ಕವನ್ನು ನೀಡಲಾಗಿದೆ. ಪ್ರಯಾಣದ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ʻಮೈ ಭಾರತ್ ಸ್ವಯಂಸೇವಕʼರು ಸಹ ನೋಂದಾಯಿಸಿಕೊಳ್ಳುತ್ತಿದ್ದಾರೆ. ನಿಮಗೆ ಗೊತ್ತೇ, ಕೆಲವು ದಿನಗಳ ಹಿಂದೆ, ನಾವು ರಾಷ್ಟ್ರವ್ಯಾಪಿ ಮಟ್ಟದಲ್ಲಿ ಯುವಕರ ಸಂಘಟನೆಯನ್ನು ಪ್ರಾರಂಭಿಸಿದ್ದೇವೆ. ಅದರ ಹೆಸರು ʻಮೈ ಭಾರತ್ʼ. ಪ್ರತಿ ಪಂಚಾಯಿತಿಯಲ್ಲಿ ಸಾಧ್ಯವಾದಷ್ಟು ಯುವಕರು ಈ ʻಮೈ ಭಾರತ್ʼ ಅಭಿಯಾನಕ್ಕೆ ಸೇರಬೇಕು ಎಂಬುದು ನನ್ನ ವಿನಂತಿ. ಅದರಲ್ಲಿ ನಿಮ್ಮ ಮಾಹಿತಿಯನ್ನು ಒದಗಿಸಿ, ಮತ್ತು ನಾನು ನಿಮ್ಮೊಂದಿಗೆ ಆಗಾಗ್ಗೆ ಮಾತನಾಡುತ್ತಲೇ ಇರುತ್ತೇನೆ. ನಿಮ್ಮ ಶಕ್ತಿ 'ವಿಕಸಿತ ಭಾರತ'ವನ್ನು ನಿರ್ಮಿಸುವ ಶಕ್ತಿಯಾಗಲಿ; ನಾವು ಒಟ್ಟಾಗಿ ಕೆಲಸ ಮಾಡೋಣ.

ನನ್ನ ಕುಟುಂಬ ಸದಸ್ಯರೇ,

ಈ ಯಾತ್ರೆಯು ನವೆಂಬರ್ 15ರಂದು ಅಂದರೆ, ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯಂದು ಪ್ರಾರಂಭವಾಯಿತು ಎಂದು ನಿಮಗೆ ನೆನಪಿರಬಹುದು. ಅದು 'ಜನ್‌ಜಾತೀಯ ಗೌರವ್ ದಿವಸ್' (ಬುಡಕಟ್ಟು ಹೆಮ್ಮೆಯ ದಿನ). ನಾನು ಜಾರ್ಖಂಡ್‌ನ ದಟ್ಟ ಕಾಡಿನ ನಡುವೆ ಸಣ್ಣ ಪುಟ್ಟ ಹಳ್ಳಿಯಲ್ಲಿ ಈ ಯಾತ್ರೆಗೆ ಚಾಲನೆ ನೀಡಿದೆ. ನಾನು ಈ ಕಾರ್ಯಕ್ರಮವನ್ನು ʻಭಾರತ ಮಂಟಪʼ ಅಥವಾ ʻಯಶೋಭೂಮಿʼಯಲ್ಲಿ ಭವ್ಯವಾಗಿ ಶುರು ಮಾಡಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಚುನಾವಣಾ ಅಖಾಡವನ್ನು ಬಿಟ್ಟು, ನಾನು ಬುಡಕಟ್ಟು ಜನರ ನಡುವೆ ಜಾರ್ಖಂಡ್‌ನ ಖುಂಟಿಗೆ ಹೋಗಿ ಈ ಯಾತ್ರೆಯನ್ನು ಪ್ರಾರಂಭಿಸಿದೆ.

