ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಶಿಫಾರಸುಗೊಂಡಿರುವುದು 'ಕಾಂತಾರ' ತಂಡಕ್ಕೆ ಹೆಮ್ಮೆಯ ಕ್ಷಣವಾಗಿದೆ: ನಟ ಹಾಗೂ ಚಲನಚಿತ್ರ ನಿರ್ಮಾಪಕ ರಿಷಬ್ ಶೆಟ್ಟಿ
'ಕಾಂತಾರ' ಭಾರತದ ಸಂಸ್ಕೃತಿಯಲ್ಲಿ ಬೇರೂರಿರುವುದರಿಂದ, ಅದು ಭಾರತದಾದ್ಯಂತ ಪ್ರೇಕ್ಷಕರ ಜೊತೆ ಸಂಪರ್ಕಹೊಂದಿದೆ: ರಿಷಬ್ ಶೆಟ್ಟಿ
ಉತ್ತಮ ವಿಷಯವು ಭಾಷೆಯ ಅಡೆತಡೆಗಳನ್ನು ಮೀರುತ್ತದೆ. ಭಾರತೀಯ ಚಿತ್ರರಂಗದಲ್ಲಿ ಕ್ರಾಂತಿ ನಡೆಯುತ್ತಿದೆ: ರಿಷಬ್ ಶೆಟ್ಟಿ
ಗೋವಾ, 27 ನವೆಂಬರ್ 2023
ಗೋವಾದಲ್ಲಿ ನಡೆಯುತ್ತಿರುವ 54ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ನೇಪಥ್ಯದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ನಟ ರಿಷಬ್ ಶೆಟ್ಟಿ ಸುದ್ದಿ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದರು. ರೋಮಾಂಚಕ ಮತ್ತು ಕ್ರಿಯಾತ್ಮಕ ಕನ್ನಡ ಚಲನಚಿತ್ರೋದ್ಯಮವನ್ನು ಪ್ರತಿನಿಧಿಸುವ ಅವರು, ವ್ಯಾಪಕವಾಗಿ ಪ್ರಸಿದ್ಧವಾಗಿರುವ 'ಕಾಂತಾರಾ' ಚಿತ್ರದ ನಿರ್ದೇಶಕ, ನಟ ಮತ್ತು ಬರಹಗಾರರಾಗಿದ್ದಾರೆ. ಈ ವರ್ಷದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗಾಗಿ ಸ್ಪರ್ಧಿಸುವ 15 ಅಸಾಧಾರಣ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಮೂರು ಭಾರತೀಯ ಚಿತ್ರಗಳಲ್ಲಿ 'ಕಾಂತಾರಾ' ಕೂಡಾ ಒಂದಾಗಿದೆ.
'ಕಾಂತಾರಾ' 150 ನಿಮಿಷಗಳ ಕನ್ನಡದ ಮೇರುಕೃತಿಯಾಗಿದ್ದು, ಕಳೆದ ವರ್ಷ ಬಿಡುಗಡೆಯಾದಾಗಿನಿಂದ ಪ್ರೇಕ್ಷಕರು ಮತ್ತು ವಿಮರ್ಶಕರ ಮನಗೆದ್ದಿದೆ. ಸಂಸ್ಕೃತಿ ಮತ್ತು ಜಾನಪದದ ಒಂದು ಮಂತ್ರಮುಗ್ಧ ಗೌರವವಾದ 'ಕಾಂತಾರಾ', ನೃತ್ಯ ಮತ್ತು ಭಾವನೆಗಳ ಮಾಂತ್ರಿಕ ಮಾಧ್ಯಮದ ಮೂಲಕ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಕೀರ್ಣ ಮತ್ತು ಕ್ರಿಯಾತ್ಮಕ ಸಂಘರ್ಷವನ್ನು ಚಿತ್ರಿಸುವ ಮೂಲಕ ಚಿತ್ತಾಕರ್ಷಕವಾಗಿದೆ.
