ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಅಂತೋಣಿ ಚೆನ್ ಅವರ ʼಡ್ರಿಫ್ಟ್' ಚಿತ್ರವು ಪ್ರತಿಷ್ಠಿತ ಐಸಿಎಫ್‌ಟಿ- ಯುನೆಸ್ಕೋ ಗಾಂಧಿ ಪದಕವನ್ನು ಐಎಫ್‌ಎಫ್‌ಐ-54ರ ಚಲನಚಿತ್ರೋತ್ಸವದಲ್ಲಿ ಪಡೆದುಕೊಂಡಿದೆ
ಜೀವನದ ಅನಿಶ್ಚಿತತೆಗಳ ಕಾರಣಕ್ಕೆ ನಡೆಯುವ ಅಲೆದಾಟವು ಹೇಗೆ ಅನಿರೀಕ್ಷಿತ ಬಂಧಗಳಿಗೆ ಕಾರಣವಾಗಬಹುದು ಎಂಬುದನ್ನು ಚಲನಚಿತ್ರವು ಚಿತ್ರಿಸುತ್ತದೆ
ಅಂತೋಣಿ ಚೆನ್ ನಿರ್ದೇಶನದ ಫ್ರೆಂಚ್, ಬ್ರಿಟಿಷ್ ಮತ್ತು ಗ್ರೀಕ್ ಸಹ-ನಿರ್ಮಾಣದ ʼಡ್ರಿಫ್ಟ್ʼ ಚಲನಚಿತ್ರವು ಭಾರತದ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಐಸಿಎಫ್‌ಟಿ- ಯುನೆಸ್ಕೋ ಗಾಂಧಿ ಪದಕ ಪಡೆದಿದೆ. ಈ ಚಿತ್ರವು ವಲಸಿಗ ಮಹಿಳೆಯೊಬ್ಬಳ ಭಾವನಾತ್ಮಕ ಕಥಾ ಹಂದರ ಹೊಂದಿದ್ದು, ಮನುಷ್ಯನ ಹುಚ್ಚುತನದ ಆಘಾತಕಾರಿ ಮತ್ತು ಭಯಾನಕ ವಾಸ್ತವಗಳನ್ನು ಅಲೆದಾಡುದ ಮೂಲಕ ಅನಾವರಣಗೊಳಿಸುತ್ತದೆ. ಗೋವಾದಲ್ಲಿ ಇಂದು ನಡೆದ ಚಲನಚಿತ್ರೋತ್ಸವದ ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಲಾಯಿತು.
ʼಡ್ರಿಫ್ಟ್ʼನಲ್ಲಿ ಸಿಂಥಿಯಾ ಎರಿವೊ ನಿರ್ವಹಿಸಿದ ಮುಖ್ಯ ಪಾತ್ರಧಾರಿ 'ಜಾಕ್ವೆಲಿನ್' ಒಬ್ಬ ಯುವ ನಿರಾಶ್ರಿತೆಯಾಗಿದ್ದು, ಅವಳು ಏಕಾಂಗಿಯಾಗಿ ಮತ್ತು ಹಣವಿಲ್ಲದೆ ಗ್ರೀಕ್ ದ್ವೀಪದಲ್ಲಿ ಇಳಿಯುತ್ತಾಳೆ. ಅಲ್ಲಿ ಅವಳು ಬದುಕಲು ಪ್ರಯತ್ನಿಸುವ ಜತೆಗೆ ತನ್ನ ಭೂತಕಾಲವನ್ನು ನಿಭಾಯಿಸಲು ಪ್ರಯತ್ನಿಸುತ್ತಾಳೆ. ತನ್ನ ಶಕ್ತಿಯನ್ನು ಒಟ್ಟುಗೂಡಿಸುವಾಗ, ಅವಳಿಗೆ ಆಲಿಯಾ ಶೌಕತ್ ಎಂಬ ಟೂರ್ ಗೈಡ್‌ನೊಂದಿಗೆ ಸ್ನೇಹ ಬೆಳೆಯುತ್ತದೆ. ಬಳಿಕ ಅವರು ಒಟ್ಟಿಗೆ ಮುನ್ನುಗ್ಗುವ ನಿಲುವು ತೆಗೆದುಕೊಳ್ಳುತ್ತಾರೆ. ಜೀವನದ ಅನಿಶ್ಚಿತತೆಗಳ ಕಾರಣಕ್ಕೆ ಎದುರಾಗುವ ಅಲೆದಾಟವು ಹೇಗೆ ಅನಿರೀಕ್ಷಿತ ಬಂಧಗಳಿಗೆ ಕಾರಣವಾಗಬಹುದು ಎಂಬುದನ್ನು ಚಲನಚಿತ್ರವು ನಿರೂಪಿಸುತ್ತಾ ಹೋಗುತ್ತದೆ. ಐಸಿಎಫ್‌ಟಿ- ಯುನೆಸ್ಕೋ ಗಾಂಧಿ ಪದಕಕ್ಕಾಗಿ ಈ ಹೃದಯಸ್ಪರ್ಶಿ ಚಲನಚಿತ್ರವನ್ನು ಆಯ್ಕೆ ಮಾಡುವಾಗ, ತೀರ್ಪುಗಾರರು ಇದು ಭರವಸೆ ಮತ್ತು ಪ್ರತಿರೋಧದ ಗೆರೆಗಳನ್ನು ಸೆಳೆಯುವುದು ಗಮನಾರ್ಹ ಎಂದಿದ್ದಾರೆ.
