ಪ್ರಧಾನ ಮಂತ್ರಿಯವರ ಕಛೇರಿ
‘ಮನದ ಮಾತು ’ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 26.11.2023 ರಂದು ಮಾಡಿದ ‘ಮನ್ ಕಿ ಬಾತ್’ – 107 ನೇ ಸಂಚಿಕೆಯ ಕನ್ನಡ ಅವತರಣಿಕೆ
Posted On:
26 NOV 2023 11:41AM by PIB Bengaluru
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ 'ಮನದ ಮಾತಿ' ಗೆ ನಿಮಗೆ ಸ್ವಾಗತ. ಆದರೆ ನವೆಂಬರ್ 26 ಇಂದಿನ ದಿನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನವೇ ದೇಶದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದರು. ಆದರೆ ಆ ದಾಳಿಯಿಂದ ಚೇತರಿಸಿಕೊಂಡು ಈಗ ಸಂಪೂರ್ಣ ಧೈರ್ಯದಿಂದ ಭಯೋತ್ಪಾದನೆಯನ್ನು ಹತ್ತಿಕ್ಕುತ್ತಿರುವುದು ಭಾರತದ ಶಕ್ತಿಯಾಗಿದೆ. ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರ ಪುರುಷರನ್ನು ಇಂದು ದೇಶ ಸ್ಮರಿಸಿಕೊಳ್ಳುತ್ತಿದೆ.
ನನ್ನ ಪರಿವಾರದ ಸದಸ್ಯರೇ, ನವೆಂಬರ್ 26 ರ ಈ ದಿನವು ಮತ್ತೊಂದು ಕಾರಣಕ್ಕೆ ತುಂಬಾ ಮುಖ್ಯವಾಗಿದೆ. 1949 ರಲ್ಲಿ ಈ ದಿನದಂದೇ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತ್ತು. ನನಗೆ ನೆನಪಿದೆ, 2015ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದಾಗ ಅದೇ ಸಮಯದಲ್ಲಿ ನವೆಂಬರ್ 26ನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಬೇಕು ಎಂಬ ಆಲೋಚನೆ ಮೂಡಿತ್ತು. ಅಂದಿನಿಂದ ಪ್ರತಿ ವರ್ಷ ನಾವು ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತಿದ್ದೇವೆ. ನಾನು ಎಲ್ಲಾ ದೇಶವಾಸಿಗಳಿಗೆ ಸಂವಿಧಾನ ದಿನದ ಶುಭಾಶಯಗಳನ್ನು ಕೋರುತ್ತೇನೆ. ಮತ್ತು ನಾವೆಲ್ಲರೂ ಒಗ್ಗೂಡಿ, ನಾಗರಿಕರ ಕರ್ತವ್ಯಗಳಿಗೆ ಆದ್ಯತೆ ನೀಡುತ್ತಾ, ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪೂರೈಸುತ್ತೇವೆ.
ಸ್ನೇಹಿತರೇ, ಸಂವಿಧಾನವನ್ನು ರಚಿಸಲು 2 ವರ್ಷ, 11 ತಿಂಗಳು ಮತ್ತು 18 ದಿನಗಳು ಬೇಕಾಯಿತು ಎಂಬುದು ನಮಗೆಲ್ಲ ತಿಳಿದ ವಿಷಯ. ಶ್ರೀ ಸಚ್ಚಿದಾನಂದ ಸಿನ್ಹಾ ಅವರು ಸಂವಿಧಾನ ಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದರು. 60ಕ್ಕೂ ಹೆಚ್ಚು ದೇಶಗಳ ಸಂವಿಧಾನಗಳ ವಿವರವಾದ ಅಧ್ಯಯನ ಮತ್ತು ಸುದೀರ್ಘ ಚರ್ಚೆ ನಂತರ ನಮ್ಮ ಸಂವಿಧಾನದ ಕರಡು ಸಿದ್ಧಪಡಿಸಲಾಗಿದೆ. ಕರಡು ಸಿದ್ಧಪಡಿಸಿದ ನಂತರ, ಅಂತಿಮಗೊಳಿಸುವ ಮುನ್ನ ಅದರಲ್ಲಿ 2 ಸಾವಿರಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡಲಾಗಿದೆ. 1950ರಲ್ಲಿ ಸಂವಿಧಾನ ಜಾರಿಗೆ ಬಂದ ನಂತರವೂ ಸಂವಿಧಾನಕ್ಕೆ ಒಟ್ಟು 106 ಬಾರಿ ತಿದ್ದುಪಡಿ ಮಾಡಲಾಗಿದೆ. ಸಮಯ, ಪರಿಸ್ಥಿತಿ ಮತ್ತು ದೇಶದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸರ್ಕಾರಗಳು ವಿವಿಧ ಸಮಯಗಳಲ್ಲಿ ತಿದ್ದುಪಡಿಗಳನ್ನು ಮಾಡಿವೆ. ಆದರೆ ಸಂವಿಧಾನದ ಮೊದಲ ತಿದ್ದುಪಡಿಯು ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಮೊಟಕುಗೊಳಿಸುವ ಉದ್ದೇಶದಿಂದ ಕೂಡಿತ್ತು ಎಂಬುದು ದುರದೃಷ್ಟಕರ. ಸಂವಿಧಾನದ 44ನೇ ತಿದ್ದುಪಡಿಯ ಮೂಲಕ ತುರ್ತುಪರಿಸ್ಥಿತಿಯಲ್ಲಿ ಆಗಿದ್ದ ತಪ್ಪುಗಳನ್ನು ಸರಿಪಡಿಸಲಾಗಿದೆ. ಸ್ನೇಹಿತರೇ, ಸಂವಿಧಾನ ಸಭೆಯ ಕೆಲವು ಸದಸ್ಯರು ನಾಮನಿರ್ದೇಶನಗೊಂಡಿದ್ದು, ಅದರಲ್ಲಿ 15 ಮಹಿಳೆಯರು ನಾಮನಿರ್ದೇಶನಗೊಂಡಿರುವುದು ತುಂಬಾ ಸ್ಫೂರ್ತಿದಾಯಕವಾಗಿದೆ. ಅಂತಹ ಓರ್ವ ಸದಸ್ಯರಾದ ಹಂಸಾ ಮೆಹ್ತಾ ಅವರು ಮಹಿಳಾ ಹಕ್ಕುಗಳು ಮತ್ತು ನ್ಯಾಯದ ಕುರಿತು ಧ್ವನಿಯನ್ನು ಬಲಪಡಿಸಿದ್ದರು. ಆ ಸಮಯದಲ್ಲಿ, ಸಂವಿಧಾನದ ಮೂಲಕ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿತ್ತು. ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರೂ ಪಾಲ್ಗೊಂಡಾಗ ಮಾತ್ರ ಎಲ್ಲರ ಅಭಿವೃದ್ಧಿ ಸಾಧ್ಯ. ಸಂವಿಧಾನ ರಚನೆಕಾರರ ಅದೇ ದೃಷ್ಟಿಕೋನವನ್ನು ಅನುಸರಿಸಿ, ಭಾರತದ ಸಂಸತ್ತು ಈಗ 'ನಾರಿ ಶಕ್ತಿ ವಂದನ್ ಕಾಯ್ದೆ'ಯನ್ನು ಅಂಗೀಕರಿಸಿದೆ ಎಂಬುದು ನನಗೆ ಸಂತೋಷ ತಂದಿದೆ. ‘ನಾರಿ ಶಕ್ತಿ ವಂದನ ಕಾಯ್ದೆ’ ನಮ್ಮ ಪ್ರಜಾಪ್ರಭುತ್ವದ ನಿರ್ಣಯ ಶಕ್ತಿಗೆ ಉದಾಹರಣೆಯಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಸಂಕಲ್ಪದ ವೇಗವನ್ನು ಹೆಚ್ಚಿಸಲೂ ಇದು ಸಹಾಯಕರವಾಗಲಿದೆ.