ಯಾತ್ರೆ ಪ್ರಾರಂಭವಾದ ದಿನ, ನಾನು ಇನ್ನೂ ಒಂದು ವಿಷಯವನ್ನು ಹೇಳಿದೆ. 'ವಿಕಸಿತ ಭಾರತ'ದ ಸಂಕಲ್ಪವು ನಾಲ್ಕು ʻಅಮೃತ ಸ್ತಂಭʼಗಳ ಮೇಲೆ ದೃಢವಾಗಿ ನಿಂತಿದೆ ಎಂದು ನಾನು ಅಂದು ಹೇಳಿದೆ. ನಾವು ಈ ʻಅಮೃತ ಸ್ತಂಭʼಗಳ ಮೇಲೆ ಗಮನ ಹರಿಸಬೇಕಾಗಿದೆ. ಮೊದಲ ಅಮೃತ ಸ್ತಂಭವೆಂದರೆ ನಮ್ಮ ಮಹಿಳಾ ಶಕ್ತಿ, ಎರಡನೇ ಅಮೃತ ಸ್ತಂಭ ನಮ್ಮ ಯುವ ಶಕ್ತಿ, ಮೂರನೇ ಅಮೃತ ಸ್ತಂಭ ನಮ್ಮ ರೈತ ಸಹೋದರ-ಸಹೋದರಿಯರು ಮತ್ತು ನಾಲ್ಕನೇ ಅಮೃತ ಸ್ತಂಭವೆಂದರೆ ಅದು ನಮ್ಮ ಬಡ ಕುಟುಂಬಗಳು. ನನ್ನ ಪ್ರಕಾರ, ಇವು ದೇಶದ ನಾಲ್ಕು ಪ್ರಮುಖ ವರ್ಗಗಳು. ನನ್ನ ಪಾಲಿಗೆ ದೊಡ್ಡ ವರ್ಗವೆಂದರೆ ಅದು ಬಡವರು. ದೊಡ್ಡ ವರ್ಗವೆಂದರೆ ಎಂದರೆ ಅದು ಯುವಕರು. ನನ್ನ ಪಾಲಿಗೆ ದೊಡ್ಡ ವರ್ಗವೆಂದರೆ ಎಂದರೆ ಅದು ಮಹಿಳೆಯರು. ನನಗೆ ದೊಡ್ಡ ವರ್ಗವೆಂದರೆ ಎಂದರೆ ಅದು ರೈತರು. ಈ ನಾಲ್ಕು ವರ್ಗಗಳ ಉನ್ನತಿಯು ಭಾರತವನ್ನು ಅಭಿವೃದ್ಧಿಪಡಿಸುತ್ತದೆ. ಮತ್ತು ಈ ನಾಲ್ಕು ವರ್ಗಗಳು ಅಭಿವೃದ್ಧಿ ಹೊಂದಿದಾಗ, ಎಲ್ಲರೂ ಏಳಿಗೆ ಹೊಂದುತ್ತಾರೆ ಎಂದರ್ಥ.