"ಪ್ರೇಕ್ಷಕರು 'ಕಾಂತಾರಾ'ದೊಂದಿಗೆ ಸಂಪರ್ಕ ಹೊಂದಿದ್ದಾರೆ ಏಕೆಂದರೆ ಇದು ಭಾರತದ ಸಂಸ್ಕೃತಿಯಲ್ಲಿ ಬೇರೂರಿರುವ ಕಥೆಯಾಗಿದೆ" ಎಂದು ರಿಶಬ್ ಶೆಟ್ಟಿ ಹೇಳಿದರು. "ಪ್ರೇಕ್ಷಕರು ನಿಜವಾಗಿಯೂ ಈ ಚಿತ್ರವನ್ನು ತಮ್ಮದಾಗಿಸಿಕೊಂಡು ಅದನ್ನು ಪ್ರಸ್ತುತ ಸ್ಥಿತಿಗೆ ಕೊಂಡೊಯ್ದಿದ್ದಾರೆ" ಎಂದು ಅವರು ಹೇಳಿದರು. ಮೂಲತಃ 'ಕಾಂತಾರ' ಚಿತ್ರವು ಸಾಂಪ್ರದಾಯಿಕ ಕೋಲಾ ನೃತ್ಯ ಮತ್ತು ಅದನ್ನು ಪ್ರದರ್ಶಿಸುವ ಸಮುದಾಯಕ್ಕೆ ಹೊಸ ಅಭಿವ್ಯಕ್ತಿಯನ್ನು ನೀಡಿದೆ. ಚಿತ್ರ ಬಿಡುಗಡೆಯಾದ ನಂತರವೂ ತಾವು ಆ ಸಮುದಾಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ರಿಷಬ್ ಶೆಟ್ಟಿ ಹೇಳಿದರು. "ನಾನು ಈ ಸಂಪ್ರದಾಯಕ್ಕೆ ಸೇರಿದವನಾಗಿದ್ದು, ಈ ಆಚರಣೆಯನ್ನು ನಂಬುತ್ತೇನೆ ಹಾಗೂ ಈ ದೇವರನ್ನು ಪೂಜಿಸುತ್ತೇನೆ. ನಾವು ಯಾರ ಭಾವನೆಗಳನ್ನು ನೋಯಿಸದಂತೆ ಚಿತ್ರ ಮಾಡಿದ್ದೇವೆ. ಅವರ ಸಂಸ್ಕೃತಿ ಅಥವಾ ಸಮುದಾಯಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂದಿದ್ದೇವೆ" ಎಂದು ಅವರು ವಿವರಿಸಿದರು.
ಕಾಂತಾರದ ಯಶಸ್ಸಿಗೆ ನಂಬಿಕೆಯೇ ಕಾರಣ ಎಂದು ಹೇಳಿದ ರಿಶಬ್ ಶೆಟ್ಟಿ, ನಾವು ನಮ್ಮನ್ನು ಮತ್ತು ನಾವು ಮಾಡುವ ಕೆಲಸವನ್ನು ನಂಬಬೇಕು, ಆಗ ಮಾತ್ರ ನಾವು ನಿಜವಾಗಿಯೂ ಉತ್ತಮ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು. ನಾವು ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ, ನಮ್ಮ ಕರ್ತವ್ಯವೆಂದು ತಿಳಿದು ಮಾಡಬೇಕು, ಅದರ ಯಶಸ್ಸನ್ನು ಬೆನ್ನಟ್ಟಬಾರದು ಎಂದು ಈ ನಟ ಹೇಳಿದರು.
ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿಯವರು, ಒಟಿಟಿ ಚಾಲೆಂಜ್ ನ ಬಗ್ಗೆ ಮಾತನಾಡುತ್ತಾ, ಈ ಮಾಧ್ಯಮಗಳು ಇನ್ನೂ ಕನ್ನಡ ಪ್ರೇಕ್ಷಕರ ಬಗ್ಗೆ ಆತಂಕಗೊಂಡಿವೆ. ಇನ್ನೂ ಕನ್ನಡ ಚಲನಚಿತ್ರಗಳು ಈ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಸಾರವಾಗುತ್ತಿಲ್ಲ, ಇದು ಕನ್ನಡ ಉದ್ಯಮಕ್ಕೆ ಗಂಭೀರವಾದ ನಷ್ಟವನ್ನುಂಟು ಮಾಡುತ್ತದೆ ಎಂದು ಹೇಳಿದರು. ಹೆಚ್ಚಿನ ಮಾನ್ಯತೆ ಮತ್ತು ತಲುಪುವಿಕೆಗೆ ಅವರು ಮನವಿ ಮಾಡಿದರು. "ಸಿನಿಮಾ ನಮಗೆ ತುಂಬಾ ನೀಡಿದೆ, ನಾವು ಕನ್ನಡ ಚಿತ್ರರಂಗಕ್ಕೆ ಪ್ರತಿಯಾಗಿ ನೀಡಬೇಕು" ಎಂದು ಶೆಟ್ಟಿ ಪ್ರತಿಪಾದಿಸಿದರು. ಇಂದಿನ ಭಾರತೀಯ ಚಿತ್ರರಂಗದ ವಿಷಯವು ಜಾಗತಿಕವಾಗಿರುವುದಾಗಿ ತಾವು ದೃಢವಾಗಿ ನಂಬುವುದಾಗಿ ತಿಳಿಸಿದರು. "ಪ್ರಸ್ತುತವಾಗಿ, ಚಿತ್ರರಂಗದಲ್ಲಿ ಒಂದು ಕ್ರಾಂತಿ ನಡೆಯುತ್ತಿದೆ - ಭಾಷಾ ಅಡೆತಡೆಗಳನ್ನು ಮೀರಿ ಉತ್ತಮ ವಿಷಯವು ವ್ಯಾಪಕವಾಗಿ ಸ್ವೀಕರಿಸಲ್ಪಡುತ್ತಿದೆ " ಎಂದು ಶೆಟ್ಟಿ ಹೇಳಿದರು.
