ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಐಎಫ್ಎಫ್ಐ 54 ರಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ 'ವಿದುತಲೈ ಭಾಗ -1'ರ ಪಾತ್ರವರ್ಗ ಮತ್ತು ಸಿಬ್ಬಂದಿ


ಸ್ಥಳೀಯ ಸಂಸ್ಕೃತಿ, ಭಾಷೆ ಮತ್ತು ನೆಲದಲ್ಲಿ ಬೇರೂರಿರುವ ಸಿನಿಮೀಯ ಕಥೆಗಳನ್ನು ನಿರೂಪಿಸುತ್ತೇನೆ: ನಿರ್ದೇಶಕ ವೆಟ್ರಿ ಮಾರನ್ 

Posted On: 22 NOV 2023 5:36PM by PIB Bengaluru


ಗೋವಾ, ನವೆಂಬರ್, 22, 2023

 

"ನಾನು ಸ್ಥಳೀಯ ಸಂಸ್ಕೃತಿ, ಭಾಷೆ ಮತ್ತು ನೆಲದೊಂದಿಗೆ  ಅನುಸಂಧಾನ ನಡೆಸುವ ಮತ್ತು ಅವುಗಳಲ್ಲಿ ಬೇರೂರಿರುವ ಚಲನಚಿತ್ರಗಳನ್ನು ರೂಪಿಸುತ್ತೇನೆ" ಎಂದು ತಮಿಳು ಚಲನಚಿತ್ರ ವಿದುತಲೈ ಭಾಗ -1ರ ನಿರ್ದೇಶಕ ವೆಟ್ರಿ ಮಾರನ್ ಹೇಳಿದರು. ಗೋವಾದಲ್ಲಿ ನಡೆಯುತ್ತಿರುವ 54 ನೇ ಐಎಫ್ಎಫ್ಐನಲ್ಲಿ ಭಾರತೀಯ ಪನೋರಮಾ ಫೀಚರ್ ವಿಭಾಗದಲ್ಲಿ ನಿನ್ನೆ ಈ ಚಿತ್ರ ಪ್ರದರ್ಶನಗೊಂಡಿತು.  ನಿರ್ದೇಶಕ, ನಾಯಕ ಸೂರಿ, ನಿರ್ಮಾಪಕ ಎಲ್ರೆಡ್ ಕುಮಾರ್ ಸಂತಾನಮ್ ಮತ್ತು ಛಾಯಾಗ್ರಹಣ ನಿರ್ದೇಶಕ ಆರ್ ವೇಲ್ರಾಜ್ ಅವರು ಈ ಸಂದರ್ಭದಲ್ಲಿ ಪ್ರತಿನಿಧಿಗಳು, ಚಲನಚಿತ್ರ ಉತ್ಸಾಹಿಗಳು ಮತ್ತು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು.

ಚಿತ್ರ ತಯಾರಿಕೆ ಮತ್ತು ಕಲ್ಪನೆಯ  ಬಗ್ಗೆ ಮಾತನಾಡಿದ ವೆಟ್ರಿ ಮಾರನ್, ಕೋವಿಡ್ ಸಮಯದಲ್ಲಿ ನಿರ್ಬಂಧಗಳು ಜಾರಿಯಲ್ಲಿದ್ದಾಗ  ಮತ್ತು ಅವುಗಳನ್ನು ತೆಗೆದುಹಾಕುತ್ತಿರುವ ಕಾಲಘಟ್ಟದಲ್ಲಿ ಕಿರು ಚಲನಚಿತ್ರವನ್ನು ಮಾಡಲು ಬಯಸಿದ್ದೆ ಎಂದು ಹೇಳಿದರು. ಸಿಬ್ಬಂದಿಯೊಂದಿಗೆ ಕಾಡಿಗೆ ತೆರಳಿ,  ಅಲ್ಲಿ ಪ್ರಪಂಚದ ಇತರ ಭಾಗಗಳಿಂದ ದೂರ ಉಳಿದು 30 ದಿನಗಳಲ್ಲಿ ಚಿತ್ರವನ್ನು ಪೂರ್ಣಗೊಳಿಸಲು ಬಯಸಿದ್ದೆ ಎಂದವರು ಹೇಳಿದರು. ಈ ಚಿತ್ರವು 1998 ರಲ್ಲಿ ಜಯಮೋಹನ್ ಬರೆದ 6 ಪುಟಗಳ ಸಣ್ಣ ಕಥೆ 'ತುನೈವನ್' ಅನ್ನು ಆಧರಿಸಿದೆ, ವೆಟ್ರಿ ಮಾರನ್ ಬರೆದ ಭಾಗ ಮತ್ತು ಇನ್ನೂ ಕೆಲವು ಸಂಶೋಧನೆಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಒಮ್ಮೆ ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಇತರ ವಿಷಯಗಳು ಸೇರುತ್ತಲೇ ಹೋದವು ಎಂದೂ  ಅವರು ಹೇಳಿದರು, "ಇದು ದೀರ್ಘ ಪ್ರಯಾಣವಾಗಿದೆ ಮತ್ತು ಇನ್ನೂ ತಯಾರಿಕೆಯಲ್ಲಿರುವ ಚಲನಚಿತ್ರವಾಗಿದೆ" ಎಂದರು.