ನನ್ನ ಪರಿವಾರ ಸದಸ್ಯರೇ, ರಾಷ್ಟ್ರ ನಿರ್ಮಾಣದ ಜವಾಬ್ದಾರಿಯನ್ನು ಜನರು ವಹಿಸಿಕೊಂಡಾಗ ಜಗತ್ತಿನ ಯಾವ ಶಕ್ತಿಯೂ ಆ ದೇಶ ಅಭಿವೃದ್ಧಿ ಹೊಂದುವುದನ್ನು ತಡೆಯಲು ಸಾಧ್ಯವಿಲ್ಲ. ಇಂದು, ದೇಶದ 140 ಕೋಟಿ ಜನರೇ ಅನೇಕ ಬದಲಾವಣೆಗಳ ನೇತೃತ್ವ ವಹಿಸಿಕೊಂಡಿದ್ದಾರೆ ಎಂಬುದು ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರ ಒಂದು ಜ್ವಲಂತ ಉದಾಹರಣೆಯನ್ನು ಈ ಹಬ್ಬ ಹರಿದಿನಗಳಲ್ಲಿ ನಾವು ಕಂಡಿದ್ದೇವೆ. ಕಳೆದ ತಿಂಗಳು 'ಮನದ ಮಾತಿನಲ್ಲಿ' ನಾನು ವೋಕಲ್ ಫಾರ್ ಲೋಕಲ್ ಅಂದರೆ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಕುರಿತು ಒತ್ತು ನೀಡಿದ್ದೆ. ಕಳೆದ ಕೆಲವು ದಿನಗಳಲ್ಲಿ, ದೀಪಾವಳಿ, ಭಾಯಿ ದೂಜ್ ಮತ್ತು ಛಟ್ ಹಬ್ಬಗಳಲ್ಲಿ ದೇಶದಲ್ಲಿ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರ ನಡೆದಿದೆ. ಮತ್ತು ಈ ಅವಧಿಯಲ್ಲಿ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಜನರಲ್ಲಿ ಅಪಾರ ಉತ್ಸಾಹ ಕಂಡುಬಂದಿದೆ. ಈಗ ಮನೆಯಲ್ಲಿರುವ ಮಕ್ಕಳೂ ಅಂಗಡಿಯಲ್ಲಿ ಏನಾದ್ರೂ ಕೊಳ್ಳುವಾಗ ಮೇಡ್ ಇನ್ ಇಂಡಿಯಾ ಎಂದು ಬರೆದಿದ್ದಾರೋ ಇಲ್ಲವೋ ಎಂದು ಪರೀಕ್ಷಿಸತೊಡಗಿದ್ದಾರೆ. ಇಷ್ಟೇ ಅಲ್ಲ, ಈಗ ಜನರು ಆನ್‌ಲೈನ್‌ನಲ್ಲಿ ಸರಕುಗಳನ್ನು ಖರೀದಿಸುವಾಗಲೂ ಮೂಲ ದೇಶವನ್ನು ಪರಿಶೀಲಿಸುವುದನ್ನು ಮರೆಯುವುದಿಲ್ಲ.
ಸ್ನೇಹಿತರೇ, 'ಸ್ವಚ್ಛ ಭಾರತ್ ಅಭಿಯಾನ'ದ ಯಶಸ್ಸು ಹೇಗೆ ಸ್ಫೂರ್ತಿದಾಯಕವಾಗಿದೆಯೋ ಅದೇ ರೀತಿ ವೋಕಲ್ ಫಾರ್ ಲೋಕಲ್‌ನ ಯಶಸ್ಸು ಅಭಿವೃದ್ಧಿ ಹೊಂದಿದ ಭಾರತ - ಸಮೃದ್ಧ ಭಾರತದ ದ್ವಾರಗಳನ್ನು ತೆರೆಯುತ್ತಿದೆ. ವೋಕಲ್ ಫಾರ್ ಲೋಕಲ್‌ನ ಈ ಅಭಿಯಾನವು ಇಡೀ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ವೋಕಲ್ ಫಾರ್ ಲೋಕಲ್‌ನ ಈ ಅಭಿಯಾನವು ಸ್ಥಳೀಯ ಉದ್ಯೋಗದ ಖಾತರಿ ಒದಗಿಸುತ್ತದೆ. ಇದು ಅಭಿವೃದ್ಧಿಯ ಭರವಸೆಯಾಗಿದೆ, ಇದು ದೇಶದ ಸಮತೋಲಿತ ಅಭಿವೃದ್ಧಿಯ ಭರವಸೆಯೂ ಆಗಿದೆ. ಇದು ನಗರ ಮತ್ತು ಗ್ರಾಮೀಣ ಜನರಿಗೆ ಸಮಾನ ಅವಕಾಶಗಳನ್ನು ಒದಗಿಸುತ್ತದೆ. ಇದು ಸ್ಥಳೀಯ ಉತ್ಪನ್ನಗಳಲ್ಲಿ ಮೌಲ್ಯವರ್ಧನೆಗೂ ದಾರಿ ಕಲ್ಪಿಸುತ್ತದೆ, ಮತ್ತು ಎಂದಾದರೂ ಜಾಗತಿಕ ಆರ್ಥಿಕತೆಯಲ್ಲಿ ಏರಿಳಿತಗಳು ಕಂಡುಬಂದಲ್ಲಿ, ವೋಕಲ್ ಫಾರ್ ಲೋಕಲ್ ಮಂತ್ರವು ನಮ್ಮ ಅರ್ಥವ್ಯವಸ್ಥೆಗೆ ಸಂರಕ್ಷಣೆಯನ್ನೂ ನೀಡುತ್ತದೆ.
ಸ್ನೇಹಿತರೇ, ಭಾರತೀಯ ಉತ್ಪನ್ನಗಳ ಕುರಿತಾದ ಈ ಭಾವನೆ ಕೇವಲ ಹಬ್ಬಗಳಿಗೆ ಮಾತ್ರ ಸೀಮಿತವಾಗಬಾರದು. ಇದೀಗ ಮದುವೆ ಸೀಸನ್ ಕೂಡ ಆರಂಭವಾಗಿದೆ. ಈ ಮದುವೆ ಸೀಸನ್ ನಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯಬಹುದು ಎಂದು ಕೆಲವು ವ್ಯಾಪಾರ ಸಂಸ್ಥೆಗಳು ಅಂದಾಜಿಸುತ್ತಿವೆ. ಮದುವೆಗಳಿಗೆ ಶಾಪಿಂಗ್ ಮಾಡುವಾಗ, ನೀವೆಲ್ಲರೂ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡ. ಹಾಂ, ಮದುವೆಯ ವಿಷಯ ಬಂದಾಗ, ಒಂದು ವಿಷಯವು ಬಹಳ ಸಮಯದಿಂದ ನನ್ನನ್ನು ಆಗಾಗ ಚಿಂತೆಗೊಳಪಡಿಸುತ್ತದೆ ಮತ್ತು ನನ್ನ ಮನದ ನೋವನ್ನು, ನಾನು ನನ್ನ ಕುಟುಂಬ ಸದಸ್ಯರಿಗೆ ಹೇಳದಿದ್ದರೆ, ಬೇರೆ ಯಾರಿಗೆ ಹೇಳಬಲ್ಲೆ? ಸ್ವಲ್ಪ ಯೋಚಿಸಿ, ಇತ್ತೀಚಿನ ದಿನಗಳಲ್ಲಿ ಕೆಲವು ಕುಟುಂಬಗಳು ವಿದೇಶಕ್ಕೆ ಹೋಗಿ ಮದುವೆ ಸಮಾರಂಭ ನಡೆಸುವ ಹೊಸ ಪದ್ಧತಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ, ಇದರ ಅಗತ್ಯವಿದೆಯೇ? ಭಾರತದ ಮಣ್ಣಿನಲ್ಲಿ, ಭಾರತೀಯರ ಮಧ್ಯೆ ನಾವು ಮದುವೆಗಳನ್ನು ಆಚರಿಸಿದರೆ, ದೇಶದ ಹಣವು ದೇಶದಲ್ಲಿ ಉಳಿಯುತ್ತದೆ. ದೇಶದ ಜನತೆಗೆ ನಿಮ್ಮ ವಿವಾಹದಲ್ಲಿ ಏನಾದರೂ ಸೇವೆ ಮಾಡುವ ಅವಕಾಶ ಲಭಿಸುತ್ತದೆ, ಕಡು ಬಡವರು ಕೂಡ ತಮ್ಮ ಮಕ್ಕಳಿಗೆ ನಿಮ್ಮ ಮದುವೆಯ ಬಗ್ಗೆ ಹೇಳುತ್ತಾರೆ. ವೋಕಲ್ ಫಾರ್ ಲೋಕಲ್ ನ ಈ ಅಭಿಯಾನವನ್ನು ನೀವು ಮತ್ತಷ್ಟು ವಿಸ್ತರಿಸಬಹುದೇ? ಇಂತಹ ವಿವಾಹ ಸಮಾರಂಭಗಳನ್ನು ನಮ್ಮ ದೇಶದಲ್ಲಿ ಏಕೆ ಮಾಡಬಾರದು? ನೀವು ಬಯಸುವ ರೀತಿಯ ವ್ಯವಸ್ಥೆ ಇಂದು ಇಲ್ಲದಿರಬಹುದು, ಆದರೆ ನಾವು ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ವ್ಯವಸ್ಥೆಯೂ ಅಭಿವೃದ್ಧಿಗೊಳ್ಳುತ್ತದೆ. ಇದು ಬಹಳಷ್ಟು ದೊಡ್ಡ ಕುಟುಂಬಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಈ ನನ್ನ ನೋವಿನ ಸಂದೇಶ ಆ ದೊಡ್ಡ ಕುಟುಂಬಗಳಿಗೆ ಖಂಡಿತಾ ತಲುಪುತ್ತದೆ ಎಂಬುದು ನನ್ನ ಭರವಸೆ.