ಈ ದೇಶದ ಯಾವುದೇ ಬಡ ವ್ಯಕ್ತಿಗೆ, ಅವರ ಹಿನ್ನೆಲೆಯನ್ನು ಲೆಕ್ಕಿಸದೆ, ಅವರ ಜೀವನ ಮಟ್ಟವನ್ನು ಸುಧಾರಿಸುವ ಮತ್ತು ಅವರನ್ನು ಬಡತನದಿಂದ ಮೇಲೆತ್ತುವ ಗುರಿಯನ್ನು ನಾನು ಹೊಂದಿದ್ದೇನೆ. ಈ ದೇಶದ ಯಾವುದೇ ಯುವಕರಿಗೆ, ಅವರ ಜಾತಿ ಯಾವುದೇ ಇರಲಿ, ಅವರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ನಾನು ಬಯಸುತ್ತೇನೆ. ಈ ದೇಶದ ಯಾವುದೇ ಮಹಿಳೆಯನ್ನು, ಅವರ ಜಾತಿ ಲೆಕ್ಕಿಸದೆ ಸಬಲೀಕರಣಗೊಳಿಸಲು, ಅವರ ಜೀವನದಲ್ಲಿನ ತೊಂದರೆಗಳನ್ನು ಕಡಿಮೆ ಮಾಡಲು ಮತ್ತು ದಮನಕ್ಕೊಳಗಾದ ಅವರ ಕನಸುಗಳಿಗೆ ರೆಕ್ಕೆಗಳನ್ನು ನೀಡಲು ನಾನು ಬಯಸುತ್ತೇನೆ. ಅವರು ದೃಢ ನಿಶ್ಚಯದಿಂದ ಕನಸುಗಳನ್ನು ಕಾಣಬೇಕೆಂದು ನಾನು ಬಯಸುತ್ತೇನೆ, ಆ ಕನಸು ನನಸಾಗುವವರೆಗೆ ಅವರೊಂದಿಗೆ ಇರಲು ಬಯಸುತ್ತೇನೆ. ಈ ದೇಶದ ಯಾವುದೇ ರೈತನಿಗೆ, ಅವರ ಜಾತಿಯನ್ನು ಲೆಕ್ಕಿಸದೆ, ನಾನು ಅವರ ಆದಾಯವನ್ನು ಹೆಚ್ಚಿಸಲು, ಅವರ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಅವರ ಕೃಷಿಯನ್ನು ಆಧುನೀಕರಿಸಲು ಬಯಸುತ್ತೇನೆ. ನಾನು ಅವರ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಲು ಬಯಸುತ್ತೇನೆ. ಬಡವರು, ಯುವಕರು, ಮಹಿಳೆಯರು ಮತ್ತು ರೈತರು ಈ ನಾಲ್ಕು ವರ್ಗದವರನ್ನು ಅವರ ಕಷ್ಟಗಳಿಂದ ರಕ್ಷಿಸುವವರೆಗೂ ನಾನು ವಿರಮಿಸಲು ಸಾಧ್ಯವಿಲ್ಲ. ನಾನು ಸಂಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡಲು ಮತ್ತು ಈ ನಾಲ್ಕು ವರ್ಗದವನ್ನು ಅವರ ಎಲ್ಲಾ ಸಮಸ್ಯೆಗಳಿಂದ ಮುಕ್ತಗೊಳಿಸಲು ನನ್ನನ್ನು ಆಶೀರ್ವದಿಸಿ. ಈ ನಾಲ್ಕು ವರ್ಗಗಳು ಸಶಕ್ತವಾದಾಗ, ದೇಶದ ಪ್ರತಿಯೊಂದು ವರ್ಗವೂ ಸ್ವಾಭಾವಿಕವಾಗಿ ಸಶಕ್ತವಾಗುತ್ತದೆ. ಅವರು ಸಶಕ್ತರಾದಾಗ, ಇಡೀ ದೇಶವು ಸಬಲೀಕರಣಗೊಳ್ಳುತ್ತದೆ.

ಸ್ನೇಹಿತರೇ,

ಈ ಸಿದ್ಧಾಂತಕ್ಕೆ ಅನುಗುಣವಾಗಿ, 'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯ ಸಮಯದಲ್ಲಿ ಅಂದರೆ ಮೋದಿಯವರ ʻಗ್ಯಾರಂಟಿʼ ವಾಹನ ಬಂದಾಗ ಎರಡು ಮಹತ್ವದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಿಳೆಯರನ್ನು ಸಬಲೀಕರಣಗೊಳಿವುದು ಹಾಗೂ  ತಂತ್ರಜ್ಞಾನದ ಮೂಲಕ ಕೃಷಿಯನ್ನು ಆಧುನೀಕರಿಸುವುದು ಒಂದು ಉಪ್ರಕಮ. ಮತ್ತೊಂದು ಉಪಕ್ರಮವೆಂದರೆ ಬಡವರು, ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗ ಅಥವಾ ಶ್ರೀಮಂತರು ಈ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಕೈಗೆಟುಕುವ ಔಷಧಿಗಳನ್ನು ಒದಗಿಸುವುದು ಹಾಗೂ  ಅನಾರೋಗ್ಯದಿಂದ ಯಾರೊಬ್ಬರ ಜೀವಕ್ಕೂ ಹಾನಿಯಾಗದಂತೆ ಖಚಿತಪಡಿಸುವುದು.