ಚಿತ್ರದ ಧ್ವನಿಪಥವನ್ನು ಇಳಯರಾಜಾ ಸಂಯೋಜಿಸಿದ್ದಾರೆ ಮತ್ತು ಇದು ಸಂಗೀತ ಮಾಂತ್ರಿಕರೊಂದಿಗೆ ವೆಟ್ರಿ ಮಾರನ್ ಅವರ ಮೊದಲ ಸಹಯೋಗವಾಗಿದೆ.

ನಾಯಕ ನಟನನ್ನು ಶ್ಲಾಘಿಸುತ್ತ, "ಸೂರಿ ಅವರು ಕುಮಾರೇಶನ್ ಪಾತ್ರವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಾಕಾರಗೊಳಿಸಿದ್ದಾರೆ, ಅವರ ನಿಜವಾದ ವ್ಯಕ್ತಿತ್ವವು ಪಾತ್ರದೊಂದಿಗೆ ಸಲೀಸಾಗಿ ಬೆರೆಯುತ್ತದೆ" ಎಂದು ಅವರು ಹೇಳಿದರು. ವಿಶೇಷವೆಂದರೆ, ದೈಹಿಕ ಸಾಮರ್ಥ್ಯವನ್ನು/ಕ್ಷಮತೆಯನ್ನು  ಕಾಪಾಡಿಕೊಳ್ಳುವ ಸೂರಿ ಅವರ ಬದ್ಧತೆಯು ಚಿತ್ರದ ಅಂತಿಮ ಸಾಹಸಮಯ ದೃಶ್ಯದಲ್ಲಿ (ಸ್ಟಂಟ್ ನಲ್ಲಿ)  ಸ್ಪಷ್ಟವಾಗಿ ಮೂಡಿ ಬಂದಿದೆ - ಇದು ಅವರ ಸಮರ್ಪಣೆ ಮತ್ತು ದೈಹಿಕ ಕ್ಷಮತೆಯ  ಮಟ್ಟಕ್ಕೆ ಸಾಕ್ಷಿಯಾಗಿದೆ ಎಂದೂ ಅವರು ನುಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಸೂರಿ, ತಾವು ಹಾಸ್ಯನಟನಾಗಿ ಸುಮಾರು 160 ಚಲನಚಿತ್ರಗಳಲ್ಲಿ  ಪಾಲ್ಗೊಂಡ ವೃತ್ತಿಜೀವನದ ನಂತರ ಮೊದಲ ಬಾರಿಗೆ ನಾಯಕನಾಗಿ ಭವ್ಯ ವೇದಿಕೆಗೆ ಕಾಲಿಡುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಆರಂಭದಲ್ಲಿ ಸಾಧಾರಣ ಪಾತ್ರದಂತೆ ತೋರಿದ, ನಂತರ ನಾಯಕನಾಗಿ ಹೊರಹೊಮ್ಮುವಂತಹ ಪಾತ್ರವನ್ನು ನೀಡಿದ  ವೆಟ್ರಿ ಮಾರನ್ ಅವರಿಗೆ ಅವರು ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು. ಈ ಪಾತ್ರ ತಮಗೆ  ಅಪಾರ ಸಂತೋಷವನ್ನು ತಂದಿದೆ ಎಂದೂ ಅವರು ಹೇಳಿದರು. 

ಛಾಯಾಗ್ರಹಣ ನಿರ್ದೇಶಕ ಆರ್ ವೇಲ್ರಾಜ್ ಅವರು ಚಿತ್ರದ ಆರಂಭಿಕ ದೃಶ್ಯದ 8.5 ನಿಮಿಷಗಳ ದೀರ್ಘವಾದ ಸಿಂಗಲ್ ಶಾಟ್ ಸೆರೆಹಿಡಿಯುವಾಗ ಎದುರಾದ ಚಿತ್ರೀಕರಣದ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದರು. ಈ ನಿರ್ಣಾಯಕ ದೃಶ್ಯವು  ಸಂಕೀರ್ಣವಾದ ಛಾಯಾಗ್ರಹಣ ತಂತ್ರಗಳು ಮತ್ತು ಕೋನಗಳನ್ನು ಬಳಸಿಕೊಂಡು ವ್ಯಾಪಕವಾದ 13 ದಿನಗಳ ಪ್ರಯತ್ನವನ್ನು ಬಯಸಿತು ಎಂದವರು ಹೇಳಿದರು.. ಸತ್ಯಮಂಗಲಂನ ಒರಟಾದ ನೆಲ/ ಏರು ತಗ್ಗುಗಳ ಭೂಪ್ರದೇಶದಲ್ಲಿ 15 ದಿನಗಳ ಚಿತ್ರೀಕರಣವನ್ನು ವಿವರಿಸಿದ ವೇಲ್ರಾಜ್, ಪ್ರತಿದಿನ ಎಂಟು ಕಿಲೋಮೀಟರ್ ಚಾರಣ ಮಾಡುವ ತೀವ್ರವಾದ ಅನುಭವವನ್ನು ನೆನಪಿಸಿಕೊಂಡರು, ಏರು ತಗ್ಗಿನ  ಭೂಪ್ರದೇಶಗಳು ಮತ್ತು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಚಿತ್ರೀಕರಣವನ್ನು ನಡೆಸಿದಾಗಿನ ಸಂಕೀರ್ಣತೆಗಳನ್ನು ಅವರು ಒತ್ತಿ ಹೇಳಿದರು.