ನನ್ನ ಪರಿವಾರ ಸದಸ್ಯರೇ, ಈ ಹಬ್ಬದ ಋತುವಿನಲ್ಲಿ ಮತ್ತೊಂದು ಬಹುದೊಡ್ಡ ಟ್ರೆಂಡ್ ಚಾಲನೆಗೆ ಬಂದಿದೆ. ದೀಪಾವಳಿ ಸಂದರ್ಭದಲ್ಲಿ ನಗದು ನೀಡಿ ವಸ್ತುಗಳನ್ನು ಖರೀದಿಸುವ ಪ್ರವೃತ್ತಿ ಕ್ರಮೇಣ ಕಡಿಮೆಯಾಗುತ್ತಾ ಸಾಗಿರುವುದು ಇದು ಸತತ ಎರಡನೇ ವರ್ಷ. ಅಂದರೆ, ಈಗ ಜನರು ಹೆಚ್ಚೆಚ್ಚು ಡಿಜಿಟಲ್ ಪಾವತಿಗಳನ್ನು ಮಾಡುತ್ತಿದ್ದಾರೆ. ಇದು ಕೂಡಾ ತುಂಬಾ ಉತ್ತೇಜನಕಾರಿಯಾಗಿದೆ. ನೀವು ಇನ್ನೂ ಒಂದು ಕೆಲಸವನ್ನು ಮಾಡಬಹುದು. ಒಂದು ತಿಂಗಳ ಕಾಲ ನೀವು UPI ಅಥವಾ ಯಾವುದೇ ಡಿಜಿಟಲ್ ಮಾಧ್ಯಮದ ಮೂಲಕ ಮಾತ್ರ ಪಾವತಿ ಮಾಡುತ್ತೀರಿ ಮತ್ತು ನಗದು ಪಾವತಿ ಮಾಡುವುದಿಲ್ಲ ಎಂದು ನೀವು ನಿರ್ಧರಿಸಿ. ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಯಶಸ್ಸು ಇದನ್ನು ಸಂಪೂರ್ಣವಾಗಿ ಸಾಧ್ಯವಾಗಿಸಿದೆ. ಇಷ್ಟೇ ಅಲ್ಲ ಒಂದು ತಿಂಗಳು ಮುಗಿದ ನಂತರ, ದಯವಿಟ್ಟು ನಿಮ್ಮ ಅನುಭವಗಳನ್ನು ಮತ್ತು ನಿಮ್ಮ ಫೋಟೋಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ. ಇದಕ್ಕಾಗಿ ಮುಂಚಿತವಾಗಿಯೇ ನಿಮಗೆ ಶುಭ ಹಾರೈಸುತ್ತೇನೆ.
ನನ್ನ ಪರಿವಾರ ಸದಸ್ಯರೇ, ನಮ್ಮ ಯುವ ಸ್ನೇಹಿತರು ದೇಶಕ್ಕೆ ಮತ್ತೊಂದು ದೊಡ್ಡ ಸುವಾರ್ತೆಯನ್ನು ನೀಡಿದ್ದಾರೆ, ಇದು ನಮ್ಮೆಲ್ಲರಲ್ಲಿ ಹೆಮ್ಮೆಯನ್ನು ತುಂಬಲಿದೆ. ಇಂಟೆಲಿಜೆನ್ಸ್, ಐಡಿಯಾ ಮತ್ತು ಇನ್ನೋವೇಶನ್ - ಇಂದಿನ ಭಾರತೀಯ ಯುವಕರ ಗುರುತಾಗಿದೆ. ಇದರಲ್ಲಿ ತಂತ್ರಜ್ಞಾನದ ಸಂಯೋಜನೆಯ ಮೂಲಕ ಅವರ ಬೌದ್ಧಿಕ ಮಟ್ಟದಲ್ಲಿಯೂ ನಿರಂತರ ವೃದ್ಧಿಯಾಗಲಿ, ಇದು ಸ್ವತಃ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವಪೂರ್ಣವಾದ ಪ್ರಗತಿಯಾಗಿದೆ. 2022 ರಲ್ಲಿ ಭಾರತೀಯರಿಂದ ಪೇಟೆಂಟ್ ಅರ್ಜಿಗಳಲ್ಲಿ ಶೇಕಡಾ 31 ಕ್ಕಿಂತ ಹೆಚ್ಚು ವೃದ್ಧಿಯಾಗಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ವಿಶ್ವ ಬೌದ್ಧಿಕ ಸ್ವತ್ತು ಸಂಸ್ಥೆ ಒಂದು ಕುತೂಹಲಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಪೇಟೆಂಟ್‌ಗಳನ್ನು ಸಲ್ಲಿಸುವಲ್ಲಿ ಮುಂಚೂಣಿಯಲ್ಲಿರುವ ಅಗ್ರಮಾನ್ಯ-10 ದೇಶಗಳಲ್ಲಿ ಕೂಡಾ ಹಿಂದೆಂದೂ ಈ ರೀತಿ ಸಂಭವಿಸಿಲ್ಲ ಎಂದು ಈ ವರದಿ ತೋರಿಸುತ್ತದೆ. ಈ ಅದ್ಭುತ ಸಾಧನೆಗಾಗಿ ನಾನು ನನ್ನ ಯುವ ಸ್ನೇಹಿತರನ್ನು ಅಪಾರವಾಗಿ ಅಭಿನಂದಿಸುತ್ತೇನೆ. ಪ್ರತಿ ಹಂತದಲ್ಲೂ ದೇಶವು ತಮ್ಮೊಂದಿಗಿದೆ ಎಂದು ನನ್ನ ಯುವ ಸ್ನೇಹಿತರಿಗೆ ಭರವಸೆ ನೀಡಲು ನಾನು ಬಯಸುತ್ತೇನೆ. ಸರ್ಕಾರವು ಮಾಡಿದ ಆಡಳಿತಾತ್ಮಕ ಮತ್ತು ಕಾನೂನು ಸುಧಾರಣೆಗಳ ನಂತರ, ಇಂದು ನಮ್ಮ ಯುವಕರು ಹೊಸ ಶಕ್ತಿಯೊಂದಿಗೆ ಬೃಹತ್ ಮಟ್ಟದಲ್ಲಿ ಆವಿಷ್ಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. 10 ವರ್ಷಗಳ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ, ಇಂದು ನಮ್ಮ ಪೇಟೆಂಟ್‌ಗಳು 10 ಪಟ್ಟು ಹೆಚ್ಚು ಅನುಮೋದನೆ ಪಡೆಯುತ್ತಿವೆ. ಪೇಟೆಂಟ್ ನಿಂದಾಗಿ ದೇಶದ ಬೌದ್ಧಿಕ ಸ್ವತ್ತು ವೃದ್ಧಿಸುವುದು ಮಾತ್ರವಲ್ಲದೆ, ಹೊಸ ಅವಕಾಶಗಳಿಗೆ ದ್ವಾರವೂ ತೆರೆದುಕೊಳ್ಳುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲ, ಇದು ನಮ್ಮ ಸ್ಟಾರ್ಟ್‌ಅಪ್‌ಗಳ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇಂದು ನಮ್ಮ ಶಾಲಾ ಮಕ್ಕಳಲ್ಲೂ ಆವಿಷ್ಕಾರದ ಮನೋಭಾವವನ್ನು ಉತ್ತೇಜಿಸಲಾಗುತ್ತಿದೆ. ಅಟಲ್ ಟಿಂಕರಿಂಗ್ ಲ್ಯಾಬ್, ಅಟಲ್ ಇನ್ನೋವೇಶನ್ ಮಿಷನ್, ಕಾಲೇಜುಗಳಲ್ಲಿ ಇನ್‌ಕ್ಯುಬೇಶನ್ ಸೆಂಟರ್‌ಗಳು, ಸ್ಟಾರ್ಟ್ ಅಪ್ ಇಂಡಿಯಾ ಅಭಿಯಾನ, ಇಂತಹ ನಿರಂತರ ಪ್ರಯತ್ನದ ಫಲ ದೇಶವಾಸಿಗಳ ಮುಂದಿದೆ. ಇದು ಭಾರತದ ಯುವ ಶಕ್ತಿ, ಭಾರತದ ಆವಿಷ್ಕಾರ ಶಕ್ತಿಗೆ ಜ್ವಲಂತ ಸಾಕ್ಷಿಯಾಗಿದೆ. ಈ ಉತ್ಸಾಹದಿಂದ ಮುನ್ನಡೆಯುವ ಮೂಲಕ ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಕೂಡಾ ಸಾಧಿಸಿ ತೋರಲಿದ್ದೇವೆ ಮತ್ತು ಅದಕ್ಕಾಗಿಯೇ ನಾನು ಪದೇ ಪದೇ ಹೇಳುತ್ತೇನೆ, 'ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಅನುಸಂಧಾನ' ಎಂದು.