ಗ್ರಾಮೀಣ ಸಹೋದರಿಯರನ್ನು 'ಡ್ರೋನ್ ದೀದಿಗಳು' (ಡ್ರೋನ್ ತಂತ್ರಜ್ಞಾನದಲ್ಲಿ ಪ್ರವೀಣರಾದ ಸಹೋದರಿಯರು) ಎಂದು ನಾನು ಕೆಂಪು ಕೋಟೆಯಿಂದ ಘೋಷಿಸಿದ್ದೆ. 10, 11 ಅಥವಾ 12ನೇ ತರಗತಿಯನ್ನು ಪೂರ್ಣಗೊಳಿಸಿದ ನಮ್ಮ ಗ್ರಾಮೀಣ ಸಹೋದರಿಯರು ಇಷ್ಟು ಕಡಿಮೆ ಸಮಯದಲ್ಲಿ ಡ್ರೋನ್‌ಗಳನ್ನು ನಿರ್ವಹಿಸಲು ಕಲಿತಿದ್ದಾರೆ ಎಂದು ನಾನು ತಿಳಿಯಲ್ಪಟ್ಟೆ. ಕೃಷಿಯಲ್ಲಿ ಡ್ರೋನ್‌ಗಳನ್ನು ಹೇಗೆ ಬಳಸುವುದು, ಕೀಟನಾಶಕಗಳನ್ನು ಹೇಗೆ ಸಿಂಪಡಿಸುವುದು ಮತ್ತು ರಸಗೊಬ್ಬರಗಳನ್ನು ಹೇಗೆ ಹರಡುವುದು ಎಂಬುದನ್ನು ಅವರು ಕಲಿತಿದ್ದಾರೆ. ಆದ್ದರಿಂದ ಈ 'ಡ್ರೋನ್ ದೀದಿಗಳು' ಗೌರವಕ್ಕೆ ಅರ್ಹರು; ಅವರು ತುಂಬಾ ವೇಗವಾಗಿ ಕಲಿಯುತ್ತಿದ್ದಾರೆ. ನನ್ನ ಪಾಲಿಗೆ, ಈ ಕಾರ್ಯಕ್ರಮವು 'ಡ್ರೋನ್ ದೀದಿಗಳಿಗೆ' ಸಲ್ಲುವ ಒಂದು ಗೌರವವಾಗಿದೆ. ಆದ್ದರಿಂದ, ನಾನು ಈ ಕಾರ್ಯಕ್ರಮಕ್ಕೆ 'ನಮೋ ಡ್ರೋನ್ ದೀದಿ' ಎಂದು ಹೆಸರಿಸಿದ್ದೇನೆ. ನಮ್ಮ 'ನಮೋ ಡ್ರೋನ್ ದೀದಿ'ಯನ್ನು ಇಂದು ಪ್ರಾರಂಭಿಸಲಾಗುತ್ತಿದೆ, ಇದರಿಂದಾಗಿ ಪ್ರತಿ ಗ್ರಾಮವು 'ಡ್ರೋನ್ ದೀದಿ'ಯನ್ನು ಸ್ವಾಗತಿಸುವುದನ್ನು ಮತ್ತು ವಂದಿಸುವುದನ್ನು ಮುಂದುವರಿಸುತ್ತದೆ, ಪ್ರತಿ ಗ್ರಾಮವು 'ಡ್ರೋನ್ ದೀದಿ'ಯನ್ನು ಗೌರವಿಸುವ ವಾತಾವರಣವನ್ನು ಸೃಷ್ಟಿಸುತ್ತದೆ. ಹಾಗಾಗಿಯೇ ಕೆಲವರು ಇದರ ಹೆಸರನ್ನು 'ನಮೋ ಡ್ರೋನ್ ದೀದಿ' ಎಂದು ಸೂಚಿಸಿದ್ದಾರೆ. ಹಳ್ಳಿಯಲ್ಲಿ ಯಾರಾದರೂ 'ನಮೋ ಡ್ರೋನ್ ದೀದಿ' ಎಂದು ಹೇಳಿದರೆ, ಪ್ರತಿಯೊಬ್ಬ ಸಹೋದರಿಯ ಘನತೆ ಹೆಚ್ಚಾಗುತ್ತದೆ.