2023 ರ ಮಾರ್ಚ್ ತಿಂಗಳಲ್ಲಿ  ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಗಿದೆ. ಚಿತ್ರದ ಎರಡನೇ ಭಾಗವು 2024 ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಸಾರಾಂಶ:

1987ರಲ್ಲಿ ತಮಿಳುನಾಡಿನಲ್ಲಿ ರೈಲ್ವೆ ಸೇತುವೆಗೆ ಬಾಂಬ್ ಇಟ್ಟು  ನಡೆಸಿದ ಭೀಕರ ಸ್ಪೋಟದಲ್ಲಿ  25 ಮಂದಿ ಸಾವನ್ನಪ್ಪಿದ ನಂತರ, ಸಶಸ್ತ್ರ ಸರ್ಕಾರಿ ವಿರೋಧಿ ಗುಂಪು –“ಪೀಪಲ್ಸ್ ಆರ್ಮಿ” ಈ ಪ್ರದೇಶದ ಸ್ಥಿರತೆಗೆ ಬೆದರಿಕೆಯೊಡ್ಡುತ್ತದೆ. ಅವರ ನಾಯಕ ಪೆರುಮಾಳ್ ನನ್ನು ಬಂಧಿಸಲು ವಿಶೇಷ ಪೊಲೀಸ್ ಬೆಟಾಲಿಯನ್ ಅನ್ನು ನಿಯೋಜಿಸಲಾಗುತ್ತದೆ. ಹೊಸದಾಗಿ ನೇಮಕಗೊಂಡ ಕುಮಾರೇಶನ್ ಅವರ ಪೊಲೀಸ್ ಕೆಲಸದ ನಿರೀಕ್ಷೆಗಳು ಭಗ್ನಗೊಳ್ಳುತ್ತವೆ, ಏಕೆಂದರೆ ಅರಣ್ಯದಲ್ಲಿ ಸಣ್ಣ ಕೆಲಸಗಳನ್ನು ನಿಭಾಯಿಸುವುದಕ್ಕಷ್ಟೇ ಅವರಿಗೆ ಸಾಧ್ಯವಾಗುತ್ತದೆ. ಅವರು ತಮಿಳರಸಿಯೊಂದಿಗೆ ಸ್ನೇಹ ಬೆಳೆಸುತ್ತಾರೆ, ಅವಳ ಸಮುದಾಯದ ದುಃಸ್ಥಿತಿಯ ಬಗ್ಗೆ ತಿಳಿದುಕೊಳ್ಳುತ್ತಾರೆ, ಇದು ಅವರ ಮೇಲಧಿಕಾರಿಗಳನ್ನು  ಕೆರಳಿಸುತ್ತದೆ. ತಮಿಳರಸಿಯ ಗ್ರಾಮವನ್ನು ಪೊಲೀಸ್ ಕಿರುಕುಳದಿಂದ ರಕ್ಷಿಸಲು, ಕುಮಾರೇಶನ್ ಎಲ್ಲರನ್ನೂ ಅಪಾಯಕ್ಕೆ ಒಡ್ಡುವ ಯೋಜನೆಯನ್ನು ರೂಪಿಸುತ್ತಾರೆ.

ಪಾತ್ರವರ್ಗ ಮತ್ತು ಸಿಬ್ಬಂದಿ:

ನಿರ್ದೇಶಕ : ವೆಟ್ರಿ ಮಾರನ್

ತಾರಾಗಣ: ಸೂರಿ, ವಿಜಯ್ ಸೇತುಪತಿ, ಭವಾನಿ ಶ್ರೀ

ಚಿತ್ರ ಕಥೆ: ವೆಟ್ರಿ ಮಾರನ್, ಮಣಿಮಾರನ್

ನಿರ್ಮಾಪಕ: ಆರ್ ಎಸ್ ಇನ್ಫೋಟೈನ್ ಮೆಂಟ್ ಪ್ರೈವೇಟ್ ಲಿಮಿಟೆಡ್, ಗ್ರಾಸ್ ರೂಟ್ ಫಿಲ್ಮ್ ಕಂಪನಿ

ಡಿಒಪಿ : ಆರ್.ವೇಲ್ರಾಜ್

ಸಂಕಲನ : ಆರ್.ರಾಮ

*****



(Release ID: 1979087) Visitor Counter : 64