ನನ್ನ ಪ್ರಿಯ ದೇಶವಾಸಿಗಳೇ, ಕೆಲ ಸಮಯದ ಹಿಂದೆ 'ಮನದ ಮಾತಿನಲ್ಲಿ' ನಾನು ಭಾರತದಲ್ಲಿ ಆಯೋಜಿಸಲಾಗುವ ಹೆಚ್ಚಿನ ಸಂಖ್ಯೆಯ ಜಾತ್ರೆಗಳ ಬಗ್ಗೆ ಚರ್ಚಿಸಿದ್ದು ನಿಮಗೆ ನೆನಪಿರಬಹುದು. ಆಗ ಜನರು ಜಾತ್ರೆಗಳಿಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಳ್ಳುವ ಸ್ಪರ್ಧೆಯ ಕಲ್ಪನೆಯೂ ಮೂಡಿತ್ತು. ಈ ನಿಟ್ಟಿನಲ್ಲಿ ಸಂಸ್ಕೃತಿ ಸಚಿವಾಲಯ ಜಾತ್ರೆ ಕ್ಷಣಗಳ ಸ್ಪರ್ಧೆಯನ್ನು ಆಯೋಜಿಸಿತ್ತು. ಸಾವಿರಾರು ಜನರು ಇದರಲ್ಲಿ ಭಾಗವಹಿಸಿದ್ದರು ಮತ್ತು ಅನೇಕ ಜನರು ಬಹುಮಾನಗಳನ್ನು ಗೆದ್ದಿದ್ದಾರೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದ. ಕೋಲ್ಕತ್ತಾದ ನಿವಾಸಿ ರಾಜೇಶ್ ಧರ್ ಅವರು "ಚರಕ್ ಮೇಳ" ದಲ್ಲಿ ಬಲೂನ್ ಮತ್ತು ಆಟಿಕೆಗಳ ಮಾರಾಟಗಾರರ ಅದ್ಭುತ ಫೋಟೋಗಾಗಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಜಾತ್ರೆಯು ಬಂಗಾಳದ ಗ್ರಾಮೀಣ ಭಾಗದಲ್ಲಿ ಬಹಳ ಜನಪ್ರಿಯವಾಗಿದೆ. ವಾರಣಾಸಿಯ ಹೋಳಿ ಹಬ್ಬವನ್ನು ಪ್ರದರ್ಶಿಸಿದ್ದಕ್ಕಾಗಿ ಅನುಪಮ್ ಸಿಂಗ್ ಅವರಿಗೆ ಮೇಲಾ ಪೊರ್ಟ್ರೇಟ್ಸ್ ಪ್ರಶಸ್ತಿ ಲಭಿಸಿದೆ. 'ಕುಲಸಾಯಿ ದಸರಾ' ಹಬ್ಬಕ್ಕೆ ಸಂಬಂಧಿಸಿದ ಆಕರ್ಷಕ ಮಗ್ಗುಲನ್ನು ಪ್ರದರ್ಶಿಸಿದ್ದಕ್ಕಾಗಿ ಅರುಣ್ ಕುಮಾರ್ ನಲಿಮೇಲ ಅವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಅದೇ ರೀತಿ ಮಹಾರಾಷ್ಟ್ರದ ಶ್ರೀಯುತರಾದ ಶ್ರೀ ರಾಹುಲ್ ಅವರು ಕಳುಹಿಸಿದ ಅತಿ ಹೆಚ್ಚು ಇಷ್ಟವಾದ ಫೋಟೋಗಳ ಪಟ್ಟಿಗೆ ಸೇರಿದ ಪಂಢರಪುರದ ಭಕ್ತಿಯನ್ನು ಪ್ರದರ್ಶಿಸುವ ಫೋಟೋ ಕೂಡಾ ಇದರಲ್ಲಿ ಸೇರಿದೆ. ಈ ಸ್ಪರ್ಧೆಯಲ್ಲಿ, ಜಾತ್ರೆಗಳ ಸಮಯದಲ್ಲಿ ಕಂಡುಬರುವ ಸ್ಥಳೀಯ ಭಕ್ಷ್ಯಗಳ ಅನೇಕ ಚಿತ್ರಗಳು ಇದ್ದವು. ಇದರಲ್ಲಿ ಪುರಲಿಯಾ ನಿವಾಸಿ ಅಲೋಕ್ ಅವಿನಾಶ್ ಅವರ ಚಿತ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಜಾತ್ರೆಯ ಸಂದರ್ಭದಲ್ಲಿ ಬಂಗಾಳದ ಗ್ರಾಮೀಣ ಪ್ರದೇಶದ ಆಹಾರಗಳ ಚಿತ್ರವನ್ನು ಅವರು ಪ್ರದರ್ಶಿಸಿದ್ದರು. ಭಗೋರಿಯಾ ಹಬ್ಬದಂದು ಮಹಿಳೆಯರು ಕುಲ್ಫಿ ಸವಿಯುತ್ತಿರುವ ಪ್ರಣಬ್ ಬಸಾಕ್ ಅವರ ಚಿತ್ರಕ್ಕೂ ಪ್ರಶಸ್ತಿ ನೀಡಲಾಗಿದೆ. ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ನಡೆದ ಗ್ರಾಮ ಜಾತ್ರೆಯಲ್ಲಿ ಮಹಿಳೆಯರು ಭಜಿ ಸವಿ ಸವಿಯುತ್ತಿರುವ ಚಿತ್ರವನ್ನು ರುಮೇಲಾ ಅವರು ಕಳುಹಿಸಿದ್ದರು - ಅದಕ್ಕೆ ಕೂಡ ಪ್ರಶಸ್ತಿ ಲಭಿಸಿದೆ.
ಸ್ನೇಹಿತರೇ, ‘ಮನದ ಮಾತು’ ಮೂಲಕ ಇಂದು ಪ್ರತಿ ಹಳ್ಳಿ, ಪ್ರತಿ ಶಾಲೆ, ಪ್ರತಿ ಪಂಚಾಯಿತಿಯಲ್ಲಿ ಇಂತಹ ಸ್ಪರ್ಧೆಗಳನ್ನು ನಿರಂತರವಾಗಿ ಆಯೋಜಿಸಲು ವಿನಂತಿಸುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಶಕ್ತಿ ಅಗಾಧವಾಗಿದೆ, ತಂತ್ರಜ್ಞಾನ ಮತ್ತು ಮೊಬೈಲ್ ಮನೆ ಮನೆಗೂ ತಲುಪಿದೆ. ನಿಮ್ಮ ಸ್ಥಳೀಯ ಹಬ್ಬಗಳಾಗಲಿ ಅಥವಾ ಉತ್ಪನ್ನಗಳೇ ಆಗಿರಲಿ, ಅವನ್ನು ಕೂಡಾ ಈ ರೀತಿ ನೀವು ಜಾಗತಿಕವಾಗಿಸಬಹುದು.
ಸ್ನೇಹಿತರೇ, ಹಳ್ಳಿ ಹಳ್ಳಿಗಳಲ್ಲಿ ಆಯೋಜನೆಯಾಗುವ ಜಾತ್ರೆಗಳ ರೀತಿಯಲ್ಲಿಯೇ ನಮ್ಮಲ್ಲಿ ವಿಭಿನ್ನ ಶೈಲಿಯ ನೃತ್ಯಗಳಿಗೆ ಕೂಡಾ ತನ್ನದೇ ಆದ ಪರಂಪರೆ ಇದೆ. ಜಾರ್ಖಂಡ್, ಒಡಿಶಾ ಮತ್ತು ಬಂಗಾಳದ ಬುಡಕಟ್ಟು ಪ್ರದೇಶಗಳಲ್ಲಿ ಒಂದು ಬಹಳ ಪ್ರಸಿದ್ಧ ನೃತ್ಯ ಪ್ರಕಾರವಿದ್ದು ಅದನ್ನು ನಾವು “ಛವು” ಎಂಬ ಹೆಸರಿನಿಂದ ಕರೆಯುತ್ತೇವೆ. ನವೆಬರ್ 15 ರಿಂದ 17 ರವರೆಗೆ ಏಕ ಭಾರತ್, ಶ್ರೇಷ್ಠ ಭಾರತ್ ಭಾವನೆಯೊಂದಿಗೆ ಶ್ರೀನಗರದಲ್ಲಿ “ಛವು” ಉತ್ಸವವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರೆಲ್ಲರೂ “ಛವು” ನೃತ್ಯವನ್ನು ಆನಂದಿಸಿದರು. ಶ್ರೀನಗರದ ಯುವಜನತೆಗೆ ಛವು ನೃತ್ಯದ ತರಬೇತಿ ನೀಡುವುದಕ್ಕಾಗಿ ಒಂದು ಕಾರ್ಯಾಗಾರ ಕೂಡಾ ಆಯೋಜನೆಯಾಗಿತ್ತು. ಇದೇ ರೀತಿ, ಕೆಲವು ವಾರಗಳ ಹಿಂದೆಯಷ್ಟೇ, ಕಠುವಾ ಜಿಲ್ಲೆಯಲ್ಲಿ ‘ಬಸೋಹಲಿ’ ಉತ್ಸವ ಆಯೋಜನೆಯಾಗಿತ್ತು. ಈ ಸ್ಥಳವು ಜಮ್ಮುವಿನಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ. ಈ ಉತ್ಸವದಲ್ಲಿ ಸ್ಥಳೀಯ ಕಲೆ, ಜಾನಪದ ನೃತ್ಯ ಮತ್ತು ಪಾರಂಪರಿಕ ರಾಮಲೀಲಾ ಕೂಡಾ ಆಯೋಜಿಸಲಾಗಿತ್ತು.
ಸ್ನೇಹಿತರೇ, ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ಸೌದಿ ಅರೇಬಿಯಾದಲ್ಲಿ ಕೂಡಾ ಸವಿಯಲಾಗಿದೆ. ಇದೇ ತಿಂಗಳು ಸೌದಿ ಅರೇಬಿಯಾದಲ್ಲಿ ಸಂಸ್ಕೃತ ಉತ್ಸವ ಎಂಬ ಹೆಸರಿನ ಒಂದು ಉತ್ಸವ ಆಯೋಜಿಸಲಾಗಿತ್ತು. ಇದು ಬಹಳ ವಿಶಿಷ್ಟವಾಗಿತ್ತು ಏಕೆಂದರೆ, ಇಡೀ ಕಾರ್ಯಕ್ರಮ ಸಂಸ್ಕೃತ ಭಾಷೆಯಲ್ಲಿತ್ತು. ಮಾತುಕತೆ, ಸಂಗೀತ, ನೃತ್ಯ ಎಲ್ಲವೂ ಸಂಸ್ಕೃತ ಭಾಷೆಯಿಲ್ಲಿಯೇ ಇತ್ತು, ಇದರಲ್ಲಿ ಸ್ಥಳೀಯ ಜನತೆಯ ಪಾಲ್ಗೊಳ್ಳುವಿಕೆಯೂ ಕಾಣುತ್ತಿತ್ತು.