ಶೀಘ್ರದಲ್ಲೇ, 15,000 ಸ್ವಸಹಾಯ ಗುಂಪುಗಳನ್ನು 'ನಮೋ ಡ್ರೋನ್ ದೀದಿ' ಕಾರ್ಯಕ್ರಮದೊಂದಿಗೆ ಸಂಪರ್ಕಿಸಲಾಗುವುದು. ಈ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸಲಾಗುವುದು, ಮತ್ತು ಹಳ್ಳಿಗಳಲ್ಲಿನ ನಮ್ಮ ಸಹೋದರಿಯರು 'ನಮೋ ಡ್ರೋನ್ ದೀದಿ' ಮೂಲಕ ಎಲ್ಲರ ಗೌರವಕ್ಕೆ ಅರ್ಹರಾಗುತ್ತಾರೆ, ಇದು ನಮ್ಮ ರಾಷ್ಟ್ರವನ್ನು ಮುನ್ನಡೆಸುತ್ತದೆ. ನಮ್ಮ ಸಹೋದರಿಯರು ಡ್ರೋನ್ ಪೈಲಟ್‌ಗಳಾಗಲು ತರಬೇತಿ ಪಡೆಯುತ್ತಾರೆ. ಸಹೋದರಿಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸ್ವಸಹಾಯ ಗುಂಪುಗಳ ಅಭಿಯಾನದ ಮೂಲಕ, ಡ್ರೋನ್ ಕಾರ್ಯಕ್ರಮವು ಅವರನ್ನು ಸಬಲೀಕರಣಗೊಳಿಸುತ್ತದೆ. ಇದು ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಒದಗಿಸುತ್ತದೆ. ಎರಡು ಕೋಟಿ ಸಹೋದರಿಯರನ್ನು 'ಲಕ್ಷಾಧೀಶ'ರನ್ನಾಗಿ ಮಾಡುವುದು ನನ್ನ ಕನಸು. ಹಳ್ಳಿಗಳಲ್ಲಿ ವಾಸಿಸುವ, ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಕೆಲಸ ಮಾಡುವ ಎರಡು ಕೋಟಿ ಸಹೋದರಿಯರನ್ನು 'ಲಕ್ಷಾಧೀಶ'ರನ್ನಾಗಿ ಮಾಡಲು ನಾನು ಬಯಸುತ್ತೇನೆ. ನೋಡಿ, ಮೋದಿ ಸಣ್ಣದಾಗಿ ಯೋಚಿಸುವುದಿಲ್ಲ. ಅವರು ಏನೇ ಯೋಚಿಸಿದರೂ ಅದನ್ನು ಪೂರೈಸುವ ದೃಢನಿಶ್ಚಯದಿಂದ ಮುಂದಡಿ ಇಡುತ್ತಾರೆ. ಈ ಉಪಕ್ರಮವು ದೇಶದ ರೈತರಿಗೆ ಡ್ರೋನ್‌ಗಳಂತಹ ಆಧುನಿಕ ತಂತ್ರಜ್ಞಾನವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಒದಗಿಸುತ್ತದೆ ಎಂಬ ವಿಶ್ವಾನ ನನಗಿದೆ. ಇದು ಅವರ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ, ಸಮಯವನ್ನು ಉಳಿಸುತ್ತದೆ ಮತ್ತು ಕೀಟನಾಶಕ ಮತ್ತು ರಸಗೊಬ್ಬರವನ್ನು ವ್ಯರ್ಥವಾಗದಂತೆ ಉಳಿತಾಯ ಮಾಡುತ್ತದೆ.