ʼಡ್ರಿಫ್ಟ್ʼ ಚಿತ್ರದ ಒಂದು ಸ್ಟಿಲ್
ಸಮಾರೋಪ ಸಮಾರಂಭದಲ್ಲಿ ಐಸಿಎಫ್‌ಟಿ- ಯುನೆಸ್ಕೋದ ಉಪಾಧ್ಯಕ್ಷರಾದ ಶ್ರೀ ಸರ್ಜ್ ಮೈಕೆಲ್ ಮತ್ತು ಐಸಿಎಫ್‌ಟಿ- ಯುನೆಸ್ಕೋದ ಪ್ಲಾಟ್‌ಫಾರ್ಮ್ ಫಾರ್ ಕ್ರಿಯೇಟಿವಿಟಿ ಆ್ಯಂಡ್ ಇನ್ನೋವೇಶನ್ (ಪಿಸಿಐ) ನಿರ್ದೇಶಕರಾದ ಕ್ಸೆಯಾನ್ ಹನ್ ಅವರನ್ನು ಚಲನಚಿತ್ರೋತ್ಸವದ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಅವರು ಸನ್ಮಾನಿಸಿದರು.
2023ರ ಜನವರಿ 22ರಂದು ಸನ್‌ಡಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ 'ಡ್ರಿಫ್ಟ್' ತನ್ನ ವರ್ಲ್ಡ್ ಪ್ರೀಮಿಯರ್ ಪ್ರದರ್ಶನ ಕಂಡಿತ್ತು. ಈ ಚಲನಚಿತ್ರವು ಅಲೆಕ್ಸಾಂಡರ್ ಮಕ್ಸಿಕ್ ಅವರ 'ಎ ಮಾರ್ಕರ್ ಟು ಮೆಜರ್ ಡ್ರಿಫ್ಟ್' ಕಾದಂಬರಿಯನ್ನು ಆಧರಿಸಿದೆ. ಚಿತ್ರಕ್ಕೆ ಅಲೆಕ್ಸಾಂಡರ್ ಮಾಕ್ಸಿಕ್ ಜೊತೆಗೆ ಸುಸಾನೆ ಫಾರೆಲ್ ಅವರು ಸಹ ಸಂಕಲನವಿದೆ. ಐಎಫ್‌ಎಫ್‌ಐನಲ್ಲಿ ಈ ವರ್ಷ ಐಸಿಎಫ್‌ಟಿ- ಯುನೆಸ್ಕೋ ಗಾಂಧಿ ಪದಕಕ್ಕಾಗಿ ಜಗತ್ತಿನಾದ್ಯಂತ ಹತ್ತು ಚಲನಚಿತ್ರಗಳು ಸ್ಪರ್ಧೆಯಲ್ಲಿದ್ದವು.
ಐಸಿಎಫ್‌ಟಿ ಪ್ಯಾರಿಸ್ ಹಾಗೂ ಯುನೆಸ್ಕೋ ಸೇರಿ ಸ್ಥಾಪಿಸಿರುವ ಗಾಂಧಿ ಪದಕವು ಮಹಾತ್ಮ ಗಾಂಧಿಯವರ ಶಾಂತಿ, ಅಹಿಂಸೆ, ಸಹಾನುಭೂತಿ ಮತ್ತು ಸಾರ್ವತ್ರಿಕ ಸಹೋದರತ್ವದ ದೃಷ್ಟಿಕೋನವನ್ನು ಅತ್ಯುತ್ತಮವಾಗಿ ಪ್ರತಿಬಿಂಬಿಸುವ ಚಲನಚಿತ್ರಕ್ಕೆ ಐಎಫ್‌ಎಫ್‌ಐನಲ್ಲಿ ನೀಡಲಾಗುವ ವಾರ್ಷಿಕ ಗೌರವವಾಗಿದೆ. 2015ರಲ್ಲಿ ನಡೆದ 46ನೇ ಐಎಫ್‌ಎಫ್‌ಐನಲ್ಲಿ ಪ್ರಾರಂಭವಾದಾಗಿನಿಂದ ಈವರೆಗೆ ಈ ಪ್ರಶಸ್ತಿಯು ನಿರಂತರ ಮೌಲ್ಯಗಳನ್ನು ಒಳಗೊಂಡ ಚಲನಚಿತ್ರಗಳನ್ನು ಅರಸುತ್ತಾ ಬಂದಿದೆ.
*****
(Release ID: 1980621)
Visitor Counter : 107