ನನ್ನ ಕುಟುಂಬ ಬಂಧುಗಳೇ, ‘ಸ್ವಚ್ಛ ಭಾರತ’ ಈಗಂತೂ ಇಡೀ ದೇಶದ ಪ್ರೀತಿಯ ವಿಷಯವಾಗಿದೆ. ಇದು ನನ್ನ ಪ್ರೀತಿಯ ವಿಷಯ ಆಗಿಯೇ ಇದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ಸಂಗತಿ ತಿಳಿದುಬರುತ್ತಿದ್ದಂತೆಯೇ, ನನ್ನ ಮನ ಆ ನಿಟ್ಟಿನಲ್ಲಿ ಹೊರಟೇ ಹೋಗುತ್ತದೆ ಮತ್ತು ಹೀಗಾಗಿ ಈ ವಿಷಯಕ್ಕೆ ಮನದ ಮಾತಿನಲ್ಲಿ ಸ್ಥಾನವಂತೂ ಖಂಡಿತವಾಗಿಯೂ ದೊರೆಯುವುದು ಸಹಜವೇ ಆಗಿದೆ. ಸ್ವಚ್ಛ ಭಾರತ ಅಭಿಯಾನವು ಸ್ವಚ್ಛತೆ – ನೈರ್ಮಲ್ಯ ಕುರಿತಂತೆ ಸಾರ್ವಜನಿಕರ ಚಿಂತನೆಯನ್ನು ಬದಲಾಯಿಸಿಬಿಟ್ಟಿದೆ. ಈ ಉಪಕ್ರಮ ಈಗ ರಾಷ್ಟ್ರೀಯ ಭಾವನೆಯ ಪ್ರತೀಕವಾಗಿದೆ, ಇದು ಕೋಟ್ಯಂತರ ಭಾರತೀಯರ ಜೀವನದಲ್ಲಿ ಸುಧಾರಣೆ ತಂದಿದೆ. ಈ ಅಭಿಯಾನವು ವಿಭಿನ್ನ ಕ್ಷೇತ್ರಗಳ ಜನರನ್ನು, ಅದರಲ್ಲೂ ವಿಶೇಷವಾಗಿ ಯುವಜನತೆನ್ನು ಸಾಮೂಹಿಕ ಪಾಲ್ಗೊಳ್ಳುವಿಕೆಗೆ ಪ್ರೇರೇಪಿಸಿದೆ. ಇಂತಹದ್ದೇ ಒಂದು ಪ್ರಶಂಸನೀಯ ಪ್ರಯತ್ನ ಸೂರತ್ ನಲ್ಲಿ ನೋಡಲು ದೊರೆತಿದೆ. ಯುವಜನರ ತಂಡವೊಂದು ಇಲ್ಲಿ ‘ಪ್ರಾಜೆಕ್ಟ್ ಸೂರತ್’ ಆರಂಭಿಸಿದೆ. ಸೂರತ್ ನಗರವನ್ನು ಸ್ವಚ್ಛ ಮತ್ತು ಸುಸ್ಥಿರ ಅಭಿವೃದ್ಧಿಯ ಅತ್ಯುತ್ತಮ ಉದಾಹರಣೆಯಂತೆ “ಮಾದರಿ ನಗರ”ವನ್ನಾಗಿ ಮಾಡುವುದು ಈ ಯೋಜನೆಯ ಗುರಿಯಾಗಿದೆ. ‘ಸ್ವಚ್ಛತಾ ಭಾನುವಾರ’ ಅಥವಾ ‘ಸಫಾಯಿ ಸಂಡೇ’ ಹೆಸರಿನಿಂದ ಆರಂಭಿಸಲಾದ ಈ ಪ್ರಯತ್ನದ ಅಡಿಯಲ್ಲಿ, ಸೂರತ್ ನ ಯುವಜನತೆ ಮೊದಲು ಸಾರ್ವಜನಿಕ ಸ್ಥಳಗಳನ್ನು ಮತ್ತು Dumas Beach ಅನ್ನು ಸ್ವಚ್ಛಗೊಳಿಸುತ್ತಿತ್ತು. ನಂತರದಲ್ಲಿ ಇವರು ತಾಪಿ ನದಿಯ ತೀರವನ್ನು ಸ್ವಚ್ಛಗೊಳಿಸುವ ಪ್ರಯತ್ನದಲ್ಲಿ ತೊಡಗಿಕೊಂಡರು ಮತ್ತು ಕ್ರಮೇಣ ಇದರಲ್ಲಿ ತೊಡಗಿಕೊಳ್ಳುವವರ ಸಂಖ್ಯೆ 50 ಸಾವಿರಕ್ಕಿಂತ ಅಧಿಕವಾಯಿತು ಎಂಬ ವಿಷಯ ಕೇಳಿ ನಿಮಗೆ ನಿಜಕ್ಕೂ ಸಂತೋಷವಾಗುತ್ತದೆ. ಜನರಿಂದ ದೊರೆತ ಬೆಂಬಲಿಂದ ತಂಡದ ಆತ್ಮವಿಶ್ವಾಸ ಹೆಚ್ಚಾಯಿತು. ನಂತರ ಅವರು ತ್ಯಾಜ್ಯ ಸಂಗ್ರಹಣೆಯ ಕೆಲಸವನ್ನೂ ಕೈಗೆತ್ತಿಕೊಂಡರು. ಈ ತಂಡ ಲಕ್ಷಾಂತರ ಕಿಲೋಗ್ರಾಂ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ತಳ ಮಟ್ಟದಲ್ಲಿ ಆರಂಭಿಸಲಾದ ಈ ಪ್ರಯತ್ನವು ಸಾಕಷ್ಟು ಬದಲಾವಣೆ ತರುವಂತಹದ್ದಾಗಿದೆ.
ಸ್ನೇಹಿತರೇ, ಗುಜರಾತ್ ನಿಂದ ಕೂಡಾ ಮತ್ತೊಂದು ವಿಚಾರ ಕುರಿತು ತಿಳಿದು ಬಂದಿದೆ. ಕೆಲವು ವಾರಗಳ ಹಿಂದೆ ಅಲ್ಲಿ ಅಂಬಾಜಿಯಲ್ಲಿ ‘ಭಾದರವೀ ಪೂನಮ್ ಮೇಳ’ ಆಯೋಜನೆಯಾಗಿತ್ತು. ಈ ಜಾತ್ರೆಗೆ 50 ಲಕ್ಷಕ್ಕಿಂತ ಅಧಿಕ ಮಂದಿ ಬಂದಿದ್ದರು. ಈ ಜಾತ್ರೆ ಪ್ರತಿವರ್ಷ ನಡೆಯುತ್ತದೆ. ಜಾತ್ರೆಗೆ ಬಂದಿದ್ದ ಜನರು ಗಬ್ಬರ್ ಬೆಟ್ಟದ ಒಂದು ದೊಡ್ಡ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು ಎನ್ನುವುದು ಬಹಳ ವಿಶೇಷವಾಗಿತ್ತು. ದೇವಾಲಯದ ಸುತ್ತ ಮುತ್ತಲಿನ ಇಡೀ ಪ್ರದೇಶವನ್ನು ಸ್ವಚ್ಛವಾಗಿ ಇರಿಸುವ ಈ ಅಭಿಯಾನ ಬಹಳ ಸ್ಫೂರ್ತಿದಾಯಕವಾಗಿತ್ತು.