ಸ್ನೇಹಿತರೇ,

ಇಂದು, ದೇಶದ 10,000ನೇ ಜನೌಷಧ ಕೇಂದ್ರದ ಉದ್ಘಾಟನೆಯೂ ನಡೆದಿದೆ, ಮತ್ತು ಬಾಬಾ ಅವರ ಭೂಮಿಯಿಂದ 10,000ನೇ ಜನೌಷಧ ಕೇಂದ್ರದ ಸಿಬ್ಬಂದಿಯೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಈಗ, ಈ ಕೆಲಸವು ಇಂದಿನಿಂದ ಮುಂದುವರಿಯುತ್ತದೆ. ದೇಶಾದ್ಯಂತ ವ್ಯಾಪಿಸಿರುವ ಈ ಜನೌಷಧ ಕೇಂದ್ರಗಳು ಬಡವರು, ಮಧ್ಯಮ ವರ್ಗ ಅಥವಾ ಶ್ರೀಮಂತರು ಸೇರಿದಂತೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಔಷಧಗಳನ್ನು ಒದಗಿಸುವ ಮಹತ್ವದ ಕೇಂದ್ರಗಳಾಗಿವೆ. ಹಳ್ಳಿಗಳಲ್ಲಿನ ಜನರಿಗೆ ಈ ಕೇಂದ್ರಗಳ ಹೆಸರುಗಳು ತಿಳಿದಿಲ್ಲ ಎಂದು ನಾನು ಕೇಳಿದ್ದೇನೆ. ಆದರೆ ಬಹುತೇಕ ಜನಸಾಮಾನ್ಯರು ಈ ಕೇಂದ್ರಗಳನ್ನು ʻಮೋದಿಯವರ ಔಷಧ ಅಂಗಡಿʼ ಎಂದು ಪ್ರೀತಿಯಿಂದ ಕರೆಯುತ್ತಾರೆ. ಮೋದಿಯವರ ಔಷಧ ಅಂಗಡಿಗೆ ಹೋಗುವುದಾಗಿ ಅವರು ಹೇಳುತ್ತಾರೆ. ನೀವು ಅದನ್ನು ಯಾವ ಹೆಸರಿನಿಂದಾದರೂ ಕರೆಯಬಹುದು. ಆದರೆ ನಿಮ್ಮ ಹಣ ಉಳಿತಾಯವಾಗಬೇಕು ಎಂಬುದು ನನ್ನ ಬಯಕೆ. ಅಂದರೆ ನೀವು ಅನಾರೋಗ್ಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು ಮತ್ತು ಜೊತೆಗೆ ನಿಮ್ಮ ಜೇಬಿನಲ್ಲಿ ಹಣವನ್ನು ಉಳಿಸಬೇಕು. ಈ ಎರಡೂ ಕಾರ್ಯಗಳನ್ನು ನಾನು ಮಾಡಿದ್ದೇನೆ. ನೀವು ಅನಾರೋಗ್ಯದಿಂದ ರಕ್ಷಿಸಲ್ಪಡಬೇಕು ಮತ್ತು ನಿಮ್ಮ ಜೇಬಿನಲ್ಲಿ ಹಣವನ್ನು ಉಳಿಸಬೇಕು. ಇದರರ್ಥ ಮೋದಿಯವರ ಔಷಧ ಅಂಗಡಿ.