ಐಎಫ್ಎಫ್ಐ ಜೊತೆಗಿನ ತಮ್ಮ ಸಂಪರ್ಕದ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿಯವರು, ಚಲನಚಿತ್ರೋತ್ಸವದಲ್ಲಿ ತಾವು ಎರಡನೇ ಬಾರಿಗೆ ಭಾಗವಹಿಸುತ್ತಿರುವುದಾಗಿ ತಿಳಿಸಿದರು. ಚಲನಚಿತ್ರೋತ್ಸವಗಳು ಹಲವಾರು ಚಲನಚಿತ್ರಗಳನ್ನು ವೀಕ್ಷಿಸಿ, ಅವುಗಳಿಂದ ಕಲಿಯುವ ಒಂದು ಮಾರ್ಗವಾಗಿದೆ ಎಂದು ಅವರು ಹಂಚಿಕೊಂಡರು. ಐಎಫ್ಎಫ್ಐನಂತಹ ಹಬ್ಬಗಳು ಅವರಿಗೆ ವಿಸ್ತೃತ ಕುಟುಂಬದ ಅನುಭವವನ್ನು ನೀಡುತ್ತವೆ ಎಂದು ತಿಳಿಸಿದರು. ಚಲನಚಿತ್ರೋತ್ಸವಗಳನ್ನು ಶ್ಲಾಘಿಸಿದ ಅವರು, ಸಣ್ಣ ಚಲನಚಿತ್ರಗಳಿಗೆ ಮಾನ್ಯತೆ ನೀಡಲು ಈ ರೀತಿಯ ವೇದಿಕೆಗಳನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶೆಟ್ಟಿಯವರು ಇತ್ತೀಚೆಗೆ ಕಾಂತಾರಾದ ಬಹುನಿರೀಕ್ಷಿತ ಪ್ರಿಕ್ವೆಲ್ ಅನ್ನು ಘೋಷಿಸಿದರು, ಅದರ ಪೋಸ್ಟರ್ ನಿನ್ನೆ ತಾನೆ ಬಿಡುಗಡೆಯಾಯಿತು. ಈ ಕಥೆಯ ಪರಿಕಲ್ಪನೆಯು ಎರಡು ಭಾಗಗಳ ಕಥೆಯಾಗಿದೆ ಎಂದು ಅವರು ವಿವರಿಸಿದರು. ನಿರ್ದೇಶನ, ಬರವಣಿಗೆ ಮತ್ತು ನಟನೆಯ ನಡುವೆ ಅವರ ನಿಜವಾದ ಒಲವು ಏನು ಎಂಬ ಪ್ರಶ್ನೆಗೆ, "ನಿರ್ದೇಶನವೇ ನನ್ನ ಮೊದಲ ಪ್ರೀತಿ" ಎಂದು ಶೆಟ್ಟಿ ಹೇಳಿದ್ದಾರೆ. "ನಾನು ಜೀವನದ ಅನುಭವಗಳನ್ನು ಅವಲಂಬಿಸಿ, ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಅದನ್ನು ನನ್ನ ಚಿತ್ರಗಳಲ್ಲಿ ಮೂಡಿಸಲು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದರು.
****
(Release ID: 1980543)
Visitor Counter : 102