ಸ್ನೇಹಿತರೇ, ಸ್ವಚ್ಛತೆ ಎನ್ನುವುದು ಕೇವಲ ಒಂದು ದಿನ ಅಥವಾ ಒಂದು ವಾರಕಾಲ ನಡೆಯುವ ಅಭಿಯಾನವಲ್ಲ, ಇದು ಜೀವನದಲ್ಲಿ ಹಾಸುಹೊಕ್ಕಾಗುವ ಕೆಲಸವಾಗಿದೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ತಮ್ಮ ಇಡೀ ಜೀವನವನ್ನು ಸ್ವಚ್ಛತೆಗೆ ಸಂಬಂಧಿಸಿದ ವಿಷಯಗಳಿಗೆ ಮೀಸಲಾಗಿಟ್ಟ ಜನರನ್ನು ನಾವು ನಮ್ಮ ಸುತ್ತ ಮುತ್ತ ನೋಡುತ್ತಿರುತ್ತೇವೆ. ತಮಿಳುನಾಡಿನ ಕೊಯಮಏತ್ತೂರಿನ ನಿವಾಸಿ ಲೋಕನಾಥನ್ ಅವರು ಇದಕ್ಕೆ ಒಂದು ಉದಾಹರಣೆ. ಬಾಲ್ಯದಲ್ಲಿ ಬಡ ಮಕ್ಕಳ ಹರಿದ ಉಡುಪುಗಳನ್ನು ನೋಡಿ ಅವರು ಬಹಳ ಚಿಂತಿತರಾಗುತ್ತಿದ್ದರು. ಆ ನಂತರ ಅವರು ಅಂತಹ ಮಕ್ಕಳ ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದರು ಮತ್ತು ತಮ್ಮ ಆದಾಯದ ಒಂದು ಭಾಗವನ್ನು ದಾನವಾಗಿ ನೀಡಲು ಆರಂಭಿಸಿದರು. ಯಾವಾಗಲಾದರೂ ಹಣದ ಕೊರತೆ ಕಂಡುಬಂದಾಗ, ಬಡ ಮಕ್ಕಳಿಗೆ ಸಹಾಯ ಮಾಡುವುದಕ್ಕಾಗಿ ಲೋಕನಾಥನ್ ಅವರು ಶೌಚಾಲಯಗಳನ್ನು ಕೂಡಾ ಸ್ವಚ್ಛಗೊಳಿಸುತ್ತಿದ್ದರು. ಅವರು ಕಳೆದ 25 ವರ್ಷಗಳಿಂದ ಸಂಪೂರ್ಣ ಸಮರ್ಪಣಾ ಭಾವನೆಯಿಂದ ತಮ್ಮ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಇಲ್ಲಿಯವರೆಗೂ 1500 ಕ್ಕೂ ಅಧಿಕ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ನಾನು ಮತ್ತೊಮ್ಮೆ ಇಂತಹ ಪ್ರಯತ್ನಗಳನ್ನು ಶ್ಲಾಘಿಸಲು ಬಯಸುತ್ತೇನೆ. ದೇಶಾದ್ಯಂತ ನಡೆಯುತ್ತಿರುವ ಇಂತಹ ಅನೇಕ ಪ್ರಯತ್ನಗಳು ನಮಗೆ ಸ್ಫೂರ್ತಿ ನೀಡುವುದು ಮಾತ್ರವಲ್ಲದೇ, ಏನನ್ನಾದರೂ ಹೊಸದನ್ನು ಮಾಡಿಯೇ ಹೋಗಬೇಕೆನ್ನುವ ಇಚ್ಛಾಶಕ್ತಿಯನ್ನೂ ಉತ್ತೇಜಿಸುತ್ತದೆ.
ನನ್ನ ಕುಟುಂಬ ಬಂಧುಗಳು, 21ನೇ ಶತಮಾನದ ಅತಿ ದೊಡ್ಡ ಸವಾಲುಗಳ ಪೈಕಿ ’ಜಲ ಸಂರಕ್ಷಣೆ ’ ಎನ್ನುವುದೂ ಕೂಡಾ ಒಂದೆನಿಸಿದೆ. ನೀರನ್ನು ಸಂರಕ್ಷಿಸುವುದು ಜೀವ ಉಳಿಸುವ ಕೆಲಸಕ್ಕಿಂತ ಕಡಿಮೆಯದ್ದೇನಲ್ಲ. ನಾವು ಸಾಮೂಹಿಕ ಭಾವನೆಯೊಂದಿಗೆ ಯಾವುದೇ ಕೆಲಸವನ್ನು ಮಾಡಿದರೂ, ಅದರಲ್ಲಿ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ. ಇದಕ್ಕೆ ಒಂದು ಉದಾಹರಣೆಗಳ ಪೈಕಿ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ನಿರ್ಮಾಣವಾಗುತ್ತಿರುವ ‘ಅಮೃತ ಸರೋವರ’ ಕೂಡಾ ಸೇರಿದೆ. ‘ಅಮೃತ ಮಹೋತ್ಸವ’ ದ ಮೂಲಕ ಭಾರತ ನಿರ್ಮಿಸಿರುವ 65 ಸಾವಿರಕ್ಕೂ ಅಧಿಕ ‘ಅಮೃತ ಸರೋವರಗಳು’ ಭವಿಷ್ಯದ ಪೀಳಿಗೆಗಳಿಗೆ ಪ್ರಯೋಜನ ಉಂಟುಮಾಡುತ್ತವೆ. ಎಲ್ಲೆಲ್ಲಿ ಅಮೃತ ಸರೋವರಗಳ ನಿರ್ಮಾಣವಾಗಿದೆಯೋ ಅಲ್ಲೆಲ್ಲಾ ಅವುಗಳ ಬಗ್ಗೆ ನಿರಂತವಾಗಿ ಕಾಳಜಿ ವಹಿಸುವುದು, ಅವು ಜಲ ಸಂರಕ್ಷಣೆಯ ಪ್ರಮುಖ ಮೂಲವಾಗಿ ಇರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಈಗ ನಮ್ಮೆಲ್ಲರದ್ದಾಗಿದೆ.
ಸ್ನೇಹಿತರೇ, ಜಲ ಸಂರಕ್ಷಣೆ ಕುರಿತ ಈ ಮಾತುಕತೆಯ ನಡುವೆಯೇ, ನನಗೆ ಗುಜರಾತ್ ನ ಅಮರೇಲಿಯಲ್ಲಿ ನಡೆದ ಒಂದು ‘ಜಲ ಉತ್ಸವ’ ಕುರಿತು ಕೂಡಾ ತಿಳಿದುಬಂದಿತು. ಗುಜರಾತಿನಲ್ಲಿ ಹನ್ನೆರಡು ತಿಂಗಳೂ ಹರಿಯುವ ನದಿಗಳ ಕೊರತೆಯೂ ಇದೆ ಆದ್ದರಿಂದ ಜನರು ಬಹುತೇಕ ಮಳೆಯ ನೀರನ್ನೇ ಅವಲಂಬಿಸಬೇಕಾಗುತ್ತದೆ. ಕಳೆದ 20-25 ವರ್ಷಗಳಲ್ಲಿ ಸರ್ಕಾರ ಮತ್ತು ಸಾಮಾಜಿಕ ಸಂಘಟನೆಗಳ ಪ್ರಯತ್ನದ ನಂತರ, ಅಲ್ಲಿನ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ಬದಲಾವಣೆ ಬಂದಿದೆ. ಆದ್ದರಿಂದಲೇ ಅಲ್ಲಿ ‘ಜಲ ಉತ್ಸವ’ ದ ಬಹು ದೊಡ್ಡ ಪಾತ್ರವಿದೆ. ಅಮರೇಲಿಯಲ್ಲಿ ನಡೆದ ‘ಜಲ ಉತ್ಸವ’ ದ ಮೂಲಕ ‘ಜಲ ಸಂರಕ್ಷಣೆ’ ಮತ್ತು ಸರೋವರಗಳ ಸಂರಕ್ಷಣೆ ಕುರಿತಂತೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಯಿತು. ಇದರಲ್ಲಿ Water Sports ಗೆ ಕೂಡಾ ಉತ್ತೇಜನ ನೀಡಲಾಯಿತು, ಜಲ ಭದ್ರತೆ ಕುರಿತ ತಜ್ಞರೊಂದಿಗೆ ಚಿಂತನ-ಮಂಥನ ಕೂಡಾ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಿಗೆ ತ್ರಿವರ್ಣ ಜಲ ಕಾರಂಜಿ ಕೂಡಾ ಬಹಳ ಇಷ್ಟವಾಯಿತು. ಸೂರತ್ ನಲ್ಲಿ ವಜ್ರಗಳ ವ್ಯಾಪಾರದಲ್ಲಿ ಹೆಸರು ಮಾಡಿರುವ ಸಾವ್ಜಿ ಭಾಯಿ ಧೋಲಾಕಿಯಾ ಅವರ ಪ್ರತಿಷ್ಠಾನದಿಂದ ಈ ಜಲ-ಉತ್ಸವವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ, ಜಲಸಂರಕ್ಷಣೆಗಾಗಿ ಇದೇ ರೀತಿಯ ಕೆಲಸಗಳನ್ನು ಮಾಡುವುದಕ್ಕಾಗಿ ಶುಭ ಹಾರೈಸುತ್ತೇನೆ.