ಈ ಜನೌಷಧ ಕೇಂದ್ರಗಳಲ್ಲಿ ಸುಮಾರು 2000 ಬಗೆಯ ಔಷಧಗಳ ಮೇಲೆ ಶೇ.80ರಿಂದ 90ರಷ್ಟು ರಿಯಾಯಿತಿ ಲಭ್ಯವಿದೆ. ಈಗ, ಒಂದು ರೂಪಾಯಿ ಬೆಲೆಯ ವಸ್ತುವು 10, 15, ಅಥವಾ 20 ಪೈಸೆಗೆ ಲಭ್ಯವಿದ್ದರೆ, ಅದು ಎಷ್ಟು ಪ್ರಯೋಜನವನ್ನು ತರುತ್ತದೆ ಎಂದು ಊಹಿಸಿ. ಉಳಿಸಿದ ಹಣವು ನಿಮ್ಮ ಮಕ್ಕಳಿಗೆ ಉಪಯುಕ್ತವಾಗಿರುತ್ತದೆ. ಆಗಸ್ಟ್ 15 ರಂದು ನಾನು ದೇಶಾದ್ಯಂತ 25,000 ಜನೌಷಧ ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಿದೆ. 25,000 ಕೇಂದ್ರಗಳನ್ನು ತಲುಪುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ  ಕೆಲಸ ಈಗಾಗಲೇ ವೇಗವಾಗಿ ಪ್ರಾರಂಭವಾಗಿದೆ. ಈ ಎರಡೂ ಯೋಜನೆಗಳಿಗಾಗಿ ನಾನು ಇಡೀ ರಾಷ್ಟ್ರಕ್ಕೆ, ವಿಶೇಷವಾಗಿ ನನ್ನ ತಾಯಂದಿರು, ಸಹೋದರಿಯರು, ರೈತರು ಮತ್ತು ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮತ್ತೊಂದು ಮಾಹಿತಿಯನ್ನು ನಿಮಗೆ ಒದಗಿಸಲು ನನಗೆ ಹರ್ಷವೆನಿಸುತ್ತದೆ. ಕೋವಿಡ್ ಸಮಯದಲ್ಲಿ ಪ್ರಾರಂಭಿಸಲಾದ ʻಗರೀಬ್ ಕಲ್ಯಾಣ್ ಅನ್ನ ಯೋಜನೆʼಯು ಊಟವನ್ನು ಒದಗಿಸುವ ಮತ್ತು ಬಡವರ ಚಿಂತೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಎಂದು ನಿಮಗೆ ಗೊತ್ತಿದೆ. ಬಡವರು ತಮ್ಮ ಒಲೆಗಳನ್ನು ಆರಿಸಬಾರದು ಮತ್ತು ಬಡ ಮಗು ಹಸಿವಿನಿಂದ ಮಲಗಬಾರದು. ಬೃಹತ್ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾವು ನಾವು ಈ ಸೇವೆಯನ್ನು ಪ್ರಾರಂಭಿಸಿದೆವು. ಇದರಿಂದಾಗಿ, ಕುಟುಂಬಗಳು ಗಮನಾರ್ಹ ಪ್ರಮಾಣದ ಹಣವನ್ನು ಉಳಿಸುತ್ತಿರುವುದನ್ನು ನಾನು ನೋಡಿದ್ದೇನೆ. ಹಣವನ್ನು ಒಳ್ಳೆಯ ಕೆಲಸಗಳಿಗೆ ಖರ್ಚು ಮಾಡಲಾಗುತ್ತಿದೆ. ಇದರ ಆಧಾರದ ಮೇಲೆ, ನಿನ್ನೆ ಸಭೆ ಸೇರಿದ ನಮ್ಮ ಸಚಿವ ಸಂಪುಟವು ಉಚಿತ ಪಡಿತರ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ನಿರ್ಧರಿಸಿದೆ. ಆದ್ದರಿಂದ, ಮುಂದಿನ ಐದು ವರ್ಷಗಳವರೆಗೆ, ನೀವು ಊಟಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ನೀವು ಉಳಿಸಿದ ಹಣವನ್ನು ನಿಮ್ಮ ʻಜನ್ ಧನ್ʼ ಖಾತೆಗೆ ಜಮಾ ಮಾಡಬೇಕು. ಆ ಹಣವನ್ನು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಬಳಸಿ. ಯೋಜನೆಗಳನ್ನು ಮಾಡಿ, ಮತ್ತು ಹಣವನ್ನು ವ್ಯರ್ಥ ಮಾಡಬೇಡಿ. ಮೋದಿ ಆಹಾರ ಧಾನ್ಯಗಳನ್ನು ಉಚಿತವಾಗಿ ಕಳುಹಿಸುತ್ತಾರೆ, ಇದರಿಂದ ನೀವು ಸಶಕ್ತರಾಗುತ್ತೀರಿ. ಈಗ, 80 ಕೋಟಿಗೂ ಹೆಚ್ಚು ನಾಗರಿಕರಿಗೆ ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರ ಒದಗಣೆ ಮುಂದುವರಿಯಲಿದೆ. ಇದು ಬಡವರಿಗೆ ಹಣ ಉಳಿತಾಯಕ್ಕೆ ದಾರಿ ಮಾಡಲಿದೆ. ಅವರು ಈ ಹಣವನ್ನು ತಮ್ಮ ಮಕ್ಕಳ ಸುಧಾರಣೆಗಾಗಿ ಹೂಡಿಕೆ ಮಾಡಬಹುದು. ಇದು ಮೋದಿಯವರ ʻಗ್ಯಾರಂಟಿʼಯೂ ಹೌದು, ನಾವು ಪೂರೈಸಿದ ಗ್ಯಾರಂಟಿ. ಅದಕ್ಕಾಗಿಯೇ ನಾನು ಹೇಳುತ್ತೇನೆ, ಮೋದಿಯವರ ʻಗ್ಯಾರಂಟಿʼ ಎಂದರೆ ಭರವಸೆಯ ನೆರವೇರಿಕೆಯೇ ಸರಿ.