ನನ್ನ ಕುಟುಂಬ ಬಾಂಧವರೇ, ಇಂದು ವಿಶ್ವಾದ್ಯಂತ ಕೌಶಲ್ಯಾಭಿವೃದ್ಧಿಯ ಪ್ರಾಮುಖ್ಯತೆಯನ್ನು ಅಂಗೀಕರಿಸಲಾಗುತ್ತಿದೆ. ನಾವು ಯಾರಿಗಾದರೂ ಯಾವುದಾದರೊಂದು ಕೌಶಲ್ಯವನ್ನು ಕಲಿಸಿದಾಗ, ಅದು ಅವರಿಗೆ ಕುಶಲತೆ ಕಲಿಸುವುದು ಮಾತ್ರವಲ್ಲದೇ, ಅವರಿಗೆ ಆದಾಯದ ದಾರಿಯನ್ನು ಕೂಡಾ ಒದಗಿಸುತ್ತೇವೆ. ಸಂಸ್ಥೆಯೊಂದು ಕಳೆದ ನಾಲ್ಕು ದಶಕಗಳಿಂದ ಕೌಶಲ್ಯಾಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ತಿಳಿದು ನನಗೆ ಬಹಳ ಸಂತೋಷವಾಯಿತು. ಈ ಸಂಸ್ಥೆ ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿದೆ ಮತ್ತು ಈ ಸಂಸ್ಥೆಯ ಹೆಸರು ‘ಬೆಲ್ಜಿಪುರಂ ಯೂಥ್ ಕ್ಲಬ್‘ ಎಂಬುದಾಗಿದೆ. ಕೌಶಲ್ಯಾಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುತ್ತಾ, ‘ಬೆಲ್ಜಿಪುರಂ ಯೂಥ್ ಕ್ಲಬ್‘ ಸುಮಾರು 7000 ಮಹಿಳೆಯರನ್ನು ಸಬಲೀಕರಣಗೊಳಿಸಿದೆ. ಇವರಲ್ಲಿ ಹೆಚ್ಚಿನ ಮಹಿಳೆಯರು ಇಂದು ತಮ್ಮ ಸಾಮರ್ಥ್ಯದಿಂದ ಕೆಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯು ಬಾಲಕಾರ್ಮಿಕರಿಗೆ ಕೂಡಾ ಯಾವುದಾದರೊಂದು ಕೌಶಲ್ಯ ಕಲಿಸಿ ಆ ವಿಷವರ್ತುಲದಿಂದ ಹೊರಬರುವುದಕ್ಕೆ ಆ ಮಕ್ಕಳಿಗೆ ಸಹಾಯ ಕೂಡಾ ಮಾಡಿದೆ. ‘ಬೆಲ್ಜಿಪುರಂ ಯೂಥ್ ಕ್ಲಬ್‘ ನ ತಂಡವು ರೈತ ಉತ್ಪಾದಕ ಸಂಘ ಅಂದರೆ FPOs ನೊಂದಿಗೆ ಸಂಪರ್ಕಿತರಾಗಿರುವ ರೈತರಿಗೆ ಕೂಡಾ ಹೊಸ ಕೌಶಲ್ಯ ಕಲಿಸಿದೆ ಮತ್ತು ಇದರಿಂದಾಗಿ ಹೆಚ್ಚಿನ ಸಂಖ್ಯೆಯ ರೈತರು ಸಶಕ್ತರಾಗಿದ್ದಾರೆ. ಸ್ವಚ್ಛತೆ ಕುರಿತಂತೆ ಕೂಡಾ ಈ ಯೂಥ್ ಕ್ಲಬ್ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಕ್ಲಬ್ ಅನೇಕ ಶೌಚಾಲಯಗಳ ನಿರ್ಮಾಣಕ್ಕೆ ಕೂಡಾ ಸಹಾಯ ಮಾಡಿದೆ. ಕೌಶಲ್ಯಾಭಿವೃದ್ಧಿಗಾಗಿ ಈ ಸಂಸ್ಥೆಯೊಂದಿಗೆ ತೊಡಗಿಕೊಂಡಿರುವ ಪ್ರತಿಯೊಬ್ಬರಿಗೂ ನಾನು ಅನೇಕಾನೇಕ ಅಭಿನಂದನೆ ಸಲ್ಲಿಸಲುತ್ತೇನೆ ಮತ್ತು ಅವರುಗಳನ್ನು ಪ್ರಶಂಸಿಸುತ್ತೇನೆ. ಇಂದು ದೇಶದ ಹಳ್ಳಿ ಹಳ್ಳಿಗಳಲ್ಲಿ ಕೌಶಲ್ಯಾಭಿವೃದ್ಧಿಗಾಗಿ ಇಂತಹ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ.
ಸ್ನೇಹಿತರೇ, ಯಾವುದಾದರೊಂದು ಗುರಿ ಸಾಧನೆಗಾಗಿ ಸಾಮೂಹಿಕ ಪ್ರಯತ್ನಗಳು ನಡೆದಾಗ ಯಶಸ್ಸಿನ ಎತ್ತರ ಕೂಡಾ ಬಹಳವಾಗುತ್ತದೆ. ನಾನು ನಿಮ್ಮೆಲ್ಲರೊಂದಿಗೆ ಲಡಾಖ್ ನ ಒಂದು ಪ್ರೇರಣಾತ್ಮಕ ಉದಾಹರಣೆ ನೀಡಲು ಬಯಸುತ್ತೇನೆ. ನೀವು ಪಶ್ಮೀನಾ ಶಾಲು ಬಗ್ಗೆ ಖಂಡಿತವಾಗಿಯೂ ಕೇಳಿಯೇ ಇರುತ್ತೀರಿ. ಕಳೆದ ಕೆಲವು ಸಮಯದಿಂದ ಲಡಾಖಿನ ಪಶ್ಮೀನಾ ಕುರಿತಂತೆ ಬಹಳ ಚರ್ಚೆ ನಡೆಯುತ್ತಿದೆ. ಲಡಾಖಿನ ಪಶ್ಮೀನಾ Looms of Laddakh ಹೆಸರಿನಿಂದ ವಿಶ್ವಾದ್ಯಂತ ಮಾರುಕಟ್ಟೆಗಳಿಗೆ ತಲುಪುತ್ತಿದೆ. ಇದನ್ನು ತಯಾರಿಸಲು 15 ಗ್ರಾಮಗಳ 450 ಕ್ಕೂ ಅಧಿಕ ಮಹಿಳೆಯರ ಪಾತ್ರವಿದೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಮೊದಲು ಅವರು ಅಲ್ಲಿಗೆ ಬರುವ ಪ್ರವಾಸಿಗರಿಗೆ ಮಾತ್ರಾ ಇವುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಈಗ ಡಿಜಿಟಲ್ ಭಾರತದ ಈ ಯುಗದಲ್ಲಿ, ಅವರು ತಯಾರಿಸಿದ ವಸ್ತುಗಳು ವಿಶ್ವದ ಬೇರೆ ಬೇರೆ ಮಾರುಕಟ್ಟೆಗಳಿಗೆ ತಲುಪಲಾರಂಭಿಸಿವೆ. ಅಂದರೆ ನಮ್ಮ ಲೋಕಲ್ ಈಗ ಗ್ಲೋಬಲ್ ಆಗುತ್ತಿದೆ ಮತ್ತು ಇದರಿಂದಾಗಿ ಈ ಮಹಿಳೆಯರ ಆದಾಯವೂ ಹೆಚ್ಚಳವಾಗಿದೆ.
ಸ್ನೇಹಿತರೆ, ನಾರಿ ಶಕ್ತಿಯ ಇಂತಹ ಯಶಸ್ಸು ದೇಶದ ಮೂಲೆಮೂಲೆಗಳಲ್ಲಿಯೂ ಇದೆ. ಇಂತಹ ವಿಷಯಗಳನ್ನು ಹೆಚ್ಚು ಹೆಚ್ಚಾಗಿ ಜನರ ಮುಂದೆ ತರುವುದು ಅಗತ್ಯವಾಗಿದೆ. ಅಂತೆಯೇ ಇಂತಹ ವಿಷಯಗಳನ್ನು ಹೇಳಲು ಮನ್ ಕಿ ಬಾತ್ ಗಿಂತ ಉತ್ತಮ ಮಾಧ್ಯಮ ಮತ್ತೇನಿದೆ? ಹಾಗಾದರೆ ನೀವು ಇಂತಹ ಉದಾಹಣೆಗಳನ್ನು ನನ್ನೊಂದಿಗೆ ಹೆಚ್ಚು ಹೆಚ್ಚು ಹಂಚಿಕೊಳ್ಳಿ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ನಾನು ಕೂಡಾ ಮಾಡುತ್ತೇನೆ.