ಸ್ನೇಹಿತರೇ,

ಈ ಅಭಿಯಾನದಲ್ಲಿ ಇಡೀ ಸರ್ಕಾರಿ ಯಂತ್ರ ಮತ್ತು ಸರ್ಕಾರಿ ನೌಕರರ ಪಾತ್ರ ಬಹಳ ಮಹತ್ವದ್ದಾಗಿದೆ. ನನಗೆ ನೆನಪಿದೆ, ಕೆಲವು ವರ್ಷಗಳ ಹಿಂದೆ ʻಗ್ರಾಮ ಸ್ವರಾಜ್ʼ ಅಭಿಯಾನದ ಭಾಗವಾಗಿ ಬಹಳ ಯಶಸ್ವಿ ಉಪಕ್ರಮವನ್ನು ಕೈಗೊಳ್ಳಲಾಯಿತು. ಈ ಅಭಿಯಾನವು ಎರಡು ಹಂತಗಳಲ್ಲಿ ಸುಮಾರು 60,000 ಹಳ್ಳಿಗಳಲ್ಲಿ ವ್ಯಾಪಿಸಿತು. ಸರ್ಕಾರವು ತನ್ನ ಏಳು ಯೋಜನೆಗಳೊಂದಿಗೆ ಫಲಾನುಭವಿಗಳನ್ನು ತಲುಪಿತು. ಇದು ʻಮಹತ್ವಾಕಾಂಕ್ಷೆಯ ಜಿಲ್ಲೆʼಗಳ ಸಾವಿರಾರು ಗ್ರಾಮಗಳನ್ನು ಸಹ ಒಳಗೊಂಡಿದೆ. ಈಗ, ಆ ಪ್ರಯತ್ನದ ಯಶಸ್ಸು 'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಗೆ ಅಡಿಪಾಯ ಹಾಕಿದೆ. ಈ ಅಭಿಯಾನದಲ್ಲಿ ಭಾಗಿಯಾಗಿರುವ ಸರ್ಕಾರದ ಎಲ್ಲಾ ಪ್ರತಿನಿಧಿಗಳು ರಾಷ್ಟ್ರ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಸಂಪೂರ್ಣ ಸಮರ್ಪಣೆಯೊಂದಿಗೆ, ಅವರು ಪ್ರತಿ ಹಳ್ಳಿಯನ್ನು ತಲುಪುತ್ತಿದ್ದಾರೆ. ಎಲ್ಲರ ಪ್ರಯತ್ನದಿಂದ 'ವಿಕಸಿತ ಭಾರತ ಸಂಕಲ್ಪ ಯಾತ್ರೆ' ಯಶಸ್ವಿಯಾಗಲಿದೆ. ನಾವು 'ವಿಕಸತಿ ಭಾರತ'ದ ಬಗ್ಗೆ ಮಾತನಾಡುವಾಗ, ಮುಂಬರುವ ವರ್ಷಗಳಲ್ಲಿ ಹಳ್ಳಿಗಳಲ್ಲಿ ಗಮನಾರ್ಹ ಪರಿವರ್ತನೆಯಾಗಲಿದೆ ಎಂದು ನನಗೆ ವಿಶ್ವಾಸವಿದೆಯಾದರೂ ಅದನ್ನು ನಿರ್ಧರಿಸುವುದು ನಿಮಗೆ ಬಿಟ್ಟದ್ದು. ನಮ್ಮ ಹಳ್ಳಿಗಳಲ್ಲಿಯೂ ಪ್ರಗತಿ ಇರಬೇಕು ಎಂದು ನಾವು ನಿರ್ಧರಿಸಬೇಕು. ಒಟ್ಟಾಗಿ, ನಾವು ʻಭಾರತʼವನ್ನು ಅಭಿವೃದ್ಧಿಪಡಿಸುತ್ತೇವೆ ಮತ್ತು ನಮ್ಮ ದೇಶವು ಜಗತ್ತಿನಲ್ಲಿ ಎತ್ತರದ ಸ್ಥಾನಕ್ಕೆ ತಲುಪಲಿದೆ. ಮತ್ತೊಮ್ಮೆ, ನಿಮ್ಮೆಲ್ಲರನ್ನೂ ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯ. ನಡುವೆ ಅವಕಾಶವಿದ್ದರೆ, ನಾನು ನಿಮ್ಮೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತೇನೆ.

ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ನಂತ ಧನ್ಯವಾದಗಳು!

 

ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

*******

 



(Release ID: 1982374) Visitor Counter : 102