ನನ್ನ ಕುಟುಂಬ ಬಾಂಧವರೇ, ‘ಮನದ ಮಾತಿನಲ್ಲಿ’ ನಾವು ಸಮಾಜದಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾದ ಸಾಮೂಹಿಕ ಪ್ರಯತ್ನಗಳ ಬಗ್ಗೆ ಮಾತನಾಡುತ್ತೇವೆ. ‘ಮನ್ ಕಿ ಬಾತ್’ ನ ಮತ್ತೊಂದು ಸಾಧನೆಯೆಂದರೆ ಇದು ಮನೆ ಮನೆಯಲ್ಲೂ ರೇಡಿಯೋವನ್ನು ಮತ್ತಷ್ಟು ಜನಪ್ರಿಯಗೊಳಿಸಿದೆ. MyGOV ನಲ್ಲಿ ನನಗೆ ಉತ್ತರ ಪ್ರದೇಶದಲ್ಲಿ ಅಮರೋಹಾ ನಿವಾಸಿ ರಾಮ್ ಸಿಂಗ್ ಬೌದ್ಧ್ ಅವರಿಂದ ಪತ್ರವೊಂದು ಬಂದಿದೆ. ರಾಮ್ ಸಿಂಗ್ ಅವರು ಕಳೆದ ಹಲವು ದಶಕಗಳಿಂದ ರೇಡಿಯೋ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ‘ಮನ್ ಕಿ ಬಾತ್’ ನಂತರ ತಮ್ಮ ರೇಡಿಯೋ ಸಂಗ್ರಹಾಲಯದ ಬಗ್ಗೆ ಜನರ ಕುತೂಹಲ ಮತ್ತಷ್ಟು ಹೆಚ್ಚಾಯಿತೆಂದು ಅವರು ಹೇಳುತ್ತಾರೆ. ಅಂತೆಯೇ ‘ಮನದ ಮಾತಿನಿಂದ ಸ್ಫೂರ್ತಿ ಪಡೆದ ಅಹಮದಾಬಾದ್ ಸಮೀಪದ ಪುಣ್ಯಕ್ಷೇತ್ರ ಪ್ರೇರಣಾ ತೀರ್ಥ್, ಒಂದು ಆಕರ್ಷಕ ಪ್ರದರ್ಶನ ಏರ್ಪಡಿಸಿದೆ. ಇದರಲ್ಲಿ ದೇಶ-ವಿದೇಶಗಳ 100 ಕ್ಕೂ ಅಧಿಕ ಹಳೆಯ ರೇಡಿಯೋಗಳನ್ನು ಇರಿಸಲಾಗಿದೆ. ಇಲ್ಲಿ ‘ಮನ್ ಕಿ ಬಾತ್’ ನ ಇಲ್ಲಿಯವರೆಗಿನ ಎಲ್ಲಾ ಸಂಚಿಕೆಗಳನ್ನೂ ಕೇಳಬಹುದಾಗಿದೆ. ‘ಮನ್ ಕಿ ಬಾತ್’ ನಿಂದ ಪ್ರೇರಣೆ ಪಡೆದು ಹಲವರು ತಮ್ಮ ಸ್ವಂತ ಕೆಲಸಕಾರ್ಯಗಳನ್ನು ಆರಂಭಿಸಿದ್ದಾರೆನ್ನುವುದು ಇಂತಹ ಅನೇಕ ಉದಾಹರಣೆಗಳಿಂದ ತಿಳಿದು ಬರುತ್ತದೆ. ಇಂತಹದ್ದೇ ಒಂದು ಉದಾಹರಣೆ ಕರ್ನಾಟಕದ ಚಾಮರಾಜನಗರದ ವರ್ಷಾ ಅವರದ್ದಾಗಿದೆ. ಅವರು ತಮ್ಮ ಕಾಲ ಮೇಲೆ ತಾವು ನಿಲ್ಲಲು ‘ಮನ್ ಕಿ ಬಾತ್’ ಪ್ರೇರಣೆ ನೀಡಿದೆ. ಈ ಕಾರ್ಯಕ್ರಮದ ಒಂದು ಸಂಚಿಕೆಯಿಂದ ಸ್ಫೂರ್ತಿ ಪಡೆದ ಅವರು ಬಾಳೆಯಿಂದ ಸಾವಯವ ಗೊಬ್ಬರ ತಯಾರಿಸುವ ಕೆಲಸ ಪ್ರಾರಂಭಿಸಿದರು. ಪ್ರಕೃತಿಯ ಬಗ್ಗೆ ಅಪಾರ ಒಲವು ಹೊಂದಿರುವ ವರ್ಷಾ ಅವರ ಈ ಉಪಕ್ರಮ ಇತರರಿಗೆ ಕೂಡಾ ಉದ್ಯೋಗಾವಕಾಶವನ್ನು ಒದಗಿಸಿದೆ.
ನನ್ನ ಕುಟುಂಬದ ಜನರೇ, ನಾಳೆ ನವೆಂಬರ್ 27 ರಂದು ಕಾರ್ತೀಕ ಹುಣ್ಣಿಮೆಯ ಹಬ್ಬ. ಇದೇ ದಿನದಂದು ‘ದೇವ ದೀಪಾವಳಿ’ ಹಬ್ಬ ಕೂಡಾ ಆಚರಿಸಲಾಗುತ್ತದೆ. ಕಾಶಿ ‘ದೇವ ದೀಪಾವಳಿ’ಯನ್ನು ಖಂಡಿತವಾಗಿಯೂ ನೋಡಬೇಕೆಂದು ನನಗೆ ಬಹಳ ಆಸೆಯಿದೆ. ಈ ಬಾರಿ ನನಗೆ ಕಾಶಿಗೆ ಹೋಗಲಾಗುತ್ತಿಲ್ಲ, ಆದರೆ ಮನದ ಮಾತಿನ ಮೂಲಕ ವಾರಾಣಸಿಯ ಜನತೆಗೆ ನಾನು ನನ್ನ ಶುಭ ಹಾರೈಕೆಗಳನ್ನು ಖಂಡಿತವಾಗಿಯೂ ಕಳುಹಿಸುತ್ತಿದ್ದೇನೆ. ಈ ಬಾರಿ ಕೂಡಾ ಕಾಶಿಯ ಘಾಟ್ ಗಳಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಗುತ್ತದೆ, ಭವ್ಯ ಆರತಿಯೂ ನಡೆಯಲಿದೆ, Laser Show ಇರಲಿದೆ, ದೇಶ ವಿದೇಶಗಳಿಂದ ಆಗಮಿಸಿರುವಂತರಹ ಲಕ್ಷಾಂತರ ಜನರು ‘ದೇವ ದೀಪಾವಳಿ’ ಆನಂದ ಸವಿಯಲಿದ್ದಾರೆ.
ಸ್ನೇಹಿತರೇ, ನಾಳೆ ಹುಣ್ಣಿಮೆಯ ದಿನದಂದೇ ಗುರು ನಾನಕ್ ದೇವ್ ಅವರ ಜಯಂತಿಯೂ ಹೌದು. ಗುರುನಾನಕ್ ಅವರ ಅಮೂಲ್ಯ ಸಂದೇಶ ಕೇವಲ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಇಂದಿಗೂ ಕೂಡಾ ಪ್ರೇರಣೆ ಮತ್ತು ಪ್ರಸ್ತುತವಾಗಿದೆ. ಇಂದು ನಮಗೆ ಸರಳತೆ, ಸಾಮರಸ್ಯ, ಮತ್ತು ಇತರರೊಂದಿಗೆ ಪ್ರೀತಿ ಪ್ರೇಮದಿಂದ ಬಾಳಲು ಪ್ರೇರಣೆ ನೀಡುತ್ತದೆ. ಗುರು ನಾನಕ್ ದೇವ್ ಅವರ ಸೇವಾ ಮನೋಭಾವ, ಸೇವಾ ಕಾರ್ಯಗಳನ್ನು ನಮ್ಮ ಸಿಖ್ ಸೋದರ-ಸೋದರಿಯರು ಇಡೀ ವಿಶ್ವದಲ್ಲಿ ಇಂದಿಗೂ ಅನುಸರಣೆ ಮಾಡುತ್ತಿದ್ದಾರೆ. ನಾನು ‘ಮನ್ ಕಿ ಬಾತ್’ ನ ಎಲ್ಲಾ ಶ್ರೋತೃಗಳಿಗೂ ಗುರು ನಾನಕ್ ದೇವ್ ಅವರ ಜನ್ಮದಿನದ ಅನೇಕಾನೇಕ ಶುಭಾಶಯಗಳನ್ನು ಕೋರುತ್ತೇನೆ.
ನನ್ನ ಕುಟುಂಬದ ಬಾಂಧವರೇ, ಇಂದಿನ ‘ಮನದ ಮಾತನ್ನು’ ನಾನು ಇಲ್ಲಿಗೆ ಮುಗಿಸುತ್ತಿದ್ದೇನೆ. ನೋಡುತ್ತಿದ್ದಂತೆಯೇ 2023 ಮುಗಿಯುತ್ತಾ ಬಂದಿದೆ. ಪ್ರತಿ ಬಾರಿಯಂತೆಯೇ ನಾವು, ನೀವು ಎಲ್ಲರೂ ಅರೆ ಈ ವರ್ಷ ಇಷ್ಟು ಬೇಗ ಮುಗಿದುಹೋಯಿತೇ ಎಂದು ಯೋಚಿಸುತ್ತಿದ್ದೇವಲ್ಲವೇ, ಆದರೆ ಈ ವರ್ಷ ಭಾರತಕ್ಕೆ ಅನೇಕ ಸಾಧನೆಗಳ ವರ್ಷವಾಗಿತ್ತು ಮತ್ತು ಭಾರತದ ಸಾಧನೆ ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ. ‘ಮನ್ ಕಿ ಬಾತ್’ ಕಾರ್ಯಕ್ರಮ ಭಾರತೀಯರ ಇಂತಹ ಸಾಧನೆಗಳನ್ನು ಜನತೆಯ ಮುಂದಿರಿಸಲು ಒಂದು ಸಶಕ್ತ ಮಾಧ್ಯಮವಾಗಿದೆ ಎಂದು ನನಗೆ ಸಂತೋಷವೆನಿಸುತ್ತದೆ. ಮುಂದಿನ ಬಾರಿ ದೇಶವಾಸಿಗಳ ಅನೇಕ ಯಶಸ್ಸುಗಳ ಕುರಿತಂತೆ ನಿಮ್ಮೊಂದಿಗೆ ಮಾತನಾಡುತ್ತೇನೆ. ಅಲ್ಲಿಯವರೆಗೆ ನನಗೆ ಅನುಮತಿ ನೀಡಿ. ಅನೇಕಾನೇಕ ಧನ್ಯವಾದ. ನಮಸ್ಕಾರ.
******
(Release ID: 1979939)
Visitor Counter : 216
Read this release in:
Gujarati
,
Marathi
,
Manipuri
,
Urdu
,
Telugu
,
Assamese
,
English
,
Bengali-TR
,
Bengali
,
Punjabi
,
Odia
,
Tamil
,
Malayalam